Saturday, 31 December 2016

ಹೊಸ ವರುಷವೇ..

ಹೊಸ ವರುಷವೆ ನೀ ಬೆಳಕಾಗು
ರೋಧನೆಯಿಲ್ಲದ ಜಗವಾಗು..


ಜ್ಞಾನ ದೀವಟಿಯು ನಿತ್ಯ ಬೆಳಗುತಿರಲಿ
ಸಂತಸದ ಹೊನಲು ನಿತ್ಯ ತುಂಬಿರಲಿ
ಎಲ್ಲರ ಮನಸು ಸದಾ ನಗುತಿರಲಿ
ಎಲ್ಲರ ಬದುಕು ಸದಾ ಪಳಿಸುತಿರಲಿ...


ಯಶಸ್ಸಿನ ಫಲವು ಸದಾ ಒಲಿಯಲಿ
ಜಗದ ಚೆಲುವು ಸದಾ ಸಂಭ್ರಮಿಸಲಿ
ಎಲ್ಲರ ಮೊಗದಲಿ ನಿತ್ಯ ನಗುವಿರಲಿ
ಸಹೋದರ ಬಂಧುಗಳಲಿ ನಿತ್ಯ ಹಿತವಿರಲಿ...


ಪ್ರಕೃತಿಯ ಮುನಿಸು ಕಾಡದಿರಲಿ
ಮಳೆ ಬೆಳೆಯು ಚಿನ್ನವಾಗಲಿ
ಜಗದ ಜೀವಗಳು ಸೊರಗದಿರಲಿ
ಸಂತುಷ್ಟಿಯ ಹಿತವು ಮೇಳೈಸುತಿರಲಿ...


ಕ್ಷಾಮ ರೋಗಗಳು ಬಾರದಿರಲಿ
ಕಹಿಯ ಸತ್ವವು ನುಸುಳದಿರಲಿ
ನಾಡಿನ ನಾಯಕರು ಸೇವಕರಾಗಿರಲಿ
ನಾಡಿನ ಜನರು ನಗುತಿರಲಿ...

           
         ರಾಮಚಂದ್ರ ಸಾಗರ್

ಈ ಗೀತೆಯನ್ನು ಈ ಲಿಂಕ್ ನಲ್ಲಿ ಕೇಳಿರಿ.. https://soundcloud.com/ramachandra-sagar/hosavarushave


ಕೊಂಚ ನಿಲ್ಲುವೆಯಾ ಹಳೆವರುಷವೇ..?

     ಹಳೆವರುಷವೇ ನೀನೇನೋ ಸಾಗಿಬಿಟ್ಟೆ, ಸಾಗುತ್ತಾ ಇನ್ನೇನು ಒಂದು ಹೆಜ್ಜೆ ಇಟ್ಟರೆ ಮರೆಯಾಗಿ ಬಿಡುವೆ ನೀನು. ನೀ ಮರೆಯಾಗುವ ಮೊದಲು ನನದೂ ಒಂದಿಷ್ಟು ಮಾತಿತ್ತು ನಿನ್ನ ಬಳಿ ಕೂತು ನುಡಿಯಲು ಮನಕೆ ಹಗುರಾಗುವಷ್ಟು ನಾನು ನಿನಗೆ ಧನ್ಯವಾದ ಹೇಳಬೇಕು. ಕೆಲವು ನುಡಿಗಳಿಗೆ ಕಾರಣವನ್ನೂ ಕೇಳಬೇಕಿತ್ತು, ಆದರೆ ಸದ್ದಿಲ್ಲದೇ ಸಾಗುವ ನಿನ್ನ ಹಂಬಲವ ನಿಲ್ಲಿಸುವುದುಂಟೇ. ಅದುವೂ ಅಸಾಧ್ಯ, ಆದರೂ ನೀ ನೀಡಿದ ನೆನಪುಗಳು ನಿತ್ಯ ಮಧುರ. ಅವುಗಳ ಜೊತೆಯಲ್ಲಿ ಒಂಚೂರು ನಿನ್ನೊಂದಿಗೆ ಮಾತನಾಡುವೆ, ದಯಮಾಡಿ ನೀ ಸಹಕರಿಸು ಹಳೆವರುಷವೇ. ಸಾವಿರ ಸಿಹಿ ನೀ ಹಂಚಿದೆ, ಸಮಪಾಲು ಎಂಬಂತೆಯೇ ಕಹಿಯನ್ನು ಸಾಕಷ್ಟು ನೀಡಿದೆ. ಯಾವುದಕ್ಕೂ ಬೆದರದೇ ಸಿಹಿ ಕಹಿಗಳ ಸಮಾಗಮದಲ್ಲಿ ನನ್ನನ್ನು ಗಟ್ಟಿಯಾಗಿಸಿದೆ, ನಲಿವಿನ ಜೊತೆಗೆ ನೋವನ್ನು ಸಂಗಾತಿಯಾಗಿ ನೀಡಿದೆ. ಇವೆರಡನ್ನು ಕೈಲಿಡಿದು ನಾ ಸಾಗುವಂಗತೆ ನೀ ಮಾಡಿದೆ, ಸಾಕಷ್ಟು ಬಾರಿ ಎಡವಿ ಬಿದ್ದೆ, ಸಾಧನೆಯು ಸಿದ್ಧಿಸಿದಾಗ ನಾ ನಲಿದೆ, ನೀನು ಹಾರೈಸಿದೆ. ಪ್ರೀತಿಯ ಹಂದರದಲ್ಲಿ ಬದುಕು ಸವೆಸಿದೆ, ನೋವು, ಬವಣೆಗಳನ್ನು ಆಗಾಗ ನನ್ನ ಹೆಗಲ ಮೇಲೆ ನೀ ಕೂರಿಸಿದೆ, ದೂರದಿಂದಲೇ ನಾ ಕೆಳಗಿಸುವ ಪರಿಯನ್ನು ನೀ ನೋಡಿದೆ, ಭಾರವಾದ ಮನದಲ್ಲಿ ಸಾಗುವಾಗ ನನ್ನನ್ನೂ ನೀ ನೋಡಿದೆ. ಭಾರದ ಮನದಲ್ಲಿ ಬಿದ್ದು ಎದ್ದದ್ದನ್ನು ನೀ ಕಂಡೆ, ಇನ್ನೇನು ಬಿದ್ದೆನೋ ಎಂಬ ಭಯದಲ್ಲಿ ಎದ್ದು ನಿಂತೆ. ತುಸು ನಿಧಾನವಾಗಿ ಸಂತೈಸಿಕೊಳ್ಳುವಾಗ, ಜಗದ ಅನ್ಯರಿಗೆ ಎಷ್ಟೇ ನಾ ತೋಡಿಕೊಂಡರೂ ಕೆಲವೊಂದು ನಿನಗೆ ಮಾತ್ರವೇ ಗೊತ್ತು. ಎಲ್ಲದಕ್ಕೂ ಸಾಕ್ಷಿಯೂ, ಪುರಾವೆಯೂ ನೀನಾದೆ. ಎಲ್ಲದಕ್ಕೂ ನೀ ನನಗೆ ಜೊತೆಯಿದ್ದೆ. ಜೊತೆಯಿದ್ದ ನೀ ಇಂದು ಮೆತ್ತನೇ ಮರೆಯಾಗುತಿರುವೆ, ನೀ ನಡೆವ ದಾವಂತದಲ್ಲಿ ನಾ ನಿನಗೆ ನುಡಿಯಬೇಕೆನ್ನುವುದನ್ನೆಲ್ಲಾ ನುಡಿದು ಮುಗಿಸುವ ಹಠವಿದೆ, ಎಲ್ಲವನ್ನು ನಿನ್ನೊಂದಿಗೆ ಹೇಳಬೇಕೆಂಬ ಛಲವಿದೆ, ಹೇಳುತ್ತೇನೋ ಇಲ್ಲವೋ ಎಂಬ ದಗುಡವು ಕಾಡುತ್ತಿದೆ, ಮೆತ್ತನೆ ಸದ್ದಿಲ್ಲದೇ ಸಾಗುವ ನೀನು ಕೊಂಚ ನಿಲ್ಲುವೆಯಾ ಹಳೆವರುಷವೇ..?
  ಒಂದಂತೂ ಸತ್ಯ, ವರುಷಗಳುರುಳಿದಂತೆ, ನೀನು ಸಾಗಿದಂತೆ, ನಿನ್ನ ಪೂರ್ವಿಕರು ನುಡಿದ ನುಡಿಗಳಂತೆ, ನನಗೆ ಕಲಿಸಿದ ಪಾಠದಂತೆ ನಾನೂ ವರ್ಷದಿಂದ ವರ್ಷಕ್ಕೆ ಗಟ್ಟಿಯಾಗುತ್ತಿದ್ದೇನೆ. ಸಿಹಿ ಕಹಿ ನೆನಪುಗಳ ಮೂಟೆಯನ್ನು ಕಟ್ಟಿ ಮನದ ಕೋಟೆಯಲ್ಲಿ ಭದ್ರವಾಗಿಟ್ಟುಕೊಂಡಿದ್ದೇನೆ. ನಾ ಎಡವಿದಾಗೆಲ್ಲಾ ಎಚ್ಚರಿಸುವ ಅವುಗಳ ಸಾಂಗತ್ಯಕ್ಕೆ ನಾ ಋಣಿಯಾಗಿದ್ದೇನೆ, ಒಂದೇ ನಗುವಿಗೆ ನಾನು ಹಲವು ಬಾರಿ ನಗುವು ನನ್ನ ಮೊಗದಲ್ಲಿ ಮೂಡದಿದ್ದರೂ ಒಂದೇ ಕಹಿಯು ಅನೇಕ ಬಾರಿ ಕಣ್ಣೀರು ತರಿಸುತ್ತದೆ, ಆಗ ನೀ ಬಂದು ಸಮಾಧಾನಿಸಿದ್ದೆ, ಒಂದೇ ನಗುವಿಗೆ ನಗುವು ಬಾರದಾಗ ಕಹಿಗೇಗೆ ಬದರುವೆಯೆಂದು ತಬ್ಬಿ ಸಂತೈಸಿರುವೆ, ಭಾರವಾದ ಮನಕೆ ಸಾಕಷ್ಟು ಸಾಂತ್ವಾನವನ್ನೂ ನೀ ನೀಡಿರುವೆ. ಮನವೇ ಹಾಗೇ, ನಾವು ಬೇಡವಾದ ಸಂಗತಿಗಳೇ ಹೆಚ್ಚು ನಮ್ಮನ್ನು ನೋವು ನೀಡಿ ಕಾಡುತ್ತವೆ. ಕಹಿಗಳು ಆಟ ಮುಗಿಸಿದರೂ ಮಳೆ ಮುಗಿದ ಮೇಲೆ ತೊಟ್ಟಿಕ್ಕುವ ಹನಿಗಳಂತೆ ಸುರಿಯುತ್ತಿರುತ್ತವೆ, ಅವೆಂದಿಗೂ ಮನದ ನೆನಪುಗಳ ಕಣಜದಿಂದ ದೂರಾಗದ ಹೊರಗುಳಿಯದ ವಸ್ತುಗಳಾಗಿವೆ. ಮುಗಿದೇ ಹೋಗುವ ಆಟವನ್ನು ಮತ್ತೆ ಮತ್ತೆ ನಲಿಸಿ ಉಳಿಸಿ ಬೆಳೆಸಿರುವೆ. ಮುಗಿಯದಂತೆ ಸಾವಿರ ಕನಸುಗಳನ್ನು ಬಿತ್ತಿರುವೆ, ಎಲ್ಲವೂ ನಿನ್ನ ಸಾನಿಧ್ಯದಲ್ಲಿ  ಈಡೇರಿಸಿಕೊಂಡು ಕಣ್ತುಂಬಿಕೊಳ್ಳಲು ಆಗಲಿಲ್ಲ, ಅದಕ್ಕೆ ನಿನಗೂ ನೋವಿದೆ ಜೊತೆಗೆ ನನಗೂ ನೋವಿದೆ, ಬರುವ ಮುಂದಿನ ವರುಷದಲ್ಲಾದರೂ ಅವುಗಳನ್ನು ನಾ ಈಡೇರಿಸಿಕೊಂಡು, ನಾ ಕಂಡ ಕನಸುಗಳನ್ನು ಜಯಿಸಿ ಬೀಗುವೆ ಅದೂ ನಿನ್ನ ನೆನಪಲ್ಲಿ. ಎಷ್ಟೇ ಆದರೂ ಆ ಕನಸು ನಾನು ಕಂಡಿದ್ದು ನಿನ್ನ ಜೊತೆಯಲ್ಲಿ ಅಲ್ಲವೇನು..? ಆದರು ನಾ ಪ್ರೀತಿಯಿಂದ ನಿನ್ನನ್ನು ಬೀಳ್ಕೊಡುತ್ತಿರುವೆ, ಹಳೆವರುಷವೇ ನೀ ಜಾರುತಿರುವೆ, ಸದ್ದಿಲ್ಲದೇ ಹರಿವ ಝರಿಯಂತೆ...ಕಾರಣಹೇಳದೇ ಮುಳುಗುವ ರವಿಯಂತೆ..ಬಾನಲ್ಲಿ ಚಿತ್ತಾರ ಬಿಡಿಸಿ ಹೋಗುವ ಕಲೆಗಾರನಂತೆ ನನ್ನ ಮನದಲ್ಲಿ ಸಾವಿರ ಕನಸುಗಳ ಚಿತ್ತಾರಗಳ ಓರಣ ಮೂಡಿಸಿ, ಪ್ರಿತಿಯಿಂದ ತುಸುನಕ್ಕು ಮರೆಯಾಗುತಿರುವೆ..ನಿನಗೆ ನನ್ನ ಪ್ರಿತಿಯ ಧನ್ಯವಾದಗಳು..

    ರಾಮಚಂದ್ರ ಸಾಗರ್


Wednesday, 28 December 2016

ನೀ ಜೊತೆಯಾಗುವೆಯೇನು..

ಗೆಳತೀ..
ನೀ ಬಾರದೆ ಜೊತೆಯಲ್ಲಿ
ಬಾಳ ದಾರಿಯು ಸಾಗುವುದೇನು
ನೀ ಜೊತೆಯಾಗದೆ ಬಾಳಲ್ಲಿ
ಈ ಜೀವವು ಉಳಿವುದೇನು..

ನೀ ನರ್ತಿಸದೆ ಹೂಬನದಲ್ಲಿ
ಹೂಬನವು ಚೆಲುವಾಗುವುದೇನು
ನೀ ನುಡಿಯದೆ ಕಿವಿಯಲ್ಲಿ
ಈ ಹೃದಯ ಬಡಿವುದೇನು..

ನೀ ಹಾಡದೆ ಒಲವ ಹಂದರದಲ್ಲಿ
ಒಲವ ಗೋಪುರ ಉಳಿವುದೇನು
ನೀ ನಡೆಸದೆ ಬಾಳ ದಾರಿಯಲ್ಲಿ
ಈ ತನುವು ತುಸು ಸಾಗುವುದೇನು..

ನೀ ರಮಿಸದೆ ಮನದ ಮನೆಯಲ್ಲಿ
ನಾ ಉಳಿವೆನೆ ಅರೆಘಳಿಗೆ ಜಗದಲ್ಲಿ
ನೀ ನಸುನಗದೆ ನನ್ನ ಬಾಳಲ್ಲಿ
ಒಲವ ದೀವಟಿಗೆ ಬೆಳಗುವುದೇನು..

ನೀ ಬರದೆ ಕನಸಲ್ಲಿ
ಆ ಇರುಳು ಉರುಳುವುದೇನು
ನೀ ಕಾಣದೆ ಮುಸ್ಸಂಜೆ
ಬಾನ ರಂಗು ಕಳೆಯೇರುವುದೇನು..

ನೀ ಕಾಣದ ಜಗದಲ್ಲಿ
ಒಲವ ರಂಗು ಉಳಿವುದೇನು
ಒಲವ ನಾವೆಯು ಸಾಗುವುದೇನು
ಈ ಜೀವವು ಉಳಿವುದೇನು...

ಜೀವದಾ ಉಸಿರು 
ನೀ ಬರುವೆಯೇನು
ಒಲವಿನಾ ಒಸಗೆ 
ನೀ ತರುವೆಯೇನು..?

       ರಾಮಚಂದ್ರ ಸಾಗರ್


Monday, 26 December 2016

ನೋವ ಶರಧಿಯಿಂದ ಮೇಲೆತ್ತಿಬಿಡು

ಗೆಳೆಯಾ..
ನೀ ಬರುವುದಾದರೆ ಬಂದುಬಿಡು
ಕನಸಲಿ ಕನಲಿಸಿ ಕಾಡದಿರು
ನೀ ಜೊತೆಯಾಗುವುದಾರೆ ಜೊತೆಯಾಗಿಬಿಡು
ಮರೆಯಲುಳಿದು ನೋವನು ನೀಡದಿರು..


ನೋವ ಶರಧಿಯಲ್ಲಿ ನೊಂದಿಹೆನು
ನಿನಗಾಗಿ ಬೇಡುವ ಜೋಗಿಣಿ ನಾನು
ಜೋಲಾಡುವ ಬದುಕಿಗೆ ಜೊತೆಯಾಗು
ನಗು ಮರೆತ ಮೊಗದಲಿ ನಗುತುಂಬು..



ಕಾತರದ ಮನಸನು ಸಂತೈಸು
ಕಾಂತಾರದ ದಾರಿಯಲು ನೀ ನಡೆಸು
ಬಾಳ ನಾವೆಗೆ ನಾವಿಕನಾಗು
ನನ್ನೆದೆಯಾಸೆಗೆ ಜೇನಾಗು..


ನನ್ನೆದೆ ಗೂಡಲಿ ಕಾರುಬಾರು ನೀ ನಡೆಸು
ಕಾಠಿಣ್ಯದ ನೋವನು ಹೂವಾಗಿಸು
ಕಾರುಣ್ಯದ ಒಲವು ನೀ ನೀಡು
ಕಾತರಿಸುವ ನನ್ನನೂ ನೀ ರಮಿಸು..


ಗೆಳೆಯಾ..
ನೀ ನಗುತ ನನ್ನೆಡೆ ಬಂದುಬಿಡು
ನೋವ ಶರಧಿಯಿಂದ ಮೇಲೆತ್ತಿಬಿಡು
ಕಾರುಣ್ಯದ ಒಲವು ನೀ ನೀಡು
ಕಾತರಿಸುವ ನನ್ನನೂ ನೀ ರಮಿಸು..


           ರಾಮಚಂದ್ರ ಸಾಗರ್

ಸಕಾರಾತ್ಮಕಭಾವದಲ್ಲಿ ಸಾವಿಗೂ ಸೋಲಿದೆ..

     ನಿಮ್ಮ ಹತಾಶೆಯು ಇನ್ನೊಬ್ಬರಿಗೆ ನಿಮ್ಮನ್ನು ಇನ್ನಿಲ್ಲದಂತೆ ಮಾಡುವ ಆಯುಧವಾಗುತ್ತದೆ, ನೀವು ಹತಾಶೆಯಲ್ಲಿ ಮುಳುಗಿದ್ದ ಸಮಯವೇ ಅವರಿಗೆ ವರದಾನವಗುತ್ತದೆ, ಸಮಯಕ್ಕಾಗಿ ಹೊಂಚಿ ಕುಳಿತ ಶತ್ರುಗಳು ನಿಮ್ಮನ್ನು ಮುಗಿಸಲು ಇನ್ನಿಲ್ಲದಂತೆ ಆಗ ಮುಗಿಬಿದ್ದರೆ ನೀವು ಏಳುವುದು ಅಸಾಧ್ಯ, ಆದ್ದರಿಂದ ನೀವುಗಳು ಹತಾಶೆಯೆಂಬುದನ್ನು ತೋರಿಸದೇ ಸಕಾರಾತ್ಮಕ ಭಾವದಲ್ಲಿರಬೇಕು. ಸೋಲು, ನೋವು, ನರಳಿಕೆ, ಕಾಯಿಲೆಗಳು, ಹಣಕಾಸು ತೊಂದರೆ ಸಾಮಾನ್ಯವಾಗಿ ನಮ್ಮನ್ನು ಕಾಡುತ್ತವೆ. ಎಲ್ಲ ಸಮಯದಲ್ಲೂ ಉನ್ನತಿಯು ಸಾಧ್ಯವಿಲ್ಲ. ಕೆಲವೊಮ್ಮೆ ನಮ್ಮ ಪ್ರಯತ್ನ ಎಷ್ಟೇ ಗಟ್ಟಿಯಾಗಿದ್ದರೂ ಸೋಲೆಂಬ ಕಹಿಯು ಅಪ್ಪುತ್ತದೆ, ಬಿಡದೇ ಕಾಡುತ್ತದೆ. ಆಗ ನಾವು ಮಾನಸಿಕವಾಗಿ ಜರ್ಜರಿತವಾಗುವುದು ಸಾಮಾನ್ಯ, ನೋವು ತುಂಬಿದ ಮನದಲ್ಲಿ ಬದುಕುವುದು ವಿಧಿಬರಹವಾಗುತ್ತದೆ. ಆದರೆ ಆ ನೋವಿಗೆ ಬೆದರಿ ಕೂತರೇ ನಮಗೆ ನಾವೇ ಶತ್ರುವಾದಂತೆ, ಮನದ ಅಳುಕೇ ನಮ್ಮನ್ನು ಕುಗ್ಗಿಸುವ ಆಯುಧವಾಗುತ್ತದೆ, ಜೊತೆಗೆ ಹಗೆಯುಳ್ಳ ಮಂದಿಗೆ ಅದು ಸಕಾಲವಾಗಿ ನಮ್ಮನ್ನು ಮೆಟ್ಟಿಬಿಡುತ್ತಾರೆ. ಎಲ್ಲದಕ್ಕೂ ಗಟ್ಟಿಯಾದ ಗುಂಡಿಗೆಯಿರಬೇಕು, ಗಟ್ಟಿಯಾದ ಗುಂಡಿಗೆಯ ಸಕಾರಾತ್ಮಕ ಭಾವದಲ್ಲಿ ಎಲ್ಲಾ ಮುಗಿದ ಮೇಲು ಅರಳುವ ಹೂವು ಇದ್ದೇ ಇರುತ್ತದೆ. ಎಲ್ಲಾ ಬಿರುಗಾಳಿಗೆ ನೂಕಿಹೋದರೂ, ಸುನಾಮಿಗೆ ತುತ್ತಾದರೂ ಎಲ್ಲೋ ಒಂದು ಸಣ್ಣ ಜೀವಸೆಲೆಯಾದರೂ ಉಳಿಯುತ್ತದೆ, ಉಳಿಯುವುದೆಂಬ ಆಸೆಯ ಜೊತೆಗೆ ಗೆಲ್ಲುವೆನೆಂಬ ಹಠವೂ ಇರಬೇಕು. ಸೋತರೂ ಗೆದ್ದಂತೆ ಈ ಜಗದಲ್ಲಿ ನಗಬೇಕು, ಬಿದ್ದರೂ ನೋವಾಗದಂತೆ ನಟಿಸಬೇಕು, ಕಾಣೆಯಾದ ಸುಖಕೆ ಚಿಂತಿಸಿ ಸಮಯವನ್ನು ಕರಗಿಸದೇ ನಿತ್ಯ ಹಠವಂತ ಕಾರ್ಯದಲ್ಲಿ ಸುಖವೇ ನಮ್ಮನ್ನರಸಿ ಬರುವಂತೆ ಮಾಡಬೇಕು. ನೋವು, ಬವಣೆಗಳಿಗೆ ಹೆದರಿ ನಮ್ಮ ಕನಸುಗಳನ್ನು ಸಾಕು ಮಾಡಬಾರದು, ಬದುಕೊಂದು ನಿರಂತರ ಚಲಿಸುವ ನೌಕೆಯಾಗಬೇಕು. ಬದುಕಿಗೆ ಕೊನೆಯೆಂಬುದು ನಿಶ್ಚಿತ ಮತ್ತು ಖಚಿತವಾದರೂ ಬಾಳಲ್ಲಿ ಎದುರಾದ ಬವಣೆಗೆ ಕೊನೆ ಸನಿಹವೆಂದು ಎಂದಿಗೂ ಅಳುಕಬಾರದು. ಕೊನೆಯನ್ನು ದೂರತಳ್ಳುವ ಆತ್ಮಸ್ತೈರ್ಯವಿದ್ದಲ್ಲಿ ಸಾವು ಹೆದರುತ್ತದೆ, ಮನಬಲವಿದ್ದಲ್ಲಿ ದೈಹಿಕ ಬಲವೂ ಗಟ್ಟಿಯಾಗಿರುತ್ತದೆ. ಕೊನೆ ಎಂಬುದು ದಿಟವೆಂದು ಕೊರಗುವವರು ಏನೇ ಆಗಲಿ ಒಮ್ಮೆ ನೋಡಿ ಬಿಡೋಣ, ಆಟ ಮುಗಿಸಿ ಹೋಗುವುದರೊಳಗೆ ಒಂದು ಕೈ ಎಂದು ಮುನ್ನುಗ್ಗಿದವರು ಇಂದು ಜೀವ ಮತ್ತು ಜೀವನ ಎರಡನ್ನು ಗೆದ್ದ ಅನೇಕ ಉದಾಹರಣೆಗಳಿವೆ. ಒಬ್ಬರು ಅಪಘಾತದಲ್ಲಿ ತಮ್ಮ ಕೈಕಾಲು ಸ್ವಾದವನ್ನು ಕಳೆದುಕೊಂಡವರು ಇನ್ನೆಂದು  ತಮ್ಮಿಂದ ಆಗದು ಎಂದು ಕುಳಿತುಕೊಳ್ಳದೇ ಹಠವಿಡಿದು ತಾವು ಕೂತಲ್ಲೇ ಒಂದು ಗೃಹ ಉಧ್ಯಮವನ್ನು ಕಟ್ಟಿ ಸ್ವಾವಲಂಬಿ ಬದುಕು ನಡೆಸುತ್ತಿದ್ದಾರೆ. ಹೀಗೆ ಉದಾಹರಣೆಗಳು ಅನೇಕ ಇವೆ. ಬದುಕು ಮುಗಿದೇ ಹೋಯಿತು, ಎದುರಾಳಿಯು ನಮ್ಮನ್ನು ಮುಗಿಸಿಯೇ ಬಿಟ್ಟ ಎಂದಾಗಲೂ ಹೋರಾಟದ ಕೊನೆ ಕ್ಷಣದಲ್ಲೂ ಗೆಲುವು ನಮ್ಮದಾಗುತ್ತದೆ. ಒಲಂಪಿಕ್ ಕುಸ್ತಿಯಲ್ಲಿ ಕಂಚಿನ ಪದಕ ಗೆದ್ದ ಸಾಕ್ಷಿ ಮಲಿಕ್ ಕೊನೆವರೆಗೂ ಅಂಕಗಳಲ್ಲಿ ತೀವ್ರ ಹಿನ್ನಡೆಯಲ್ಲಿದ್ದರೂ ಕೊನೆಯ 20 ಸೆಕೆಂಡ್ ನಲ್ಲಿ ಆಕೆ ಆಟವನ್ನೇ ಬದಲಾಯಿಸಿದಳು.  
      ಅನೇಕ ವಾಸಿಯಾಗದೇ ಬಳಲುವ ತೀವ್ರತರವಾದ ರೋಗದಿಂದ ಬಳಲುವವರೂ ಕೂಡ ಎಷ್ಟೋ ಮಂದಿಗಳು ತಾವು ಹೆದರದೇ, ಹೋಗುವುದೇ ವಿಧಿ ಬರಹವಾದಲ್ಲಿ ಇನ್ನೇಕೆ ಎಂದು ಅಂಜದೇ ಸಾವನ್ನು ಧೈರ್ಯದಿಂದ ಎದುರು ನೋಡುವವರು ಎಷ್ಟೋ ಜನ ವರ್ಷಗಳುರುಳಿದರೂ ಬಂಡೆಯಂತೆ ಗಟ್ಟಿಯಾಗಿದ್ದಾರೆ. ಎಲ್ಲವೂ ಅವರರವ ಮನೋಸ್ಥೈರ್ಯವೇ ಹೊರತು ಇನ್ನೇನಲ್ಲ. ಆದ್ದರಿಂದ ಮನೋಸ್ಥೈರ್ಯವಿಲ್ಲದೇ ಯಾರೂ ಕೂಡ ಅರೆಘಳಿಗೆಯೂ ಬದುಕುಳಿಯಲು ಸಾಧ್ಯವಿಲ್ಲ. ಆದ್ದರಿಂದ ಹೆದರಿಕೆಯಲ್ಲಿ ಕಾಲ ಕಳೆಯದೇ ಸಕಾರಾತ್ಮಕ ಭಾವದಲ್ಲಿ ಬಂಡುತನವನ್ನೇ ಮೈಗೂಡಿಸಿಕೊಂಡು ಬದುಕುವುದು ಜೀವಕ್ಕೆ ಮತ್ತು ಬದುಕಿಗೆ ಎರಡಕ್ಕೂ ಉತ್ತಮ. ಅನ್ಯರ ಹಂಗಿಕೂ ಸಿಗದೆ ಬಾಳಬಹುದು. ಪಚನವಾಗದ ಕಹಿಗೆ ಚಿಂತಿಸುತ್ತಾ ಕೂರುವ ಬದಲು ಸಕಾರಾತ್ಮಕ ಭಾವದಲ್ಲಿ ಅರಳುವ ಬೆಳಕನ್ನು ನಾವು ಅಪ್ಪಬೇಕು. ಆಗದು ಎಂಬ ಜಾಗದಲ್ಲಿ ಆಗುತ್ತದೆ ಎಂಬುದನ್ನು ಬರೆಯಬೇಕು, ಇದು ಎಲ್ಲರ ಬದುಕಾಗಬೇಕು, ಹಠವಿರುವ ಮನದಲ್ಲಿ ಗೆಲುವು ಎಲ್ಲರದಾಗಬೇಕು ಮತ್ತೂ ಇದು ಸೌಹಾರ್ದ ಬದುಕನ್ನು ಕಟ್ಟುವುದಾಗಿರಬೇಕೆಂಬುದು ನನ್ನಾಶಯ...
         ರಾಮಚಂದ್ರ ಸಾಗರ್

Sunday, 25 December 2016

ಸ್ವಾಭಾವಿಕ ಸಸ್ಯಕುಲ ಉಳಿಸಿ...

      ನೈಸರ್ಗಿಕವಾಗಿ ಬೆಳೆವ ಕಾಡುಗಳಲ್ಲಿ ಅನೇಕ ಪ್ರಬೇಧದ ಜೀವಕುಲವಿದೆ, ಅವುಗಳಿಗೆ ಜೀವಸೆಲೆಯು ಈ ನೈಸರ್ಗಿಕ ಅರಣ್ಯವೇ ಆಗಿದೆ. ನೈಸರ್ಗಿಕವಾಗಿ ಬೆಳೆವ ಕಾಡುಗಳಿಂದ ಭುವಿಯ ಫಲವತ್ತತೆ ಹಾಗೂ ಉಪಯೋಗಕ್ಕೆ ಯಾವುದೇ ಧಕ್ಕೆಯಿಲ್ಲ. ಅಂತರ್ಜಲದ ಮಟ್ಟಕ್ಕೂ ಅಪಾಯವಿಲ್ಲ, ನೈಸರ್ಗಿಕ ಕಾಡುಗಳಲ್ಲಿ ಭೂ ಮೇಲ್ಮೈಯನ್ನು ಕಾಪಾಡುವ ಅನೇಕ ಸಣ್ಣ ಸಸ್ಯಗಳು, ಹುಲ್ಲು ಮಾದರಿ ಸಸ್ಯಗಳು ಬೆಳೆಯುತ್ತವೆ, ಮಳೆಗಾಲದಲ್ಲಿ ಜೋರಾಗಿ ಹರಿಯುವ ನೀರಿನಲ್ಲಿ ಮಣ್ಣು ಕೊಚ್ಚಿಕೊಂಡು ಹೋಗದಂತೆ ತಡೆಯುತ್ತವೆ, ಭೂ ಮೇಲ್ಮೈ ರಕ್ಷಿಸುತ್ತವೆ. ಭೂ ಸವಕಳಿಯನ್ನು ತಡೆಯುತ್ತವೆ. ಹಸಿರು ಹೊದಿಕೆಯಿಂದ ಆವೃತ ನೈಸರ್ಗಿಕ ಅರಣ್ಯಗಳಲ್ಲಿ ಭೂ ಸವಕಳಿಯು ಸಂಭವಿಸುದಿಲ್ಲ, ಜೊತೆಗೆ ಪ್ರಾಣಿ ಸಂಕುಲದ ಬದುಕಿಗೆ ಆಧಾರವಾಗಿರುತ್ತವೆ. ಹರಿವ ನದಿತೊರೆಗಳಲ್ಲಿ ನೀರು ಮಣ್ಣು ಮಿಶ್ರಣಗೊಳ್ಳದೇ ಶುದ್ಧ ನೀರು ಹರಿಯುತ್ತದೆ. ನೀರಿನ ತಣಿವನ್ನು ವರ್ಷದುದ್ಧ ಬಹುಕಾಲದವರೆಗೂ ಉಳಿಸಿಕೊಂಡು ಹೋಗುವ ಗುಣವಿರುತ್ತದೆ. ಉದುರುವ ಎಲೆಗಳು ಕೊಳೆತು ಮಣ್ಣಾಗುತ್ತವೆ, ನೈಸರ್ಗಿಕ ಅರಣ್ಯದ ಅವಷೇಶಗಳು ಬೇಗನೇ ಕೊಳೆಯುತ್ತವೆ, ಇದರಲ್ಲಿ ಅನೇಕ ಸೂಕ್ಷ್ಮಾಣು ಜೀವಿಗಳು ಬದುಕುತ್ತವೆ. ಇವುಗಳೇ ಮಣ್ಣಿನ ರಚನೆಗೂ ಕಾರಣವಾಗಿ ಭುವಿಯ ಫಲವತ್ತತೆಯನ್ನು ಹೆಚ್ಚಿಸುತ್ತಾ ಭುವಿಯ ಮೇಲೆ ಬಿಸಿಲು ಕಿರಣಗಳು ನೆಲವನ್ನು ತಾಕದಂತೆ ತಡೆದು ಭುವಿಯ ಮೇಲೆ ತಾಪವನ್ನು ಕಡಿಮೆ ಮಾಡುತ್ತವೆ. ಮರಗಳಲ್ಲಿ ಬೆಳೆಯುವ ಹೂವು ಮತ್ತು ಹಣ್ಣುಗಳು ಅನೇಕ ಜೀವಿಗಳಿಗೆ ಆಹಾರವಾಗಿದೆ. ಒಂದೇ ಮಾದರಿ ಮರವಲ್ಲದೇ ಅನೇಕ ಮಾದರಿಯ ಮರಗಳು ಒಟ್ಟಾಗಿ ಸ್ವಾಭಾವಿಕವಾಗಿ ಬೆಳೆಯುವುದರಿಂದ ಪರಿಸರದ ಸಮತೋಲನಕ್ಕೂ ಉತ್ತಮ. ವಿವಿಧ ಬಗೆಯ ಮರಗಳು ಒಟ್ಟಾಗಿ ಬೆಳೆಯುವುದರಿಂದ ಜೀವಕುಲಕ್ಕೆ ಅಗತ್ಯವಾದ ಆಹಾರವು ದೊರೆಯುತ್ತದೆ.
 
      ಆದರೆ ಇಂದು ವ್ಯಾಪಕವಾಗಿ ಅರಣ್ಯನಾಶವಾಗುತ್ತಿದೆ, ನಾಶವಾದ ಜಾಗದಲ್ಲಿ ನೀಲಗಿರಿ ಮತ್ತು ಅಕೇಶಿಯಾದಂತ ನೆಡುತೋಪುಗಳನ್ನು ನೆಡುವುದು ಸಾಮಾನ್ಯವಾಗಿದೆ. ಮೂಲತಃ ಆಷ್ಟ್ರೇಲಿಯಾ ಒಣ ಬಂಜರು ಭೂಮಿಯಲ್ಲಿ ಬೆಳೆಯುವ ಬೆಳೆಗಳಿವು, ಇವುಗಳ ಕಾಡಿನಲ್ಲಿ ಬೇರೆ ಯಾವುದೇ ಜೀವಕುಲ ಉಳಿಯಲು ಸಾಧ್ಯವಿಲ್ಲ. ಇವುಗಳಿಂದ ಉದುರಿದ ಎಲೆಗಳು ಮಳೆಗಾಲದಲ್ಲೂ ಕೊಳೆಯುವುದು ಕಡಿಮೆ, ತೀರಾ ನಿಧಾನಗತಿಯಲ್ಲಿ ಇವುಗಳ ತ್ಯಾಜ್ಯ ಕರಗುತ್ತದೆ, ಪ್ಲಾಸ್ಟಿಕ್ ನಂತೆ ಇದುವೂ ಎಂದರು ತಪ್ಪಿಲ್ಲ. ಕೇವಲ 5 ವರ್ಷದಲ್ಲಿ ಬೃಹತ್ ಮರವಾಗಿ ಬೆಳೆಯುತ್ತವೆ, ಸುಮಾರು ಹತ್ತು ಮೀಟರ್ ಎತ್ತರವನ್ನು ಮುಟ್ಟಬಲ್ಲದು. ಎಂಥಾ ಬಂಜರು ಭೂಮಿಯಾದರೂ ಸರಿ, ಅತೀ ವೇಗವಾಗಿ ಬೆಳೆದು ಭುವಿಯ ಸಾರವನ್ನು ಕರಗಿಸಿಬಿಡುತ್ತದೆ. ಈ ಕೃತಕ ಅರಣ್ಯದಲ್ಲಿ ಬೆಳೆಯುವ ಈ ಮರಗಳ ಸುತ್ತಲೂ ಯಾವುದೇ ಗಿಡವೂ ಬೆಳೆಯುವುದಿಲ್ಲ,  ಮಳೆಗಾಲದಲ್ಲೂ ಇವುಗಳ ಸುತ್ತಲೂ ಹುಲ್ಲುಗಿಡವು ಬೆಳೆಯುವುದು ಇಲ್ಲ. ಮತ್ತು ಅಂತರ್ಜಲದ ಮೇಲೆ ಈ ಕೃತಕ ಕಾಡುಗಳಿಂದ ಅಪಾಯವೇ ಜಾಸ್ತಿ. ಈ ಕೃತಕ ನೆಡುತೋಪುಗಳಿಂದ ಅಕ್ಕಪಕ್ಕದ ಕೆರೆ ಬಾವಿಗಳಲ್ಲಿ ನೀರು ಉಳಿಯುವುದಿಲ್ಲ, ಬೇಗನೇ ಬತ್ತಿಹೋಗುತ್ತದೆ. ಈ ಮರಗಳ ಬೇರುಗಳು ತುಂಬಾ ಉದ್ದವಾಗಿ ಹರಡುವುದರಿಂದ ನೀರಿನ ಅಂಶವನ್ನು ಆಶವಾಗಿ ಎಳೆದು ತನ್ನ ಅಕ್ಕಪಕ್ಕದ ಪರಿಸರದಲ್ಲಿ ಯಾವುದೇ ಸಸ್ಯಕುಲ ಬೆಳೆಯದಂತೆ ತಡೆಯುತ್ತವೆ. ನೀಲಗಿರಿ, ಅಕೇಶಿಯಾ ಬೆಳೆಗಳನ್ನು ಅನೇಕ ವರ್ಷಗಳು ಬೆಳೆದರೆ ಆ ಭೂಮಿಯ ಫಲವತ್ತತೆಯು ಬೇಗನೇ ಕಡಿಮೆಯಾಗಿ ಬೇರೆ ಮರಗಳು ಬೆಳೆಯದಂತಾಗುತ್ತದೆ. ಈ ಬೆಳೆಗಳನ್ನು ಬೆಳೆದುಬಂಜರು ಭೂಮಿಗೆ ಅವಕಾಶ ಮಾಡಿಕೊಟ್ಟಂತಾಗುತ್ತದೆ. ಹಾಗೂ ನೈಸರ್ಗಿಕವಾಗಿ  ಉಳಿಯಬೇಕಾದ ಜೀವಕುಲವನ್ನು ನಾಶಮಾಡಿದಂತಾಗುತ್ತದೆ. 

      ಕೇವಲ ವಾಣಿಜ್ಯ ದೃಷ್ಟಿಯಿಂದ ಪೇಪರ್ ಮಿಲ್ಲುಗಳಿಗೆ ಸರಬರಾಜು ಮಾಡಲು ಇವುಗಳನ್ನು ಬೆಳೆಯಲಾಗುತ್ತದೆ, ಮತ್ತು ಅಕೇಶಿಯಾವನ್ನು ಪೀಠೋಪಕರಣಗಳಿಗೂ ಬಳಸುವುದಿದೆ. ಹಿಂದೆ ಬಿದಿರನ್ನು ಹೆಚ್ಚಾಗಿ ಪೇಪರ್ ಮಿಲ್ಲುಗಳು ಅವಲಂಬಿಸಿದ್ದವು. ಆದರೆ ಅವುಗಳ ಬೆಳೆ ಅಕೇಶಿಯಾಗೆ ಹೋಲಿಸಿದರೆ ನಿಧಾನ ಮತ್ತು ಅಕೇಶಿಯಾದಷ್ಟು ಲಾಭದಾಯಕವಲ್ಲ. ಇಂದಿನ ಪೂರೈಕೆಗೆ ತಕ್ಕಂತೆ ಕಾಗದದ ಉತ್ಪಾದನೆಯು ಹೆಚ್ಚಾಗಬೇಕಿದೆ. ಉತ್ಪಾದನೆಯ ಹೆಚ್ಚಳಕ್ಕೆ ಅಕೇಶಿಯಾ ಮೊರೆಹೋಗುವುದು ಅನಿವಾರ್ಯವಾಗಿದೆ. ಪರೋಕ್ಷವಾಗಿ ಹೇಳುವುದಾದರೆ ಪೇಪರ್‍ನ ಉಪಯೋಗ ಕಡಿಮೆಮಾಡಿದಷ್ಟು ನಾವು ಪರಿಸರವನ್ನು ಉಳಿಸಬಹುದು. ಪೇಪರ್ ಮಿಲ್ಲುಗಳು ಯಥೇಚ್ಚವಾಗಿ ಬಳಸುವ ಅಕೇಶಿಯಾ ಬೆಳೆಗಳನ್ನು ಸರ್ಕಾರವು ಹಿಂದೆ ನಿಷೇಧಿಸಿತ್ತಾದರೂ ಪೇಪರ್ ಉತ್ಪಾದನೆಯ ಮೇಲಾಗುವ ದುಷ್ಪರಿಣಾಮದಿಂದ ಮತ್ತೆ ನಿಷೇಧವನ್ನು ಹಿಂಪಡೆಯುವುದು ಅನಿವಾರ್ಯವೆಂದಿತು. ಅನೇಕ ಸಾಮಾಜಿಕ ಅರಣ್ಯಗಳಲ್ಲಿ ಇಂದು ಹಣದ ಉದ್ದೇಶದಿಂದ ಅಕೇಶಿಯಾ ಬೆಳೆಸಿ ನೈಸರ್ಗಿಕ ಭುವಿಯ ಸಂಪತ್ತು ನಾಶಮಾಡಲಾಗುತ್ತಿದೆ. ಉದುರಿದ ಅಕೇಶಿಯಾ ಎಲೆಗಳು ಮಳೆಗಾಲದಲ್ಲೂ ಕೊಳೆಯುವುದಿಲ್ಲ, ಇಂತಹ ಬೆಳೆಗಳನ್ನು ಬೆಳೆದು ಪರಿಸರವನ್ನು ನಾಶ ಮಡುವ ಬದಲು ನೈಸರ್ಗಿಕ ಅರಣ್ಯ ಸಂಪತ್ತುಗಳನ್ನು ಉಳಿಸಿಕೊಳ್ಳಬೇಕು. ಅರಣ್ಯ ನಾಶವಾದ ಜಾಗದಲ್ಲಿ ದೇಶೀಯ ಮರಗಳಾದ ಮಾವು, ಬೇವು, ಹಲಸು, ಹೊನ್ನೆ, ನೇರಳೆ ಮರಗಳನ್ನೇ ಯಥೇಚ್ಚವಾಗಿ ಬೆಳೆಸಿದಲ್ಲಿ ಇವುಗಳ ಉತ್ಪನ್ನಗಳು ಕಾಡುಗಳಲ್ಲಿ ವಾಸಿಸುವ ಜೀವಕುಲದ ಉಳಿವಿಗೂ ಆಸರೆಯಾಗುತ್ತವೆ. ಎಲ್ಲದೂ ಮಾನವನ ಕೈಯಲ್ಲಿದೆ. ಕಡಿಮೆ ಪೇಪರ್ ಬಳಸುವುದರಿಂದ ಮತ್ತು ನೈಸರ್ಗಿಕ ಅರಣ್ಯದ ರಕ್ಷಣೆಯ ಮೂಲಕ ಎಲ್ಲರೂ ಕೈ ಜೋಡಿಸಬೇಕು...ಪ್ರೀತಿಯಿಂದ ಕೈ ಜೋಡಿಸೋಣ...


           ರಾಮಚಂದ್ರ ಸಾಗರ್

Saturday, 24 December 2016

ಹಸಿರು ಸಿರಿಯಲಿ ವರ್ಷಧಾರೆಯ ಲಾಲಿತ್ಯ ...


ಸುರಿವ ಮಳೆಯಲ್ಲಿ ನಲಿಯೋಣ ಬಾ ಗೆಳತಿ..

  ಗೆಳತೀ..ಕಾರ್ಮೋಡ ಬಾನಲ್ಲಿ ಒತ್ತರಿಸಿ ಬರುತಿದೆ, ಗುಡುಗು ಮಿಂಚುಗಳ ಆರ್ಭಟವೇರುತ್ತಿದೆ, ಮನದಲ್ಲಿ ನಿನ್ನ ನೆನಪುಗಳ ಆರ್ಭಟವೂ ಏರುತ್ತಿದೆ, ನೀ ಬರುವ ಸವಿ ಘಳಿಗಾಗಿ ಎದುರು ನೋಡುತ್ತಾ ಮನಸ್ಸು ಸಿಹಿಯಾಗುತ್ತಿದೆ ಗೆಳತಿ, ನೀ ಬರುವ ಹಾದಿಯನ್ನು ಕಣ್ಣು ಮಿಟುಕಿಸದೇ ನೋಡುತ್ತಿದೆ, ಬೇಗನೇ ಬಾ ಗೆಳತಿ, ಸುರಿವ ತುಂತುರು ಮಳೆಯಲ್ಲಿ ಕೈ ಗಟ್ಟಿಯಾಗಿ ಹಿಡಿದು ಎರಡು ಹೆಜ್ಜೆ ಕುಣಿದು ಬಿಡೋಣ, ಜಗದೆಲ್ಲ ಬವಣೆಗಳನ್ನು ದೂರಾಗಿಸಿಕೊಳ್ಳೋಣ, ನಾಳೆಯ ಚಿಂತೆಗಳನ್ನು ನಮ್ಮ ಹರ್ಷದಿಂದಲೇ ಬೆದರಿಸೋಣ, ಅಂತೆ ಕಂತೆಗಳ ಸಂತೆಯಲ್ಲಿ ನಾನೂ ನೀನು ಕಳೆದು ಹೋಗುವುದು ಬೇಡ, ಪ್ರೀತಿಯಲ್ಲಿ ನಗುತಾ ನಿನ್ನ ಕಣ್ಣಾಲಿಯಲ್ಲಿ ನನ್ನ ಕಣ್ಣಾಲಿಯನು ನಾ ನೋಡುತಾ, ನನ್ನ ಕಣ್ಣಾಲಿಯಲ್ಲಿ ನಿನ್ನ ಕಣ್ಣಾಲಿಯನು ನೀ ನೋಡುತಾ ಸಂಭ್ರಮಿಸೋಣ, ಈ ಸಂಭ್ರಮದಲ್ಲೇ ಒಲವ ತೇರು ಎಳೆಯೋಣ, ಪ್ರೀತಿಯ ಓರಣದಲ್ಲಿ ನಗುತ್ತಾ ಕುಣಿಯೋಣ, ನೀ ಆಗಮಿಸಬೇಕು, ಆದಷ್ಟು ಬೇಗನೇ ನಿನ್ನ ದರ್ಶನವಾಗಬೇಕು, ಸುರಿವ ಹನಿಗಳು ತೊಟ್ಟಿಕ್ಕುತಿವೆ ಆಗಲೇ. ಮಳೆ ನಿಂತ ಮೇಲೆ ಬಂದರೇನು ನವಿರುತನ ಉಳಿದೀತು ಗೆಳತಿ, ಸುರಿವ ಮಳೆಯಲ್ಲಿ ನಾಲ್ಕು ಹೆಜ್ಜೆ ಕುಣಿದು ಬಿಡೋಣ ಬಾ. ನೊಂದ ಮನಸ್ಸುಗಳು ಸುರಿವ ವರ್ಷಧಾರೆಯಲ್ಲಿ ರಮಿಸಿ ಆನಂದದ ಉಯ್ಯಾಲೆಯಲ್ಲಿ ತೇಲಬೇಕಿದೆ, ಕಂಡಿತಾ ತೇಲುತ್ತವೆ, ಎಲ್ಲದಕ್ಕೂ ನಿನ್ನಾಗಮನವಾಗಬೇಕು, ನಿನ್ನ ನಗುಮೊಗದ ಸಿರಿಯ ದರ್ಶನವಾಗಬೇಕು. ಸಾಂಗತ್ಯದ ಬಲದಲ್ಲಿ ಜಗಗೆಲ್ಲುವ ಛಲದಲ್ಲಿ ಒಂದಾಗಿ ನಾವು ಸಾಗಬೇಕು. ಗುಡುಗುವ ಸದ್ಧಿಗೆ ನೀ ಬೆದರಬೇಕು, ಬೆದರಿ ನನ್ನನ್ನು ಆದಷ್ಟೂ ಬಿಗಿಯಾಗಿ ಹಿಡಿದು ಅಪ್ಪಿಕೊಳ್ಳಬೇಕು, ನಾನು ನಿನಗೆ ಸಂತೈಸಬೇಕು, ಗುಡುಗು ಗರ್ಜನೆಗೆ ಬೆದರುವ ನಿನ್ನ ಮೊಗದ ಆತಂಕವನ್ನು ನಾ ದೂರಾಗಿಸಿ ಸಂಭ್ರಮಿಸಬೇಕು, ಜೊತೆಯಲ್ಲಿ ನಾನಿರುವೆ ಹೆದರಿಕೆಯೇಕೆ ಎಂದು ನಾನು ಜಂಬ ಕೊಚ್ಚಕೊಳ್ಳಬೇಕು, ಗರ್ಜಿಸುವ ಗುಡುಗು ಮರೆಯಾಗುವುದರೊಳಗೆ ಬೇಗನೇ ಆಗಮಿಸು ಗೆಳತಿ, ಮಿಂಚಿನ ಬೆಳಕಿನಲ್ಲಿ ಗುಡುಗು ಸದ್ಧಿಗೆ ಬೆದರಿದ ನಿನ್ನ ಮೊಗದವನ್ನು ನಾನು ನೋಡಬೇಕು, ಹೊಳೆವ  ನಿನ್ನ ಕಣ್ಣುಗಳಲ್ಲಿ ಧೈರ್ಯವರಳುವ ಘಳಿಗೆಯನ್ನು ನಾ ನೋಡಬೇಕು,

ನನ್ನಾಸರೆಯಲ್ಲಿ ನೀನು ನಗುತಿರಬೇಕು, ಪಿಸುಮಾತಗಳನ್ನು ನೀನು ಆದಷ್ಟು ಗಟ್ಟಿಯಾಗಿ ಮಳೆಹನಿಗಳ ಸದ್ದಿಗೆ ಸೋಲಿಸುವಂತೆ ನೀ ನುಡಿಯುತಿರಬೇಕು, ಮಳೆಹನಿಗಳ ಸದ್ದು ನಮ್ಮ ಸವಿ ಸಲ್ಲಾಫದ ಸಂಭಾಷಣೆಗೆ ಕೊಂಚ ಅಡ್ಡಿಪಡಿಸಿದರೂ ನಾವು ಪ್ರೀತಿಯ ನುಡಿಗಳನ್ನು ಗಟ್ಟಿಯಾಗಿ ಪಿಸುಗುಟ್ಟೋಣ, ಪ್ರಿತಿಯ ಸುಖವನ್ನು ಆನಂದಿಸೋಣ, ಮಳೆ ಹನಿಗಳು ಆಗಲೇ ಒಂದೊಂದು ತೊಟ್ಟಿಕ್ಕುತಿವೆ, ಮಳೆ ಮುಗಿದು ಹೋಗುವುದರೊಳಗಾಗಿ ನೀ ಬಾ ಗೆಳತಿ..ನಿನ್ನ ನಗುಮೊಗದ ಸಿರಿಯ ದರ್ಶನ ನೀಡು..ಹರಿವ ಮಳೆ ನೀರಲ್ಲಿ ನಾನು ನೀನು ಕಾಲನ್ನು ಬೀಸುತ್ತಾ ಕೈ ಹಿಡಿದು ಜೊತೆಯಾಗಿ ಮೈಲುದ್ದ ಅಂದಿನಂತೆ ಸಾಗೋಣ, ಹರಿವ ನೀರನ್ನು ಇಬ್ಬರೂ ಒಬ್ಬರಿಗೊಬ್ಬರು ಎರಚುತ್ತಾ ಒಂದು ಘಳಿಗೆ ಆಟವಾಡಬೇಕು, ಜಗದೆಲ್ಲ ನೋವು ಮರೆಯಬೇಕು, ನೀರೆರೆಚಾಟದಲ್ಲಿ ನಾ ಮುಂದು ನೀ ಮುಂದು ಎನ್ನುತ್ತಾ ನಾವಿಬ್ಬರೂ ಕಾದಾಡಬೇಕು, ಆ ಕಾದಾಟದಲ್ಲಿ ನಾ ಗೆಲ್ಲುವವನಿದ್ದರೂ ಸೋಲುವೆ.. ನಿನ್ನ ಗೆಲುವು ನೋಡಿ ಸಂಭ್ರಮಿಸುವೆ ನೀ ಬೇಗನೇ ಆಮಿಸು ಒಲವೇ.. ನಿನ್ನ ನಗುಮೊಗದ ಸಿರಿಯ ಹೊತ್ತು ತಾ ಗೆಳತಿ, ಮಳೆಹನಿಗಳು ಮುಗಿದು ಹೋಗುವುದರೊಳಗಾಗಿ ಹರಿವ ನೀರು ಮುಗಿದುಹೋಗುವುದರೊಳಗಾಗಿ ನೀ ಬರುವುದನು ಮರೆಯದಿರು, ಕಾಗದದ ದೋಣಿಯನ್ನು ನಿನಗಾಗಿ ಆಗಲೇ ಸಿದ್ದಪಡಿಸಿ ತಂದಿದ್ದೇನೆ, ನೀನು ನಗುತ್ತಾ ಕಾಗದದ ದೋಣಿಯನ್ನು ಹರಿವ ನೀರಿನಲ್ಲಿ ತೇಲಿ ಬಿಟ್ಟು, ಜೊತೆಯಾಗಿ ಸಾಗಲಿ ಎಂದು ನೀನು ಪ್ರಾರ್ಥಿಸುವ ಸವಿ ಘಳಿಗೆಯನ್ನು ನಾನು ಕಣ್ತುಂಬಿಕೊಳ್ಳಬೇಕು, ಮೈಯೆಲ್ಲಾ ಒದ್ದೆಯಾದರೂ ಬೀಸುವ ತಣ್ಣನೆ ಗಾಳಿಯಲ್ಲಿ ತನುವೊಡ್ಡಿ ಮೈಯೊಣಗಿಕೊಳ್ಳುತ್ತಾ ತಾಸುಗಟ್ಟಲೇ ಹರಟೆ ಹೊಡೆಯತ್ತಾ ಸಾಗಬೇಕು, ಸಾಗುವಾಗ ನೀನು ನಾನು ಒಲವಗಾಥೆಯನು ದಾರಿಯುದ್ದಕ್ಕೂ ಗುನುಗಬೇಕು, ವರ್ಷಕಾಲದ ಸವಿಯ ಸಂಭ್ರಮಿಸಬೇಕು, ನಿನ್ನೊಂದಿಗೆ ನನ್ನ ಮನ ರಮಿಸಬೇಕು..ನೀ ಬರುವುದನು ಮರೆದಿರು ಗೆಳತಿ..ನೀ ಬಂದಾಗ ನೀಡಲು ತಂದಿರುವೆ ನಿನಗೆಂದು ಒಂದು ಚೆಲುವಾದ ಕೆಂಗುಲಾಬಿ. 

“ಮಳೆ ಹನಿಗಳು ಮುಗಿದು ಹೋಗುವುದರೊಳಗಾಗಿ ನೀ ಆಗಮಿಸು
ಸುರಿವ ಹನಿಗಳಲಿ ನನ್ನೊಂದಿಗೆ ಜೊತೆಯಾಗಿ ಮನ ರಮಿಸು...”

           ರಾಮಚಂದ್ರ ಸಾಗರ್

Thursday, 22 December 2016

ವಚನ ಕೊಟ್ಟವರು ನಾವು..

ಗುಮಾನಿಯ ಸಣ್ಣ ಕುರುಹು 
ನಿನಗೆಂದೂ ಕಾಡದಿರಲಿ ಗೆಳತಿ 
ಲಭಿಸುವುದು  ನಮ್ಮೊಲವಲಿ  
ಗೆಲುವು ಇದು ದಿಟವೂ..
ಗೆಲ್ಲುವುದೇ ಬಾಳಿನಾ ಹಠವೂ..

ಜಗವೇನೋ ಗುಡುಗಲಿ ಗೆಳತಿ
ಜನರೇನೋ ಶಪಿಸಲಿ ಗೆಳತಿ
ಶರಧಿಯೇ ಉಕ್ಕಲಿ ಗೆಳತಿ
ಬಿರುಗಾಳಿಯೇ ನೂಕಲಿ ಗೆಳತಿ...

ಒಲವ ಕುರುಹು ಗುಂಡಿಗೆ ಗಟ್ಟಿಯಿರಲು
ಉಸಿರು ಉಸಿರಿನಲ್ಲಿ ಬೆರೆತನಾವು
ಪ್ರೀತಿ ನಾವೆಯಲ್ಲಿ ಪಯಣಿಗರು ನಾವು
ಸೋಲು ಕಾಣದ ಪ್ರೀತಿ ನಮ್ಮದು...

ಜೀವದಾ ಕರೆಯು ನೀನಾಗಿರಲು
ಒಲವ ಸೌಧವು ನಮ್ಮ ಗುಡಿಸಲು
ಪ್ರೀತಿ ಕಸೂತಿ ನಮ್ಮ ಕಾಯಕವು
ಜಗದ ಮಾತಿಗೆ ಕಿವುಡರೂ ನಾವು..

ಕಮನೀಯ ಹೃದಯದವರು ನಾವು
ಒಲವರಾಧನೆಯ ಆರಾಧಕರೂ ನಾವು
ಒಲವು ಕವಿಸಿದ ಮನದವರು ನಾವು
ಹೃದಯಕೆ ವಚನ ಕೊಟ್ಟವರು ನಾವು..

ಗೆಳತೀ..
ಗುಮಾನಿಯ ಸಣ್ಣ ಕುರುಹು ಕಾಡದಿರಲಿ
ನಮ್ಮೊಲವಿಗೇ ಜಯವೂ ಇದು ದಿಟವೂ
ಇದುವೇ ಬಾಳಿನಾ ಹಠವೂ...
ಹೃದಯಕೆ ವಚನ ಕೊಟ್ಟವರು ನಾವು..

          ರಾಮಚಂದ್ರ ಸಾಗರ್

ಪ್ರೀತಿಯ ಹಂದರಲ್ಲಿ ಹೊನ್ನಿನ ಹಂಗೇಕೆ..

      ನೋಡು ಗೆಳತಿ ಬಾನಲ್ಲಿ ಒಲವ ಗೋಪುರ ಕಟ್ಟಿ ದೇವತೆಗಳು ಹರಸುತ್ತಿದ್ದಾರೆ, ನೋಡು ನಮ್ಮದು ತುಂಬಾ ಗಟ್ಟಿಯಾದ ಪ್ರೀತಿ, ನಿರ್ಮಲ ಭಾವನೆಗಳ ಬೆಸುಗೆ, ನನಗೆ ನಿನ್ನಿಂದ ಪ್ರೀತಿಯೊಂದೆ ಸಾಕು, ನಿನ್ನ ನಗುಮೊಗದ ಸಾನಿಧ್ಯವಿದ್ದರೆ ಸಾಕು ಅಲ್ಲವೇ ಎನ್ನುತ್ತಾ ಭುಜದ ಮೇಲೆ ಭುಜವಿಟ್ಟು ಓಡುವ ಬಿಳಿ ಮೋಡಗಳ ನಡುವೆ ಆಕೆ ಏನೋ ಹುಡುಕಲು ಮತ್ತೆ ಮತ್ತೆ ತವಕಿಸಿದಂತೆ ನನ್ನ ಮನದಲ್ಲೂ ಅದೇ ಧ್ಯಾನ ಜೀವನವೆಂದರೆ ಇನ್ನೇನು, ನಿರ್ಮಲ ಮನದವಳ ಜೊತೆ ಬಾಳು ಮುಗಿಸಿದರೆ ಸಾಕಲ್ಲವೆ..? ಎಷ್ಟು ಹಣವಿದ್ದರೇನು, ಇಲ್ಲದಿದ್ದರೇನು, ಜೀವನದಲ್ಲಿ ನೆಮ್ಮದಿ ಮುಖ್ಯವಲ್ಲವೇ..ನಿರ್ಮಲ ಪ್ರೀತಿಯನ್ನು ನೀಡುವ ಬಾಳ ಗೆಳತಿಯ ಜೊತೆ ಇರುವಷ್ಟು ಕಾಲ ನೆಮ್ಮದಿಯಿಂದ ಬದುಕು ಸಾಗಿಸುವುದೇ ಮೇಲು, ಇರುವ ಸೀಮಿತದಲ್ಲೇ ಜೀವನದ ಸೌಂದರ್ಯದ ಮಹಲನ್ನು ಕಟ್ಟಬೇಕು, ಅದರಲ್ಲಿ ನಾನು ಮತ್ತು ಅವಳು ಪ್ರೀತಿಯಿಂದ ಬದುಕನ್ನು ಅರೆನಿಮಿಷಂದೆ ಕರಗಿಸಬೇಕು, ನೋವು ಬವಣೆಗಳು ಜಗಕೆ ಇರಲಿ, ನಮ್ಮದೇನಿದ್ದರೂ ಅತಿಯಾಸೆಯ ಒತ್ತಡ ಜೀವನ ಬೇಡ ಅಲ್ಲವೇ ಎಂದೆ. ಅವಳು ಹೌದು, ನೆಮ್ಮದಿಯಲ್ಲಿ ಪ್ರೀತಿಯ ಹಾರೈಕೆಯಲ್ಲಿ ಬಾಳಿನುದ್ದಕ್ಕೂ ನಗುತ್ತಾ ಸಾಗೋಣ, ಒತ್ತಡದ ಜೀವನವೇಕೆ, ನಮಗದು ಸಾದುವೂ ಅಲ್ಲ, ಜೀವನವನ್ನು ಸಂಪೂರ್ಣ ಒತ್ತಡದಲ್ಲೇ ಕಳೆದು ಕೊನೆಗೆ ಕೂಡಿಟ್ಟ ಸಂಪತ್ತು ಯಾವುದಕ್ಕೆ ಯೋಗ್ಯ, ಕೂಡಿಡುವುದಕ್ಕಿಂತ ಬೇಕಾದಷ್ಟು ಅಗತ್ಯವಿರುವಷ್ಟು ಬದುಕಿಗೆ ಅಣಿಮಾಡಿಕೊಳ್ಳೋಣ, ಅಗತ್ಯವಿಲ್ಲದ ನಿಧಿ ಸಂಗ್ರಹದ ಚಿಂತೆಯಲ್ಲಿ ಜಗದ ಸುಖವನ್ನು ತ್ಯಾಗಮಾಡಿ, ನನಗೆ ನೀನು, ನಿನಗೆ ನಾನು ನಿತ್ಯ ಪ್ರೀತಿಸದಿದ್ದರೆ, ಪ್ರೀತಿಯ ನುಡಿಗಳನ್ನು ನುಡಿಯದೇ ಓಡುವ ಸಂಗ್ರಾಮದ ಓಟದ ದುಡಿಮೆ ಬೇಡ, ಅತೀ ಸಣ್ಣ ಊರಾದರೂ ಸಾಕು ನಾವಿರುವಲ್ಲಿಯೇ ನಮಗಿರುವ ಸಣ್ಣ ಆಲಯಲ್ಲೇ ದುಡಿಯೋಣ, ದುಡಿಮೆ ಕಡಿಮೆ, ಅತೀ ಸಿರಿವಂತಿಕೆಯಿಲ್ಲವೆಂಬ ಕೊರಗು ಬೇಡ, ಕೊರಗಿನಲ್ಲೆ ಜೀವನ ಮುಗಿದರೆ ಬಾಳು ರೋಧನೆಯಲ್ಲೇ ಕರಗಿದರೆ ನಮಗೆ ದೊರೆತ ಅಮೂಲ್ಯ ಕ್ಷಣಗಳನ್ನು ನಾವು ಭುವಿಯಲ್ಲಿ ಅನುಭವಿಸದೇ ಹಾಗೆಯೇ ನಮ್ಮ ಪ್ರಯಾಣವನ್ನು ಈ ಲೋಕದಿಂದ ಮುಗಿಸುವುದು ಸಾದುವಲ್ಲ, ನಾವಿಬ್ಬರು ಪ್ರೀತಿಯ ನಮ್ಮ ಪುಟಾಣಿ ಮಂದಿರದಲ್ಲೇ ಸಣ್ಣ ದುಡಿಮೆಯನ್ನೇ ನಿಷ್ಠೆಯಿಂದ ಮಾಡೋಣ, ಅದರಲ್ಲೂ ನಮ್ಮಿಬ್ಬರ ಪ್ರೀತಿಯ ಬೆಸುಗೆಯಿರಲಿ, ಪರಸ್ಪರ ಸಹಕಾರವಿರಲಿ ಅಲ್ಲವೇ ಎಂದೆ, ಅವಳು ಹೌದು, ಪ್ರೀತಿಯಲ್ಲಿ ಎಲ್ಲಾ ಇದೆ, ಬದುಕಿಗೆ ಬೇಕಿರುವಷ್ಟು ಹಣವಿದ್ದರೆ ಸಾಕು, ಅತೀ ಆಸೆಯಲ್ಲಿ ಕೂಡಿಡುವ ಪಣಬೇಡ, ನಿನ್ನ ಮಾತು ಸತ್ಯ, ನಾವಿರುವ ನಾಡಿನಲ್ಲೇ, ನಮ್ಮ ದೇಶದಲ್ಲೇ ಪ್ರೀತಿಯಿಂದ ನಮಗಿರುವ ಅವಕಾಶದಲ್ಲೇ ದುಡಿಯುತ್ತಾ, ನಗುತ್ತಾ ಬಾಳನ್ನು ನಡೆಸೋಣ, ಒತ್ತಡದಲ್ಲಿ ನಡೆಸುವ ಜೀವನ ನಮಗೇಕೆ.. ಬಾಯಿತುಂಬ ನಾನು ನೀನು ಒಂದೆಡೆ ಕೂತು ಮಾತನಾಡಲು ಸಾಧ್ಯವಿಲ್ಲದಂತೆ ದುಡಿಮೆ ನಮಗೇಕೆ..? ಹೊಟ್ಟೆ ತುಂಬಿದರೆ ಸಾಕು, ಭವಿಷ್ಯಕೆ ತುಸು ಹೊನ್ನಿದ್ದರೆ ಸಾಕು, ನಾವೆಷ್ಟೇ ಓದಿದ್ದರೇನು, ಅದರ ಮೆಲುಕು ಬೇಡ, ವಿದೇಶಕ್ಕೆ ಹೋಗಿ ಗಳಿಸಿ ಇಲ್ಲಿ ಬಂದು ಅರಮನೆ ಕಟ್ಟುವ ಕನಸು ಬೇಡ, ಆ ಅರಮನೆ ಕಟ್ಟುವ ಕಾಯಕದಲ್ಲೆ ನಾನು ನೀನು ಬೆಂದು ಬಸವಳಿದು ದುಡಿವ ಕಾಯಕದಲ್ಲೇ ದಿನಕ್ಕೆ ನಾನು ನೀನು ಎಷ್ಟು ಬಾರಿ ಮಾತನಾಡಬಹುದು ಅಲ್ಲವೇ ಎಂದಳು. ಮನಕ್ಕೂ ಹೌದೆನ್ನಿಸಿತು. ವಿದೇಶದಲ್ಲಿ ಗಳಿಸಿ ನಮ್ಮೂರಿಗೆ ನಾವು ಪುನಃ ಬರುತ್ತೇವೋ ಇಲ್ಲವೊ ಗೊತ್ತಿಲ್ಲ.

      ವಿದೇಶಕ್ಕೆ ದುಡಿಮೆಗೆಂದು ಇದ್ದುದನ್ನು ಬಿಟ್ಟು  ಹೋದವರು ಬಂದಿದ್ದು ಕಡಿಮೆ, ಅವರ ಜೀವನವು ವೈಭವೋಪೇತವಾಗಿದ್ದರೂ ಅದು ನಮಗೆ ಬೇಡ, ನಮಗೆ ನಮ್ಮ ಬದುಕಿಗೆ ನೆಮ್ಮದಿ ಮುಖ್ಯ, ಹಣ ಮುಖ್ಯವಲ್ಲ ಎಂದಳು ಮನಕ್ಕೆ ಅವಳ ನುಡಿಯು ತೀರ ಆಪ್ತವೆನಿಸಿತು, ಬಿರುಬಿಸಿಲಿನಲ್ಲಿ ಸುರಿವ ಮಳೆಧಾರೆಯಂತೆ ಅವಳ ನುಡಿಯಲ್ಲಿ ಮನದ ಚಿತ್ತವು ಅವಳ ಹಿತಧಾರೆಗೆ ನಲಿಯುತ್ತಾ ಭುಜವನ್ನೂ ಅವಳ ಭುಜಕ್ಕೇ ಹಾಗೆಯೇ ತಾಕಿಸಿ ಕಡಲಲೆಗಳ ಎಣಿಸುತ್ತಾ ಬೀಸುವ ತಂಗಾಳಿಗೆ ತನುವೊಡ್ಡಿ ಹೀಗೆ ಕೂರುವ ಘಳಿಗೆಯಲ್ಲಿ ಎಷ್ಟು ಹಿತವಿದೆಯಲ್ಲವೇ..? ಹೌದು, ಒತ್ತಡದ ಕಾಯಕದಲ್ಲೆ ಅತೀಯಾಸೆಯಲ್ಲೇ ನಮ್ಮ ಬದುಕು ಮುಗಿದು ಹೋಗುವುದು ಬೇಡ, ಪ್ರೀತಿಯ ನಾವೆಯಲ್ಲಿ ನಾವಿಬ್ಬರು ತುಸು ಕಡಿಮೆ ಹೊನ್ನಾದರೂ ಸಾಕು ಅದರಲ್ಲೇ ಬದುಕು ಸಾಗಿಸೋಣ, ಬಾಳಿನುದ್ದಕ್ಕೂ ಪ್ರೀತಿಯ ಓರಣವು ಎದುರು ನೋಡೋಣ, ಪ್ರೀತಿಯ ಹಂದರದಲ್ಲೇ ಜಗವ ಮರೆಯೋಣವೆನ್ನುತ್ತಾ ಹರಟೆಹೊಡೆಯುತ್ತಾ ವಿದೇಶಕ್ಕೆ ಹೋಗುವ ಅತೀ ಗಳಿಸುವ ಆಸೆಯನ್ನು ಕೈಬಿಟ್ಟು ನಮ್ಮೂರ ನಮ್ಮ ಪುಟಾಣಿ ಆಲಯದಲ್ಲೇ ನಮ್ಮ ಕನಸಿನ ಗೂಡನ್ನು ಕಟ್ಟಿ ನಿತ್ಯ ಒಲವ ರಂಗೋಲಿ ಹಾಕಲು ನಾವು ಪಣತೊಡುತ್ತಾ .. ಪ್ರೀತಿಯ ಬದುಕಿಗೆ ಸೈ ಎಂದೆವು..ಬೀಸುವ ತಂಗಾಳಿಯು ಮೆತ್ತನೆ ಹೇಳಿತು ನೀವು ಬರುತಿರಿ ನಿತ್ಯವಿಲ್ಲಿಗೆಂದು..ಕಡಲಲೆಗಳು ಗುನುಗಿದವು ನೀವು ನಮ್ಮನ್ನೆಣಿಸಲು ಬರುತಿರಿ ನಿತ್ಯವೆಂದಂತೆ ಅನುಭವ..ಎಲ್ಲವೂ ನಿರ್ಮಲ ಒಲವು ಬೆಸೆದ ಮನಗಳ ಚಿತ್ತಾರ..

         ರಾಮಚಂದ್ರ ಸಾಗರ್

Wednesday, 21 December 2016

ಕಾದಿರುವೆ ನಿನಗಾಗಿ..

ಕಾತರಿಸುತಿದೆ ಮನವಿಂದು
ಮುಸ್ಸಂಜೆ ಕಡಲತಡಿಯಲಿ
ನಿನ್ನ ಗುಣಗಾನ ಮಾಡಲೆಂದು
ನೀ ಬರುವೆಯೇನು..

ಅಲೆಗಳ ಸಾವರಿಸಿದ 
ತಂಗಾಳಿಯ ಹಿತದಲ್ಲಿ
ನೀ ಜೊತೆಯಿರದ
ಕೊರಗಿನ ನೋವಲ್ಲಿ
ಕಾದಿರುವೆನು ನಿನಗಾಗಿ ನಾ ನೊಂದು..

ತಡಿಯ ಅಪ್ಪುವ 
ಅಲೆಗಳಿಗು ವ್ಯಸನವು
ತಣಿವು ತುಂಬಿದ
ತಂಗಾಳಿಯೂ ತಣಿವೆನಿಸದು
ನೀ ಕಾಡುತಿರಲು ಒಂಟಿ
ನನ್ನ ಮನಕೆ..

ಬಾಳ ನಾವೆಯಲ್ಲಿ
ಜೊತೆಯಾದ ನೀನು
ಮುಸ್ಸಂಜೆ ರಂಗಲ್ಲಿ
ಒಲವ ರಂಗೋಲಿ
ಹಾಕುವೆನು ನಿನಗಾಗಿ
ನೀ ಬರುವೆಯೇನು..

ಕನವರಿಕೆಯ ಕಾರ್ಮೋಡವನು
ನೀ ಕರಗಿಸುವೆಯೇನು
ಕಾತರಿಸುವ ಮನಕೆ
ನೀ ರಮಿಸುವೆಯೇನು..

ಕಾದಿರುವೆನು ನಿನಗಾಗಿ
ಕಡಲತಡಿಯಲಿಂದು...
      
       ರಾಮಚಂದ್ರ ಸಾಗರ್

Tuesday, 20 December 2016

ಹಸಿರು ಸಿರಿಯ ಮರೆಯಲ್ಲಿ...ನೀ ನಕ್ಕಾಗ...


ನೀ ಕೊಟ್ಟ ಸಂದೇಶ..

    ಬಿಸಿಲುದಾರಿಯಲ್ಲಿ ನೆರಳನು ತಂದವನು, ನಾ ನಡೆವ ಹಾದಿಯಲ್ಲಿ ಕೈ ಹಿಡಿದು ನಗುತ ನಡೆದವನು, ದಣಿವೆನ್ನಿಸುವ ಸಮಯದಲ್ಲಿ ನಗುತ ಜಗದೆಲ್ಲ ಬವಣೆಗಳ ಹಂಗೇಕೆ ಎನ್ನುತ್ತಾ ನನ್ನೊಂದಿಗೆ ಸಾಗಿದ ಗೆಳೆಯಾ, ಪ್ರೀತಿಯ ಸಂದೇಶಗಳನ್ನು ಸದಾ ನಗುಮೊಗದಿಂದ ನೀಡುತ್ತಿದ್ದ ನೀನು ಇಂದು ನನಗೆ ನೆನಪಾದರೂ ನೀನು ನಿತ್ಯ ಅರಳಿ ನನ್ನೆದೆಯಲ್ಲಿ ಬಾಡದೇ ಉಳಿವ ಕುಸುಮ ನೀನು. ಪ್ರೀತಿಯ ಹಂದರದಲ್ಲಿ ಜಗವೆಲ್ಲ ಮರೆತು ನಮ್ಮ ಮನಗಳು ನಗುತಾ ಸಾಗುವ ಸವಿ ಘಳಿಗೆಯಲ್ಲಿ ನೀ ದೂರವಾದೆ, ನೀ ಪ್ರೀತಿಯ ಕನಸುಗಳನು ಉಳಿಸಿಯೇ ಹೋದೆ. ನೀ ಬರುವ ಘಳಿಗೆಗೆ ನಾ ಕಾಯುವುದು ಸಾದುವಲ್ಲ, ನೀ ಬಾರದಷ್ಟು ದೂರ ಕ್ರಮಿಸಿಯಾಗಿದೆ, ಆದರೆ ನಿನ್ನ ನೆನಪುಗಳ ಸವಿ ಭಾರವನ್ನು ನಾ ಇಳಿಸಲಾರಳಾದೆ, ಮನದಿಂದ ಹೊರ ನೂಕಲಾರಳಾದೆ, ಎಲ್ಲವೂ ನಿರ್ಮಲ ಪ್ರೀತಿಯ ಹಂದರದಲ್ಲಿ ಅರಳಿದ ಒಲವಿಗೆ ಸಾವಿಲ್ಲ, ನಿರ್ಮಲ ಪ್ರೇಮವು ಸದಾ ಉಕ್ಕುವ ಜಲದ ಸೆಲೆಯಂತೆ, ಅದು ನೀರಡಿಕೆ ಕರಿಗಿಸುವ ದಿವ್ಯಾ ಮೂಲವನ್ನು ಮನದ ದುಗುಡವನ್ನು ಮಾಯವಾಗಿಸುವ ಎಂದೂ ಮುಸುಕಾಗದ ನಿತ್ಯ ನಿರಂತ ಒಲವ ಸೆಲೆ ಗೆಳೆಯಾ. ಹಿಮಗಿರಿಯಲ್ಲಿ ಜಾರುವ ಹಿಮದ ರಾಶಿಯಂತೆ ಮೆತ್ತನೆ ಅರಳುವ ಅನುರಾದಲೆಗಳ ಜೊಂಪಲ್ಲಿ ನಗುತ ವಿರಮಿಸುವ ಆ ಘಳಿಗೆ ಮತ್ತೆ ಮತ್ತೆ ಕಾಡುತ್ತದೆ, ಬಿಸಿಲು ಧಗೆಯಲ್ಲು ಆ ಘಳಿಗೆಯನು ನೆನೆದರೆ ಮನಕ್ಕಂತೂ ತಣಿವು ನೀ ಇಲ್ಲದಿದ್ದರೂ ಜೊತೆಯಲ್ಲಿ, ಬೀಸುವ ಮರದೆಲೆಗಳ ಗಾನದಲ್ಲೂ ನೀ ನುಡಿವ ಗೀತೆಗಳ ಗುಣಗಾನದ ಮೊರೆತವನ್ನೇ ಆಲಿಸಿದಂತೆ ಕರ್ಣಗಳಿಗೇನೋ ತೃಪ್ತಿ, ಇರಲಿ ಸದಾ ಕಾಡುವ ನಿನ್ನ ನೆನಪು ನನ್ನ ಬಳಿ, ಇರಲೇಬೇಕೆಂಬ ಹಠವು ನನ್ನದು. ನಿನ್ನ ಧ್ಯಾನದಲ್ಲಿ ದಿನ ಕಳಿಯುವ ಮುನ್ನ ಮುಸ್ಸಂಜೆಯ ರಂಗಲ್ಲಿ ನೀ ಗುನುಗಿದ ಗೀತೆಯಂತೂ ನನಗೆ ಕಾಡುವುದು ನಿತ್ಯವಿಂದು ಸತ್ಯ ಗೆಳೆಯಾ. ಏನೇ ಆಗಲಿ ನೀನೊಂದು ಕಮರಿದ ಕನಸನ್ನು ಬಣ್ಣ ತುಂಬಿ ನಲಿಸುವ ಕಲೆಗಾರನಾಗಿದ್ದೆ, ರಂಗು ತುಂಬಿದ ಜಗದಲಿ ಒಲವ ಚಿತ್ತಾರ ಬಿಡಿಸುತ್ತಾ ಮನದ ಮನೆಯೆದುರು ಒಲವ ರಂಗೋಲಿ ನನ್ನ ಕೈಯಲ್ಲಿ ನಾ ಬಿಡಿಸುತ್ತಿದ್ದೆ, ನಾ ನಿನ್ನಲಿ ವಶವಾಗಿ, ಎಲ್ಲವೂ ನಿನದೇ ಮಾಯೇ. ಒಲವ ಸೆಲೆಯ ಕೃಪೆ. ನದಿ ದಂಡೆಯಲ್ಲಿ ಅರಳಿ ನಗುವ ಹೂಗಳಿಗೂ ನದಿ ಬತ್ತಿದಾಗ ನಗುವು ಉಳಿವುದೇ..? ಸರೋವರ ಸಾವರಿಸಿ ಬೀಸುವ ಗಾಳಿಯು, ಸರೋವರದಲ್ಲಿ ಬಿಸಿ ಧಗೆ ಉಕ್ಕಿದರೆ ತಣಿವುದೇನು..? ತಂಗಾಳಿಯು ಉಳಿವುದೇನು..? ಹಾಗೇಯೇ ನೀ ಇಲ್ಲದೇ ನಾನು ಉಳಿವೆಯೇನು..?
     ಏನೇ ಆಗಲಿ ನಿನಗೆ ನಾ ಕೊಟ್ಟ ಮಾತನ್ನು ಉಳಿಸಲೇಬೇಕಿದೆ, ಜಗದೆಲ್ಲ ಬವಣೆಗಳಿಗೆ ನಾನು ಬೆದರದೇ ನಗುತ ಸಾಗುವುದೇ ಅದು ನಿನಗೆ ನಾನು ಕೊಡುವ ಗೌರವ, ನಿನ್ನೊಲವ ಆರಾಧನೆಯ ಸಾರ್ಥಕತೆಯು ಗೆಳೆಯಾ. ಒಂದು ಹನಿ ಕಣ್ಣೀರು ಜಾರಿದರೆ ಅದುವೇ ಒಲವಿಗೆ ಅಳಿವು ಎಂದು ನೀ ನುಡಿದ ನುಡಿಗೆ ನಾ ಎಂದಿಗೂ ಬದ್ಧ, ಒಲವ ಪಾರಿವಾಳ ಮೌನವಾದರೂ ನಿನ್ನ ಪ್ರೀತಿ ತುಂಬಿದ ಮಾತುಗಳಲ್ಲಿ ಲೀನವಾದ ಈ ಮನಸು ಎಂದಿಗೂ ಧೈರ್ಯದಿಂದ ಜಗದ ನೋವುಗಳಿಗೆ ಬೆದರದೇ, ಜೀವನವನ್ನು ಗೆಲ್ಲುತ್ತಾ ನಾ ಸಾಗುತ್ತೇನೆ, ನಿನಗೆ ಕೊಟ್ಟ ವಚನವನ್ನು ಉಳಿಸಿಕೊಳ್ಳುವೆ ಗೆಳೆಯಾ..ನಿನ್ನ ಸಾವು ನಮ್ಮಿಬ್ಬರನ್ನು ದೂರಾಗಿಸಿದೆ, ವಿಧಿ ಮಾಡಿದ ಮೋಸವೇ ಇದು, ಏನೇ ಆಗಲಿ ನೀ ಕೊಟ್ಟ ಪ್ರೀತಿಯ ಸಂದೇಶ ಸದಾ ಜೊತೆಯಿದೆ, ಸುರಿವ ಬಿರುಮಳೆಗೂ ಕೊಚ್ಚಿ ಹೋಗದಷ್ಟು, ಗುಡುಗು ಮಿಂಚಿಗೂ ಬೆದರದಷ್ಟು ಗಟ್ಟಿಯದು, ಕಪ್ಪಿರುಳು ಸದ್ದಿನ ಭಯಕೂ ಅಂಜದೇ ದಾರಿತೋರಿಸುವ ದೀಪವದು, ಹಾಗಿರುವಾಗ ನಾನೇಕೆ ಒಂಟಿಯೆನ್ನಲಿ.. ಕಂಡಿತಾ ನಾ ಇನ್ನೆಂದಿಗೂ ರೋಧಿಸುವುದಿಲ್ಲ,  ಒಂದು ಹನಿ ಕಣ್ಣೀರನ್ನು ಸುರಿಸುವುದಿಲ್ಲ ಗೆಳೆಯಾ..
     “ನನ್ನ ಜೊತೆಯಲಿ ನೀನಿರದ ಜಗದಲ್ಲಿ ಒಂಟಿಯಲ್ಲ ನಾನು.. ನಿನ್ನ ನೆನಪುಗಳ ಜೊತೆಯಲ್ಲಿ ರಮಿಸುವ ನಿನ್ನ ಗೆಳತಿ ನಾನು..”

ರಾಮಚಂದ್ರ ಸಾಗರ್

Monday, 19 December 2016

ಭೂ ಮೇಲ್ಮೈ ಸವೆಯದಿರಲಿ, ಜೀವಕುಲ ಕೊನೆಯಾಗದಿರಲಿ.

    ಮಾನವನ ಅಮಿತ ಬಯಕೆಗೆ ಸಸ್ಯ ಸಂಪತ್ತು ನಾಶವಾದಂತೆ, ಪಕೃತಿಯಲ್ಲಿನ ಅಸಮತೋಲನ ವಿಕೋಪದಿಂದ ಉದ್ಭವಿತ ಸಮಸ್ಯೆಗಳಲ್ಲಿ ಭೂ ಸವಕಳಿಯು ಒಂದು. ಅಂದರೆ ನಮ್ಮೆಲ್ಲರ ಬದುಕಿಗೆ ನೆಲೆಯಾದ ಭುವಿಯು ವರ್ಷದಿಂದ ವರ್ಷಕ್ಕೆ ಸವಕಳಿ ಹೊಂದುತ್ತಿದೆ. ಭುವಿಯ ಮೇಲ್ಮೈಯ ಮೊದಲ ಪದರದಲ್ಲಿ ಮಾತ್ರ ಸಸ್ಯ ಸಂಪತ್ತು ಬೆಳೆಯಲು ಸಾಧ್ಯ. ಭುವಿಯ ಎರಡನೇ ಹಂತದದ ಪದರದ ಮಣ್ಣಿನಲ್ಲಿ ಯಾವುದೇ ಸಸ್ಯ ಸಂಪತ್ತಾಗಲಿ, ಜೀವಿಗಳಾಗಲಿ ವಾಸಿಸಲು, ಬೆಳೆಯಲು ಸಾಧ್ಯವಿಲ್ಲ. ಆದ್ದರಿಂದ ಭುವಿಯ ಮೇಲ್ಮೈಯು ಜಗದ ಎಲ್ಲಾ ಜೀವಿಗಳಿಗೆ ಜೀವಸೆಲೆಯಾಗಿದೆ. ಜಗದೆಲ್ಲಾ ಜೀವಿಗಳು ಬದುಕುಳಿಯುವುದು ಅವಲಂಬಿತವಾಗಿರುವುದು ಮೇಲ್ಮೈ ಮಣ್ಣಿನಿಂದ ಮಾತ್ರವೇ. ಇಂತ ಮೇಲ್ಮೈ ಮಣ್ಣು ಸಂರಕ್ಷಿಸಿ ಪೋಷಿಸಿಕೊಂಡು ಹೋಗಬೇಕಾದ್ದು ಜಗದ ಜೀವಿಗಳಲ್ಲಿ ಉನ್ನತ ಜ್ಞಾನ ಜವಾಬು ಹೊಂದಿರುವ ಮಾನವನೇ ಮಾಡಬೇಕಿದೆ. ಭುವಿಯ ಮೇಲಿನ ಹಕ್ಕನ್ನು ಆತನೇ ಸಾಧಿಸಿದ್ದರಿಂದ ಇದು ಅವನಿಂದಲೇ ನಿರ್ವಹಣೆಯಾಗುವ ಕಾರ್ಯವಾಗಿದೆ. ಮೇಲ್ಮೈ ಮಣ್ಣಿನಲ್ಲಿ ಸಸ್ಯ ಸಂಪತ್ತು ಬೆಳೆಯಲು ಅಗತ್ಯ ಪೋಷಕಾಂಶಗಳು ಇರುವುದು ಜೀವಿಗಳ ಬೆಳವಣಿಗೆಗೆ ಪೂರಕ ಅಂಶಗಳು ಇರುವುದು ಮೇಲ್ಮೈ ಮಣ್ಣಿನಲ್ಲಿ ಮಾತ್ರವೇ.
    ವ್ಯಾಪಕ ಅರಣ್ಯ ನಾಶದಿಂದ ಗುಡ್ಡ ಗಾಡುಗಳು ಬೋಳಾಗಿವೆ. ಮಳೆ ನೀರು ಗಿರಿಯ ಸಾವರಿಸಿ ಚಲಿಸುವಾಗ ಮೇಲ್ಮೈ ಮಣ್ಣನ್ನು ಯಥೇಚ್ಚವಾಗಿ ನದಿಗೆ ಸೇರಿಸುತ್ತದೆ. ಮಣ್ಣು ಸಾಗಿ ಸಾಗರ ಸೇರುತ್ತದೆ. ಬಯಲು ಪ್ರದೇಶದಲ್ಲಿ ನಾಶವಾದ ಹುಲ್ಲುಗಾವಲು ಪ್ರದೇಶಗಳಲ್ಲೂ ನೆಲವನ್ನು ನೀರು ಮತ್ತು ಗಾಳಿಗಳಿಂದ ಸವೆತಕ್ಕೊಳಕ್ಕಾಗುತ್ತದೆ. ಹುಲ್ಲುಗಾವಲು ಪ್ರದೇಶಗಳ ನಾಶವು ಮೇಲ್ಮೈ ಮಣ್ಣಿನ ಸವೆತಕ್ಕೆ ಪ್ರಮುಖ ಕಾರಣ. ನೀರು ಮತ್ತು ಗಾಳಿಯ ಬಿರುಸಿಗೆ ಮಣ್ಣು ಸವೆದಂತೆ ಭುವಿಯ ಫಲವತ್ತತೆಯು ಕ್ಷೀಣವಾಗುತ್ತಾ ಹೋಗುತ್ತದೆ. ಫಲವತ್ತತೆಯ ಕೊರತೆಯಿಂದ ಸಸ್ಯ ಸಂಪತ್ತು ನಶಿಸುತ್ತದೆ ಅರ್ಥಾತ್ ಬೆಳೆಯಲು ಸಾಧ್ಯವಿಲ್ಲದಂತಾಗುತ್ತದೆ. ಮುಂದೊಂದು ದಿನ ಭುವಿಯ ಮೇಲೆ ಸಸ್ಯ ಬೆಳೆಯುವುದು ಅಸಾಧ್ಯವಾಗುತ್ತದೆ. ಫಲವತ್ತತೆಯ ಕೊರತೆಯಿಂದ ರಾಸಾಯನಿಕ ಗೊಬ್ಬರಗಳನ್ನು ಗದ್ದೆಯಲ್ಲಿ ಬಳಸುವುದು ಅಧಿಕವಾಗಿದೆ. ನೈಸರ್ಗಿಕವಾಗಿ ಬೆಳೆಯು ಬೆಳೆಯದ ಸ್ಥತಿಗೆ ಭೂಮಿಯು ಹಂತ ಹಂತವಾಗಿ ತಲುಪುತ್ತಿದೆ. ನೈಸರ್ಗಿಕವಾಗಿ ಬೆಳೆಯಬೇಕಾದ ಗಿಡ ಮರಗಳನ್ನು ನಾವು ಇಂದು ಕೃತಕವಾಗಿ ಬೆಳೆಸಬೇಕಾಗಿದೆ. ಪ್ರಕೃತಿಯ ವಿರುದ್ಧ ದಿಕ್ಕಿನ ಮಾನವ ಚಲನೆಯು ಅಭಿವೃದ್ಧಿಯ ಹೆಸರಿನಲ್ಲಿ ನಡೆಯುತ್ತಿರುವ ಪ್ರಾಕೃತಿಕ ಸಂಪತ್ತುಗಳ ಮಿತಿ ಮೀರಿದ ಗೊಂದಲಮಯ ಬಳಕೆಯಿಂದ ಭುವಿಯು ವಿನಾಶದತ್ತ ಸಾಗುತ್ತಿದೆ. ಗಣಿಗಾರಿಕೆಯು ಅನೇಕ ನದಿ ತೊರೆಗಳನ್ನು ನಾಶ ಮಾಡಿದ ಉದಾಹರಣೆಗಳಿವೆ. ನೈಸರ್ಗಿಕ ಅರಣ್ಯವು ನಾಶವಾಗಿ ವಿಪರೀತ ಮಣ್ಣು ನದಿ ಸೇರಿ ಜಲಾಶಯಗಳು ಹೂಳು ತುಂಬಿ ಅವುಗಳು ಹಾಳಾಗುತ್ತಿವೆ. 

     ಪಶ್ಮಿಮ ಘಟ್ಟದ ಚಿಕ್ಕಮಗಳೂರು ಜಿಲ್ಲೆಯಲ್ಲಿನ ಗಣಿಗಾರಿಕೆಯ ಪರಿಣಾಮ ಭದ್ರಾ ನದಿಯ ಮೇಲಾಯಿತು. ಗಣಿಗಾರಿಕೆ ಕಂಪನಿಗಳು ತಾವು ಅಗೆದ ಜಾಗದಲ್ಲಿ ಯಾವುದೇ ಮರಗಳನ್ನು ಮರುಬೆಳೆಸಲು ಸಾಧ್ಯವಿಲ್ಲ. ಅದಿರು ತೆಗೆದು ಅಗೆದ ಜಾಗದಲ್ಲಿ ಒಂದು ಹುಲ್ಲು ಬೆಳೆಯದೇ ಬೋಳು ಗುಡ್ಡಗಳ ದರ್ಶನವಾಗುತ್ತದೆ. ನೈಸರ್ಗಿಕವಾಗಿ ಬೆಳೆದು ಕಾಡುಗಳನ್ನು ಕಡೆದು ಗಣಿಗಾರಿಕೆ ಮಾಡಿ ಅಳಿದುಳಿದ ಪ್ರದೇಶದಲ್ಲಿ ಅಕೇಶಿಯ, ನೀಲಗಿರಿ ಪ್ಲಾಂಟ್ ಗಳನ್ನು ಬೆಳೆಸುತ್ತಿರುವುದು ಕಂಡು ಬರುತ್ತದೆ. ಅದೂ ಬೆಳೆಯ  ಬೇಕಾದರೆ ಬೇರೆಡೆಯಿಂದ ಮಣ್ಣನ್ನು ತಂದು ಜೊತೆಗೆ ಸಾಕಷ್ಟು ರಾಸಾಯನಿಕ ಗೊಬ್ಬರ ಬೆಳೆಸಿ ಗಣಿಗಾರಿಕೆ ಕಂಪನಿಗಳು ತಾವು ಅಗೆದ ಜಾಗದಲ್ಲಿ ಪುನಃ ಅರಣ್ಯ ಬೆಳೆಸಿರುವುದಾಗಿ ಹೇಳುತ್ತಾರೆ. ಆದರೆ ನೈಸರ್ಗಿಕವಾಗಿ ಒಂದು ಹುಲ್ಲುಕಡ್ಡಿಯು ಬೆಳೆಯುವುದು ಆ ಜಾಗದಲ್ಲಿ ಅಸಾಧ್ಯವಾಗಿದೆ. ಭುವಿಯ ಮೇಲ್ಮೈ ಕೊಚ್ಚಿ ತೆಗೆದ ಮೇಲೆ ಉಳಿವುದಾದರೂ ಏನು..? ಬೋಳಾದ ಭುವಿಯಲ್ಲಿ ಬಾಳುವುದು ಸಾಧ್ಯವೇ..? ಮನೆಗಳನ್ನು ಕಟ್ಟುವಾಗ ಆದಷ್ಟು ಮರಬಳಕೆ ಕಡಿಮೆ ಮಾಡುವ ಸುಧಾರಿತ ತಂತ್ರಜ್ಞಾನದ ಅಳವಡಿಕೆಯಿಂದ ಮರಗಳ ಬಳಕೆ ಬದಲಾಗಿ ಅಲ್ಯೂಮೀನಿಯಂ ಕಿಟಕಿ ಬಾಗಿಲುಗಳನ್ನು ಉಪಯೋಗಿಸುತ್ತಿದ್ದಾರೆ. ಕಾಲಿ ಜಾಗವನ್ನು ಹಾಗೆಯೇ ಬಿಡದೇ ಹಸಿರುಮಯಗೊಳಿಸಿ ಉಳಿಸಿದಲ್ಲಿ ಭುವಿಯ ಮೇಲ್ಮೈ ಉಳಿಯುತ್ತದೆ, ಜೊತೆಗೆ ಜೀವಕುಲವು ಉಳಿಯುತ್ತದೆ. ಎಲ್ಲದಕ್ಕೂ ಮನಸ್ಥೈರ್ಯ ಗಟ್ಟಿಯಾಗಿರಬೇಕಷ್ಟೇ. ನೈಸರ್ಗಿಕ ಅರಣ್ಯಗಳನ್ನು ನಾಶಗೊಳಿಸದೇ ಪೋಷಿಸಿದಲ್ಲಿ ಮುಂದೆ ಜೀವವಾಯುವಿನ ಕೊರತೆಯನ್ನು ತಡೆಯಬಹುದು. ನಗರ ಪ್ರದೇಶಗಳಲ್ಲಿ ಪರಿಶುದ್ಧ ಗಾಳಿಯ ಕೊರತೆಯಿದೆ. ಅನೇಕ ರೋಗಗಳು ಅಶುದ್ಧ ಗಾಳಿ ಮತ್ತು ಧೂಳು ಕಣಗಳಿಂದ ಉಂಟಾಗಿ ವಾಸಿಯಾಗದೇ ಬಾಧಿಸುತ್ತಾ ಉಳಿಯುತ್ತವೆ, ಶುದ್ಧ ಗಾಳಿ, ಶುದ್ಧ ನೀರು ಉಳಿಯಬೇಕಾದರೆ ನಾವು ಭುವಿಯ ಮೇಲ್ಮೈಯನ್ನು ರಕ್ಷಿಸಿ ಉಳಿಸಬೇಕು, ಎಲ್ಲೆಡೆಯೂ ಹಸಿರು ಉಳಿಯುವಂತೆ ಕಾಯ್ದುಕೊಳ್ಳುವುದು ನಮ್ಮ ಹೊಣೆಯಾಗಿದೆ. ಇದನ್ನು ಅರಿತು ಪ್ರತಿಯೊಬ್ಬರು ನಡೆದಲ್ಲಿ ಶೇಕಡ 50 ರಷ್ಟು ರೋಗಗಳು ಕಡಿಮೆಯಾಗುತ್ತವೆ, ಜೊತೆಗೆ ಜೀವಕುಲವು ನೆಮ್ಮದಿಯನ್ನು ಕಾಣುತ್ತದೆ ಎಂಬುದು ಆಶಾವಾದ.

         ರಾಮಚಂದ್ರ ಸಾಗರ್

Sunday, 18 December 2016

ಬೆಳಗುವವಳು ನೀನು..

ಗೆಳತೀ..
ಅಮವಾಸ್ಯೆ ರಾತ್ರಿಯಲಿ ನೀ ನಗುತಿರಲು 
ನೀನೊಂದು ಬೆಳುದಿಂಗಳು ಬೊಂಬೆಯು
ಚೂರಾದ ಮನದಲ್ಲಿ ಆಸೆಯನ್ನು
ಬಿತ್ತಿ ಪೋಷಿಸುವ ಸುಕುಮಾರಿಯು ನೀನು..

ಎದೆಯಾಳದಲ್ಲಿ ಅವಿತ ಆಸೆಯನ್ನು
ಮೇಲೆತ್ತಿ ನಲಿಸಿ ಕೈ ಹಿಡಿವವಳು ನೀನು
ಮೌನದ ಹಾಡಿಗೆ ಪದಗಳನು
ಸ್ವರಮೇಳದಲಿ ಧಾರೆಯೆರೆವವಳು ನೀನು..

ತಲ್ಲಣದ ಮನದಲ್ಲಿ ರಮ್ಯತೆಯನು
ಮನ ರಮಿಸುತ ತಂದವಳು ನೀನು
ಮುಸ್ಸಂಜೆಯ ರಂಗನ್ನು ಸೆರೆಹಿಡಿದು
ಕನಸಿಗೆ ಲೇಪಿಸಿ ನಕ್ಕವಳು ನೀನು..

ಬೇಸರ ಎಂಬುದು ನಮಗೇಕೆ ಎಂದವಳು
ಚೇತರಿಕೆಯ ಬಲವನ್ನು ನನಸಾಗಿದವಳು
ವಿರಹವ ಮರೆಸುವ ರೂವಾರಿಯಾದವಳು
ಭಾವನೆಗಳ ಮೆರವಣಿಗೆಗೆ ಸಾರಥಿಯಾದವಳು..

ಕಪ್ಪಿರುಳು ವೇಳೆಯಲ್ಲು ಕಣ್ತುಂಬ
ಬಣ್ಣಗಳ ಚಿತ್ತಾರ ಮೂಡಿಸಿ
ಮೋಡಿ ಮಾಡುತಾ ಜೊತೆಯಾದವಳು
ಬೆಳುದಿಂಗಳು ಬೊಂಬೆಯಾಗಿ
ಜಗವೆಲ್ಲ ಬೆಳಗುವವಳು ನೀನು..

ರಾಮಚಂದ್ರ ಸಾಗರ್

Thursday, 15 December 2016

ಹಸಿರು ಸಿರಿಯಲಿ ಬೆಳ್ಳಿ ರೇಖೆ ಜಾರಿದಾಗ....ಮನದ ದುಗುಡವೆಲ್ಲ ದೂರ ದೂರ...


ಕಾತರತೆಯ ಕಾರ್ಮೋಡ ಕರಗಲಿ..

     ಶರಧಿ ಉಕ್ಕಿ ಒಮ್ಮೆಲೇ ತಡಿಯನು ಅಪ್ಪಿದಂತೆ, ಶರಧಿಗಾಗಿ ಹವಣಿಸುತ್ತಿದ್ದ ತಡಿಯು ಸಂತೃಪ್ತಿಯಲ್ಲಿ ಬೀಗಿದಂತೆ. ತುಂಬು ಚಂದಿರನ ಬೆಳುದಿಂಗಳು ಹರಸಿ ಹಾರೈಸುತಿರಲು, ಹೂಬನದ ದಾರಿಯಲ್ಲಿ ನಾನು ನೀನು ಕೈಹಿಡಿದು ಸಂಭ್ರಮಿಸುತಾ ಸಾಗುವಾಗ ಮೆಲುಗಾಳಿಗೆ ಬಾಗಿ ಬಾಗಿ ನೋಡುವ ಕುಸುಮಗಳು ನಮ್ಮನ್ನೇ ಹಾರೈಸಿದಂತೆ ಭಾಸವಾಗುತ್ತಿತ್ತು, ಪ್ರೀತಿಯ ಸವಿ ಮಳೆಯು ಮನದಲ್ಲಿ ಭೋರ್ಗರೆಯುತ ನಿನ್ನ ಕೈಹಿಡಿದು ನಾ ಸಾಗುತಿರಲು ಗೆಳತಿ ಅಂದು ಜಗದೆಲ್ಲ ಉನ್ನತ ಉಚ್ಛ ಶಿಖರವೇರಿದ ಸಂಭ್ರಮದಲ್ಲಿ ಮನ ತೇಲುತಿತ್ತು, ನಿನ್ನ ಕೆಣಕುವ ನಯನಗಳು ಸಾವಿರ ಕನಸುಗಳನ್ನು ಕಾಣಿಸುತ್ತಾ ನನ್ನ ಕೈ ಹಿಡಿದು ನಡೆಯುತಿದ್ದೆ. ಮನದಲ್ಲಿ ನೆನಪುಗಳ ಜಲಧಿಯು ಅಮಿತವಾಗುತಿರಲು ನೀನೊಂದು ಸುಮಧುರ ಭಾವನೆಗಳ ಕಣಜವಾಗಿ ಕಾಣುತಿದ್ದೆ. ತುಸು ನನ್ನ ನೋಡಿ ನೀ ನಕ್ಕರೆ ಮನದ ಆಯಾಸ ನೀ ಕರಗಿಸಿ ಬಿಡುತಿದ್ದೆ, ನಿನಗಾಗಿ ದಿನವಿಡಿ ಕಾದರೂ ಆಗ ನಿನ್ನ
ಕುಡಿ ನಗು ಎಲ್ಲವನ್ನು ಮಾಯವಾಗಿಸಿ ಬಿಡುತಿತ್ತು, ಎಲ್ಲವೂ ಗೆಳತಿ ನಿನ್ನ ನಗುಮೊಗದ ಮಾಯೆಯಾಗಿತ್ತು. ಪ್ರೀತಿಯ ಹೊನಲು ಹರಿಸುವ ನಿನ್ನ ನವಿರು ನಗುವ ಒಲವ ಶರಧಿಯೆಡೆ ನಾನು ನಿನ್ನೊಂದಿಗೆ ನಲಿಯುತಾ ಸಾಗಲು ಸಂಭ್ರಮಿಸುತಿತ್ತು. ತುಂಬು ಚಂದಿರನ ಮಹಿಮೆಗೆ ಉಕ್ಕುವ ಶರಧಿಯಂತೆ ಮನದಾಸೆಯು ಉಕ್ಕಿ ಬಾನೆತ್ತರ ಹರಡಿತ್ತು, ನಾ ನಿನ್ನ ಕೈ ಹಿಡಿದು ತಡಿಯ ಅಪ್ಪುವ ಶರಧಿಯನ್ನು ಕಣ್ಣು ತುಂಬಿಕೊಳ್ಳಬೇಕೆಂದು ಹಠ ಹಿಡಿದು ನೀನು ನನ್ನೊಂದಿಗೆ ಸಾಗುತಿದ್ದೆ. ದೂರದ ದಿಣ್ಣೆಯ ಮೇಲೆ ತಂಪಿರುಳಲಿ ನಿತ್ತು ಉಕ್ಕುವ ಶರಧಿಯ ನೋಡಿ ಬೆಳುದಿಂಗಳಲ್ಲಿ ಹೊಳೆವ ಅಲೆಗಳ ಬೆಳ್ಳಿಕಾಂತಿಗೆ ನಿನ್ನ ಮೊಗದ ಕಾಂತಿಯು
ಅರಳುತಿತ್ತು, ಜೊತೆಗೆ ನನ್ನೆದೆಯ ಕನಸು ಅರಳುತ್ತಿತ್ತು, ಎಲ್ಲವೂ ಚೆಲುವೆ ನಿನ್ನ ನಗು ಮೊಗದ ಮಾಯೆಯ ಫಲವಾಗಿತ್ತು, ನಿನ್ನ ಸಾಂಗತ್ಯದ ಸುಖದ ಫಲವಾಗಿತ್ತು, ನೀ ಜೊತೆಯಿರುವೆಯೆಂಬ ಜಂಬದ ಗತ್ತಾಗಿತ್ತು, ಏನೇ ಆಗಲಿ ಜಗದಲ್ಲಿನ ಸುಖವೆಲ್ಲಾ ನಮಗೆ ಒಲಿದಂತೆ, ತಂಪಿರುಳ ತಂಪಲ್ಲಿ ತಣಿಸುವ ತಂಗಾಳಿಯಲ್ಲಿ ನಲಿವ ಗುಲಾಬಿ ತೋಟದ ಕುಸುಮಗಳಿಗೂ ನಮ್ಮ ಸಂಭ್ರಮ ಕಂಡು ವಿಸ್ಮಿತ, ಕಡಲತಡಿಯ ಸಮೀಪದ ದಿಣ್ಣೆಗಳ ಮೇಲೆ ನಿತ್ತು, ತುಂಬು ಚಂದಿರನತ್ತಾ ನೋಡುತ್ತಾ, ಕಡಲಲೆಗಳ ಮೋರ್ಗರೆತಕೆ ಪುಟಿದೇಳುತ್ತಾ, ನಲಿವ ನಿನ್ನ ನಗುಧಾರೆಯ ಸೊಬಗಿನೆದುರು ನನ್ನ ಮನಕೆ ಸ್ವರ್ಗದ ಅನುಭೂತಿ. ಗೆಳತಿ ಈ ನಿನ್ನ ಸಂಗದಲ್ಲೇ ಹತ್ತಾರು ಜನುಮವೆಂದಿದ್ದರೂ ಅದು ಹೀಗೆ ನಿನ್ನೊಂದಿಗೆ ನಗುತ ಸಾಗಲಿ ಎಂದು ಮನ ಕೈ ಮುಗಿದು ಒಲವದೊರೆ ಚಂದಿರನಲ್ಲಿ ಬೇಡುತ್ತಿತ್ತು. ಓಡುವ ಮೋಡಗಳ ನಡುವೆ ಓಡುತ್ತಾ ಭುವಿಯಲ್ಲಿ ನಮ್ಮ ಮನದಲ್ಲಿ ಸಾವಿರ ಕನಸುಗಳ ನೂಕುತ್ತಾ ಹರಸುವ ನಿಸ್ವಾರ್ಥಿಯವನ ಪ್ರೀತಿಯು ನಮಗೇ ಹಾರೈಸಿದಂತೆ. ಮನದುಂಬಿ ನಲಿದು ಸಂತೃಪ್ತ ಮನದಲ್ಲಿ ಇನ್ನು ಮನೆಗೆ ಹೋಗೋಣವೆಂದು ನೀ ನುಡಿವಾಗ..ನನಗೆ ಹೀಗೇಕೆ ಎಂದು ಗೊಣಗುವ ಮನದ ಸದ್ದು ಜೋರಾಗುತ್ತಿತ್ತು. ಮೆತ್ತನೆ ನಿನ್ನೊಂದಿಗೆ ಆದಷ್ಟು ಮತ್ತನೆ ಸಾಗುತ್ತಿದ್ದೆ, ಬೇಗನೆ ಹೆಜ್ಜೆ ಹಾಕಿದರೆ ಊರು ಬಂದು ಬಿಟ್ಟಾತು, ನಮ್ಮ ಸಂಭ್ರಮ ನಡಿಗೆ ಮುಗಿದು ಬಿಟ್ಟರೆ ಮತ್ತೆ ಮತ್ತೆ ಕಾಯುವ ಮನಕೆ ಉತ್ತರ ನೀಡುವ ತಾಕತ್ತು, ಸಂತೈಸುವ ಧೈರ್ಯವಿಲ್ಲದೇ ಈ ಹಂದೆ ಮನಸು ಸಾಗುವ ದಾರಿ ಉದ್ದವಾಗಲಿ.. ಇನ್ನೂ ಉದ್ದವಾಗಲಿ..ಊರು ಇನ್ನೂ ಕಾಣದಿರಲಿ ಎಂದು ಹಪಹಪಿಸುತಿತ್ತು. ನಾನು ಬೇಕೆಂತಲೇ ನಿನಗೆ ದಾರಿಯ ಇಬ್ಬಗೆಯಲ್ಲಿ ಹೂ ಅರಳುತಿದೆ ನೋಡು ಗೆಳತಿ ಎನ್ನುತ್ತಿದ್ದೆ.. ನೀನು ಮುದ್ದಾಗಿ ನಗುತ್ತಾ ಆ ಘಳಿಗೆ ಇನ್ನೂ ಬಂದಿಲ್ಲವೆನ್ನುತ್ತಾ ಸಾಗುತ್ತಿದ್ದೆ. ಅರಳುವ ಹೂಮೊಗ್ಗೆ ತಂಗಾಳಿಗೆ ನಲಿವಾಗ ನಿನಗೆ ಮತ್ತೆ ಮತ್ತೆ ತೋರಿಸುತ್ತಾ ನೋಡು ಹೂವು ಅರಳುವುದು ತುಸು ನಿಲ್ಲೋಣವೇ ಗೆಳತಿ ಎನ್ನುತ್ತಿದ್ದೆ.. ನೀ ನಗುತಾ ನೋಡೋಣ ..ನೋಡುತ್ತಲೇ ಸಾಗುತ್ತಾ ಇರೋಣ.. ದಾರಿತುಂಬ ಹೂಗಳಿವೆ, ಎಂದು ನಕ್ಕು ಮೆತ್ತನೆ ಹಿಡಿದಿದ್ದ ಕೈಯನು ಬಿಗಿಯಾಗಿ ಒಮ್ಮೆ ಹಿಡಿದು ಕರೆದೊಯ್ಯುತ್ತಿದ್ದೆ, ನೀ ನಡೆಸುವ ಘಳಿಗೆಯು ರಾಜರಥದಲ್ಲಿ ನಾ ಸಾಗಿದಂದೆ, ನನ್ನೊಡನೆ ರಥದಲ್ಲಿ ನೀ ಕುಳಿತು ಬೀಗಿದಂತೆ ಅನುಭೂತಿ. ಮನಕ್ಕೊಲಿದ ಗೆಳತಿಯಿರಲು ಜೊತೆಯಲ್ಲಿ ಬಾಳೆಲ್ಲಾ ಹೋಗಂಧ ಬೆರೆದ ಜಗವಾಗಿರಲು ಮನಕ್ಕೆ ಕೊರಗೆಂಬುದು ಎಲ್ಲಿಯೂ ಎಳ್ಳಷ್ಟು ಕಾಡದೇ ನನ್ನ ಮನ ಸಂಭ್ರಮಿಸುತ್ತಿತ್ತು. ಊರು ಹತ್ತಿರ ಬಂದಾಗ ನಿನಗೆ ವಿಧಾಯವೇಳಲು ಮನ ರೋಧಿಸುತ್ತಾ ಇರಲು ನೀ ಕುಡಿ ನಗುವಿನಲ್ಲಿ ನನ್ನ ಕೆನ್ನೆಗೆ ಮುದ್ದಾಗಿ ಸ್ಪರ್ಷಿಸಿ ನಾ ಬರುವೆ ಎಂದಾಗ ನಾನು ನಿನ್ನ ನಗುಮೊಗವನ್ನು ಇನ್ನೊಮ್ಮೆ ಕಣ್ತುಂಬಿಕೊಂಡು ಬೀಳ್ಕೊಡುತಿದ್ದೆ.. ಬೀಳ್ಕೊಡುವಾಗ ತಪ್ಪದೇ ನೀಡುತ್ತಿದ್ದೆ ಹೂಬನದ ಸುಂದರ ಗುಲಾಬಿಯನ್ನು.. ನೀ ನುಡಿಯುತಿದ್ದೆ ಇದು ನೀ ಬರುವ ನಾಳೆವರೆಗೂ ನಗುವುದೆಂದು, ಅದೂ ಮುದ್ದು ಮುದ್ದಾಗಿ ನುಡಿಯುತಿದ್ದೆ ಗೆಳತೀ.. ಮರು ದಿನವಿಂದು ಮತ್ತೆ ನಿನ್ನ ಮಡಲಲ್ಲಿ ಸಂಭ್ರಮಿಸಲು ನಿನಗಾಗಿ ಬರೆದ ಹೊಸ ಒಲವಗೀತೆಯೊಂದಿಗೆ ಕಡಲತಡಿಯಲ್ಲಿ ಗುನುಗುತ್ತಿದ್ದೇನೆ..ಕಾರ್ಮೋಡ ಕರಗಿ ನಗುವ ಚಂದಿರ ಹೊರಬರಬೇಕು, ಜೊತೆಗೆ ನೀನು ಬಂದು ನನ್ನ ಕೈ ಹಿಡಿಯಬೇಕು.. ಬೇಗನೇ ಬಾ ಗೆಳತಿ..
ಜಪಿಸುತಿರುವೆ ಗೆಳತಿ ನಿನಗಾಗಿ
ನೀ ತರುವ ನಗುವಿಗಾಗಿ
ನಿನ್ನ ನಗುಮೊಗದ ಸಿರಿಗಾಗಿ...

ರಾಮಚಂದ್ರ ಸಾಗರ್


Tuesday, 13 December 2016

ನೀ ಬರೆಸಿದೆ ಕವಿತೆ..

ಗೆಳತೀ..
ಬರೆಸಿದೆ ನೀನು ಸಾವಿರ ಕವಿತೆ
ಹವಣಿಸು ನಿನ್ನ ಕಣ್ಣೋಟದ ಮಿಂಚಿನಲ್ಲಿ
ನಿನ್ನೊಲವ ರಂಗಿನ ಶಾಹಿಯಲ್ಲಿ
ನಿನ್ನ ಸಾಂಗತ್ಯದ ನವಿರು ಹಿತದಲ್ಲಿ..

ನೋಡುವ ನೋಟವು ಮುತ್ತಾಗುತಿರಲು
ನಗುವಿನ ಸೊಬಗು ಆವರಿಸುತಿರಲು
ಬಂಗಾರಿಯ ನಯನವು ಸೆಳೆಯುತಿರಲು
ಉಲ್ಲಾಸದ ಉಯ್ಯಾಲೆಯಲಿ ನಾ ತೇಲಿದಂತೆ..

ಹವಣಿಸು ನಿನ್ನ ಕಣ್ನೋಟಕೆ ಸೋತಿರಲು 
ನಿನ್ನಾಸರೆಯ ಅವಿರತ ಬಯಸುತಿರಲು
ಕಾರುಣ್ಯದ ನಿನ್ನೊಲವು ಜಲಧಿಯಾಗಿರಲು
ಕಾತರಿಸುವ ಮನವು ನದಿಯಾಗಿ
ನಿನ್ನೆಡೆಯೇ ಓಡಿದಂತೆ..

ರಮಿಸುವ ನಗುವಿಗೆ ಮನ ಶರಣಾಗಿರಲು
ರಂಜಿಸು ಬದುಕಿಗೆ ನೀ ಕರೆದೊಯ್ಯುತಿರಲು
ಭುವಿಯ ಸೊಬಗೆಲ್ಲವು ನೀನಾಗಿರಲು
ತುಸು ನಗುತಾ ನನ್ನೆದುರು ನೀನಿರಲು
ಕಾಡಿಸುವ ಕನಸಿಗೆ ಇನ್ನೆಲ್ಲಿ ಜಾಗವು..

ಚೆಲುವ ತನಯೆಯ ನಗುವಿಗೆ
ಒಲವ ಬೊಂಬೆಯ ನಲುಮೆಗೆ 
ಕೆಣಕುವ ಇವಳ ಸವಿನೋಟಕೆ
ಬರೆದೆ ನಾನು ಸಾವಿರ ಕವಿತೆ
ಗುನುಗಿಸಿದೆ ನೀನು ಒಲವಗಾಥೆ..

ರಾಮಚಂದ್ರ ಸಾಗರ್

ಕನ್ನಡದ ದೀವಟಿಗೆ ಹಿಡಿದ ಜೋಗಿ..

ನಮ್ಮ ನಾಡಿನ ಜನಪರ ಕವಿಗಳು ಹಾಗೂ ಡಾ. ಸಿದ್ದಲಿಂಗಯ್ಯ ಪ್ರರಿಷ್ಠಾನದ ಅಧ್ಯಕ್ಷರೂ ಹಾಗು ಸರಳ ಸಜ್ಜನರೂ ಆದ ಶ್ರೀಯುತ ಮುದಲ್ ವಿಜಯ್ ರವರ ಜನ್ಮದಿನವಿಂದು, ನಾಡಿನ ಅನೇಕ ಯುವ ಬರಹಗಾರರನ್ನು ನನ್ನನ್ನೂ ಒಳಗೊಂಡಂತೆ ಪೋಷಿಸುತ್ತಾ ಎಲ್ಲರನ್ನು ಸಾಹಿತ್ಯದೆಡೆ ಒಲುಮೆ ಬೆಳೆಸಿಕೊಳ್ಳುವಂತೆ ಅರಿವನ್ನು ಮೂಡಿಸುತ್ತಾ ತಾಯಿ ಭುವನೇಶ್ವರಿಯ ಸೇವೆಯನ್ನು ಮಾಡುತ್ತಾ ಸಾಗುತ್ತಿದ್ದಾರೆ. ಇವರು ಮೂಲತಃ ತಮಿಳುನಾಡಿನವರು, ಇವರ ತಂದೆ ತಾಯಿಯರ ಮಾತೃ ಭಾಷೆ ತಮಿಳು. ಇವರು ಬೆಂಗಳೂರಿಗೆ ಬಂದಾಗ ಇವರ ತಂದೆ ತಾಯಿ ಇವರನ್ನು ಕನ್ನಡ ಮಾಧ್ಯಮದ ಶಾಲೆಗೆ ಸೇರಿಸಿದರು. ಆಗ ಬೆಂಗಳೂರಿನಲ್ಲಿ ತಮಿಳು ಮಾಧ್ಯಮ ಶಾಲೆಗಳು, ಆಂಗ್ಲ ಮಾಧ್ಯಮದ ಶಾಲೆಗಳು  ಸಾಕಷ್ಟು ಇದ್ದರೂ ಇವರನ್ನು ಇವರ ತಾಯಿ ಮಗ ಕನ್ನಡದಲ್ಲೇ ಓದಲೆಂದು ಕನ್ನಡ ಮಾಧ್ಯಮಕ್ಕೆ ಸೇರಿಸಿದರು. ಇವರು ಕನ್ನಡಾಭಿಮಾನವನ್ನು ಬೆಳೆಸಿಕೊಳ್ಳುತ್ತಾ ಸಾಗಿದರು. ಕನ್ನಡ ಭಾಷೆ, ಕನ್ನಡ ಸಾಹಿತಿಗಳ ಬಗ್ಗೆ ಆಳವಾದ ಅಧ್ಯಯನ ಮಾಡಿರುವ ಇವರು ಕನ್ನಡದಲ್ಲಿ ಕವಿತೆಗಳನ್ನು ಬರೆಯಲು ಕೂತರೇ ಓದುಗನಿಗೆ ಅದೊಂದು ಹಬ್ಬವೇ ಸರಿ. ಕನ್ನಡ ಪದಗಳು, ವ್ಯಾಕರಣದ ಮೇಲೆ ಅವರಿಗಿರುವ ಪ್ರಭುತ್ವ, ಮತ್ತು ಕಾವ್ಯ ಕಟ್ಟುವ ದಾಟಿ ಎಂಥವರನ್ನು ವಿಸ್ಮಿತಗೊಳಿಸುತ್ತದೆ, ಯಾವ ಹಿರಿಯ ಕವಿಗಳಿಗೂ ಕಮ್ಮಿಯಿಲ್ಲದಂತೆ ಇವರ ಕವಿತ್ವ ಗಟ್ಟಿಯಾಗಿದೆ. ಅನೇಕ ಕವನ ಸಂಕಲನ ಹಾಗೂ ಕಾದಂಬರಿಗಳನ್ನು ಹೊರತಂದಿದ್ದಾರೆ. ಇವರ ಗೀತೆಗಳು ಭಾವಗೀತೆಗಳಾಗಿ ಜನಪ್ರಿಯವಾಗಿವೆ. ಅನೇಕ ವರ್ಷಗಳಿಂದ ಸಾಹಿತ್ಯ ಕೃಷಿಯಲ್ಲಿ ಗಟ್ಟಿಯಾಗಿದ್ದರೂ ಇವರಿಗೆ ಯಾವುದೇ ಪುರಸ್ಕಾರ ಒದಗಿಬಂದಿಲ್ಲ. ಅವೆಲ್ಲಾ ಪಾಪಾ ತೀರ ಸ್ವಾಭಿಮಾನಿಯಾದ ಇಂತವರಿಗೆ ಒಲಿಯುವುದು ಕಷ್ಟ. ಎಷ್ಟೋ ಬಾಲಿಶ ವ್ಯಕ್ತಿಗಳನ್ನು ಹೊಗಳಿ ಸನ್ಮಾನಿಸಿ ದುಂದು ವೆಚ್ಚ ಮಾಡುವ ಬದಲು ಇಂತ ಒಬ್ಬೊಬ್ಬರನ್ನು ಆಯ್ದು ಜಾಣ್ಮೆ ಮೆರೆದಲ್ಲಿ ಅದು ಆ ಪ್ರಶಸ್ತಿಗಳಿಗೂ ಗೌರವ ದೊರೆತಂತೆ..! ಏನು ಮಾಡುವುದು ಕೆಲವರಿಗೆ ಅರ್ಹತೆ ಇದ್ದರೂ ಅದು ಉಪಯೋಗಕ್ಕೆ ಬರುವುದಿಲ್ಲ. ಏನೇ ಆಗಲಿ ಜನರ ಮಧ್ಯೆಯಿಂದ ಬರುವ ದನಿಗಿಂತ ಮಿಗಿಲಾದ ಪ್ರಶಸ್ತಿ, ಪುರಸ್ಕಾರ ಯಾವುದೂ ಇಲ್ಲ. ಜನದನಿಯಲ್ಲಿ ಗೆದ್ದವರೇ ನೈಜ ಸನ್ಮಾನಿತರು, ನಾವು ಮಾಡುವ ಸೇವೆಗೆ ಪುರಸ್ಕಾರದ ಮಾನದಂಡವೇಕೆ..? ಎಂದು ಕೇಳುತ್ತಾ ಸುಮ್ಮನೇ ತಮ್ಮ ಪಾಡಿಗೆ ತಾವು ತಮ್ಮ ಜೀವನದ ಜೋಳಿಗೆಯ ಜೊತೆಗೆ ಕನ್ನಡದ ದೀವಟಿಗೆ ಹಿಡಿದು ಕನ್ನಡಕ್ಕಾಗಿ ಚಲಿಸುತ್ತಿರುವ ಒಬ್ಬರು ಜೋಗಿಯಂತೆ ಕಾಣುತ್ತಾರೆ. ಸಾಹಿತ್ಯದ ಬಗ್ಗೆ ಏನೇ ಗೊಂದಲವಿದ್ದರೂ ಯಾವುದೇ ಸಮಯದಲ್ಲಿ ಕರೆಮಾಡಿದರೂ ಸ್ಪಂದಿಸುವ ಸರಳ ಹಾಗೂ ಅಷ್ಟೇ ಚತುರ ಸಾಹಿತ್ಯಾಭಿಮಾನಿ. ಬೆಂಗಳೂರಿನ ಅನೇಕ ಜನ ನಮ್ಮ ರಾಜ್ಯದವರೇ ಕನ್ನಡ ಮರೆತು ಬೇರೆ ಭಾಷೆ ಮಾತನಾಡುತ್ತಿರುವ ಈ ಘಳಿಗೆಯಲ್ಲಿ ಕನ್ನಡ ಕಂಪನ್ನು ಹರಡುತ್ತಾ ನಾಡಿನುದ್ದಗಲಕ್ಕೂ ಯುವ ಕನ್ನಡ ಬರಹಗಾರರಿಗೆ ಆತ್ಮೀಯರಾಗಿರುವ ಇವರನ್ನು ಈ ಸುಸಮಯದಲ್ಲಿ ಅಭಿನಂದಿಸೋಣ.. ಇವರು ನೂರು ವರ್ಷಗಳ ಕಾಲ ಗಟ್ಟಿಯಾಗಿ ನಾಡಿನುದ್ದಗಲ ತಾಯಿ ಭುವನೇಶ್ವರಿಯ ಸೇವೆ ಮಾಡಲೆಂದು ಬೇಡಿಕೊಳ್ಳೋಣ..ಈ ಮೂಲಕ ಕನ್ನಡವೂ ಎಲ್ಲರೆದೆಯಲಿ ಗಟ್ಟಿಯಾಗಲಿ ಎಂದು ಹಾರೈಸೋಣ..
ರಾಮಚಂದ್ರ ಸಾಗರ್

Monday, 12 December 2016

ಸಂಗೀತದಲೆಯಲ್ಲಿ ಮೋಡಿಮಾಡಿದ ನನ್ನವರು..

       ಮುಖಪುಟದ ಲೋಕವೇ ಹಾಗೇ, ಅನೇಕರು ಸಿಗುತ್ತಾರೆ, ಅದು ಆಕಸ್ಮಿಕವಾದರೂ ಅವರಿಂದ ಕೆಲವೊಮ್ಮೆ ಸಿಗುವ ಸ್ನೇಹ ಸಿಹಿ ಸಿಂಚಿಸಿ ಮನ ಬೆಸೆದರೆ ಇನ್ನೂ ಕೆಲವೊಮ್ಮೆ ಮನಕ್ಕೆ ಘಾಸಿ ಮಾಡಿ ದೂರುವವರೂ ಇರುತ್ತಾರೆ. ಮುಖಪುಟವನ್ನು ಒಳ್ಳೆಯದಕ್ಕೂ  ಬಳಸಿಕೊಳ್ಳುವವರೂ ಇರುತ್ತಾರೆ. ಜಾತಿ, ಧರ್ಮವಂತ ಬಡಿದಾಡುವುದಕ್ಕೂ ಬಳಸುತ್ತಾರೆ, ಇನ್ನೂ ರಾಜಕೀಯದ ಎರಚಾಟವಂತೂ ಹೇಳತೀರದು, ಮನೆಯಲ್ಲಿ ಕೂತವನ ಮುಖಕ್ಕೂ ಮೊಬೈಲ್ ಮೂಲಕ ಕೆಸರು ಬಂದು ಬಿದ್ದ ಅನುಭವ, ಏನೇ ಆಗಲಿ ಎಲ್ಲವೂ ನಮ್ಮ ಸುತ್ತಲೂ ಸಮಾಜದಲ್ಲಿ ನಡೆಯುವ ಸಂಗತಿ ತಾನೇ, ಸಮಾಜದಲ್ಲಿನ ಬಿಂಬಕವಲ್ಲವೇ. ಕಂಡಿತಾ ಹೌದು, ಹಾಗಾಗಿ ಎಲ್ಲವನ್ನು ಮುಕ್ತವಾಗಿ ಸ್ವೀಕರಿಸಿಕೊಂಡು ಹೋಗಬೇಕು, ಕೈಲಾದಷ್ಟು ಉತ್ತಮ ಕೆಲಸವನ್ನು ಮಾಡಬೇಕು. ಉತ್ತಮ ಉದ್ದೇಶಕ್ಕೆ ಸದ್ಬಳಕೆಗೆ ಮಾರ್ಗವಾಗಬೇಕು. ಈ ನಿಟ್ಟಿನಲ್ಲಿ ಒಂದು ವಿನೂತನ ಪ್ರಯೋಗವೆಂಬಂತೆ ಶ್ರೀಯುತ ಶಶಿಕಾಂತ್ ರವರು ಮತ್ತು ಪ್ರಕಾಶ್ ಅಂಬರಕರ್ ರವರ ನೈತೃತ್ವದಲ್ಲಿ ಅರಳಿದ ‘ನನ್ನ ಗೀತೆ ನನ್ನವರ ಗಾಯನ’ ಯೋಜನೆಯು ಕನ್ನಡದ ಬೆಳವಣಿಗೆಗೆ ಪೂರಕವಾದದ್ದು, ಜೊತೆಗೆ ಗಬ್ಬೆದ್ದು ಬಿದ್ದಿರುವ ಕನ್ನಡ ಸಿನಿಮಾ ಗೀತೆಗಳಿಗೆ ಪರ್ಯಾಯ ಮಾರ್ಗವರಸಿದ ಪರಿ ಉತ್ತಮವಾಗಿದೆ, ಇಲ್ಲಿ ಅನೇಕ ಜನ ಹಿರಿಯ ಕವಿಗಳೂ ಇದ್ದಾರೆ, ಅನೇಕ ಜನ ಹೊಸಬರು ಇದ್ದಾರೆ, ದೇಶ, ನಾಡು, ನುಡಿಗಳ ಪ್ರೇಮದ ಜೊತೆಗೆ ಸಮಾಜದ ಸಾಮರಸ್ಯ ಬೆಸೆವ ಕವಿತೆಗಳಿವೆ, ಅವುಗಳಿಗೆ ತುಂಬಾ ಹಿತವಾಗಿ ಮಧುರ ದನಿಯನ್ನು ಶ್ರೀಮತಿ ಸಂಧ್ಯಾಲಕ್ಷ್ಮಿ ಯವರ ರಾಗ ಸಂಯೋಜನೆ ತುಂಬಾ ಮಾಧುರ್ಯತನ ತುಂಬಿದೆ. ಕವಿತೆಗಳ ಮೇಲೆ ಕಣ್ಣಾಡಿಸುತ್ತಾ ಹೋದೆ. ಎಂ.ಜಿ. ದೇಶಪಾಂಡೆಯವರ ಬಾಳು ಕವಿತೆಯ ಸಾಲುಗಳು “ಗುಲಾಬಿ ಕೆಳಗೆ ಮುಳ್ಳು ಆದರೂ ಅರಳಿದೆ
       ಆನಂದ ನೀಡುತ್ತಿದೆ ದುಃಖ ತಾನು ಹೇಳದೇ” ಬಾಳಿನ ತಿರುಳು ತಿಳಿಸುವ ಕವಿತೆ. ತುಂಬಾ ಒಳಾರ್ಥದ ದನಿಯನ್ನು ಹೇಳುತ್ತದೆ. ಹಾಗೂ ಶ್ರೀಯುತ ಡಾ. ಜೆ.ಎಸ್. ಪಾಟೀಲರ ಬದ್ದವಣ ಹಾಡು ಪ್ರೇಮದಂದಣವ ಏರಿಸುತ್ತದೆ. ಅಕ್ಕಮಹಾದೇವಿಯವರ “ಹೊಂಚು ಹಾಕುತಿದೆ ಕಾಮನಬಿಲ್ಲದು..ಕಣ್ಣಂಚಿನ ಬಣ್ಣಗಳ ಕದಿಯಲು ಸೋತು”..ಒಲವಗೀತೆ ಬಲು ಚೆಂದಾ ಇದೆ. ಬಳುದಿಂಗಳು ತಂಪಿರುಳಲಿ ಬೀಸುವ ತಣ್ಣನೆಯ ಗಾಳಿಯಲ್ಲಿ ನಿನ್ನ ನೆನಪುಗಳ ಕಚಗುಳಿ ಮನಕ್ಕೆ ಒಲವ ಕಂಪು ಸೂಸುತ್ತಾ ಅನುರಾಗದಲೆ ಬೀಸುವ ಪರಿ ಸೊಗಸುಭರಿತವಾಗಿದೆ. ಮೋಹಕಗೀತೆ. ಹಾಗೂ ಶ್ರೀಯುತ ರಾಜ್ ಆಚಾರ್ಯರ ‘ಬಾ ವಸಂತ’ ಪಕೃತಿಯ ಸಿರಿಯ ಮೇನೆಯಲ್ಲಿ ಸೊಬಗು ಹೊತ್ತು ತಂದಂತಿದೆ, ಕೇಳಲು ಹಾಗೂ ಸಾಹಿತ್ಯವೆರಡೂ ಪಕ್ವತೆಯಲ್ಲಿವೆ. ಹಾಗೂ ನನ್ನ ಪ್ರೀತಿಯ ಒಲವಿನ ಕವಿ ಸತೀಶ್ ಕೋಲಾರ ಅವರು ಇಲ್ಲಿ ಮೋಡಿ ಮಾಡಿದ್ದಾರೆ, ಒಲವ ರಂಗನ್ನು ಅವರ ಶಾಯಿಯಲ್ಲಿ ತುಂಬಿ ಬರೆದ ಪ್ರೀತಿಯ ಸಾಲುಗಳು ಅಮೋಘವಾಗಿವೆ, ಇರಲೇಬೇಕಲ್ಲವೇ..? ಗೀತೆಯನ್ನು ಕೇಳಲು ಅಷ್ಟೇ ಮುದ್ದಾಗಿದೆ. ನಾಡಿನ ಉತ್ತಮ ಚಿಂತಕರು ನಮ್ಮ ಸಿದ್ಧರಾಮ ಹೊನ್ಕಲ್ ರವರ ‘ಯಾರಿಗಾಗಿ ಹಾಡಲಿ’ ಇಂದಿನ ದೇಶದ ವಾಸ್ತವ ಕನ್ನಡಿ. ಈ ಕವಿತೆಯನ್ನೂ ಪ್ರತಿಯೊಬ್ಬರೂ ಕೇಳಲೇ ಬೇಕು, ದೇಶದುದ್ಧಗಲ ಭಾವೈಕ್ಯತೆ ಬೆಸೆಯಬೇಕು, ಶಾಂತಿ ಅರಳಬೇಕೆಂಬ ಅವರ ಮನದಾಸೆಯು ಕವಿತ್ವದಲ್ಲಿ ಗಟ್ಟಿಯಾಗಿ ಕೂಗಿದೆ. ಸಾರ್ಥಕತೆಯ ಭಾವವನ್ನು ತುಂಬಿದೆ, ಇದಕ್ಕೆ ಅವರಿಗೆ ಧನ್ಯವಾದಗಳನ್ನು ಹೇಳಲೇಬೇಕು. ‘ಗಾಂಧಿಯ ನಾಡಲ್ಲಿ ಗುಂಡಿನ ಮಳೆಗರೆದು ಭೂತಾಯಿ ನೆತ್ತರು ಕುಡಿದು ಅತ್ತಳಲ್ಲೋ..’ ಎಂಥಾ ಮಾರ್ಮಿಕ ನುಡಿಗಳು. ಕಟು ವಾಸ್ತವ ಹಾಗೂ ಸತ್ಯ. ಇನ್ನು ನನ್ನ ಆತ್ಮೀತ ಸ್ನೇಹಿತರಾದ ಗಂಗಾಧರ್ ಕಂಭೀಮಠ್ ರವರ ಪ್ರೇಮಸುಧೆ ಸುಂದರ ನೈದಿಲೆಯಂತೆ ನಗುತಿದೆ, ಅದಕ್ಕೆ ಅಷ್ಟೇ ಹಿತವಾದ ರಾಗದ ಮೇಳವು ಅದರ ಅಂದವನ್ನು ಮತ್ತಷ್ಟು ಅರಳಿಸಿದೆ. ಶ್ರೀಮತಿ ಪದ್ಮಾ ಶ್ರೀನಿವಾಸ್ ರವರ ಮೌನದೀಪ್ತಿ ಹಿತವೆನಿಸಿ ಮತ್ತೆ ಕೇಳಲು ಹೇಳುತ್ತದೆ ಕವಿತೆಯ ಪ್ರತಿ ಸಾಲುಗಳು. ಎಂದಿನಂತೆ ಅವರ ಶೈಲಿಯಲ್ಲಿ ಉತ್ತಮವಾಗಿ ಕವಿತೆಯನ್ನು ಕಟ್ಟಿದ್ದಾರೆ. ಶ್ರೀಯುತ ದೊರೆಸ್ವಾಮಿ, ವೆಂಕಣ್ಣನವರ, ಪ್ರಕಾಶ್ ಶಿರಗಂಬಿ, ವೆಂಕರೆಡ್ಡಿ ಯವರ ಸಾಹಿತ್ಯವು ಗಟ್ಟಿಯಿದ್ದು ರಾಗಕ್ಕಷ್ಟೇ ಅಲ್ಲದೇ ಬದುಕಿನ ಸಾರವನ್ನು ತಿಳಿಹೇಳಿವೆ. ಶ್ರೀಯುತ ಭೀಮಣ್ಣ ಹುಣಸೀಕಟ್ಟಿಯವರ ರೈತಾಭಿಮಾನದ ಕವಿತೆ ತುಂಬಾ ಇಷ್ಟವೆನಿಸಿತು. ಹೀಗೆ ಇನ್ನೂ ಅನೇಕ ಕವಿಗಳ ಕವಿತೆಗಳು ತುಂಬಾ ಸೊಗಸಾಗಿವೆ. ಎಲ್ಲವನ್ನೂ ನೀವು ಕೇಳಿಯೇ ಆನಂದಿಸಬೇಕು. ಶ್ರೀಮತಿ ಕಪಿಲಾ ಶ್ರೀಧರ್ ರವರ ನಭ ನೀಲಾಂಜನ ಕವಿತೆ ಮತ್ತೆ ಮತ್ತೆ ಕೇಳಬೇಕೆನಿಸಿತು. ಈ ಸಂಕಲನದಲ್ಲಿ ನನಗೆ ಅತೀ ಇಷ್ಟವಾದ ಗೀತೆಯಿದು. ತುಂಬಾ ಸೊಗಸಾಗಿದೆ. ‘ಜಗದಾದಿಯಲಿ ನೀನೊಂದು ಗೋಳ ನಾನೊಂದು ಗೋಳವಾಗಿ ಆದಿತ್ಯ ಮಂಡಲದ ಸುತ್ತ ತಿರುಗುತಾ ಪರಿಭ್ರಮಣ ಯಾತ್ರೆಯಾಗಿ..’ ಎಂತಾ ಕನಸು ಅಲ್ಲವೇ..ಸುಮಧುರ ಭಾವನೆಗಳ ಧಾರೆಯು ಮನದ ಉಲ್ಲಾಸವನ್ನು ಹೆಚ್ಚಿಸುತ್ತದೆ, ನಲಿಸುತ್ತದೆ. ಹೀಗೆ ಹಲವರ ಕವಿತೆಗಳ ಸಾಹಿತ್ಯವು ತುಂಬಾ ಸೊಗಸಾಗಿದ್ದು ಅದಕ್ಕೆ ಅಷ್ಟೇ ಹಿತವಂತಿಕೆಯ ರಾಗ ಸಂಯೋಜಿಸಿ ಮನ ನಲಿಸಿದ ಎಲ್ಲಾ ರಾಗ ಸಂಯೋಜಕರು, ಗಾಯಕರು ಸಂಪೂರ್ಣ ಯೋಜನೆಯ ಸಾರಥಿಗಳೆಲ್ಲರಿಗೂ ಧನ್ಯವಾದಗಳು..

ಇದು ಈ ಕಿರಿಯನ ಅನಿಸಿಕೆ...ಏನಾದರೂ ತಪ್ಪಿದ್ದರೆ ಕ್ಷಮಿಸಿ..
ವಂದನೆಗಳೊಂದಿಗೆ..
ಮತ್ತೆ ಮತ್ತೆ ಬರಲಿ..ನನ್ನವರ ಗೀತೆ..

ರಾಮಚಂದ್ರ ಸಾಗರ್

Sunday, 11 December 2016

ಬಕೇಟ್ ಹಿಡಿವ ಸಂತತಿ ನಾಶವಾಗಲಿ

  ವಿವೇಕಯುತ ಜಗದಲ್ಲಿ ಅವಿವೇಕಿಯಗಾದಿರು, ವಿವೇಕಿಗಳ ಸಂಗದಲ್ಲಿ ಅವಿವೇಕಿತನ ನೂಕದಿರು. ಇವು ನಾನೇ ಬರೆದ ಸಾಲುಗಳು, ಇನ್ನೊಮ್ಮೆ ಮೆಲುಕು ಹಾಕುತ್ತಾ ಕೂತಿದ್ದೇನೆ, ಜೊತೆಗೆ ತೀರ ಬುದ್ಧಿವಂತರೆನಿಸುಕೊಳ್ಳುವವರ ಕೆಲವು ಬಾಲಿಶತನದ ಪರಮಾವಧಿ ಕಂಡು ಮನಕ್ಕೆ ಬೇಸರವೆನಿಸುವುದಕ್ಕಿಂತ ಇದು ಅವರ ಹೊಟ್ಟೆಪಾಡೋ ಇಲ್ಲ ತಮ್ಮ ಸ್ವಂತಿಕೆಯನ್ನು ಮಾರಿಕೊಂಡ ಅವರ ಗತಿಯೋ ಇಲ್ಲವೇ ಅವರ ಬದುಕಿನ ದಾಟಿಯೇ ಹಾಗೋ ಎಂಬ ಚಿಂತನೆ ಕಾಡುವುದಂತೂ ಸಹಜವಾಗಿದೆ. ಎಲ್ಲೇ ನೋಡಲಿ, ಯಾರೇ ಒಬ್ಬ ಉನ್ನತವೆನ್ನಿಸಿದರೆ ಅದು ಅಧಿಕಾರದಲ್ಲಿದ್ದರಂತೂ ಹೇಳತೀರದು ಆತ ಏನೇ ಮಾಡಿದರೆ ಆತನಿಗೆ ಜೈ ಎನ್ನುತ್ತಾ ಆತನಿಗೆ ಇನ್ನಟ್ಷು ಅಟ್ಟಕ್ಕೆ ಏರಿಸುತ್ತಾ ತಮ್ಮ ಅನೀತಿ ಬುದ್ಧಿಯಿಂದ ಅವನಿಗೆ ಹತ್ತಿರವಾಗುವುದು, ಮತ್ತೂ ಮುಂದುವರೆದು ಆತನಿಗೆ ಸಾಧ್ಯವಿದ್ದ ಎಲ್ಲಾ ರೀತಿಯ ಕುಟಿಲ ತಂತ್ರಗಳಿಗೆ ಸಹಕಾರವನ್ನು ನೀಡುವುದು. ಕೆಲವರು ತಮ್ಮ ಪಂಥಗಳಿಗಾಗಿ ಬಡಿದಾಡುತ್ತಾರೆ, ಅವು ಸುಳ್ಳಾಗಲಿ, ಪೊಳ್ಳಾಗಲಿ, ಜೊಳ್ಳಿನ ಕಣಜವಾಗಿರಲಿ ಅವುಗಳನ್ನು ಗಟ್ಟಿಯೆಂದು ಗುಡುಗುವುದಷ್ಟೇ ಅವರ ಕೆಲಸ. ಕಾರಣ ಅವರು ಆ ಪಂಥದ ಅನುಯಾಯಿಗಳು, ಅವರು ಸತ್ಯವನ್ನು ಸುಳ್ಳೆಂದು ನಂಬಿಸಲು ತಮ್ಮಿಂದ ಏನೆಲ್ಲ ಸಾಧ್ಯವೆಂದು ಚಿಂತಿಸುತ್ತಾ ದಿನಕಳೆಯುವುದು. ಕಂಡಿತಾ ಇದರಿಂದ ನಾಡು, ದೇಶವೂ ಉದ್ಧಾರವಾಗೋಲ್ಲ. ತಾವು ಒಪ್ಪಿದ ಮಠಾಧಿಪತಿಯಿರಲಿ, ಪಕ್ಷದ ನಾಯಕನಿರಲಿ, ಧರ್ಮದ ಮುಖಂಡನಿರಲಿ, ಪಂಥಗಳ ಮುಖ್ಯ ಸೂತ್ರ ಚಿಂತಕನಿರಲಿ, ಇಲ್ಲವೇ ತಾವು ಒಪ್ಪಿದ ಸಮುಧಾಯದ ಜಾತಿಯ ಮುಖ್ಯಸ್ತನಿರಲಿ ಅವರು ಏನೇ ಅನಾಚಾರ ಮಾಡಲಿ ಅದನ್ನು ಕಂಡಿಸುವುದಿಲ್ಲ. ಅವರ ಅನುಯಾಯಿಗಳು ಅವರನ್ನು ಉಳಿಸಲು ಶತಾಯ ಗತಾಯ ಗುದ್ದಾಡುತ್ತಾ ಬಡಿದಾಡುತ್ತಾರೆ, ಸಾಧ್ಯವಿದ್ದರೆ ಸಮಾಜದ ಅಶಾಂತಿಗೂ ಕಾರಣರಾಗುತ್ತಾರೆ, ಅವರು ಬೆಂಕಿ ಹಚ್ಚಿದ ಹಳೆಯ ಹರಿದ ಟೈರುಗಳ ಜ್ವಾಲೆ ರಸ್ತೆಯ ಮೇಲೆ ನಿಗಿ ನಿಗಿದು ಉರಿಯುತ್ತದೆ ಜೊತೆಗೆ ಇವರ ಕಣ್ಣಾಲಿಯಲ್ಲೂ ಜ್ವಾಲೆ ಉರಿಯುತ್ತಿರುತ್ತದೆ, ಕೇಳುವ ಧೈರ್ಯ ಸಾಮಾನ್ಯ ಜನತೆಗೆ ಇರುವುದೇ..? ಕಂಡಿತಾ ಕೇಳುವುದೇ ಅಪರಾದವೆನಿಸುವ ಮಟ್ಟಿಗೆ ಸಾಮಾನ್ಯನ ಸ್ಥಿತಿಗೆ ನಮ್ಮ ಸಮಾಜ ತಲುಪುತ್ತಿರುವುದರ ಗತಿ ನೋಡಿದರೆ, ಇದು ದೇಶದ ಸಾಮಾನ್ಯನ ದನಿಯು ಕ್ಷೀಣವಾಗುವುದರ ಪ್ರತೀಕವೆನಿಸುತ್ತಿದೆ.
     ಕೆಲವರು ಮಾಡಿದ್ದು ತಪ್ಪಲ್ಲದಿದ್ದರೂ ಅದನ್ನು ತಪ್ಪೆಂದು ಸಮಾಜವನ್ನು ಒಪ್ಪಿಸಬೇಕೆಂಬ ಛಲ ಒಂದು ಪಂಥದ್ದಾದರೆ ಇನ್ನೊಂದು ಪಂಥದ ಚಿಂತೆ ಇದರ ಮಧ್ಯೆ ತಮ್ಮ ಲಾಭದ ಬೇಳೆ ಬೇಯಿಸಿಕೊಳ್ಳುವುದಾಗಿರುತ್ತದೆ. ಪ್ರತಿಯೊಂದು ಚರ್ಚೆಯೂ ಆರೋಗ್ಯಕರವಾಗಿದ್ದಲ್ಲಿ ಅದು ಸಮಾಜದ ಅರಿವಿಗೆ ಬರುತ್ತದೆ. ಆದರೆ ಅರಿವಿಗೆ ಬಂದರೂ ಅದನ್ನು ಒಪ್ಪದೇ ತಪ್ಪೆಂದು ಬಿಂಬಿಸಲೇಬೇಕೆಂಬ ಹಠಹಿಡಿದು ಕುತ್ತವರನ್ನು ಸರಿಮಾಡುವುದು ಹೇಗೆ. ಈ ರೀತಿ ಪ್ರಸಂಗಗಳಿಂದಲೇ ಎಲ್ಲರಿಂದ ನುಣುಚಿಕೊಂಡು ಕೆಲವರು ಸಾಚಾಗಳಂತೆ ಬಿಂಬಿತವಾಗುತ್ತಾರೆ. ಸಮಾಜದಲ್ಲಿ ಸಿಗುವ ಪ್ರಶಸ್ತಿ ಪುರಸ್ಕಾರಗಳು ಇತ್ತೀಚೆಗೆ ವರ್ಗಕ್ಕೆ ಮತ್ತು ಜಾತಿಗೆ ಜೊತೆಗೆ ಪಂಥಕ್ಕೆಂದು ಹಂಚಿಹೋಗುತ್ತಿವೆ, ಬಾಲಿಶಹ ವ್ಯಕ್ತಿಗಳಿಗೆ ಪುರಸ್ಕರಿಸಿ ಬೀಗಿದರೆ ಅದು ಆ ಪ್ರಶಸ್ತಿಗೆ ಮತ್ತು ಪುರಸ್ಕಾರಗಳಿಗೆ ಮಾಡಿದ ಅವಮಾನವೇ ಹೊರತು ಇದರಿಂದು ಕಾಲಿ ಕೊಡದಂತಿರುವವನಿಗೆ ನೀಡಿದ ಪ್ರಶಸ್ತಿ, ಪುರಸ್ಕಾರದಿಂದ ಆತನಲ್ಲಿ ಯಾವುದೇ ದಿವ್ಯ ಜ್ಞಾನ ಉದಯಿಸುವುದಿಲ್ಲ. ಮತ್ತು ನಾಡಿಗೆ ಯಾವುದೇ ರೀತಿಯ ಪ್ರಯೋಜನವೆನಿಸುವುದಿಲ್ಲ. ಜೊತೆಗೆ ನಾವು ನಾಡಿಗೆ ಸಮಾಜಕ್ಕೆ ಯಾವುದೇ ಸಂದೇಶ ರವಾನಿಸಿದಂತಾಗುವುದಿಲ್ಲ. ಅವರ ಜಾತಿಯನ್ನು ಓಲೈಸಿದಂತಾಗುತ್ತದೆ ಅಷ್ಟೇ. ತಮಗೆ ಬೇಕಾದವರೆಂದು ಆರಾಧಿಸುವುದರ ಬದಲಿಗೆ ನಾಡಿಗೆ ಅಭಿವೃದ್ಧಿಗೆ ಮತ್ತು ಮಾರ್ಗದರ್ಶಕರೆನಿಸುವವರನ್ನು ಆರಾಧಿಸುವುದರ ಮೂಲಕ ಭಾವೈಕ್ಯತೆ ಬೆಳೆಸಬೇಕು. ಆದರೆ ಅದವೂ ಗೌಣವಾಗಿದೆ. ಎಲ್ಲದಕ್ಕೂ ಈ ಬಕೇಟ್ ಹಿಡಿವವರೇ ಬಂದು ಅಡ್ಡಗಾಲಾಗಿ ಎಲ್ಲ ಸೌಲಭ್ಯವನ್ನು ನೈಜ ಫಲಾನುಭವಿಗಳಿಂದ ಕಸಿಯುತ್ತಾರೆ. ಸುಮ್ಮನೇ ಇವರ ಕತ್ತಿಗೊಂದು ಹಾರ ಬೀಳುತ್ತದೆ, ಅದೂ ಯಾವ ಪುರುಷಾರ್ಥಕ್ಕೋ ಅರಿದಾಗುತ್ತದೆ. ಇಂತವರಿಂದ ಸಮಾಜ ಎಷ್ಟೊಂದು ಉದ್ದಾರವಾಗಿದೆ, ಇವರು ಮಾಡಿದ ನಾಡಿನ ಸೇವೆ, ಬಡತನ ನಿರ್ಮೂಲನ, ಸಾಮಾಜಿಕ ಸಮಾನತೆಗಾಗಿನ ಇವರ ಹೋರಾಟ ಅವಿಸ್ಮರಣೀಯವೆಂದು ಹಾರಹಾಕಿಕೊಳ್ಳುವವರನ್ನು ನಾವು ದಿನ ನಿತ್ಯ ನೋಡುತ್ತೇವೆ, ನೋಡಲೇಬೇಕಾದ ಸ್ಥಿತಿಯಲ್ಲಿ ಬಿದ್ದಿದ್ದೇವೆ. ಆದರೂ ಏಕೆ ದೇಶದಿಂದ ಬಡತನ, ಸಾಮಾಜಿಕ ಅಸಮಾನತೆ, ಜಾತಿ, ಅಸ್ಪøಷ್ಯತೆ, ಮೋಸ, ವಂಚನೆ ಭ್ರಷ್ಟಾಚಾರ ತೊಲಗಿಲ್ಲ. ಏಕೆಂದರೆ ಎಲ್ಲವೂ ಬಕೇಟ್ ಹಿಡಿವವರ ಕೈವಶದಲ್ಲಿರಲು ವಿವೇಕಿಗಳಿಗಳಿಗೆ(ಸಾಮಾನ್ಯನಿಗೆ) ಜಾಗವೆಲ್ಲಿ..?
      ಸ್ವಾಭಿಮಾನಿಗಳಿಗೆ ನಮ್ಮ ಸಮಾಜದಲ್ಲಂತೂ ಕಂಡಿತಾ ಗೌರವವಿದೆ, ಅದು ಈ ದೇಶದ ಮಣ್ಣಿನ ಗುಣ, ಎಲ್ಲರೂ ಸ್ವಾಭಿಮಾನವನ್ನು ಹೆಚ್ಚಿಸಿಕೊಳ್ಳುತ್ತಾ, ಸತ್ಯವನ್ನು ಸತ್ಯವೆನ್ನಿಸುತ್ತಾ ಈ ಬಕೇಟ್ ಹಿಡಿವ ಸಂತತಿಯನ್ನು ನಾಶಗೊಳಿಸಲು ಎಲ್ಲರೂ ಪ್ರಯತ್ನಿಸೋಣ, ಎಲ್ಲರೂ ಕೈ ಜೋಡಿಸೋಣ. ಒಳ್ಳೆಯ ಕಾರ್ಯಕ್ಕೆ ಅಭಿವೃದ್ಧಿಪರ ಚಿಂತನೆಗಳಿಗೆ ಜೈ ಎನ್ನೋಣ..

ಕಾದಿರುವೆ ನಿನಗಾಗಿ..

ಗೆಳತೀ..
ನೀ ಬರುವ ಹಾದಿಯಲ್ಲಿ
ನಿನ್ನೊಲವ ರಂಗು
ತುಂಬಿದ ಮನದಲ್ಲಿ
ನಿನ್ನಾಸೆರೆಯ ಬಯಸಿ
ಕಾದಿರುವೆ ನಿನಗಾಗಿ..

ನೀ ತರುವುದನು
ಮರೆಯದಿರು
ನನಗೊಂದು ಕೆಂಗುಲಾಬಿ..
ಹೊತ್ತು ತರುವುದನು
ಮರೆಯದಿರು
ನಗುಮೊಗದ
ಸಿರಿಯನು..

Saturday, 10 December 2016

ಸಂಗೀತದಲೆಯಲ್ಲಿ ಅರಳಿದ ಒಲವು..

      ನಮ್ಮ ಅಜ್ಜ ನಮ್ಮೂರಿನಲ್ಲಿ ನಡೆಸುವ ಸಂಗೀತ ಶಾಲೆಗೆ ನಾಡಿನಲ್ಲೇ ಒಳ್ಳೆಯ ಹೆಸರಿದೆ, ಅವರ ಹೆಸರು ರಘುನಾರಾಯಣ್ ಅಂತ, ಅವರ ಶಿಶ್ಯವೃಂದ ಜಗದಲ್ಲಿ ಒಳ್ಳೆಯ ಹೆಸರನ್ನು ಪಡೆದಿದೆ, ನಮ್ಮ ಅಜ್ಜನವರು ಸಂಗೀತ ಕಾರ್ಯಕ್ರಮಗಳನ್ನು ನೀಡುತ್ತಾ ನಾಡಿನಾದ್ಯಾಂತ ಸುತ್ತುವ ಅವರದೂ ಸಂಗೀತವನ್ನು ಜಗದೆಲ್ಲೆಡೆ ಕಂಪಿಸುವ ಹೃದಯ. ವಿದೇಶಗಳಿಗೆ ಹೋಗಿ ಅನೇಕ ಕಾರ್ಯಕ್ರಮಗಳನ್ನು ನೀಡಿದವರು, ಅವರಿಗೆ ಅವರ ಮಗನನ್ನು ಒಳ್ಳೆಯ ಸಂಗೀತಗಾರನನ್ನಾಗಿ ಮಾಡಬೇಕೆಂಬ ಮಹದಾಸೆಯಿತ್ತು, ಆದರೆ ನನ್ನ ತಂದೆ ವಿಜ್ಞಾನ ಕ್ಷೇತ್ರದಲ್ಲೇ ಆಸಕ್ತಿ ಯಥೇಚ್ಚವಾದ್ದರಿಂದ ಕೃಷಿ ವಿಜ್ಞಾನದಲ್ಲಿ ಉನ್ನತ ವ್ಯಾಸಾಂಗ ಮಾಡುತ್ತಾ ಬೆಂಗಳೂರು ರೀಸರ್ಚ ಸೆಂಟರ್‍ನಲ್ಲಿ ಒಬ್ಬರು ಸಂಶೋಧಕರಾಗಿ ಸೇವೆಸಲ್ಲಿಸುತ್ತಿದ್ದಾರೆ. ನನ್ನ ತಂದೆ ಅವರ ತಂದೆಯ ಆಸೆಯನ್ನು ನನ್ನ ಮೂಲಕವಾದರೂ ಈಡೇರಿಸುವ ಉದ್ದೇಶದಿಂದ ನನಗೆ ಸ್ವಲ್ಪ ಸಂಗೀತದ ಅಭ್ಯಾಸಕ್ಕೆಂದು ನನ್ನನ್ನು ಬಾಲ್ಯದಿಂದಲೇ ಸಂಗೀತಕ್ಕೆ ಸೇರಿಸಿದ್ದರು, 6ನೇ ವಯಸ್ಸಿಗೆ ಸಂಗೀತಭ್ಯಾಸಕ್ಕೆ ಸೇರಿದವನು ನಾನು, ನಂತರ ಹತ್ತನೇ ತರಗತಿ ಬಂದೊಡನೆ ಮನೆಯಲ್ಲಿ ಸಂಗೀತ ಅಭ್ಯಾಸ ಬಿಡಿಸಿದರು, ಪಿ.ಯು.ಸಿ ಯಲ್ಲೂ ನಾನು ವಿಜ್ಞಾನದ ಅಧ್ಯಯನಕ್ಕೇ ಹೆಚ್ಚು ಒತ್ತು ಕೊಡಲೆಂದು ಬೇರೆ ಚಟುವಟಿಕೆಗಳ ಕಡೆ ಗಮನ ಕಡಿಮೆಮಾಡಿ ತಂದೆಯಂತೆ ಉನ್ನತ ಸ್ಥಾನಕ್ಕೇರಬೇಕೆಂಬ ಕನಸು ಮತ್ತು ನನ್ನ ತಂದೆ ತಾಯಿಯರ ಹಠಕ್ಕೆ ನಾನು ಮುಗಿಬಿದ್ದು ಪಠ್ಯದ ಅಧ್ಯಯನದಲ್ಲೇ ತಲ್ಲೀನನಾದೆ. ಆದರೆ ನಾನು ಊರಿಗೆ ಅಜ್ಜನ ಮನೆಗೆ ಹೋದಾಗ ನನ್ನ ಅಜ್ಜ ನನ್ನಿಂದ ಒಂದೆರಡು ಗೀತೆ ಹಾಡಿಸಿ ನನ್ನನ್ನು ತಿದ್ದಲು ಪ್ರಯತ್ನಿಸುತ್ತಾ ತುಂಬಾ ಆನಂದ ಪಡುತ್ತಿದ್ದರು, ಅವರಿಗೆ ಕೆಲವೊಮ್ಮೆ ಎಷ್ಟೇ ಆಯಾಸವಿರಲೀ ಎಲ್ಲಿಂದಲೇ ಬಂದಿರಲಿ ಬಂದವರೇ ಒಂದು ಗೀತೆಯನ್ನು ಹಾಡಲು ಕೇಳುತ್ತಿದ್ದರು. ಅದು ಸಂಗೀತ ತನ್ನ ಮೊಮ್ಮಗನಲ್ಲಿ ಉಳಿಯಲಿ ಎಂಬುದುರ ಬಿಂಬಕವಾಗಿತ್ತು, ನನಗೆ ಸಂಗೀತ
ಮತ್ತು ಅದರ ಮಹತ್ವದ ಬಗ್ಗೆ ಹೇಳುತ್ತಾ ಎಷ್ಟೋ ರೋಗಗಳು ಸಂಗೀತದಿಂದ ಗುಣವಾಗುತ್ತವೆ, ಸಂಗೀತವು ಮಾನವನ ಮಾನಸಿಕ ಸದೃಡತೆಗೂ ಬೇಕು, ನಾವು ಇದನ್ನು ಗಟ್ಟಿಗೊಳಿಸಿ ಬೆಳೆಸಬೇಕು, ನೀನು ಇದನ್ನು ನಿತ್ಯ ಅಧ್ಯಯನ ಮಾಡು ಇದರಿಂದ ನಿನಗೂ ಉತ್ತಮ ಏಕಾಗ್ರತೆ ಮತ್ತು ನೆಮ್ಮಧಿಯ ಸಾನಿಧ್ಯ ದೊರೆಯುತ್ತದೆಂದು ನನಗೆ ಅರಿವು ಮೂಡಿಸಲು ಶತ ಪ್ರಯತ್ನಿಸುತ್ತಿದ್ದರು, ಆದರೆ ನನ್ನ ಮನಸ್ಸು ಸಂಗೀತದೆಡೆ ಅಷ್ಟೊಂದು ಪಕ್ವವಾಗಿರಲಿಲ್ಲ. ನಾನು ಬೆಂಗಳೂರಿನಲ್ಲಿ ಹುಟ್ಟಿ ಬೆಳೆದವನು, ಅಲ್ಲಿಯ ಆಧುನಿಕ ಜೀವನ ಮತ್ತು ಈಗಿನ ಶೈಕ್ಷಣಿಕ ರಂಗದ ಪೈಪೋಟಿಯಲ್ಲಿ ಅರೆಘಳಿಗೆಯು ಅತ್ತಿತ್ತ ನೋಡದೇ ಇರುವುದಾಗಿದೆ, ಒಂದೆರಡು ಅಂಕಗಳು ಕಡಿಮೆಯಾದರೂ ಭವಿಷ್ಯದ ಆತಂಕ ಹೆಚ್ಚತೊಡಗುತ್ತದೆ. ಹಾಗಿರುವಾಗ ಇನ್ನೂ ಇನ್ನಿತರೆ ಚಟುವಟಿಕೆಗಳಿಗೆ ನಾನು ಗಮನ ಹರಿಸುವು ಕಡಿಮೆ, ಏಕೆಂದರೆ ನನ್ನ ಮತ್ತು ತಂದೆ ತಾಯಿಯರ ಮಹದಾಸೆ ನಾನು ಕೂಡ ಒಬ್ಬ ವಿಜ್ಞಾನಿಯಾಗಬೇಕೆಂಬುದು. ಆದರೆ ನನ್ನಜ್ಜನ ಆಸೆ ಉದ್ದೇಶಗಳು ನನ್ನ ತಂದೆ ತಾಯಿಯರಿಗೆ ಇಷ್ಟವಿದ್ದರೂ ಅದು ಅವರಿಗೆ ಎರಡನೇ ಆಯ್ಕೆಯಾಗಿತ್ತು, ಹಾಗೆಂದು ಕೆಲವೊಮ್ಮೆ ಬಿಡುವು ದೊರೆತಾಗ ನನಗೆ ಸಂಗೀತದಲ್ಲೇ ಕಾಲಕಳೆಯುವಂತೆ ಮತ್ತು ಅಧ್ಯಯನಕ್ಕೆ ಕಳುಹಿಸುತ್ತಿದ್ದರು. ಆಗ ಅಜ್ಜನ ಮನೆಗೆ ಬಂದು ಅಜ್ಜನೊಡನೆ ಕಾಲಕಳೆಯುತ್ತಿದ್ದೆ. ಅಜ್ಜನ ಸಂಗೀತ ಶಾಲೆಗೆ ನಾಡಿನ ಹಲವು ಭಾಗಗಳಿಂದ ಅಧ್ಯನಕ್ಕೆಂದು ಬರುವವರ ಸಂಖ್ಯೆ ಅಧಿಕವಾಗಿತ್ತು, ಈ ಬಾರಿ ನಾನು ವಿಜ್ಞಾನ ಪದವಿ ಮುಗಿಸಿ ಫಲಿತಾಂಶಕ್ಕಾಗಿ ಎದುರು ನೋಡುವುದು ಮಾತ್ರವೇ ಕೆಲಸವಾಗಿದ್ದರಿಂದ ನನಗೆ ಮನೆಯಲ್ಲಿ ಸ್ವಲ್ಪ ಆಯಾಸ ಕಳೆಯಲಿ ಹಾಗೂ ಊರಿಗೆ ಹೋಗಿ ಬರಲಿ ಎಂದು ಅಪ್ಪ ಅಮ್ಮ ನನ್ನನ್ನು ಈ ಬಾರಿ ಬೇಸಿಗೆ ಶಿಬಿರದಲ್ಲಿ ಭಾಗವಹಿಸಲು ನನಗೆ ಅಜ್ಜನ ಸಂಗೀತ ಶಾಲೆಗೆ ಹೊರಡಲು ಅನುವು ನೀಡಿದ್ದರು. ಅದೇ ಖುಷಿಯಲ್ಲಿ ಹೊರಟಿದ್ದೇನೆ. ಏನೇ ಆಗಲಿ ಸಂಗೀತದ ಅಲೆಗಳ ನಡುವೆ ಅಜ್ಜನ ಮೊಗದ ಮಂದಹಾಸದ ಹಾಡೇ ಅದ್ಭುತ, ಆ ವಯಸ್ಸಿನಲ್ಲೂ ನಮ್ಮಜ್ಜ ಬಲು ಗಟ್ಟಿ, ಬಲು ಅದ್ಭುತ ಅವರ ದನಿಯು, ಅವರೊಂದು ಉತ್ಸಾಹದ ಜಲಧಿ. ರಾತ್ರಿ ಪ್ರಯಾಣಮಾಡಿ ಬೆಳಿಗ್ಗೆ ಅಜ್ಜನ ಮನೆಗೆ ಬಂದೆ, ನಾ ಬರುವುದನ್ನು ಅರಿತಿದ್ದ ನನ್ನ ಅಜ್ಜ ನನಗಾಗಿ ಹಾಡೊಂದನು ರಚಿಸಿ ನಾನು ಬಂದೊಡನೆ ಹಾಡತೊಡಗಿದರು...
“ಪದವಿ ಮುಗಿಸಿದ ಬಂದ ಪೋರನೇ
ವಿಧ್ಯಾ ಜ್ಞಾನದ ಪಾರಂಗತನೇ
ನಮ್ಮೂರು ನಾಡಿಗೆ ಹೆಮ್ಮೆಯ ಮಗ ನೀನೇ
ಅದೇನೋ ನುಡಿಯುತಿದೆ ನಿನ್ನ ಕಣ್ಣ ಸನ್ನೇ
ಅದುವಿರಬಹುದೇನೋ ವಿಜಯದ ಮಹಿಮೇ..”

ಎಂದು ಅಜ್ಜ ಹಾಡುತ್ತಾ ನನ್ನ ಕೆಣಕುತ್ತಾ ಬರಮಾಡಿಕೊಂಡರು, ಜೊತೆ ನನ್ನಜ್ಜಿಯ ಮಂದಹಾಸದ ಸ್ವಾಗತ, ಇದು ವರ್ಷವಿಡೀ ಓದಿ ಬಸವಳಿದಿದ್ದ ನನಗೆ ಮನ ನಿರಾಳಗೊಳಿಸಿತು, ರಾತ್ರಿ ಪ್ರಯಾಣ ಸುಸ್ತು ಹೋಯಿತು, ನಿದ್ರೆ ಮಾಡಿ ಸುಸ್ತು ಕಳೆಯಬೇಕಿದ್ದವನಿಗೆ ಇನ್ನು ನಿದ್ರೆಯು ಹಾರಿಹೋಯಿತು, ಅಜ್ಜನ ಸಂಗೀತ ಶಕ್ತಿಗೆ ನಾ ಸೋತೆ. ಅಜ್ಜ ನಿನಗೆ ಮೊದಲು ನಾನು ಸೋತಿದ್ದು ಇಲ್ಲೇ. ನಂತರ ಬೇಗನೇ ಸಿದ್ಧವಾಗಿ ಅಜ್ಜ ಬೇಸಿಗೆ ಶಿಬಿರದ ಸಂಗೀತ ತರಗತಿಗೆ ಹೋದೆ. ನಾಡಿನ ವಿವಿಧ ಭಾಗಗಳಿಂದ ಬಂದವರು ಅನೇಕರಿದ್ದರು, ಮೊದಲು ಉದ್ಘಾಟನೇ ಕಾರ್ಯಕ್ರಮ, ನಂತರ ಪ್ರಾರ್ಥನೆ ಸರದಿ, ವಿಘ್ನೇಶ್ವರ ನಿನ್ನ ನೆನೆದರೇ..ಮನದ ದುಗುಡಕೆಲ್ಲಿದೆ ಆಸರೇ.. ಎಂದು ಒಬ್ಬಳು ಹುಡುಗಿ ಪ್ರಾರ್ಥಿಸಿದಳು, ಸಂಗೀತ ಅಲೆಯಲ್ಲಿ ಮನ ನಲಿಸಿ ಆ ಸಮಯದಲ್ಲಿ ಮಧುರತೆಗೇ ಸವಾಲೆನಿಸುವ ದನಿಯು ನನ್ನ ಮೋಡಿ ಮಾಡತೊಡಗಿತು, ಆ ಮಾಧುರ್ಯದ ಸ್ವರಕೇ ಪ್ರತಿಧ್ವನಿಸುವ ರಾಗಗಳ ಭೋರ್ಗರೆತಕೆ ಮನವು ಆಗ ಬೆರಗಾಯಿತು, ಎಷ್ಟೋ ಗಾಯಕರ ಸ್ವರ ಸವಿಯುಂಡಿದ್ದರೂ ಇದುವೇನೋ ವಿಶೇಷವೆಂದು ಹಂಬಲಿಸತೊಡಗಿತು, ಆ ದನಿಯ ಸವಿಯಲ್ಲಿ ಸದಾ ನಾ ಮುಳುಗಬೇಕೆಂಬ ಹಂಬಲವು ದಿನದಿಂದ ದಿನಕ್ಕೆ ಮರವಾಯಿತು, ಅದುವು ಕದಲದೇ ನನ್ನೆದೆಯ ಮೇಲೆ ಬೆಳೆದು ಆ ಮರದಲ್ಲಿ ಅವಳ ದನಿಯು ಹೂವಾಗಿ ಅರಳಿಬಿಟ್ಟಿತು, ಆ ಹೂವು ನಿತ್ಯ ನಗುತ ನನ್ನೆದೆಯ ಬನದಲ್ಲಿ ಗುನುಗುತಿರಲಿ ಒಲವಗಾಥೆಯು ನನ್ನ ಹೃದಯ ಮೀಟುತಿರಲಿ ಎಂದು ಜೀವದುಸಿರುವ ಬೇಡುವ ಹಂತಕ್ಕೆ ನನ್ನ ಮನ ಕೆಲವೇ ದಿನಗಳಲ್ಲಿ ತಲುಪಿತು, ಜೊತೆಗೆ ಅಜ್ಜನ ಸಂಗೀತ ಶಾಲೆಯು ನನಗೆ ಅತೀ ಇಷ್ಟವಾಗ ತೊಡಗಿತು, ಬೆಳಿಗ್ಗೆ ಬೇಗನೇ ಎದ್ದು ಈಗ ಸಂಗೀತಾಭ್ಯಾಸ ಹಾಗೂ ನನ್ನ ಅತೀ ಆಸಕ್ತಿ ನೋಡಿ ಅಜ್ಜ ತುಂಬಾ ಸಂತಸಗೊಂಡರು, ಆದರೆ ಅದಕ್ಕೆ ಕಾರಣ ಅವಳು ಅರಭಿಯಾಗಿದ್ದಳು. ಅರಭಿ ಎಂಬುದು ಒಂದು ರಾಗದ ಹೆಸರು, ಅವರದೂ ಸಂಗೀತದ ಮನೆತನವಾದ್ದರಿಂದ ಮಗಳಿಗೆ ಪ್ರೀತಿಯಿಂದ ರಾಗವನ್ನೇ ಹೆಸರಾಗಿಟ್ಟಿರಬಹುದೆಂದು ನಂಬಿದೆ. ಬಿಡುವಿದ್ದಾಗ ಕೆಲವೊಮ್ಮೆ ಮಾತಾನಾಡುತ್ತಿದ್ದೆ, ಸಂಗಿತ ಶಿಭಿರದಲ್ಲೀ ಅವಳು ನನಗೆ ಬಹಳ ಆಪ್ತವೆನಿಸತೊಡಗಿದಳು, ಮನದಲ್ಲಂತೂ ಒಂದು ಪ್ರೀತಿ ತಲ್ಲಣ ಶುರುಮಾಡಿ ಬಿಟ್ಟಿದ್ದಳು..ಅರಭೀ. ನಮ್ಮಿಬ್ಬರ ಪರಿಚಯ ಅತೀ ಆಪ್ತವೆನಿಸಿತು, ಇಬ್ಬರ ಮನಸುಗಳು ಹತ್ತಿರವಾದವು ಪ್ರೀತಿಗೆ ತಿರುಗುವುದು ಜಾಸ್ತಿ ಸಮಯ ತೆಗೆದುಕೊಳ್ಳಲಿಲ್ಲ, ಜೊತೆಗೆ ಕಾಲವೂ ಸುಮ್ಮನೇ ನಿಲ್ಲಲಿಲ್ಲ, ಅದು ಶಿಭಿರದ ದಿನಗಳನ್ನು ಕಳೆಯುತ್ತಾ ಬರುತ್ತಿತ್ತು. ಈಗ ದಿನಾ ನಗುವಿದ್ದ ನನ್ನ ಮತ್ತು ಅವಳ ಮೊಗದಲ್ಲಿ ಒಂದು ಆತಂಕ ಶುರುವಾಯಿತು. ನಮ್ಮಿಬ್ಬರ ನೋಟದಲ್ಲಿ ಆತಂಕದ ಛಾಯೇ ಎದ್ದು ಕಾಣುತ್ತಿತ್ತು, ಅಗಲಿಕೆ ಅಸಾಧ್ಯವೆನ್ನುವಂತೆ ಮಾಡಿತು ನಮ್ಮಿಬ್ಬರ ಒಲವು. 
ಇಂದು ರಾತ್ರಿ ಏನೂ ಹೇಳದೇ ನೇರ ಅಜ್ಜನ ಬಳಿ ಹೋದೆ, ಸಂಗೀತ ಹಾಡೋದನ್ನೇನೋ ಹೇಳಿಕೊಡುತ್ತೀರಿ, ಸಾಹಿತ್ಯ ರಚನೆಯನ್ನು ಹೇಳಿಕೊಡಿ ಎಂದೆ. ಅವರು ಅನೇಕ ಗೀತೆಗಳನ್ನು ರಚಿಸಿದವರು, ಸಾಕಷ್ಟು ಪಾಂಡಿತ್ಯವಿದ್ದವರು, ಅವರಿಗೆ ನನ್ನ ಈ ಆಸೆ ಕಂಡು ಇನ್ನಷ್ಟು ಖುಷಿಯಾಯತು, ನಾಳೆಯಿಂದ ಹೇಳಿ ಕೊಡುವೆ, ಮೊದಲು ಸಾಹಿತ್ಯದ ಪುಸ್ತಕಗಳನ್ನು ಚೆನ್ನಾಗಿ ಓದು ಎಂದರು. ನಾನು ಇಲ್ಲ ಈಗಲೇ ನಾನು ಒಂದು ಗೀತೆ ಬರೆಯಬೇಕೆಂದೆ, ಅದಕ್ಕಾಗಿ ಈಗಲೇ ಹೇಳಿಕೊಡಿ ಎಂದೆ. ದಾವಂತದಲ್ಲೀ ಯಾವುದೂ ಸಿದ್ಧಿಸುವುದಿಲ್ಲ, ಅದೆಲ್ಲಾ ಆಗಲ್ಲವೆಂದರು, ಆದರೆ ನಾನು ಒಂದು ಗೀತೆಯನ್ನು ರಚಿಸಿ ಅರಭಿಗಾಗಿ ಹಾಡಲೇ ಬೇಕಿತ್ತು. ಏನು ಮಾಡುವುದೆಂದು ಯೋಚಿಸತೊಡಗಿದೆ. ನಿಧಾನವಾಗಿ ಭಾರವಾದ ಮನದಲ್ಲೆ ಹೆಜ್ಜೆಹಾಕುತ್ತಾ ನನ್ನ ಕೋಣೆಗೆ ಬಂದೆ, ಕಿಟಕಿಯಾಚೆ ಇಣುಕಿದೆ, ಚಂದಿರ ಓಡುತ್ತಿದ್ದ, ನೀಲಾಗಾಸದ ದೊರೆಯ ಚೆಲುವಿಗೆ ಮನ ಸ್ವಲ್ಪ ತಣಿವಾಯಿತು, ಚಂದಿರನ ಮೊಗದಲ್ಲಿ ಅರಭಿಯ ನಗುವ ಮೊಗವನ್ನು ತುಂಬಿದೆ, ನಾನೇ ಮೊದಲ ಕವಿತೆಯಂತೂ ಪೂರ್ಣಗೊಳಿಸಿದೆ, ನನ್ನದೇ ರಾಗ ಸಂಯೋಜಿಸಿ ಗುನುಗತೊಡಗಿದೆ. 
ನಗುವ ಶಶಿಯ ಮೊಗದಲ್ಲಿ 
ಮೂಡಿ ಕೆಣಕುವವಳೇ..
ಬಯಸುವ ಈ ಹೃದಯದಲ್ಲಿ
ಸದಾ ನೆಲೆಯಾಗಬೇಕು ನೀನು.. ಎಂದು ಮೆತ್ತನೆ ರಾತ್ರಿಯ ಸಮಯದಲ್ಲಿ ಬೇರೆಯರಿಗೆ ಸದ್ದು ಮಾಡದಂತೆ ಮೆತ್ತನೆ ಹಾಡತೊಡಗಿದೆ, ಯಾರೋ ಬಾಗಿಲು ದಬ್ಬಿ ಒಳಬಂದಂತಾಯ್ತು, ಕೊಂಚ ಹೆದರಿಕೆಯಲ್ಲಿ ನೋಡಿದೆ, ಎದುರುಗಡೆ ನನ್ನಜ್ಜ ನಿತ್ತಿದ್ದರು, ಏನು ಮಾಡುತ್ತಿರುವೆ ಎನ್ನುತ್ತಾ ಬಂದವರೇ ನಾನು ಟೇಬಲ್ ಮೇಲೆ ಬರೆದಿಟ್ಟ ಕವಿತೆ ತೆಗೆದುಕೊಂಡರು, ಅಲ್ಲೇ ಇದ್ದ ಪುಸ್ತಕ ತೆಗೆದು ನೋಡಿದರು, ಅವರಿಗೆ ನಾನು ಹೇಳುವುದು ಏನೂ ಉಳಿದಿರಲಿಲ್ಲ, ನನ್ನ ಮತ್ತು ಅರಭಿಯ ನಡುವಿನ ಪ್ರೀತಿಯ ವಿಷಯ ಗೊತ್ತಾಗಿಬಿಟ್ಟಿತು. ನನಗೆ ಮೈ ಬೆವರತೊಡಗಿತು, ಅಜ್ಜಾ ಎಲ್ಲವನ್ನೂ ಓದುತ್ತಾ ಒಮ್ಮೆ ನನ್ನನ್ನೂ ದುರುಗುಟ್ಟು ನೋಡುತ್ತಾ ಇದ್ದರು, ಎಲ್ಲಾ ಮುಗಿದ ನಂತರ ನಾನು ಬರೆದ ಕವಿತೆಯನ್ನು ಇನ್ನೊಮ್ಮೆ ಮತ್ತೆ ಮತ್ತೆ ಓದತೊಡಗಿದರು, ನನ್ನದೇ ಹಸ್ತಾಕ್ಷರವೆಂದು ನನ್ನದೇ ಮನದ ಭಾವನೆಯ ಹಾತೊರೆತವನ್ನು ಅವರು ಅರ್ಥೈಸಿಕೊಂಡರು. ಪ್ರೀತಿ ಬರೆಸಿದ ಮೊದಲ ಕವಿತೆ ಅಜ್ಜನ ಕೈಲಿತ್ತು, ನನ್ನ ಹೃದಯ ಜೋರಾಗಿ ಬಡಿಯುತ್ತಿತ್ತು. ಏನಪ್ಪಾ ಅಜ್ಜನ ನಡೆ, ಎಲ್ಲಾ ಇನ್ನು ಅಪ್ಪ, ಅಮ್ಮನಿಗೆ ಹೇಳಿ ನನಗೆ ಬೆಂಗಳೂರಿಗೆ ಕಳುಹಿಸಿಬಿಡುತ್ತಾರೆ, ಏನು ಮಾಡುವುದು ನನ್ನ ಪ್ರೀತಿಯ ಗತಿ ಏನೆಂದು ನರಳತೊಡಗಿದೆ. ಅಜ್ಜ ಸ್ವಲ್ಪ ಹೊತ್ತು ಮೌನವಾಗಿದ್ದರು, ಏನೂ ಮಾತಾಡಲಿಲ್ಲ, ನಂತರ ಅಜ್ಜ ಜೋರಾಗಿ ನಕ್ಕು ಎದ್ದು ಹೋದರು. ನನಗೆ ಏನೂ ಅರಿವಾಗಲಿಲ್ಲ, ರಾತ್ರಿಯಿಡೀ ನಿದ್ರೆಬಾರದೇ ನರಳಿದೆ. ಬೆಳಿಗ್ಗೆ ಶಿಬಿರದ ಕಡೆ ಹೋಗಲು ಮನಸ್ಸಿಲ್ಲದೇ ಕೊರಗತೊಡಗಿದೆ, ಅರಭಿ ನನ್ನನ್ನು ನೋಡಿದರೆ ಏನು ಹೇಳುವುದು ಎಂದು ಮೌನದಲ್ಲೇ ಉಳಿದೆ, ಬೆಳಿಗ್ಗೆ ಶಿಬಿರಕ್ಕೆ ಹೋಗಲಿಲ್ಲ, ಮಧ್ಯಾಹ್ನ ಅರಭಿಯೇ ನನ್ನ ಬಗ್ಗೆ ವಿಚಾರಿಸಿ ಅಜ್ಜನ ಬಳಿಕೇಳಿದ್ದಳಂತೆ, ಅದುವೂ ನನಗೆ ರಂಗಣ್ಣನ ಮೂಲಕ ಗೊತ್ತಾಯಿತು, ಅರಭಿ ಹತ್ತಿರ ಅಜ್ಜ ಸುಮಾರು ಹೊತ್ತು ಮಾತಾನಾಡುತ್ತಿದ್ದರು ಎಂದು ಕೇಳಿದ್ದು ನನಗೆ ಇನ್ನೂ ಹೆದರಿಕೆ ಶುರುವಾಯಿತು, ಅವಳಿಗೂ ಅಜ್ಜ ಬೈದರೋ ಏನೋ ಎಂತ ಎನ್ನುತ್ತಾ ಮನ ಇನ್ನಷ್ಟು ಕಸಿವಿಸಿಗೊಂಡಿತು. ಇನ್ನಷ್ಟು ಭಯ ಆವರಿಕೊಳ್ಳತೊಡಗಿತು.
 ಅಷ್ಟರಲ್ಲಿ ಊಟಕ್ಕೆ ಬರಲು ಅಜ್ಜಿ ಕರೆದರು ಹೋದೆ, ಪಕ್ಕಕ್ಕೆ ನೋಡಿದೆ  ಎದುರು ಅಂಗಳದಲ್ಲಿ ಯಾವುದೋ ಕಾರು ಬಂದು ನಿತ್ತಿತ್ತು, ಹೋಗುತ್ತಲೇ ಅಜ್ಜ ಕವಿತೆ ಬರೆದರಲ್ಲ ಹಾಡಬೇಕು, ಹಾಡು ಎಂದರು, ನನಗೆ ಹೆದರಿಕೆ ಶುರುವಾಯಿತು, ಅಪ್ಪ ಅಮ್ಮನ ಆಸೆಯೇನು, ನಾನು ಮಾಡಿದ್ದೇನು, ಈಗಷ್ಟೇ ಪದವಿ ಮುಗಿಸಿದ್ದೇನೆ ಎನ್ನುವ ಆತಂಕ ಇನ್ನಷ್ಟು ಮನೆಮಾಡತೊಡಗಿತು. ಊಟದ ಕೋಣೆಯೊಳಗೆ ನಡುಗುತ್ತಾ ಹೋದೆ. ಅಲ್ಲಿ ಅನೇಕ ಜನರಿದ್ದರು, ಅಜ್ಜ ಮತ್ತೆ ಹಾಡು ಹೇಳಪ್ಪ ಶಶಿ..ಜೋರಾಗಿ ಹೇಳು..ಕೇಳಲು ನೋಡಿಲ್ಲಿ ಅರಭಿನೂ ಬಂದಿದ್ದಾಳೆ, ಅವರ ಅಪ್ಪ ಅಮ್ಮ ಕೂಡ ಬಂದಿದ್ದಾರೆ ಎಂದರು.
ನೋಡಿದೆ ಅರಭಿನೂ ಬಂದು ಊಟಕ್ಕೆ ಕೂತಿದ್ದಳು, ನನ್ನ ನೋಡಿ ನಾಚಿಕೆಯಿಂದ ನಕ್ಕಳು. ಅಜ್ಜಾ ಮತ್ತೆ ಹಾಡು ಹೇಳು, ನೀನು ಹೇಳಿದರೆ ಮಾತ್ರ, ನಿನಗೂ ಅರಭಿಗೂ ಮದುವೆ ಮಾಡಿಸುವೆ ಎಂದರು. ನನಗೆ ಆಗ ಎಲ್ಲಾ ಆತಂಕ ಮರೆಯಾಗಿ ಸುರಿವ ಬಿಸಿಲಲ್ಲಿ ತಣಿಸುವ ಮಳೆ ಸುರಿಯದಂತಾಯಿತು..ಮುಲಾಜಿಲ್ಲದೇ ನಾನು ಬರೆದ ಮೊದಲ ಪ್ರೇಮಗೀತೆ ಜೋರಾಗಿ ನನ್ನದೇ ರಾಗದಲ್ಲಿ ಹಾಡಿದೆ.. ಈಗ ಅಜ್ಜನ ಸಂಗೀತಶಾಲೆಗೆ ನಾನು ಮತ್ತು ಅರಭಿಯೇ ಸಾರಥಿ...ಕೊನೆಯಲ್ಲಿ ನನ್ನ ತಂದೆ ನನಗೆ ಹೇಳಿದರು ನೆಮ್ಮದಿಯಿಲ್ಲದ ನನ್ನ ಬದುಕಿಗಿಂತ ನೀನೆ ಮೇಲು, ಜೊತೆಗೆ ನಮ್ಮ ತಂದೆಯವರ ಮಾತು ಉಳಿಸಿದೆ ಎಂದರು..ಒಟ್ಟಾರೆ ಅರಭಿಯ ಸ್ವರದಲ್ಲಿ ನನ್ನ ಬಾಳ ನಾವೆಯು ಮೇಳೈಸಿತು..

Friday, 9 December 2016

ವಾತ್ಸಲ್ಯದ ಸೆರೆಯಲ್ಲಿ..

ಇದು ಕಳೆದ ಒಂದು ವರ್ಷದ ಹಿಂದಿನ ಮಾತಿದು. ನಾನು ಶಿವಮೊಗ್ಗ ಬಸ್ ನಿಲ್ದಾಣದಲ್ಲಿ ಸುಮಾರು ರಾತ್ರಿ 11 ರ ಸಮಯಕ್ಕೆ ಬೆಂಗಳೂರು ಹೊರಡುವ ಬಸ್‍ಗಾಗಿ ಕಾಯುತ್ತಾ ನಿತ್ತಿದ್ದೆ. ನಾನು ಬೆಂಗಳೂರಿಗೆ ಹೋಗುವುದು ಅನಿಶ್ಚಿತವಾಗಿದ್ದರಿಂದ ಪೂರ್ವ ತಯಾರಿಯಿಲ್ಲದೇ ಸಮಯ ಕೊಂಚ ತಡವಾಗಿತ್ತು, ಏನೇ ಆಗಲಿ ಹೋಗಿ ಮುಟ್ಟುವುದು ಬೆಳಿಗ್ಗೆಯೇ ಅಲ್ಲವೇ ಎಂದು ಸಮಾಧಾನಿಸಿಕೊಳ್ಳುತ್ತಾ ನಿತ್ತಿರುವಾಗ ವಯೋವೃದ್ಧ ದಂಪತಿಗಳಿಬ್ಬರು ಬಸ್ ನಿಲ್ದಾಣದತ್ತ ನಡೆದು ಬಂದರು. ಕೊರೆವ ಚಳಿ ಜೋರಾಗಿತ್ತು, ನಾನು ಬೆಚ್ಚನೆಯ ಉಡುಗೆಯಲ್ಲಿದ್ದರೂ ನಡುಗುವ ವಾತಾವರಣವಿತ್ತು, ಅಂತದರಲ್ಲಿ ಆ ವಯೋವೃದ್ಧ ದಂಪತಿಗಳು ಸಾದಾರಣ ಉಡುಗೆಯಲ್ಲಿ ನಡುಗುತ್ತಾ ಬಂದರು, ಸ್ವಲ್ಪ ಹೊತ್ತು ಹಾಗೆಯೇ ಕಾಯುತ್ತಾ ಇರುವಾಗ ಕಾಫಿ ಮಾರುವವನು ಬರುತ್ತಾನೆ, ನಿಧಾನ ಕಾಫಿ ಕುಡಿಯುತ್ತಾ ನಿತ್ತಿರುವಾಗ, ಆ ದಂಪತಿಗಳು ಬಂದು ನಿಲ್ದಾಣದ ಕಟ್ಟೆಯಲ್ಲಿ ಕುಳಿತುಕೊಳ್ಳುತ್ತಾರೆ, ಪಕ್ಕದಲ್ಲೇ ಇದ್ದ ನನಗೆ ಬಸ್ ಬರುವ ಸಮಯ ಕೇಳುತ್ತಾರೆ, ನಾನು 11.45 ಕ್ಕೆ ಎಂದೆ. ಅದು ಕಾರವಾರದಿಂದ ಬರುವ ಬಸ್, ಸೀಟು ಸಿಗುವುದು ನನಗೆ ಅನುಮಾನವಿತ್ತು, ಏನೇ ಆಗಲಿ ಎಂದು ಕಾಯತೊಡಗಿದೆ, ಆ ಯಜಮಾನರಿಗೆ ಕೇಳಿದೆ ನೀವು ಬೆಂಗಳೂರಿಗೆ ಹೊರಟಿದ್ದೀರ ಎಂದು, ಅವರು ಹೌದು ಎಂದರು, ನಿಮ್ಮದೂ ಸೀಟು ಕಾಯ್ದಿರಿಸಿದ್ದೀರ ಎಂದೆ, ಅವರು ಇಲ್ಲಾ, ನಾವೂ ಯಾವುದೇ ತಯಾರಿಯಿಲ್ಲದೇ ಹೊರಟಿದ್ದು ಎಂದರು, ನನಗೆ ಮಹಾದಾಶ್ಚರ್ಯವಾಯಿತು, ಇಂತ ವಯಸ್ಸಿನಲ್ಲಿ ಪಾಪ ಹೇಗೆ ಹೋಗುತ್ತಾರೆ, ನನಗೆ ಸೀಟು ಸಿಗದಿದ್ದರೆ ರಾತ್ರಿಯಿಡೀ ಸಾಗುವುದು ಸಾಧ್ಯವಿಲ್ಲ, ಇನ್ನು ಇವರ ಗತಿ ಹೇಗೆ ಎಂದು ಕಸಿವಿಸಿಯಾದೆ. ಹಾಗೆಯೇ ಸಮಯ ಕಳೆಯುವ ಸರದಿ, ಅವರು ನಿಧಾನವಾಗಿ ತಮ್ಮಲ್ಲೇ ಮಾತಾಡಿಕೊಳ್ಳುತ್ತಾ ತಮ್ಮ ಮಗ ನಾಳೆಯೇ ಹೊರಟು ಹೋಗುತ್ತಾನೆ, ಈ ಬಸ್‍ಗೆ ಏನಾದರೂ ಮಾಡಿ ಹೋಗಬೇಕು. ಇಲ್ಲದಿದ್ದರೆ ಒಂದು ವೇಳೆ ತಡವಾದರೆ ಹೇಗೆ ಎಂದು ಆತಂಕ ಪಟ್ಟುಕೊಳ್ಳುತ್ತಿದ್ದರು, ನನಗೆ ಇನ್ನಷ್ಟು ಕಸಿವಿಸಿಯೆನಿಸಿತು, ಸ್ವಲ್ಪ ಹಾಗೇ ಬೇಸರವೆನಿಸಿತು, ಸಮಯ 11.40 ಆಯಿತು, ಆ ಯಜಮಾನರು ನನ್ನ ಬಳಿ ಬಂದು ಸಮಯವಾಯಿತಲ್ಲವೇ ಎಂದರು, ಹೌದು ಬಸ್ ಬರುವ ಸಮಯವಾಯಿತು, ಬಂದ ಕೂಡಲೇ ನಿಮಗೆ ಸೀಟು ಹಿಡಿದು ಕೊಡುವೆ ಎಂದೆ, ಅವರಿಗೆ ನಾನು ಹಾಗೆ ಹೇಳಿದ್ದು ಏನೋ ಗೆದ್ದಷ್ಟು ಸಂತಸ ಅವರ ಮೊಗದಲ್ಲಿ ಮೂಡಿಸಿತು. ಹಾಗೇ ಮಾತನಾಡುತ್ತಾ ನಿತ್ತೆವು. ಸಮಯ 12 ಆದರೂ ಬಸ್ ಬರಲಿಲ್ಲ, ಅವರು ಮಾತ್ರ ನಡುಗುತ್ತಲೇ ಚಳಿಯಲ್ಲಿ ನಿತ್ತಿದ್ದರು, ನಾನೂ ಹೇಗೆ ಕೇಳುವುದು ಎಂದು ಸಂಕೋಚದಲ್ಲೇ ಸುಮ್ಮನಿದ್ದವನು ಈಗ ತಡೆಯಲಾರದೇ ಅವರ ಬಳಿ ಕಾಫೀ ತಂದು ಕೊಡಲೇ ಚಳಿ ತುಂಬಾ ಇದೆಯೆಂದೆ. ಅದಕ್ಕವರು
ಬೇಡಪ್ಪಾ ಇರಲಿ ಈಗ ಬಸ್ ಬಂದುಬಿಡಬಹುದು ಎಂದರು, ನಾನು ನನ್ನ ಬಳಿಯಿರುವ ಉದ್ದನೆಯ ಶಾಲನ್ನು ತೆಗೆದು ಕೊಟ್ಟೆ. ಬೇಸರಿಕೊಳ್ಳದಿರಿ ಉಪಯೋಗಿಸಿ ತುಂಬಾ ಚಳಿಯಿದೆ ಎಂದೆ. ಅವರು ಹೊದ್ದು ಕೂತರು ಮತ್ತೆ ಬಸ್‍ಗಾಗಿ ಕಾದು ಕೂತೆವು, ಆದರು ಬಸ್ ಬರಲಿಲ್ಲ. ಅಷ್ಟರಲ್ಲೇ ಅವರು ಮಾತಾಡಿಕೊಳ್ಳುತ್ತಿದ್ದರು, ಒಂದು ವೇಳೆ ಬಸ್ ತಡವಾಗಿ ಬಂದರೆ ಏನು ಮಾಡುವುದು, ನಾವು ಸರಿಯಾದ ಸಮಯಕ್ಕೆ ಹೋಗದಿದ್ದರೆ ಹೇಗೆ, ಮಗ ಹೋಗಿಬಿಟ್ಟರೆ ಹೇಗೆ, ಎಂದು ಗೋಗರೆಯುತ್ತಿದ್ದರು, ನಾನು ಇದು ಅವರ ವೈಯಕ್ತಿಕ ವಿಚಾರವೆಂದು ಸುಮ್ಮನೇ ಕುಳಿತಿದ್ದೆ. ಅಷ್ಟರಲ್ಲಿ ಬಸ್ ಬೆಳಕು ಕಾಣಿಸಿತು, ಬಸ್ ಬರುತ್ತಿರುವುದನ್ನು ಅರಿತು ಅವರೂ ನಿಟ್ಟಿಸಿರು ಬಿಟ್ಟರು, ಬಸ್ ಹತ್ತಿ ಒಳಗೆ ಕೂತೆವು. ಬಸ್‍ನಲ್ಲಿ ಸೀಟು ಸಿಕ್ಕಿದ್ದು ನಮಗೆ ಬಸ್‍ಗಾಗಿ ಅಷ್ಟೊತ್ತು ಕಾದಿದ್ದಕ್ಕೂ ಸಾರ್ಥಕವೆನಿಸಿತು. ಬಸ್‍ನಲ್ಲಿ ನಿಧಾನ ನಿದ್ರೆಗೆ ಜಾರಿದೆ. ಬೆಳಿಗ್ಗೆ ಯಾರೋ ಕರೆದಂತೆ. ನೋಡಿದೆ ಆ ವಯೋವೃದ್ಧ ದಂಪತಿಗಳು ನನಗೆ ಶಾಲುಕೊಟ್ಟು ಧನ್ಯವಾದ ಹೇಳಿದರು, ಆಗಲೇ ನನಗೆ ಬೆಳಗಾಗಿದ್ದು ಅರಿವಾಯಿತು, ಸಮಯ 7 ಗಂಟೆಯಾಗಿತ್ತು. ನಾನು ಮಲ್ಲೇಶ್ವರಂನಲ್ಲಿ ಇಳಿದು ನನ್ನ ಸ್ನೇಹಿತನ ಮನೆಯೆಡೆ ಸಾಗಿದೆ. ನಂತರ ಆ ವೃದ್ಧ ದಂಪತಿಯ ಪರಿಸ್ಥಿಯ ಬಗ್ಗೆ ಬೇಸರಿಸಿಕೊಳ್ಳುತ್ತಾ ನಡೆದೆ, ನಂತರ ದಿನವಿಡೀ ಬೆಂಗಳೂರಿನಲ್ಲಿ ನನ್ನ ಕಚೇರಿ ಕೆಲಸಗಳನ್ನೆಲ್ಲಾ ಮುಗಿಸಿ ಸ್ನೇಹಿತನಿಗೆ ವಿಧಾಯವೇಳಿ ಊರಿಗೆ ಹೊರಡುವ ತಯಾರಿಯಲ್ಲಿದ್ದೆ. ಅಷ್ಟರಲ್ಲೇ ಸ್ನೇಹಿತ ರೈಲು ಸೀಟನ್ನು ಕಾಯ್ದಿರಿಸಿ ತಂದಿದ್ದ. ಬೇಗನೇ ಆತನ ಬೈಕ್ ಏರಿ ರೈಲು ನಿಲ್ದಾಣ ತಲುಪಿದೆವು.
ಸ್ನೇಹಿತನಿಗೆ ವಿಧಾಯವೇಳಿ ನಾನು ಪ್ಲಾಟ್ ಫಾರಂ ಎಂಟರಲ್ಲಿ ಬಂದು ಕುಳಿತೆ. ಚಳಿ ಅತೀಯಾಗಿ ಬೀಸುತ್ತಿತ್ತು. ಎಷ್ಟೇ ಆಗಲಿ ಡಿಸೆಂಬರ್ ತಿಂಗಳಲ್ಲಿ ಎಂಥವರನ್ನೂ ನಡುಗಿಸುವ ಚಳಿಗೆ ಎಲ್ಲರೂ ಬೆಂಡಾಗಲೇ ಬೇಕು. ಕಾಫಿ ಕುಡಿಯುತ್ತಾ ನಿತ್ತಿದ್ದೆ, ಅದೇ ಧನಿಯೊಂದು ಮತ್ತೆ ಕೇಳಿದಂತೆ ಭಾಸವಾಯಿತು, ತಿರುಗಿ ನೋಡಿದೆ, ಅದೇ ವಯೋವೃದ್ಧ ದಂಪತಿಗಳು. ಎಂತಾ ಕಾಕತಾಳೀಯವೆಂದು ಮಾತಾಡಿಸಿದೆ, ಊಟವಾಯಿತಾ ಎಂದೆ.? ಅವರು ಆಯಿತು ಎಂದರು ಆದರೂ ನನಗೇಕೋ ಅವರ ಮುಖದ ಭಾವ ನೋಡಿದರೆ ಊಟ ಮಾಡಿದಂತಾಗಲಿ ಇಲ್ಲವೇ ನೆಮ್ಮದಿಯಿಂದ ಇದ್ದಂತೆ ಕಾಣಲಿಲ್ಲ, ನನಗೆ ಒಂದೇ ದಿನಕ್ಕೆ ಬೆಂಗಳೂರಿಗೆ ಬಂದು ಹೋಗಲು ಎಷ್ಟು ಆಯಾಸ, ಅದರಲ್ಲಿ ಇಂಥಾ ವಯೋವೃದ್ಧರು ಒಂದೇ ದಿನದಲ್ಲಿ ಮತ್ತೆ ಪುನಃ ಬಂದ ರೀತಿಯಲ್ಲಿಯೇ ನಿನ್ನೆ ಯಾವ ಬಟ್ಟೆಯಲ್ಲಿದ್ದರೋ ಇಂದೂ ಅದೇ ಬಟ್ಟೆಯಲ್ಲಿದ್ದರು, ಅದೇ ಸ್ಥಿತಿಯಲ್ಲಿದ್ದರು, ಏನೋ ಕಷ್ಟದಲ್ಲಿದ್ದರಂತೆ ಮೇಲ್ನೋಟಕ್ಕೆ ಅನಿಸುತ್ತಿದ್ದಂತೂ ನಿಜ. ನಾನೂ ಏನಾದರೂ ಮಾಡಿ ಕೇಳಲೇ ಬೇಕೆಂದು ನಿಧಾನವಾಗಿ ನಿಮ್ಮ ಕೆಲಸವಾಯಿತೇ ಎಂದೆ, ಮತ್ತೆ ನನ್ನ ಬಳಿಯಿದ್ದ ಶಾಲುಕೊಟ್ಟೆ, ನಿಧಾನವಾಗಿ ಅವರು ಮಾತಾಡತೊಡಗಿದರು. ಅವರು ತಮಗೆ ಎರಡು ಜನ ಗಂಡು ಮಕ್ಕಳಿದ್ದಾರೆ, ಇಬ್ಬರೂ ಕೂಡ ಅಮೇರಿಕಾದಲ್ಲಿ ಕೆಲಸಮಾಡುತ್ತಾರೆ. ನಾನು ಶಾಲೆಯ ಶಿಕ್ಷಕನಾಗಿ ನಿವೃತ್ತಿಯಾಗಿದ್ದು ನಾವು ಶಿವಮೊಗ್ಗದಲ್ಲೇ ವಾಸವಿದ್ದೇವೆ, ಮಕ್ಕಳು ಅಮೇರಿಕಾ ಹೋಗು ಮೊದಲು ಬೆಂಗಳೂರಿನಲ್ಲಿದ್ದರು, ಆಗ ವಾರಕ್ಕೆ ಇಲ್ಲವೇ ತಿಂಗಳಿಗೊಮ್ಮೆ ಊರಿಗೆ ಬರುತ್ತಿದ್ದರು, ಬಿಡುವಿದ್ದಾಗ ನಮಗೆ ಕರೆದುಕೊಂಡು ಹೋಗುತ್ತಿದ್ದರು. ಈಗ ಅವರು ಅಮೇರಿಕಾದಲ್ಲಿದ್ದಾರೆ. ಕೇವಲ ಒಂದು ವರ್ಷಕ್ಕೆಂದು ಹೋದವರು ಈಗ ಅವರು ಅಮೇರಿಕಾ ಹೋಗಿ  ಐದು ವರ್ಷಗಳಾಗಿದೆ. ಮೊನ್ನೆಯ ದಿವಸ ಮಗ ಬೆಂಗಳೂರಿಗೆ ಒಂದು ಮುಖ್ಯ ಕೆಲಸದ ಮೇಲೆ ಬಂದಿದ್ದ. ಆತ ನಮ್ಮ ಊರಿಗೆ ಬರಲು ಆತನಿಗೆ ಸಮಯವಿರಲಿಲ್ಲ, ಆತ ಒಂದೇ ದಿನದಲ್ಲಿ ಆತನ ಕಂಪನಿಯ ಕೆಲಸಮುಗಿಸಿ ಮಧ್ಯಾಹ್ನದ ವಿಮಾನಕ್ಕೆ ಅಮೇರಿಕಾ ಹೋಗುವನಿದ್ದ, ಆತನನ್ನು ನಾವು ನೋಡದೇ ಐದು ವರ್ಷಗಳಾಗಿತ್ತು. ನಿನ್ನೆಯ ದಿವಸ ರಾತ್ರಿ ಆತ ಕರೆಮಾಡಿ ಹೀಗೆ ಒಂದು ದಿವಸದಮಟ್ಟಿಗೆ ಮಾತ್ರ ಭಾರತ ಬಂದು ಹೋಗುತ್ತಿರುವೆ ಎಂದ. ನಾವು ಬೆಂಗಳೂರಿನಲ್ಲಿ ಆತನ ಕಂಪನಿಯಲ್ಲಿ ಭೇಟಿಯಾಗುತ್ತೇವೆ, ಬರುತ್ತೇವೆ ಎಂದೆ, ಆತನೇನೋ ಬೇಡ ಮುಂದಿನ ವರ್ಷ ಬರುತ್ತೇನೆ, ತುಂಬಾ ಒತ್ತಡದ ಕೆಲಸವಿದೆ, ಮುಂದೆ ಬಂದು ಭಾರತದಲ್ಲೇ ಇರುತ್ತೇವೆ ಎಂದ. ನಮಗೆ ಆತನನ್ನು ನೋಡಲೇಬೇಕೆಂಬ ಆತುರದಲ್ಲಿ ನಾವು ಹೇಗಿದ್ದೆವೋ ಹಾಗೇ ಹೊರಟು ಬಂದೆವು ಇಂದು ಆತನನ್ನು ಆತನ ಕಂಪನಿಯ ಬಳಿ ಎರಡು ತಾಸು ಕಾದು ಆತನ್ನು ಭೇಟಿಯಾಗಿ ಹತ್ತು ನಿಮಿಷಮಾತನಾಡಿದೆವೆಂದು ನುಡಿದರು, ನನಗೇ ಕೇಳಿ ಅತೀ ಬೇಸರವಾದರು, ಅವರಿಗೆ ಅವರ ಮಗನನ್ನು ಕಂಡು ಕಣ್ತುಂಬಿಕೊಂಡ ಸಂತಸ ಮತ್ತು ಸಾಧನೆಯೆರಡೂ ಇತ್ತು. ದುಡಿಮೆಗೆಂದು ಮಕ್ಕಳು ವಿದೇಶಕ್ಕೇನೋ ಹೋಗುತ್ತಾರೆ, ಅದು ಹಲವರಿಗೆ ಅನಿವಾರ್ಯವೂ ಹೌದು, ಆದರೆ ಇಲ್ಲಿ ಅವರ ತಂದೆ ತಾಯಿಯರ ಬವಣೆ ಹೇಳತೀರದು. ಏನೇ ಆಗಲಿ ವಿದೇಶದಲ್ಲಿ ಸಿಗುವ ಸಕಲ ಸೌಲಭ್ಯ ಉದ್ಯೋಗಾವಕಾಶಗಳು ಇಲ್ಲಿ ಎಲ್ಲರಿಗೂ ದೊರೆತಲ್ಲಿ ನಮ್ಮ ನಾಡೂ ಅಮೇರಿಕಾದಂತೆ ಅಭಿವೃದ್ಧಿ ಹೊಂದಿದರೆ ನಮ್ಮಲ್ಲಿನ ಇಂತಾ ಎಷ್ಟೋ ಸಂಬಂಧಗಳು ನಲಿಯುತ್ತವೆ ಮತ್ತು ವಾತ್ಸಲ್ಯಗಳು ಉಳಿಯುತ್ತವೆ ಅಲ್ಲವೇ..?
ರಾಮಚಂದ್ರ ಸಾಗರ್

ಸಂಪರ್ಕಿಸಿರಿ

ರಾಮಚಂದ್ರ ಸಾಗರ್, ಎಂ.ಐ.ಜಿ.೨೪, ಕೆ.ಹೆಚ್.ಬಿ ಕಾಲೋನಿ. ಅಣಲೇಕೊಪ್ಪ. ಸಾಗರ. ಶಿವಮೊಗ್ಗ.. ದೂರವಾಣಿ: ೯೪೪೯೧೮೭೭೯೦.
ಇಮೈಲ್: ramachandra.id@gmail.com

Thursday, 8 December 2016

ಆಗಮಿಸು ಗೆಳೆಯ..

ಪ್ರೀತಿಯ ಹುಡುಗ...
ಕಡಲತಡಿಯಲ್ಲಿ ಉಸುಕು ಗೋಪುರ ಕಟ್ಟುತ್ತಿದ್ದೇನೆ ಇಂದು ನಾನೊಬ್ಬಳೆ. ಅದೂ ಅಸಹಾಯಕಳಾಗಿ..!  ಅಂದು ಜೊತೆಯಲ್ಲಿ ನೀ ಕಟ್ಟಿದ ಗೋಪುರ ಅಲೆಗಳ ಉಬ್ಬರದಲ್ಲಿ ಕಳಚಿಹೋಗಿದೆ. ಗೋಪುರದ ಕುರುಹು ಕಾಣೆಯಾಗಿದೆ, ಜೊತೆಗೆ ನೀನು ಮರೆಯಾಗಿರುವೆ. ಆದರೆ ಇಂದು ಕಡಲತಡಿಯಲ್ಲೇನೋ ನಿನ್ನ  ಮಧುರ ನೆನಪುಗಳ ಅತಿಶಯ ನನ್ನ ಮನಕೆ ವಿಷವಾಗಿ ಕಾಡುತ್ತಿದೆ. ತಂಪಲೆಗಳ ಹಿತವಂತಿಕೆಯು ನನ್ನ ತ್ವಚೆಗೆ ಹಿತ ನೀಡುತ್ತಿಲ್ಲ. ನೀ ಕಾಣದ ಘಳಿಗೆ ಅವಿಶ್ರಾಂತ ಮನದಲ್ಲಿ ಒಂಟಿ ಎಂಬ ಕೊರಗಲ್ಲಿ ಸಂತೈಸುವ ನಿನ್ನ ಹಿತವಂತಿಕೆಯ ನಗುವಿಲ್ಲದೆ ನಾನು ನೀರಿಂದ ಹೊರಬಿದ್ದ ಮೀನಂತೆ ನನ್ನ ಜೀವವಾಗಿದೆ. ಈ ಮೃದು ಮಸಸ್ಸು ನೀನಿಲ್ಲದೆ ನೋವಲ್ಲಿ ಅವಿರತ ದುಃಖದ ಅಲೆಗೆ ತತ್ತರಿಸಿದೆ. ಆದರೂ ಉಸುಕಿನಲ್ಲಿ ಗೋಪುರ ಕಟ್ಟಿ ಅದರಲ್ಲಿ ನಿನ್ನ ನಗು ಕಾಣುವ ಹಂಬಲ ಅತಿಶಯವಾಗುತ್ತಿದೆ. ಮೌನಿ ನನ್ನ ಮಾತಾಡಿಸಲು ನಿನ್ನ ದನಿ ಇಂದೇಕೋ? ಆಸರೆಯಾಗಿಲ್ಲ. ಇರಲಿ, ನೀ ಬರಬಹುದು ಜೊತೆಗೆ ನಮ್ಮೊಲವ ಗೋಪುರಕ್ಕೂ ನೀ ಒಂದಾಗುವೆ ಎಂಬ ನಂಬಿಕೆ ಪ್ರತಿ ಉಸಿರೆಳೆತದಲ್ಲೂ ನುಡಿಯುತ್ತಿದೆ. ಆದೇನೇ ಆದರು ನಿನ್ನಾಗಮನವಿಲ್ಲದ ಈ ಸಂಜೆ ಸಾಗರದಲ್ಲಿ ಮುಳುಗಲು ರವಿಗೂ ಕೊರಗು! ಈ ಒಂಟಿ ಹುಡುಗಿಯ ನೋವು ರವಿಗೂ ಅಯ್ಯೋ ಎನಿಸುತಿದ್ದೆ. ಕಡಲಲೆಗಳ ಸದ್ದಿನ ಗಾನದಲ್ಲೂ ಹಿತವಿಲ್ಲ. ಅಲ್ಲೂ ಶೋಕಗೀತೆಯಂತೆ ಮೌನಾಚರಣೆ.  ಒಂಟಿ ಹುಡುಗಿಯ ನೋವಿಗೆ ಅದಕೂ ಬೇಸರ. ಆದರೂ ನೀ ದೂರ ಉಳಿದಿರಲೇನು ಕಾರಣ? ದೂರದಲ್ಲಿ ನೀ ಕೈಸನ್ನೆ ಮಾಡಿ ಬಂದಂತೆ ಕಾಡುವ ಬಿಂಬ ಒತ್ತಾಸೆಯಾಗಿ ನಿಲ್ಲುವ ನಿನ್ನ ನಗು ಇಂದೇಕೋ ಅವಿರತ ಕಾಡಿಸುತ್ತಿದೆ. ಜೊತೆಗೆ ನನ್ನ ಮೊಗದಲ್ಲೂ ನಗು ಕದ್ದಿರುವೆ ಗೆಳೆಯಾ..ಇದೆಲ್ಲಾ ಹೃದಯ ಕದ್ದ ನಿನ್ನದೇ ಕೃತ್ಯವು, ನಿನ್ನದೇ ಪಾರುಪತ್ಯವು. ಅಂದು ಕಡಲತಡಿಯಲ್ಲಿ ನನ್ನ ಹಾಡಿ ಹೊಗಳುತಿದ್ದ ನಿನ್ನ ದನಿ ಎಲ್ಲಿ..? ‘ಕಡಲತಡಿಯಲ್ಲಿ ನವಿರು ನಡಿಗೆಯಲ್ಲಿ ನಡೆವ ಚೆಲುವ ಬೊಂಬೆ’ ಎಂದು ನನ್ನ  ಕೊಂಡಾಡುತ್ತಿದ್ದ ಪೋರ ನೀ ಎಲ್ಲಿ ಮರೆಯಾದೆ..? ಸಂಪತ್ತಿನ ಅಂತಸ್ತಿಗೆ ಬೆಲೆ ನೀಡದ ಹುಡುಗಿ ನಾನು. ಮರು ಮಾತಿಲ್ಲದೇ ಬಂದು ಬಿಡು. ಬಂದವನೇ ನನ್ನ ಒಪ್ಪಿ ಅಪ್ಪಿ ಬಿಡು. ಅಂಜಿಕೆಯ ಬಿಟ್ಟು ಬೇಗನೇ ಆಗಮಿಸು.
ಆಸೆಗಳ ರಾಶಿಯಲ್ಲಿ ನನ್ನ ಮನಸು ಭಾರವಾಗಿದೆ. ಭಾರ ಇಳಿಸುವ ನಿನ್ನ ಸಾಂಗತ್ಯ, ನಿನ್ನ ತುಸು ನಗು, ಬಾಹು ಬಂಧನವಿಲ್ಲದೆ ನಾನು ಉರಿ ಬಿಸಿಲಲ್ಲಿ ಧಗೆಗೆ ಸೊರಗುವ ಹೂವಂತೆ  ಬಾಡುತ್ತಿದ್ದೇನೆ. ಬಾಡುವ ಮುಗ್ದ ಹುಡುಗಿಗೆ ನೀ ಬಂದು ಎಂದು ಸಂತೈಸುವೆ ಗೆಳೆಯ?..ನಾ ಕಣ್ಣಗಲಿಸಿ ನೋಡಿದಲ್ಲೆಲ್ಲಾ ನೀ ಕೈಸನ್ನೆ ಮಾಡಿ ನನ್ನ ಕರೆದಂತೆ! ನಿನ್ನ ಪ್ರೀತಿಯ ಮಾಯೆ ನನ್ನ ಬಾಳನ್ನೇ ಆವರಿಸಿ ಎಲ್ಲವೂ ಪ್ರೇಮದ ಕಡಲಿಗೆ ಮನ ಹಂಬಲಿಸಿದಂತೆ. ಕ್ಷಣ ಕ್ಷಣವೂ ನಿನ್ನದೇ ನಾಯ ನನ್ನೆದೆಯ ಗಾನವಾಗಿದೆ ಗೆಳೆಯ. ಅಂಜಿಕೆಯ ಬಿಟ್ಟು ಬೇಗನೇ ಆಗಮಿಸು...ನಿನ್ನೊಲವಿಗೆ ಪರಿತಪಿಸಿದ ಕೋಮಲೆಯ ಮನ ತಣಿಸು...