ಮಾನವನ ಅಮಿತ ಬಯಕೆಗೆ ಸಸ್ಯ ಸಂಪತ್ತು ನಾಶವಾದಂತೆ, ಪಕೃತಿಯಲ್ಲಿನ ಅಸಮತೋಲನ ವಿಕೋಪದಿಂದ ಉದ್ಭವಿತ ಸಮಸ್ಯೆಗಳಲ್ಲಿ ಭೂ ಸವಕಳಿಯು ಒಂದು. ಅಂದರೆ ನಮ್ಮೆಲ್ಲರ ಬದುಕಿಗೆ ನೆಲೆಯಾದ ಭುವಿಯು ವರ್ಷದಿಂದ ವರ್ಷಕ್ಕೆ ಸವಕಳಿ ಹೊಂದುತ್ತಿದೆ. ಭುವಿಯ ಮೇಲ್ಮೈಯ ಮೊದಲ ಪದರದಲ್ಲಿ ಮಾತ್ರ ಸಸ್ಯ ಸಂಪತ್ತು ಬೆಳೆಯಲು ಸಾಧ್ಯ. ಭುವಿಯ ಎರಡನೇ ಹಂತದದ ಪದರದ ಮಣ್ಣಿನಲ್ಲಿ ಯಾವುದೇ ಸಸ್ಯ ಸಂಪತ್ತಾಗಲಿ, ಜೀವಿಗಳಾಗಲಿ ವಾಸಿಸಲು, ಬೆಳೆಯಲು ಸಾಧ್ಯವಿಲ್ಲ. ಆದ್ದರಿಂದ ಭುವಿಯ ಮೇಲ್ಮೈಯು ಜಗದ ಎಲ್ಲಾ ಜೀವಿಗಳಿಗೆ ಜೀವಸೆಲೆಯಾಗಿದೆ. ಜಗದೆಲ್ಲಾ ಜೀವಿಗಳು ಬದುಕುಳಿಯುವುದು ಅವಲಂಬಿತವಾಗಿರುವುದು ಮೇಲ್ಮೈ ಮಣ್ಣಿನಿಂದ ಮಾತ್ರವೇ. ಇಂತ ಮೇಲ್ಮೈ ಮಣ್ಣು ಸಂರಕ್ಷಿಸಿ ಪೋಷಿಸಿಕೊಂಡು ಹೋಗಬೇಕಾದ್ದು ಜಗದ ಜೀವಿಗಳಲ್ಲಿ ಉನ್ನತ ಜ್ಞಾನ ಜವಾಬು ಹೊಂದಿರುವ ಮಾನವನೇ ಮಾಡಬೇಕಿದೆ. ಭುವಿಯ ಮೇಲಿನ ಹಕ್ಕನ್ನು ಆತನೇ ಸಾಧಿಸಿದ್ದರಿಂದ ಇದು ಅವನಿಂದಲೇ ನಿರ್ವಹಣೆಯಾಗುವ ಕಾರ್ಯವಾಗಿದೆ. ಮೇಲ್ಮೈ ಮಣ್ಣಿನಲ್ಲಿ ಸಸ್ಯ ಸಂಪತ್ತು ಬೆಳೆಯಲು ಅಗತ್ಯ ಪೋಷಕಾಂಶಗಳು ಇರುವುದು ಜೀವಿಗಳ ಬೆಳವಣಿಗೆಗೆ ಪೂರಕ ಅಂಶಗಳು ಇರುವುದು ಮೇಲ್ಮೈ ಮಣ್ಣಿನಲ್ಲಿ ಮಾತ್ರವೇ.
ವ್ಯಾಪಕ ಅರಣ್ಯ ನಾಶದಿಂದ ಗುಡ್ಡ ಗಾಡುಗಳು ಬೋಳಾಗಿವೆ. ಮಳೆ ನೀರು ಗಿರಿಯ ಸಾವರಿಸಿ ಚಲಿಸುವಾಗ ಮೇಲ್ಮೈ ಮಣ್ಣನ್ನು ಯಥೇಚ್ಚವಾಗಿ ನದಿಗೆ ಸೇರಿಸುತ್ತದೆ. ಮಣ್ಣು ಸಾಗಿ ಸಾಗರ ಸೇರುತ್ತದೆ. ಬಯಲು ಪ್ರದೇಶದಲ್ಲಿ ನಾಶವಾದ ಹುಲ್ಲುಗಾವಲು ಪ್ರದೇಶಗಳಲ್ಲೂ ನೆಲವನ್ನು ನೀರು ಮತ್ತು ಗಾಳಿಗಳಿಂದ ಸವೆತಕ್ಕೊಳಕ್ಕಾಗುತ್ತದೆ. ಹುಲ್ಲುಗಾವಲು ಪ್ರದೇಶಗಳ ನಾಶವು ಮೇಲ್ಮೈ ಮಣ್ಣಿನ ಸವೆತಕ್ಕೆ ಪ್ರಮುಖ ಕಾರಣ. ನೀರು ಮತ್ತು ಗಾಳಿಯ ಬಿರುಸಿಗೆ ಮಣ್ಣು ಸವೆದಂತೆ ಭುವಿಯ ಫಲವತ್ತತೆಯು ಕ್ಷೀಣವಾಗುತ್ತಾ ಹೋಗುತ್ತದೆ. ಫಲವತ್ತತೆಯ ಕೊರತೆಯಿಂದ ಸಸ್ಯ ಸಂಪತ್ತು ನಶಿಸುತ್ತದೆ ಅರ್ಥಾತ್ ಬೆಳೆಯಲು ಸಾಧ್ಯವಿಲ್ಲದಂತಾಗುತ್ತದೆ. ಮುಂದೊಂದು ದಿನ ಭುವಿಯ ಮೇಲೆ ಸಸ್ಯ ಬೆಳೆಯುವುದು ಅಸಾಧ್ಯವಾಗುತ್ತದೆ. ಫಲವತ್ತತೆಯ ಕೊರತೆಯಿಂದ ರಾಸಾಯನಿಕ ಗೊಬ್ಬರಗಳನ್ನು ಗದ್ದೆಯಲ್ಲಿ ಬಳಸುವುದು ಅಧಿಕವಾಗಿದೆ. ನೈಸರ್ಗಿಕವಾಗಿ ಬೆಳೆಯು ಬೆಳೆಯದ ಸ್ಥತಿಗೆ ಭೂಮಿಯು ಹಂತ ಹಂತವಾಗಿ ತಲುಪುತ್ತಿದೆ. ನೈಸರ್ಗಿಕವಾಗಿ ಬೆಳೆಯಬೇಕಾದ ಗಿಡ ಮರಗಳನ್ನು ನಾವು ಇಂದು ಕೃತಕವಾಗಿ ಬೆಳೆಸಬೇಕಾಗಿದೆ. ಪ್ರಕೃತಿಯ ವಿರುದ್ಧ ದಿಕ್ಕಿನ ಮಾನವ ಚಲನೆಯು ಅಭಿವೃದ್ಧಿಯ ಹೆಸರಿನಲ್ಲಿ ನಡೆಯುತ್ತಿರುವ ಪ್ರಾಕೃತಿಕ ಸಂಪತ್ತುಗಳ ಮಿತಿ ಮೀರಿದ ಗೊಂದಲಮಯ ಬಳಕೆಯಿಂದ ಭುವಿಯು ವಿನಾಶದತ್ತ ಸಾಗುತ್ತಿದೆ. ಗಣಿಗಾರಿಕೆಯು ಅನೇಕ ನದಿ ತೊರೆಗಳನ್ನು ನಾಶ ಮಾಡಿದ ಉದಾಹರಣೆಗಳಿವೆ. ನೈಸರ್ಗಿಕ ಅರಣ್ಯವು ನಾಶವಾಗಿ ವಿಪರೀತ ಮಣ್ಣು ನದಿ ಸೇರಿ ಜಲಾಶಯಗಳು ಹೂಳು ತುಂಬಿ ಅವುಗಳು ಹಾಳಾಗುತ್ತಿವೆ.
ಪಶ್ಮಿಮ ಘಟ್ಟದ ಚಿಕ್ಕಮಗಳೂರು ಜಿಲ್ಲೆಯಲ್ಲಿನ ಗಣಿಗಾರಿಕೆಯ ಪರಿಣಾಮ ಭದ್ರಾ ನದಿಯ ಮೇಲಾಯಿತು. ಗಣಿಗಾರಿಕೆ ಕಂಪನಿಗಳು ತಾವು ಅಗೆದ ಜಾಗದಲ್ಲಿ ಯಾವುದೇ ಮರಗಳನ್ನು ಮರುಬೆಳೆಸಲು ಸಾಧ್ಯವಿಲ್ಲ. ಅದಿರು ತೆಗೆದು ಅಗೆದ ಜಾಗದಲ್ಲಿ ಒಂದು ಹುಲ್ಲು ಬೆಳೆಯದೇ ಬೋಳು ಗುಡ್ಡಗಳ ದರ್ಶನವಾಗುತ್ತದೆ. ನೈಸರ್ಗಿಕವಾಗಿ ಬೆಳೆದು ಕಾಡುಗಳನ್ನು ಕಡೆದು ಗಣಿಗಾರಿಕೆ ಮಾಡಿ ಅಳಿದುಳಿದ ಪ್ರದೇಶದಲ್ಲಿ ಅಕೇಶಿಯ, ನೀಲಗಿರಿ ಪ್ಲಾಂಟ್ ಗಳನ್ನು ಬೆಳೆಸುತ್ತಿರುವುದು ಕಂಡು ಬರುತ್ತದೆ. ಅದೂ ಬೆಳೆಯ ಬೇಕಾದರೆ ಬೇರೆಡೆಯಿಂದ ಮಣ್ಣನ್ನು ತಂದು ಜೊತೆಗೆ ಸಾಕಷ್ಟು ರಾಸಾಯನಿಕ ಗೊಬ್ಬರ ಬೆಳೆಸಿ ಗಣಿಗಾರಿಕೆ ಕಂಪನಿಗಳು ತಾವು ಅಗೆದ ಜಾಗದಲ್ಲಿ ಪುನಃ ಅರಣ್ಯ ಬೆಳೆಸಿರುವುದಾಗಿ ಹೇಳುತ್ತಾರೆ. ಆದರೆ ನೈಸರ್ಗಿಕವಾಗಿ ಒಂದು ಹುಲ್ಲುಕಡ್ಡಿಯು ಬೆಳೆಯುವುದು ಆ ಜಾಗದಲ್ಲಿ ಅಸಾಧ್ಯವಾಗಿದೆ. ಭುವಿಯ ಮೇಲ್ಮೈ ಕೊಚ್ಚಿ ತೆಗೆದ ಮೇಲೆ ಉಳಿವುದಾದರೂ ಏನು..? ಬೋಳಾದ ಭುವಿಯಲ್ಲಿ ಬಾಳುವುದು ಸಾಧ್ಯವೇ..? ಮನೆಗಳನ್ನು ಕಟ್ಟುವಾಗ ಆದಷ್ಟು ಮರಬಳಕೆ ಕಡಿಮೆ ಮಾಡುವ ಸುಧಾರಿತ ತಂತ್ರಜ್ಞಾನದ ಅಳವಡಿಕೆಯಿಂದ ಮರಗಳ ಬಳಕೆ ಬದಲಾಗಿ ಅಲ್ಯೂಮೀನಿಯಂ ಕಿಟಕಿ ಬಾಗಿಲುಗಳನ್ನು ಉಪಯೋಗಿಸುತ್ತಿದ್ದಾರೆ. ಕಾಲಿ ಜಾಗವನ್ನು ಹಾಗೆಯೇ ಬಿಡದೇ ಹಸಿರುಮಯಗೊಳಿಸಿ ಉಳಿಸಿದಲ್ಲಿ ಭುವಿಯ ಮೇಲ್ಮೈ ಉಳಿಯುತ್ತದೆ, ಜೊತೆಗೆ ಜೀವಕುಲವು ಉಳಿಯುತ್ತದೆ. ಎಲ್ಲದಕ್ಕೂ ಮನಸ್ಥೈರ್ಯ ಗಟ್ಟಿಯಾಗಿರಬೇಕಷ್ಟೇ. ನೈಸರ್ಗಿಕ ಅರಣ್ಯಗಳನ್ನು ನಾಶಗೊಳಿಸದೇ ಪೋಷಿಸಿದಲ್ಲಿ ಮುಂದೆ ಜೀವವಾಯುವಿನ ಕೊರತೆಯನ್ನು ತಡೆಯಬಹುದು. ನಗರ ಪ್ರದೇಶಗಳಲ್ಲಿ ಪರಿಶುದ್ಧ ಗಾಳಿಯ ಕೊರತೆಯಿದೆ. ಅನೇಕ ರೋಗಗಳು ಅಶುದ್ಧ ಗಾಳಿ ಮತ್ತು ಧೂಳು ಕಣಗಳಿಂದ ಉಂಟಾಗಿ ವಾಸಿಯಾಗದೇ ಬಾಧಿಸುತ್ತಾ ಉಳಿಯುತ್ತವೆ, ಶುದ್ಧ ಗಾಳಿ, ಶುದ್ಧ ನೀರು ಉಳಿಯಬೇಕಾದರೆ ನಾವು ಭುವಿಯ ಮೇಲ್ಮೈಯನ್ನು ರಕ್ಷಿಸಿ ಉಳಿಸಬೇಕು, ಎಲ್ಲೆಡೆಯೂ ಹಸಿರು ಉಳಿಯುವಂತೆ ಕಾಯ್ದುಕೊಳ್ಳುವುದು ನಮ್ಮ ಹೊಣೆಯಾಗಿದೆ. ಇದನ್ನು ಅರಿತು ಪ್ರತಿಯೊಬ್ಬರು ನಡೆದಲ್ಲಿ ಶೇಕಡ 50 ರಷ್ಟು ರೋಗಗಳು ಕಡಿಮೆಯಾಗುತ್ತವೆ, ಜೊತೆಗೆ ಜೀವಕುಲವು ನೆಮ್ಮದಿಯನ್ನು ಕಾಣುತ್ತದೆ ಎಂಬುದು ಆಶಾವಾದ.
ರಾಮಚಂದ್ರ ಸಾಗರ್