Saturday, 31 December 2016

ಕೊಂಚ ನಿಲ್ಲುವೆಯಾ ಹಳೆವರುಷವೇ..?

     ಹಳೆವರುಷವೇ ನೀನೇನೋ ಸಾಗಿಬಿಟ್ಟೆ, ಸಾಗುತ್ತಾ ಇನ್ನೇನು ಒಂದು ಹೆಜ್ಜೆ ಇಟ್ಟರೆ ಮರೆಯಾಗಿ ಬಿಡುವೆ ನೀನು. ನೀ ಮರೆಯಾಗುವ ಮೊದಲು ನನದೂ ಒಂದಿಷ್ಟು ಮಾತಿತ್ತು ನಿನ್ನ ಬಳಿ ಕೂತು ನುಡಿಯಲು ಮನಕೆ ಹಗುರಾಗುವಷ್ಟು ನಾನು ನಿನಗೆ ಧನ್ಯವಾದ ಹೇಳಬೇಕು. ಕೆಲವು ನುಡಿಗಳಿಗೆ ಕಾರಣವನ್ನೂ ಕೇಳಬೇಕಿತ್ತು, ಆದರೆ ಸದ್ದಿಲ್ಲದೇ ಸಾಗುವ ನಿನ್ನ ಹಂಬಲವ ನಿಲ್ಲಿಸುವುದುಂಟೇ. ಅದುವೂ ಅಸಾಧ್ಯ, ಆದರೂ ನೀ ನೀಡಿದ ನೆನಪುಗಳು ನಿತ್ಯ ಮಧುರ. ಅವುಗಳ ಜೊತೆಯಲ್ಲಿ ಒಂಚೂರು ನಿನ್ನೊಂದಿಗೆ ಮಾತನಾಡುವೆ, ದಯಮಾಡಿ ನೀ ಸಹಕರಿಸು ಹಳೆವರುಷವೇ. ಸಾವಿರ ಸಿಹಿ ನೀ ಹಂಚಿದೆ, ಸಮಪಾಲು ಎಂಬಂತೆಯೇ ಕಹಿಯನ್ನು ಸಾಕಷ್ಟು ನೀಡಿದೆ. ಯಾವುದಕ್ಕೂ ಬೆದರದೇ ಸಿಹಿ ಕಹಿಗಳ ಸಮಾಗಮದಲ್ಲಿ ನನ್ನನ್ನು ಗಟ್ಟಿಯಾಗಿಸಿದೆ, ನಲಿವಿನ ಜೊತೆಗೆ ನೋವನ್ನು ಸಂಗಾತಿಯಾಗಿ ನೀಡಿದೆ. ಇವೆರಡನ್ನು ಕೈಲಿಡಿದು ನಾ ಸಾಗುವಂಗತೆ ನೀ ಮಾಡಿದೆ, ಸಾಕಷ್ಟು ಬಾರಿ ಎಡವಿ ಬಿದ್ದೆ, ಸಾಧನೆಯು ಸಿದ್ಧಿಸಿದಾಗ ನಾ ನಲಿದೆ, ನೀನು ಹಾರೈಸಿದೆ. ಪ್ರೀತಿಯ ಹಂದರದಲ್ಲಿ ಬದುಕು ಸವೆಸಿದೆ, ನೋವು, ಬವಣೆಗಳನ್ನು ಆಗಾಗ ನನ್ನ ಹೆಗಲ ಮೇಲೆ ನೀ ಕೂರಿಸಿದೆ, ದೂರದಿಂದಲೇ ನಾ ಕೆಳಗಿಸುವ ಪರಿಯನ್ನು ನೀ ನೋಡಿದೆ, ಭಾರವಾದ ಮನದಲ್ಲಿ ಸಾಗುವಾಗ ನನ್ನನ್ನೂ ನೀ ನೋಡಿದೆ. ಭಾರದ ಮನದಲ್ಲಿ ಬಿದ್ದು ಎದ್ದದ್ದನ್ನು ನೀ ಕಂಡೆ, ಇನ್ನೇನು ಬಿದ್ದೆನೋ ಎಂಬ ಭಯದಲ್ಲಿ ಎದ್ದು ನಿಂತೆ. ತುಸು ನಿಧಾನವಾಗಿ ಸಂತೈಸಿಕೊಳ್ಳುವಾಗ, ಜಗದ ಅನ್ಯರಿಗೆ ಎಷ್ಟೇ ನಾ ತೋಡಿಕೊಂಡರೂ ಕೆಲವೊಂದು ನಿನಗೆ ಮಾತ್ರವೇ ಗೊತ್ತು. ಎಲ್ಲದಕ್ಕೂ ಸಾಕ್ಷಿಯೂ, ಪುರಾವೆಯೂ ನೀನಾದೆ. ಎಲ್ಲದಕ್ಕೂ ನೀ ನನಗೆ ಜೊತೆಯಿದ್ದೆ. ಜೊತೆಯಿದ್ದ ನೀ ಇಂದು ಮೆತ್ತನೇ ಮರೆಯಾಗುತಿರುವೆ, ನೀ ನಡೆವ ದಾವಂತದಲ್ಲಿ ನಾ ನಿನಗೆ ನುಡಿಯಬೇಕೆನ್ನುವುದನ್ನೆಲ್ಲಾ ನುಡಿದು ಮುಗಿಸುವ ಹಠವಿದೆ, ಎಲ್ಲವನ್ನು ನಿನ್ನೊಂದಿಗೆ ಹೇಳಬೇಕೆಂಬ ಛಲವಿದೆ, ಹೇಳುತ್ತೇನೋ ಇಲ್ಲವೋ ಎಂಬ ದಗುಡವು ಕಾಡುತ್ತಿದೆ, ಮೆತ್ತನೆ ಸದ್ದಿಲ್ಲದೇ ಸಾಗುವ ನೀನು ಕೊಂಚ ನಿಲ್ಲುವೆಯಾ ಹಳೆವರುಷವೇ..?
  ಒಂದಂತೂ ಸತ್ಯ, ವರುಷಗಳುರುಳಿದಂತೆ, ನೀನು ಸಾಗಿದಂತೆ, ನಿನ್ನ ಪೂರ್ವಿಕರು ನುಡಿದ ನುಡಿಗಳಂತೆ, ನನಗೆ ಕಲಿಸಿದ ಪಾಠದಂತೆ ನಾನೂ ವರ್ಷದಿಂದ ವರ್ಷಕ್ಕೆ ಗಟ್ಟಿಯಾಗುತ್ತಿದ್ದೇನೆ. ಸಿಹಿ ಕಹಿ ನೆನಪುಗಳ ಮೂಟೆಯನ್ನು ಕಟ್ಟಿ ಮನದ ಕೋಟೆಯಲ್ಲಿ ಭದ್ರವಾಗಿಟ್ಟುಕೊಂಡಿದ್ದೇನೆ. ನಾ ಎಡವಿದಾಗೆಲ್ಲಾ ಎಚ್ಚರಿಸುವ ಅವುಗಳ ಸಾಂಗತ್ಯಕ್ಕೆ ನಾ ಋಣಿಯಾಗಿದ್ದೇನೆ, ಒಂದೇ ನಗುವಿಗೆ ನಾನು ಹಲವು ಬಾರಿ ನಗುವು ನನ್ನ ಮೊಗದಲ್ಲಿ ಮೂಡದಿದ್ದರೂ ಒಂದೇ ಕಹಿಯು ಅನೇಕ ಬಾರಿ ಕಣ್ಣೀರು ತರಿಸುತ್ತದೆ, ಆಗ ನೀ ಬಂದು ಸಮಾಧಾನಿಸಿದ್ದೆ, ಒಂದೇ ನಗುವಿಗೆ ನಗುವು ಬಾರದಾಗ ಕಹಿಗೇಗೆ ಬದರುವೆಯೆಂದು ತಬ್ಬಿ ಸಂತೈಸಿರುವೆ, ಭಾರವಾದ ಮನಕೆ ಸಾಕಷ್ಟು ಸಾಂತ್ವಾನವನ್ನೂ ನೀ ನೀಡಿರುವೆ. ಮನವೇ ಹಾಗೇ, ನಾವು ಬೇಡವಾದ ಸಂಗತಿಗಳೇ ಹೆಚ್ಚು ನಮ್ಮನ್ನು ನೋವು ನೀಡಿ ಕಾಡುತ್ತವೆ. ಕಹಿಗಳು ಆಟ ಮುಗಿಸಿದರೂ ಮಳೆ ಮುಗಿದ ಮೇಲೆ ತೊಟ್ಟಿಕ್ಕುವ ಹನಿಗಳಂತೆ ಸುರಿಯುತ್ತಿರುತ್ತವೆ, ಅವೆಂದಿಗೂ ಮನದ ನೆನಪುಗಳ ಕಣಜದಿಂದ ದೂರಾಗದ ಹೊರಗುಳಿಯದ ವಸ್ತುಗಳಾಗಿವೆ. ಮುಗಿದೇ ಹೋಗುವ ಆಟವನ್ನು ಮತ್ತೆ ಮತ್ತೆ ನಲಿಸಿ ಉಳಿಸಿ ಬೆಳೆಸಿರುವೆ. ಮುಗಿಯದಂತೆ ಸಾವಿರ ಕನಸುಗಳನ್ನು ಬಿತ್ತಿರುವೆ, ಎಲ್ಲವೂ ನಿನ್ನ ಸಾನಿಧ್ಯದಲ್ಲಿ  ಈಡೇರಿಸಿಕೊಂಡು ಕಣ್ತುಂಬಿಕೊಳ್ಳಲು ಆಗಲಿಲ್ಲ, ಅದಕ್ಕೆ ನಿನಗೂ ನೋವಿದೆ ಜೊತೆಗೆ ನನಗೂ ನೋವಿದೆ, ಬರುವ ಮುಂದಿನ ವರುಷದಲ್ಲಾದರೂ ಅವುಗಳನ್ನು ನಾ ಈಡೇರಿಸಿಕೊಂಡು, ನಾ ಕಂಡ ಕನಸುಗಳನ್ನು ಜಯಿಸಿ ಬೀಗುವೆ ಅದೂ ನಿನ್ನ ನೆನಪಲ್ಲಿ. ಎಷ್ಟೇ ಆದರೂ ಆ ಕನಸು ನಾನು ಕಂಡಿದ್ದು ನಿನ್ನ ಜೊತೆಯಲ್ಲಿ ಅಲ್ಲವೇನು..? ಆದರು ನಾ ಪ್ರೀತಿಯಿಂದ ನಿನ್ನನ್ನು ಬೀಳ್ಕೊಡುತ್ತಿರುವೆ, ಹಳೆವರುಷವೇ ನೀ ಜಾರುತಿರುವೆ, ಸದ್ದಿಲ್ಲದೇ ಹರಿವ ಝರಿಯಂತೆ...ಕಾರಣಹೇಳದೇ ಮುಳುಗುವ ರವಿಯಂತೆ..ಬಾನಲ್ಲಿ ಚಿತ್ತಾರ ಬಿಡಿಸಿ ಹೋಗುವ ಕಲೆಗಾರನಂತೆ ನನ್ನ ಮನದಲ್ಲಿ ಸಾವಿರ ಕನಸುಗಳ ಚಿತ್ತಾರಗಳ ಓರಣ ಮೂಡಿಸಿ, ಪ್ರಿತಿಯಿಂದ ತುಸುನಕ್ಕು ಮರೆಯಾಗುತಿರುವೆ..ನಿನಗೆ ನನ್ನ ಪ್ರಿತಿಯ ಧನ್ಯವಾದಗಳು..

    ರಾಮಚಂದ್ರ ಸಾಗರ್