Tuesday, 13 December 2016

ಕನ್ನಡದ ದೀವಟಿಗೆ ಹಿಡಿದ ಜೋಗಿ..

ನಮ್ಮ ನಾಡಿನ ಜನಪರ ಕವಿಗಳು ಹಾಗೂ ಡಾ. ಸಿದ್ದಲಿಂಗಯ್ಯ ಪ್ರರಿಷ್ಠಾನದ ಅಧ್ಯಕ್ಷರೂ ಹಾಗು ಸರಳ ಸಜ್ಜನರೂ ಆದ ಶ್ರೀಯುತ ಮುದಲ್ ವಿಜಯ್ ರವರ ಜನ್ಮದಿನವಿಂದು, ನಾಡಿನ ಅನೇಕ ಯುವ ಬರಹಗಾರರನ್ನು ನನ್ನನ್ನೂ ಒಳಗೊಂಡಂತೆ ಪೋಷಿಸುತ್ತಾ ಎಲ್ಲರನ್ನು ಸಾಹಿತ್ಯದೆಡೆ ಒಲುಮೆ ಬೆಳೆಸಿಕೊಳ್ಳುವಂತೆ ಅರಿವನ್ನು ಮೂಡಿಸುತ್ತಾ ತಾಯಿ ಭುವನೇಶ್ವರಿಯ ಸೇವೆಯನ್ನು ಮಾಡುತ್ತಾ ಸಾಗುತ್ತಿದ್ದಾರೆ. ಇವರು ಮೂಲತಃ ತಮಿಳುನಾಡಿನವರು, ಇವರ ತಂದೆ ತಾಯಿಯರ ಮಾತೃ ಭಾಷೆ ತಮಿಳು. ಇವರು ಬೆಂಗಳೂರಿಗೆ ಬಂದಾಗ ಇವರ ತಂದೆ ತಾಯಿ ಇವರನ್ನು ಕನ್ನಡ ಮಾಧ್ಯಮದ ಶಾಲೆಗೆ ಸೇರಿಸಿದರು. ಆಗ ಬೆಂಗಳೂರಿನಲ್ಲಿ ತಮಿಳು ಮಾಧ್ಯಮ ಶಾಲೆಗಳು, ಆಂಗ್ಲ ಮಾಧ್ಯಮದ ಶಾಲೆಗಳು  ಸಾಕಷ್ಟು ಇದ್ದರೂ ಇವರನ್ನು ಇವರ ತಾಯಿ ಮಗ ಕನ್ನಡದಲ್ಲೇ ಓದಲೆಂದು ಕನ್ನಡ ಮಾಧ್ಯಮಕ್ಕೆ ಸೇರಿಸಿದರು. ಇವರು ಕನ್ನಡಾಭಿಮಾನವನ್ನು ಬೆಳೆಸಿಕೊಳ್ಳುತ್ತಾ ಸಾಗಿದರು. ಕನ್ನಡ ಭಾಷೆ, ಕನ್ನಡ ಸಾಹಿತಿಗಳ ಬಗ್ಗೆ ಆಳವಾದ ಅಧ್ಯಯನ ಮಾಡಿರುವ ಇವರು ಕನ್ನಡದಲ್ಲಿ ಕವಿತೆಗಳನ್ನು ಬರೆಯಲು ಕೂತರೇ ಓದುಗನಿಗೆ ಅದೊಂದು ಹಬ್ಬವೇ ಸರಿ. ಕನ್ನಡ ಪದಗಳು, ವ್ಯಾಕರಣದ ಮೇಲೆ ಅವರಿಗಿರುವ ಪ್ರಭುತ್ವ, ಮತ್ತು ಕಾವ್ಯ ಕಟ್ಟುವ ದಾಟಿ ಎಂಥವರನ್ನು ವಿಸ್ಮಿತಗೊಳಿಸುತ್ತದೆ, ಯಾವ ಹಿರಿಯ ಕವಿಗಳಿಗೂ ಕಮ್ಮಿಯಿಲ್ಲದಂತೆ ಇವರ ಕವಿತ್ವ ಗಟ್ಟಿಯಾಗಿದೆ. ಅನೇಕ ಕವನ ಸಂಕಲನ ಹಾಗೂ ಕಾದಂಬರಿಗಳನ್ನು ಹೊರತಂದಿದ್ದಾರೆ. ಇವರ ಗೀತೆಗಳು ಭಾವಗೀತೆಗಳಾಗಿ ಜನಪ್ರಿಯವಾಗಿವೆ. ಅನೇಕ ವರ್ಷಗಳಿಂದ ಸಾಹಿತ್ಯ ಕೃಷಿಯಲ್ಲಿ ಗಟ್ಟಿಯಾಗಿದ್ದರೂ ಇವರಿಗೆ ಯಾವುದೇ ಪುರಸ್ಕಾರ ಒದಗಿಬಂದಿಲ್ಲ. ಅವೆಲ್ಲಾ ಪಾಪಾ ತೀರ ಸ್ವಾಭಿಮಾನಿಯಾದ ಇಂತವರಿಗೆ ಒಲಿಯುವುದು ಕಷ್ಟ. ಎಷ್ಟೋ ಬಾಲಿಶ ವ್ಯಕ್ತಿಗಳನ್ನು ಹೊಗಳಿ ಸನ್ಮಾನಿಸಿ ದುಂದು ವೆಚ್ಚ ಮಾಡುವ ಬದಲು ಇಂತ ಒಬ್ಬೊಬ್ಬರನ್ನು ಆಯ್ದು ಜಾಣ್ಮೆ ಮೆರೆದಲ್ಲಿ ಅದು ಆ ಪ್ರಶಸ್ತಿಗಳಿಗೂ ಗೌರವ ದೊರೆತಂತೆ..! ಏನು ಮಾಡುವುದು ಕೆಲವರಿಗೆ ಅರ್ಹತೆ ಇದ್ದರೂ ಅದು ಉಪಯೋಗಕ್ಕೆ ಬರುವುದಿಲ್ಲ. ಏನೇ ಆಗಲಿ ಜನರ ಮಧ್ಯೆಯಿಂದ ಬರುವ ದನಿಗಿಂತ ಮಿಗಿಲಾದ ಪ್ರಶಸ್ತಿ, ಪುರಸ್ಕಾರ ಯಾವುದೂ ಇಲ್ಲ. ಜನದನಿಯಲ್ಲಿ ಗೆದ್ದವರೇ ನೈಜ ಸನ್ಮಾನಿತರು, ನಾವು ಮಾಡುವ ಸೇವೆಗೆ ಪುರಸ್ಕಾರದ ಮಾನದಂಡವೇಕೆ..? ಎಂದು ಕೇಳುತ್ತಾ ಸುಮ್ಮನೇ ತಮ್ಮ ಪಾಡಿಗೆ ತಾವು ತಮ್ಮ ಜೀವನದ ಜೋಳಿಗೆಯ ಜೊತೆಗೆ ಕನ್ನಡದ ದೀವಟಿಗೆ ಹಿಡಿದು ಕನ್ನಡಕ್ಕಾಗಿ ಚಲಿಸುತ್ತಿರುವ ಒಬ್ಬರು ಜೋಗಿಯಂತೆ ಕಾಣುತ್ತಾರೆ. ಸಾಹಿತ್ಯದ ಬಗ್ಗೆ ಏನೇ ಗೊಂದಲವಿದ್ದರೂ ಯಾವುದೇ ಸಮಯದಲ್ಲಿ ಕರೆಮಾಡಿದರೂ ಸ್ಪಂದಿಸುವ ಸರಳ ಹಾಗೂ ಅಷ್ಟೇ ಚತುರ ಸಾಹಿತ್ಯಾಭಿಮಾನಿ. ಬೆಂಗಳೂರಿನ ಅನೇಕ ಜನ ನಮ್ಮ ರಾಜ್ಯದವರೇ ಕನ್ನಡ ಮರೆತು ಬೇರೆ ಭಾಷೆ ಮಾತನಾಡುತ್ತಿರುವ ಈ ಘಳಿಗೆಯಲ್ಲಿ ಕನ್ನಡ ಕಂಪನ್ನು ಹರಡುತ್ತಾ ನಾಡಿನುದ್ದಗಲಕ್ಕೂ ಯುವ ಕನ್ನಡ ಬರಹಗಾರರಿಗೆ ಆತ್ಮೀಯರಾಗಿರುವ ಇವರನ್ನು ಈ ಸುಸಮಯದಲ್ಲಿ ಅಭಿನಂದಿಸೋಣ.. ಇವರು ನೂರು ವರ್ಷಗಳ ಕಾಲ ಗಟ್ಟಿಯಾಗಿ ನಾಡಿನುದ್ದಗಲ ತಾಯಿ ಭುವನೇಶ್ವರಿಯ ಸೇವೆ ಮಾಡಲೆಂದು ಬೇಡಿಕೊಳ್ಳೋಣ..ಈ ಮೂಲಕ ಕನ್ನಡವೂ ಎಲ್ಲರೆದೆಯಲಿ ಗಟ್ಟಿಯಾಗಲಿ ಎಂದು ಹಾರೈಸೋಣ..
ರಾಮಚಂದ್ರ ಸಾಗರ್