Sunday, 11 December 2016

ಬಕೇಟ್ ಹಿಡಿವ ಸಂತತಿ ನಾಶವಾಗಲಿ

  ವಿವೇಕಯುತ ಜಗದಲ್ಲಿ ಅವಿವೇಕಿಯಗಾದಿರು, ವಿವೇಕಿಗಳ ಸಂಗದಲ್ಲಿ ಅವಿವೇಕಿತನ ನೂಕದಿರು. ಇವು ನಾನೇ ಬರೆದ ಸಾಲುಗಳು, ಇನ್ನೊಮ್ಮೆ ಮೆಲುಕು ಹಾಕುತ್ತಾ ಕೂತಿದ್ದೇನೆ, ಜೊತೆಗೆ ತೀರ ಬುದ್ಧಿವಂತರೆನಿಸುಕೊಳ್ಳುವವರ ಕೆಲವು ಬಾಲಿಶತನದ ಪರಮಾವಧಿ ಕಂಡು ಮನಕ್ಕೆ ಬೇಸರವೆನಿಸುವುದಕ್ಕಿಂತ ಇದು ಅವರ ಹೊಟ್ಟೆಪಾಡೋ ಇಲ್ಲ ತಮ್ಮ ಸ್ವಂತಿಕೆಯನ್ನು ಮಾರಿಕೊಂಡ ಅವರ ಗತಿಯೋ ಇಲ್ಲವೇ ಅವರ ಬದುಕಿನ ದಾಟಿಯೇ ಹಾಗೋ ಎಂಬ ಚಿಂತನೆ ಕಾಡುವುದಂತೂ ಸಹಜವಾಗಿದೆ. ಎಲ್ಲೇ ನೋಡಲಿ, ಯಾರೇ ಒಬ್ಬ ಉನ್ನತವೆನ್ನಿಸಿದರೆ ಅದು ಅಧಿಕಾರದಲ್ಲಿದ್ದರಂತೂ ಹೇಳತೀರದು ಆತ ಏನೇ ಮಾಡಿದರೆ ಆತನಿಗೆ ಜೈ ಎನ್ನುತ್ತಾ ಆತನಿಗೆ ಇನ್ನಟ್ಷು ಅಟ್ಟಕ್ಕೆ ಏರಿಸುತ್ತಾ ತಮ್ಮ ಅನೀತಿ ಬುದ್ಧಿಯಿಂದ ಅವನಿಗೆ ಹತ್ತಿರವಾಗುವುದು, ಮತ್ತೂ ಮುಂದುವರೆದು ಆತನಿಗೆ ಸಾಧ್ಯವಿದ್ದ ಎಲ್ಲಾ ರೀತಿಯ ಕುಟಿಲ ತಂತ್ರಗಳಿಗೆ ಸಹಕಾರವನ್ನು ನೀಡುವುದು. ಕೆಲವರು ತಮ್ಮ ಪಂಥಗಳಿಗಾಗಿ ಬಡಿದಾಡುತ್ತಾರೆ, ಅವು ಸುಳ್ಳಾಗಲಿ, ಪೊಳ್ಳಾಗಲಿ, ಜೊಳ್ಳಿನ ಕಣಜವಾಗಿರಲಿ ಅವುಗಳನ್ನು ಗಟ್ಟಿಯೆಂದು ಗುಡುಗುವುದಷ್ಟೇ ಅವರ ಕೆಲಸ. ಕಾರಣ ಅವರು ಆ ಪಂಥದ ಅನುಯಾಯಿಗಳು, ಅವರು ಸತ್ಯವನ್ನು ಸುಳ್ಳೆಂದು ನಂಬಿಸಲು ತಮ್ಮಿಂದ ಏನೆಲ್ಲ ಸಾಧ್ಯವೆಂದು ಚಿಂತಿಸುತ್ತಾ ದಿನಕಳೆಯುವುದು. ಕಂಡಿತಾ ಇದರಿಂದ ನಾಡು, ದೇಶವೂ ಉದ್ಧಾರವಾಗೋಲ್ಲ. ತಾವು ಒಪ್ಪಿದ ಮಠಾಧಿಪತಿಯಿರಲಿ, ಪಕ್ಷದ ನಾಯಕನಿರಲಿ, ಧರ್ಮದ ಮುಖಂಡನಿರಲಿ, ಪಂಥಗಳ ಮುಖ್ಯ ಸೂತ್ರ ಚಿಂತಕನಿರಲಿ, ಇಲ್ಲವೇ ತಾವು ಒಪ್ಪಿದ ಸಮುಧಾಯದ ಜಾತಿಯ ಮುಖ್ಯಸ್ತನಿರಲಿ ಅವರು ಏನೇ ಅನಾಚಾರ ಮಾಡಲಿ ಅದನ್ನು ಕಂಡಿಸುವುದಿಲ್ಲ. ಅವರ ಅನುಯಾಯಿಗಳು ಅವರನ್ನು ಉಳಿಸಲು ಶತಾಯ ಗತಾಯ ಗುದ್ದಾಡುತ್ತಾ ಬಡಿದಾಡುತ್ತಾರೆ, ಸಾಧ್ಯವಿದ್ದರೆ ಸಮಾಜದ ಅಶಾಂತಿಗೂ ಕಾರಣರಾಗುತ್ತಾರೆ, ಅವರು ಬೆಂಕಿ ಹಚ್ಚಿದ ಹಳೆಯ ಹರಿದ ಟೈರುಗಳ ಜ್ವಾಲೆ ರಸ್ತೆಯ ಮೇಲೆ ನಿಗಿ ನಿಗಿದು ಉರಿಯುತ್ತದೆ ಜೊತೆಗೆ ಇವರ ಕಣ್ಣಾಲಿಯಲ್ಲೂ ಜ್ವಾಲೆ ಉರಿಯುತ್ತಿರುತ್ತದೆ, ಕೇಳುವ ಧೈರ್ಯ ಸಾಮಾನ್ಯ ಜನತೆಗೆ ಇರುವುದೇ..? ಕಂಡಿತಾ ಕೇಳುವುದೇ ಅಪರಾದವೆನಿಸುವ ಮಟ್ಟಿಗೆ ಸಾಮಾನ್ಯನ ಸ್ಥಿತಿಗೆ ನಮ್ಮ ಸಮಾಜ ತಲುಪುತ್ತಿರುವುದರ ಗತಿ ನೋಡಿದರೆ, ಇದು ದೇಶದ ಸಾಮಾನ್ಯನ ದನಿಯು ಕ್ಷೀಣವಾಗುವುದರ ಪ್ರತೀಕವೆನಿಸುತ್ತಿದೆ.
     ಕೆಲವರು ಮಾಡಿದ್ದು ತಪ್ಪಲ್ಲದಿದ್ದರೂ ಅದನ್ನು ತಪ್ಪೆಂದು ಸಮಾಜವನ್ನು ಒಪ್ಪಿಸಬೇಕೆಂಬ ಛಲ ಒಂದು ಪಂಥದ್ದಾದರೆ ಇನ್ನೊಂದು ಪಂಥದ ಚಿಂತೆ ಇದರ ಮಧ್ಯೆ ತಮ್ಮ ಲಾಭದ ಬೇಳೆ ಬೇಯಿಸಿಕೊಳ್ಳುವುದಾಗಿರುತ್ತದೆ. ಪ್ರತಿಯೊಂದು ಚರ್ಚೆಯೂ ಆರೋಗ್ಯಕರವಾಗಿದ್ದಲ್ಲಿ ಅದು ಸಮಾಜದ ಅರಿವಿಗೆ ಬರುತ್ತದೆ. ಆದರೆ ಅರಿವಿಗೆ ಬಂದರೂ ಅದನ್ನು ಒಪ್ಪದೇ ತಪ್ಪೆಂದು ಬಿಂಬಿಸಲೇಬೇಕೆಂಬ ಹಠಹಿಡಿದು ಕುತ್ತವರನ್ನು ಸರಿಮಾಡುವುದು ಹೇಗೆ. ಈ ರೀತಿ ಪ್ರಸಂಗಗಳಿಂದಲೇ ಎಲ್ಲರಿಂದ ನುಣುಚಿಕೊಂಡು ಕೆಲವರು ಸಾಚಾಗಳಂತೆ ಬಿಂಬಿತವಾಗುತ್ತಾರೆ. ಸಮಾಜದಲ್ಲಿ ಸಿಗುವ ಪ್ರಶಸ್ತಿ ಪುರಸ್ಕಾರಗಳು ಇತ್ತೀಚೆಗೆ ವರ್ಗಕ್ಕೆ ಮತ್ತು ಜಾತಿಗೆ ಜೊತೆಗೆ ಪಂಥಕ್ಕೆಂದು ಹಂಚಿಹೋಗುತ್ತಿವೆ, ಬಾಲಿಶಹ ವ್ಯಕ್ತಿಗಳಿಗೆ ಪುರಸ್ಕರಿಸಿ ಬೀಗಿದರೆ ಅದು ಆ ಪ್ರಶಸ್ತಿಗೆ ಮತ್ತು ಪುರಸ್ಕಾರಗಳಿಗೆ ಮಾಡಿದ ಅವಮಾನವೇ ಹೊರತು ಇದರಿಂದು ಕಾಲಿ ಕೊಡದಂತಿರುವವನಿಗೆ ನೀಡಿದ ಪ್ರಶಸ್ತಿ, ಪುರಸ್ಕಾರದಿಂದ ಆತನಲ್ಲಿ ಯಾವುದೇ ದಿವ್ಯ ಜ್ಞಾನ ಉದಯಿಸುವುದಿಲ್ಲ. ಮತ್ತು ನಾಡಿಗೆ ಯಾವುದೇ ರೀತಿಯ ಪ್ರಯೋಜನವೆನಿಸುವುದಿಲ್ಲ. ಜೊತೆಗೆ ನಾವು ನಾಡಿಗೆ ಸಮಾಜಕ್ಕೆ ಯಾವುದೇ ಸಂದೇಶ ರವಾನಿಸಿದಂತಾಗುವುದಿಲ್ಲ. ಅವರ ಜಾತಿಯನ್ನು ಓಲೈಸಿದಂತಾಗುತ್ತದೆ ಅಷ್ಟೇ. ತಮಗೆ ಬೇಕಾದವರೆಂದು ಆರಾಧಿಸುವುದರ ಬದಲಿಗೆ ನಾಡಿಗೆ ಅಭಿವೃದ್ಧಿಗೆ ಮತ್ತು ಮಾರ್ಗದರ್ಶಕರೆನಿಸುವವರನ್ನು ಆರಾಧಿಸುವುದರ ಮೂಲಕ ಭಾವೈಕ್ಯತೆ ಬೆಳೆಸಬೇಕು. ಆದರೆ ಅದವೂ ಗೌಣವಾಗಿದೆ. ಎಲ್ಲದಕ್ಕೂ ಈ ಬಕೇಟ್ ಹಿಡಿವವರೇ ಬಂದು ಅಡ್ಡಗಾಲಾಗಿ ಎಲ್ಲ ಸೌಲಭ್ಯವನ್ನು ನೈಜ ಫಲಾನುಭವಿಗಳಿಂದ ಕಸಿಯುತ್ತಾರೆ. ಸುಮ್ಮನೇ ಇವರ ಕತ್ತಿಗೊಂದು ಹಾರ ಬೀಳುತ್ತದೆ, ಅದೂ ಯಾವ ಪುರುಷಾರ್ಥಕ್ಕೋ ಅರಿದಾಗುತ್ತದೆ. ಇಂತವರಿಂದ ಸಮಾಜ ಎಷ್ಟೊಂದು ಉದ್ದಾರವಾಗಿದೆ, ಇವರು ಮಾಡಿದ ನಾಡಿನ ಸೇವೆ, ಬಡತನ ನಿರ್ಮೂಲನ, ಸಾಮಾಜಿಕ ಸಮಾನತೆಗಾಗಿನ ಇವರ ಹೋರಾಟ ಅವಿಸ್ಮರಣೀಯವೆಂದು ಹಾರಹಾಕಿಕೊಳ್ಳುವವರನ್ನು ನಾವು ದಿನ ನಿತ್ಯ ನೋಡುತ್ತೇವೆ, ನೋಡಲೇಬೇಕಾದ ಸ್ಥಿತಿಯಲ್ಲಿ ಬಿದ್ದಿದ್ದೇವೆ. ಆದರೂ ಏಕೆ ದೇಶದಿಂದ ಬಡತನ, ಸಾಮಾಜಿಕ ಅಸಮಾನತೆ, ಜಾತಿ, ಅಸ್ಪøಷ್ಯತೆ, ಮೋಸ, ವಂಚನೆ ಭ್ರಷ್ಟಾಚಾರ ತೊಲಗಿಲ್ಲ. ಏಕೆಂದರೆ ಎಲ್ಲವೂ ಬಕೇಟ್ ಹಿಡಿವವರ ಕೈವಶದಲ್ಲಿರಲು ವಿವೇಕಿಗಳಿಗಳಿಗೆ(ಸಾಮಾನ್ಯನಿಗೆ) ಜಾಗವೆಲ್ಲಿ..?
      ಸ್ವಾಭಿಮಾನಿಗಳಿಗೆ ನಮ್ಮ ಸಮಾಜದಲ್ಲಂತೂ ಕಂಡಿತಾ ಗೌರವವಿದೆ, ಅದು ಈ ದೇಶದ ಮಣ್ಣಿನ ಗುಣ, ಎಲ್ಲರೂ ಸ್ವಾಭಿಮಾನವನ್ನು ಹೆಚ್ಚಿಸಿಕೊಳ್ಳುತ್ತಾ, ಸತ್ಯವನ್ನು ಸತ್ಯವೆನ್ನಿಸುತ್ತಾ ಈ ಬಕೇಟ್ ಹಿಡಿವ ಸಂತತಿಯನ್ನು ನಾಶಗೊಳಿಸಲು ಎಲ್ಲರೂ ಪ್ರಯತ್ನಿಸೋಣ, ಎಲ್ಲರೂ ಕೈ ಜೋಡಿಸೋಣ. ಒಳ್ಳೆಯ ಕಾರ್ಯಕ್ಕೆ ಅಭಿವೃದ್ಧಿಪರ ಚಿಂತನೆಗಳಿಗೆ ಜೈ ಎನ್ನೋಣ..