ನಿಮ್ಮ ಹತಾಶೆಯು ಇನ್ನೊಬ್ಬರಿಗೆ ನಿಮ್ಮನ್ನು ಇನ್ನಿಲ್ಲದಂತೆ ಮಾಡುವ ಆಯುಧವಾಗುತ್ತದೆ, ನೀವು ಹತಾಶೆಯಲ್ಲಿ ಮುಳುಗಿದ್ದ ಸಮಯವೇ ಅವರಿಗೆ ವರದಾನವಗುತ್ತದೆ, ಸಮಯಕ್ಕಾಗಿ ಹೊಂಚಿ ಕುಳಿತ ಶತ್ರುಗಳು ನಿಮ್ಮನ್ನು ಮುಗಿಸಲು ಇನ್ನಿಲ್ಲದಂತೆ ಆಗ ಮುಗಿಬಿದ್ದರೆ ನೀವು ಏಳುವುದು ಅಸಾಧ್ಯ, ಆದ್ದರಿಂದ ನೀವುಗಳು ಹತಾಶೆಯೆಂಬುದನ್ನು ತೋರಿಸದೇ ಸಕಾರಾತ್ಮಕ ಭಾವದಲ್ಲಿರಬೇಕು. ಸೋಲು, ನೋವು, ನರಳಿಕೆ, ಕಾಯಿಲೆಗಳು, ಹಣಕಾಸು ತೊಂದರೆ ಸಾಮಾನ್ಯವಾಗಿ ನಮ್ಮನ್ನು ಕಾಡುತ್ತವೆ. ಎಲ್ಲ ಸಮಯದಲ್ಲೂ ಉನ್ನತಿಯು ಸಾಧ್ಯವಿಲ್ಲ. ಕೆಲವೊಮ್ಮೆ ನಮ್ಮ ಪ್ರಯತ್ನ ಎಷ್ಟೇ ಗಟ್ಟಿಯಾಗಿದ್ದರೂ ಸೋಲೆಂಬ ಕಹಿಯು ಅಪ್ಪುತ್ತದೆ, ಬಿಡದೇ ಕಾಡುತ್ತದೆ. ಆಗ ನಾವು ಮಾನಸಿಕವಾಗಿ ಜರ್ಜರಿತವಾಗುವುದು ಸಾಮಾನ್ಯ, ನೋವು ತುಂಬಿದ ಮನದಲ್ಲಿ ಬದುಕುವುದು ವಿಧಿಬರಹವಾಗುತ್ತದೆ. ಆದರೆ ಆ ನೋವಿಗೆ ಬೆದರಿ ಕೂತರೇ ನಮಗೆ ನಾವೇ ಶತ್ರುವಾದಂತೆ, ಮನದ ಅಳುಕೇ ನಮ್ಮನ್ನು ಕುಗ್ಗಿಸುವ ಆಯುಧವಾಗುತ್ತದೆ, ಜೊತೆಗೆ ಹಗೆಯುಳ್ಳ ಮಂದಿಗೆ ಅದು ಸಕಾಲವಾಗಿ ನಮ್ಮನ್ನು ಮೆಟ್ಟಿಬಿಡುತ್ತಾರೆ. ಎಲ್ಲದಕ್ಕೂ ಗಟ್ಟಿಯಾದ ಗುಂಡಿಗೆಯಿರಬೇಕು, ಗಟ್ಟಿಯಾದ ಗುಂಡಿಗೆಯ ಸಕಾರಾತ್ಮಕ ಭಾವದಲ್ಲಿ ಎಲ್ಲಾ ಮುಗಿದ ಮೇಲು ಅರಳುವ ಹೂವು ಇದ್ದೇ ಇರುತ್ತದೆ. ಎಲ್ಲಾ ಬಿರುಗಾಳಿಗೆ ನೂಕಿಹೋದರೂ, ಸುನಾಮಿಗೆ ತುತ್ತಾದರೂ ಎಲ್ಲೋ ಒಂದು ಸಣ್ಣ ಜೀವಸೆಲೆಯಾದರೂ ಉಳಿಯುತ್ತದೆ, ಉಳಿಯುವುದೆಂಬ ಆಸೆಯ ಜೊತೆಗೆ ಗೆಲ್ಲುವೆನೆಂಬ ಹಠವೂ ಇರಬೇಕು. ಸೋತರೂ ಗೆದ್ದಂತೆ ಈ ಜಗದಲ್ಲಿ ನಗಬೇಕು, ಬಿದ್ದರೂ ನೋವಾಗದಂತೆ ನಟಿಸಬೇಕು, ಕಾಣೆಯಾದ ಸುಖಕೆ ಚಿಂತಿಸಿ ಸಮಯವನ್ನು ಕರಗಿಸದೇ ನಿತ್ಯ ಹಠವಂತ ಕಾರ್ಯದಲ್ಲಿ ಸುಖವೇ ನಮ್ಮನ್ನರಸಿ ಬರುವಂತೆ ಮಾಡಬೇಕು. ನೋವು, ಬವಣೆಗಳಿಗೆ ಹೆದರಿ ನಮ್ಮ ಕನಸುಗಳನ್ನು ಸಾಕು ಮಾಡಬಾರದು, ಬದುಕೊಂದು ನಿರಂತರ ಚಲಿಸುವ ನೌಕೆಯಾಗಬೇಕು. ಬದುಕಿಗೆ ಕೊನೆಯೆಂಬುದು ನಿಶ್ಚಿತ ಮತ್ತು ಖಚಿತವಾದರೂ ಬಾಳಲ್ಲಿ ಎದುರಾದ ಬವಣೆಗೆ ಕೊನೆ ಸನಿಹವೆಂದು ಎಂದಿಗೂ ಅಳುಕಬಾರದು. ಕೊನೆಯನ್ನು ದೂರತಳ್ಳುವ ಆತ್ಮಸ್ತೈರ್ಯವಿದ್ದಲ್ಲಿ ಸಾವು ಹೆದರುತ್ತದೆ, ಮನಬಲವಿದ್ದಲ್ಲಿ ದೈಹಿಕ ಬಲವೂ ಗಟ್ಟಿಯಾಗಿರುತ್ತದೆ. ಕೊನೆ ಎಂಬುದು ದಿಟವೆಂದು ಕೊರಗುವವರು ಏನೇ ಆಗಲಿ ಒಮ್ಮೆ ನೋಡಿ ಬಿಡೋಣ, ಆಟ ಮುಗಿಸಿ ಹೋಗುವುದರೊಳಗೆ ಒಂದು ಕೈ ಎಂದು ಮುನ್ನುಗ್ಗಿದವರು ಇಂದು ಜೀವ ಮತ್ತು ಜೀವನ ಎರಡನ್ನು ಗೆದ್ದ ಅನೇಕ ಉದಾಹರಣೆಗಳಿವೆ. ಒಬ್ಬರು ಅಪಘಾತದಲ್ಲಿ ತಮ್ಮ ಕೈಕಾಲು ಸ್ವಾದವನ್ನು ಕಳೆದುಕೊಂಡವರು ಇನ್ನೆಂದು ತಮ್ಮಿಂದ ಆಗದು ಎಂದು ಕುಳಿತುಕೊಳ್ಳದೇ ಹಠವಿಡಿದು ತಾವು ಕೂತಲ್ಲೇ ಒಂದು ಗೃಹ ಉಧ್ಯಮವನ್ನು ಕಟ್ಟಿ ಸ್ವಾವಲಂಬಿ ಬದುಕು ನಡೆಸುತ್ತಿದ್ದಾರೆ. ಹೀಗೆ ಉದಾಹರಣೆಗಳು ಅನೇಕ ಇವೆ. ಬದುಕು ಮುಗಿದೇ ಹೋಯಿತು, ಎದುರಾಳಿಯು ನಮ್ಮನ್ನು ಮುಗಿಸಿಯೇ ಬಿಟ್ಟ ಎಂದಾಗಲೂ ಹೋರಾಟದ ಕೊನೆ ಕ್ಷಣದಲ್ಲೂ ಗೆಲುವು ನಮ್ಮದಾಗುತ್ತದೆ. ಒಲಂಪಿಕ್ ಕುಸ್ತಿಯಲ್ಲಿ ಕಂಚಿನ ಪದಕ ಗೆದ್ದ ಸಾಕ್ಷಿ ಮಲಿಕ್ ಕೊನೆವರೆಗೂ ಅಂಕಗಳಲ್ಲಿ ತೀವ್ರ ಹಿನ್ನಡೆಯಲ್ಲಿದ್ದರೂ ಕೊನೆಯ 20 ಸೆಕೆಂಡ್ ನಲ್ಲಿ ಆಕೆ ಆಟವನ್ನೇ ಬದಲಾಯಿಸಿದಳು.
ಅನೇಕ ವಾಸಿಯಾಗದೇ ಬಳಲುವ ತೀವ್ರತರವಾದ ರೋಗದಿಂದ ಬಳಲುವವರೂ ಕೂಡ ಎಷ್ಟೋ ಮಂದಿಗಳು ತಾವು ಹೆದರದೇ, ಹೋಗುವುದೇ ವಿಧಿ ಬರಹವಾದಲ್ಲಿ ಇನ್ನೇಕೆ ಎಂದು ಅಂಜದೇ ಸಾವನ್ನು ಧೈರ್ಯದಿಂದ ಎದುರು ನೋಡುವವರು ಎಷ್ಟೋ ಜನ ವರ್ಷಗಳುರುಳಿದರೂ ಬಂಡೆಯಂತೆ ಗಟ್ಟಿಯಾಗಿದ್ದಾರೆ. ಎಲ್ಲವೂ ಅವರರವ ಮನೋಸ್ಥೈರ್ಯವೇ ಹೊರತು ಇನ್ನೇನಲ್ಲ. ಆದ್ದರಿಂದ ಮನೋಸ್ಥೈರ್ಯವಿಲ್ಲದೇ ಯಾರೂ ಕೂಡ ಅರೆಘಳಿಗೆಯೂ ಬದುಕುಳಿಯಲು ಸಾಧ್ಯವಿಲ್ಲ. ಆದ್ದರಿಂದ ಹೆದರಿಕೆಯಲ್ಲಿ ಕಾಲ ಕಳೆಯದೇ ಸಕಾರಾತ್ಮಕ ಭಾವದಲ್ಲಿ ಬಂಡುತನವನ್ನೇ ಮೈಗೂಡಿಸಿಕೊಂಡು ಬದುಕುವುದು ಜೀವಕ್ಕೆ ಮತ್ತು ಬದುಕಿಗೆ ಎರಡಕ್ಕೂ ಉತ್ತಮ. ಅನ್ಯರ ಹಂಗಿಕೂ ಸಿಗದೆ ಬಾಳಬಹುದು. ಪಚನವಾಗದ ಕಹಿಗೆ ಚಿಂತಿಸುತ್ತಾ ಕೂರುವ ಬದಲು ಸಕಾರಾತ್ಮಕ ಭಾವದಲ್ಲಿ ಅರಳುವ ಬೆಳಕನ್ನು ನಾವು ಅಪ್ಪಬೇಕು. ಆಗದು ಎಂಬ ಜಾಗದಲ್ಲಿ ಆಗುತ್ತದೆ ಎಂಬುದನ್ನು ಬರೆಯಬೇಕು, ಇದು ಎಲ್ಲರ ಬದುಕಾಗಬೇಕು, ಹಠವಿರುವ ಮನದಲ್ಲಿ ಗೆಲುವು ಎಲ್ಲರದಾಗಬೇಕು ಮತ್ತೂ ಇದು ಸೌಹಾರ್ದ ಬದುಕನ್ನು ಕಟ್ಟುವುದಾಗಿರಬೇಕೆಂಬುದು ನನ್ನಾಶಯ...
ರಾಮಚಂದ್ರ ಸಾಗರ್