Monday, 12 December 2016

ಸಂಗೀತದಲೆಯಲ್ಲಿ ಮೋಡಿಮಾಡಿದ ನನ್ನವರು..

       ಮುಖಪುಟದ ಲೋಕವೇ ಹಾಗೇ, ಅನೇಕರು ಸಿಗುತ್ತಾರೆ, ಅದು ಆಕಸ್ಮಿಕವಾದರೂ ಅವರಿಂದ ಕೆಲವೊಮ್ಮೆ ಸಿಗುವ ಸ್ನೇಹ ಸಿಹಿ ಸಿಂಚಿಸಿ ಮನ ಬೆಸೆದರೆ ಇನ್ನೂ ಕೆಲವೊಮ್ಮೆ ಮನಕ್ಕೆ ಘಾಸಿ ಮಾಡಿ ದೂರುವವರೂ ಇರುತ್ತಾರೆ. ಮುಖಪುಟವನ್ನು ಒಳ್ಳೆಯದಕ್ಕೂ  ಬಳಸಿಕೊಳ್ಳುವವರೂ ಇರುತ್ತಾರೆ. ಜಾತಿ, ಧರ್ಮವಂತ ಬಡಿದಾಡುವುದಕ್ಕೂ ಬಳಸುತ್ತಾರೆ, ಇನ್ನೂ ರಾಜಕೀಯದ ಎರಚಾಟವಂತೂ ಹೇಳತೀರದು, ಮನೆಯಲ್ಲಿ ಕೂತವನ ಮುಖಕ್ಕೂ ಮೊಬೈಲ್ ಮೂಲಕ ಕೆಸರು ಬಂದು ಬಿದ್ದ ಅನುಭವ, ಏನೇ ಆಗಲಿ ಎಲ್ಲವೂ ನಮ್ಮ ಸುತ್ತಲೂ ಸಮಾಜದಲ್ಲಿ ನಡೆಯುವ ಸಂಗತಿ ತಾನೇ, ಸಮಾಜದಲ್ಲಿನ ಬಿಂಬಕವಲ್ಲವೇ. ಕಂಡಿತಾ ಹೌದು, ಹಾಗಾಗಿ ಎಲ್ಲವನ್ನು ಮುಕ್ತವಾಗಿ ಸ್ವೀಕರಿಸಿಕೊಂಡು ಹೋಗಬೇಕು, ಕೈಲಾದಷ್ಟು ಉತ್ತಮ ಕೆಲಸವನ್ನು ಮಾಡಬೇಕು. ಉತ್ತಮ ಉದ್ದೇಶಕ್ಕೆ ಸದ್ಬಳಕೆಗೆ ಮಾರ್ಗವಾಗಬೇಕು. ಈ ನಿಟ್ಟಿನಲ್ಲಿ ಒಂದು ವಿನೂತನ ಪ್ರಯೋಗವೆಂಬಂತೆ ಶ್ರೀಯುತ ಶಶಿಕಾಂತ್ ರವರು ಮತ್ತು ಪ್ರಕಾಶ್ ಅಂಬರಕರ್ ರವರ ನೈತೃತ್ವದಲ್ಲಿ ಅರಳಿದ ‘ನನ್ನ ಗೀತೆ ನನ್ನವರ ಗಾಯನ’ ಯೋಜನೆಯು ಕನ್ನಡದ ಬೆಳವಣಿಗೆಗೆ ಪೂರಕವಾದದ್ದು, ಜೊತೆಗೆ ಗಬ್ಬೆದ್ದು ಬಿದ್ದಿರುವ ಕನ್ನಡ ಸಿನಿಮಾ ಗೀತೆಗಳಿಗೆ ಪರ್ಯಾಯ ಮಾರ್ಗವರಸಿದ ಪರಿ ಉತ್ತಮವಾಗಿದೆ, ಇಲ್ಲಿ ಅನೇಕ ಜನ ಹಿರಿಯ ಕವಿಗಳೂ ಇದ್ದಾರೆ, ಅನೇಕ ಜನ ಹೊಸಬರು ಇದ್ದಾರೆ, ದೇಶ, ನಾಡು, ನುಡಿಗಳ ಪ್ರೇಮದ ಜೊತೆಗೆ ಸಮಾಜದ ಸಾಮರಸ್ಯ ಬೆಸೆವ ಕವಿತೆಗಳಿವೆ, ಅವುಗಳಿಗೆ ತುಂಬಾ ಹಿತವಾಗಿ ಮಧುರ ದನಿಯನ್ನು ಶ್ರೀಮತಿ ಸಂಧ್ಯಾಲಕ್ಷ್ಮಿ ಯವರ ರಾಗ ಸಂಯೋಜನೆ ತುಂಬಾ ಮಾಧುರ್ಯತನ ತುಂಬಿದೆ. ಕವಿತೆಗಳ ಮೇಲೆ ಕಣ್ಣಾಡಿಸುತ್ತಾ ಹೋದೆ. ಎಂ.ಜಿ. ದೇಶಪಾಂಡೆಯವರ ಬಾಳು ಕವಿತೆಯ ಸಾಲುಗಳು “ಗುಲಾಬಿ ಕೆಳಗೆ ಮುಳ್ಳು ಆದರೂ ಅರಳಿದೆ
       ಆನಂದ ನೀಡುತ್ತಿದೆ ದುಃಖ ತಾನು ಹೇಳದೇ” ಬಾಳಿನ ತಿರುಳು ತಿಳಿಸುವ ಕವಿತೆ. ತುಂಬಾ ಒಳಾರ್ಥದ ದನಿಯನ್ನು ಹೇಳುತ್ತದೆ. ಹಾಗೂ ಶ್ರೀಯುತ ಡಾ. ಜೆ.ಎಸ್. ಪಾಟೀಲರ ಬದ್ದವಣ ಹಾಡು ಪ್ರೇಮದಂದಣವ ಏರಿಸುತ್ತದೆ. ಅಕ್ಕಮಹಾದೇವಿಯವರ “ಹೊಂಚು ಹಾಕುತಿದೆ ಕಾಮನಬಿಲ್ಲದು..ಕಣ್ಣಂಚಿನ ಬಣ್ಣಗಳ ಕದಿಯಲು ಸೋತು”..ಒಲವಗೀತೆ ಬಲು ಚೆಂದಾ ಇದೆ. ಬಳುದಿಂಗಳು ತಂಪಿರುಳಲಿ ಬೀಸುವ ತಣ್ಣನೆಯ ಗಾಳಿಯಲ್ಲಿ ನಿನ್ನ ನೆನಪುಗಳ ಕಚಗುಳಿ ಮನಕ್ಕೆ ಒಲವ ಕಂಪು ಸೂಸುತ್ತಾ ಅನುರಾಗದಲೆ ಬೀಸುವ ಪರಿ ಸೊಗಸುಭರಿತವಾಗಿದೆ. ಮೋಹಕಗೀತೆ. ಹಾಗೂ ಶ್ರೀಯುತ ರಾಜ್ ಆಚಾರ್ಯರ ‘ಬಾ ವಸಂತ’ ಪಕೃತಿಯ ಸಿರಿಯ ಮೇನೆಯಲ್ಲಿ ಸೊಬಗು ಹೊತ್ತು ತಂದಂತಿದೆ, ಕೇಳಲು ಹಾಗೂ ಸಾಹಿತ್ಯವೆರಡೂ ಪಕ್ವತೆಯಲ್ಲಿವೆ. ಹಾಗೂ ನನ್ನ ಪ್ರೀತಿಯ ಒಲವಿನ ಕವಿ ಸತೀಶ್ ಕೋಲಾರ ಅವರು ಇಲ್ಲಿ ಮೋಡಿ ಮಾಡಿದ್ದಾರೆ, ಒಲವ ರಂಗನ್ನು ಅವರ ಶಾಯಿಯಲ್ಲಿ ತುಂಬಿ ಬರೆದ ಪ್ರೀತಿಯ ಸಾಲುಗಳು ಅಮೋಘವಾಗಿವೆ, ಇರಲೇಬೇಕಲ್ಲವೇ..? ಗೀತೆಯನ್ನು ಕೇಳಲು ಅಷ್ಟೇ ಮುದ್ದಾಗಿದೆ. ನಾಡಿನ ಉತ್ತಮ ಚಿಂತಕರು ನಮ್ಮ ಸಿದ್ಧರಾಮ ಹೊನ್ಕಲ್ ರವರ ‘ಯಾರಿಗಾಗಿ ಹಾಡಲಿ’ ಇಂದಿನ ದೇಶದ ವಾಸ್ತವ ಕನ್ನಡಿ. ಈ ಕವಿತೆಯನ್ನೂ ಪ್ರತಿಯೊಬ್ಬರೂ ಕೇಳಲೇ ಬೇಕು, ದೇಶದುದ್ಧಗಲ ಭಾವೈಕ್ಯತೆ ಬೆಸೆಯಬೇಕು, ಶಾಂತಿ ಅರಳಬೇಕೆಂಬ ಅವರ ಮನದಾಸೆಯು ಕವಿತ್ವದಲ್ಲಿ ಗಟ್ಟಿಯಾಗಿ ಕೂಗಿದೆ. ಸಾರ್ಥಕತೆಯ ಭಾವವನ್ನು ತುಂಬಿದೆ, ಇದಕ್ಕೆ ಅವರಿಗೆ ಧನ್ಯವಾದಗಳನ್ನು ಹೇಳಲೇಬೇಕು. ‘ಗಾಂಧಿಯ ನಾಡಲ್ಲಿ ಗುಂಡಿನ ಮಳೆಗರೆದು ಭೂತಾಯಿ ನೆತ್ತರು ಕುಡಿದು ಅತ್ತಳಲ್ಲೋ..’ ಎಂಥಾ ಮಾರ್ಮಿಕ ನುಡಿಗಳು. ಕಟು ವಾಸ್ತವ ಹಾಗೂ ಸತ್ಯ. ಇನ್ನು ನನ್ನ ಆತ್ಮೀತ ಸ್ನೇಹಿತರಾದ ಗಂಗಾಧರ್ ಕಂಭೀಮಠ್ ರವರ ಪ್ರೇಮಸುಧೆ ಸುಂದರ ನೈದಿಲೆಯಂತೆ ನಗುತಿದೆ, ಅದಕ್ಕೆ ಅಷ್ಟೇ ಹಿತವಾದ ರಾಗದ ಮೇಳವು ಅದರ ಅಂದವನ್ನು ಮತ್ತಷ್ಟು ಅರಳಿಸಿದೆ. ಶ್ರೀಮತಿ ಪದ್ಮಾ ಶ್ರೀನಿವಾಸ್ ರವರ ಮೌನದೀಪ್ತಿ ಹಿತವೆನಿಸಿ ಮತ್ತೆ ಕೇಳಲು ಹೇಳುತ್ತದೆ ಕವಿತೆಯ ಪ್ರತಿ ಸಾಲುಗಳು. ಎಂದಿನಂತೆ ಅವರ ಶೈಲಿಯಲ್ಲಿ ಉತ್ತಮವಾಗಿ ಕವಿತೆಯನ್ನು ಕಟ್ಟಿದ್ದಾರೆ. ಶ್ರೀಯುತ ದೊರೆಸ್ವಾಮಿ, ವೆಂಕಣ್ಣನವರ, ಪ್ರಕಾಶ್ ಶಿರಗಂಬಿ, ವೆಂಕರೆಡ್ಡಿ ಯವರ ಸಾಹಿತ್ಯವು ಗಟ್ಟಿಯಿದ್ದು ರಾಗಕ್ಕಷ್ಟೇ ಅಲ್ಲದೇ ಬದುಕಿನ ಸಾರವನ್ನು ತಿಳಿಹೇಳಿವೆ. ಶ್ರೀಯುತ ಭೀಮಣ್ಣ ಹುಣಸೀಕಟ್ಟಿಯವರ ರೈತಾಭಿಮಾನದ ಕವಿತೆ ತುಂಬಾ ಇಷ್ಟವೆನಿಸಿತು. ಹೀಗೆ ಇನ್ನೂ ಅನೇಕ ಕವಿಗಳ ಕವಿತೆಗಳು ತುಂಬಾ ಸೊಗಸಾಗಿವೆ. ಎಲ್ಲವನ್ನೂ ನೀವು ಕೇಳಿಯೇ ಆನಂದಿಸಬೇಕು. ಶ್ರೀಮತಿ ಕಪಿಲಾ ಶ್ರೀಧರ್ ರವರ ನಭ ನೀಲಾಂಜನ ಕವಿತೆ ಮತ್ತೆ ಮತ್ತೆ ಕೇಳಬೇಕೆನಿಸಿತು. ಈ ಸಂಕಲನದಲ್ಲಿ ನನಗೆ ಅತೀ ಇಷ್ಟವಾದ ಗೀತೆಯಿದು. ತುಂಬಾ ಸೊಗಸಾಗಿದೆ. ‘ಜಗದಾದಿಯಲಿ ನೀನೊಂದು ಗೋಳ ನಾನೊಂದು ಗೋಳವಾಗಿ ಆದಿತ್ಯ ಮಂಡಲದ ಸುತ್ತ ತಿರುಗುತಾ ಪರಿಭ್ರಮಣ ಯಾತ್ರೆಯಾಗಿ..’ ಎಂತಾ ಕನಸು ಅಲ್ಲವೇ..ಸುಮಧುರ ಭಾವನೆಗಳ ಧಾರೆಯು ಮನದ ಉಲ್ಲಾಸವನ್ನು ಹೆಚ್ಚಿಸುತ್ತದೆ, ನಲಿಸುತ್ತದೆ. ಹೀಗೆ ಹಲವರ ಕವಿತೆಗಳ ಸಾಹಿತ್ಯವು ತುಂಬಾ ಸೊಗಸಾಗಿದ್ದು ಅದಕ್ಕೆ ಅಷ್ಟೇ ಹಿತವಂತಿಕೆಯ ರಾಗ ಸಂಯೋಜಿಸಿ ಮನ ನಲಿಸಿದ ಎಲ್ಲಾ ರಾಗ ಸಂಯೋಜಕರು, ಗಾಯಕರು ಸಂಪೂರ್ಣ ಯೋಜನೆಯ ಸಾರಥಿಗಳೆಲ್ಲರಿಗೂ ಧನ್ಯವಾದಗಳು..

ಇದು ಈ ಕಿರಿಯನ ಅನಿಸಿಕೆ...ಏನಾದರೂ ತಪ್ಪಿದ್ದರೆ ಕ್ಷಮಿಸಿ..
ವಂದನೆಗಳೊಂದಿಗೆ..
ಮತ್ತೆ ಮತ್ತೆ ಬರಲಿ..ನನ್ನವರ ಗೀತೆ..

ರಾಮಚಂದ್ರ ಸಾಗರ್