Saturday, 1 November 2025

ಕನ್ನಡವೇ ವರವು

 ಕನ್ನಡವೇ ವರವು ಕನ್ನಡವೇ ದೈವವು


ಕನ್ನಡವೇ ಉಸಿರು ಕನ್ನಡವೇ ಸಿರಿಯು..


ಕನ್ನಡವೇ ಅಮೃತವು ಕನ್ನಡವೇ ಸಂಪನ್ನವು

ಕನ್ನಡವೇ ಸಂಸ್ಕಾರವು ಕನ್ನಡವೇ ವೈಭವವು..


ಕನ್ನಡವೇ ಸುಯೋಗವು ಕನ್ನಡವೇ ಸತ್ಕಾರವು

ಕನ್ನಡವೇ ಸಂಭ್ರಮವು ಕನ್ನಡವೇ ಸತ್ರವು..


ಕನ್ನಡವೇ ವರವು ಕನ್ನಡವೇ ದೈವವು

ಕನ್ನಡವೇ ಉಸಿರು ಕನ್ನಡವೇ ಸಿರಿಯು..



ಕನ್ನಡವೇ ನಿಶ್ಚಯವು ಕನ್ನಡವೇ ನಿಬ್ಬೆರಗು

ಕನ್ನಡವೇ ಬೆಳಕು ಕನ್ನಡವೇ ಬೆಡಗು..


ಕನ್ನಡವೇ ಉಲ್ಲಾಸವು ಕನ್ನಡವೇ ಉನ್ನತಿಕೆಯು

ಕನ್ನಡವೇ ಸೌಖ್ಯವು ಕನ್ನಡವೇ ಸೌಂರ‍್ಯವು..


ಕನ್ನಡವೇ ವರವು ಕನ್ನಡವೇ ದೈವವು

ಕನ್ನಡವೇ ಉಸಿರು ಕನ್ನಡವೇ ಸಿರಿಯು..


ಕನ್ನಡವೇ ಕಾರುಣ್ಯವು ಕನ್ನಡವೇ ಕಾರುಬಾರು

ಕನ್ನಡವೇ ಕನಕವು ಕನ್ನಡವೇ ನಾಕವು..


ಕನ್ನಡವೇ ದಿವ್ಯತೆಯು ಕನ್ನಡವೇ ದಿಗಂತವು

ಕನ್ನಡವೇ ದಿಟವು ಕನ್ನಡವೇ ದೀವಟಿಗೆಯು..


ಕನ್ನಡವೇ ವರವು ಕನ್ನಡವೇ ದೈವವು

ಕನ್ನಡವೇ ಉಸಿರು ಕನ್ನಡವೇ ಸಿರಿಯು..


ಕನ್ನಡವೇ ಹುರುಳು ಕನ್ನಡವೇ ಬಲವು

ಕನ್ನಡವೇ ಅಮರವು ಕನ್ನಡವೇ ಜಗವು..


ಕನ್ನಡಿಗನೆ ಪುನೀತನು ಕನ್ನಡಗನೆ ಸಜ್ಜನನು

ಕನ್ನಡಿಗನೆ ಉದಾರಿಯು ಕನ್ನಡಿಗನೆ ಉದ್ಧಾರಕನು..


ಕನ್ನಡವೇ ವರವು ಕನ್ನಡವೇ ದೈವವು

ಕನ್ನಡವೇ ಉಸಿರು ಕನ್ನಡವೇ ಸಿರಿಯು..


ಕನ್ನಡಿಗನೆ ಉದಾತ್ತನು ಕನ್ನಡಿಗನೆ ಉಚ್ಛ್ರಾಯನು

ಕನ್ನಡಿಗನೆ ಸೌಹರ‍್ದನು ಕನ್ನಡಿಗನೆ ಸೌಷ್ಠವನು..


ಕನ್ನಡ ನುಡಿಯೆ ಸ್ವಾರಸ್ಯದ ದನಿಯು

ಕನ್ನಡ ನುಡಿಯೆ ಜ್ಞಾನದ ಸಿದ್ಧಿಯು..


ಕನ್ನಡವೇ ವರವು ಕನ್ನಡವೇ ದೈವವು

ಕನ್ನಡವೇ ಉಸಿರು ಕನ್ನಡವೇ ಸಿರಿಯು..


ಕನ್ನಡ ನುಡಿಯೆ ಪಾವನ ಸ್ವರವು

ಕನ್ನಡ ನುಡಿಯೆ ಹೃದಯಕೆ ಘನತೆಯು..


ಕನ್ನಡವೇ ವರವು ಕನ್ನಡವೇ ದೈವವು

ಕನ್ನಡವೇ ಉಸಿರು ಕನ್ನಡವೇ ಸಿರಿಯು..


Sunday, 17 August 2025

ಮುಂಗಾರು ಮಳೆಯಲಿ




ಮುಂಗಾರು ಮಳೆಯಲಿ ನಿನ್ನೊಂದಿಗೆ ನಲಿವ ಘಳಿಗೆ ಮತ್ತೆ ಬಂದಾಗಿದೆ ಗೆಳೆಯಾ..

ಸುರಿವಾ ಹನಿಗಳಲಿ ನಿನ್ನೊಂದಿಗೆ ಸಾಗುವ 

ಯೋಗ ಮತ್ತೆ ಬಂದಾಗಿದೆ..(ಪ)


ತುಂಟ ನೋಟದ ನಿನ್ನ ನಗುವು ನನ್ನೆದೆಗೆ  ಸಿಹಿ ಜೇನಾಗಿದೆ ಗೆಳೆಯಾ..

ಇನಿದಾದ ನಿನ್ನ ಮೆಲುನಗುವು ಹೃದಯಕೆ ನೀನೇ ಬೇಕೆಂದಿದೆ

ಗೆಳೆಯಾ..


ಮುಂಗಾರು ಮಳೆಯಲಿ ನಿನ್ನೊಂದಿಗೆ ನಲಿವ ಘಳಿಗೆ ಮತ್ತೆ ಬಂದಾಗಿದೆ ಗೆಳೆಯಾ..

ಸುರಿವಾ ಹನಿಗಳಲಿ ನಿನ್ನೊಂದಿಗೆ ಸಾಗುವ 

ಯೋಗ ಮತ್ತೆ ಬಂದಾಗಿದೆ..(ಪ)


ಪ್ರೀತಿ ತುಂಬಿದ ನಿನ್ನ ಮನಸಲಿ ನನ್ನದೇ ಹೆಸರು ಬೆರೆತಾಗಿದೆ ಇನಿಯಾ..

ನನ್ನ ಮನದ ಉಸಿರಲು ನಿನ್ನ ಹೆಸರೇ ಸದಾ ಗುನುಗುತಿದೆ ಗೆಳೆಯಾ..


ಮುಂಗಾರು ಮಳೆಯಲಿ ನಿನ್ನೊಂದಿಗೆ ನಲಿವ ಘಳಿಗೆ ಮತ್ತೆ ಬಂದಾಗಿದೆ ಗೆಳೆಯಾ..

ಸುರಿವಾ ಹನಿಗಳಲಿ ನಿನ್ನೊಂದಿಗೆ ಸಾಗುವ 

ಯೋಗ ಮತ್ತೆ ಬಂದಾಗಿದೆ..(ಪ)


ಮಳೆಯಲಿ ನಡುಗುವ ತನುವಿಗೆ ನಿನ್ನ ತುಂಟ ನೋಟವೇ ಬಿಸಿ ನೀಡಿದೆ ಗೆಳೆಯಾ..

ನಿನ್ನ ಸನಿಹದ ಸಹವಾಸ ಮನಕೆ ಸದಾ ಹಿತ ನೀಡಿದೆ ಗೆಳೆಯಾ..


ಒಲವಿನ ರಂಗಿನಲಿ ನಿನ್ನ ಪ್ರೇಮದ ಪಥದಲ್ಲಿ ನಾವು ಅನುದಿನವೂ ಸಾಗಬೇಕಿದೆ..

ಪ್ರೀತಿಯ ಮಳೆಯಲಿ ತನುಮನ ರಂಗೇರಿ ನಲಿಯಲಿ ಸಂಭ್ರಮದಿ...


ಮುಂಗಾರು ಮಳೆಯಲಿ ನಿನ್ನೊಂದಿಗೆ ನಲಿವ ಘಳಿಗೆ ಮತ್ತೆ ಬಂದಾಗಿದೆ ಗೆಳೆಯಾ..

ಸುರಿವಾ ಹನಿಗಳಲಿ ನಿನ್ನೊಂದಿಗೆ ಸಾಗುವ 

ಯೋಗ ಮತ್ತೆ ಬಂದಾಗಿದೆ..(ಪ)


ರಚನೆ: ರಾಮಚಂದ್ರ ಸಾಗರ್





Wednesday, 2 July 2025

ನಾನಲ್ಲವೇ..?

ಚಿತ್ರ ಕೃಪೆ: ಗಹನ ಗೌಡ

ಗುಳಿಕೆನ್ನೆಯಲಿ ಮೂಡಿದ ಅನುಪಮ ನಗುವಿನೊಡೆಯ 

ನನ್ನೊಲವಿನ ಮಮತೆಯ ಗೆಳೆಯಾ ನೀನಲ್ಲವೇ..


ಸೌಜನ್ಯದ ಹೆಜ್ಜೆಗೆ ಹೂಮಾಲೆಯ ತೋರಣವನು

ಪೋಣಿಸಿದ ಹೂವಿನ ಮನದೊಡೆಯ ನೀನಲ್ಲವೇ..


ಅನುರಾಗದ ಹಾಡಿಗೆ ಸಂಪ್ರೀತಿಯ ಪದಮಾಲೆಯು

ಕಟ್ಟಿದ ಒಲುಮೆಯ ಗಾರುಡಿಗನು ನೀನಲ್ಲವೇ..


ಅಕ್ಷಯದ ನಗುವನು ಬಾಳಿಗೆ ಕರುಣಿಸಿದವನು

ನಗುಧಾರೆಯ ಸಂಭಾವಿತ ಕರುಣಾಳು ನೀನಲ್ಲವೇ..


ತುಟಿಯಂಚಲಿ ಅರಳಿದ ಮೆಲುಗಾನದ ಸ್ವರವನು

ಪೋಣಿಸಿದ ಅಕ್ಕರೆಯ ಪೋರನು ನೀನಲ್ಲವೇ.. 


ಸಂಭ್ರಮದ ಜಾತ್ರೆಯಲಿ ಒಲವಿನ ತೇರನು

ನನಗಾಗಿ ಸಿಂಗರಿಸಿ ತಂದವನು ನೀನಲ್ಲವೇ..


ಹಸಿರುವನದ ಚೆಲುವಿನ ಚಿತ್ತಾರದ ಸಿರಿಯಲಿ

ನನ್ನೊಲವಿಗೆ ಹಾತೊರೆದು ಬರುವವನು ನೀನಲ್ಲವೇ..


ಜಗದೆಲ್ಲ ಪ್ರೀತಿಯನು ಕೈಸೆರೆಯಾಗಿಸಿ ನನ್ನೊಳು

ಧಾರೆಯೆರೆವ ಹೃದಯವಂತ ನೀನಲ್ಲವೇ..


ಒಲವಾಮೃತದ ಸವಿ ಪಾತ್ರೆಯನು ನಿನಗಾಗಿ

ನನ್ನಲಿಟ್ಟು ನಿನ್ನೊಲವು ಬಯಸಿದವಳು ನಾನಲ್ಲವೇ..?


ರಚನೆ: ರಾಮಚಂದ್ರ ಸಾಗರ್

ಪ್ರೀತಿಯ ನದಿಯ ಜೊತೆಯಾಗಿ ..

 

(ಚಿತ್ರದಲ್ಲಿರುವ ರೂಪದರ್ಶಿ: ಪ್ರೀತು ಪೂಜ)

ಪ್ರೀತಿಯ ಮಾಯೆಯ ಇಂಪು ಸೊಗಸಾಗಿ ನನ್ನ ತನು ಮನಕ್ಕೆ ಆವರಿಸಿ ಕಾಡುತಿದೆ. ಪ್ರೀತಿಯ ಸುಂದರ ಕುಸುಮದಲ್ಲಿ ನಿರ್ಮಲತೆ ಆ ಭಾವದಲ್ಲಿ ಮೂಡಿದ ಪಾವನ ಸತ್ಕಾರದ ಪ್ರತಿಯೊಂದು ಹಿತಧಾರೆಯ ಮೊರೆತ ಸುಯೋಗದ ಅನುಭವವನ್ನು ನೀಡುತ್ತಿರಲು ನಾನು ನಿನ್ನದೇ ಸವಿ ನೆನಪುಗಳ ಮೂಟೆಯ ಭಾರವನ್ನು ಹೊತ್ತು ಅದೇ ನದಿಯ ತಟದಲ್ಲಿ ಆಸೀನಳಾಗಿದ್ದೇನೆ ನಿನ್ನದೇ ಕನವರಿಕೆಯಲ್ಲಿ..!

ಪ್ರತಿ ಮುಂಜಾನೆ ಅರಳುವ ಮಲ್ಲಿಗೆಯ ನಗುವಿನಲ್ಲಿ ಪಳಿಸಿ ನಗುವ ಮೋಹಕ ರವಿಕಾಂತಿಯ ಹೊಳಪು ಸೊಬಗಿನಲ್ಲಿಯೂ ನಿನ್ನದೇ ರೂಪ ಮೂಡಿದಂತೆ, ನೀನೆ ತುಂಟ ನಗುಬೀರಿ ನಕ್ಕಂತೆ. ಹಾಗೇ ನದಿಯ ಸಾವರಿಸಿ ಬೀಸುವ ತಂಗಾಳಿಯ ಹಿತಧಾರೆಯ ಸ್ಪರ್ಶದಲ್ಲಿ ನೀನೇ ಬಂದು ಸಮೀಪಿಸಿ ಒಲುಮೆಯಿಂದ ನನ್ನ ಕೈಹಿಡಿದಂತ ಅನುಭೂತಿ. ನದಿಯ ಜುಳು ಜುಳು ನಿನಾದದ ಸವಿಗಾಗನದಲ್ಲಿ ನನ್ನನ್ನು ನೀ ಪ್ರೀತಿಯಿಂದ ಕರೆದಂತ ಸುಖ..!

ಮುಂಜಾನೆಯ ಮಂಜು ಲೇಪಿತ ಗಿರಿ ಶಿಖರದ ಮೇಲಿನ ಸೊಬಗಿನ ರೂಪಕದಲ್ಲಿ ನೀ ನುಡಿದಂತೆ ನನ್ನದೇ ರೂಪದ ಬೊಂಬೆ ಉದಿತವಾದಾಗ ನೀ ಕೈಹಿಡಿದು ನಡೆಸುವ ಸುಂದರ ಪಥದಡೆ ನಿನ್ನನ್ನೇ ಸೌಜನ್ಯದಿಂದ ಒಪ್ಪಿ ಸಮ್ಮತದಿಂದ ಸಾಗುವ ಪರಮ ಒಲುಮೆಯ ಸಾನಿಧ್ಯವನ್ನು ಅಪೇಕ್ಷಿಸುವ ಮನದಿಂದ ನಾ ನಲಿಯುತಿರುವೆ ಗೆಳೆಯ..!

ಮಳೆ ಬಿಡುವು ನೀಡಿ ಭೂಮಿ ಸೂರ್ಯನ ಒಲುಮೆಯಿಂದ ಕರೆದಾಗ ಆಗಸದಿಂದ ಚಿಮ್ಮಿದ ಬಣ್ಣದ ಚಿತ್ತಾರದ ವೈಯ್ಯಾರದ ರೂಪಕದ ಕಾಮನ ಬಿಲ್ಲಿನ ರಂಗು ನಿಸರ್ಗವ ಸ್ವರ್ಗವಾಗಿಸಿ ರಂಗು ಚೆಲ್ಲಿ ಚಿತ್ತಾರ ತುಂಬಿದಾಗ ನನ್ನ ಮೊಗದಲ್ಲಿ ನೆಲೆಯಾದ ಆಗ ರಂಗಿನ ತುಸು ನಗುವು ಕೂಡ ನಿನ್ನ ಕಾಡುವ ತುಂಟ ನಗುವಿನ ಹಿತವಲ್ಲವೇ..?

ದಿನವಿಡೀ ಕಾಯುತ್ತಾ ಮನವೆಲ್ಲಾ ಕಾದು ನಿನ್ನದೇ ನೆನಪಲ್ಲಿ ಮುಸ್ಸಂಜೆಯ ಸ್ವಾಗತಿಸುವ ಬದುಕು ನನ್ನದಾದರೇ ಅದೇ ಮುಸ್ಸಂಜೆಯ ರವಿಯಾಗಿ ನನ್ನೆದೆಯ ಪ್ರೇಮದ ಕಡಲನ್ನು ಸೇರಲು ಹಾತೊರೆದು ಬರುವ ನಾವಿಕ ನೀನಲ್ಲವೇ..? ನಾನಿಲ್ಲದೇ ನೀನಿರಲು ಸಾಧ್ಯವಿಲ್ಲ ಎನ್ನುವುದು ಕೂಡ ಈ ವಿಶ್ವದಲ್ಲಿ ರವಿ, ಚಂದ್ರರ ಇರುವಿಕೆಯಷ್ಟೇ ಸತ್ಯ. 

ಪ್ರೀತಿ ನದಿಯಾಗಿ ನಾನು, ಒಲುಮೆಯಾ ನಾವಿಕನಾಗಿ ನೀನು...ಹೀಗೆ ನಾವಿಬ್ಬರೂ ಒಂದಾಗಿ ಪ್ರೇಮದ ಕಡಲಿನಲ್ಲಿ ಪ್ರೀತಿಯ ನೌಕೆಯಲ್ಲಿ ಒಂದಾಗಿ ಬಾಳೋಣ ಬಾ ಗೆಳೆಯಾ.. ಪ್ರೀತಿಯೆನ್ನುವ ಮಾಯೆ.. ಪ್ರೀತಿ ಎನ್ನುವ ಅಮೃತ ಎರಡೂ ನಮ್ಮ ಬಾಳಿಗೆ ಉಡುಗೊರೆಯಲ್ಲವೇ..? ಎಲ್ಲವೂ ಅರಿತ ಸವಿನಯದ ಸೌಜನ್ಯ ಹೆಜ್ಜೆಯ ಸಾರಥ್ಯ ನಮ್ಮದು ಎನ್ನುವುದು ನಿನಗೂ ಗೊತ್ತು. ಇದೇ ಪ್ರೀತಿಯ ಹಂದರಲ್ಲಿ ಸವಿ ಮಾತುಗಳ ಓಲೆ ನಿನಗಾಗಿ ಈ ಕ್ಷಣ ಹೆಣೆದಿರುವೆ ಒಲುಮೆಯಿಂದ ಆಗಮಿಸಿ ಪ್ರೀತಿಯಿಂದ ಕಿವಿಗೊಟ್ಟು ನನ್ನೆದೆಯ ಉಸಿರಲ್ಲಿ ಕೇಳು ಬಾ ಇನಿಯಾ.

ಕಾದಿರುವೆ ನಿನ್ನದೇ ನಿರೀಕ್ಷೆಯಲ್ಲಿ ಅಪರಿಮಿತ ಕನಸುಗಳ ನದಿಯಾಗಿ.. 

ನೀನೆನ್ನುವ ಪ್ರೀತಿಯ ಕಡಲನು ಸೇರುವ ನಿನ್ನೊಲವಿನ ಗೆಳತಿಯಾಗಿ..

ರಚನೆ: ರಾಮಚಂದ್ರ ಸಾಗರ್


Sunday, 15 June 2025

ಪ್ರೀತಿಯ ಮಳೆ

 

ಗೆಳೆಯಾ..

ಪ್ರೀತಿಯ ಮಳೆಯಾಗುತಿದೆ ನನ್ನೆದೆಯ ಗೂಡಲಿ

ಕಿವಿಯಿಟ್ಟು ಕೇಳು ಬಾ  ಒಲವಿನ ಆಲಾಪದಲಿ

ರಂಗು ತುಂಬಿದ ಸವಿ ಅನುರಾಗದ ಪದಗಳಲಿ

ಪ್ರೇಮದ ಪದಗಳೇ ದನಿಸುತಿವೆ ನಿನ್ನದೇ ನೆನಪಲಿ


ಆನಂದದ ಆನನಕೆ ನೀನೆ ಕಾರಣವಾಗಿರುವೆ

ಸಡಗರದ ಬಾಳಿಗೆ ನೀನೆ ಭೂಷಣವಾಗಿರುವೆ

ಸಂಭ್ರಮದ ಹಾದಿಗೆ ನೀನೆ ಸರದಾರನಾಗಿರುವೆ

ಸರಿಹಗಲು ಕನಸಲು ನೀನೆ ಸರಕಾಗಿರುವೆ


ಅನುರಾಗದ ಅಲೆಯಲಿ ನೀ ಕಡಲಾಗಿರಲು 

ಅನುತಾಪದ ಪ್ರೇಮದಲಿ ನೀ ಬೆಳಕಾಗಿರಲು

ಅನುಪಮ ಪ್ರೀತಿಯಲಿ ನಾ ಬೇಡುತಿರಲು

ಅನುಮಾನಿಸಿ ನನ್ನೊಲವು ನೀ ದೂರಾಗದಿರು 


ನಿನ್ನೊಲವು ಸಂಕೋಲೆಯಾಗಿದೆ ಹೃದಯಕೆ

ನಿನ್ನದೇ ಸವಿನಯ ಸಾನಿಧ್ಯ ಬೇಕಿದೆ ಬಾಳಿಗೆ

ಸಹನೆಯ ಸಹವಾಸವು ಸಾಕಾಗಿದೆ ಮನಕೆ

ನೀನೆನ್ನುವ ಸಹೃದಯ ವರವಾಗಲಿ ಹಾದಿಗೆ


ಮೋಹದ ಮಳೆಯಲಿ ಒಂದಾಗಿ ರಮಿಸೋಣ

ಆಹ್ಲಾದದ ಮನೆಯಲಿ ಜೊತೆಯಾಗಿ ನಲಿಯೋಣ

ಕಾತರಿಸುವ ಕನಸುಗಳಿಗೆ ಉತ್ತರವಾಗು ಬಾ

ಒಲವಿನ ಆಸ್ಥಾನಕೆ ಸದಾ ದೊರೆಯಾಗು ಬಾ


ರಚನೆ: ರಾಮಚಂದ್ರ ಸಾಗರ್

Tuesday, 7 January 2025

ಮರೆಯಾದ ಸಮಾಜಮುಖಿ ಚಿಂತನೆಯ ಮಹಾಯೋಗಿ

 

ಶ್ರೀಯುತ ಡಾ. ನಾ ಡಿಸೋಜ ಅವರು ಕನ್ನಡ ನಾಡು ಕಂಡಂತ ಅಪರೂಪದ ಪ್ರತಿಭೆ. ವಿಶೇಷವಾಗಿ ಮಲೆನಾಡು ಭಾಗದ ಸಮಸ್ಯೆಗಳ ಬಗ್ಗೆ ಸದಾ ಧ್ವನಿಯಾದವರು. ನಾಡು ನುಡಿ ವಿಚಾರದಲ್ಲಿ ಯಾರನ್ನೂ ಬಿಡದೆ ಚಾಟಿ ಬೀಸಿದವರು. ಸದಾ ಬಡವರ, ನೊಂದವರ ಬಗ್ಗೆ ದನಿಯಾಗಿ ತಮ್ಮ ಸಾಹಿತ್ಯ ಬರವಣಿಗೆಯ ಮೂಲಕ ಹೋರಾಟದ ಸೆಲೆಯಾದವರು. ಗೌರವಾನ್ವಿತರು ತಮ್ಮ ಅಮೂಲ್ಯ ಬದುಕಿನುದ್ದಕ್ಕೂ ನಮ್ಮ ನಾಡು ನುಡಿಗೆ ಶ್ರೇಷ್ಠತೆಯ ಶ್ರೀಕಾರವಾದರು. ಸರಳತೆಯಲ್ಲೇ ಬದುಕಿಗೆ ಮೆರುಗು ರೂಪಿಸಿಕೊಂಡ ಮಹಾನ್‌ ವ್ಯಕ್ತಿತ್ವದವರು. ದಿನಾಂಕ: 05.01.2025 ರಂದು ವಯೋಸಹಜ ಮರಣ ಹೊಂದಿ ನಮ್ಮನ್ನು ಅಗಲಿದ್ದಾರೆ. ಆದರೆ ಅವರ ಸಾಹಿತ್ಯ ಜ್ಞಾನದ ಪ್ರಕರತೆಯು ಎಂದಿಗೂ ಮುಗಿಯದ ನಿತ್ಯ ದೀವಿಗೆ.

ಗೌರವಾನ್ವಿತರು ನನ್ನ ಎರಡು ಪುಸ್ತಕಗಳಿಗೆ ಮುನ್ನುಡಿಯನ್ನು ಬರೆದು ಹಾರೈಸಿದವರು. ನನ್ನ ಮೊದಲ ಕವನ ಸಂಕಲನ ʼಬುದ್ದೀಜೀವಿʼ ಯನ್ನು ಸ್ವತಃ ಬಿಡುಗಡೆಗೊಳಿಸಿ ಹಾರೈಸಿದವರು. ಆ ದಿನ ಸದರಿ ಕಾರ್ಯಕ್ರಮವನ್ನು ಕನ್ನಡ ಸಾಹಿತ್ಯ ಪರಿಷತ್ತು ಸಾಗರ ಇವರು ಹಮ್ಮಿಕೊಂಡು ನನಗೆ ಹಾರೈಸಿದರು. ನಾನು ಅನೇಕ ಬಾರಿ ಇವರ ಮನೆಗೆ ಹೋದಾಗ ಅಕ್ಕರೆಯಿಂದ ಸ್ವಾಗತಿಸಿ ಸಮಾಲೋಚಿಸುತ್ತಿದ್ದರು. ಎಷ್ಟೇ ಹಿರಿತನ ಸಾಹಿತ್ಯ ಸಾಧನೆಯಲ್ಲಿದ್ದರು ಎಂದಿಗೂ ತಮ್ಮ ಸಿರಿತನವನ್ನು ಸರಳತೆಯಲ್ಲೇ ತೋರಿಸಿ ಸಮಾಜಕ್ಕೆ ಮಾದರಿಯಾದವರು. ಇಂದು ದಿನಾಂಕ:07.01.2025 ರಂದು ಅವರ ಪ್ರಾರ್ಥಿವ ಶರೀರದ ದರ್ಶನವನ್ನು ಸಾಗರದ ಗಾಂಧೀ ಮೈದಾನದಲ್ಲಿ ಸಾರ್ವಜನಿಕ ದರ್ಶನಕ್ಕೆ ಸರ್ಕಾರ ವ್ಯವಸ್ಥೆ ಮಾಡಿರುತ್ತದೆ.

 

ಶ್ರೀಯುತರಿಗೆ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಿ ಈ ಕವಿತೆ ಬರೆದಿರುವೆ;

 

ನಿಗರ್ವ ಲೋಕದ ತಾರೆ

 

ಸರಳ ಸಜ್ಜನಿಕೆಯ ಸಾಕ್ಷಾತ್ಕಾರ

ಸಚ್ಚರಿತ ಗುಣಗಣ ಮಹಾಸಾಗರ

ಮಲೆನಾಡ ಬವಣೆಗೆ ಹೋರಾಟದ ಸಾರಥಿ

ಅಕ್ಷರಗಳ ಯಾತ್ರೆಯಲಿ ಸಮಾಜಕೆ ದೀವಿಗೆ

 

ಸಿರಿತನ ನಿಸ್ವಾರ್ಥತೆಯಲಿ ವಿಜೃಂಭಿಸಿದವರು

ನಿರ್ವಿವಾದ ಮಂದಿರದ ದೈವವಾದವರು

ಸಹೃದಯಗಳ ಸ್ನೇಹಕೆ ಸೇತುವೆಯಾದವರು

ಪರಿಸರ ಆರಾಧನೆಯ ಯೋಗಿಯಾದವರು

 

ಆಡಂಬರದ ಬದುಕು ತ್ಯಜಿಸಿದ ತ್ಯಾಗಿಯಾದವರು

ನಿಷ್ಕಾಮ ನಡೆಯಲಿ ಸಂಭ್ರಮವಾದವರು

ಭೀಭತ್ಸ ಸಮಾಜದ ಶುದ್ಧಿಯಲಿ ಯೋಧರಾದವರು

ನಾಡು ನುಡಿ ವಿಚಾರದಲಿ ಚಾಟಿ ಬೀಸಿದವರು

 

ಸುಯೋಗದ ಶಿಖರವನು ಏರಿದವರು

ಸುಜ್ಞಾನದ ಕನ್ನಡ ದೀವಿಗೆಯಾದವರು

ಸಹಿಷ್ಣುತೆಯ ಧೂಪದಾರತಿ ಬೆಳಗಿದವರು

ಸಂಪನ್ನ ಸದ್ಗತಿಯ ಅಲೆಯಾದವರು

 

ಘನಸಾರ ಸಂದೇಶಗಳನು ಪಠಿಸಿದವರು

ಗೌರವದ ಸಮಾಜಕೆ ಮುನ್ನುಡಿಯಾದವರು

ಬರವಣಿಗೆಯಲಿ ಮಕ್ಕಳ ಮನ ಹೂವಾಗಿಸಿದವರು

ಸೀಜೇನಂತೆ ಮುದ್ದು ಮನಗಳಿಗೆ ಪ್ರಿಯವಾದವರು

 

ನಿಗರ್ವದ ಲೋಕದಲಿ ನಿತ್ಯ ನೆಲೆಯಾದವು

ನಿರ್ವಾಣದ ಬಾಳು ಸಿದ್ಧಿಸಿಕೊಂಡವರು

ಬೆಳಗುವ ದೀಪದಲಿ ಮುಗಿಯದ ತೈಲವಾದವರು

ಕನ್ನಡ ಸಾಹಿತ್ಯದಲಿ ನಿತ್ಯ ಪ್ರಕರ ಕಿರಣವಾದವರು

 

ದೇಹದಿಂದ ಮರೆಯಾದರು ಜ್ಞಾನದ

ಕಡಲು ಸೃಜಿಸಿ ನಕ್ಕವರು

ಇವರೇ ನಮ್ಮೆಲ್ಲರ ಮೆಚ್ಚಿನ ನಾಡಿ

ಘನ ಸಾರ ಸಾಹಿತ್ಯದಲಿ ಆಕ್ಷಯವಾದವರು

 

ರಚನೆ: ರಾಮಚಂದ್ರ ಸಾಗರ್‌

 



Thursday, 31 October 2024

ದೀಪಾವಳಿ...

 

ಎಲ್ಲಾ ಸಹೋದರ ಬಂಧುಗಳಿಗೂ ದೀಪಾವಳಿಯ ಶುಭಾಶಯಗಳು.

"ಬೆಳಕಿನ ಹಬ್ಬ ಎಲ್ಲರ ಬದುಕನ್ನು ಬೆಳಗಲಿ, ಅಂಧಕಾರ ಕರಗಿ ಹರುಷದ ದೀಪದ ಬೆಳಕಲ್ಲಿ ಸಂತಸ ಮೂಡಲಿ,  ಎಲ್ಲರ ಬದುಕಲ್ಲಿ ಕನುಸಗಳು ನನಸಾಗಿ ಒಲುಮೆಯ ಜಗವಾಗಲಿ" ಎನ್ನುವ ಆಶಯದೊಂದಿಗೆ ನಾ ಬರೆದ "ದೀಪಾವಳಿ" ಕವಿತೆಯನ್ನು ಪೋಸ್ಟ್‌ ಮಾಡುತ್ತಿದ್ದೇನೆ. ಎಲ್ಲರಿಗೂ ಮತ್ತೊಮ್ಮೆ ಬೆಳಕಿನ ಹಬ್ಬದ ಶುಭಾಶಯಗಳು.

ದೀಪಾವಳಿ...

ದಿಗಂತದ ತುದಿಯಲಿ

ಚಿಮ್ಮಿದಾ ಬೆಳಕಲಿ

ನವ್ಯತೆಯ ಭಾವದಲಿ

ಭವ್ಯತೆಯ ದೀಪಾವಳಿ....

ಎಲ್ಲರೆದೆಯ ಬೆಸುಗೆಯಲ್ಲಿ

ಸಹೋದರತ್ವ ಬಂಧದಲ್ಲಿ

ದೀನತೆಯ ಅಂತ್ಯದಲ್ಲಿ

ಹರುಷದಾ ದೀಪಾವಳಿ...

ಶ್ರಮದಾನದ ಕಾಯದಲ್ಲಿ

ಶ್ರಮದ ಹನಿಗಳ ನಗುವಿನಲ್ಲಿ

ನೊಂದ ದನಿಯ ಗೆಲುವಿನಲ್ಲಿ

ಚೈತನ್ಯದ ದೀಪಾವಳಿ..

ಬಡತನದ ಅಳಿವಿನಲ್ಲಿ

ಅಸಹಾಯಕರ ನಗುವಿನಲ್ಲಿ

ನಿಸ್ವರ‍್ಥ ಮನಗಳ ಅಕ್ಷಯದಲಿ

ಅಕ್ಷಯ ದೀಪಾವಳಿ...

ಜ್ಞಾನ ದೀವಟಿಗೆ ಬೆಳಗಿನಲ್ಲಿ

ಅಜ್ಞಾನ ಅಂಧಕಾರಗಳ ದಹನದಲ್ಲಿ

ಹೊಸ ಗುರಿಗಳ ಕನಸಿನಲ್ಲಿ

ಜ್ಞಾನದ ದೀಪಾವಳಿ...

ರಾಮಚಂದ್ರ ಸಾಗರ್

Sunday, 21 January 2024

ಶ್ರೀ ರಾಮ...

 

ಅಯೋಧ್ಯೆಯ ರಂಗದಲಿ ಬಾಲರಾಮನ ಪ್ರಾಣ ಪ್ರತಿಷ್ಠೆಯ ಮುಹೂರ್ತದ ಶುಭದ ಘಳಿಗೆಗೆ ಧನ್ಯತೆಯಲ್ಲಿ ಕೈ ಮುಗಿದು ಪ್ರಾರ್ಥಿಸುತ್ತಾ ಈ ಅವಿಸ್ಮರಣೀಯ ಪಾವನ ಕಾರ್ಯವು ನಾಡಿಗೆ ಸಕಲ ಹೆಮ್ಮೆಯ ಸಂಗತಿಯಾಗಿದೆ.  ಸತ್ಯದ ಪಥದಲಿ ಮಿಥ್ಯದ ಜಗವ ಸೋಲಿಸಿದ ನನ್ನ ಮನದ ದೇವ ಶ್ರೀ ರಾಮನ ನೆನೆಯುತ್ತಾ ಈ ಕ್ಷಣದಲ್ಲಿ “ಶ್ರೀ ರಾಮ” ಕವಿತೆ ಬರೆದಿದ್ದೇನೆ. ಎಲ್ಲರೂ ಒಂದಾಗಿ ಶ್ರೀ ರಾಮನ ಪ್ರಾರ್ಥಿಸೋಣ ಬನ್ನಿ. ನಿಜ ರಾಮ ರಾಜ್ಯ ನಮ್ಮೆಲ್ಲರ ಗುರಿಯಾಗಲಿ. ಪ್ರೀತಿ, ಶಾಂತಿ, ಸ್ನೇಹ, ಸೌಹಾರ್ದತೆ, ಸಹಿಷ್ಣುತೆಗಳು ಎಲ್ಲರೆದೆಯ ಉಸಿರಾಗಲಿ. ಎಂದೆAದಿಗೂ ಸತ್ಯದ ಗುಡಿಯಲಿ ಆರಾಧನೆಗೆ ಅರ್ಹನು ನಮ್ಮೆಲ್ಲರ ಶ್ರೀ ರಾಮನೇ..


ಶ್ರೀ ರಾಮ...


ಸತ್ಯದ ಪಥದಲಿ ಜಗವ ಜಯಿಸಿದ ವೀರನೇ

ಸಭ್ಯತೆಯ ನಡೆಯಲಿ ಉದಯಿಸಿದ ಶೂರನೇ 

ಸಚ್ಚರಿತ ಮನದಲಿ ಸಂಭ್ರಮಿಸಿದ ಧೀರನೇ

ಸಜ್ಜನಿಕೆಯ ಸಿರಿತನದಲಿ ದೊರೆಯಾದ ದೇವನೇ 

ಶ್ರೀ ರಾಮ..


ಸದ್ಗತಿಯ ಮನಗಳಲಿ ಮಂದಿರವಾದವನೇ

ಸತ್ಕಾರದ ಭಾವನೆಗಳಲಿ ದೇವರಾದವನೇ

ಸಂಕಲ್ಪ ಕಾಯಕದಿ ಜಗಕೆ ಬೆಳಕಾದವನೇ

ಸಂಯಮದ ಸತ್ರದಲಿ ಸುಯೋಗವಾದವನೇ

ಶ್ರೀ ರಾಮ..


ಸದ್ಗುಣಗಳ ಗಗನದಲಿ ಶುಭದ ಮಳೆಯಾದವನೇ

ಸಂಪನ್ನ ಸತ್ವಗಳಲಿ ಧರಿತ್ರಿಯಲಿ ಹೆಸರಾದವನೇ

ಸಂಭಾವಿತರ ಸಖ್ಯದಲಿ ಸನ್ಮಾರ್ಗ ತೋರಿದವನೇ

ಸವಿನಯ ಪರಿವಾರದಲಿ ಸೌಜನ್ಯ ಮೆರೆದವನೇ

ಶ್ರೀ ರಾಮ..


ಸಹನೆಯಲಿ ಸಫಲತೆಯ ಸಂಕೀರ್ತನೆಯಾದವನೇ

ಸಹಿಷ್ಣುತೆಯ ಗುಣದಲಿ ಜಗಕೆ ಮುನ್ನುಡಿಯಾದವನೇ

ಶಾಂತಿ ದೇಗುಲದ ಶಾಂತೆಯ ಸಹೋದರನೇ

ಶಾಂತ ಸೌಧದ ಜಗಕೆ ಉಸಿರಾದವನೇ

ಶ್ರೀ ರಾಮ...

ರಚನೆ: ರಾಮಚಂದ್ರ ಸಾಗರ್


Monday, 15 January 2024

ಸಂಕ್ರಮಣವಾಗಲಿ..

 

ನನ್ನೆಲ್ಲಾ ಮುಖಪುಟದ ಸಹೋದರ ಬಂಧುಗಳಿಗೂ ಸಂಕ್ರಾಂತಿಯ ಶುಭಾಶಯಗಳು..ಈ ರ‍್ಷದ ಮೊದಲ ಹಬ್ಬ ಸಂಕ್ರಾಂತಿಯು ನಿಮ್ಮೆಲ್ಲರ ಬಾಳಲಿ ಪ್ರಗತಿಯನ್ನು ಸಿಂಚಿಸಿ, ಹೊಸತನವನ್ನು ಮೂಡಿಸಲೆಂದು ದೇವರಲ್ಲಿ ಪ್ರರ‍್ಥಿಸುತ್ತಾ...."ಸಂಕ್ರಮಣವಾಗಲಿ "ಕವಿತೆ ಪೋಸ್ಟ್ ಮಾಡುತ್ತಿರುವೆ..ಎಲ್ಲರಿಗೂ ಮತ್ತೊಮ್ಮೆ ಸಂಕ್ರಾಂತಿಯ ಶುಭಾಶಯಗಳು..

ಸಂಕ್ರಮಣವಾಗಲಿ..

ಎಳ್ಳು ಎಂಬ ಸ್ನೇಹವು
ಬೆಲ್ಲ ಎಂಬ ಪ್ರೀತಿಯು
ಮನ ಮನಗಳ ಬೆಸೆಯಲಿ
ಸಹೋದರತೆಯ ಬಂಧದಲಿ
ಈ ಸಮಯದೀ
ಸೌಹರ‍್ದ ಸಂಕ್ರಮಣವು ಸಂಭ್ರಮಿಸಲಿ..

ವಿರಸದ ಮನಸು ಮರೆಯಾಗಲಿ
ಕಹಿ ಘಳಿಗೆಯು ಕಾಡದಿರಲಿ
ವಿಮೋಹ ದುರಾಸೆ ದೂರಾಗಲಿ
ಈ ಸಮಯದೀ
ಸಂಪನ್ನ ಮನಗಳ ಸಂಕ್ರಮಣವಾಗಲಿ..

ದ್ವೇಷ ಅಸೂಯೆಗಳು ದೂರಾಗಲಿ
ಸ್ನೇಹ ಎಲ್ಲರೆದೆಯ ಗೂಡಾಗಲಿ
ಸಖ್ಯ ಸಮಾಗಮ ಚಿರಾಯುವಾಗಲಿ
ಈ ಸುಸಮಯದೀ
ಗೆಳೆತನದ ಸಂಕ್ರಮಣವಾಗಲಿ..

ವಿಘ್ನ ಬದುಕಲಿ ಬಾರದಿರಲಿ
ಸವೆ ಬಾಳಲಿ ಕಾಡದಿರಲಿ
ಬವಣೆ ಯಾರನು ಮುಟ್ಟದಿರಲಿ
ರೋಧನೆ ಯಾರಿಗೂ ತಟ್ಟದಿರಲಿ
ಈ ಸಮಯದೀ
ಸಂತಸದ ಸಂಕ್ರಮಣವಾಗಲಿ..

ಬಾಂಧವ್ಯಗಳು ಚಿಗುರೊಡೆಯಲಿ
ಬಂಧುರ ಜಗದ ವಿಕ್ರಮವಾಗಲಿ
ಇನನ ಹೊಳಪಿನಲಿ
ವಸುಂಧರೆಯ ಮಡಿಲು
ಈ ಸುಸಮಯದೀ
ಪ್ರೀತಿಯ ಸಂಕ್ರಮಣವಾಗಲಿ..

ರಚನೆ: ರಾಮಚಂದ್ರ ಸಾಗರ್

Saturday, 23 September 2023

ಸರ್ವ ಪೌರಕಾರ್ಮಿಕರಿಗೂ ಪೌರಕಾರ್ಮಿಕ ದಿನಾಚರಣೆಯ ಶುಭಾಶಯಗುಳು;

 

ಈ ಸುದಿನ ಸೆಪ್ಟಂಬರ್ ಮಾಹೆಯ ೨೩ನೇ ದಿನ ಪೌರಕಾರ್ಮಿಕರ ದಿನಾಚರಣೆ. ನಮ್ಮ ನಗರವನ್ನು ಶುಚಿತ್ವವಾಗಿಟ್ಟು ನಮ್ಮ ಆರೋಗ್ಯದ ರಕ್ಷೆಯಲ್ಲಿ ಸದಾ ನಿರತರಾಗಿ ನಗರ ಆರೋಗ್ಯದ ರಕ್ಷೆಗಾಗಿ ಸದಾ ಹೋರಾಡುವ ಯೋಧರಾಗಿ ಶ್ರಮಿಸುವ ಎಲ್ಲಾ ಪೌರಕಾರ್ಮಿಕರಿಗೆ ನನ್ನ ನಮನಗಳು.

ಇಡೀ ಊರಿನ ಜನರೆಲ್ಲ ಸವಿ ನಿದ್ರೆಯಲ್ಲಿ ಜಾರಿರುವ ಮುಂಜಾನೆಯ ಸಮಯದಲ್ಲಿ ಬೇಗನೇ ಎದ್ದು ಕರ್ತವ್ಯದ ಶ್ರದ್ಧೆಯೊಂದಿಗೆ ಎಲ್ಲರೂ ಕೈಜೋಡಿಸಿ ಊರಿನ ನೈರ್ಮಲೀಕರಣ, ನೀರು ಸರಬರಾಜು ಕಾರ್ಯಗಳಲ್ಲಿ ಮಗ್ನರಾಗಿ ನಮ್ಮೆಲ್ಲರ ಸೇವೆಗಾಗಿ ತಮ್ಮ ಬದುಕನ್ನು ಮುಡಿಪಾಗಿಟ್ಟ ಆ ಎಲ್ಲಾ ಕಾಯಕ ಚೇತನಗಳಿಗೆ ಈ ದಿನ ಗೌರವಿಸುವ ಸುಸಮಯ. ಬನ್ನಿ ಎಲ್ಲರೂ ಸೇರಿ ಅವರನ್ನು ತುಂಬು ಹೃದಯದಿಂದ ಗೌರವಿಸೋಣ. ಈ ದಿನವನ್ನು ನಮ್ಮ ಬಾಳಲ್ಲಿ ಅರ್ಥಪೂರ್ಣವಾಗಿಸೋಣ.

ಊರಿನ ಯಾವುದೇ ಸಮಸ್ಯೆಯಿರಲಿ ಮೊದಲು ನೆನಪಾಗುವುದು ನಮ್ಮೂರಿನ ಪೌರಸಭೆ. ಮನುಷ್ಯನ ಜನನದಿಂದ ಹಿಡಿದು ಆತನ ಮರಣದವರೆಗೂ ಇಲ್ಲಿನ ಸೇವೆಗಳು ಅಗತ್ಯ. ಜನನ ಪ್ರಮಾಣ, ಮರಣ ಪ್ರಮಾಣ ಪತ್ರಗಳೇ ಈಗ ಮನುಷ್ಯನ ಜನನ, ಅವಸಾನದ ದಾಖಲೆಗಳಾಗಿವೆ. ಊರಿನ ಯಾವುದೇ ಭಾಗದಲ್ಲಿ ಯಾವುದೇ ನೈರ್ಮಲೀಕರಣ ಸಮಸ್ಯೆ, ನೀರಿನ ಸಮಸ್ಯೆ, ರಸ್ತೆ, ಚರಂಡಿ, ಬೀದಿ ದೀಪ, ಸಾಂಕ್ರಾಮಿಕ ರೋಗಗಳ ಸಮಯದಲ್ಲಿ ಪೌರಸಭೆಗಳ ಪಾತ್ರ ಪ್ರಮುಖ. 

ಇತ್ತೀಚೆಗೆ ಕೋವಿಡ್ ಸಾಂಕ್ರಾಮಿಕ ರೋಗದ ಸಮಯದಲ್ಲಿ ಪೌರಸಭಾ ಸಿಬ್ಬಂದಿಗಳ ಸೇವೆ ಅನನ್ಯ. ಕೋವಿಡ್ ಸಮಯದಲ್ಲಿ ಎಷ್ಟೋ ಜನ ಅಸುನೀಗಿದಾಗ ಅವರ ವಾರಸುದಾರರು ಶವ ಸಂಸ್ಕಾರ ಮಾಡದೇ ಕೆಲವೊಮ್ಮೆ ಕೆಲವರು ಪಲಾಯನ ಮಾಡಿದ್ದುಂಟು.  ಆಸ್ತಿಗಾಗಿ ಬಡಿದಾಡುವವರು ಕೋವಿಡ್ ಹೆಮ್ಮಾರಿಗೆ ಬೆದರಿ ಉಸಿರಿನ ಸಂಬAಧಕ್ಕೆ ತಿಲಾಂಜಲಿ ಹೇಳಿದ್ದರು. ಅಂತಹ ಸಮಯದಲ್ಲಿ ಪೌರಸಭೆಗಳ ಕಾರ್ಮಿಕರು ಕೋವಿಡ್ ನಿಂದ ಮೃತಪಟ್ಟವರ ಶವÀ ಸಂಸ್ಕಾರ ಮಾಡಿ ಅಸುನೀಗಿದವರ ಆತ್ಮಕ್ಕೆ ಗೌರವಿಸಿದ್ದಾರೆ. ಕೋವಿಡ್ ಕಾಲಘಟ್ಟದಲ್ಲಿ ನಮ್ಮ ಅನೇಕ ಜನ ಕಾರ್ಮಿಕರು ತಮ್ಮ ನಿಸ್ವಾರ್ಥ ಸೇವೆಯಲ್ಲಿ ಬಲಿದಾನವಾಗಿದ್ದಾರೆ. ಅಂತವರೆಲ್ಲರ ಸೇವೆಯನ್ನು ಯಾವುದೇ ಪರಿಹಾರದ ಮೌಲ್ಯದಿಂದ ಅಳತೆಗೋಲಾಗಿಸಲು ಸಾಧ್ಯವೇ..? ಒಂದು ಕ್ಷಣ ಪೌರಕಾರ್ಮಿಕರಿಲ್ಲದ ನಿಮ್ಮ ಬದುಕು, ನಗರವನ್ನು ಕಲ್ಪಿಸಿಕೊಳ್ಳಿ. ಮನಸಾರೆ ಎಲ್ಲವನ್ನು ಅವಲೋಖಿಸಿದಾಗ ಮಾತ್ರವೇ ನೈಜತೆಯ ಮೌಲ್ಯ ಅರ್ಥವಾಗುತ್ತದೆ. ಇನ್ನೊಬ್ಬರ ಶ್ರಮಹ ಹನಿಗಳ ಮೌಲ್ಯ ಅರಿವಾಗುತ್ತದೆ.

ಸುಂದರ ನಗರಕ್ಕೆ ಅರ್ಪಿತವಾಗುವ ಪ್ರಶಸ್ತಿ, ಪ್ರಶಂಸೆಗಳು ಕಾರ್ಮಿಕರ ಕೈಗೆ ಪ್ರಧಾನವಾದರೆ ಉತ್ತಮ. ಕಾರ್ಮಿಕರು ಶ್ರಮದಾನ ಮಾಡಿ ದುಡಿದ ಕಾರ್ಯವನ್ನು ತಮ್ಮ ಕಾರ್ಯವೆಂದು ಹೆಮ್ಮೆಪಡುವವರು, ಹಾರಹಾಕಿಸಿಕೊಳ್ಳುವವರು ಕಡಿಮೆಯಾಗಬೇಕು. ಎಲ್ಲವೂ ಸಾಧ್ಯವಾಗಿದ್ದು ಪೌರಕಾರ್ಮಿಕ ನಿಷ್ಠೆಯಿಂದ ಎನ್ನುವುದನ್ನು ಅವರನ್ನು ದುಡಿಸಿಕೊಳ್ಳುವವರು ಅರ್ಥೈಸಿಕೊಳ್ಳಬೇಕು. ಅವರಿಗೆ ಸರಿಯಾದ ಕಾಲದಲ್ಲಿ ಉತ್ತಮ ಆರೋಗ್ಯ ತಪಾಸಣೆ, ಭವಿಷ್ಯನಿಧಿ, ವಿಮೆಯ ಸೌಲಭ್ಯಗಳು ದೊರೆಯುವಂತೆ ನೋಡುವುದು ಅವರಿಂದ ಕೆಲಸ ತೆಗೆದುಕೊಳ್ಳುವವರ ಮತ್ತು ಅವರಿಗೆ ಕೆಲಸ ಹೇಳುವವರ ಜವಬ್ದಾರಿ ಎನ್ನುವದನ್ನು ಸಹಾ ಅಧಿಕಾರ ನಡೆಸುವವರಿಗೆ ಅರ್ಥವಾಗಬೇಕು. ಕಾರ್ಮಿಕರ ಸಮಸ್ಯೆಗಳ ಪರಿಹಾರಕ್ಕೆ ಸಾಕಷ್ಟು ಕಾಯ್ದೆ, ನಿಯಮಗಳ ನಿಬಂಧನೆಗಳಿವೆ. ಅವೆಲ್ಲವೂ ಕೂಡ ಪಾರದರ್ಶಕವಾಗಿ ಜಾರಿಮಾಡುವುದು ಕಾರ್ಮಿಕರನ್ನು ದುಡಿಸಿಕೊಳ್ಳುವವರು ಕೆಲಸ. ಜೊತೆಗೆ ಪೌರಕಾರ್ಮಿಕರ ಸೇವೆ ಪಡೆಯುವ ಪ್ರತೀ ನಾಗರೀಕನ ಜವಬ್ದಾರಿಯೂ ಹೌದು ಎನ್ನುತ್ತಾ..ಈ ದಿನ ಪೌರಕಾರ್ಮಿಕರ ದಿನಾಚರಣೆ. ಅವರನ್ನು ಗೌರವಿಸುವ ಸುದಿನ. ಊರಿನ ಎಲ್ಲರೂ ಸಹಾ ಶ್ರಮದ ಜೀವಿಗಳಾದ ಪೌರಕಾರ್ಮಿಕರಿಗೆೆ ಒಂದಾಗಿ ಗೌರವಿಸಿ ಅಭಿನಂದಿಸೋಣ ಅಕ್ಕೆಯಿಂದ ಬನ್ನಿ..

ರಾಮಚಂದ್ರ ಸಾಗರ್


Sunday, 3 September 2023

ಕಣ್ಣೀರ ಕಡಲಲಿ ಮರೆಯಾದ ಪ್ರೇಮದ ನದಿ- “ಸಪ್ತ ಸಾಗರದಾಚೆ ಎಲ್ಲೋ”

ಪ್ರೀತಿ, ಪ್ರೇಮದ ವೈಭವದ ಯಾತ್ರೆಯು ಎಲ್ಲರ ಬಾಳಲ್ಲೂ ಸಿದ್ಧಿಸುವುದಿಲ್ಲ. ಪಾವನ ಪ್ರೀತಿಗಾಗಿ ತವಕಿಸುವುದೇ ನಿಸ್ವಾರ್ಥ ಪ್ರೇಮಿಯ ಪಣವಾಗಿರುತ್ತದೆ. ಸಾವಿರ ವರುಷವಾದರು ಬಯಸಿದ ಜೀವಕ್ಕಾಗಿ ಹಾತೊರೆಯುತ್ತಾ, ಬಾಳಿನುದ್ದಕ್ಕೂ ಪಣತೊಟ್ಟು ಶರಣಾಗುವುದೇ ಪಾವನ ಪ್ರೀತಿ. ನಿಸ್ವಾರ್ಥ ಪ್ರೀತಿಯಲ್ಲಿ ಬಯಸಿದ ಜೀವದ ಕ್ಷೇಮವನ್ನೇ ಅನುಕ್ಷಣವೂ ಬೇಡುತ್ತಾ ಪ್ರಾರ್ಥಿಸುವುದೇ ನಿಜ ಪ್ರೇಮಿಯ ಬದಕಾಗಿರುತ್ತದೆ.. ಬದುಕು, ಜಗವೂ ಎಲ್ಲವೂ ಬಯಸಿದ ಜೀವದ ಹಿತವನ್ನೇ ಬಯಸುತ್ತಿರುತ್ತದೆ. ಎಂತಹ ತ್ಯಾಗಕ್ಕೂ ಮನಸ್ಸು ಗಟ್ಟಿಯಾಗಿ ಸಿದ್ಧವಾಗಿರುತ್ತದೆ. ಬಯಸಿದಾ ಜೀವದಾ ಹಿತವೇ ಬಾಳಿನ ಉಸಿರಾಗಿರುತ್ತದೆ. ಹೃದಯದ ಬಡಿತಕ್ಕೇ ಅದುವೇ ಇಂಧನವಾಗಿರುತ್ತದೆ.

ಇದೇ ಪ್ರೇಮ ತ್ಯಾಗದ ಕಥಾ ಹಂದರವೇ ಸಪ್ತ ಸಾಗರದಾಚೆ ಎಲ್ಲೋ ಚಿತ್ರದ ನಾಯಕಮನುವಿನ ಕಥೆ. ನಾಯಕನಾಗಿ ರಕ್ಷಿತ್ ಶೆಟ್ಟಿ ಅಮೋಘವಾಗಿ ನಟಿಸಿದ್ದಾರೆ. ಚಿತ್ರದಲ್ಲಿ ನಾಯಕಿಯಾಗಿಪುಟ್ಟಿ ಪಾತ್ರದಲ್ಲಿ ರುಕ್ಮಿಣಿ ವಸಂತ್ ನಟಿಸಿದ್ದಾರೆ. ಕನ್ನಡ ಚಿತ್ರ ರಂಗದಲ್ಲಿ ಒಳ್ಳೆಯ ನಟಿಯಾಗಿ ನೆಲೆಯೂರುವ ಸಾಕ್ಷ್ಯವನ್ನು ನಿರೂಪಿಸಿದ್ದಾರೆ ಎಂದರೆ ಅತಿಶಯವಲ್ಲ. ಮಧ್ಯಮ ವರ್ಗದ ಕುಟುಂಬದ ಇಬ್ಬರು ಪ್ರೇಮಿಗಳ ಬಣ್ಣದ ಚಿತ್ತಾರದ ಕನಸುಗಳು ಮೆರವಣಿಗೆಯು ಚಿತ್ರದಲ್ಲಿ ಮೊದಲು ನವಿರಾಗಿ ಮೂಡಿ ಬಂದು ನಿಜ ಪ್ರೀತಿಯೇ ವಿಜೃಂಭಿಸಿದೆ.

 ತಾನು ಬಯಸಿದ ಜೀವದ ಹಿತವನ್ನೇ ಬಯಸಿ ಭವಿಷ್ಯದ ಹಿತಕ್ಕಾಗಿ ಎಲ್ಲವನ್ನೂ ಪಣಕ್ಕಿಟ್ಟು ಪವಿತ್ರ ಪ್ರೀತಿಗಾಗಿ ಕಥೆಯ ನಾಯಕ ಅನುಕ್ಷಣವೂ ಹಾತೊರೆಯುತ್ತಾನೆ. ಎಲ್ಲ ರೀತಿಯ ಕಷ್ಟವನ್ನು ಎದುರಿಸಲು ಸದಾ ಸನ್ನದ್ದವಾಗಿರುತ್ತಾರೆ. ಪ್ರೇಮದ ಯಶಸ್ಸಿಗಾಗಿ ನಿಜ ಪ್ರೇಮಿಯು ಯಾವುದೇ ತ್ಯಾಗಕ್ಕೂ ಸಿದ್ಧ ಎನ್ನುವುದನ್ನು ನಿರೂಪಿಸಲು ಯಾವುದೇ ರೀತಿಯ ಆಪತ್ತಿಗೂ ಬೆಲೆ ತೆರಲು ಮನು ಸಿದ್ಧವಾಗಿರುತ್ತಾನೆ.

ಬಯಸಿದ್ದೆಲ್ಲಾ ಬಾಳಲ್ಲಿ ಲಭಿಸಲು ಹಣ ಎನ್ನುವ ಇಂಧನವು ಅಗತ್ಯವಿರುತ್ತದೆ. ಮನು ಸಾಮಾನ್ಯ ಡ್ರೆöÊವರ್ ಆಗಿರುತ್ತಾನೆ. ಆತನಿಗೆ ತಿಂಗಳಿಗೆ ಕೇವಲ ಹನ್ನೆರಡು ಸಾವಿರ ಸಂಬಳ. ಆದರೆ ಆತ ಮತ್ತು ಪುಟ್ಟಿಯ ಪ್ರೇಮದ ಯಾತ್ರೆಯಲ್ಲಿ ಜೊತೆಯಾದವು ಸಾವಿರಾರು ಬಣ್ಣದ ಕನಸುಗಳು. ನಿತ್ಯವೂ ಕಾಣುವ ಕನಸುಗಳು ಎಂದು ನೆರವೇರುತ್ತವೆಂದು ದಾಪುಗಾಲಿಟ್ಟು ಕಾಡುವ ಪ್ರಶ್ನೆಗಳ ಸರಮಾಲೆಗಳು. ಇವುಗಳನ್ನೇ ಬೆಂಬತ್ತಿ ಮನುವಿನ ಮನಸ್ಸು ಓಡುತ್ತಿರುತ್ತದೆ.

 ‘ಪುಟ್ಟಿಗೆ ಕಡಲ ಕಿನಾರೆಯಲ್ಲಿ ಮನೆಯನ್ನು ಕಟ್ಟಿ ಅಲ್ಲೇ ಜೀವನದ ಕೊನೆವರೆಗು ನೆಲೆಯಾಗಬೇಕೆನ್ನುವ ಆಸೆ. ಅವಳ ಆಸೆಯನ್ನು ನೆರವೇರಿಸುವ ನಿಜ ಪ್ರೇಮಿಯಾಗಿ ಮನು ಸಿದ್ಧವಾಗುತ್ತಾನೆ. ಅವಳ ಆಸೆಯನ್ನು ಈಡೇರಿಸುವುದೇ ತನ್ನ ಬಾಳಿನ ಗುರಿಯೆಂದು ಪಣತೊಡುತ್ತಾನೆ. ಅನುಮಪ ಕಡಲ ಕಿನಾರೆಯ ಬಳಿ ಮನೆಕಟ್ಟಿ, ಬೀಸುವ ಅಲೆಗಳನ್ನು ಎಣಿಸುತ್ತಾ, ಮುಸ್ಸಂಜೆಯ ರಂಗಲ್ಲಿ ಮೆಲುಗಾಳಿಗೆ ತನುವೊಡ್ಡಿ, ಅಲೆಗಳ ನಿನಾದಲ್ಲಿ ಪ್ರೇಮದ ಸ್ವರಮೇಳದಲ್ಲಿ ಅನುರಾಗದ ಗೀತೆಯನ್ನು ಕೇಳುತ್ತಾ ಪ್ರೇಮದ ಸುಧೆಯನ್ನು ಸವಿಯುತ್ತಾ ಬಾಳಿಗೆ ಜೊತೆಯಾದವಳ ನಗುವಿನಲ್ಲಿ ಬಾಳು ಸಾಗಲಿ ಎನ್ನುವ ಮಹೋನ್ನತ ಆಸೆಯಿಂದಮನು ನಿತ್ಯವೂ ತವಕಿಸುತ್ತಿರುತ್ತಾನೆ.

ಆಸೆ ಕೈಗೂಡಲು ಕಾಡುವ ಹಣದ ಕೊರತೆಗೆ ಅವಕಾಶವೊಂದು ಅಪರಾದದ ರೂಪದಲ್ಲಿ ಎದುರಾಗುತ್ತದೆ..! ಮಾಡದ ತಪ್ಪನ್ನು ಒಪ್ಪಿಕೊಂಡು ಯಾರನ್ನೋ ರಕ್ಷಿಸಿ ಇನ್ನೇನೋ ಅಪೇಕ್ಷಿಸಿ ತನ್ನ ಬದುಕು, ಜೀವ ಒತ್ತೆಯಿಡುತ್ತಾನೆ. ಎಲ್ಲಕ್ಕೂ ಸಿದ್ಧನಾದ ನಿಸ್ವಾರ್ಥ ಪ್ರೇಮಿ ಭವಿಷ್ಯದಲ್ಲಿ ತನ್ನ ಗೆಳತಿಯ ಸುಖಕ್ಕಾಗಿ ಅವಳ ಕನಸುಗಳ ಸಕಾರಕ್ಕಾಗಿ ಬೇಡುತ್ತಾ ಶರಣಾಗುತ್ತಾನೆ. ಎಲ್ಲವೂ ಹೃದಯವೊಪ್ಪಿದ ಅವಳಿಗಾಗಿ, ಅವಳೊಲುಮೆಯ ನಗುವಾಗಿಯೇ ಆಗಿರುತ್ತದೆ ಎನ್ನುವುದು ದಿಟ..!

ಆದರೆ ಮುಂದೇನಾಯ್ತು..? ಕಥೆಯಲ್ಲಿ ನಾಯಕ ಮನುವಿನ ಆಸೆ ಕೈಗೂಡಿ ಪುಟ್ಟಿಯೊಂದಿಗೆ ಕಡಲ ಕಿನಾರೆಯಲ್ಲಿ ಸಂಭ್ರಮಿಸಿದನೇ..? ಇಲ್ಲವೇ ಆಮಿಷಕ್ಕೆ ಬಲಿಯಾಗಿ ಮಾಡದ ತಪ್ಪಿಗೆ ಬಲಿಯಾದನೇ..? ಅವನು ಬಣ್ಣದ ಕನಸುಗಳು ಕಮರಿ ಬದುಕು ಜೀವಂತ ಸ್ಮಶಾಣವಾಯಿತೇ..? ಎಲ್ಲವೂ ವಿಧಿಯಾಟವೇ ಅಂಕಿತವಾಯಿತೆ..? ಎಲ್ಲಕ್ಕೂ ಉತ್ತರವನ್ನು ಚಿತ್ರ ನೋಡಿಯೇ ಹೇಳಿ.

ಒಟ್ಟಾರೆ ಪ್ರೇಮದ ನದಿಯು ತನ್ನಲ್ಲಿ ಕನುಸಗಳನ್ನು ದಹಿಸಿಕೊಳ್ಳುತ್ತಾ ಕಂಬನಿಗಳನ್ನು ತನ್ನೊಂದಿಗೆ ಹೆಚ್ಚಿಸಿಕೊಳ್ಳುತ್ತಾ ಕಣ್ಣೀರ ಕಡಲಲಿ ಮರೆಯಾಗುತ್ತದೆ. ಪರಿಯನ್ನು ತೆರೆಯ ಮೇಲೆ ತೆರೆದಿಡುವ ಬಗೆಯನ್ನು ನಿರ್ದೇಶಕ ಹೇಮಂತ್ ಎಂ. ರಾವ್ ಬಹಳ ಅಚ್ಚುಕಟ್ಟಾಗಿ ಮಾಡಿದ್ದಾರೆ. ನೋಡುಗರ ಮನಕ್ಕೆ ಸೈ ಎನ್ನಿಸುವ ಚಿತ್ರ ಮಾಡಿದ್ದಾರೆ. ಅವರ ರಚನೆ ಮತ್ತು ನಿರ್ದೇಶನ ಮೋಡಿ ಮಾಡಿದೆ.

 ಸಪ್ತ ಸಾಗರದಾಚೆ ಎಲ್ಲೋ ಸಿನಿಮಾ ಸಾಕಷ್ಟು ಗಟ್ಟಿಯಾಗಿ ಸದ್ದು ಮಾಡುವುದರಲ್ಲಿ ಯಾವುದೇ ಅನುಮಾನವಿಲ್ಲ. ಚಿತ್ರದ ಛಾಯಾತ್ರಹಣ, ಸಂಗೀತ, ಚಿತ್ರ ಕಥೆ, ಪಾತ್ರಗಳ ಅಭಿನಯದಲ್ಲಿ ಎಲ್ಲರೂ ಸೈ ಎನ್ನಿಸಿಕೊಂಡಿದ್ದಾರೆ. ಹಲವು ದಿನಗಳ ನಂತರ ಕನ್ನಡಲ್ಲಿ ಮೂಡಿದ ಒಂದೊಳ್ಳೆ ಸಿನಿಮಾ ಎನ್ನುವುದರಲ್ಲಿ ಯಾವುದೇ ಸಂದೇಹವಿಲ್ಲ. ಚಿತ್ರ ತಂಡಕ್ಕೆ ಶುಭವಾಗಲಿ.

ರಾಮಚಂದ್ರ ಸಾಗರ್