Wednesday, 2 July 2025

ಪ್ರೀತಿಯ ನದಿಯ ಜೊತೆಯಾಗಿ ..

 

(ಚಿತ್ರದಲ್ಲಿರುವ ರೂಪದರ್ಶಿ: ಪ್ರೀತು ಪೂಜ)

ಪ್ರೀತಿಯ ಮಾಯೆಯ ಇಂಪು ಸೊಗಸಾಗಿ ನನ್ನ ತನು ಮನಕ್ಕೆ ಆವರಿಸಿ ಕಾಡುತಿದೆ. ಪ್ರೀತಿಯ ಸುಂದರ ಕುಸುಮದಲ್ಲಿ ನಿರ್ಮಲತೆ ಆ ಭಾವದಲ್ಲಿ ಮೂಡಿದ ಪಾವನ ಸತ್ಕಾರದ ಪ್ರತಿಯೊಂದು ಹಿತಧಾರೆಯ ಮೊರೆತ ಸುಯೋಗದ ಅನುಭವವನ್ನು ನೀಡುತ್ತಿರಲು ನಾನು ನಿನ್ನದೇ ಸವಿ ನೆನಪುಗಳ ಮೂಟೆಯ ಭಾರವನ್ನು ಹೊತ್ತು ಅದೇ ನದಿಯ ತಟದಲ್ಲಿ ಆಸೀನಳಾಗಿದ್ದೇನೆ ನಿನ್ನದೇ ಕನವರಿಕೆಯಲ್ಲಿ..!

ಪ್ರತಿ ಮುಂಜಾನೆ ಅರಳುವ ಮಲ್ಲಿಗೆಯ ನಗುವಿನಲ್ಲಿ ಪಳಿಸಿ ನಗುವ ಮೋಹಕ ರವಿಕಾಂತಿಯ ಹೊಳಪು ಸೊಬಗಿನಲ್ಲಿಯೂ ನಿನ್ನದೇ ರೂಪ ಮೂಡಿದಂತೆ, ನೀನೆ ತುಂಟ ನಗುಬೀರಿ ನಕ್ಕಂತೆ. ಹಾಗೇ ನದಿಯ ಸಾವರಿಸಿ ಬೀಸುವ ತಂಗಾಳಿಯ ಹಿತಧಾರೆಯ ಸ್ಪರ್ಶದಲ್ಲಿ ನೀನೇ ಬಂದು ಸಮೀಪಿಸಿ ಒಲುಮೆಯಿಂದ ನನ್ನ ಕೈಹಿಡಿದಂತ ಅನುಭೂತಿ. ನದಿಯ ಜುಳು ಜುಳು ನಿನಾದದ ಸವಿಗಾಗನದಲ್ಲಿ ನನ್ನನ್ನು ನೀ ಪ್ರೀತಿಯಿಂದ ಕರೆದಂತ ಸುಖ..!

ಮುಂಜಾನೆಯ ಮಂಜು ಲೇಪಿತ ಗಿರಿ ಶಿಖರದ ಮೇಲಿನ ಸೊಬಗಿನ ರೂಪಕದಲ್ಲಿ ನೀ ನುಡಿದಂತೆ ನನ್ನದೇ ರೂಪದ ಬೊಂಬೆ ಉದಿತವಾದಾಗ ನೀ ಕೈಹಿಡಿದು ನಡೆಸುವ ಸುಂದರ ಪಥದಡೆ ನಿನ್ನನ್ನೇ ಸೌಜನ್ಯದಿಂದ ಒಪ್ಪಿ ಸಮ್ಮತದಿಂದ ಸಾಗುವ ಪರಮ ಒಲುಮೆಯ ಸಾನಿಧ್ಯವನ್ನು ಅಪೇಕ್ಷಿಸುವ ಮನದಿಂದ ನಾ ನಲಿಯುತಿರುವೆ ಗೆಳೆಯ..!

ಮಳೆ ಬಿಡುವು ನೀಡಿ ಭೂಮಿ ಸೂರ್ಯನ ಒಲುಮೆಯಿಂದ ಕರೆದಾಗ ಆಗಸದಿಂದ ಚಿಮ್ಮಿದ ಬಣ್ಣದ ಚಿತ್ತಾರದ ವೈಯ್ಯಾರದ ರೂಪಕದ ಕಾಮನ ಬಿಲ್ಲಿನ ರಂಗು ನಿಸರ್ಗವ ಸ್ವರ್ಗವಾಗಿಸಿ ರಂಗು ಚೆಲ್ಲಿ ಚಿತ್ತಾರ ತುಂಬಿದಾಗ ನನ್ನ ಮೊಗದಲ್ಲಿ ನೆಲೆಯಾದ ಆಗ ರಂಗಿನ ತುಸು ನಗುವು ಕೂಡ ನಿನ್ನ ಕಾಡುವ ತುಂಟ ನಗುವಿನ ಹಿತವಲ್ಲವೇ..?

ದಿನವಿಡೀ ಕಾಯುತ್ತಾ ಮನವೆಲ್ಲಾ ಕಾದು ನಿನ್ನದೇ ನೆನಪಲ್ಲಿ ಮುಸ್ಸಂಜೆಯ ಸ್ವಾಗತಿಸುವ ಬದುಕು ನನ್ನದಾದರೇ ಅದೇ ಮುಸ್ಸಂಜೆಯ ರವಿಯಾಗಿ ನನ್ನೆದೆಯ ಪ್ರೇಮದ ಕಡಲನ್ನು ಸೇರಲು ಹಾತೊರೆದು ಬರುವ ನಾವಿಕ ನೀನಲ್ಲವೇ..? ನಾನಿಲ್ಲದೇ ನೀನಿರಲು ಸಾಧ್ಯವಿಲ್ಲ ಎನ್ನುವುದು ಕೂಡ ಈ ವಿಶ್ವದಲ್ಲಿ ರವಿ, ಚಂದ್ರರ ಇರುವಿಕೆಯಷ್ಟೇ ಸತ್ಯ. 

ಪ್ರೀತಿ ನದಿಯಾಗಿ ನಾನು, ಒಲುಮೆಯಾ ನಾವಿಕನಾಗಿ ನೀನು...ಹೀಗೆ ನಾವಿಬ್ಬರೂ ಒಂದಾಗಿ ಪ್ರೇಮದ ಕಡಲಿನಲ್ಲಿ ಪ್ರೀತಿಯ ನೌಕೆಯಲ್ಲಿ ಒಂದಾಗಿ ಬಾಳೋಣ ಬಾ ಗೆಳೆಯಾ.. ಪ್ರೀತಿಯೆನ್ನುವ ಮಾಯೆ.. ಪ್ರೀತಿ ಎನ್ನುವ ಅಮೃತ ಎರಡೂ ನಮ್ಮ ಬಾಳಿಗೆ ಉಡುಗೊರೆಯಲ್ಲವೇ..? ಎಲ್ಲವೂ ಅರಿತ ಸವಿನಯದ ಸೌಜನ್ಯ ಹೆಜ್ಜೆಯ ಸಾರಥ್ಯ ನಮ್ಮದು ಎನ್ನುವುದು ನಿನಗೂ ಗೊತ್ತು. ಇದೇ ಪ್ರೀತಿಯ ಹಂದರಲ್ಲಿ ಸವಿ ಮಾತುಗಳ ಓಲೆ ನಿನಗಾಗಿ ಈ ಕ್ಷಣ ಹೆಣೆದಿರುವೆ ಒಲುಮೆಯಿಂದ ಆಗಮಿಸಿ ಪ್ರೀತಿಯಿಂದ ಕಿವಿಗೊಟ್ಟು ನನ್ನೆದೆಯ ಉಸಿರಲ್ಲಿ ಕೇಳು ಬಾ ಇನಿಯಾ.

ಕಾದಿರುವೆ ನಿನ್ನದೇ ನಿರೀಕ್ಷೆಯಲ್ಲಿ ಅಪರಿಮಿತ ಕನಸುಗಳ ನದಿಯಾಗಿ.. 

ನೀನೆನ್ನುವ ಪ್ರೀತಿಯ ಕಡಲನು ಸೇರುವ ನಿನ್ನೊಲವಿನ ಗೆಳತಿಯಾಗಿ..

ರಚನೆ: ರಾಮಚಂದ್ರ ಸಾಗರ್