Wednesday, 2 July 2025

ನಾನಲ್ಲವೇ..?

ಚಿತ್ರ ಕೃಪೆ: ಗಹನ ಗೌಡ

ಗುಳಿಕೆನ್ನೆಯಲಿ ಮೂಡಿದ ಅನುಪಮ ನಗುವಿನೊಡೆಯ 

ನನ್ನೊಲವಿನ ಮಮತೆಯ ಗೆಳೆಯಾ ನೀನಲ್ಲವೇ..


ಸೌಜನ್ಯದ ಹೆಜ್ಜೆಗೆ ಹೂಮಾಲೆಯ ತೋರಣವನು

ಪೋಣಿಸಿದ ಹೂವಿನ ಮನದೊಡೆಯ ನೀನಲ್ಲವೇ..


ಅನುರಾಗದ ಹಾಡಿಗೆ ಸಂಪ್ರೀತಿಯ ಪದಮಾಲೆಯು

ಕಟ್ಟಿದ ಒಲುಮೆಯ ಗಾರುಡಿಗನು ನೀನಲ್ಲವೇ..


ಅಕ್ಷಯದ ನಗುವನು ಬಾಳಿಗೆ ಕರುಣಿಸಿದವನು

ನಗುಧಾರೆಯ ಸಂಭಾವಿತ ಕರುಣಾಳು ನೀನಲ್ಲವೇ..


ತುಟಿಯಂಚಲಿ ಅರಳಿದ ಮೆಲುಗಾನದ ಸ್ವರವನು

ಪೋಣಿಸಿದ ಅಕ್ಕರೆಯ ಪೋರನು ನೀನಲ್ಲವೇ.. 


ಸಂಭ್ರಮದ ಜಾತ್ರೆಯಲಿ ಒಲವಿನ ತೇರನು

ನನಗಾಗಿ ಸಿಂಗರಿಸಿ ತಂದವನು ನೀನಲ್ಲವೇ..


ಹಸಿರುವನದ ಚೆಲುವಿನ ಚಿತ್ತಾರದ ಸಿರಿಯಲಿ

ನನ್ನೊಲವಿಗೆ ಹಾತೊರೆದು ಬರುವವನು ನೀನಲ್ಲವೇ..


ಜಗದೆಲ್ಲ ಪ್ರೀತಿಯನು ಕೈಸೆರೆಯಾಗಿಸಿ ನನ್ನೊಳು

ಧಾರೆಯೆರೆವ ಹೃದಯವಂತ ನೀನಲ್ಲವೇ..


ಒಲವಾಮೃತದ ಸವಿ ಪಾತ್ರೆಯನು ನಿನಗಾಗಿ

ನನ್ನಲಿಟ್ಟು ನಿನ್ನೊಲವು ಬಯಸಿದವಳು ನಾನಲ್ಲವೇ..?


ರಚನೆ: ರಾಮಚಂದ್ರ ಸಾಗರ್