Thursday, 8 December 2016

ನೀ ಮರೆಯದಿರು..

ಸುರಿವ ಬೆಳುದಿಂಗಳು 
ಕಪ್ಪಿರುಳಾಗಿ ಕಾಡುತಿದೆ
ಬೀಸುವ ತಂಗಾಳಿಯು 
ಬಿಸಿಯಾಗಿ ಸುಡುತಿದೆ..

ನುಣುಪಾದ ದಾರಿಯು 
ಕಂದರವಾಗಿ ಕಾಣುತಿದೆ
ಮಂದಹಾಸದ ಮೊಗವು
ನಗುವುದನು ಮರೆತಿದೆ..

ಮೋಜಾದ ಬದುಕು
ಗೋಳಿನಾ ಅಬುಧಿಯಾಗಿದೆ
ಅಮಲೇರಿಸಿದ ಪ್ರೀತಿಯು
ತಳಮಳವೇರಿಸಿ ಕದಲಿಸುತಿದೆ..

ಮಧು ಕರುಣಿಸಿದ ಕನಸು
ಕಣ್ಣೀರ ಸರಕಾಗಿವೆ
ಶಯನಿಸುವ ಘಳಿಗೆಯಲು
ಕಣ್ಣುರಿಯ ಕಾಟವಾಗಿದೆ..

ಆನಿಶ ಕಾಡುವ ನೋವಿಗೆ
ನಿನ್ನಾಗಮನವೇ ಔಷಧಿಯಾಗಿದೆ
ಕಂಗೆಡುವ ಮನಕೆ
ನಿನ್ನಾಸರೆಯೇ ನೆಲೆಯಾಗಿದೆ..

ಗೆಳೆಯಾ..
ನೀ ಬಾರದೆ ಉಳಿಯದಿರು
ನನ್ನ ಮೊಗದಲಿ ನಗು
ಅರಳಿಸುವುದನು ಮರೆಯದಿರು..




Wednesday, 7 December 2016

ಹಸಿದವನ ಹೊಟ್ಟೆ ತುಂಬಲಿ..

ಹಸಿದವನಿಗೆ ನೀ ನೀಗದಿದ್ದರೂ
ಕಸಿಯದಿರು ಅವನ ಅನ್ನವನು.

ಇದು ನಾನೇ ಬರೆದ ಕವಿತೆಯ ಸಾಲುಗಳು. ಇದರ ಮರ್ಮವನ್ನು ಆಗಾಗ ಕಾಣುತ್ತಲೇ ಇರುತ್ತೇನೆ, ಕಾಣುವುದು ಸಾಮಾನ್ಯವಾಗುತ್ತಿದೆ ಎಂದರೂ ತಪ್ಪಿಲ್ಲ, ಶ್ರಮಿಕ ವರ್ಗ ಶ್ರಮವಹಿಸಿ ದುಡಿದು ಗಳಿಸಲು ನಿತ್ಯ ಸಾಹಸಪಡುತ್ತದೆ. ಉದಾಹರಣೆಗೆ ಕೈಗಾರಿಕೆ, ಗಣಿ, ನೈರ್ಮಲೀಕರಣ ನಿರ್ವಹಣೆ ಹೀಗೆ ಸಾವಿರಾರು ಜೀವಕ್ಕೆ ಅಪಾಯವೊದಗುವ ಕಾರ್ಯದಲ್ಲಿ ದುಡಿಯುತ್ತಾರೆ. ಗಣಿ ಕುಸಿತಗಳಿಗೆ ಬಲಿಯಾಗಿ ಸತ್ತವರೆಷ್ಟು. ಆದರೂ ದುಡಿಯಲು ತಮ್ಮ ಹಸಿದ ಹೊಟ್ಟೆಯನ್ನು ತುಂಬಿಸಿಕೊಳ್ಳಲು ಶ್ರಮಿಕ ವರ್ಗ ಹೋರಾಡುತ್ತದೆ. ಆದರೆ ಗಣಿಯಿಂದ ಬರುವ ಚಿನ್ನ, ವಜ್ರ ಏನೇ ಖನಿಜವಾಗಲಿ ಅದು ವಿಜೃಂಬಿಸುವುದು ಮಾತ್ರ ಸಿರಿವಂತನ ಮನೆಯಲ್ಲಿ. ಬಡವನಿಗೆ ಸಿಗುವ ಕೂಲಿಯಾದರೂ ಸರಿಯಾಗಿ ದೊರೆಯುತ್ತದೆಯೇ..? ಅವರಿಗೆ ಕೆಲಸಕ್ಕೆ ಅಗತ್ಯ ಸಲಕರಣೆಗಳನ್ನು ನೀಡಲಾಗುತ್ತದೆಯೇ..? ಅವರ ಜೀವಕ್ಕೆ ಮತ್ತು ಕುಟುಂಬಕ್ಕೆ ಭದ್ರತೆಯನ್ನು ನೀಡುಲಾಗುತ್ತದೆಯೇ..? ಎಲ್ಲವೂ ಕಾನೂನು ಪ್ರಕಾರ ಮಾಡಬೇಕು. ಆದರೆ ಎಷ್ಟೂ ಉದ್ದಿಮೆಗಳು ನಿಯಮಗಳನ್ನು ಗಾಳಿಗೆ ತೂರಿ ಕಾರ್ಮಿಕರ ಬದುಕನ್ನು ಅಂದರೆ ದುಡಿದು ತಿನ್ನುವವರ ಬದುಕನ್ನು ಬಿಕಾರಿ ಮಾಡಿವೆ. ಅವರಿಗೆ ಸಿಗಬೇಕಾದ ಭವಿಷ್ಯನಿಧಿ ವಂತಿಗೆ ಜೀವವಿಮೆ ಸೌಲಭ್ಯಗಳನ್ನು ಕಟ್ಟದೇ ಎಷ್ಟೋ ಕಂಪನಿಗಳು ಮೃತ ಕಾರ್ಮಿಕನ ಕುಟುಂಬವನ್ನು ಬೀದಿಗೆ ಬಿಸಾಡಿವೆ. ಸಮಾಜದಲ್ಲಿ ಎಲ್ಲದಕ್ಕೂ ನಾವೇ ಸೈ ಎನ್ನಿಸಿಕೊಳ್ಳುವ ಹಲವು ಜನನಾಯಕ ಚುನಾವಣೆಗಳನ್ನು ಗರ್ಜಿಸುವುದನ್ನು ನಾವು ಕೇಳಿದ್ದೇವೆ, ನಾನು ಚುನಾವಣೆಗೆ ನಿಂತಿರುವುದೇ ಶ್ರಮಿಕರ ಉದ್ದಾರಕ್ಕೆ, ಹಸಿವನಿಗೆ ಅನ್ನವನ್ನು ದೊರಕಿಸಿ ಕೊಡುವುದಕ್ಕೆ, ಅವನ ದಾರಿದ್ರ್ಯವನ್ನು ನೀಗಲಿಕ್ಕೆ..!! ಮಹಾದಾಶ್ಚರ್ಯವಾಗುತ್ತದೆ ನಿರ್ಗತಿಕರನ್ನು ಅಸಂಘಟಿತವಲಯದ ನೊಂದ ಶ್ರಮಿಕರನ್ನು ನೋಡಿದಾದ ಚುನಾವಣೆಯಲ್ಲಿ ಗುಡುಗಿದವರೆಲ್ಲಿ ಕಾಣೆಯಾದರು ಎಂಬ ಭ್ರಮೆ ಕಾಡುವುದಂತೂ ಸತ್ಯ ಜೊತೆಗೆ ಎಲ್ಲವೂ ನಾಟಕ ಎಂಬುದು ಮಾತ್ರ ಬೆತ್ತಲೆಯಾಗುತ್ತದೆ.

ದೇಶದ ಹಲವಾರು ಮಹತ್ವಾಕಾಂಕ್ಷೆಯ ಯೋಜನೆಗಳು ಬಡತನ ನಿವಾರಣೆ ಮತ್ತು ಶ್ರಮಿಕ ವರ್ಗದ ಉದ್ದಾರಕ್ಕೆಂದು ಇವೆ. ಇವು ಸಾಮಾನ್ಯವಾಗಿ ಆಯವ್ಯದ ಒಟ್ಟು ಮೊತ್ತದ ಶೇ 10ಕ್ಕಿಂತ ಹೆಚ್ಚು ಇದ್ದೇ ಇರುತ್ತದೆ. ಈ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಾಗ ದೇಶದಲ್ಲಿ ಬಡತನ ರೇಖೆಗಿಂತ ಕೆಳಗಿದ್ದವರು 44% ಜನರಿದ್ದರು. ಆದರೆ ಅದು 2000 ರ ವರ್ಷಕ್ಕೆ ಶೇ 50 ಕ್ಕೆ ಏರಿತ್ತು. ನಂತರ ಈಗ 2015ರ ವೇಳೆ ಭಾರತೀಯ ರಿಸರ್ವ ಬ್ಯಾಂಕ್ ಮಾಹಿತಿಯಂತೆ ಶೇ 21.92 ರಷ್ಟು ದೇಶದ ಜನ ಬಡತನ ರೇಖೆಗಿಂತ ಕೆಳಗಿದ್ದಾರೆ. ಅಂದರೆ ದೇಶ ಸ್ವಾತಂತ್ರ್ಯವಾದಂದಿನಿಂದ ಇಲ್ಲಿವರೆಗೇ ಬಡತನ ನಿವಾರಣೆಗೆ ಮತ್ತು ಶ್ರಮಿಕ ವರ್ಗದ ಉನ್ನತೀಕರಕರಣಕ್ಕೆ ಮಾಡಿದ ವೆಚ್ಚವೇನಾಯಿತು. ಅದು ಯಾರಿಗೆ ಮುಟ್ಟಿತು. ಒಂದು ವೇಳೆ ಶ್ರಮಿಕ ವರ್ಗಕ್ಕೆ ಮುಟ್ಟಿದ್ದಲ್ಲಿ ಅವರು ಏಕೆ ಇನ್ನೂ ಬಡವರಾಗಿಯೇ ಉಳಿದಿದ್ದಾರೆ. ಅವರ ನೋವುಗಳೇಕೆ ಮರೆಯಾಗಿಲ್ಲವೆಂಬುದು ಮಾತ್ರ ವಿಸ್ಮಯ. ಸರ್ಕಾರದ ದ್ರವ್ಯವನ್ನು ಸೆಳೆದು ವೆಚ್ಚಮಾಡುವುದು ಉಪಯುಕ್ತವಾಗಿದ್ದಲ್ಲಿ ಬಡತನ ದಿನದಿಂದ ದಿನಕ್ಕೆ ಕಡಿಮೆಯಾಗಬೇಕಿತ್ತು ಎಂಬುದು ಮೇಲ್ನೋಟಕ್ಕೆ ಕಾಣುತ್ತದೆ. ಈ ದೇಶ ಎಷ್ಟೇ ಅಭಿವೃದ್ಧಿ ಎಂದು ಎಣಿಸಿದರೂ ನೈಜ ಅಭಿವೃದ್ಧಿಯು ದೇಶದಲ್ಲಿರು ಬಡವರೆಲ್ಲರೂ ಉನ್ನತಿಹೊಂದಿದಾಗ ಮಾತ್ರವೇ ದೇಶ ಉದ್ಧಾರವಾದಂತೆ ಜೊತೆಗೆ ದೇಶದ ಸಮಾಜವೂ ಬೆಳಗಿದಂತೆ. ದುಡಿದು ತಿನ್ನುವ ಮತ್ತು ದುಡಿಯದೇ ತಿನ್ನುವ ವರ್ಗಗಳೆರಡರ ನಡುವೆ ಇರುವ ಅಂತರ ಕಡಿಮೆಮಾಡಬೇಕು. ಸಂಪತ್ತು ಕೇಂದ್ರೀಕೃತ ವಲಯವನ್ನು ಮುಕ್ತವಾಗಿ ಬಡವರಿಗೆ ಹಂಚಬೇಕು. ದೇಶದಲ್ಲಿ ಆಸ್ತಿಗಳಿಕೆಗೆ ಮಿತಿ ಹೇರಬೇಕು. ಆ ಮೂಲಕ ಮಿಕ್ಕಿದ ಭಾಗವನ್ನು ಶ್ರಮಿಕ ಬಡ ವರ್ಗಕ್ಕೆ ನೀಡುವು ಮೂಲಕ ಸಾಮಾಜಿಕ ಸಮಾನತೆಯನ್ನು ಎತ್ತಿ ಹಿಡಿಯುವ ಕಾರ್ಯವಾಗಲೇಬೇಕು. ಆಗ ಮಾತ್ರ ಬಡತನ ನಿವಾರಣೆ ಸಾಧ್ಯ.
ಹಲವಾರು ಕಡೆ ಶ್ರಮಿಕರಿಗೆ ನೀಡುವ ಸೌಲಭ್ಯಗಳನ್ನು ವಂಚಿಸಲಾಗುತ್ತದೆ. ಅವರಿಗೆ ನೀಡಬೇಕಾದ ಜೀವದ ಸುರಕ್ಷತೆಗಳಾದ ಭವಿಷ್ಯನಿಧಿ, ವಿಮೆ, ವೇತನಗಳನ್ನು ಸರಿಯಾಗಿ ನೀಡುವುದಿಲ್ಲ. ಕೆಲಸ ನಿರ್ವಹಿಸುವಾಗ ಶ್ರಮಿಕರು ಧರಿಸಬೇಕಾರ ಅಗತ್ಯ ಸುರಕ್ಷಾ ಸಲಕರಣೆಗಳನ್ನು ನೀಡುವುದಿಲ್ಲ. ಸುರಕ್ಷತಾ ಸಲಕರಣೆಯ ವೆಚ್ಚದ ಉಳಿತಾಯದಿಂದ ಉದ್ದಿಮೆಯ ಮಾಲೀಕ ಲಾಭವಾಯಿತೆಂದು ಖುಷಿಪಡುತ್ತಾನೆ. ಇದರಿಂದ ಎಷ್ಟೋ ಜನ ಸತ್ತಿದ್ದಾರೆ. ಆದರೆ ಅದು ಗೌಣವಾಗಿದೆ. ಶ್ರಮಿಕನ ಜೀವಕ್ಕೆ ಬೆಲೆ ಇಲ್ಲದಾಗಿದೆ. ಅವರಿಗೆ ನೀಡಬೇಕಾದ ವೇತನವೂ ಸರಿಯಾಗಿ ದೊರೆಯದೇ ಕನಿಷ್ಟ ವೇತನ ಕಾಯ್ದೆ ಜಾರಿಯಲ್ಲಿದ್ದರೂ ಅದನ್ನು ಗಾಳಿಗೆ ತೂರಿದವರೂ ಇದ್ದಾರೆ. ತಿಂಗಳಿಗೆ 13,000 ಸಾವಿರ ವೇತನವಿದ್ದರೆ ಒಂದರ ಮೇಲೆ ಕೈಯಿಟ್ಟು ನಿನ್ನ ವೇತನ ಮೂರು ಸಾವಿವೆಂದು ತೋರಿಸುವ ವಂಚನ ಮನಸ್ಸುಗಳು ಬದುಕಿರುವವರೆಗೆ ಈ ಸಮಾಜದಲ್ಲಿ ಶ್ರಮಿಕವರ್ಗಕ್ಕೆ ನ್ಯಾಯ ಸಿಗುವುದು ಮರೀಚಿಕೆಯಾಗಿದೆ. ಇನ್ನೊಂದೆಡೆ ಗಮನಿಸಿದರೆ ಕಾರ್ಮಿಕ ಸಂಘಟನೆಗಳು ಹಲವಾರು ಇವೆ, ಆದರೆ ಅವರಲ್ಲಿ ಒಗ್ಗಟ್ಟಿನ ಕೊರತೆಯನ್ನು ಅಧಿಕಾರಶಾಯಿಯು ತರುತ್ತದೆ. ಆ ಮೂಲಕ ಒಡೆದು ಆಳುತ್ತದೆ ಜೊತೆಗೆ ತನ್ನ ಸ್ವಾರ್ಥವನ್ನು ಈಡೇರಿಸಿಕೊಳ್ಳುತ್ತದೆ. ಅಸಂಘಟಿತ ವಲಯ ಬೇಗನೇ ಎದ್ದೇಳಲಿ ಶಕ್ತಿಯುತವಾಗಿ ಬಲಗೊಂಡು ತಮ್ಮ ಸೌಲಭ್ಯಗಳತ್ತ ಗಮನ ಹರಿಸಲಿ ತನ್ಮೂಲಕ ತಮ್ಮನ್ನು ಅವಲಂಬಿಸಿದ ಕುಟುಂಬಗಳಿಗೆ ಆಸರೆಯಾಗಲಿ ದುಡಿದು ತಿನ್ನುವ ಜನ ಸಮಾಜದಲ್ಲಿ ದೇಶದಲ್ಲಿ ಉನ್ನತ ಸ್ಥಾನಕ್ಕೆ ಹೋಗಲಿ ಎಂದು ಎಲ್ಲರೂ ಆಶಿಸೋಣ..ಅವರೊಂದಿಗೆ ದುಡಿಯೋಣ..

Tuesday, 6 December 2016

ಕಾಲವೇ ನೀನೆಷ್ಟು ಕಠೋರ..

    ನಾ ನಡೆವ ದಾರಿಯಲ್ಲಿ      ಅಂದು ವರ್ಷಧಾರೆ ಜೋರಾಗಿತ್ತು ಸಂಜೆಯ ಸಮಯ ಬೇಗನೇ ಕತ್ತಲೆಡೆ ಜಾರುತ್ತಿತ್ತು, ಮುಂಗಾರು ಮಳೆಯ ಅಬ್ಬರ ಬಿರುಸಾಗಿತ್ತು. ಗುಡುಗುಗಳ ಗರ್ಜನೆಯಲ್ಲಿ ಮೂಡುವ ಮಿಂಚಿನ ಸಂಚು ಎದೆ ಝಲ್ಲೆಜಿಸುತ್ತಿತ್ತು. ಕೈಲಿದ್ದ ಕೊಡೆಯು ಗಾಳಿಗೆ ಬಾಗಿ ಬಾಗಿ ನಿಲ್ಲದೇ ಹಪಹಪಿಸುತ್ತಿತ್ತು. ಗಾಳಿಯ ವೇಗಕ್ಕೆ ಉದುರಿದೆಲೆಗಳು ತೂರಿ ಬಂದು ಎರಗುತ್ತಿದ್ದವು. ಆತಂಕದಲ್ಲೇ ಸಾಗುತ್ತಿದ್ದೆ ಕತ್ತಲು ಬೇಗನೆ ಆವರಿಸತೊಡಗಿತು. ಕತ್ತಲೆಯ ಛಾಯೆಯಲ್ಲಿ ಬೆಳಕು ಕರಗುತ್ತಿತ್ತು. ಕಾಲು ನಿಲ್ಲದೇ ಸಾಗುತ್ತಿತ್ತು. ತುಸುದೂರ ಸಾಗಿದಾಗ ಮಳೆ ಇನ್ನೂ ಜೋರಾಯಿತು. ಮುಂದೆ ಸಾಗುವುದು ಕಠಿಣವೆನಿಸಿ ಮರದ ರಕ್ಷೆಯಲ್ಲಿ ನಿತ್ತೆ. ಅಲ್ಲೇ ನಡುಗುತ್ತಾ ಭಯದಲ್ಲಿ ಯಾರೋ ಇದ್ದಂತೆ ಅನಿಸಿತು, ಭಯದಲ್ಲಿ ಜೋರಾಗಿ ಉಸಿರೆಳೆದಂತೆ ಕೇಳಿಸಿತು, ಗುಡುಗು ಜೋರಾಗಿ ಆರ್ಭಟಿಸುತ್ತಿತ್ತು. ಮಿಂಚುವ ಬೆಳಕು ಹರಿದಾಗ ನೋಡಿದೆ ಅದು ಅವಳೇ ನನ್ನೊಂದಿಗೆ ಫ್ಯಾಕ್ಟರಿಗೆ ಕೆಲಸಕ್ಕೆ ಬರುತ್ತಿದ್ದ ಅನುಸೂಯ. ಅವಳೂ ನನ್ನನ್ನು ಬೇಗನೇ ಆತಂಕದಲ್ಲೇ ಗುರುತಿಸಿದಳು, ಆದರೆ ನನ್ನನು ಕಂಡು ಇನ್ನೂ ಹೆದರಿದಂತೆ ನನಗನಿಸಿತು. ನಾನೇ ಮಾತನಾಡಿಸಿದೆ. ಮಳೆ ತುಂಬಾ ಜೋರಾಯಿತು ಬಿರುಮಳೆಗೆ ಸಾಗಲಾರದೆ ಇಲ್ಲೇ ನಿತ್ತಿರುವೆ ಎಂದಳು, ಸುಮಾರು ಒಂದು ತಾಸು ಕಳೆದರೂ ಮಳೆ ನಿಲ್ಲುತ್ತಿಲ್ಲವೆಂದು ಗೊಣಗುತ್ತಾ ಇದ್ದಳು. ಗಾಳಿ ನಿಧಾನಿಸಿದಂತೆ ಭಾಸವಾಯಿತು, ಆಗ ಅವಳು ಬೇಗನೇ ಮನೆಗೆ ಹೋಗಬೇಕು ಮನೆಯಲ್ಲಿ ಅಮ್ಮ ಒಬ್ಬಳೇ ಇದ್ದಾಳೆ, ಒಬ್ಬಳಿಗೆ ಕ್ರಮಿಸಲು ಹೆದರಿಕೆ ನೀವು ಬನ್ನಿ ಜೊತೆಯಾಗಿ ಸಾಗೋಣವೆಂದಳು, ನಾನು ಕೂಡ ಅದೇ ದಾರಿಯಲ್ಲಿ ಸಾಗಬೇಕಿದ್ದರಿಂದ
ಅವಳೊಂದಿಗೆ ನಡೆದೆ, ದಾರಿಯುದ್ದಕ್ಕೂ ನಡೆವಾಗ ಮೌನದಲ್ಲೇ ನಡೆದೆವು, ಇಬ್ಬರೂ ಒಂದೇ ಕಡೆ ಕೆಲಸಮಾಡಿದರೂ ಹೆಚ್ಚು ಪರಿಚಯವಿಲ್ಲ ಹಾಗೂ ಅವಳು ಯಾರೊಂದಿಗೂ ಹೆಚ್ಚು ಮಾತನಾಡದ್ದರಿಂದ ಅವಳ ಪರಿಚಯ ಕಡಿಮೆ. ನಿಧಾನವಾಗಿ ಸಾಗಿದಂತೆ ಮಳೆ ಮತ್ತೆ ಜೋರಾದಂತೆ ಎನಿಸಿತು ಆದರೂ ಜೊತೆಯಲ್ಲೇ ಸಾಗತೊಡಗಿದೆವು. ಅವಳು ನಿಮ್ಮ ಮನೆ ಇಲ್ಲಿ ಎಲ್ಲಿ ಎಂದು ಕೇಳಿದಳು. ನಾನು ಶಿವನ ದೇವಸ್ತಾನದ ಬೀದಿಯ ಕೊನೆಯಲ್ಲಿ ಒಬ್ಬರ ಮನೆಯಲ್ಲಿ ಬಾಡಿಗೆಯಿರುವೆ ಎಂದೆ. ಆಗ ಅವಳು ನಮ್ಮ ಮನೆ ಅದರ ಪಕ್ಕದ ಬೀದಿಯಲ್ಲಿ ಎಂದಳು. ನನಗೆ ಅವಳನ್ನು ಒಬ್ಬಳೇ ಬಿರುಮಳೆ ಗಾಳಿಯಲ್ಲಿ ಕಳಿಸಲು ಮನಸಾಗಲಿಲ್ಲ, ಅವಳಿಗೂ ಹೋಗಲು ಸಾಧ್ಯವಿರಲಿಲ್ಲ, ಅದನ್ನು ಅರಿತು ನಾನು ಮನೆವರೆಗೂ ಹೋಗಿ ಅವಳನ್ನು ಬೀಳ್ಕೊಟ್ಟು ಬಂದೆ. ಮಾರನೇಯ ದಿನ ಫ್ಯಾಕ್ಟರಿಯಲ್ಲಿ ನಾನು ಮಧ್ಯಾಹ್ನ ಕ್ಯಾಂಟೀನ್ನಲ್ಲಿ ಊಟಮಾಡುವಾಗ ಅವಳು ಬಂದು ನನಗೆ ಥ್ಯಾಂಕ್ಸ್ ಎಂದು ತುಸುನಕ್ಕಳು. ನಾನು ಬನ್ನಿ ಊಟಮಾಡೋಣವೆಂದೆ. ಅವಳು ಊಟಮಾಡಿ  ಎಂದು ನಡೆದಳು. ದಿನಾ ಕಳೆದಂತೆ ಅವಳು ನನಗೆ ಅತ್ಮೀಯವೆನಿಸುತ್ತಾ ಸಾಗಿದಳು, ಇಬ್ಬರೂ ಒಳ್ಳೆಯ ಸ್ನೇಹಿತರಾದೆವು. ದಿನವೊಮ್ಮೆಯಾದರೂ ಅವಳನ್ನು ಮಾತನಾಡಿಸಬೇಕೆನ್ನಿಸುತ್ತಿತ್ತು. ಅವಳು ಅಷ್ಟೇ ಒಮ್ಮೆಯಾದರೂ ನನ್ನ ಕಾಣುತ್ತಿದ್ದಳು. ದಿನಾ ಸಂಜೆ ನಾವಿಬ್ಬರು ಜೊತೆಯಾಗಿ ಮನೆಗೆ ನಡೆದುಕೊಂಡು ಹೋಗುವುದು ಹವ್ಯಾಸವಾಯಿತು. ಏನೇ ವಿಶೇಷವಿದ್ದರೂ ಆಕೆ ನನ್ನನ್ನೂ ತಪ್ಪದೇ ಶುಭಕೋರುತ್ತಿದ್ದಳು. ಇಬ್ಬರಲ್ಲೂ ಅತ್ಮೀಯತೆ ಗಾಢವಾಗಿ ಬೆಳೆಯತೊಡಗಿತು. ದಿನವು ಒಬ್ಬರನ್ನೊಬ್ಬರು ನೋಡದೇ ಇರದಷ್ಟು ಹತ್ತಿರವಾಗತೊಡಗಿತು ನಮ್ಮ ಮನಸ್ಸು. ಅದೂ ಪ್ರೀತಿಯಾಗಿ ಅರಳಿತು. ಈ ಸಮಯದಲ್ಲೇ ನಾವು ಕೆಲಸ ಮಾಡುತ್ತಿದ್ದು ಫ್ಯಾಕ್ಟರಿ ಆರ್ಥಿಕ ನಷ್ಟಕ್ಕೆ ಈಡಾಗಿ ಮುಚ್ಚುವ ಹಂತಕ್ಕೆ ತಲುಪಿತು. ಎಲ್ಲರೂ ಬೇರೆಡೆ ಕೆಲಸಕ್ಕೆ ಅಲಿಯುವ ಪ್ರಸಂಗ ಉದ್ಭವವಾಯಿತು. ಇಬ್ಬರ ಮನೆಯಲ್ಲೂ  ನಿರ್ವಹಣೆ ನಮ್ಮ ಆಧಾಯವೇ ಮೂಲವಾಗಿದ್ದರಿಂದ ನಮಗೆ ಆತಂಕ ಇನ್ನೂ ಹೆಚ್ಚಾಯಿತು. ಬೇರೆ ಕೆಲಸ ಹುಡುಕುತ್ತಾ  ಅಲೆಯುವುದು ನಿತ್ಯವಾಯಿತು. ಇದರ ನಡುವೆ ನಡುವೆ ಸ್ನೇಹಿತರೊಬ್ಬರು ಹಿಂದೆ ಮಾಡಿಸಿಕೊಟ್ಟಿದ್ದ ಪಾಸ್‍ಪೋರ್ಟ ಇತ್ತು. ಸ್ನೇಹಿತರೊಬ್ಬರು ದುಬೈನಲ್ಲಿದ್ದರು. ಅವರ ಸಲಹೆಯಂತೆ ನಾನೂ ದುಬೈಗೆ ಹೊರಡಲು ಸಿದ್ದವಾದೆ. ಇತ್ತ ಅನೂಗೆ ಇನ್ನು ಕೆಲಸ ಸಿಗದೆ ಅವಳು ಓಡಾಡುತ್ತಿದ್ದಳು. ಮನೆಯಲ್ಲೇ ಆಕೆಯೇ ದುಡಿದ ಹಣದಿಂದ ಆಕೆ ಮತ್ತು ತಾಯಿ ಬದುಕಬೇಕಿತ್ತು. ಸದ್ಯ ಆಕೆ ಕೂಡಿದ್ದ ಹಣದಿಂದ ಬದುಕು ನಡೆಸುತ್ತಿದ್ದರು. ಒಂದೆರಡು ದಿನದಲ್ಲಿ ಎಲ್ಲಾದರೂ ಕೆಲಸಸಿಗುವುದೆಂದು ಅನೇಕ ಕಡೆ ಸಂದರ್ಶನ ಮುಗಿಸಿ ಬಂದಿರುವುದಾಗಿ ಹೇಳಿದ್ದಳು. ನಾನು ಆಕೆಗೆ ದುಬೈಗೆ ಹೋಗುವ ವಿಚಾರ ತಿಳಿಸಿ ನನ್ನ ಬಳಿ ಇದ್ದ ಸ್ವಲ್ಪ ಹಣವನ್ನು ಅವಳಿಗೆ ನೀಡಲು ಹೋದೆ. ಆಕೆ ಸ್ವಾಭಿಮಾನಿ ಕಂಡಿತಾ ಬೇಡವೆಂದಳು. ಸಾಲವಾಗಿ ಎಂದು ನೀಡಿದೆ. ಮಾರನೆಯ ದಿನ ಬೆಳಿಗ್ಗೆ ಬೆಂಗಳೂರು ಹೊರಟು ನಂತರ ದುಬೈಗೆ ಹೋಗುತ್ತಿರುವುದಾಗಿ ತಿಳಿಸಿದೆ. ಏಕೋ ಅವಳ ಕಣ್ಣಲ್ಲಿ ಒಂದೆರಡು ಹನಿಗಳು ಉದುರಿದವು. ನನಗೂ ಎದೆಯ ಕನಸು ಹನಿಗಳಾಗಿ ಉದುರಿದವು, ಮೂರು ವರ್ಷಕ್ಕೆಂದು ಹೊರಟಿರುವೆ, ಒಳ್ಳೆ ಸಂಬಳ ಸಿಗುತ್ತದೆ. ಬಂದ ನಂತರ ಇಬ್ಬರೂ ಮದುವೆಯಾಗೋಣ, ಬಂದು ನಿಮ್ಮ ತಾಯಿಯೊಂದಿಗೆ ಮಾತನಾಡುವೆನೆಂದು ಹೊರಟೆ. ಅವಳಿಗೂ ನನ್ನನ್ನು ಬೀಳ್ಕೊಡಲು ಮನಸ್ಸಿರಲಿಲ್ಲ, ನನಗೂ ಅವಳಿಲ್ಲದೇ ಸಾಗಲು ಮನಸ್ಸು ಬಿಲ್‍ಕುಲ್ ಒಪ್ಪುತ್ತಿರಲಿಲ್ಲ. ಭಾರವಾದ ಮನದಲ್ಲೇ ಹೆಜ್ಜೆ ಹಾಕತೊಡಗಿದೆ, ಮತ್ತೆ ಮತ್ತೆ ಹಿಂತಿರುಗಿ ನೋಡಿದಾಗ ಅವಳೂ ಅದೇ ರೀತಿ ಹಿಂತಿರುಗಿ ನೋಡುತ್ತಿದ್ದಳು. ಮತ್ತೆ ಅವಳೆಡೆಯೇ ಸಾಗಿದೆ, ಅವಳನ್ನು ಸಂತೈಸಲು ಪ್ರಯತ್ನಿಸಿದೆ, ಅವಳೂ ನನ್ನನ್ನೂ ಸಂತೈಸಿ, ಮೂರು ವರ್ಷಗಳು ತಾನೇ, ಎಲ್ಲಾ ನಮ್ಮ ಒಳಿತಿಗಾಗಿಯೇ ಕಾಯೋಣವೆಂದು ನಮಗೆ ನಾವೇ ಧೈರ್ಯವನ್ನು ಹೇಳಿಕೊಳ್ಳುತ್ತಾ, ಮತ್ತೊಮ್ಮೆ ಬೀಳ್ಕೊಟ್ಟು ನಡೆದೆ. ಪರಸ್ಪರ ಕಣ್ಣು ಹನಿಗಳ ವಿನಿಮಯವಂತು ಆಯಿತು ಕಾಡಿತು.
    ಸರಿಯಾಗಿ ಎಲ್ಲ ಅಂದುಕೊಂಡಂತೆ ದುಬೈ ತಲುಪಿ ಕೆಲಸಕ್ಕೆ ಸೇರಿದೆ, ಕೆಲಸ ದಿನಕ್ಕೆ 14 ಗಂಟೆಯಂತೆ ಮಾಡುತ್ತಿದ್ದೆ. ಬೇಗನೇ ಹೆಚ್ಚು ಗಳಿಸಬೇಕೆಂಬ ಹಂಬಲಕ್ಕೆ ಆಯಾಸವೆನ್ನದೇ ಇನ್ನೂ ಹಗಲಿರುಳು ಕೆಲಸಸಿಕ್ಕರೂ ಮಾಡಲು ಹಠವಿಡಿದೆ. ನನ್ನ ಕೌತುಕಕ್ಕೆ ತಕ್ಕಂತೆ ಕೆಲಸದ ಕಂಪನಿಯವರು ರಜೆಯ ದಿನದಲ್ಲೂ ಕೆಲಸವಿದ್ದಾಗ ಕರೆಯುತ್ತಿದ್ದರು. ಹೋಗಿ ಕೆಲಸಮಾಡಿ ಸಂಪಾದಿಸತೊಡಗಿದೆ. ಮೊದಲಬಾರಿಗೆ ಅನೂಗೆ ಪತ್ರ ಬರೆದೆ. ನನ್ನ ವಿಳಾಸ, ಕೆಲಸದ ಬಗ್ಗೆ ಎಲ್ಲವನ್ನೂ ಹೇಳಿದೆ. ಇನ್ನೂ ಹಗಲಿರುಳು ಅವಳದೇ ಧ್ಯಾನದಲ್ಲೇ ಕಳೆಯುತ್ತಾ ಬಿಡುವಿಲ್ಲದೇ ಗಟ್ಟಿಯಾಗಿ ಕೆಲಸಮಾಡುತ್ತಾ ಸಾಗಿದೆ, ಅನೇಕ ಜನ ಭಾರತೀಯ ಸ್ನೇಹಿತರೊಂದಿಗೆ ಸ್ನೇಹವನ್ನೂ ಬೆಳೆಸಿದೆ. ಒಬ್ಬೊರದೂ ಒನ್ನೊಂದು ವ್ಯಥೆ ಎಲ್ಲರು ಇಲ್ಲಿ ಹೆಚ್ಚು ಸಂಪಾದಿಸಿ ಸ್ವದೇಶಕ್ಕೆ ಮರಳಿ ಏನಾದರೂ ಸ್ವಯಂ ಉದ್ಯೋಗಮಾಡಬಹುದೆಂಬ ಹಂಬಲದಿಂದ ಬಂದವರು. ಒಬ್ಬಬ್ಬರದೂ ಒನ್ನೊಂದು ಕಷ್ಟ ಕೇಳುತ್ತಾ ದಿನದೂಡುತ್ತಾ ನನಗೆ ನಾನೇ ಸಮಾಧಾನಿಸಿಕೊಲ್ಳುತ್ತಿದ್ದೆ. ಮಾರನೇಯ ತಿಂಗಳು ಅನು ಬರೆದ ಪತ್ರ ತಲುಪಿತು. ಅವಳೂ ಬೇರೊಂದು ಗಾರ್ಮೆಂಟ್ಸ್ ಕಂಪನಿಯಲ್ಲಿ ಕೆಲಸ ಸಿಕ್ಕಿರವುದಾಗಿ ತನ್ನ ಬಗ್ಗೆ ಎಲ್ಲವನ್ನೂ ಹೇಳಿ ನನಗೆ ಚೆನ್ನಾಗಿರು ಎಂದು ಪ್ರೀತಿಯಿಂದ ಹಾರೈಸಿ ಬರೆದಿದ್ದಳು. ಆ ಪದಗಳು ಇಂದಿಗೂ ಮಾಸದೇ ಹಾಗೇ ಮನದಲ್ಲಿ ಉಳಿದಿವೆ. ಅತೀ ಬಯಸಿದ ಜೀವದಿಂದ ಅನೇಕ ದಿನಗಳ ನಂತರ ಬಂದ ಮೊದಲ ಪದಗಳು ಬಹಳ ಇಷ್ಟ ಮತ್ತು ಮನಕ್ಕೆ ಅಂದು ಬಹಳ ಖುಷಿಯನ್ನು ನೀಡಿತ್ತು. 
    ನಂತರ ದಿನಗಳುರುಳಿದವೂ ಇಬ್ಬರ ನಡುವೆ ಪತ್ರಗಳ ವಿನಿಮಯ ಸಾಧ್ಯವಾದಾಗ ಒಮ್ಮೆ ದೂರವಾಣಿ ಕರೆ ಮಾಡುವುದು ಇನ್ನೂ ಒಲವ ಬಂಧವನ್ನು ಬಿಗಿಗೊಳಿಸುತ್ತಾ ಸಾಗಿತ್ತು. ಯಾವಾಗ ಒಬ್ಬರನ್ನೊಬ್ಬರು ನೋಡುತ್ತೇವೋ ಎಂಬ ಹಂಬಲ ಇನ್ನೂ ಗಾಢವಾಗತೊಡಗಿತು. ಇತ್ತ ನನಗೆ ದಿನಗಳೆದಂತೆ ದುಬೈಗೆ ಬಂದು ಎರಡು ವರ್ಷವಾಯಿತು. ಇನ್ನೂ ಭಾರತಕ್ಕೆ ಮರಳಲು ಉಳಿದಿರುವುದು ಒಂದೇ ವರ್ಷ. ಬೇಗನೇ ಮುಗಿದು ಹೋಗಲಿ ಎಂಬ ಖುಷಿಯಲ್ಲಿರುವಾಗ ಏಕೋ ಅನಾರೋಗ್ಯ ವಿಪರೀತ ಕಾಡತೊಡಗಿತು. ಸ್ನೇಹಿತರು ಅತೀ ಕೆಲಸದ ಒತ್ತಡ. ಸ್ವಲ್ಪ ವಿಶ್ರಾಂತಿ ಪಡೆ ಎಂದು ಸಲಹೆ ನೀಡಿದರು. ಒಂದೆರಡು ದಿನಕಳೆದೆ ವೈದ್ಯರನ್ನು ಭೇಟಿಯಾದೆ. ಮೈಮೇಲೆ ಗುಳ್ಳೆಗಳು ವಿಪರೀತ ಏರತೊಡಗಿದವು. ಅತೀ ಶೆಖೆಗೆ ಆದವೆಂದು ಚಿಕಿತ್ಸೆ ಪಡೆಯುತ್ತಾ ಸಾಗಿದೆ. ತಿಂಗಳುಗಳು ಕಳೆದರೂ ಗುಣವಾಗಲಿಲ್ಲ. ಖಾಯಿಲೆಯಿಂದ ಬಳಲತೊಡಗಿದೆ. ನಂತರ ನಿಧಾನವಾಗಿ ದೇಹದ ಮೇಲೆ ಕಲೆಗಳು ಹಾಗೆಯೇ ಉಳಿಯುತ್ತಾ ದೇಹದ ತುಂಬೆಲ್ಲಾ ಹರಡಿತು. ವೈದ್ಯರು ಇದೊಂದು ಅತೀ ಅಪರೂಪವಾಗಿ ಕೆಲವರಿಗೆ ಮಾತ್ರವೇ ಕಾಡುವ ಚರ್ಮವ್ಯಾಧಿಯೆಂದು ಇದು ಗುಣವಾಗಲೂ ಹಲವು ವರ್ಷಗಳು ಬೇಕಾಗಬಹದು ಹಾಗೂ ಕಲೆಗಳು ಮಾತ್ರ ಗುಣವಾಗಲು ಸಾಧ್ಯವಿಲ್ಲವೆಂದರು.  ನಾನು ನಿಧಾನವಾಗಿ ಚೇತರಿಸತೊಡಗಿದರೂ ಅನೂಗೆ ನಾನು ಉತ್ತಮ ಜೊತೆಯಾಗ ಬಲ್ಲೆನೇ ಎಂದು ಭಯ ಶುರುವಾಯಿತು. ಏನಾದರೂ ಮಾಡಿ ಅವಳನ್ನು ತ್ಯಾಗಮಾಡುವುದೇ ಒಳಿತು, ನಾನು ಚೇತರಿಸಿ ಮೊದಲಿನಂತಾಗಲು ಹಲವಾರು ವರ್ಷಗಳು ಬೇಕೆಂದು ವೈದ್ಯರು ಹೇಳಿದ್ದು ಹಾಗೂ ದೇಹದ ತ್ವಚೆಯು ಗುಣವಾಗದೇ ಉಳಿಯುತ್ತದೆಂದು ವೈದ್ಯರು ಹೇಳಿದ್ದು ಇನ್ನಷ್ಟು ಚಿಂತೆಗೆ ಹಚ್ಚಿತ್ತು. ಇನ್ನೂ ಭಾರತಕ್ಕೆ ಮರಳಲು ಉಳಿದಿರುವುದು ಕೇವಲ ಆರು ತಿಂಗಳು. ಇತ್ತ ಅನೂ ಕೂಡ ನಾ ಬರುವ ಘಳಿಗೆಗಾಗೆ ಕಾಯುತ್ತಾ ಕುಳಿತಿದ್ದಳು ಅತೀ ಪ್ರೀತಿಯಿಂದ. ಅದೂ ನನಗೆ ಇನ್ನೂ ಭಯವಾಗತೊಡಗಿತು. ದಿನಗಳುರುಳಿದಂತೆ ಭಾರತಕ್ಕೆ ಹೇಗೆ ಹೋಗಲಿ, ಹೇಗೆ ಅನೂ ಎದುರು ನಿಲ್ಲಲಿ ಎಂಬ ನೋವು ಕಾಡತೊಡಗಿತು. ಬೇಗನೇ ದಿನಗಳುರಳಿ ಎಂದು ಅಂದು ಅವಳಿಗಾಗಿ ಬೇಡುತ್ತಿದ್ದ ನಾನು ಇಂದು ದಿನಗಳುರುಳಿದಂತೆ ಹೆದರತೊಡಗಿದೆ. ಒಂದು ಗಟ್ಟಿ ನಿರ್ಧಾರಕ್ಕೆ ಅಂದು ಬಂದೇ ಬಿಟ್ಟೆ. ಏನಾದರೂ ಮಾಡಿ ಅನೂಳನ್ನು ತ್ಯಾಗಮಾಡುವುದೇ ಮಿಗಿಲೆಂದು ಅರಿತೆ, ಮನಸ್ಸನ್ನು ಗಟ್ಟಿಗೊಳಿಸಿದೆ. ಹರಿವ ಕಣ್ಣೀರಲ್ಲಿ ರೋಧಿಸುತ್ತಾ ಅವಳಿಗಾಗಿ ಒಂದು ಪತ್ರವನ್ನು ಬರೆದೆ. ಅದೂ ಬೇರೆಯವರ ಕೈಯಲ್ಲಿ ಬರೆಸಿದೆ, ಇಲ್ಲಿ ನಿನ್ನ ಸ್ನೇಹಿತ ಪ್ರಕಾಶ ಬೇರೆಯ ಹುಡುಗಿಯೊಂದಿಗೆ ಮದುವೆಯಾಗಿದ್ದಾನೆಂದು ಹಲವು ವರ್ಷಗಳಿಂದ ಅವಳೊಂದಿಗೇ ಇದ್ದಾನೆಂದು ಅವನು ಉತ್ತಮನಲ್ಲವೆಂದು ಬರೆಸಿದೆ. ಇದನ್ನು ಓದಿ ಅವಳು ನನ್ನನ್ನು ತಿರಸ್ಕರಿಸುತ್ತಾಳೆಂದು ಎಣಿಸಿದೆ. ಅವಳು ಎಷ್ಟೇ ನನ್ನನ್ನು ಸಂಪರ್ಕಿಸಲು ಸಿಗದಂತೆ ಎಲ್ಲಾ ಸಂಪರ್ಕವನ್ನು ಕಡಿತಗೊಳಿಸಿದೆ. ಅವಳು ಅನೇಕ ಪತ್ರಗಳನ್ನು ಬರೆದು ನನ್ನಿಂದ ಉತ್ತರ ಬಯಸಿದರೂ ನಾನು ಉತ್ತರಿಸದೇ ಸುಮ್ಮನಾದೆ, ಎಲ್ಲವೂ ಅವಳಿಗಾಗಿ ಅವಳ ಒಳಿತಿಗಾಗಿ ಎಂದು ಸುಮ್ಮನಾದೆ. ಅವಳು ಚೆನ್ನಾಗಿರಲೆಂದು ದೇವರಲ್ಲಿ ಬೇಡಿಕೊಳ್ಳುತ್ತಾ ಭಾರವಾದ ಮನದಲ್ಲಿ ದಿನಕಳೆಯ ತೊಡಗಿದೆ. ಇತ್ತ ಅವಳೂ ನಾನು ಹಣಗಳಿಸಿ ಬದಲಾಗಿರುವೆನೇನೋ ಎಂಬ ನಂಬಿಕೆ ಅವಳಲ್ಲಿ ನಿಧಾನ ನೆಲೆಯೂರ ತೊಡಗಿತು. 
     ಎರಡು ತಿಂಗಳು ಮೊದಲೇ ಅವಧಿ ಮುಗಿಯುವ ಮೊದಲು ಸ್ವದೇಶಕ್ಕೆ ಮರಳಿದೆ, ಬಂದವನೇ ಸೀದಾ ಏನೊಂದು ಎಣಿಸದೇ ನಮ್ಮೂರ ದಾರಿ ಹಿಡಿದೆ. ದಾರಿಯಲ್ಲಿ ಸಿಕ್ಕ ಅನೇಕರು ನನ್ನನ್ನು ಗುರುತಿಸಲಾರದಂತೆ ನಾನು ವಿರೂಪನಾಗಿದ್ದೆ. ಪರಿಚಯದವರೇ ಎದುರು ಹೋದರೂ ಗುರುತು ಸಿಗಲಿಲ್ಲ, ನಾನೇ ಪರಿಚಯ ಮಾಡಿಕೊಳ್ಳುವಂತಾಯಿತು. ಎಲ್ಲಾ ವಿಧಿಯ ಬರಹವೆಂದು ದೂರುತ್ತಾ ಮನೆ ತಲುಪಿದೆ. ಮನೆಯಲ್ಲಿ ನನ್ನಾವಸ್ಥೆಯನ್ನು ಮೊದಲೇ ತಿಳಿಸಿದ್ದ ಎಲ್ಲವನ್ನು ಅರಿತಿದ್ದ ವಯೋವೃದ್ಧ ತಂದೆ ತಾಯಿ ಅತೀವ ನೊಂದಿದ್ದರೂ ಏನೊಂದು ಹೇಳದೇ ಪ್ರೀತಿಯಿಂದಲೇ ಬರಮಾಡಿಕೊಂಡರು. ಏನನ್ನೂ ಹೇಳದೇ ನನಗೇನಾಗಿದೆ ಎಂದು ಕೇಳದೇ ಸುಮ್ಮನಿದ್ದರು. ನಂತರ ನಿಧಾನವಾಗಿ ತಂದೆ ವಿಚಾರಿಸಿದರು. ನಾನು ದುಬೈನಲ್ಲಿ ವೈದ್ಯರು ಹೇಳಿದ್ದೆಲ್ಲವನ್ನೂ ಹೇಳಿದೆ. ಆಗ ತಂದೆ ಪಕ್ಕದ ಊರಿನ ಅವರ ಸ್ನೇಹಿತರೊಬ್ಬರ ಬಳಿ ಬೆಳಿಗ್ಗೆ ಕರೆದುಕೊಂಡು ಹೋದರು. ಅವರು ಮನೆಯಲ್ಲೇ ಔಷಧಿ ತಯಾರಿಸಿ ನೀಡುವವರು. ಅವರ ಆರೈಕೆಯಂತೆ ಚಿಕಿತ್ಸೆ ತೆಗೆದುಕೋ ಎಂದರು. ನನಗೆ ಮನದಲ್ಲಿ ನಗು, ದುಬೈನಲ್ಲೇ ಅಂತಾ ಅತ್ಯುತ್ತಮ ಆಸ್ಪತ್ರೆಯಲ್ಲಿ ಗುಣವಾಗದ ಖಾಯಿಲೆ ಸಾಧ್ಯವೇ ಎಂಬ ಅಳುಕು, ಏನೋ ತಂದೆಯವರ ಸಮಾಧಾನಕ್ಕೆಂದು ತೆಗೆದುಕೊಳ್ಳುತ್ತಾ ಸಾಗಿದೆ, ದಿನಗಳು ಕಳೆದಂತೆ ಒಂದೆರಡು ತಿಂಗಳಲ್ಲಿ ಕಲೆಗಳು ದೇಹದಲ್ಲಿ ಮರೆಯಾಗತೊಡಗಿದವು. ದೇಹದಲ್ಲಿ ಮತ್ತೆ ತ್ವಚೆಯು ಮೊದಲಿನಂತೆ ಗುಣವಾಗತೊಡಗಿತು, ಹರ್ಷವು ಮನೆಮಾಡಿತು. ಧೈರ್ಯಮಾಡಿ ಒಮ್ಮೆ ಪಟ್ಟಣದ ಕಡೆ ಸಾಗಿದೆ, ಅನೂಳ ಮನೆಯೆಡೆ ಸಾಗಿದೆ. ಅವಳ ಮನೆ ಮುಂದೆ ಹೋದೆ. ಮದುವೆ ಚಪ್ಪರ ಮನೆ ಮುಂದೆ ಅಲಂಕರಿಸಿತ್ತು, ಎದುರು ಮನೆಯವರನ್ನು ಕೇಳಿದೆ ಇಂದು ಅನೂಳ ಮದುವೆ ಎಲ್ಲರೂ ಹೋಗಿದ್ದಾರೆ ಈಗ ನಾವು ಹೊರಟಿದ್ದೇವೆ, ನೀವು ಮದುವೆಗೆ ಬಂದವರೇ ಬನ್ನಿ ನಮ್ಮೊಂದಿಗೆ ಎಂದರು. ನನಗೆ ಬೆಂಕಿಮಳೆಯಲ್ಲಿ ಸುಟ್ಟ ಮಲ್ಲಿಗೆಯಂತೆ ನನ್ನ ಮನ ಸುಡತೊಡಗಿತು. ಭಾರವಾದ ಮನದೊಂದಿಗೆ ಆಸೆಗಳನ್ನೆಲ್ಲಾ ಸುಟ್ಟು ಇಂದು ಮೌನದಲ್ಲೇ ಏನೊಂದು ಎಣಿಸದೇ ಊರಹೊರಗಿನ ಗುಡ್ಡದಲ್ಲಿ ಕುಳಿತಿರುವೆ, ಮುಂದೇನು ಮಾಡಲಿ ಎಂದು..? ಎಲ್ಲಾ ನನ್ನದು ದುರ್ದೈವದ ಜೀವವೆಂದು ರೋಧಿಸುತ್ತಾ ಕುಳಿತೆ, ಮನಕ್ಕೆ ಸಂತೈಸುವುದೂ ಸಾಧ್ಯವಿಲ್ಲದಿದ್ದರೂ.. ಪ್ರೀತಿಯ ಹನಿಗಳು ನದಿಯಾಗಿ ಹರಿಯುತಿರಲು ದಾಹಕೆ ಜಾಗವಿರದು ಎಂದೆಣಿಸದ ಜೀವದಲ್ಲಿ ಇಂದು ನೀ ಕಾಣದೇ ಉಳಿದಿರಲು ಗೆಳತಿ ಮನ ಶಾಶ್ವತ ಮರುಭೂಮಿಯಾಗಿದೆ. ತಣ್ಣನೆ ಸುಳಿದಾಡುತ್ತಿದ್ದ ನಿನ್ನ ಒಲವ ವರಸೆಯ ಅಮೃತಗಾಳಿ ಇಂದಿಲ್ಲದೆ ವಿರಹದ ಬೇಗೆ ಸುಡುತಿದೆ ಬೆವರು ಹನಿಗಳು ನದಿಯಾಗಿದೆ, ಮಳೆ ನಿಂತ ಮೇಲೆ ಬೀಳುವ ಮಳೆ ಹನಿಗಳಂತೆ ಮೌನದಲ್ಲಿ ಕಣ್ಣೀರು ಒಂದೊಂದೆ ಉದುರುತ್ತಿವೆ. ಕಾರಣ ನೀನಿಂದು ನನಗೆ ಎಟುಕದಷ್ಟು ದೂರ ಸಾಗಿರುವೆ. ನನಗೆ ಗೊತ್ತು ಅಂದು ನೀ ನೀಡುತ್ತಿದ್ದ ಹೂನಗು ಇನ್ನು ಮುಂದೆ ನನ್ನದಲ್ಲ, ಈ ನೊಂದ ಹೃದಯದ ವ್ಯಥೆಯ ಕಥೆಯೇನು ಹೇಳಲಿ ಗೆಳತಿ.. ನಿನ್ನಾಸೆರೆಯಲಿ ಲೀನವಾದ ಹೃದಯ ಇಂದು ನೀನಿಲ್ಲದಿದ್ದರೂ ಅದು ನಿನ್ನನೇ ಬಯಸುತ್ತದೆ. ನೀನಿಲ್ಲದ ಜಗವನ್ನು ನಾ ಕಾಣುವುದು ಸಾಧ್ಯವಿಲ್ಲ. ನೀನಿಲ್ಲದ ಈ ಬದುಕು ನನಗೆ ಬದುಕಲ್ಲ ಅದುವೇನಿದ್ದರೂ ಹೃದಯಕ್ಕೆ ನಿತ್ಯ ಚುಚ್ಚುವ ಸೂಜಿಯಂತೆ. ಬೆಂಕಿ ಮಳೆಯಲ್ಲಿ ನನ್ನೆದೆಯ ಕನಸು ಸುಟ್ಟು ಕರಕಲಾಗುತ್ತಿವೆ. ನೀನಿರದೆ ಜೊತೆಯಲ್ಲಿ ನಾನು ಬಿರು ಪ್ರವಾಹದಲ್ಲಿ ಕೊಚ್ಚಿ ನೂಕುವ ತುಂಬೆಯ ಹೂವಂತೆ ತೂರಿಹೋಗಿರುವೆ, ನಿನ್ನೊಲವ  ಆರೈಕೆಯಿಲ್ಲದೇ ನಾನುಳಿಯಲಾರೆ ಗೆಳತಿ..ಏನೆಂದರೂ ಇಂದು ವಿಧಿಯ ದೂರಿ ಪ್ರಯೋಜನವೆಲ್ಲಿ.? ಎಲ್ಲವೂ ನನ್ನದೇ ಹುಂಬುತನವೇನೋ. ಇಲ್ಲವೇ ದುರಾದೃಷ್ಟವೇನೋ ಗೆಳತೀ..
ಏನೇ ಅಗಲಿ ಗೆಳತಿ ನೀ ನಗುತಿರು ನಿತ್ಯ.. ನಿನ್ನ ಮೊಗದಲಿ ನಗುವಿರಲಿ ನಿತ್ಯ..


ಕರಗುತಿದೇ ಘಟ್ಟ ಏರುತಿದೆ ತಾಪ...

ಹಿಂದೆ ಕಾಲವೊಂದಿತ್ತು, ಈಗಲೂ ಇಲ್ಲವೆಂದಿಲ್ಲ, ಇದ್ದದ್ದು ಕಡಿಮೆಯಾಗಿದೆ. ಮುಗಿದು ಹೋಗಲೇ ಎಂದು ಕೇಳುವ ಸಂಗತಿಗಳೇ ಜಾಸ್ತಿಯಾಗಿವೆ. ಅವುಗಳ ಕೂಗಿಗೆ ಕಳವಳವೂ ಇದೆ.ಅದರ ಒಂದಿಷ್ಟು ಮೆಲುಕು ನಿಮ್ಮೊಂದಿಗೆ ಹೇಳುತ್ತೇನೆ. ನಿಮ್ಮ ಮಾತು ಆಗಿರಬಹುದು ಎಂಬ ಹಂಬಲವೂ ಇದೆ. ನೋಡೋಣ ಹಿಂದಿನ ಕೆಲವು ದೃಶ್ಯಗಳನ್ನ...ಆಗ ಮನೆ ಸುತ್ತುಲೂ ಮರಗಳು, ಹೂ ಗಿಡಗಳು, ತರಕಾರಿ ಬೆಳೆಗಳ ಗಿಡ ಬಳ್ಳಿಗಳು ಸಾಮಾನ್ಯವಾಗಿದ್ದವು. ಬಸಳೆ, ಅವರೇ, ತೊಂಡೆ ಬಳ್ಳಿಗಳ ಚಪ್ಪರವಿಲ್ಲದ ಮನೆಗಳಿರಲಿಲ್ಲ. ಹಿತ್ತಲು ಎಂದರೆ ನುಗ್ಗೆ, ಹಲಸು, ಹುಣಸೆ, ಮಾವು ಇದ್ದೇ ಇರ್ತಿದ್ದವು. ಬೇಕು ಅಂದ್ರೆ ಸೀಗೆಕಾಯಿ ಮರನೂ ಇರ್ತಿತ್ತು. ಜೊತೆಗೆ ಪಶು ಸಂಗೋಪನೆಯೂ ಇರ್ತಿತ್ತು. ಆಕಳು, ಕೋಳಿ, ಕುರಿ ಸಾಮಾನ್ಯವಿದ್ದ ಕಾಲ. ಮನೆಯೆದುರು ಹೂಗಿಡಗಳ ಚಿತ್ತಾರವಿತ್ತು. ಬಂದವರಿಗೆ ಸ್ವಾಗತ ಕೋರಲು ಅರಳಿದ ದಾಸವಾಳವಂತು ಸದಾ ನಗುತಾ ಇರ್ತಿತ್ತು. ಎಲ್ಲದಕ್ಕೂ ಮನೆಯಲ್ಲೇ ಸ್ವಾವಲಂಬಿ ಇತ್ತು. ಮನೆಯಿಂದ ಸ್ವಲ್ಪ ದೂರ ಬಂದರೆ ಎದುರಾಗೋ ಕಾಡು ಸದಾ ಹಸಿರಲ್ಲಿ ನಳನಳಿಸುತ್ತಿರುತ್ತಿತ್ತು. ಹಳ್ಳ, ಕೆರೆಗಳಲ್ಲಿ ಸದಾ ನೀರಿರುತ್ತಿತ್ತು, ಕಾಲದ ತಾರತಮ್ಯವಂತೂ ಇರಲಿಲ್ಲ. ಬೇಸಿಗೆ ದಾಹಕ್ಕೆ ಒಂದು ಮೊಗಸೆ ಹಳ್ಳದ ನೀರು ದಣಿವಿತ್ತೇ ಎಂದು ಕೇಳುವಂತಿತ್ತು. ಕಾಡಿನಲ್ಲಿ ಒಂದು ಸುತ್ತು ಹಾಕಿದರೆ ನೇರಳೆ, ಮಾವು, ಕೌಳಿಗಳ ರಾಶಿಯು ಎದುರಾಗುತ್ತಿತ್ತು. ಜೇನುಗಳ ತೊಟ್ಟಿಯು ಕಣ್ಣಿಗೆ ಕಾಡುತಿತ್ತು. ಪಕ್ಷಿಗಳ ಜೀರುಂಡೆಗಳ ಸದ್ದು ಸಾಗುವ ತನುವಲ್ಲಿ ನಡುಕ ತರುತ್ತಿತ್ತು. ಕಾಡಿನ ಒಳಗೆ ತಣ್ಣನೆಯ ಹವೆಯ ಕೊರೆತ ಮೂಗನ್ನು ಕೊರೆಯುತ್ತಿತ್ತು. ಯಾವ ಪೊದೆಯಲ್ಲಿ ಏನಿದೆಯೋ ಎಂಬ ಭಯವೂ ಇರುತ್ತಿತ್ತು. ನೀರಿನ ಸೊಬಗನು ತೋರಿಸುವ ಝರಿಗಳು, ಜಲಧಾರೆಗಳು ಸ್ವರ್ಗದ ಅಂದದ ಮಿತಿ ಎಷ್ಟು ಎಂದವುಗಳು ಇದ್ದವು. ಅಲ್ಲಲ್ಲಿ ಕುಣಿದು ಕುಪ್ಪಳಿಸುವ ಮೊಲಗಳು, ಕಿಚಾಯಿಸುವ ಗೂಬೆಗಳ ನೋಟವೂ ಜೋರಾಗಿತ್ತು.
ಗದ್ದೆಗಳ ಬದಿಗಳ ಮೇಲೆ ಕೊಕ್ಕರೆಗಳ ಓರಣ ಜೋರಿತ್ತು. ನೋವಿದ್ದ ಕಣ್ಣಿಗೂ ಹಿತ ತರುವಂತಿತ್ತು. ಬೆಳ್ಳಿ ಬೆಡಗೂ ನಾನೇ ಎಂದಿತ್ತು. ರಾತ್ರಿ ಸಮಯದಲ್ಲಿ ಕಾಡು ಮೃಘಗಳ ಕೂಗು ಹೆದರಿಕೆಯ ಗಾಥೆಯು ಜೋರಿತ್ತು, ಬೆದರಿ ಹಿರಿಯರ ಮಡಿಲನ್ನು ತಬ್ಬಿದ ಅನುಭವದಲ್ಲಿ ರೋಮಾಂಚನವಿತ್ತು, ಒಂತರಾ ಛಲವೂ ಇತ್ತು, ಬಂಧನವೂ ಇತ್ತು. ಬೇಸಿಗೆ ಬಿಸಿಲನು ಮನೆಯ ಮಾಳಿಗೆ ಮುಟ್ಟಲು ಸುತ್ತಲಿದ್ದ ಮರಗಳು ಬಿಡುತ್ತಿರಲಿಲ್ಲ. ಛಳಿ,  ಮಳೆಗೆ ಮುಚ್ಚಿಗೆ ಮೆನೆಯ ಬೆಚ್ಚನೆ ಹಿತವಿತ್ತು. ದಣಿವಾಗಿ ಬಂದವರಿಗೆ ಜೇನಿ ಬೆಲ್ಲ ತಂಪು ಮಡಕೆ ನೀರು ಕೊಡುವ ನಿಸ್ವಾರ್ಥ ಕೈ ಇತ್ತು. ಹುಲ್ಲು ಗುಡಿಸಲು ಮಣ್ಣಿನ ಮನೆಯಾದರೂ ಛಳಿ, ಮಳೆ, ಬಿಸಿಲಿಗೆ ಹೆದರದ ದಮ್ಮಿತ್ತು. ಮನೆಯಲ್ಲಿ ಹಿರಿಯರ ಹಿತನುಡಿಗಳದು ಅಬ್ಬರವೂ ಇರ್ತಾ ಇತ್ತು. ಮನೆ ಸುತ್ತಲ ಮರದಲ್ಲಿ ನಡು ಮದ್ಯಾಹ್ನವಾದರೂ ಕೂಗಿ ಮಾತಾಡಿಸಲು ಒಂದು ಕೋಗಿಲೆಯಂತು ಬರ್ತಿತ್ತು. ಮನೆಯೊಳಗೆ ಹೊರಗೆ ಬಂದೋಗೋ ಕಾಯದಲ್ಲೇ ಗುಬ್ಬಿಗಳದೂ ಹಾಡಿತ್ತು. ಮನೆಯಲ್ಲೇ ಒಮ್ಮೊಮ್ಮೆ ಗೂಡು ಕಟ್ಟಿದ್ದೂ ಇತ್ತು. ಮನೆಯ ಹಿಂಬದಿಯ ನೇರಲೆ ಮರದಲ್ಲಿ ಗಿಳಿಗಳಿದೂ ಕೂಗಾಟ ಜೋರಾಗಿರ್ತಾ ಇತ್ತು. ಕೊಟ್ಟಿಗೆಯಲ್ಲಿ ಗೋಮಾತೆಯ ನಗುವಿತ್ತು. ಮನೆ ಎದುರು ಕಲ್ಪವೃಕ್ಷಗಳ ಕೃಪೆಯಿತ್ತು. ಕೂಗಳತೆ ದೂರದಲ್ಲಿ ಹೊಟ್ಟೆಗೆ ಹಿಟ್ಟು ನೀಡೋ ತನುವಿಗೆ ಕಾಯಾ ನೀಡೋ ಗದ್ದೆ ಇತ್ತು. ದಿನವಿಡೀ ನಮಗೆ ಹೊತ್ತು ಬಿತ್ತುವುದರಲ್ಲೇ ನಲಿವಿತ್ತು. ರಾಸಾಯನಿಕವಿಲ್ಲದ ದೇಶೀ ತಳಿಗಳ ಬೆಳೆಯು ಹಿತವಾಗಿತ್ತು. ಮಳೆಗೇನು ಕೊರತೆಯಿರಲಿಲ್ಲ, ಕಾರ್ಮೋಡ ಕರಗಿ ವರ್ಷದ ಅರ್ಧ ಮುಲಾಜಿಲ್ಲದೇ ದುಮ್ಮಿಕ್ಕುತ್ತಿತ್ತು. ಮುಗಿಲಲ್ಲಿ ಮಿಂಚಿದ್ದ ಮೋಡಗಳ ಗುದ್ದು ಬೆಳಕಲಿ ಮೈ ನಡುಗಿದ್ದು ಕಗ್ಗತ್ತಲಲ್ಲೀ ಅದುವೇ ಬೆಳಗಾಗಿ ಕಪ್ಪಿರುಳಲಿ ಮರೆಯಾದ ಭುವಿಯ ತೋರಿಸಿದ್ದೂ ವಿಸ್ಮಿತಗೊಳಿಸಿದ್ದು ಉಂಟು. ಮಿಂಚಿನ ಬೆಳಕಲಿ ದುಂಡು ಮಲ್ಲಿಗೆಯ ಮೊಗ್ಗು ನಕ್ಕಿದ್ದು ನೆನಪುಂಟು. ಗುಡುಗುಗಳ ಗುದ್ದಾಟದಲಿ ಮತ್ತೆ ಮತ್ತೆ ಭೋರ್ಗರೆವ ಜಲಧಾರೆಯಲ್ಲಿ ಭುವಿಯ ಜಳಕದಲ್ಲಿ ಸುಳಿದಾಡೋ ತಂಗಾಳಿಯಲ್ಲಿ ತಂಪಿನ ಹವೆಯಲ್ಲಿ ಇಬ್ಬನಿಯ ಹೊಗೆಯಲ್ಲಿ ಮುಸುಕಾದ ಕಣ್ಣ ನೋಟದಲ್ಲಿ ಮುಂದೇನಿದೆ ಎಂಬ ಕುತೂಹಲ ಕಾಡಿದ್ದೂ ಉಂಟು. ಇಬ್ಬನಿಯ ಹೊಗೆಯು ಮರೆಯಾದೊಡನೆ ಗಿರಿಯ ತುದಿಯಲ್ಲಿ ಮೂಡಿದ ಬೆಳ್ಳಿ ರೇಖೆಯಂತ ಜಲಧಾರೆಗಳ ನರ್ತನದಲ್ಲಿ ಮನವು ನಲಿದು ಹೊಸ ಕಾವ್ಯಕ್ಕೆ ಅಲ್ಲೇ ಮುನ್ನುಡಿ ಹಾಕುವಂತಿತ್ತು. ಕಾರ್ಮುಗಿಲು ಕರಗಿ ಧರೆಗೆ ಉರುಳಿದಂತೆ ಬೀಳುವ ಮಳೆ ನಿಲ್ಲುವುದೇ..? ಎನ್ನುವ ಆತಂಕ ಒಮ್ಮೊಮ್ಮೆ ಕಾಡಿದ್ದೂ ಇದೆ.. ಬಾನು ಭುವಿಯು ಒಂದಾದಂತೆ ಎಲ್ಲೆಡೆಯೂ ಮಳೆಯ ಮಂಜಲಿ ಅದೇ ಭಾಸ. ರವಿಯ ದರ್ಶನವಿಲ್ಲದ ಸಮಯವದು. ಮಳೆಗಾಳಿಗೆ ನಡೆದಾಡಲೂ ನಡುಗುವ ಮೈಗೂ ಕಂಬಳಿ ಗೋಣೀ ವಸ್ತ್ರಗಳ ಬೆಚ್ಚನೆ ಹಿತವಿತ್ತು. ಮನೆಯ ಗೋಡೆಗಳ ರಕ್ಷಣೆಗೆ ಅಡಕೆ, ತೆಂಗುಗಳ ತಟ್ಟಿ ರಕ್ಷಕನಾಗಿ ವರ್ಷದಧರ್À ನಿಂತಿರುತ್ತಿತ್ತು. ಮಳೆಯ ಚಳಿಗೆ ಕಾಳು ಮೆಣಸಿನ ಕಶಾಯದ ನಂಟಿತ್ತು ಸವಿವುದರಲ್ಲೂ ಸಂತೋಷವಿತ್ತು. ಮೊದಲ ಮಳೆಗೆ ಎದ್ದ ಅಣಬೆಗಳ ರಾಶಿಯು ನೆಲದ ಮೇಲಣ ಮೂಡಿದ ತಾರೆಗಳೇನೋ..ಇವುಗಳ ಮೇಲೆ ಬಿದ್ದು ಹೊದ್ದಾಡಿದ್ದೋ ಆರಿಸಲೂ ಕುಣಿದಾಡಿದ್ದೋ ನೇರ ನಿಂತ ಅಣೆಗಳ ಸೊಂಟ ಮುರಿದಿದ್ದೂ ಒಂದು ಖುಷಿ ಇದೆ. ಅಣಬೆ ಸಾರಿನ ಘಾಟು ಮನೆಯ ಮಾಳಿಗೆಗೆ ಅಪ್ಪಳಿಸಿ ಬಂದಿದ್ದೂ ಇತ್ತು. ಕಳಲೆಯ ಪಲ್ಯದಲ್ಲಿ ಅಕ್ಕಿಯ ಕಡುಬು, ರೊಟ್ಟಿ ರುಚಿ ನೋಡಿದ್ದು ಇದ್ದೇ ಇದೆ. ಛಳಿಗಾಲದ್ದೂ ಎನು ಕಮ್ಮಿಯಲ್ಲ. ತನುವಲ್ಲಿ ನಡುಕ ತಂದು ಒಂದೆಡೆ ಕೂರಿಸುವ ಕಾಲವದು. ಬೆಳಿಗ್ಗೆದ್ದು ನೋಡಿದರೆ ಮಂಜಿನದೇ ಜಳಕ ಎಲ್ಲೆಲ್ಲೂ. ಮಂಜಿನ ಹನಿಗಳದೇ ದರ್ಬಾರು. ಬೆಳಕಿನ ಕಿರಣಗಳು ನಮ್ಮನ್ನು ನೋಡಲು ನಾವು ಅವುಗಳನ್ನು ನೋಡಲು ಪರಿತಪಿಸಬೇಕಿತ್ತು. ಸಂಜೆಯಾಗುತ್ತಲೇ ನಡುಕಕ್ಕೆ ಒಗ್ಗ ಬೇಕಾದ ದೇಹದ ಸ್ಥಿತಿಯಾಗಿತ್ತು. ಅದರಲ್ಲೂ ಒಂದು ಖುಷಿ ಅನ್ನೋ ತಾಕತ್ತು ದೇಹಕ್ಕೂ ಸಿಗುತ್ತಿತ್ತು. ಚಳಿಯಲ್ಲಿ ಮದ್ಯಾಹ್ನವಾದರೂ ಹೂಗರಿಯ ಮೇಲೆ ನಗುವ ಇಬ್ಬನಿಗಳ ದರ್ಬಾರು ಜೋರಿತ್ತು. ಬತ್ತದ ತೆನೆಯಲ್ಲಿ ಮುತ್ತಿಕ್ಕಿದ ಹನಿಗಳು ತಂಪು ಹವೆಯಲ್ಲಿ ದಿನವಿಡೀ ನಕ್ಕಿದ್ದು ಉಂಟೂ. ಛಳಿಗಾಳಿಯಲ್ಲಿ ತುಷಾರಧಾರೆಯ ಸೊಬಗಲ್ಲಿ ಗದ್ದೆಗಳಲ್ಲಿ ಬೆಳೆಯುತ್ತಿರುವ ಫಸಲುಗಳ ಜೊತೆಯಲ್ಲಿ ಸಂಕ್ರಮಣಕ್ಕೆ ಸಜ್ಜಾಗುವ ಸವಿಯು ಮನದಲ್ಲಿ ಹೊಸಗಾಳಿ ಬೀಸುತಿತ್ತು..ತನುವಲೂ ಹೊಸತನ ಬರುತ್ತಿತ್ತು.......(ಮುಂದುವರೆಯಲಿದೆ...)