Wednesday, 7 December 2016

ಹಸಿದವನ ಹೊಟ್ಟೆ ತುಂಬಲಿ..

ಹಸಿದವನಿಗೆ ನೀ ನೀಗದಿದ್ದರೂ
ಕಸಿಯದಿರು ಅವನ ಅನ್ನವನು.

ಇದು ನಾನೇ ಬರೆದ ಕವಿತೆಯ ಸಾಲುಗಳು. ಇದರ ಮರ್ಮವನ್ನು ಆಗಾಗ ಕಾಣುತ್ತಲೇ ಇರುತ್ತೇನೆ, ಕಾಣುವುದು ಸಾಮಾನ್ಯವಾಗುತ್ತಿದೆ ಎಂದರೂ ತಪ್ಪಿಲ್ಲ, ಶ್ರಮಿಕ ವರ್ಗ ಶ್ರಮವಹಿಸಿ ದುಡಿದು ಗಳಿಸಲು ನಿತ್ಯ ಸಾಹಸಪಡುತ್ತದೆ. ಉದಾಹರಣೆಗೆ ಕೈಗಾರಿಕೆ, ಗಣಿ, ನೈರ್ಮಲೀಕರಣ ನಿರ್ವಹಣೆ ಹೀಗೆ ಸಾವಿರಾರು ಜೀವಕ್ಕೆ ಅಪಾಯವೊದಗುವ ಕಾರ್ಯದಲ್ಲಿ ದುಡಿಯುತ್ತಾರೆ. ಗಣಿ ಕುಸಿತಗಳಿಗೆ ಬಲಿಯಾಗಿ ಸತ್ತವರೆಷ್ಟು. ಆದರೂ ದುಡಿಯಲು ತಮ್ಮ ಹಸಿದ ಹೊಟ್ಟೆಯನ್ನು ತುಂಬಿಸಿಕೊಳ್ಳಲು ಶ್ರಮಿಕ ವರ್ಗ ಹೋರಾಡುತ್ತದೆ. ಆದರೆ ಗಣಿಯಿಂದ ಬರುವ ಚಿನ್ನ, ವಜ್ರ ಏನೇ ಖನಿಜವಾಗಲಿ ಅದು ವಿಜೃಂಬಿಸುವುದು ಮಾತ್ರ ಸಿರಿವಂತನ ಮನೆಯಲ್ಲಿ. ಬಡವನಿಗೆ ಸಿಗುವ ಕೂಲಿಯಾದರೂ ಸರಿಯಾಗಿ ದೊರೆಯುತ್ತದೆಯೇ..? ಅವರಿಗೆ ಕೆಲಸಕ್ಕೆ ಅಗತ್ಯ ಸಲಕರಣೆಗಳನ್ನು ನೀಡಲಾಗುತ್ತದೆಯೇ..? ಅವರ ಜೀವಕ್ಕೆ ಮತ್ತು ಕುಟುಂಬಕ್ಕೆ ಭದ್ರತೆಯನ್ನು ನೀಡುಲಾಗುತ್ತದೆಯೇ..? ಎಲ್ಲವೂ ಕಾನೂನು ಪ್ರಕಾರ ಮಾಡಬೇಕು. ಆದರೆ ಎಷ್ಟೂ ಉದ್ದಿಮೆಗಳು ನಿಯಮಗಳನ್ನು ಗಾಳಿಗೆ ತೂರಿ ಕಾರ್ಮಿಕರ ಬದುಕನ್ನು ಅಂದರೆ ದುಡಿದು ತಿನ್ನುವವರ ಬದುಕನ್ನು ಬಿಕಾರಿ ಮಾಡಿವೆ. ಅವರಿಗೆ ಸಿಗಬೇಕಾದ ಭವಿಷ್ಯನಿಧಿ ವಂತಿಗೆ ಜೀವವಿಮೆ ಸೌಲಭ್ಯಗಳನ್ನು ಕಟ್ಟದೇ ಎಷ್ಟೋ ಕಂಪನಿಗಳು ಮೃತ ಕಾರ್ಮಿಕನ ಕುಟುಂಬವನ್ನು ಬೀದಿಗೆ ಬಿಸಾಡಿವೆ. ಸಮಾಜದಲ್ಲಿ ಎಲ್ಲದಕ್ಕೂ ನಾವೇ ಸೈ ಎನ್ನಿಸಿಕೊಳ್ಳುವ ಹಲವು ಜನನಾಯಕ ಚುನಾವಣೆಗಳನ್ನು ಗರ್ಜಿಸುವುದನ್ನು ನಾವು ಕೇಳಿದ್ದೇವೆ, ನಾನು ಚುನಾವಣೆಗೆ ನಿಂತಿರುವುದೇ ಶ್ರಮಿಕರ ಉದ್ದಾರಕ್ಕೆ, ಹಸಿವನಿಗೆ ಅನ್ನವನ್ನು ದೊರಕಿಸಿ ಕೊಡುವುದಕ್ಕೆ, ಅವನ ದಾರಿದ್ರ್ಯವನ್ನು ನೀಗಲಿಕ್ಕೆ..!! ಮಹಾದಾಶ್ಚರ್ಯವಾಗುತ್ತದೆ ನಿರ್ಗತಿಕರನ್ನು ಅಸಂಘಟಿತವಲಯದ ನೊಂದ ಶ್ರಮಿಕರನ್ನು ನೋಡಿದಾದ ಚುನಾವಣೆಯಲ್ಲಿ ಗುಡುಗಿದವರೆಲ್ಲಿ ಕಾಣೆಯಾದರು ಎಂಬ ಭ್ರಮೆ ಕಾಡುವುದಂತೂ ಸತ್ಯ ಜೊತೆಗೆ ಎಲ್ಲವೂ ನಾಟಕ ಎಂಬುದು ಮಾತ್ರ ಬೆತ್ತಲೆಯಾಗುತ್ತದೆ.

ದೇಶದ ಹಲವಾರು ಮಹತ್ವಾಕಾಂಕ್ಷೆಯ ಯೋಜನೆಗಳು ಬಡತನ ನಿವಾರಣೆ ಮತ್ತು ಶ್ರಮಿಕ ವರ್ಗದ ಉದ್ದಾರಕ್ಕೆಂದು ಇವೆ. ಇವು ಸಾಮಾನ್ಯವಾಗಿ ಆಯವ್ಯದ ಒಟ್ಟು ಮೊತ್ತದ ಶೇ 10ಕ್ಕಿಂತ ಹೆಚ್ಚು ಇದ್ದೇ ಇರುತ್ತದೆ. ಈ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಾಗ ದೇಶದಲ್ಲಿ ಬಡತನ ರೇಖೆಗಿಂತ ಕೆಳಗಿದ್ದವರು 44% ಜನರಿದ್ದರು. ಆದರೆ ಅದು 2000 ರ ವರ್ಷಕ್ಕೆ ಶೇ 50 ಕ್ಕೆ ಏರಿತ್ತು. ನಂತರ ಈಗ 2015ರ ವೇಳೆ ಭಾರತೀಯ ರಿಸರ್ವ ಬ್ಯಾಂಕ್ ಮಾಹಿತಿಯಂತೆ ಶೇ 21.92 ರಷ್ಟು ದೇಶದ ಜನ ಬಡತನ ರೇಖೆಗಿಂತ ಕೆಳಗಿದ್ದಾರೆ. ಅಂದರೆ ದೇಶ ಸ್ವಾತಂತ್ರ್ಯವಾದಂದಿನಿಂದ ಇಲ್ಲಿವರೆಗೇ ಬಡತನ ನಿವಾರಣೆಗೆ ಮತ್ತು ಶ್ರಮಿಕ ವರ್ಗದ ಉನ್ನತೀಕರಕರಣಕ್ಕೆ ಮಾಡಿದ ವೆಚ್ಚವೇನಾಯಿತು. ಅದು ಯಾರಿಗೆ ಮುಟ್ಟಿತು. ಒಂದು ವೇಳೆ ಶ್ರಮಿಕ ವರ್ಗಕ್ಕೆ ಮುಟ್ಟಿದ್ದಲ್ಲಿ ಅವರು ಏಕೆ ಇನ್ನೂ ಬಡವರಾಗಿಯೇ ಉಳಿದಿದ್ದಾರೆ. ಅವರ ನೋವುಗಳೇಕೆ ಮರೆಯಾಗಿಲ್ಲವೆಂಬುದು ಮಾತ್ರ ವಿಸ್ಮಯ. ಸರ್ಕಾರದ ದ್ರವ್ಯವನ್ನು ಸೆಳೆದು ವೆಚ್ಚಮಾಡುವುದು ಉಪಯುಕ್ತವಾಗಿದ್ದಲ್ಲಿ ಬಡತನ ದಿನದಿಂದ ದಿನಕ್ಕೆ ಕಡಿಮೆಯಾಗಬೇಕಿತ್ತು ಎಂಬುದು ಮೇಲ್ನೋಟಕ್ಕೆ ಕಾಣುತ್ತದೆ. ಈ ದೇಶ ಎಷ್ಟೇ ಅಭಿವೃದ್ಧಿ ಎಂದು ಎಣಿಸಿದರೂ ನೈಜ ಅಭಿವೃದ್ಧಿಯು ದೇಶದಲ್ಲಿರು ಬಡವರೆಲ್ಲರೂ ಉನ್ನತಿಹೊಂದಿದಾಗ ಮಾತ್ರವೇ ದೇಶ ಉದ್ಧಾರವಾದಂತೆ ಜೊತೆಗೆ ದೇಶದ ಸಮಾಜವೂ ಬೆಳಗಿದಂತೆ. ದುಡಿದು ತಿನ್ನುವ ಮತ್ತು ದುಡಿಯದೇ ತಿನ್ನುವ ವರ್ಗಗಳೆರಡರ ನಡುವೆ ಇರುವ ಅಂತರ ಕಡಿಮೆಮಾಡಬೇಕು. ಸಂಪತ್ತು ಕೇಂದ್ರೀಕೃತ ವಲಯವನ್ನು ಮುಕ್ತವಾಗಿ ಬಡವರಿಗೆ ಹಂಚಬೇಕು. ದೇಶದಲ್ಲಿ ಆಸ್ತಿಗಳಿಕೆಗೆ ಮಿತಿ ಹೇರಬೇಕು. ಆ ಮೂಲಕ ಮಿಕ್ಕಿದ ಭಾಗವನ್ನು ಶ್ರಮಿಕ ಬಡ ವರ್ಗಕ್ಕೆ ನೀಡುವು ಮೂಲಕ ಸಾಮಾಜಿಕ ಸಮಾನತೆಯನ್ನು ಎತ್ತಿ ಹಿಡಿಯುವ ಕಾರ್ಯವಾಗಲೇಬೇಕು. ಆಗ ಮಾತ್ರ ಬಡತನ ನಿವಾರಣೆ ಸಾಧ್ಯ.
ಹಲವಾರು ಕಡೆ ಶ್ರಮಿಕರಿಗೆ ನೀಡುವ ಸೌಲಭ್ಯಗಳನ್ನು ವಂಚಿಸಲಾಗುತ್ತದೆ. ಅವರಿಗೆ ನೀಡಬೇಕಾದ ಜೀವದ ಸುರಕ್ಷತೆಗಳಾದ ಭವಿಷ್ಯನಿಧಿ, ವಿಮೆ, ವೇತನಗಳನ್ನು ಸರಿಯಾಗಿ ನೀಡುವುದಿಲ್ಲ. ಕೆಲಸ ನಿರ್ವಹಿಸುವಾಗ ಶ್ರಮಿಕರು ಧರಿಸಬೇಕಾರ ಅಗತ್ಯ ಸುರಕ್ಷಾ ಸಲಕರಣೆಗಳನ್ನು ನೀಡುವುದಿಲ್ಲ. ಸುರಕ್ಷತಾ ಸಲಕರಣೆಯ ವೆಚ್ಚದ ಉಳಿತಾಯದಿಂದ ಉದ್ದಿಮೆಯ ಮಾಲೀಕ ಲಾಭವಾಯಿತೆಂದು ಖುಷಿಪಡುತ್ತಾನೆ. ಇದರಿಂದ ಎಷ್ಟೋ ಜನ ಸತ್ತಿದ್ದಾರೆ. ಆದರೆ ಅದು ಗೌಣವಾಗಿದೆ. ಶ್ರಮಿಕನ ಜೀವಕ್ಕೆ ಬೆಲೆ ಇಲ್ಲದಾಗಿದೆ. ಅವರಿಗೆ ನೀಡಬೇಕಾದ ವೇತನವೂ ಸರಿಯಾಗಿ ದೊರೆಯದೇ ಕನಿಷ್ಟ ವೇತನ ಕಾಯ್ದೆ ಜಾರಿಯಲ್ಲಿದ್ದರೂ ಅದನ್ನು ಗಾಳಿಗೆ ತೂರಿದವರೂ ಇದ್ದಾರೆ. ತಿಂಗಳಿಗೆ 13,000 ಸಾವಿರ ವೇತನವಿದ್ದರೆ ಒಂದರ ಮೇಲೆ ಕೈಯಿಟ್ಟು ನಿನ್ನ ವೇತನ ಮೂರು ಸಾವಿವೆಂದು ತೋರಿಸುವ ವಂಚನ ಮನಸ್ಸುಗಳು ಬದುಕಿರುವವರೆಗೆ ಈ ಸಮಾಜದಲ್ಲಿ ಶ್ರಮಿಕವರ್ಗಕ್ಕೆ ನ್ಯಾಯ ಸಿಗುವುದು ಮರೀಚಿಕೆಯಾಗಿದೆ. ಇನ್ನೊಂದೆಡೆ ಗಮನಿಸಿದರೆ ಕಾರ್ಮಿಕ ಸಂಘಟನೆಗಳು ಹಲವಾರು ಇವೆ, ಆದರೆ ಅವರಲ್ಲಿ ಒಗ್ಗಟ್ಟಿನ ಕೊರತೆಯನ್ನು ಅಧಿಕಾರಶಾಯಿಯು ತರುತ್ತದೆ. ಆ ಮೂಲಕ ಒಡೆದು ಆಳುತ್ತದೆ ಜೊತೆಗೆ ತನ್ನ ಸ್ವಾರ್ಥವನ್ನು ಈಡೇರಿಸಿಕೊಳ್ಳುತ್ತದೆ. ಅಸಂಘಟಿತ ವಲಯ ಬೇಗನೇ ಎದ್ದೇಳಲಿ ಶಕ್ತಿಯುತವಾಗಿ ಬಲಗೊಂಡು ತಮ್ಮ ಸೌಲಭ್ಯಗಳತ್ತ ಗಮನ ಹರಿಸಲಿ ತನ್ಮೂಲಕ ತಮ್ಮನ್ನು ಅವಲಂಬಿಸಿದ ಕುಟುಂಬಗಳಿಗೆ ಆಸರೆಯಾಗಲಿ ದುಡಿದು ತಿನ್ನುವ ಜನ ಸಮಾಜದಲ್ಲಿ ದೇಶದಲ್ಲಿ ಉನ್ನತ ಸ್ಥಾನಕ್ಕೆ ಹೋಗಲಿ ಎಂದು ಎಲ್ಲರೂ ಆಶಿಸೋಣ..ಅವರೊಂದಿಗೆ ದುಡಿಯೋಣ..