ಹುಲಿಯ ರೋಷಾಗ್ನಿ ಕುದಿದು
ಕ್ರಾಂತಿಯ ತೇಜಸ್ಸು ಉರಿದು
ಭ್ರಷ್ಟ ಬ್ರಿಟೀಷರ ಬೇಟೆಯನಾಡಲು
ಹೊರಡಿಸಿದೆ ಕಟ್ಟಾಜ್ಞೆ ಮನಕೆ
ಭಗತನೆಂಬ ಹೆಬ್ಬುಲಿಯ ಮನಕೆ...
ವಿಚಾರಗಳ ಸಾಣೆಕಲ್ಲಿನ ಮೇಲೆ
ಹರಿತಗೊಂಡ ಕತ್ತಿಯ ಜೊತೆ
ಶೋಶಿತ ವ್ಯವಸ್ತೆಯ ಕಿತ್ತೊಗೆದು
ಶ್ರಮಿಕರ ವಿಮೋಚನೆ ಮಾಡಲು
ಭಗತನೆಂಬ ಹುಲಿಯು ಹಸಿದಿತ್ತು...
ಬ್ರಿಟೀಷರ ಕಪಟ ಬುದ್ಧಿಯು
ಮುಗ್ದ ಭಾರತೀಯರ ಹತ್ಯೆಯು
ಜಲಿಯನವಾಲಬಾಗ್ ಪ್ರತೀಕಾರದ ಕಿಚ್ಚು
ರಕ್ತ ಪಿಪಾಸುಗಳ ದಹಿಸುವ ರೊಚ್ಚು
ಭಗತನೆಂಬ ಹುಲಿಯಲಿ ಆವರಿಸಿತ್ತು..
ಎದೆ ಝಲ್ಲೆನ್ನಿಸುವ ಧೈರ್ಯದಲಿ
ಸ್ಪೂರ್ತಿಯ ವಿದ್ಯುತ್ ಸಂಚಲದಲಿ
ಧುಮ್ಮಿಕ್ಕುವ ಜಲಧಾರೆಯ ಹುಮ್ಮಸ್ಸಿನಲಿ
ಯುವಜನರ ಕೆಚ್ಚೆದೆಯ ಪ್ರತೀಕವಾಗಿ
ಭಗತನೆಂಬ ಹುಲಿಯು ಸಂಚರಿಸಿತ್ತು..
ಲಾಲ ಲಜಪತರಾಯರ ಹತ್ಯೆಯ ನೋವು
ಜಲಿಯನವಾಲಬಾಗ್ ಪ್ರತೀಕಾರದ ಕಿಚ್ಚು
ಗುಲಾಮಗಿರಿಯ ಹೊಡೆದೋಡಿಸಲು
ಬ್ರಿಟೀಷರ ಕ್ರೂರತೆಯ ದಹಿಸಲು
ಭಗತನೆಂಬ ಹುಲಿಯು ಹಸಿದಿತ್ತು....
ಗುಳ್ಳೆನರಿ ಬ್ರಿಟೀಷ್‍ರ ನೆತ್ತರು ಹರಿಸಿತ್ತು
ಸ್ವಾತಂತ್ರ್ಯ ಭಾರತಕ್ಕಾಗಿ ಗುಡುಗಿತ್ತು
ಪ್ರತೀಕಾರದ ಜಯದಲಿ ಬೀಗಿತ್ತು
ಕ್ರಾಂತಿಯು ಚಿರಾಯುವೆಂದು ಸಾರಿತು
ಭಗತನೆಂಬ ಹುಲಿಯು ಚಿರಾಯುವಾಯಿತು...
ರಾಮಚಂದ್ರ ಸಾಗರ್-ಜನನಾಯಕ-ಕವನಸಂಕಲನ
ವಿನಯ ಮತ್ತು ಧನ್ಯಾ ಬಾಲ್ಯದಿಂದಲೇ ಒಟ್ಟಿಗೆ ಬೆಳೆದವರು, ಇಬ್ಬರದೂ ಅಪ್ರತಿಮ ಸ್ನೇಹ. ಒಟ್ಟಾರೆ ದಿನದಲ್ಲಿ ಒಮ್ಮೆಯಾದರೂ ಒಬ್ಬರನ್ನೊಬ್ಬರು ನೋಡಲೇಬೇಕು. ಯಾವುದೇ ಸಂತಸ, ದುಃಖವಿರಲಿ ಇಬ್ಬರೂ ವಿನಿಮಯಮಾಡಿಕೊಳ್ಳುತ್ತಿದ್ದರು. ಮನೆಯಲ್ಲಿ ಅಪ್ಪ, ಅಮ್ಮನಿಗೆ ಹೇಳದಿದ್ದರೂ ಸರಿಯೇ ಅದೂ ಇಬ್ಬರಲ್ಲೂ ವಿನಿಮಯವಾಗುತ್ತಿತ್ತು. ಹೀಗೆ ಧನ್ಯಾ ತನ್ನ ಹಳೆ ನೆನಪುಗಳನ್ನು ನೆನೆಯುತ್ತಾ ರೈಲಿನಲ್ಲಿ ಕುಳಿತಿದ್ದಾಳೆ. ಹಾಗೇ ಬಾಲ್ಯದ ಜೀವನ ನೆನಪಾಗುತ್ತಿದೆ.
ಶಾಲೆಗೆ ಹೋಗುವಾಗ ಇಬ್ಬರೂ ಹಸಿರು ಗದ್ದೆಯ ಬದಿಯ ಮೇಲೆ ಸಾಗುತ್ತಾ ಬಿಳಿ ಕೊಕ್ಕರೆಗಳ ನೋಡಿ ಸಂಭ್ರಮಿಸಿದ ಆ ದಿನಗಳು, ಹೂ ಬನದ ನಡುವೆ ನಲಿಯುತಾ ಓಡೋಡಿ ಸಾಗಿದ ಸವಿ ದಿನಗಳು, ಮುಂಗಾರು ಮಳೆಯಲ್ಲಿ ಖುಷಿಯಿಂದ ಕುಣಿಯುತಾ ಆಲಿಕಲ್ಲು ಆರಿಸಿದ ಮಧುರ ನೆನಪು, ರಾತ್ರಿ ಶೀತವಾಗಿ ಒದ್ದಾಡುವಾಗ ಅಮ್ಮ ಗದರಿದರೂ ಹೆದರದೇ ನಲಿದ ನೆನಪು. ಕಾಡಂಚಲಿ ಸಾಗುವಾಗ ನೇರಳೆ, ಮಾವು ಮರಕ್ಕೆ ಕಲ್ಲು ಹೊಡೆದು ಹಣ್ಣು ಕಿತ್ತು ಸವಿದ ನೆನಪು. ಇಂದ್ರನ ಹೂವು ಬೇಕೇ ಬೇಕೆಂದು ಹಠವಿಡಿದು ಕುಳಿತಾಗ ನನ್ನಾಸೆಗೆ ಇಲ್ಲವೆನ್ನದೇ ವಿನಯ್ ಮುಳ್ಳುಕಂಟಿಯ ಪೊದೆಯಲ್ಲಿ ಇಳಿದು ಹೂವು ತಂದು ಕೈಲಿಟ್ಟಾಗ ಮನವು ವಿಸ್ಮಿತಗೊಂಡು ತದೇಕಚಿತ್ತದಿಂದಲೇ ಆ ಹೂವನ್ನೇ ನೋಡಿ ನಲಿದ ಆ ಘಳಿಗೆಯೇ ನೀನೆಷ್ಟು ಹಿತ. ಎಷ್ಟು ಮಧುರ.! ಖುಷಿಗೆ ಅಂಕುಶವಿಲ್ಲದ ಸವಿ ಘಳಿಗೆಗಳೇ ಅಲೆ ಅಲೆಯಾಗಿ ಬೀಸಿದ ಆ ದಿನಗಳೇ ನೀವೆಷ್ಟು ಸುಂದರ, ನೀವೆಷ್ಟು ಆತ್ಮೀಯ. ಬಾಳಿಗೆ ಸಿರಿತನ ಮೂಡಿಸಿದವರು ನೀವೇ!
ಮನದ ನೆನಪುಗಳ ಬುತ್ತಿಯು ಕಡಲಾಗಿದೆ, ಏನೆಂದರೂ ಬರೀ ಮಾತಲ್ಲಿ ಮುಗಿಯುವುದೇ ನಿರ್ಮಲ ಸ್ನೇಹದ ಹಾದಿಯ ಪಯಣವು. ಒಟ್ಟಾರೆ ಹೀಗೆ ಸಾಗುತ್ತಿದ್ದ ಧನ್ಯಾ ಮತ್ತು ವಿನಯರ ನಡುವಿನ ಸ್ನೇಹವು ದಿನದಿಂದ ದಿನಕ್ಕೆ ಇನ್ನಷ್ಟು ಆತ್ಮೀಯವಾಗುತ್ತಿತ್ತು. ಇಬ್ಬರೂ ತಾಳಗುಪ್ಪದಲ್ಲಿ ಹೈಸ್ಕೂಲುವರೆಗೆ ವಿದ್ಯಾಭ್ಯಾಸ ಮುಗಿಸಿದರು. ನಂತರ ಪಿ.ಯು.ಸಿ ಹೋಗಬೇಕೆಂದಾಗ ಸಾಗರದ ಕಾಲೇಜಿಗೆ ಸೇರಿದರು. ಆಗಲೂ ಇಬ್ಬರೂ ಒಟ್ಟಿಗೆ ಸಾಗುತ್ತಿದ್ದರು.
ಧನ್ಯಾ ಬೆಂಗಳೂರಿನಲ್ಲಿ ಸಾಫ್ಟೆವೇರ್ ಕಂಪನಿಯೊಂದರಲ್ಲಿ ಈಗ ಕೆಲಸಮಾಡುತ್ತಿದ್ದಾಳೆ. ಬಹಳ ಬುದ್ಧಿವಂತೆ, ಅಷ್ಟೇ ನಯವಂತೆ, ಪಾರಂಗತ ಚೆಲುವೆ. ಇವಳ ಊರು ಶಿವಮೊಗ್ಗ ಜಿಲ್ಲೆಯ ತಾಳಗುಪ್ಪ ಬಳಿಯ ಸುರಭಿಪುರ. ಇವಳೇ ಈ ಕಥೆಯ ನಾಯಕಿ. ಈಕೆ ಓದಿದ್ದು ಪಿ.ಯು.ಸಿವರೆಗೆ ಸಾಗರದಲ್ಲಿ. ಆ ನಂತರ ತನ್ನಿಚ್ಚೆಯಂತೆ ಕಂಪ್ಯೂಟರ್ ಸೈನ್ಸ್‍ನಲ್ಲಿ ಇಂಜಿನೀಯರಿಂಗ್ ಮುಗಿಸಿದ್ದು ಶಿವಮೊಗ್ಗದ ಪ್ರತಿಷ್ಟಿತ ಇಂಜಿನೀಯರಿಂಗ್ ಕಾಲೇಜಿನಲ್ಲಿ. ಈಗ ಈಕೆಗೆ ಸುಮಾರು ಮೂವತ್ತು ವರ್ಷ. ಮನೆಯಲ್ಲಿ ಎಲ್ಲರಿಗೂ ಈಕೆಗೆ ಮದುವೆ ಮಾಡಬೇಕೆನ್ನುವಾಸೆ. ಆದರೆ ಧನ್ಯಾ ಮಾತ್ರ ಒಪ್ಪದೇ ಹಾಗೇ ತನ್ನ ಹೃದಯದ ದನಿಗೆ ಮನಸ್ಸು ಗಟ್ಟಿಗೊಳಿಸಿ ಜೀವನದಲ್ಲಿ ಅಂದುಕೊಂಡ ಕನಸು ನನಸಾಗುತ್ತದೆ ಎನ್ನುತ್ತಾ ನಿತ್ಯವೂ ಲಕ್ಷಣನಿಗಾಗಿ ಕಾದ ಊರ್ಮಿಳೆಯಂತೆ ತನ್ನ ಬಾಳಿಗೆ ಹೂ ಮುಡಿಸಿದ ವಿನಯನಿಗಾಗಿ ಕಾಯುತ್ತಾ ದಿನ ದೂಡುತ್ತಿದ್ದಾಳೆ..ನೆನಪುಗಳ ಸುಳಿಯಲ್ಲಿ ಬಂಧಿಯಾಗಿ ನರಳುತ್ತಿರುವ ಕೋಮಲೆಯಾಗಿದ್ದಾಳೆ.
ಧನ್ಯಾ ನಗುತಾ ತುಸು ಹೆಜ್ಜೆ ಹಾಕಿ ಸುರುಭೀಪುರದ ಹಾದಿಯಲ್ಲಿ ಸಾಗಿದರೆ ಹಾದಿಯ ಎರಡೂ ಬದಿಯ ಹಸಿರು ಸಿರಿಯ ಇಕ್ಕೆಲದಲ್ಲಿ ಅರಳಿ ತಂಗಾಳಿಗೆ ನಗುತ ನಲಿವ ಹೂಲತೆಗೂ ಇವಳಂದಕೆ ವಿಸ್ಮಿತವಾದಭಾವ. ಎಂತಹ ಚೆಲುವೆ ಎಂದು ಮನದಲ್ಲಿ ಹೂಲತೆಗಳು ರೋದಿಸಿದ ಭಾಸ, ತುಸುವೂ ಸಪ್ಪಳವಿಲ್ಲದ ವೇಳೆಯಲ್ಲಿ ಈಕೆ ಮೆಲು ದನಿಯಲಿ ನಕ್ಕರೆ ಮಧುರ ದನಿಯೇ ಅಲೆ ಅಲೆಯಾಗಿ ಬೀಸಿದಂತೆ, ಅನುರಾಗದ ಸಾಗರವೇ ಉದಿಸಿದಂತೆ. ಈಕೆ ದೇವಗುಡಿಯ ಮುಂದೆ ಹೂಬುಟ್ಟಿ ಹಿಡಿದು ದುಂಡು ಮಲ್ಲಿಗೆಯ ಮುಡಿದು ನಗುತ ಬಂದರೆ ಚೆಲುವ ದೇವತೆಯೇ ಭುವಿಗಿಳಿದು ಬಂದಂತೆ..ದೇವಗುಡಿಯ ಮುಂದೆ ಮೇಳೈಸಿದ ಚೆಲುವ ದೇವತೆಯಂತೆ.
ತನ್ನ ಇಂಪಾದ ಕಂಠ ಸಿರಿಯಲ್ಲಿ ಪದಗಳ ಗುನುಗಿ ಹಾಡಾಗಿಸಿದರೆ ಎಂತಹ ನೋವನ್ನು ಕರಗಿಸಿ ಮನ ನಲಿಸಿ ಸಂಭ್ರಮಿಸುವ ಪಾರಂಗತೆ ಈ ಧನ್ಯಾ. ಇನ್ನೂ ನೃತ್ಯದಲ್ಲಿ ಭರತ ನಾಟ್ಯವೆಂದರೆ ಈಕೆಗೆ ಬಹಳ ಅಚ್ಚುಮೆಚ್ಚು, ಹತ್ತಿರದಲ್ಲೇ ಇರುವ ಹೊನ್ನೆಮರಡು ನದಿ ತೀರದಲ್ಲಿ ಹೋಗಿ ಮುಸ್ಸಂಜೆಯಲ್ಲಿ ಹೆಜ್ಜೆಹಾಕಿದರೆ ಇವಳ ಹೆಜ್ಜೆಗಳ ಮೋಡಿಗೆ ಮುಸ್ಸಂಜೆಯಲ್ಲಿ ನದಿಯ ಕಿನಾರೆಯು ಇನ್ನಷ್ಟು ರಂಗೇರಿ ಹೊನ್ನೆ ಬಂಡೆಗಳಿಗೂ ಸಂತೃಪ್ತಿಯ ಪುಳಕವು ಲಭಿಸಿದಂತ ಅನುಭೂತಿಯು..
ಇಂತಹ ಕೋಮಲೆಯು ಈ ನನ್ನ ಕಥೆಯ ಕಥಾ ನಾಯಕಿ ಧನ್ಯಾ..
ಉಲ್ಲಾಸದ ಕಿರಣವೆ ಬಾಳಿನೊಳು
ಉನ್ನತಿಕೆ ದೀಪವಾಗಿ ಬೆಳಗು
ಉದ್ದಿಷ್ಟ ಆಸೆಗಳೆ ಈ ದಿನದೊಳು
ಉದ್ದಿಪನ ನನಸಾಗು ನನ್ನೊಳು
ಉಮ್ಮಳಿಸುವ ಘಳಿಗೆಯನು ಹೊಡೆದೋಡಿಸು
ಉನ್ಮೀಲಿತ ಹೂವಂತೆ ಬಾಳಾಗಿಸು
ಉರ್ವರೆಯ ನೆಲೆಯಲಿ ಜೀವದಾ ಸೆಲೆಯಾಗು
ಉಮೇದು ಜಗಕೆ ಒಲವಿನ ಅಲೆಯಾಗು
ಉಜ್ವಲ ಕಾಂತಿಯಲಿ ಬಡತನ ದಹಿಸು
ಉಜ್ವಲಿಸುವ ಧೈರ್ಯದ ಬಂಧುವಾಗು
ಉತ್ತುಂಗದ ಉಕ್ತಿಯಲಿ ಸದ್ಗತಿಯ ಸಂದೇಶವಾಗು
ಉತ್ಕರ್ಷದ ಸೌಧದಲಿ ಸಂತಸದ ನೆಲೆಯಾಗು
ಉಡಾಳ ಜೀವದಲಿ ಚೈತನ್ಯ ಮೂಡಿಸು
ಉಡಾಫೆ ಬದುಕಿಗು ಸಕಾರದ ಸಿರಿಯಾಗು
ಉದಾಸೀನ ಕಾಯಕದಲಿ ಉತ್ಸಾಹದ ಹೆಜ್ಜೆಯಾಗು
ಉನ್ನತಿಯ ಉದಧಿ ಬದುಕಾಗಿಸು ಜಗದೊಳು
ಉದಯಿಸುವ ರವಿಯೆ ಆತ್ಮಸ್ಥೈರ್ಯದ ಉತ್ಥಾನವಾಗು
ಉತ್ಫಲದ ಸೊಬಗಂತೆ ಸಂಭ್ರಮಿಸುವ ಚೆಲುವಾಗು
ಉಪಲಾಲನೆಯ ವಚನದ ಕಾಂತಿಯಾಗು
ಉದ್ಯುಕ್ತ ಛಲದಲಿ ಫಲದ ರಶ್ಮಿಯಾಗು
ರಾಮಚಂದ್ರ ಸಾಗರ್