ಗೆಳತಿ..
ಬಿರಿದ ಮಲ್ಲಿಗೆಯ ಹೂ ಬನವು
ನಿನ್ನ ಕಿರುನಗುವ ಮೊಗವು
ಒಲವ ಕಾಂತಿಯ ಓರಣವು
ನಿನ್ನ ಮೋಹದ ಸಿಹಿನೋಟವು
ಎದೆಯ ಗೂಡಿನ ಪ್ರೇಮಗಾನವು
ನಿನ್ನೊಲವ ಸಹವಾಸದ ಫಲವು
ಜಗದ ಸೋಜಿಗದ ಪ್ರೇಮರೂಪವು
ಮನ ಬಂಧಿಸಿದ ನಿನ್ನ ಸಾರಥ್ಯವು
ಪ್ರೀತಿಯ ಹೊಳೆಯ ಜೀವದುಸಿರು
ನಿನ್ನ ಮೆಲುದನಿಯ ಹಾಡು
ಒಲವ ವಸಂತದ ಆಗಮನವು
ಹೃದಯವತಿ ನೀ ಬರುವ ಬಾಳು
ಒಲವ ತೋಟದ ಚೇತನವು
ನಿನ್ನ ಸೌಂದರ್ಯದ ಪ್ರೇರಣೆಯು
ಮೋಹದ ಕಡಲಿನ ಉಬ್ಬರವು
ನಿನ್ನ ಪ್ರೇಮಕಾಂತಿಯ ಕಾರಣವು
ಸದಾ ಬೀಸುವ ಒಲವಿನಲೆಯು
ನಿನ್ನ ಅವಿಶ್ರಾಂತ ನಗುವ ನಯನವು
ಸದಾ ನಲಿಸುವ ಘಳಿಗೆಯು
ನಿನ್ನ ಅಮಲೇರಿಸುವ ಕಿರುನಗೆಯು
ರಾಮಚಂದ್ರ ಸಾಗರ್
ಎದೆಯ ಗೂಡಲಿ ಮೊಳಗುವ ಗಾನವೆ
ನಿನ್ನೊಲುಮೆಯ ನಗುವಿನ ಫಲವು
ನೀ ನಡೆಸುವ ಹೂಬನದ ಹಾದಿಯೆ
ಪ್ರೀತಿಯ ಸೌರಭದಲೆಯ ಸ್ವಾದವು
ಪ್ರೀತಿ ಪದಗಳ ಸವಿ ಮೇಳವೆ
ನೀ ನಡೆಸುವ ಸಲ್ಲಾಪದ ಸಂಕಲನವು
ಪ್ರೇಮದ ಮಹಲಿನ ಬುನಾದಿಯೆ
ನೀ ನೀಡಿದ ಅಭಯದ ವಚನವು
ಅನುರಾಗದಲೆಯ ಇಂಪಾದ ಸೆಲೆಯೆ
ಮೆಲು ನಗುವ ನಿನ್ನ ಸೋಜಿಗದ ಮೊಗವು
ಹೃದಯದ ದನಿಯ ಬಡಿತವೆ
ನೀ ಹೃದಯ ಬೆಸೆದ ಬಂಧದ ಋಣವು
ಒಲವಿನ ವರ್ಷದ ಅಭಿಷೇಕವೆ
ನೀ ಜೊತೆಯಾದ ಸವಿ ಘಳಿಗೆಯು
ರಮಿಸುವ ಬಾಳಿನ ಹೂಮಾಲೆಯೆ
ನಗುತ ನಲಿಸುವ ನಿನ್ನೊಲವು
ಪ್ರೇಮದ ಕಡಲಿನ ದರ್ಶನವೆ
ನಿನ್ನ ಕಣ್ಣೋಟದ ಸವಿನೋಟವು
ಪ್ರೀತಿಯ ಮೆಲುಗಾಳಿಯ ಸುಳಿದಾಟವೆ
ನೀ ನಲಿವ ಸಡಗರದ ಬಾಳು
ಸದಾ ಗುನುಗುವ ಅನುರಾಗದ ಸ್ವರವು
ರಾಮಚಂದ್ರ ಸಾಗರ್
ಗೆಳೆಯಾ
ಬಾಳಿನ ಉಲ್ಲಾಸದ ಮಳೆಯೆ
ನೀ ನನ್ನವನೆಂಬ ಸವಿ ಕನಸು
ಹೃದಯದ ದನಿಯ ನಿನಾದವೆ
ನೀ ಬೆಸೆದ ಒಲವ ಬಂಧವು
ಜೀವದ ಒಲುಮೆಯ ಓರಣವೆ
ನೀ ನೀಡಿದ ಕೈಸೆರೆಯು
ರಂಗು ತುಂಬಿದ ಜಗವೆ
ನೀ ಮೋಹಿಸುವ ಕ್ಷಣವು
ಮನದ ಮನೆಯ ದೀಪವೆ
ನೀ ಕರುಣಿಸಿದ ಒಲವ ತಂಬೆಳಕು
ಒಲವ ನೌಕೆಯ ಇಂಧನವೆ
ನೀ ಜೊತೆ ನಗುವ ಸಾರಥ್ಯವು
ಪ್ರೇಮ ಪಯಣದ ಹಾದಿಯೆ
ನೀ ತೋರಿದ ಒಲುಮೆಯ ಪಥವು
ಮನಸು ಮೊರೆವ ಭಿಕ್ಷೆಯೆ
ನೀ ಆಗಮಿಸುವ ಘಳಿಗೆಯು
ಕನಸುಗಳ ಜಾತ್ರೆಯ ಮೆರವಣಿಗೆಯೆ
ನೀ ಸನಿಹವಾಗುವ ಸಂಬ್ರಮವು
ಇನಿದಾದ ಕನಸುಗಳ ಸಾಕಾರವೆ
ನೀ ನನ್ನೊಂದಿಗೆ ಒಪ್ಪಿ-ಅಪ್ಪಿದ ಬಾಳ್ವೆಯು
ರಾಮಚಂದ್ರ ಸಾಗರ್
ಬೀಸುವ ತಂಪಲೆಯ ನಾದದಲಿ
ಒಲವ ಗಾನ ಹಾಡೋಣ ಬಾ
ಅರಳಿದ ಮಲ್ಲಿಗೆಯ ನಗುವಲಿ
ಪ್ರೇಮದ ಕುರುಹು ಕಾಣೋಣ ಬಾ
ಮುಸ್ಸಂಜೆಯ ರಂಗಿನ ಓರಣದಲಿ
ಒಲವ ರಂಗೋಲಿ ಎಳೆಯೋಣ
ಮಳೆ ಮೋಡದ ಹನಿಗಳ ಸದ್ದಿನಲಿ
ಪ್ರೇಮದ ಪದಗಳ ಗುನುಗೋಣ ಬಾ
ಸುಳಿಗಾಳಿಯ ಸೌಗಂಧದ ಸವಿಯಲಿ
ಒಲವ ಸೌರಭದ ಸೌಧ ಕಟ್ಟೋಣ
ನಲಿವ ನವಿಲಿನ ಸೋಜಿಗದ ಚೆಲುವಲಿ
ಹೃದಯ ನಲಿವಿನ ನಂದನವಾಗಿಸೋಣ ಬಾ
ಮೆಲು ನಗುತ ಮೋಹದ ಬಂಧದಲಿ
ಇನಿದಾದ ಕನಸುಗಳಿಗೆ ಸ್ವಾಗತಿಸೋಣ
ಮಮತೆಯ ಆಸರೆಯ ನೆರಳಲಿ
ಪ್ರೀತಿಯ ಪಾವಿತ್ರ್ಯ ಆರಾಧಿಸೋಣ ಬಾ
ಮಿಡಿದ ಹೃದಯಗಳ ಉಸಿರಿನಲಿ
ಸದಾ ಒಲವೇ ಉಸಿರಾಗಿಸೋಣ
ಹವಣಿಸು ಸವಿ ಕಣ್ಣೋಟದಲಿ
ಸತ್ಕಾರದ ಪ್ರೀತಿಯ ಬಯಸೋಣ ಬಾ
ರಾಮಚಂದ್ರ ಸಾಗರ್