Sunday, 22 July 2018

ಬಾ ಗೆಳೆಯಾ

ಬೀಸುವ ತಂಪಲೆಯ ನಾದದಲಿ
ಒಲವ ಗಾನ ಹಾಡೋಣ ಬಾ
ಅರಳಿದ ಮಲ್ಲಿಗೆಯ ನಗುವಲಿ
ಪ್ರೇಮದ ಕುರುಹು ಕಾಣೋಣ ಬಾ

ಮುಸ್ಸಂಜೆಯ ರಂಗಿನ ಓರಣದಲಿ
ಒಲವ ರಂಗೋಲಿ ಎಳೆಯೋಣ
ಮಳೆ ಮೋಡದ ಹನಿಗಳ ಸದ್ದಿನಲಿ
ಪ್ರೇಮದ ಪದಗಳ ಗುನುಗೋಣ ಬಾ

ಸುಳಿಗಾಳಿಯ ಸೌಗಂಧದ ಸವಿಯಲಿ
ಒಲವ ಸೌರಭದ ಸೌಧ ಕಟ್ಟೋಣ
ನಲಿವ ನವಿಲಿನ ಸೋಜಿಗದ ಚೆಲುವಲಿ
ಹೃದಯ ನಲಿವಿನ ನಂದನವಾಗಿಸೋಣ ಬಾ

ಮೆಲು ನಗುತ ಮೋಹದ ಬಂಧದಲಿ
ಇನಿದಾದ ಕನಸುಗಳಿಗೆ ಸ್ವಾಗತಿಸೋಣ
ಮಮತೆಯ ಆಸರೆಯ ನೆರಳಲಿ
ಪ್ರೀತಿಯ ಪಾವಿತ್ರ್ಯ ಆರಾಧಿಸೋಣ ಬಾ

ಮಿಡಿದ ಹೃದಯಗಳ ಉಸಿರಿನಲಿ
ಸದಾ ಒಲವೇ ಉಸಿರಾಗಿಸೋಣ
ಹವಣಿಸು ಸವಿ ಕಣ್ಣೋಟದಲಿ
ಸತ್ಕಾರದ ಪ್ರೀತಿಯ ಬಯಸೋಣ ಬಾ

ರಾಮಚಂದ್ರ ಸಾಗರ್