Wednesday, 15 August 2018

ಅನುರಾಗದ ಸ್ವರವು

ಎದೆಯ ಗೂಡಲಿ ಮೊಳಗುವ ಗಾನವೆ
ನಿನ್ನೊಲುಮೆಯ ನಗುವಿನ ಫಲವು
ನೀ ನಡೆಸುವ ಹೂಬನದ ಹಾದಿಯೆ
ಪ್ರೀತಿಯ ಸೌರಭದಲೆಯ ಸ್ವಾದವು

ಪ್ರೀತಿ ಪದಗಳ ಸವಿ ಮೇಳವೆ
ನೀ ನಡೆಸುವ ಸಲ್ಲಾಪದ ಸಂಕಲನವು
ಪ್ರೇಮದ ಮಹಲಿನ ಬುನಾದಿಯೆ
ನೀ ನೀಡಿದ ಅಭಯದ ವಚನವು

ಅನುರಾಗದಲೆಯ ಇಂಪಾದ ಸೆಲೆಯೆ
ಮೆಲು ನಗುವ ನಿನ್ನ ಸೋಜಿಗದ ಮೊಗವು
ಹೃದಯದ ದನಿಯ ಬಡಿತವೆ
ನೀ ಹೃದಯ ಬೆಸೆದ ಬಂಧದ ಋಣವು

ಒಲವಿನ ವರ್ಷದ ಅಭಿಷೇಕವೆ
ನೀ ಜೊತೆಯಾದ ಸವಿ ಘಳಿಗೆಯು
ರಮಿಸುವ ಬಾಳಿನ ಹೂಮಾಲೆಯೆ
ನಗುತ ನಲಿಸುವ ನಿನ್ನೊಲವು

ಪ್ರೇಮದ ಕಡಲಿನ ದರ್ಶನವೆ
ನಿನ್ನ ಕಣ್ಣೋಟದ ಸವಿನೋಟವು
ಪ್ರೀತಿಯ ಮೆಲುಗಾಳಿಯ ಸುಳಿದಾಟವೆ
ನೀ ನಲಿವ ಸಡಗರದ ಬಾಳು
ಸದಾ ಗುನುಗುವ ಅನುರಾಗದ ಸ್ವರವು

ರಾಮಚಂದ್ರ ಸಾಗರ್