Sunday, 12 February 2017

ಆಭರಣವು ನೀನು..

ಆಹ್ಲಾದದ ಆಭರಣವು ನೀ ನೀಡುವ ಮುತ್ತು
ಆನನಂದದ ಆನನವು ನೀ ನುಡಿವ ಮಾತು
ಸಂತೋಷದ ಹಂದರವು ನೀ ಕರೆವ ಬಾಳು
ಆಲಾಪದ ಸಿಹಿಯೂ ನೀ ಗುನುಗುವ ಹಾಡು..

ಆನಂದಿಸುವ ಜಗವು ನಿನ್ನ ಬಾಹು ಬಂಧನವು
ಆಭಾರದ ತೊಟ್ಟಿಲು ನಿನ್ನ ಮೋಹದ ಮಡಿಲು
ಔದಾರ್ಯದ ನೋಟವು ನಿನ್ನ ಕುಡಿನಗುವ ಸೊಬಗು
ಆವಾಸದ ಸೆಲೆಯು ನಿನ್ನ ಎದೆಯ ಗೂಡು..

ಆತಿಥ್ಯವು ಮನಕೆ ನಿನ್ನ ತುಂಟ ನೋಟ
ಸೌಭಾಗ್ಯವು ಕಣ್ಣಿಗೆ ನಿನ್ನ ಮುಗ್ದ ನೋಟ
ಸುಕಾರ್ಯದ ಆಧಾನವು ನಿನ್ನ ಸಹಿತ ಜೊತೆಯು
ಶೃಂಗಾರಕೆ ಆವೇದನೆಯು ನೀ ನಾಚುವ ಪರಿಯು..

ಆಸೆಪಡೆವ ನನ್ನ ಹೃದಯಕೆ ಉತ್ತರವೂ ನೀನು
ಆಮಿಷವು ನನ್ನ ಸಿಹಿಕನಸಿಗೆ ನಿತ್ಯವೂ ನೀನು
ನಿರೂಪಕಿಯು ಒಲವ ಬದುಕಿಗೇ ನೀನು
ಪ್ರೇಯಸಿಯು ನಿತ್ಯ ಪ್ರೇಮಿಸುವ ನನ್ನ ಮನಕೆ ನೀನು..

        ರಾಮಚಂದ್ರ ಸಾಗರ್

Saturday, 4 February 2017

ನಂದು ಎಂಬ ಬಂಧು

ಬರಡು ನಾಡಲ್ಲಿ ಹಸಿರು ಮೇಳೈಸಿದವನೇ
ಹಂದೆ ಮನದಲ್ಲಿ ಛಲುವು ಉಕ್ಕಿಸಿದವನೇ
ಅಳಲು ತುಂಬಿದವರಲ್ಲಿ ಸಂತಸವರಳಿಸಿದವನೇ
ದುಮ್ಮಾನದ ಬದುಕಲ್ಲಿ ಹೊಸತನ ತಂದವನೇ
ನಮ್ಮೀ ನಂದು ಎಂಬ ಬಂಧು..

ಕಾಠಿಣ್ಯದ ದಾರಿಯನು ಹೂವಾಗಿಸಿದವನು
ಆಗದು ಎಂಬುದನು ಆಗಿಸಿ ತೋರಿದವನು
ಶಿಲೆಯ ತಲೆಯಲ್ಲಿ ಹೂವರಳಿಸಿದ ಜಾದುಗಾರ
ಬರಡು ಮರದಲ್ಲಿ ಹೂ ತುಂಬಿದಾ ಮೋಡಿಗಾರ
ನಮ್ಮೀ ನಂದು ಎಂಬ ಬಂಧು..

ಯಾರಿಲ್ಲವೆಂದವರಿಗೆ ಸ್ನೇಹದ ಸೆಲೆಯಾಗಿ
ಊರಿಗೆಲ್ಲರಿಗೆ ಚೈತನ್ಯ ಧಾರೆಯಾಗಿ
ನಾಡಿನೆಲ್ಲರಿಗೆ ಮಾದರಿಯಾದವನೇ
ದುಡಿವ ಕೈಗಳಿಗೆ ದುಡಿಮೆ ನೀಡಿದವನೇ
ನಮ್ಮೀ ನಂದು ಎಂಬ ಬಂಧು..

ಭೂತಾಯ ಒಲುಮೆಯಲ್ಲಿ ವರ ಪಡೆದವನು
ಹಸಿರು ಕ್ರಾಂತಿಗೆ ಕೈ ಎತ್ತಿ ನಡೆವÀವನು
ದುರ್ಜನರ ದಮನಕೆ ಕೈಕಟ್ಟಿ ನಿತ್ತವನು
ನಮ್ಮೀ ನಂದು ಎಂಬ ಬಂಧು..
ಸ್ನೇಹ ಬೆಸೆವ ಬಂಧು..

     ರಾಮಚಂದ್ರ ಸಾಗರ್

Thursday, 2 February 2017

ಮಗಳೇ ಎಂದವನೇ.. ಭಾಗ 5

        ಗೆಳತಿ ಮತ್ತು ನಾನು ಯೋಜಿಸಿದಂತೆ ಎಲ್ಲವೂ ಸಿದ್ದ ಮಾಡಿಕೊಂಡೆವು, ಆಕೆಯ ಅಣತಿಯಂತೆ ನಾನು ಒಪ್ಪಿದೆ, ಒಂದು ವೇಳೆ ಈಗ ಯೋಜಿಸಿದಂತೆ ಆಗದಿದ್ದರೆ ಗೆಳೆಯರ ಸಹಾಯದೊಂದಿಗೆ ಬೇರೊಂದು ಕಾರ್ಯ ಮಾಡೋಣವೆಂದಳು, ಈಗ ನಾವು ಎಲ್ಲವನ್ನೂ ಸಿದ್ದವಾಗಿಸಿಕೊಂಡು ಸೀದಾ ವರದರಾಜ್ ಮನೆಗೆ ಹೋದೆವು. ಮನೆ ಬಾಗಿಲು ಬಡಿದೆ, ಸುನಿತಾ ಬಂದು ಬಾಗಿಲು ತೆಗೆದು ನೋಡಿದಳು, ಬೇರೆ ದಿನಾ ನೋಡಿದಾಗ ಕಾಣುವ ಆತ್ಮೀಯತೆ ಇಂದು ಅವಳ ಮೊಗದಲ್ಲಿ ಕಾಣಲಿಲ್ಲ, ಏಕೆ ಬಂದರೋ ಎಂಬ ಭಾವವಿತ್ತು, ನಾನು ಇಲ್ಲೇ ಶಾಪಿಂಗ್‍ಗೆ ಬಂದಿದ್ದೆ, ಹಾಗೇ ಅಪ್ಪಾಜಿ ಊರಿಂದ ಬಂದಿದ್ದಾರೆಂದು ನೋಡಿ ಹೋಗಲು ಬಂದೆ ಎಂದೆ, ಆಕೆ ಅಪ್ಪಾಜಿ ಇನ್ನೂ ಬಂದಿಲ್ಲ, ಇನ್ನೂ ಎರಡು ದಿನವಾಗುತ್ತೆ ಬರೋದು, ಅಲ್ಲಿ ಅವರ ಸಹೋದರನಿಗೆ ಹುಷಾರಿಲ್ಲ ಯಾವುದಕ್ಕೂ ಖಚಿತವಾಗಿ ಹೇಳುವುದು ಕಷ್ಟ ಎಂದಳು, ನಾನು ಕುಡಿಯಲು ಸ್ವಲ್ಪ ನೀರು ಕೊಡಿ ಎಂದೆ, ಅವಳು ತರಲು ಒಳ ಹೋದಳು. ಕೂಡಲೇ ನಾನು ಟಿ.ವಿ ಪಕ್ಕದಲ್ಲಿದ್ದ ಗಾಜಿನ ಕುಂಡವನ್ನು ಮೊದಲೇ ಯೋಜಿಸಿದಂತೆ ಜೋರಾಗಿ ಬೀಳಿಸಿದೆ, ಬಿದ್ದ ಶಬ್ದಕ್ಕೆ ಎರಡು ಜನ ರೂಮಿನಿಂದ ಬುಲೆಟ್ ನಿಂದ ಬಿದ್ದ ಗುಂಡಿನಂತೆ ಹೊರ ಓಡಿಬಂದರು, ಬಂದವರು ಕುಮಾರ್ ಮತ್ತು ವರದರಾಜ್, ಕೂಡಲೇ ನಾವು ನಮ್ಮ ಬಳಿ ಇದ್ದ ಪೆಪ್ಪರ್ ಸ್ಪ್ರೆಯ್ ಮತ್ತು ಸುಣ್ಣದ ಪೌಡರ್ ಅವರ ಕಣ್ಣಿಗೆರೆಚಿದೆವು, ಈ ಕಡೆ ಇಂದ ಓಡಿ ಬಂದ ಸುನಿತಾಳಿಗೂ ಪೆಪ್ಪರ್ ಸ್ಪ್ರೆಯ್ ಮಾಡಿ ಕೂಡಲೇ ಮುಂಬಾಗದ ಬಾಗಿಲು ಎಳೆದೆವು. ಎಲ್ಲರೂ ಏನಾಯಿತೆಂಬ ಗಾಬರಿಯಲ್ಲಿದ್ದಾಗಲೇ ಬೇಗನೇ ಅವರಿಗೆ ಕೂಗಿದರೆ ಕೈಯಲ್ಲಿರುವ ಬ್ಲೇಡ್ ನಿಂದ ಗಂಟಲು ಕತ್ತರಿಸುತ್ತೇವೆ, ನಮ್ಮ ಮಾನಕ್ಕಿಂತ ನಿಮ್ಮ ಜೀವ ದೊಡ್ಡದಲ್ಲವೆಂದು ಬಾಯಿ ಮುಚ್ಚಿಸಿದೆವು. 
        ಕೂಡಲೇ ಅವರನ್ನು ಕೋಣೆಯಲ್ಲಿ ಕೂಡಿ ಹಾಕಿ ನಮ್ಮ ಬಳಿ ಇದ್ದ ಹಗ್ಗದಿಂದ ಅವರ ಕೈಕಾಲುಗಳನ್ನು ಕಟ್ಟಿಹಾಕಿದೆವು, ಬಾಯಿಗೆ ಬಟ್ಟೆ ತುರುಕಿದೆವು, ಕಣ್ಣಿಲ್ಲದೇ ಎಲ್ಲದಕ್ಕೂ ಬೆಂಡಾಗುವುದು ಈಗ ಅವರದಾಯಿತು, ನಾನು ಎರಡು ದಿನದಿಂದ ಸರಿಯಾಗಿ ಊಟವಿಲ್ಲದಿದ್ದರೂ ಆನೆ ಬಲದಂತೆ ಎರಗಿದೆ, ಛಲವೆಚ್ಚಿಸಿಕೊಂಡು ಹೋರಾಡತೊಡಗಿದೆ, ಅವರು ಕಣ್ಣಿಗೆ ಪೆಪ್ಪರ್ ಸ್ಪ್ರೆಯ್ ಮತ್ತು ಸುಣ್ಣ ಎರಡೂ ಬಿದ್ದಿದ್ದರಿಂದ ಏನೆಂದು ಅರಿಯದೇ ಭಯದಲ್ಲಿ ನಡುಗುತ್ತಿದ್ದರು, ಮೊದಲು ಕುಮಾರ್‍ನನ್ನ ಕೇಳತೊಡಗಿದೆವು, ವೀಡಿಯೋ ಮಾಡಿದ್ದು ಯಾರು, ಹೇಗೆ ಇದರಲ್ಲಿ ಯಾರೆಲ್ಲಾ ಇದ್ದೀರ, ಮೊದಲು ವೀಡಿಯೋ ಎಲ್ಲಿದೆ ಹೇಳು ಇಲ್ಲದಿದ್ದರೆ ನಿನ್ನ ಗಂಟಲನ್ನು ನಮ್ಮ ಕೈಲಿರುವ ಬ್ಲೇಡ್ ನಿಂದ ಕತ್ತರಿಸಿ ಹಾಕುತ್ತೇವೆ, ನಮ್ಮ ಮಾನಕ್ಕಿಂತ ನಿಮ್ಮ ಜೀವ ದೊಡ್ಡದಲ್ಲವೆಂದೆವು, ಆತ ನಡುಗಲಾರಂಭಸಿದ, ಆತನನ್ನು ಪಕ್ಕದ ರೂಂಗೆ ತಂದು ವಿಚಾರಿಸಿದೆವು, ಎಲ್ಲವನ್ನೂ ಹೇಳಿದ,  ಬೇಗನೇ ಅವನ ಬಾಯಿಗೆ ಬಟ್ಟೆ ತುರುಕಿದೆವು, ಈಗ ಸುನಿತಾಳನ್ನು ಕರೆತಂದು ಕೇಳಿದೆವು, ಎಲ್ಲಾ ಹೇಳುತ್ತೀಯ ಎಂದೆ, ತಲೆಯಾಡಿಸಿದಳು, ಕೂಡಲೇ ಅವಳ ಬಾಯಿಯಿಂದ ಬಟ್ಟೆ ತೆಗೆದೆವು, ಅವಳು ಹೇಳ ತೊಡಗಿದಳು, ಎಲ್ಲರೂ ಸೇರಿ ಮಾಡಿದ್ದು, ವೀಡಿಯೋ ಹಿಡ್ಡನ್ ಕ್ಯಾಮರಾದಲ್ಲಿ ರೆಕಾರ್ಡ ಮಾಡಿ ಕಂಪ್ಯೂಟರ್‍ನಲ್ಲಿ ಲೋಡ್ ಮಾಡಿದ್ದೇವೆಂದಳು, ರೂಮಿನಿಂದ ಸುನಿತಾಳನ್ನು ಹೊರತಂದು ಯಾವ ಯಾವ ರೂಮಲ್ಲಿ ಎಲ್ಲಿದೆ, ಏನಿದೆಯೆಂದು ಒನ್ನೊಂದೇ ವಶಪಡಿಸಿಕೊಳ್ಳುತ್ತಾ ನಡೆದೆವು, ಕೊನೆಗೆ ಎಲ್ಲರ ಮೊಬೈಲ್‍ನ್ನು ಪರಿಶೀಲಿಸಿ ಎಲ್ಲವನ್ನು ನಮ್ಮ ವಶಕ್ಕೆ ಪಡೆದೆವು, ಅವರು ಯಾರೊಂದಿಗೆ ಮಾತಾಡಿದ್ದಾರೆ ಎಲ್ಲವನ್ನೂ ನೋಡಿದೆವು, ಅವರಿಂದ ಯಾರಿಗಾದರೂ ವೀಡೋಯೋ ಹೋಗಿದೆಯೋ ಪರಿಶೀಲಿಸಿದೆ, ಯಾರಿಗೂ ಹೋಗಿರಲಿಲ್ಲ, ನನಗೆ ಮಾತ್ರವೇ ಆಗಿತ್ತು, ನಂತರ ಸುನಿತಾಳ ಬಾಯಿಗೆ ಬಟ್ಟೆ ತುರುಕಿ ಅವಳನ್ನು ಪುನಃ ರೂಂ ನಲ್ಲಿ ಕೂರಿಸಿ, ಈಗ ವರದರಾಜ್ ನನ್ನು ರೂಂ ಹೊರಗೆ ತಂದು ಹೇಳಲು ಕೇಳಿದೆವು, ಆತನೂ ಸುನಿತಾಳಂತೆಯೇ ಹೇಳಿದ, ನಂತರ ಕುಮಾರ್‍ನನ್ನು ಎಳೆತಂದೆವು, ಕಂಪ್ಯೂಟರ್ ಇ ಮೇಲ್ ಎಲ್ಲವನ್ನು ತಡಕಾಡುತ್ತಾ ಮಧ್ಯೆ ರಾತ್ರಿ ಜಾರುತ್ತಿತ್ತು, ಆದರೂ ಹಸಿದ ಹುಲಿಗಳಂತೆ ದುಷ್ಟರ ಮೇಲೆ ಎರಗುತ್ತಾ ಅವರ ಬಳಿ ಇರುವ ದಾಖಲೆಗಳನ್ನೆಲ್ಲಾ ಸಂಗ್ರಹಿಸತೊಡಗಿದೆವು. 
         ಅನೇಕ ಜನ ಹೆಣ್ಣುಮಕ್ಕಳಿಗೂ ಇದೇ ರೀತಿ ಇವರು ಮಾಡುವುದು ಇವರ ದಂದೆ ಎಂಬುದು ನಮಗರಿವಾಯಿತು, ಕುಮಾರ್ ಕೆಲವರನ್ನು ತನ್ನ ಪ್ರೀತಿಯ ಬಲೆಯಲ್ಲಿ ಬೀಳಿಸಿ ಮೋಸ ಮಾಡಿದರೆ, ವರದರಾಜ್ ಕೆಲವರನ್ನು ತನ್ನ ಸೆಂಟಿಮೆಂಟ್‍ನ ಬಲೆಯಲ್ಲಿ ಬೀಳಿಸಿಕೊಳ್ಳುತಿದ್ದ. ಇನ್ನೂ ಸುನಿತಾ ಹನಿಟ್ರಾಪ್ ನಲ್ಲಿ ಬೀಳಿಸಿಕೊಂಡು ಬ್ಲಾಕ್ ಮೇಲ್ ಮಾಡುತ್ತಿದ್ದಳು, ಇವರಾರು ಕವಿ, ಸಾಹಿತಿ, ಬುದ್ಧಿಜೀವಿ, ನಾಡು ನುಡಿಯ ಹೋರಾಟಗಾರರಲ್ಲ, ಯಾವುದೇ ಸಂಘಟನೆಯ ಪದಾಧಿಕಾರಿಗಳೂ ಅಲ್ಲ, ಆದರೆ ಎಲ್ಲಿ ಜನಸೇರುತ್ತಾರೋ ಅಲ್ಲಿ ಹೋಗಿ ನಟನೆ ಮಾಡುವುದು ಇವರ ಕಾರ್ಯ. ಒಟ್ಟಾರೆ ಇದೊಂದು ವ್ಯವಸ್ತಿತ ದಂದೆಯೆಂಬುದು ಅರ್ಥವಾಯಿತು. 
           ಅಷ್ಟರಲ್ಲೇ ಕುಮಾರ್ ಮೊಬೈಲ್‍ಗೆ ಕರೆಬಂತು, ಕೂಡಲೇ ಕಟ್ ಮಾಡಿದೆ, ತಕ್ಷಣ ಮೆಸೆಜ್ ಬಂತು, ನೀನು ಕಳಿಸಿದ ಚಿತ್ರದ ಹುಡುಗಿ ಇನ್ನೂ ಬಂದಿಲ್ಲ, ಆಗ ಮತ್ತೆ ನಾನು ಗೆಳತಿ ಯೋಚಿಸತೊಡಗಿದೆವು, ಇವರು ಕಳಿಸಿದ ಚಿತ್ರದ ಮೇಲೆ ಮತ್ತೆ ನಮಗೆ ತೊಂದರೆ ಕಂಡಿತಾ ಎಂಬುದು ಅರಿವಾಯಿತು, ಮೊತ್ತೊಂದು  ಕರೆಬಂದಿತು, ರೂಂನಿಂದ ಹೊರಹೋಗಿ ಸ್ವೀಕರಿಸಿದೆ, ಆ ಕಡೆಯಿಂದ ಒಬ್ಬಳು ಹುಡುಗಿ ನೀನು ಕೇಳಿದ ಬಂಗಾರವೆಲ್ಲವನ್ನು ಮನೆಯಿಂದ ಕದ್ದಿದ್ದೇನೆ, ನಾಳೆಯೇ ಕೊಡುತ್ತೇನೆ, ದಯಮಾಡಿ ವೀಡಿಯೋ ಪಬ್ಲಿಕ್ ಮಾಡಬೇಡ, ನಿಮ್ಮ ಕಾಲಿಗೆ ಬೀಳುತ್ತೇನೆ, ಎಂದು ಒಂದೇ ಸಮನೆ ಅಳುತಿದ್ದಳು, ಮನಕ್ಕೆ ತುಂಬಾ ನೋವಾಯಿತು, ಇಂತಹ ಹೆಣ್ಮಕ್ಕಳ ಬಾಳು ಎಷ್ಟು ಕೊಂದಿದ್ದಾರೋ ಇವರನ್ನು ಬಿಡುವುದು ಉಚಿತವೇ ಎನಿಸಿತು, ಅಷ್ಟರಲ್ಲಿ ಮತ್ತೆ ಇನ್ನೊಂದು ಕರೆ ಸುನಿತಾಳ ಮೊಬೈಲ್‍ಗೆ  ಬಂತು, ಮತ್ತೇನೊ ಎಂದು ಕಟ್ ಮಾಡಿದೆ, ಮತ್ತೆ ಮತ್ತೆ ಬರುತ್ತಿತ್ತು, ಆಗ ಮೆಸೆಜ್ ಬಂತು, ನೀನು ಹೇಳಿದಂತೆ ನನ್ನ ಹೆಂಡತಿಗೆ ಗೊತ್ತಾಗದಂತೆ ಅವಳ ಬಂಗಾರವನ್ನೆಲ್ಲಾ ಕದ್ದಿರುವೆ, ನಾಳೆ ಕೊಡುವೆ, ಜೊತೆಗೆ  50 ಲಕ್ಷ ಕೊಡುತ್ತೇನೆ,  ದಯಮಾಡಿ ವೀಡಿಯೋ ಪಬ್ಲಿಕ್ ಮಾಡಬೇಡ, ಇದನ್ನು ಸ್ವೀಕರಿಸುತ್ತಾ ಕೂತರೆ ಮಾಡುವ ಕೆಲಸ ಮುಗಿಯುವುದಿಲ್ಲವೆಂದು ಮೊಬೈಲ್‍ಗಳನ್ನೆಲ್ಲ ಸ್ವಿಚ್ ಆಫ್ ಮಾಡಿದೆವು. ಒಂದೂ ಇವರು ಶಾಶ್ವತ ಕುರುಡರಾಗಬೇಕು ಇಲ್ಲವೇ ಇವರು ಬದುಕಬಾರದು, ಏನು ಮಾಡುವುದೆಂದು ಗೆಳತಿಗೆ ಕೇಳಿದೆ, ಅದಕ್ಕೂ ಸಿದ್ದತೆ ನಡೆಸಿದೆವು, ಇವರನ್ನು ಕುರುಡರನ್ನಾಗಿ ಮಾಡಿ ನಡೆದರೆ ಇವರಲ್ಲಿರುವ ಹಣದಿಂದ ಮತ್ತೆ ಕಣ್ಣು ಕೂಡಿಸಿಕೊಳ್ಳುತ್ತಾರೆ, ಇವರನ್ನು ಇನ್ನಿಲ್ಲದಂತೆ ಮಾಡುವುದೇ ಸರಿ ಎನಿಸಿತು, ಕೂಡಲೇ ಗೆಳತಿ ಮತ್ತು ನಾನು ರೂಮಿನೊಳಗೆ ಬಂದೆವು, ಅವರ ಕೈಗಳನ್ನು ಬಿಚ್ಚಿದೆವು, ಯಾರು ಕುಡಿಯಲು ನೀರು ಕೇಳುತ್ತಾರೋ ಅವರಿಗೆ ನೀರಿನೊಂದಿಗೆ ವಿಷಬೆರೆಸಿ ಅವರ ಕೈಯಲ್ಲಿ ಕೊಟ್ಟೆವು, ಬೆಳಿಗ್ಗೆ ಎಲ್ಲರನ್ನು ಮುಗಿಸಿ, ಅದು ಆತ್ಮಹತ್ಯೆಯೆಂಬಂತೆ ಬಿಂಬಿಸಿ ರೂಂನಲ್ಲಿ ಕಾಣುವಂತೆ ಮಾಡಿಬಂದೆವು. ನಾವು ಉಪಯೋಗಿಸಿದ್ದ ಹ್ಯಾಂಡ್ ಗ್ಲೌಸ್, ಹಗ್ಗ, ಪೆಪ್ಪರ್ ಸ್ಪ್ರೇಯ್, ಸುಣ್ಣದ ಪುಡಿ, ಇತರೆ ಎಲ್ಲಾ ವಸ್ತುಗಳನ್ನು ಅರಕಾವತಿ ನದಿಯಲ್ಲಿ ಹಾಕಿ ನಡೆದೆವು.
       ಎರಡು ದಿನ ಬಿಟ್ಟು ಪೇಪರ್‍ನಲ್ಲಿ ಮೂರು ಜನ ಮನೆಯಲ್ಲಿ ಆತ್ಮಹತ್ಯೆಯೆಂದು ಬಂತು..ನಾನು ಮತ್ತು ಗೆಳತಿ ಮೂರು ಜನರನ್ನು ಕೊಂದರೂ ಅದು ಸಾವಿರ ಜನರ ಮಾನ ಉಳಿಸಿದ ಪುಣ್ಯವೆಂದು ಹೆಮ್ಮೆಯಿಂದ ಬೀಗಿದೆವು..ನಮಗೆ ಯಾವುದೇ ಅಪರಾದ ಭಾವ ಕಾಡಲಿಲ್ಲ. ಅದು ಮುಂದೆಯೂ ಕಾಡುವುದಿಲ್ಲ...ಸಾವಿರಾರು ಜನರ ಮಾನ, ಪ್ರಾಣ ಉಳಿಸಿದ ಹೆಮ್ಮೆಯಂತೂ ಇದೆ, 
ದುಷ್ಟರ ನಿಗ್ರಹವೇ ಧರ್ಮ...
ಸ್ವಾಭಿಮಾನದ ಹೆಣ್ಣು ತನ್ನ ಮಾನಕ್ಕಾಗಿ ಉಸಿರಿನ ಕೊನೆವರೆಗೂ ಹೋರಾಡುತ್ತಾಳೆ, ಇದು ದಿಟ...

ರಾಮಚಂದ್ರ ಸಾಗರ್

ಮಗಳೇ ಎಂದವನೇ... ಕಥೆ ಭಾಗ 4

       ಮತ್ತಷ್ಟು ಹೆದರುತ್ತಾ ನೋಡಿದೆ..ಗೆಳತಿ ಬಂದಳು, ಅಳುತ್ತಾ ಓಡಿ ಹೋಗಿ ಅವಳನ್ನು ಬಿಗಿದಪ್ಪಿದೆ, ಅವಳು ಏನಾಯ್ತು ಎಂದರೂ ಉತ್ತರಿಸಲಾದೆ, ಕೂಡಲೇ ನೀರನ್ನು ನನ್ನ ನೆತ್ತಿಯ ಮೇಲೆ ಹಾಕಿ ನನಗೆ ನೀರು ಕುಡಿಸಿ ನನ್ನ ಸಾವಧಾನಿಸುತ್ತಾ ಮತ್ತೆ ಮತ್ತೆ ಕೇಳಿದಳು, ಹೆದರದಿರು ಏನಾಯ್ತು ಎಂದಳು, ನನಗೆ ಕಣ್ಣು ಕತ್ತಲೆ ಬಂದಂತಾಗಿ ಮೆತ್ತನೆ ಕಣ್ಮುಚ್ಚಿದೆ, ಎದ್ದು ನೋಡಿದಾಗ ನಾನು ಆಸ್ಪತ್ರೆಯ ಬೆಡ್ ಮೇಲೆ ಮಲಗಿದ್ದೆ, ಹೆದರಿ ಮೂರ್ಛೆಹೋಗಿದ್ದೆನಂತೆ, ಎದ್ದವಳೇ ನನ್ನ ಮೊಬೈಲ್ ಎಲ್ಲಿ ಎಂದೆ, ಗೆಳತಿಗೆ ಕೊಂಚ ಕಸಿವಿಸಿಯಾಯ್ತು, ಏನಾಯ್ತು ಏನು ಮೊದಲು ಹೇಳು, ನಿನ್ನ ಮೊಬೈಲ್ ಹೋದ್ರೆ ಇನ್ನು ಹತ್ತು ತರಬಹುದು ಸುಮ್ನಿರು ಎಂದು ಗದರಿದಳು, ಅಯ್ಯೋ ನನಗೆ ಮೊಬೈಲ್ ಸಿಕ್ಕರೆ ಸಾಕು, ಮೊದಲು ಮೊಬೈಲ್ ಬೇಕು ಎಂದು ಅಳತೊಡಗಿದೆ. ಅಯ್ಯೋ ಅದು ಮನೆಯಲ್ಲೇ ಇರಬೇಕು, ನೀನು ತಲೆಸುತ್ತಿ ಪ್ರಜ್ಞೆ ತಪ್ಪಿದಾಗ ನಾನು ನಿನ್ನನ್ನು ಮಾತ್ರ ಆಸ್ಪತ್ರೆಗೆ ತಂದೆ, ಮೊಬೈಲ್ ತರುವ ಸಮಯವೇ ಅದು ಎಂದು ಮತ್ತೆ ಗದರಿ, ಮೊದಲು ಏನಾಯ್ತು ಹೇಳು, ಧೈರ್ಯದಿಂದಿರು ಎಲ್ಲದಕ್ಕೂ ನಾನು ನಿನ್ನ ಜೊತೆ ಸದಾ ಇರುವೆ ಎಂದಳು, ಎಲ್ಲವನ್ನೂ ಅಳುತ್ತಾ ಹೇಳಿದೆ, ಕುಮಾರ್ ನನ್ನನ್ನು  ಬ್ಲಾಕ್ ಮೇಲ್ ಮಾಡುತ್ತಿದ್ದಾನೆಂದು, ಅವನು ಹೇಳಿದಂತೆ ಕೇಳದಿದ್ದರೆ ಎಲ್ಲವನ್ನು ಯುಟ್ಯೂಬ್‍ಗೆ ಇತರೆಡೆ ಅಪ್‍ಲೋಡ್ ಮಾಡುವುದಾಗಿ ಬೇರೆಯವರಿಗೆ ಆ ವೀಡಿಯೋ ಕಳಿಸುವುದಾಗಿ ಬೆದರಿಸುತ್ತಿದ್ದಾನೆಂದೆ, ಅವಳು ಒಮ್ಮೆ ಕೇಳಿ ಹೆದರಿದಂತೆ ಕಂಡರೂ ಧರ್ಯವನ್ನೇ ನನಗೆ ಹೇಳುತ್ತಾ ಸುಮ್ಮನಿರು ಇದಕ್ಕೆಲ್ಲಾ ನನ್ನ ಬಳಿ ಉಪಾಯವಿದೆ ಎಂದು ಸಂತೈಸತೊಡಗಿದಳು. 
        ಈಗ ಅವಳೂ ಕೂಡ ಅಪ್ಪಾಜಿಯ ನಂಬರ್‍ಗೆ ಕರೆಮಾಡಿದಳು, ಅದು ಈಗಲೂ ನಾಟ್ ರೀಚೇಬಲ್ ಆಗಿತ್ತು, ಈಗ ಮನದ ನಡುಕ ಮತ್ತೆ ಮತ್ತೆ ಹೆಚ್ಚತೊಡಗಿತು, ಅವರ ಹಳ್ಳಿ ಮನೆಗೆ ಹೋದ ಅಪ್ಪಾಜಿ ಇನ್ನೂ ಬಂದಿಲ್ಲವೇನೋ, ಅವರು ಬರುವವರೆಗೆ ಅವರನ್ನು ಸಂಪರ್ಕಿಸುದೇಗೆ ಎಂಬ ಚಿಂತನೆಯಲ್ಲಿ ತೊಡಗಿದೆ, ಮತ್ತೆ ಮತ್ತೆ ನನ್ನ ಅರಿವಿಲ್ಲದೇ ಭಯದಲ್ಲಿ ಬೆವರು ಹನಿಗಳು ಸುರಿಯಲಾರಂಭಿಸಿದವು. ಹೆದರಿಕೆಗೆ ಮತ್ತೆ ಕಣ್ಣು ಮಬ್ಬಾಗಿ ತಲೆ ಸುತ್ತಿದಂತಾಯ್ತು. ಮತ್ತೆ ಸಂತೈಸುವ ಸರದಿ ಗೆಳತಿಯದಾಯ್ತು. ಗೆಳತಿಗೆ ಈ ವಿಷಯನ್ನು ಯಾರಿಗೂ ಹೇಳಬೇಡವೆಂದೆ, ಅವಳು ಹೌದೆಂದಳು, ಮನೆಗೆ ಫೋನ್ ಮಾಡಬೇಕೆಂದೆ, ಫೋನ್ ಮಾಡಿ ಅಮ್ಮನೊಂದಿಗೆ ಮಾತನಾಡಬೇಕೆಂದೆ, ಆದರೆ ಗೆಳತಿ ಈಗ ಬೇಡ, ಸ್ವಲ್ಪ ಸುಧಾರಿಸಿಕೋ ಎಂದಳು, ಇಲ್ಲ ದಿನಾ ರಾತ್ರಿ ಅಮ್ಮನಿಗೆ ನಾನು ಕರೆಮಾಡಬೇಕು, ಈಗ ಎರಡು ದಿನವಾಯ್ತು ನನ್ನ ಮೊಬೈಲ್ ಬೇರೆ ಮನೆಯಲ್ಲಿದೆ ಅವರು ಏನಾಯ್ತೋ ಅನ್ನೋ ಭಯದಲ್ಲಿರುತ್ತಾರೆ, ಒಮ್ಮೆ ಊರಿಗೆ ಕರೆಮಾಡು ಎಂದೆ, ಆಯ್ತು ಎಂದು ಗೆಳತಿ ಕರೆಮಾಡಿಕೊಟ್ಟಳು, ಅಮ್ಮನಿಗೆ ಏನೂ ಹೇಳಬೇಡ, ನಾವೇ ಎಲ್ಲವನ್ನೂ ಬಗಹರಿಸೋಣವೆಂದಳು, ನಾನೂ ಒಪ್ಪಿದೆ. ಅಮ್ಮನಿಗೆ ನನಗೆ ಜ್ವರ ಬಂದಿದೆ, ಹಾಗಾಗಿ ನಿನ್ನೊಂದಿಗೆ ಮಾತನಾಡಲು ನಿನ್ನೆ ಆಗಲಿಲ್ಲವೆಂದೆ, ಓ ಹೌದಾ ನಿನ್ನ ಮೊಬೈಲ್ ಸ್ವಚ್ ಆಫ್ ಅಂತಾ ಬರುತ್ತಿತ್ತು ನಿನ್ನೆಯಿಂದ ಅಂದರು, ಓಹ್ ಕುಮಾರ್ ಒಂದೇ ಸಮನೇ ಕರೆಮಾಡುತ್ತಿದ್ದ, ಅದರಿಂದ ಬ್ಯಾಟರಿ ಬೇಗನೆ ಮುಗಿದುಹೋಗಿ ಮೊಬೈಲ್ ಬೇಗನೇ ಸ್ವಿಚ್ ಆಫ್ ಆಗಿದೆ ಎಂದೆಣಿಸಿದೆ ಮನದಲ್ಲಿ, ಅಮ್ಮ ಇತ್ತ ಆಯ್ತು ಮಗಳೇ ವಿಶ್ರಾಂತಿ ಪಡೆದುಕೋ ನಾನು ರಾತ್ರಿ ಫೋನ್ ಮಾಡುವೆ ಎಂದಳು. ಬೇಗನೇ ಮಾತು ಮುಗಿಸಿ ಗೆಳತಿಗೆ ಕೇಳಿದೆ ನಾನು ಕುಮಾರನಿಂದ ಮುಕ್ತಿ ಪಡೆಯುವುದು ಹೇಗೆ, ನಾನೀಗ ಅವನ ವಂಚನೆಯಲ್ಲಿ ಸಿಲುಕಿರುವೆ ಏನು ಮಾಡೋದು ಎಂದು ಮತ್ತೆ ರೋಧಿಸತೊಡಗಿದೆ, ಅದಕ್ಕೆ ಗೆಳತಿ ಎಲ್ಲದಕ್ಕೂ ಒಂದು ಪರಿಹಾರ ಇದ್ದೇ ಇರುತ್ತದೆ ಕೊಂಚ ಸಾವಧಾನ ಪಡೆ, ರೋಧಿಸುವುದು ನಿಲ್ಲಿಸು, ಮೊದಲು ಆಸ್ಪತ್ರೆಯಿಂದ ಮನೆಗೆ ಹೋಗೋಣ, ನೀನು ಧೈರ್ಯದಿಂದಿರು ಎಂದಳು, ಅದು ನನಗೆ ಸಾಧ್ಯವೇ ಎನಿಸಿತು. 
        ಮನೆಗೆ ಬಂದು ಮೊಬೈಲ್ ರಿಚಾರ್ಜ ಮಾಡಿ ಆನ್ ಮಾಡಿದೆ, ಕೈ ನಡುಗುತ್ತಿತ್ತು, ಒಂದರ ಮೇಲೊಂದು ವಾಟ್ಸ್ ಆಪ್ ಮೆಸೆಜ್ಗಳು, ಎಲ್ಲಾ ಕುಮಾರ್ ಕಳಿಸಿದ್ದು, ಮತ್ತೇನು ಕಳಿಸಿದ್ನೋ ಎಂದು ಭಯದಲ್ಲಿ ನೋಡಿದೆ, ನೀನು ನನಗೆ ಬೇಗನೇ ಕರೆಮಾಡಿ ನಾನು ಹೇಳಿದಂತೆ ನೀನು ಮಾಡಬೇಕು, ಇಲ್ಲದಿದ್ದರೆ ಇನ್ನು 24 ಗಂಟೆಯೊಳಗಾಗಿ ಎಲ್ಲವನ್ನು ಬಹಿರಂಗ ಪಡಿಸುವೆ, ನೆನಪಿಟ್ಟುಕೋ ನಿನ್ನ ಜೊತೆಯಲ್ಲಿ ನಿನ್ನ ಮನೆಯವರ ಮಾನವನ್ನು ಹರಾಜ್ ಹಾಕುವೆ, ಎಂದು ಕಡಕ್ ಆಗಿ ಮೆಸೆಜ್ ಮಾಡಿದ್ದ, ಓದಿ ಬೆವರಿಹೋದೆ, ಗೆಳತಿ ಅದನ್ನು ನೋಡಿದಳು, ಈಗ ಧೈರ್ಯದಿಂದ ನಾನು ಹೇಳಿದಂತೆ ಕೇಳು ಎಂದಳು, ಏನೆಂದೆ, ಆಕೆ ವಿಷಯವನ್ನು ನನಗೆ ಬೇಕಾದ ಕೆಲವೇ ಸ್ನೇಹಿತರಿಗೆ ಹೇಳಿ ಅವರ ಸಹಾಯ ಪಡೆಯೋಣವೆಂದಳು, ನಾನು ಬೇಡವೇ ಬೇಡ ಎಂದೆ, ಹೀಗೆ ಬೇಕಾದ್ರು ಸಾಯ್ತೇನೆ, ನೀನು ಯಾರಿಗೂ ಹೇಳಬೇಡ, ಮತ್ತೆ ಇನ್ನೊಂದಾಗುತ್ತೆ, ಪೋಲಿಸ್ ಕೂಡ ಬೇಡ, ಆತ ಗೊತ್ತಾದ್ರೆ ಎಲ್ಲ ಬಹಿರಂಗ ಪಡಿಸಿದ್ರೆ ನಮ್ಮಮ್ಮ ಬದುಕುಳಿಯಲ್ಲ, ಬೇಡ ಎಂದು ಅಳತೊಡಗಿದೆ. ಆ ಕಡೆಯಿಂದ ಮೊಬೈಲ್ ರಿಂಗ್ ಆಗ ತೊಡಗಿತು, ಕುಮಾರ್ ಫೋನ್ ಮಾಡುತ್ತಿದ್ದಾನೆ, ಏನು ಮಾಡುವುದೆಂದು ಹೆದರಿ ಗೆಳತಿಯನ್ನು ನೋಡಿದೆ, ಆಕೆ ಧೈರ್ಯದಿಂದ ಕಾಲ್ ತೆಗೆದುಕೋ, ಏನು ಹೇಳುತ್ತಾನೊ ಮೊದಲು ಕೇಳು, ಹೆದರಿದಂತೆ ನಟಿಸಬೇಡ, ನೀನು ಹೆದರಿದಂತೆ ಕಂಡರೆ ಆತ ಇನ್ನಷ್ಟು ಗಟ್ಟಿಯಾಗುತ್ತಾನೆಂದಳು, ಅವಳ ಮಾತಂತೆ ಕರೆ ತೆಗೆದುಕೊಂಡೆ, ಆ ಕಡೆಯಿಂದ ಒಮ್ಮೆ ಗಹ ಗಹಿಸಿ ನಗುತ್ತಾ ಕುಮಾರ್ ಏನು ಸುಮಬಾಲೆ ಹೇಗಿರುವೆ, ನಾನು ನಿನ್ನ ವೀಡಿಯೋವನ್ನೇ ನೋಡುತ್ತಿರುವೆ, ಹಗಲಿರುಳು, ಎಲ್ಲಿ ಮೊಬೈಲ್ ಸ್ವಿಚ್ ಆಫ್ ಮಾಡಿದರೆ ನಿನ್ನ ಬಿಡುತ್ತೇನೆಂದುಕೊಂಡೆಯೋ, ನೆನಪಿರಲಿ, ನೀನು ನಾ ಹೇಳಿದಂತೆ ಮಾಡದಿದ್ದರೆ ನಿನಗೆ ಉಳಿದಿರುವುದು ಇದೊಂದು ರಾತ್ರಿ ಮಾತ್ರ, ನಾಳೆ ಬೆಳಿಗ್ಗೆಯೇ ಎಲ್ಲವೂ ಎಲ್ಲೆಡೆ ಬಹಿರಂಗ ಎಂದು ಗದರಿದ, ನಾನು ಕುಮಾರ್‍ಗೆ ನೀನು ಹೇಳಿದಂತೆಯೇ ಮಾಡುವೆ ಏನು ಎಂದೆ, ಆತ ಒಂದು ವಿಳಾಸವನ್ನು ನಿನ್ನ ಮೊಬೈಲ್ ಗೆ ಮೆಸೇಜ್ ಮಾಡುವೆ, ಅಲ್ಲಿಗೆ ನೀನೊಬ್ಬಳೇ ಬರಬೇಕು, ಯಾರಿಗೂ ನೀನು ಹೇಳಬಾರದು, ಅಲ್ಲಿ ಹೋಗಿ ಅಲ್ಲಿರುವವನೊಂದಿಗೆ ನೀನು ಎಲ್ಲಾ ರೀತಿಯಿಂದ ಸಹಕರಿಸಬೇಕು, ನಿನಗೆ ಉಳಿದಿರುವ ಅವಕಾಶ ಇದೊಂದು ರಾತ್ರಿ ಮಾತ್ರ, ನಿನಗೆ ಯೋಚಿಸಿ ಕೂರಲು ನಾನು ಸಮಯ ಕೊಡಲ್ಲ, ನಿನಗೆ ಒಪ್ಪಿಗೆ ತಾನೆ, ಹೇಳು ಬೇಗ  ಹೇಳು ಎಂದ, ಗೆಳತಿಯೂ ಪಕ್ಕದಲ್ಲೇ ಎಲ್ಲವನ್ನು ಕೇಳಿಸಿಕೊಳ್ಳುತ್ತಿದ್ದಳು, ಒಪ್ಪಿಗೆ ಸೂಚಿಸು ಎಂದು ಸಂಜ್ಞೆಮಾಡಿದಳು, ನಾನು ಒಪ್ಪಿಗೆ ಎಂದೆ. ಆತ ಮತ್ತೊಮ್ಮೆ ಜೋರಾಗಿ ನಗತೊಡಗಿದ, ನಾನು ನಿಧಾನವಾಗಿ ಮತ್ತೆ ಮತ್ತೆ ಬೆವರತೊಡಗಿದೆ. ನಾನು ಯಾವುದನ್ನೂ ಯೋಚಿಸುವ ಶಕ್ತಿ ಕಳೆದುಕೊಂಡಿದ್ದೆ, ಮತ್ತೆ ಈ ಕಡೆ ಅಪ್ಪಾಜಿಗೆ ಕರೆಮಾಡಿದೆ, ಮತ್ತೆ ಮೊದಲಿನಂತೆ ನಾಟ್ ರೀಚೇಬಲ್ ಆಗಿತ್ತು, ಗೆಳತಿ ಪ್ರಶ್ನೆ ಕೇಳಿದಳು, ಅಪ್ಪಾಜಿ ಮನೆಯಲ್ಲಿ ಸುನೀತಾ ಮತ್ತು ಅಪ್ಪಾಜಿ ಇಬ್ಬರಲ್ಲಿ ಒಬ್ಬರಿಗೆ  ತಿಳಿಯದಂತೆ ಇದು ನಡೆಯಲು ಸಾಧ್ಯವೇ ಎಂದಳು, ನನಗೂ ಏನೋ ಅನುಮಾನ ಕಾಡತೊಡಗಿತು.
      ಅವಳು ತನ್ನ ಆತ್ಮಿಯ ಕೆಲವರಲ್ಲಿ ಮೊದಲು ಸುನೀತಾ ಕೆಲಸ ಮಾಡುವ ಕಾಲೇಜ್‍ನ ಬಗ್ಗೆ ಕೆಲವರೊಂದಿಗೆ ವಿಚಾರಿಸಿದಳು, ಆದರೆ ಆ ಕಾಲೇಜ್‍ನಲ್ಲಿ ಆ ಹೆಸರಿನ ಯಾವ ಲೆಕ್ಚರ್ ಕೂಡ ಇಲ್ಲವೆಂದು ತಿಳಿದು ಬಂತು, ನಂತರ ವರದರಾಜ್ ಬಗ್ಗೆ ಅವರು ಹೇಳಿಕೊಳ್ಳುತಿದ್ದ ಸಂಘಟನೆಗಳಲ್ಲಿ ಅವರು ನಿಮ್ಮ ಪದಾಧಿಕಾರಿಗಳೇ ಎಂದು ಕೆಲವರ ಮೂಲಕ ವಿಚಾರಿಸಿದಳು, ಅಂತಹ ವ್ಯಕ್ತಿ ಯಾರೂ ಇಲ್ಲವೆಂದು ಉತ್ತರ ಬಂತು, ಈಗ ಅನುಮಾನ ಜೋರಾಗತೊಡಗಿತು. ನಾನು ಕೆಲವರಲ್ಲಿ ಈಗ ವಿಚಾರಿಸಿ ನೋಡಿದೆ, ಎಲ್ಲರು ಅವರು ನಿಮ್ಮಿಂದ ನಮಗೆ ಪರಿಚಯವೆಂದರು, ಹಾಗಿದ್ದರೆ ವರದರಾಜ್ ಹೇಳಿದ್ದೆಲ್ಲಾ ಸುಳ್ಳೇ, ಮಾತು ಮಾತಿಗೂ ಬಾಯಿ ತುಂಬಾ ಮಗಳೇ ಎನ್ನುವ ಅವರು ನನಗೆ ದ್ರೋಹ ಮಾಡಲು ಸಾಧ್ಯವೇ, ಈಗ ನಾನು ಮೋಸಹೋದೆನೆಂದು ಕಚಿತವಾಯಿತು. ಈಗ ಮತ್ತೆ ಕುಮಾರ್ ಫೋನ್ ಮಾಡಿದ, ಆ ಕಡೆ ಕಾಯುತಿದ್ದಾರೆ, ನೀನು ಹೊರಟಿದ್ದೀಯ ಎಂದ, ನಾನು ಹೌದು ಈಗ ಹೊರಟೆ ಎಂದೆ. ಗೆಳತಿ ನನ್ನನ್ನು ಅವಳ ಗಾಡಿಯ ಮೇಲೆ ಕೂರಿಸಿಕೊಂಡು ಇನ್ನು ತಡಮಾಡುವುದು ಬೇಡವೆಂದು ಹೊರಟಳು.