Wednesday, 1 February 2017

ಮಗಳೇ ಎಂದವನೇ... ಕಥೆ ಭಾಗ 3

    ಕಾರ್ಯಕ್ರಮ ಮುಗಿದೊಡನೆ ಎಲ್ಲರೂ ಒಂದೆಡೆ ಕೂತು ಊಟಮಾಡಿದೆವು, ಏನೋ ಹೊಸ ಆತ್ಮೀಯತೆ, ಹೊಸ ಜಗದ ಪರಿಚಯ, ಮತ್ತೆ ಮತ್ತೆ ಮನಕ್ಕೆ ಪುಳಕವೆನಿಸುವ ಘಳಿಗೆಗಳು ದಿನದಿಂದ ದಿನಕ್ಕೆ ಬಾಳಲ್ಲಿ ಮೂಡತೊಡಗಿತು, ಹೊಸ ಸ್ನೇಹದ ಪರ್ವ ಗಟ್ಟಿಯಾಗತೊಡಗಿತು. ನನಗೆ ಕುಮಾರ್ ಇತ್ತೀಚೆಗೆ ತುಂಬಾ ಅತ್ಮೀಯರೆನಿಸಿದರು, ಅವರಿಗೂ ಹಿರಿಯರೆಂದರೆ ತುಂಬಾ ಗೌರವ. ಅವರ ಆ ನಡೆ ನನ್ನನ್ನು ಅವರತ್ತ ಇನ್ನಷ್ಟು ಆಕರ್ಷಿತಗೊಳಿಸಿತು. ಹಾಗೆಯೇ ಇನ್ನೂ ಅನೇಕ ಸ್ನೇಹಿತರನ್ನು ಹೆಚ್ಚಿಸಿಕೊಂಡೆ, ನನ್ನ ಸ್ನೇಹಿತೆಗೂ ಎಲ್ಲವನ್ನೂ ಹೇಳಿದೆ, ಆಕೆಯು ಸಂತಪಟ್ಟಳು, ಜೊತೆಗೆ ಎಚ್ಚರಿಕೆಯ ನುಡಿಗಳನ್ನು ಹೇಳಿದಳು, ಅತೀ ಆತ್ಮೀಯತೆ ಹಿತವಲ್ಲ, ಅತೀಯಾಗಿ ಖಾಸಗಿ ವಿಚಾರಗಳನ್ನು ಯಾರಲ್ಲೂ ಹೇಳಿಕೊಳ್ಳಬೇಡ ಜಾಗ್ರತೆ ಎಂದಳು, ಅವಳ ಸಂಬಂಧಿಯೋರ್ವರಿಗೆ ಅನಾರೋಗ್ಯದ ಕಾರಣ ತುರ್ತಾಗಿ ಒಂದು ದಿನ ಸ್ನೇಹಿತೆ ಊರಿಗೆ ಹೊರಟಳು, ಆಗ ನಾನು ಮನೆಯಲ್ಲಿ ಒಬ್ಬಳೇ ಇದ್ದೆ. ಬೇಸರವೆನಿಸತೊಡಗಿತು, ಹಾಗೆಯೇ ಅಪ್ಪಾಜಿಗೆ ಕರೆ ಮಾಡಿದೆ, ಮಾತನಾಡುತ್ತಾ ಗೆಳತಿ ಊರಿಗೆ ಹೋಗಿದ್ದಾಳೆಂದೆ, ಅವರು ನಮ್ಮ ಮನೆಗೆ ಬಾ, ಇಲ್ಲಿ ಸುನಿತಾ ಕೂಡ ಇದ್ದಾಳೆ, ಅಲ್ಲಿ ಒಬ್ಬಳೇ ಏಕೆ ಇರುವೆ ಎಂದರು. ಅವರ ಮಾತಿನಂತೆ ನನಗೂ ಹಿತವೆನಿಸಿ ಒಂದೆರಡು ದಿನ ಸ್ನೇಹಿತೆ ಬರುವವರೆಗೂ ಅವರ ಮನೆಗೆ ಹೋದೆ. ಅಲ್ಲಿ ಅವರ ಮನೆಯಲ್ಲಿ ನಾನಿದ್ದಾಗ ಆಗಾಗ್ಗೆ ಕುಮಾರ್ ಬರುತ್ತಿದ್ದರು. ಭಾನುವಾರ ಹಾಗೆಯೇ ಸುನಿತಾ, ಕುಮಾರ್‍ರೊಂದಿಗೆ ಹಾಗೆಯೇ ಒಂದು ಸುತ್ತು ಹಾಕಿ ಬಂದೆ. ಮೂರು ದಿನಗಳ ನಂತರ ಗೆಳತಿ ಮನೆಗೆ ಬಂದೊಡನೆ ನಾನು ಹೋದೆ. ಗೆಳತಿಯೊಂದಿಗೆ ಮನೆಗೆ ಬಂದು ಎಲ್ಲವನ್ನೂ ಹೇಳುತ್ತಾ ಕುಳಿತೆ. ಆಗ ಒಮ್ಮೆ ಅವಳು ಚಕಿತಳಾಗಿ ನಿನ್ನಪ್ಪ ನಿಜವಾಗ್ಲೂ ಅದ್ಭುತ, ನಿನಗೆ ಅವರ ಪರಿಚಯ ಸಿಕ್ಕಿದ್ದು ತುಂಬಾ ಒಳ್ಳೆಯದಾಯ್ತು, ಇಲ್ಲದೇ ಹೋಗಿದ್ದಲ್ಲಿ ನನಗೆಷ್ಟು ಕಷ್ಟವಿತ್ತೋ ಎಂದು ನನ್ನ ಕಿವಿ ಹಿಂಡಿದಳು, ಅದೂ ಸತ್ಯವು ಕೂಡ ಎನಿಸಿತು.
       ಒಂದೆರಡು ದಿನಗಳ ನಂತರ ಕುಮಾರ್ ನನಗೆ ಮೆಸೇಜ್ ಮಾಡಿ ನಿಮ್ಮ ಮೇಲೆ ಒಂದು ಶೃಂಗಾರ ಕವಿತೆ ಬರೆದಿರುವೆ ಎಂದರು,  ಹೌದೇ ಏನದು ಎಂದೆ, ಕೂಡಲೇ ಅವರೊಂದು ಕವಿತೆಯನ್ನು ಕಳುಹಿಸಿದರು, ಓದಿದೆ;
ನೀನಿಲ್ಲದೇ ರಾತ್ರಿ ಮುಗಿಯುವುದೆ ಸುಮಬಾಲೆ
ನೀನಿಲ್ಲದೇ ಈ ತನುವು ತಣಿವುದೇನು ರತಿಯೇ..ಎಂದು ಕವಿತೆ ಸಾಗಿತ್ತು, ದೇಹದ ಉಬ್ಬು ತಗ್ಗುಗಳ ವರ್ಣನೆ ಮಿತಿಮೀರಿತ್ತು, ಪ್ರತೀ ಸಾಲಲ್ಲು ಸುಮಾ ಎಂದು ನನ್ನ ಹೆಸರಿನ ಬಳಕೆ ನನಗೆ ಮುಜುಗರ, ಅಸಹ್ಯ ಮತ್ತು ಕಸಿವಿಸಿಯಾಯಿತು, ಹೆಣ್ಣಿನ ದೇಹದ ವರ್ಣನೆ, ಮಿಲನಕ್ಕೆ ಹಾತೊರೆಯುವುದು ಅದೆಂತಾ ಪ್ರೀತಿ, ಅದೆಂತ ಕವಿತೆ, ಇದೆಂತ ಹೊಲಸು, ಇದೂ ಸಾಹಿತ್ಯವೇ, ಕಂಡಿತಾ ಅಲ್ಲ, ಕಾಮೋದ್ರೇಕಿಸುವ ಹೊಲಸು ಮಾತು, ಎನ್ನುತ್ತಾ ಏನನ್ನು ಉತ್ತರಿಸದೇ ಸುಮ್ಮನಾದೆ. ಆದರೆ ಕುಮಾರ್ ಮೆಸೇಜ್ ಮಾಡುವುದನ್ನು ಮಾತ್ರ ನಿಲ್ಲಿಸಲಿಲ್ಲ, ನಿರಂತ ಮಾಡುತ್ತಲೇ ಇದ್ದ, ನನಗೆ ಎದೆ ಬಡಿತ ಜೋರಾಗತೊಡಗಿತು, ಇದೇನೆಂದು ಅರಿವಾಗದೇ ಗೆಳತಿ ಬರುವುದನ್ನೇ ಕಾಯ್ದು ಕುಳಿತೆ. ಆದರೆ ಇಂದು ಗೆಳತಿ ಬರುವುದು ಮಾತ್ರವೇಕೋ ತಡವಾಗತೊಡಗಿತು. ಏನೇ ಆಗಲಿ ಎಂದು ಕೂಡಲೇ ಸುನಿತಾಳಿಗೆ ಮೆಸೇಜ್ ಮಾಡಿದೆ, ಈ ಕವಿತೆಯ ಅರ್ಥವೇನು ಹೇಳಿ ಎಂದೆ, ಅವರು ಉತ್ತರಿಸಲಿಲ್ಲ, ಅವರು ಏನೋ ಒತ್ತಡದಲ್ಲಿರಬಹುದೆಂದು ಸುಮ್ಮನಾದೆ. ಮೆಸೇಜ್ ಮಾಡುವುದೇಕೆಂದು ಸುನಿತಾರಿಗೆ ಕರೆ ಮಾಡಿದೆ, ಹೀಗೆ ಕುಮಾರ್ ನನ್ನ ಮೇಲೊಂದು ಕವಿತೆ ಬರೆದಿದ್ದಾರಂತೆ ಈ ರೀತಿ ನೋಡಿ ಎಂದು ಹೇಳಿದೆ, ಅವರು ಜೋರಾಗಿ ನಕ್ಕರು, ಇದೆಲ್ಲಾ ಇಲ್ಲಿ ಮಾಮೂಲ ಅದನ್ನು ನೆಗ್ಲೆಟ್ ಮಾಡಿ, ಸುಮ್ಮನೆ ಡಿಲಿಟ್ ಮಾಡಿ ಸುಮ್ಮನಾಗಿ, ಜಾಸ್ತಿ ಯೋಚಿಸಿ ತಲೆ ಹಾಳುಮಾಡಿಕೊಳ್ಳಬೇಡಿ ಎಂದರು. ಇದೇ ಚರ್ಚಿಸುತ್ತಾ ಹೊದಲ್ಲಿ ನಿಮಗೇ ಬೇಸರ ಎಂದರು, ಆದರೂ ಆತ ಒಂದು ಹೆಣ್ಣು, ಪರಸ್ತ್ರೀಯ ಬಗ್ಗೆ ಇಷ್ಟು ಹಗುರವಾಗಿ ಕೀಳಾಗಿ ವರ್ಣಿಸುವುದು ತಪ್ಪಲ್ಲವೇ ಎಂದೆ, ಅದಕ್ಕೆ ಹೌದು ನೀವೇನು ಮಾಡಬಲ್ಲಿರಿ, ಆತನ ಮೇಲೆ ಕೇಸು ದಾಖಲಿ ಓಡಾಡುತ್ತೀರೋ, ಈ ಗಲಾಟೆ ನಿಮ್ಮ ಮನೆಯವರಿಗೂ ಇಡೀ ಊರಿಗೂ ಗೊತ್ತಾಗುತ್ತದೆ ಅದು ಬೇಕೋ ಎಂದರು, ಒಮ್ಮೆಲೆ ಮೈ ನಡುಗಿತು, ಇನ್ನೂ ನನಗೂ ಮದುವೆಯಾಗಿಲ್ಲ, ನಾನು ಸರಿಯಿಲ್ಲ ಎಂದರೆ ನಾಳೆ ನನ್ನ ತಂಗಿಯರಿಗೂ ಮದುವೆ ಮಾಡಿಸುವುದು ಕಷ್ಟ, ಇದೆಲ್ಲಾ ಜಗಳ ರೋಧನೆ ಏಕೆ, ಸುನಿತಾ ಹೇಳಿದಂತೆ ಪಾಲಿಗೆ ಬಂದದ್ದು ಕರ್ಮವೆಂದು ಸುಮ್ಮನಾಗವುದೇ ಒಳಿತೆಂದುಕೊಂಡೆ, ಮನೆಯಲ್ಲಿ ಅಪ್ಪಾಜಿ ಇದ್ದಾರ ಎಂದೆ, ಅದಕ್ಕವಳು ಇಲ್ಲ, ಹಳ್ಳಿಗೆ ಹೋದವರು ಬಂದಿಲ್ಲವೆಂದಳು, ಮೊನ್ನೆ ಕುಮಾರ್ ಮನೆಗೆ ಬರಲು ನೀವೇ ಆತನಿಗೆ ಕರೆಮಾಡಿ ಹೇಳಿದ್ದಂತೆ ಅದಕ್ಕಾಗಿಯೇ ಆತ ಬಂದಿದ್ದ ಎಂದರು, ನನಗೆ ಮತ್ತೆ ಭಯವಾಯಿತು, ನಾನಂತೂ ಹೇಳಿಲ್ಲ, ಇದೆಲ್ಲಾ ಕುಮಾರ್ ಮಾಡಿರುವ ವ್ಯವಸ್ತಿತ ಪಿತೂರಿ, ಆದರೂ ಅಪ್ಪಾಜಿಯವರ ಮನೆಯಲ್ಲಿ ವೀಡಿಯೋ ಮಾಡಲು ಈತನಿಗೆ ಯಾರಾದರೂ ಸಹಕರಿಸಿರಲೇ ಬೇಕಲ್ಲವೇ ಎಂಬ ಅನುಮಾನವಂತೂ ಗಟ್ಟಿಯಾಯಿತು. ಕರೆ ಕಟ್ ಮಾಡಿ ಮತ್ತೆ ಗೆಳತಿಗಾಗಿ ಕಾದು ಕುಳಿತೆ.
       ಏನೋ ತಪ್ಪಾಯಿತೇ ಎಂದು ಯೋಚಿಸುತ್ತಾ ಕುಳಿತೆ. ಅಪ್ಪಾಜಿಗೆ ಕರೆ ಮಾಡಿದೆ ಅವರು ನಾಟ್ ರೀಚೇಬಲ್ ಆಗಿದ್ದರು, ನಿನ್ನೆ ಊರಿಗೆ ಹೋಗುವೆ ಎಂದಿದ್ದರು, ಇನ್ನೂ ಬಂದಿಲ್ಲವೇನೋ, ಹಾಗಾಗಿ ಮೊಬೈಲ್ ಸಿಗ್ನಲ್ ಸಿಗುತ್ತಲ್ಲವೇನೋ ಎಂದು ಅವರಿಗೆ ಪುನಃ ಪುನಃ ಕಾಲ್ ಮಾಡಲು ಪ್ರಯತ್ನಿಸುತ್ತಾ ಹಾಗೆಯೇ ಹಾಸಿಗೆ ಮೇಲೆ ಒರಗಿದೆ. ಕಷ್ಟದಲ್ಲಿರುವಾಗಲೇ ಅಪ್ಪಾಜಿಗೆ ಕರೆಹೋಗುತ್ತಿಲ್ಲ, ಎಲ್ಲಾ ವಿಧಿ ಎಂದು ಗೊಣಗುವುದಾಯಿತು. ಆದರೆ ಇತ್ತ ಕುಮಾರ್‍ನಿಂದ ಮೆಸೇಜ್ ಮಾತ್ರ ನಿರಂತರವಾಗಿ ಬರುತ್ತಿತ್ತು, ನಾನು ಉತ್ತರಿಸಲಿಲ್ಲ, ಮೊಬೈಲ್ ರಿಂಗ್ ಆಗತೊಡಗಿತು, ನೋಡಿದೆ ಕುಮಾರ್ ಕರೆಮಾಡಿದ್ದ, ಮನದಲ್ಲಿ ಸಿಟ್ಟು ಕುದಿಯುತ್ತಿತ್ತು, ಒಂದೇ ಸಮನೇ ಸಿಟ್ಟಿಗೆ ಬೆವರು ಹಣೆ ಮೇಲೆ ಮೂಡತೊಡಗಿತು, ಫೋನ್ ತೆಗೆದವಳೇ ಅವನಿಗೆ ಇದು ಸರಿಯೇ ಏನಿದು ಎಂದೆ, ನಿನ್ನಂದದ ವರ್ಣನೆ, ನೀನಿಲ್ಲದೇ ಈ ತನುವು ತಣಿವುದೇನು ಹೇಳು ಸುಮಾ ಎಂದ, ನನ್ನ ಹೆಸರು ಹೇಳಬೇಡ ಅದೆಂತಹ ಕೀಳು ಬಾಷೆಯಲ್ಲಿ ಬರೆದಿದ್ದೀಯ, ನೀನು ನನ್ನನ್ನು ಅದ್ಯಾವ ದೃಷ್ಟಿಯಲ್ಲಿ ನೋಡಿದ್ದೀಯ, ನಿನಗಾರು ಅಕ್ಕ ತಂಗಿ ಇಲ್ವೇ ಎಂದೆ. ನಿನ್ನ ಬಗ್ಗೆ ನನಗಿದ್ದ ಗೌರವವನ್ನೆಲ್ಲಾ ನಾಶಮಾಡಿದೆ, ಏನಿದು..? ಈ ರೀತಿ ನೀ ಮಾಡಿದರೆ ನೆಟ್ಟಗಿರುವುದಿಲ್ಲ, ನಿನಗೆ ಸರಿಯಾಗಿ ಬುದ್ಧಿ ಕಲಿಸುವೆ ಎಂದೆ, ಆತ ಒಮ್ಮೆ ಜೋರಾಗಿ ನಗತೊಡಗಿದ, ನನಗೆ ಸಿಟ್ಟು ಇನ್ನಷ್ಟು ಜೋರಾಯಿತು, ಆತನಿಗೆ ಮನ ಬಂದಂತೆ ಬಯ್ದೆ, ಆತ ಇದಕ್ಕೆಲ್ಲಾ ಕಾರಣ ಏನು ಗೊತ್ತಾ ಅಂದ, ಅದು ನೀನೇ, ನಿನ್ನ ಅಂದ, ಬೇಕಾದರೆ ಈ ವೀಡಿಯೋ ನೋಡು ಈಗ ಕಳಿಸಿದ್ದೇನೆ ಎಂದ, ಹೆದರುತ್ತಾ ವೀಡಿಯೋ ವಾಟ್ಸ್‍ಆಪ್‍ನಿಂದ ಡೌನ್‍ಲೋಡ್ ಮಾಡಿದೆ, ಈಗ ಮಾತ್ರ ಕೈಕಾಲು ನಡುಗಲಾರಂಭಿಸಿತು, ದೇಹದ ಶಕ್ತಿ ಉರುಳಿ ಹೋಯಿತು, ಒಮ್ಮೆಲೆ ಕುಸಿದು ಕುಳಿತೆ, ನನ್ನ ಬೆತ್ತಲೆ ಚಿತ್ರ, ನಾನು ಸ್ನಾನ ಮಾಡುವಾಗ ಮತ್ತು ಬೆಡ್ ರೂಂನಲ್ಲಿ ಬಟ್ಟೆ ಬದಲಿಸುವ ವೀಡೀಯೋ, ನೋಡುತ್ತಿದ್ದಂತೆ ಬೆವರು ಹನಿಗಳು ಸುರಿಯಲಾರಂಭಿಸಿದವು, ದೇಹವು ನಡುಗತೊಡಗಿತು, ಏನೂ ಮಾಡಬೇಕೋ ತಿಳಿಯುತ್ತಿಲ್ಲ, ಇದೆಲ್ಲಾ ಅಪ್ಪಾಜಿ ಮನೆಯಲ್ಲಿ ಉಳಿದಾಗ ಯಾರೋ ಕದ್ದು ಸೆರೆಹಿಡಿದದ್ದು, ನಡುಗುವ ಮೈಯಲ್ಲಿ ಕಣ್ಣನ್ನು ಬಿಗಿಯಾಗಿ ಹಿಡಿದು ಕುಳಿತೆ, ಆದರೆ ಮೊಬೈಲ್ ಸದ್ದು ಮಾಡುತ್ತಲೇ ಇತ್ತು, ಕುಮಾರ್ ಕರೆಮಾಡುತ್ತಲೇ ಇದ್ದ. ಅಷ್ಟರಲ್ಲಿ ಯಾರೋ ಜೋರಾಗಿ ಬಾಗಿಲು ದೂಡಿದಂತೆನಿಸಿತು, ಒಮ್ಮೆಲೆ ಬೆಚ್ಚಿಬಿದ್ದೆ..

..ಮುಂದುವರೆಯಲಿದೆ..

Monday, 30 January 2017

ಮಗಳೇ ಎಂದವನೇ... ಕಥೆ ಭಾಗ 2

ದಿನವೂ ನಿತ್ಯ ಶುಭೋದಯ ಅವರಿಂದಲೇ, ಅದೂ ಅವರು ಸೆರೆಹಿಡಿದ ಛಾಯಚಿತ್ರದ ಸುಂದರ ಚಿತ್ರದೊಂದಿಗೆ, ಮುಂಜಾನೆಯ ಸೊಬಗು ಇನ್ನಷ್ಟು ಸುಂದರವಾಯಿತು, ನಿತ್ಯ ನನ್ನ ಒಡನಾಟದ ಭಾಗವಾಗತೊಡಗಿದರು, ಆ ಹಿರಿಯ ಜೀವದ ಫ್ರೊಫೈಲ್ ಪಿಕ್ಚರ್ ನೋಡುತಿದ್ದಂತೆ ಏನೋ ಮುಗ್ದತೆಯ ಭಾವ, ಏನೋ ಸರಳ ಸಜ್ಜನಿಕೆಯ ಮೂರ್ತಿಯ ರೂಪಕದಂತೆ ಭಾಸ, ಮನದ ತುಂಬ ಮೆತ್ತನೇ ಆ ಹಿರಿಯರು ಪೂಜನೀಯ ಸ್ಥಾನದಲ್ಲಿ ಆಸೀನರಾಗತೊಡಗಿದರು, ನನಗೆ ಊಟ, ನಿದ್ದೆ, ಕೆಲಸ ಎಲ್ಲದರಲ್ಲೂ ಮಗಳೇ ಜಾಗರೂಕ, ಇದು ಬೆಂಗಳೂರು ಅಲ್ಲಿ ನೋಡು ಮೊನ್ನೆಯ ದಿವಸ ಏನೆಲ್ಲಾ ಆಯಿತು ಮಗಳೇ..ದಯಮಾಡಿ ಆ ರಸ್ತೆಯಲ್ಲಿ ನೀನು ಸಾಗಬೇಡ, ಆ ಹೋಟೆಲ್‍ನಲ್ಲಿ ಫುಡ್ ಸರಿಯಿರಲ್ಲ, ಬೀದಿ ಬದಿಯ ಊಟ ಬೇಡವೇ ಬೇಡ, ದಯವಿಟ್ಟು ಮನೆಯಿಂದಲೇ ಏನನ್ನಾದರೂ ತೆಗೆದುಕೊಂಡು ಹೋಗು, ಆರೋಗ್ಯದ ಕಡೆ ಗಮನಿಸು, ಒಂದು ವೇಳೆ ಸಾಧ್ಯವಾಗದಿದ್ದರೆ ಮಗಳೇ ಹೋಟೆಲ್‍ನಲ್ಲಿ ನೀನು ಜ್ಯೂಸ್ ಕುಡಿ, ಟೀ ಬೇಡ, ಬೆಳಿಗ್ಗೆ ತಪ್ಪದೇ ದೇವಸ್ತಾನಕ್ಕೆ ಹೋಗು, ನಿರ್ಮಲ ಮನದಿಂದ ಬೇಡು, ನಿನಗೂ ನಿನ್ನ ಕುಟುಂಬಕ್ಕೂ ಆ ದೇವರು ಕಂಡಿತಾ ಒಳಿತನ್ನು ಮಾಡುತ್ತಾನೆ, ಹೀಗೆಲ್ಲಾ ಅವರ ಆರೈಕೆ ಅವರ ಚಡಪಡಿಕೆ ನೋಡಿ ನನಗಿದೂ ಯಾವುದೋ ಜನ್ಮದಲ್ಲಿ ಇವರು ನನಗೆ ಕಂಡಿತಾ ತಂದೆಯಾಗಿದ್ದವರು, ಇವರು ನನಗೆ ಮುಂದಿನ ಜನ್ಮದಲ್ಲಿ ಕಂಡಿತಾ ತಂದೆಯಾಗಲಿ ಎಂಬ ಬಯಕೆಯಂತೂ ಕಾಡುತ್ತಿತ್ತು, ದಿನ ಕಳೆದಂತೆ ನಮ್ಮಿಬ್ಬರ ನಡುವೆ ಅಗಾಧವಾದ ಸಂಬಂಧವು ನೆಲೆಯಾಯಿತು. ನಾನು ನನ್ನ ಮನೆಯ ಬಗ್ಗೆ ಎಲ್ಲವನ್ನೂ ಮುಚ್ಚುಮರೆಯಿಲ್ಲದೇ ಅವರಲ್ಲಿ ಹೇಳಿದೆ. ಅವರೂ ನಾನು ನಿಮ್ಮೊಂದಿಗಿದ್ದೇನೆ, ನೀನು ನನಗೆ ಮಗಳಲ್ಲವೇ, ಏಕೆ ಅಂಜಿಕೆ ಎನ್ನುತಿದ್ದಂತೆ ನನ್ನ ಕಣ್ಣಲ್ಲಿ ಕಾರಣ ನುಡಿಯದೇ ಹನಿಗಳು ಉದುರಲಾರಂಭಿಸಿದವು, ಎಲ್ಲವೂ ಆ ಹಿರಿಯ ಜೀವದ ಕರುಣಾಭಾವದ ಒಲುಮೆ, ಎಲ್ಲವೂ ನಾ ಪಡೆದ ಪುಣ್ಯವೆಂದು ದೇವರಿಗೆ ದಿನವೂ ಧನ್ಯವಾದ ಮನದಲ್ಲಿ ನುಡಿಯತೊಡಗಿದೆ. ದೇವಸ್ತಾನಕ್ಕೆ ಅವರ ಅಣತಿಯಂತೆ ನಿತ್ಯವೂ ಹೋಗತೊಡಗಿದೆ, ಆ ದೇವರಲ್ಲಿ ನಾನೀಗ ಬೇಡುತ್ತಿರುವೆ, ದೇವರೇ ನನ್ನ ಕುಟುಂಬದ ಜೊತೆ ಈ ಹಿರಿಯರನ್ನು ಚೆನ್ನಾಗಿಡು, ನಿನ್ನಿಂದಲೇ ದೊರೆತ ರತ್ನ ಇವರು, ದೇವರೇ ನಾ ನಿನಗೆ ನಿತ್ಯ ಋಣಿ, ಎಂದಿಗೂ ಮಾಸದ ವರವವಾಗಿ ವರದರಾಜ್‍ರವನ್ನು ನೀನು ನಮ್ಮ ಕುಟುಂಬಕ್ಕೆ ಕರುಣಿಸಿದೆ, ಇದು ನಮ್ಮ ಪಾಲಿನ ವರ.
      ಒಂದು ದಿನ ಆ ಹಿರಿಯರು ನನಗೆ ತಮ್ಮ ಮನೆಗೆ ಆಮಂತ್ರಿಸಿದರು, ಈಗ ನಾನವರಿಗೇ ಅಪ್ಪಾಜಿ ಎಂದು ನಾನು ಬಾಯಿ ತುಂಬ ಕರೆದಾಗ ಅವರಿಗದುವೇನೋ ನೆಮ್ಮದಿ, ನನಗೂ ಅಷ್ಟೇ ಅವರನ್ನ ಅಪ್ಪಾಜಿ ಎಂದು ಕರೆದರೆ ಒಂದೊತ್ತು ಊಟಕ್ಕಿಂತ ಹೆಚ್ಚು, ಒಂದೊಮ್ಮ ನಾನು ಮನೆಗೆ ಕರೆಮಾಡಿ ಮಾತನಾಡುವುದನ್ನು ಮರೆತರೂ ನನ್ನ ಈ ಅಪ್ಪನನ್ನ ನಾನು ಮರೆಯುತ್ತಿರಲಿಲ್ಲ, ಅವರು ಮತ್ತು ನನ್ನ ನಡುವೆ ಅದೇನೋ ಹಾಲು ಜೇನಿನಂತ ಮಧುರ ಸಂಬಂಧ ಏರ್ಪಟ್ಟಿತ್ತು, ಅವರ ಕೋರಿಕೆಯಂತೆ ಅವರ ಮನೆಗೆ ಹೋದೆ. ಅಲ್ಲಿ ಅವರು ತಮ್ಮ ಮಗಳು ಸುನೀತಾಳನ್ನು ಪರಿಚಯಿಸಿದರು, ವರದರಾಜ್ ರವರ ಮಡದಿಯು ತೀರಿ ಅನೇಕ ವರ್ಷಗಳಾಗಿತ್ತು, ಮಗಳು ಸುನೀತಾಳಿಗೆ ತಂದೆ ವರದರಾಜ್ ರವರೇ ಅಪ್ಪ, ಅಮ್ಮ ಎಲ್ಲವೂ ಆಗಿದ್ದರು, ಅವರ ಒಬ್ಬನೇ ಮಗ ಅಮೇರಿಕಾದಲ್ಲಿದ್ದಾನಂತೆ, ಅಲ್ಲಿ ಅವನು ಒಬ್ಬ ಒಳ್ಳೆಯ ಸಾಫ್ಟವೇರ್ ಇಂಜಿನೀಯರ್ ಎಂದು ಅವನ ಫೋಟೋ ಎಲ್ಲವನ್ನು ನನಗೆ ತೋರಿಸಿದರು. ಅವನು ಅಲ್ಲೇ ಮದುವೆಯಾಗಿ ಉಳಿಯುವುದಾಗಿ ನಿರ್ಧರಿಸಿದ್ದಾನೆಂದು ಭಾವುಕರಾದರು, ಅವರ ಮುಖ ನೋಡಿ ನನಗೂ ಕಣ್ಣಲ್ಲಿ ನೀರು ಹನಿದಂತೆ, ಆದರೂ ತೋರಿಸಿಕೊಳ್ಳದೇ ಅವರನ್ನು ಸಮಾದಾನಿಸಿದೆ. ಅವರ ಮಗಳು ಸುನೀತಾ ಕನ್ನಡದಲ್ಲಿ ಎಂ.ಎ ಮಾಡಿದವರು, ಜಯನಗರ ಕಾಲೇಜ್‍ನಲ್ಲಿ ಗೆಸ್ಟ್ ಲೆಕ್ಚರ್ ಆಗಿ ಕೆಲಸಮಾಡುತ್ತಾರೆಂದು ತಿಳಿದೆ, ಅವರಿಗೆ ಕನ್ನಡ ಸಾಹಿತ್ಯವೆಂದರೆ ವಿಪರೀತ ಪ್ರೀತಿ. ಅವರ ಸ್ನೇಹವನ್ನು ಸಂಪಾದಿಸಿದೆ. ಅದೂ ನನಗೆ ದೊರೆತ ಇನ್ನೊಂದು ರತ್ನವೆನಿಸಿತು, ಮಧ್ಯಾಹ್ನದ ಊಟ ಅವರ ಮನೆಯಲ್ಲೇ, ನನಗೆ ದೇವತಾ ಮನುಷ್ಯ ಚಿತ್ರದಲ್ಲಿನ ಅಣ್ಣಾವ್ರು ಸುದಾರಾಣಿ ಅಭಿನಯದ ನಿನ್ನಂತ ಅಪ್ಪಾ ಇಲ್ಲ ... ಒಂದೊಂದು ಮಾತು ಬೆಲ್ಲಾ..ಹಾಡು ಮನದಲ್ಲಿ ನನ್ನ ಅರಿವಿಲ್ಲದೇ ಗುನುಗತೊಡಗಿತು, ಅದರಲ್ಲಿ ವರದರಾಜ್ ತಂದೆಯಾಗಿ ನಾನು ಮಗಳಾಗಿ ನಲಿದಂತೆ, ಮೆತ್ತನೆ ಸೋನೆ ಮಳೆ ಸುರಿದಂತೆ, ಅನುಭೂತಿ.
         ಒಂದು ದಿನ ಅವರ ಮಗಳು ಸುನೀತ ನನಗೆ ಕರೆಮಾಡಿ ಭಾನುವಾರ ಸಂಜೆ ಒಂದು ಸುಂದರ ಸಮಾರಂಭ, ಅಲ್ಲಿ ಅನೇಕ ಜನ ಕವಿಗಳು ಬಂದು ಕವಿತೆ ವಾಚಿಸಿ ರಂಜಿಸಲಿದ್ದಾರೆ, ಬನ್ನಿ ಎಂದರು. ಜೊತೆಗೆ ಆ ಹಿರಿಯರಾದ ವರದರಾಜ್ ರವರು ಬರಲಿದ್ದಾರೆಂಬುದು ಇನ್ನೊಂದು ಹೆಮ್ಮೆ. ಆ ಸುಂದರ ಸಮಾರಂಭಕ್ಕೆ ನಾನು ಹೋದೆ. ಅಲ್ಲಿ ಅನೇಕ ಜನ ಕವಿಗಳು ರಾಜ್ಯದ ನಾನಾ ಮೂಲೆಯಿಂದ ಬಂದವರು. ಎಲ್ಲರೂ ಒಂದೊಂದು ಕವಿತೆಯನ್ನು ಓದಿದರು. ಅದರಲ್ಲಿ ಕುಮಾರ್ ಎಂಬುವವರು ‘ಅಪ್ಪನೆಂಬ ಅದ್ಭುತ’ ಎಂಬ ಕವಿತೆಯನ್ನು ಓದಿದರು, ಆ ಕವಿತೆಯ ಪ್ರತಿ ಸಾಲು ನನ್ನ ಮನದ ಮನೆಯನ್ನು ತಟ್ಟಿತು, ಅಪ್ಪನ ಕೊರಗನ್ನು ನೀಗಿತು, 
“ಅಮ್ಮನೆಂದರೆ ಮಮತೆ
ಅಪ್ಪನೆಂದರೆ ಭದ್ರತೆ
ಸದಾ ಮಡದಿ-ಮಕ್ಕಳ
ಭವಿಷ್ಯಕ್ಕಾಗಿ ಬದುಕನೆ
ಮುಡುಪಿಟ್ಟು ಬೆಳಗುವ 
ಕರ್ಪೂರದ ಹಣತೆ !....(ಇದು ರಮೇಶ್ ಗುಬ್ಬಿರವರ ಹೂವಾಡಿಗ ಕವನಸಂಕಲದ ಅಪ್ಪನೆಂದರೆ ಅದ್ಭುತ ಕವಿತೆ) ಇದನ್ನು ಓದುತ್ತಿದ್ದಂತೆ ಪಕ್ಕದಲ್ಲೇ ಕುಳಿತಿದ್ದ ಹಿರಿಯ ಚೇತನ ವರದರಾಜ್‍ರನ್ನು ನೋಡಿದೆ. ದೇವಾತಾ ಮುನುಷ್ಯರಾಗಿ ಕಂಡರು. ನಿಜವಾಗ್ಲೂ ಆ ಕವಿ ಕುಮಾರ್ ಓದಿದ ಕವಿತೆ ನನ್ನ ಫೇವರೀಟ್ ಕವಿತೆಯಾಯಿತು, ಆತ ಕವಿತೆ ಓದಿ ಮುಗಿಸಿ ಬಂದವನೇ ಪಕ್ಕದಲ್ಲಿದ್ದ ಅಪ್ಪಾಜಿಯವರ ಕಾಲಿಗೆ ಬಿದ್ದು ಅಪ್ಪಾಜಿ ಈ ಕವಿತೆ ನಿಮಗೆ ಅರ್ಪಣೆ ಎಂದ. ಆತ ಅರಿವಿಲ್ಲದೇ ನನಗೂ ಆತ್ಮೀಯನಾದ.
 

ಮಗಳೇ ಎಂದವನೇ... ಭಾಗ 1

ನನ್ನ ಹೆಸರು ಸುಮ, ನಮ್ಮೂರು ಶಿವಮೊಗ್ಗ, ಸುಂದರ ಬದುಕೂ ಅನ್ನೋ ಆಸೆಯಲ್ಲಿ ಆಗಷ್ಟೇ ಪದವಿ ಮುಗಿಸಿದ್ದ ನಾನು ಉದ್ಯೋಗವರಸಿ ಮಾಯ ನಗರ ಬೆಂಗಳೂರು ಸೇರಿದೆ. ನನ್ನ ಕುಟುಂಬ ಬಡ ಕುಟುಂಬ. ತಂದೆ ನಾನು ತೀರ ಚಿಕ್ಕವಳಿದ್ದಾಗಲೇ ತೀರಿ ಹೋಗಿದ್ದರು, ನನ್ನ ತಾಯಿ ಮತ್ತು ಎರಡು ಜನ ತಂಗಿಯರು ಸೇರಿ ನಾವು ಒಟ್ಟು ನಾಲ್ಕು ಜನರ ಕುಟುಂಬ. ತಾಯಿ ಗಾರ್ಮೆಂಟ್ಸ್ ಕೆಲಸದಲ್ಲೇ ಮಕ್ಕಳನ್ನು ಕಷ್ಟಪಟ್ಟು ಓದಿಸುತಿದ್ದಳು, ಬಿಡುವು ಮಾಡಿಕೊಂಡು ಮನೆಯಲ್ಲೂ ಟೈಲರಿಂಗ್ ಮಾಡುತ್ತಿದ್ದಳು, ನಾನೂ ಕೂಡ ಬಿಡುವಿದ್ದಾಗ ತಾಯಿಗೆ ಕೊಂಚ ಸಹಕರಿಸುತ್ತಿದ್ದೆ, ನಾನೇ ಮನೆಗೆ ಹಿರಿಯ ಮಗಳಾದ್ದರಿಂದ ನನಗೆ ಸಹಜ ಜವಾಬ್ದಾರಿ. ಬಡ ಕುಟುಂಬವನ್ನು ಬಡತನದಿಂದ ಪಾರು ಮಾಡಲು ಹಠ ಹಿಡಿದು ದುಡಿಯಬೇಕೆಂಬ ಹಂಬಲದಿಂದ ಬದುಕುವವಳು. ಏನೇ ಆದರೂ ವಯಸ್ಸಾದ ತಾಯಿಯ ಭಾರವನ್ನು ಕೆಳಗಿಳಿಸಬೇಕೆಂಬ ಛಲವಂತೂ ಕಂಡಿತಾ ಇತ್ತು, ಉಳಿದ ನನ್ನ ಸಹೋದರಿಯರ ಮನದಲ್ಲೂ ಅದೇ ಆಸೆ ಇತ್ತು. ಆದರೆ ಅವರು ನನಗಿಂತ ಇನ್ನೂ ಕಿರಿಯರು, ಅವರಿನ್ನೂ ಓದಬೇಕು, ಆದಷ್ಟು ಚೆನ್ನಾಗಿ ಓದಬೇಕು, ಅದಕ್ಕೆ ಅವರು ಮತ್ತೆ ಅಮ್ಮನಿಗಾಗಿ ಅವಲಂಬಿಸುವುದು ಬೇಡ. ನಾನೇ ಆದಷ್ಟು ಅವರ ಜವಾಬ್ದಾರಿಯನ್ನು ಬೇಗನೇ ತೆಗೆದುಕೊಳ್ಳಬೇಕು, ಈ ಲೆಕ್ಕಾಚಾರದೊಂದಿಗೆ ಬೆಂಗಳೂರು ಸೇರಿದೆ. ಒಂದು ಸಾಧಾರಣ ಕೆಲಸವನ್ನು ಒಂದು ಪೇಪರ್ ಕಂಪನಿಯಲ್ಲಿ ಪಡೆದೆ, ನನ್ನ ಅರ್ಹತೆಗೆ ಅಷ್ಟು ಉತ್ತಮವಲ್ಲದಿದ್ದರೂ ದುಡಿವ ಮನಕ್ಕೆ, ನನ್ನ ಹುಮ್ಮಸ್ಸಿಗೆ ಸಹಕಾರಿಯಂತೂ ಆಯಿತು. ಬರಡಾದ ನಮ್ಮ ಕುಟುಂಬಕ್ಕೆ ವರದಾನವಂತೂ ಆಯಿತು, ಮನೆಯಲ್ಲಿ ಅಮ್ಮನಿಗೆ ಸ್ವಲ್ಪ ನಿರಾಳವೂ ಆಯಿತು. ನನ್ನೊಂದಿಗೆ ಅಮ್ಮ ಮಾತನಾಡುವಾಗಲೆಲ್ಲಾ ನಿನ್ನಂತೆಯೇ ನಿನ್ನ ಎರಡು ಜನ ತಂಗಿಯರು ಕೆಲಸ ಪಡೆದು ಎಲ್ಲರೂ ದುಡಿಯುವಂತಾದರೆ ನಿಮ್ಮ ತಂದೆಯ ಕನಸು ನನಸಾದಂತೆ, ಅವರಿಗೆ ಆತ್ಮ ಸಂತೃಪ್ತಿಹೊಂದಿದಂತೆ, ಹೀಗೆ ಏನೆಲ್ಲಾ ಅಮ್ಮನ ನುಡಿಗಳು, ಅವುಗಳೇ ಅವಳ ಬಾಳಿನ ಗುರಿಗಳು, ಅವಳದೇ ಏಕೆ.? ಮಕ್ಕಳಾದ ನಮ್ಮೆಲ್ಲರ ಗುರಿಗಳೂ ಹೌದು. ಇವುಗಳನ್ನು ನನಸು ಮಾಡಿಕೊಳ್ಳುವ ಛಲದಲ್ಲಿ ನಾವೆಲ್ಲರೂ ಬದುಕುತಿದ್ದೆವು. 
       ಬೆಂಗಳೂರಿನಲ್ಲಿ ಕೆಲಸಕ್ಕೆ ಸೇರಲು ನನಗೆ ಸಹಕರಿಸಿದ ಗೆಳತಿ ಒಂದು ದಿನ ಭಾನುವಾರ ನನಗೆ ಒಂದು ಪಾರ್ಟಿಗೆ ಕರೆದಳು, ಅದೆಲ್ಲಾ ಅವಳ ಫೇಸ್‍ಬುಕ್ ಸ್ನೇಹಿತರ ಕೂಟ, ಅದರಲ್ಲಿ ಹೆಚ್ಚಿನವರು ಅವಳಿಗೇ ಅತೀ ಆತ್ಮೀಯರು, ಅವಳೆಲ್ಲಾ ಆಗೂ ಹೋಗುಗಳಿಗೆ ಜೊತೆಯಾದವರು. ಸ್ನೇಹದ ಬೆಸುಗೆಯಲ್ಲಿ ಎಲ್ಲರೂ ಒಂದಾದವರು. ನನಗೆ ಆ ಪಾರ್ಟಿಯಲ್ಲಿ ಆಕೆ ಎಲ್ಲರನ್ನೂ ಪರಿಚಯಿಸಿದಳು, ಅಲ್ಲಿದ್ದ ಎಲ್ಲರೊಳಗಿನ ಆತ್ಮೀಯತೆ, ನಿರ್ಮಲ ಸ್ನೇಹ ನನಗೆ ತುಂಬಾ ಇಷ್ಟವಾಯಿತು. ದಿನವಿಡೀ ನಿಮಿಷದಂತೆ ಆ ದಿನ ಎಲ್ಲರೊಂದಿಗೆ ಕಳೆದೆ, ಬಹುದಿನಗಳ ನಂತರ ಮನದಲ್ಲಿ ಏನೋ ಉಲ್ಲಾಸದಲೆ ಬೀಸಿ ಮನವು ದಣಿವು ದೂರಾಗಿಸಿ ಕೊಂಚ ವಿರಮಿಸಿಕೊಂಡ ಅನುಭೂತಿ. ಎಲ್ಲವೂ ಸ್ನೇಹದ ಆ ಪಾರ್ಟಿಯ ಫಲ. ಆಗ ನನಗೂ ಫೇಸ್ಬುಕ್ ಅಕೌಂಟ್ ಬೇಕೆನಿಸಿತು,  ಮನೆಗೆ ಬಂದವಳೇ ರಾತ್ರಿಯೇ ಕೂತು ಫೇಸ್ ಬುಕ್ ಅಕೌಂಟ್ ತೆರೆದೆ. ಪ್ರೀತಿಯಿಂದ ಎಲ್ಲರನ್ನೂ ಸ್ನೇಹಿತರನ್ನಾಗಿಸಿಕೊಂಡೆ, ಅನೇಕ ಜನ ಊರಿನ ಗೆಳೆಯರು, ಸಂಬಂಧಿಕರು, ಶಾಲಾ ಕಾಲೇಜಿನ ಸ್ನೇಹಿತರು ಆದಷ್ಟು ಜನ ಒಂದೇ ವೇದಿಕೆಯಲ್ಲಿ ಒಗ್ಗೂಡಿದಂತಾಯಿತು. ಅತ್ಮೀಯತೆ ಮತ್ತೆ ಗಟ್ಟಿಯಾಯಿತು, ಹಳೆ ನೆನಪುಗಳು ಹೊಸ ಬದುಕು ಎರಡರ ಸಾಂಗತ್ಯವು ಮನಕ್ಕೆ ಹೊಸ ಹುರುಪು ನೀಡಿತು. ದಿನಾ ಬೆಳಿಗ್ಗೆ ಗೆಳತಿಯೊಂದಿಗೆ ವಾಯುವಿಹಾರಕ್ಕೆ ಹೋದಾಗ ಪರಿಚಿತರಾದವರು, ಕೆಲಸ ಮಾಡುವ ಕಂಪನಿಯಲ್ಲಿ ಜೊತೆಯಾದವರು ಎಲ್ಲರೂ ಮೊಬೈಲ್‍ನಲ್ಲೇ ಇನ್ನೂ ಹತ್ತಿರವಾದೆವು, ಏನೇ ಬೇಕಿದ್ದರೂ ಉತ್ತರ ನೀಡುವರ ಸಂಖ್ಯೆಯು ಅಧಿಕವಾಯಿತು. ಯಾರಿಲ್ಲವೆಂಬ ಕೊರಗು ದೂರಾಗತೊಡಗಿತು, ಸ್ನೇಹ ಸಂಪಾದನೆಯೊಂದಿಗೆ ಬದುಕಲ್ಲಿ ಎಲ್ಲವನ್ನು ಸಾಧಿಸಬಲ್ಲೆನೆಂಬ ಹಠವು ಇನ್ನೂ ಗಟ್ಟಿಯಾಗತೊಡಗಿತು. ಈ ಧೈರ್ಯದಲ್ಲಿ ನನ್ನ ತಂಗಿಯರನ್ನು ಉತ್ತಮವಾಗಿ ಓದಿಸಿ ನನ್ನ ತಾಯಿಯನ್ನು ಸುಖವಾಗಿ ಬದುಕಲ್ಲಿ ನಡೆಸಬಲ್ಲೆನೆಂಬ ಕನಸು ಕಂಡಿತಾ ನನಸಾಗುತ್ತದೆಂದು ಎಣಿಸಿದೆ. ಮನೆಯಲ್ಲಿದ್ದವರಿಗೂ ಧೈರ್ಯದಿಂದ ಸಂತೈಸುವ ಮಟ್ಟಕ್ಕೆ ನಾ ಬೆಳೆದೆ, ಒಂದಂತೂ ಸತ್ಯ ನನ್ನ ಮನಸ್ಸೀಗ ಮೊದಲಿನಂತೆ ಬಾಡಿರಲಿಲ್ಲ, ಕೆಲಸದಲ್ಲಿ ನನಗಿದ್ದ ನೆಮ್ಮದಿಯು ನನ್ನ ಮನಸ್ಸನ್ನು ಗಟ್ಟಿಗೊಳಿಸಿತ್ತು, ಇದಕ್ಕೆ ನನಗೆ ದೊರೆತ ಹೊಸ ಸ್ನೇಹಿತ ವಲವೂ ಮುಖ್ಯವಾಗಿತ್ತು, ಇನ್ನೂ ನನಗಿಂತ ಚೆನ್ನಾಗಿ ನನ್ನ ಸಹೋದರಿಯರು ಓದಿದಲ್ಲಿ ಅವರಿಗೆ ನನಗಿಂತ ಉತ್ತಮ ಅವಕಾಶಗಳು ಸಿಗುತ್ತವೆ, ಅವರ ಮೇಲಿನ ಅಮ್ಮನ ಜವಾಬ್ದಾರಿಯು ಕಡಿಮೆಯಾಗುತ್ತದೆ, ಕೊರಗು ಕುಟುಂಬದಿಂದ ದೂರಾಗುತ್ತದೆಂದು ಆಶಾವಾದದಲ್ಲಿ ದಿನ ದೂಡುತ್ತಾ ಸಾಗುತ್ತಿದ್ದೆ.
     
     ದಿನಗಳುರುಳಿದಂತೆ ವರ್ಷವೂ ಕಳೆಯಿತು, ತಂಗಿಯರು ಉತ್ತಮವಾಗಿ ಓದುತ್ತಿದ್ದರು, ಅದರಲ್ಲಿ ಒಬ್ಬಳು ಒಂದು ವರ್ಷ ಓದಿದಲ್ಲಿ ಬಿ.ಎಸ್ಸಿ ಮುಗಿಯುತ್ತದೆ, ಇನ್ನೊಬ್ಬಳು ಈಗ ಪಿ.ಯು.ಸಿ ಮುಗಿಸಿ ಬಿಕಾಂ ಸೇರಿದ್ದಾಳೆ. ಏನೇ ಆದರೂ ಒಬ್ಬಳು ತಂಗಿ ಸಹಾ ಮುಂದಿನ ವರ್ಷದಿಂದಲೇ ಪದವಿ ಮುಗಿಸಿ ನನ್ನೊಂದಿಗೆ ಕೆಲಸಕ್ಕೆ ಬರಬೇಕೆಂದು ಹಾತೊರೆಯುತಿದ್ದಾಳೆ, ಆದರೆ ನನಗೆ ಅವಳನ್ನು ಇನ್ನೂ ಓದಿಸಬೇಕೆಂಬ ಹಂಬಲ, ಆದರೆ ಎಲ್ಲವೂ ನಮ್ಮ ಕುಟುಂಬದ ಆಧಾಯವನ್ನು ಅವಲಂಬಿಸಿದೆ, ಎಲ್ಲವನ್ನೂ ಕಾಯ್ದು ನೋಡೋಣವೆನ್ನುತ್ತಾ ದಿನ ಸಾಗತೊಡಗಿದೆ. ಒಂದು ದಿವಸ ಸಂಜೆ ಕಂಪನಿಯಿಂದ ಬಂದವಳು ಸ್ವಲ್ಪ ವಿಶ್ರಾಂತಿ ಪಡೆಯುತ್ತಾ ಫೇಸ್ ಬುಕ್ ನೋಡುತ್ತಿದ್ದೆ, ಆಗ ಹಿರಿಯರೊಬ್ಬರಿಂದ ವರದರಾಜ್ ಎಂಬ ಹೆಸರಿನಿಂದ ಒಂದು ಸ್ನೇಹದ ಕೋರಿಕೆ ಬಂತು, ಅವರು ನನಗೆ ಪರಿಚಿತರಲ್ಲ, ಯಾರೆಂದು ಯೋಚಿಸಿದೆ, ಅವರ ಟೈಮ್ ಲೈನ್ ಹುಡುಕಿ ನೋಡಿದೆ, ಅದರ ತುಂಬಾ ಅನೇಕ ಜನ ಹೆಣ್ಮಕ್ಕಳು ಅಪ್ಪಾ ಎಂದು ಸ್ಟೇಟಸ್ ಹಾಕಿದ್ದನ್ನು ಕಂಡೆ, ಇವರು ತಮ್ಮ ಕ್ಯಾಮರಾದಲ್ಲಿ ಸೆರೆಹಿಡಿದ ಬಣ್ಣದ ಛಾಯ ಚಿತ್ರಗಳು ನನ್ನನ್ನು ಇನ್ನಷ್ಟು ವಿಸ್ಮಿತಗೊಳಿಸಿತು, ನೊಂದ ಮನಕ್ಕೆ ಉತ್ತಮ ಛಾಯಾಚಿತ್ರಗಳು ಮಂದಹಾಸ ಮೂಡಿಸಬಲ್ಲವು, ನನಗೂ ಅಪ್ಪನಿಲ್ಲದ ಕೊರಗು, ಏನನ್ನು ತೀರ ಯೋಚಿಸದೇ ಸ್ನೇಹ ಕೋರಿಕೆಯನ್ನು ಸ್ವೀಕರಿಸಿದೆ, ಆ ಹಿರಿಯರಿಂದ ಕೂಡಲೇ “ಧನ್ಯವಾದಗಳು ಮಗಳೇ..” ಎಂದು ಪ್ರತಿಕ್ರಿಯೆ ಬಂತು, ಅಪ್ಪನಿಲ್ಲದ ನನ್ನ ಮನಕ್ಕೆ ಖುಷಿಯ ಪರಿಧಿಗೆ ಮಿತಿಯಿರಲಿಲ್ಲ..ಸದ್ದಿಲ್ಲದೇ ಮನ ಸಂಭ್ರಮಾಚರಣೆಯಲ್ಲಿ ತೊಡಗಿತು..
..ಕಥೆ ಮುಂದುವರೆಯಲಿದೆ...
             ರಾಮಚಂದ್ರ ಸಾಗರ್
 

Sunday, 29 January 2017

ನಿನ್ನ ಜೊತೆಯಲ್ಲಿ..

ಒಯ್ಯಾರಿ ನೀ ಹೂವಂತೆ ನಗುತಿರಲು 
ವಿಲಾಸತೆಯ ಬಾಳು ಅರಳಿದಂತೆ
ವಲ್ಲರಿ ನೀ ಕೈಹಿಡಿದು ಸಾಗುತಿರಲು 
ಹೂಲತೆಯು ಜೊತೆಯಾಗಿ ಸಾಗಿದಂತೆ..

ಜತೆಗಾತಿ ನೀನು ಜೊತೆಯಾಗಿರಲು
ಕಹಿಯೆಲ್ಲ ಬಾಳಲಿ ದೂರಾದಂತೆ
ಸಿಹಿಯೆಲ್ಲ ಬಾಳಲಿ ಜೊತೆಯಾದಂತೆ
ಸಂತಸವೆಲ್ಲ ಬಾಳಲಿ ಜಮಾವಣೆಯಾದಂತೆ..

ಸಂಪ್ರೀತಿ ನೀ ನನಗೆಂದೆ ಸುರಿಸುತಿರಲು
ಜಟಿಲ ದಾರಿಯಲ್ಲಿ ಗೆಲುವು ಒಲಿದಂತೆ
ತುಡಿವ ಮನದಲ್ಲಿ ಸಂತುಷ್ಟಿ ಅರಳಿದಂತೆ
ತುಮುಲದ ಬಾಳಲಿ ಜವಾಬು ಬಂದಂತೆ..

ಸಲಹುವ ನಿನ್ನ ನಯನವು 
ನನಗಾಗೆ ನಿತ್ಯ ತವಕಿಸುತಿರಲು
ಬಾಳಲಿ ಅಂಜಿಕೆಯು ಬಾರದೆಂದು 
ಮನದಲಿ ದುಗುಡವು ಮೂಡದೆಂದು..

ವಿಲಾಸತೆಯ ನಗುವಿನಲೆಯಲ್ಲಿ
ವಲ್ಲರಿಯ ಜೊತೆಯಲ್ಲಿ
ಬಾಳು ಅರಿವಿಲ್ಲದೇ ಸಾಗಿದಂತೆ
ಜಗದೆಲ್ಲವೂ ಪ್ರೀತಿಯಲೆಯಲ್ಲಿ ಬೆಸೆದಂತೆ...

              ರಾಮಚಂದ್ರ ಸಾಗರ್