Sunday, 15 June 2025

ಪ್ರೀತಿಯ ಮಳೆ

 

ಗೆಳೆಯಾ..

ಪ್ರೀತಿಯ ಮಳೆಯಾಗುತಿದೆ ನನ್ನೆದೆಯ ಗೂಡಲಿ

ಕಿವಿಯಿಟ್ಟು ಕೇಳು ಬಾ  ಒಲವಿನ ಆಲಾಪದಲಿ

ರಂಗು ತುಂಬಿದ ಸವಿ ಅನುರಾಗದ ಪದಗಳಲಿ

ಪ್ರೇಮದ ಪದಗಳೇ ದನಿಸುತಿವೆ ನಿನ್ನದೇ ನೆನಪಲಿ


ಆನಂದದ ಆನನಕೆ ನೀನೆ ಕಾರಣವಾಗಿರುವೆ

ಸಡಗರದ ಬಾಳಿಗೆ ನೀನೆ ಭೂಷಣವಾಗಿರುವೆ

ಸಂಭ್ರಮದ ಹಾದಿಗೆ ನೀನೆ ಸರದಾರನಾಗಿರುವೆ

ಸರಿಹಗಲು ಕನಸಲು ನೀನೆ ಸರಕಾಗಿರುವೆ


ಅನುರಾಗದ ಅಲೆಯಲಿ ನೀ ಕಡಲಾಗಿರಲು 

ಅನುತಾಪದ ಪ್ರೇಮದಲಿ ನೀ ಬೆಳಕಾಗಿರಲು

ಅನುಪಮ ಪ್ರೀತಿಯಲಿ ನಾ ಬೇಡುತಿರಲು

ಅನುಮಾನಿಸಿ ನನ್ನೊಲವು ನೀ ದೂರಾಗದಿರು 


ನಿನ್ನೊಲವು ಸಂಕೋಲೆಯಾಗಿದೆ ಹೃದಯಕೆ

ನಿನ್ನದೇ ಸವಿನಯ ಸಾನಿಧ್ಯ ಬೇಕಿದೆ ಬಾಳಿಗೆ

ಸಹನೆಯ ಸಹವಾಸವು ಸಾಕಾಗಿದೆ ಮನಕೆ

ನೀನೆನ್ನುವ ಸಹೃದಯ ವರವಾಗಲಿ ಹಾದಿಗೆ


ಮೋಹದ ಮಳೆಯಲಿ ಒಂದಾಗಿ ರಮಿಸೋಣ

ಆಹ್ಲಾದದ ಮನೆಯಲಿ ಜೊತೆಯಾಗಿ ನಲಿಯೋಣ

ಕಾತರಿಸುವ ಕನಸುಗಳಿಗೆ ಉತ್ತರವಾಗು ಬಾ

ಒಲವಿನ ಆಸ್ಥಾನಕೆ ಸದಾ ದೊರೆಯಾಗು ಬಾ


ರಚನೆ: ರಾಮಚಂದ್ರ ಸಾಗರ್

Tuesday, 7 January 2025

ಮರೆಯಾದ ಸಮಾಜಮುಖಿ ಚಿಂತನೆಯ ಮಹಾಯೋಗಿ

 

ಶ್ರೀಯುತ ಡಾ. ನಾ ಡಿಸೋಜ ಅವರು ಕನ್ನಡ ನಾಡು ಕಂಡಂತ ಅಪರೂಪದ ಪ್ರತಿಭೆ. ವಿಶೇಷವಾಗಿ ಮಲೆನಾಡು ಭಾಗದ ಸಮಸ್ಯೆಗಳ ಬಗ್ಗೆ ಸದಾ ಧ್ವನಿಯಾದವರು. ನಾಡು ನುಡಿ ವಿಚಾರದಲ್ಲಿ ಯಾರನ್ನೂ ಬಿಡದೆ ಚಾಟಿ ಬೀಸಿದವರು. ಸದಾ ಬಡವರ, ನೊಂದವರ ಬಗ್ಗೆ ದನಿಯಾಗಿ ತಮ್ಮ ಸಾಹಿತ್ಯ ಬರವಣಿಗೆಯ ಮೂಲಕ ಹೋರಾಟದ ಸೆಲೆಯಾದವರು. ಗೌರವಾನ್ವಿತರು ತಮ್ಮ ಅಮೂಲ್ಯ ಬದುಕಿನುದ್ದಕ್ಕೂ ನಮ್ಮ ನಾಡು ನುಡಿಗೆ ಶ್ರೇಷ್ಠತೆಯ ಶ್ರೀಕಾರವಾದರು. ಸರಳತೆಯಲ್ಲೇ ಬದುಕಿಗೆ ಮೆರುಗು ರೂಪಿಸಿಕೊಂಡ ಮಹಾನ್‌ ವ್ಯಕ್ತಿತ್ವದವರು. ದಿನಾಂಕ: 05.01.2025 ರಂದು ವಯೋಸಹಜ ಮರಣ ಹೊಂದಿ ನಮ್ಮನ್ನು ಅಗಲಿದ್ದಾರೆ. ಆದರೆ ಅವರ ಸಾಹಿತ್ಯ ಜ್ಞಾನದ ಪ್ರಕರತೆಯು ಎಂದಿಗೂ ಮುಗಿಯದ ನಿತ್ಯ ದೀವಿಗೆ.

ಗೌರವಾನ್ವಿತರು ನನ್ನ ಎರಡು ಪುಸ್ತಕಗಳಿಗೆ ಮುನ್ನುಡಿಯನ್ನು ಬರೆದು ಹಾರೈಸಿದವರು. ನನ್ನ ಮೊದಲ ಕವನ ಸಂಕಲನ ʼಬುದ್ದೀಜೀವಿʼ ಯನ್ನು ಸ್ವತಃ ಬಿಡುಗಡೆಗೊಳಿಸಿ ಹಾರೈಸಿದವರು. ಆ ದಿನ ಸದರಿ ಕಾರ್ಯಕ್ರಮವನ್ನು ಕನ್ನಡ ಸಾಹಿತ್ಯ ಪರಿಷತ್ತು ಸಾಗರ ಇವರು ಹಮ್ಮಿಕೊಂಡು ನನಗೆ ಹಾರೈಸಿದರು. ನಾನು ಅನೇಕ ಬಾರಿ ಇವರ ಮನೆಗೆ ಹೋದಾಗ ಅಕ್ಕರೆಯಿಂದ ಸ್ವಾಗತಿಸಿ ಸಮಾಲೋಚಿಸುತ್ತಿದ್ದರು. ಎಷ್ಟೇ ಹಿರಿತನ ಸಾಹಿತ್ಯ ಸಾಧನೆಯಲ್ಲಿದ್ದರು ಎಂದಿಗೂ ತಮ್ಮ ಸಿರಿತನವನ್ನು ಸರಳತೆಯಲ್ಲೇ ತೋರಿಸಿ ಸಮಾಜಕ್ಕೆ ಮಾದರಿಯಾದವರು. ಇಂದು ದಿನಾಂಕ:07.01.2025 ರಂದು ಅವರ ಪ್ರಾರ್ಥಿವ ಶರೀರದ ದರ್ಶನವನ್ನು ಸಾಗರದ ಗಾಂಧೀ ಮೈದಾನದಲ್ಲಿ ಸಾರ್ವಜನಿಕ ದರ್ಶನಕ್ಕೆ ಸರ್ಕಾರ ವ್ಯವಸ್ಥೆ ಮಾಡಿರುತ್ತದೆ.

 

ಶ್ರೀಯುತರಿಗೆ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಿ ಈ ಕವಿತೆ ಬರೆದಿರುವೆ;

 

ನಿಗರ್ವ ಲೋಕದ ತಾರೆ

 

ಸರಳ ಸಜ್ಜನಿಕೆಯ ಸಾಕ್ಷಾತ್ಕಾರ

ಸಚ್ಚರಿತ ಗುಣಗಣ ಮಹಾಸಾಗರ

ಮಲೆನಾಡ ಬವಣೆಗೆ ಹೋರಾಟದ ಸಾರಥಿ

ಅಕ್ಷರಗಳ ಯಾತ್ರೆಯಲಿ ಸಮಾಜಕೆ ದೀವಿಗೆ

 

ಸಿರಿತನ ನಿಸ್ವಾರ್ಥತೆಯಲಿ ವಿಜೃಂಭಿಸಿದವರು

ನಿರ್ವಿವಾದ ಮಂದಿರದ ದೈವವಾದವರು

ಸಹೃದಯಗಳ ಸ್ನೇಹಕೆ ಸೇತುವೆಯಾದವರು

ಪರಿಸರ ಆರಾಧನೆಯ ಯೋಗಿಯಾದವರು

 

ಆಡಂಬರದ ಬದುಕು ತ್ಯಜಿಸಿದ ತ್ಯಾಗಿಯಾದವರು

ನಿಷ್ಕಾಮ ನಡೆಯಲಿ ಸಂಭ್ರಮವಾದವರು

ಭೀಭತ್ಸ ಸಮಾಜದ ಶುದ್ಧಿಯಲಿ ಯೋಧರಾದವರು

ನಾಡು ನುಡಿ ವಿಚಾರದಲಿ ಚಾಟಿ ಬೀಸಿದವರು

 

ಸುಯೋಗದ ಶಿಖರವನು ಏರಿದವರು

ಸುಜ್ಞಾನದ ಕನ್ನಡ ದೀವಿಗೆಯಾದವರು

ಸಹಿಷ್ಣುತೆಯ ಧೂಪದಾರತಿ ಬೆಳಗಿದವರು

ಸಂಪನ್ನ ಸದ್ಗತಿಯ ಅಲೆಯಾದವರು

 

ಘನಸಾರ ಸಂದೇಶಗಳನು ಪಠಿಸಿದವರು

ಗೌರವದ ಸಮಾಜಕೆ ಮುನ್ನುಡಿಯಾದವರು

ಬರವಣಿಗೆಯಲಿ ಮಕ್ಕಳ ಮನ ಹೂವಾಗಿಸಿದವರು

ಸೀಜೇನಂತೆ ಮುದ್ದು ಮನಗಳಿಗೆ ಪ್ರಿಯವಾದವರು

 

ನಿಗರ್ವದ ಲೋಕದಲಿ ನಿತ್ಯ ನೆಲೆಯಾದವು

ನಿರ್ವಾಣದ ಬಾಳು ಸಿದ್ಧಿಸಿಕೊಂಡವರು

ಬೆಳಗುವ ದೀಪದಲಿ ಮುಗಿಯದ ತೈಲವಾದವರು

ಕನ್ನಡ ಸಾಹಿತ್ಯದಲಿ ನಿತ್ಯ ಪ್ರಕರ ಕಿರಣವಾದವರು

 

ದೇಹದಿಂದ ಮರೆಯಾದರು ಜ್ಞಾನದ

ಕಡಲು ಸೃಜಿಸಿ ನಕ್ಕವರು

ಇವರೇ ನಮ್ಮೆಲ್ಲರ ಮೆಚ್ಚಿನ ನಾಡಿ

ಘನ ಸಾರ ಸಾಹಿತ್ಯದಲಿ ಆಕ್ಷಯವಾದವರು

 

ರಚನೆ: ರಾಮಚಂದ್ರ ಸಾಗರ್‌

 



Thursday, 31 October 2024

ದೀಪಾವಳಿ...

 

ಎಲ್ಲಾ ಸಹೋದರ ಬಂಧುಗಳಿಗೂ ದೀಪಾವಳಿಯ ಶುಭಾಶಯಗಳು.

"ಬೆಳಕಿನ ಹಬ್ಬ ಎಲ್ಲರ ಬದುಕನ್ನು ಬೆಳಗಲಿ, ಅಂಧಕಾರ ಕರಗಿ ಹರುಷದ ದೀಪದ ಬೆಳಕಲ್ಲಿ ಸಂತಸ ಮೂಡಲಿ,  ಎಲ್ಲರ ಬದುಕಲ್ಲಿ ಕನುಸಗಳು ನನಸಾಗಿ ಒಲುಮೆಯ ಜಗವಾಗಲಿ" ಎನ್ನುವ ಆಶಯದೊಂದಿಗೆ ನಾ ಬರೆದ "ದೀಪಾವಳಿ" ಕವಿತೆಯನ್ನು ಪೋಸ್ಟ್‌ ಮಾಡುತ್ತಿದ್ದೇನೆ. ಎಲ್ಲರಿಗೂ ಮತ್ತೊಮ್ಮೆ ಬೆಳಕಿನ ಹಬ್ಬದ ಶುಭಾಶಯಗಳು.

ದೀಪಾವಳಿ...

ದಿಗಂತದ ತುದಿಯಲಿ

ಚಿಮ್ಮಿದಾ ಬೆಳಕಲಿ

ನವ್ಯತೆಯ ಭಾವದಲಿ

ಭವ್ಯತೆಯ ದೀಪಾವಳಿ....

ಎಲ್ಲರೆದೆಯ ಬೆಸುಗೆಯಲ್ಲಿ

ಸಹೋದರತ್ವ ಬಂಧದಲ್ಲಿ

ದೀನತೆಯ ಅಂತ್ಯದಲ್ಲಿ

ಹರುಷದಾ ದೀಪಾವಳಿ...

ಶ್ರಮದಾನದ ಕಾಯದಲ್ಲಿ

ಶ್ರಮದ ಹನಿಗಳ ನಗುವಿನಲ್ಲಿ

ನೊಂದ ದನಿಯ ಗೆಲುವಿನಲ್ಲಿ

ಚೈತನ್ಯದ ದೀಪಾವಳಿ..

ಬಡತನದ ಅಳಿವಿನಲ್ಲಿ

ಅಸಹಾಯಕರ ನಗುವಿನಲ್ಲಿ

ನಿಸ್ವರ‍್ಥ ಮನಗಳ ಅಕ್ಷಯದಲಿ

ಅಕ್ಷಯ ದೀಪಾವಳಿ...

ಜ್ಞಾನ ದೀವಟಿಗೆ ಬೆಳಗಿನಲ್ಲಿ

ಅಜ್ಞಾನ ಅಂಧಕಾರಗಳ ದಹನದಲ್ಲಿ

ಹೊಸ ಗುರಿಗಳ ಕನಸಿನಲ್ಲಿ

ಜ್ಞಾನದ ದೀಪಾವಳಿ...

ರಾಮಚಂದ್ರ ಸಾಗರ್

Sunday, 21 January 2024

ಶ್ರೀ ರಾಮ...

 

ಅಯೋಧ್ಯೆಯ ರಂಗದಲಿ ಬಾಲರಾಮನ ಪ್ರಾಣ ಪ್ರತಿಷ್ಠೆಯ ಮುಹೂರ್ತದ ಶುಭದ ಘಳಿಗೆಗೆ ಧನ್ಯತೆಯಲ್ಲಿ ಕೈ ಮುಗಿದು ಪ್ರಾರ್ಥಿಸುತ್ತಾ ಈ ಅವಿಸ್ಮರಣೀಯ ಪಾವನ ಕಾರ್ಯವು ನಾಡಿಗೆ ಸಕಲ ಹೆಮ್ಮೆಯ ಸಂಗತಿಯಾಗಿದೆ.  ಸತ್ಯದ ಪಥದಲಿ ಮಿಥ್ಯದ ಜಗವ ಸೋಲಿಸಿದ ನನ್ನ ಮನದ ದೇವ ಶ್ರೀ ರಾಮನ ನೆನೆಯುತ್ತಾ ಈ ಕ್ಷಣದಲ್ಲಿ “ಶ್ರೀ ರಾಮ” ಕವಿತೆ ಬರೆದಿದ್ದೇನೆ. ಎಲ್ಲರೂ ಒಂದಾಗಿ ಶ್ರೀ ರಾಮನ ಪ್ರಾರ್ಥಿಸೋಣ ಬನ್ನಿ. ನಿಜ ರಾಮ ರಾಜ್ಯ ನಮ್ಮೆಲ್ಲರ ಗುರಿಯಾಗಲಿ. ಪ್ರೀತಿ, ಶಾಂತಿ, ಸ್ನೇಹ, ಸೌಹಾರ್ದತೆ, ಸಹಿಷ್ಣುತೆಗಳು ಎಲ್ಲರೆದೆಯ ಉಸಿರಾಗಲಿ. ಎಂದೆAದಿಗೂ ಸತ್ಯದ ಗುಡಿಯಲಿ ಆರಾಧನೆಗೆ ಅರ್ಹನು ನಮ್ಮೆಲ್ಲರ ಶ್ರೀ ರಾಮನೇ..


ಶ್ರೀ ರಾಮ...


ಸತ್ಯದ ಪಥದಲಿ ಜಗವ ಜಯಿಸಿದ ವೀರನೇ

ಸಭ್ಯತೆಯ ನಡೆಯಲಿ ಉದಯಿಸಿದ ಶೂರನೇ 

ಸಚ್ಚರಿತ ಮನದಲಿ ಸಂಭ್ರಮಿಸಿದ ಧೀರನೇ

ಸಜ್ಜನಿಕೆಯ ಸಿರಿತನದಲಿ ದೊರೆಯಾದ ದೇವನೇ 

ಶ್ರೀ ರಾಮ..


ಸದ್ಗತಿಯ ಮನಗಳಲಿ ಮಂದಿರವಾದವನೇ

ಸತ್ಕಾರದ ಭಾವನೆಗಳಲಿ ದೇವರಾದವನೇ

ಸಂಕಲ್ಪ ಕಾಯಕದಿ ಜಗಕೆ ಬೆಳಕಾದವನೇ

ಸಂಯಮದ ಸತ್ರದಲಿ ಸುಯೋಗವಾದವನೇ

ಶ್ರೀ ರಾಮ..


ಸದ್ಗುಣಗಳ ಗಗನದಲಿ ಶುಭದ ಮಳೆಯಾದವನೇ

ಸಂಪನ್ನ ಸತ್ವಗಳಲಿ ಧರಿತ್ರಿಯಲಿ ಹೆಸರಾದವನೇ

ಸಂಭಾವಿತರ ಸಖ್ಯದಲಿ ಸನ್ಮಾರ್ಗ ತೋರಿದವನೇ

ಸವಿನಯ ಪರಿವಾರದಲಿ ಸೌಜನ್ಯ ಮೆರೆದವನೇ

ಶ್ರೀ ರಾಮ..


ಸಹನೆಯಲಿ ಸಫಲತೆಯ ಸಂಕೀರ್ತನೆಯಾದವನೇ

ಸಹಿಷ್ಣುತೆಯ ಗುಣದಲಿ ಜಗಕೆ ಮುನ್ನುಡಿಯಾದವನೇ

ಶಾಂತಿ ದೇಗುಲದ ಶಾಂತೆಯ ಸಹೋದರನೇ

ಶಾಂತ ಸೌಧದ ಜಗಕೆ ಉಸಿರಾದವನೇ

ಶ್ರೀ ರಾಮ...

ರಚನೆ: ರಾಮಚಂದ್ರ ಸಾಗರ್