Wednesday, 30 June 2021

ನಮ್ಮೊಲವಿನ ರಂಗು


ನೋಡು ಬಾ ಒಲವಿನ ಗೆಳೆಯನೇ

ಬಾನಲ್ಲಿ ಮೂಡಿದೆ ನಮ್ಮೊಲವ ರಂಗಿನ ಚಿತ್ತಾರ

ಇರಬಹುದೇನು ಹುಡುಗನೆ ಇದುವೇ

ನಮ್ಮೊಲವಿಗೆ ಮೋಹದ ಭವ್ಯತೆಯ ಸಿಂಗಾರ...


ಪ್ರೀತಿಯ ಮಧುರ ಹಾದಿಯಲ್ಲಿ ಇದುವೇ

ವೈಭವದ ಘಳಿಗೆಯಲ್ಲವೆ ಈ ಬಾಳಿಗೆ

ಹರುಷದ ಲೋಕದಲ್ಲಿ ಸಂಭ್ರಮಿಸುವುದೇ

ನಮ್ಮೊಲವಿಗೆ ಇಂದು ಉಡುಗೊರೆಯಲ್ಲವೇ?


ರಮ್ಯತೆಯ ರಂಗಿನಲ್ಲಿ ಕಟ್ಟೋಣವೇ

ಬಣ್ಣ ಬಣ್ಣದ ಸಡಗರದ ಬದುಕನು

ರಂಗೇರಿದ ಮಾತಿನಲ್ಲಿ ನೀಡೋಣವೇ

ಬಾಳಿಗೆ ಅಭಯದಾ ಮಾತನು...


ಹರುಷದ ನಾವೆಯಲ್ಲಿ ನಲಿಯೋಣವೇ

ಕಾಡುವ ಕನಸಿಗೆ ಉತ್ತರಿಸೋಣವೇ..?

ರಮಿಸುವ ತಂಗಾಳಿಯ ಪ್ರೀತಿಯಲೆಯಲಿ

ಅನುರಾಗದ ಗೀತೆಗೆ ದನಿಯಾಗೋಣವೇ..?


ಪ್ರೇಮದ ಯಾತ್ರೆಯಲ್ಲಿ ಜೊತೆಯಾದರೆ

ಅದುವೇ ಗೆಳೆಯಾ ಈ ಬಾಳಿಗೆ ಶ್ರೀರಕ್ಷೆಯು

ಪ್ರೇರಣೆಯ ಪ್ರೀತಿಯಲಿ ಒಂದಾದರೇ

ಅದುವೇ ಹೃದಯಕೆ ಒಲವಿನ ಚಿತ್ತಾರವು..


ಹಗಲಿರುಳು ಕಾಡಿದ ಬಣ್ಣದ ಕನಸಿಗೆ

ಉತ್ತರವೇ ಮಮತೆಯ ಬಂಧನವು

ಪ್ರೇಮದ ಈ ಹಾದಿಯಲಿ ಸಾಗುವುದೇ

ಈ ಬಾಳಿಗೆ ಆ ದೇವನ ವರವು..


ನೋಡು ಬಾ ಒಲವಿನ ಗೆಳೆಯನೇ

ಬಾನಲ್ಲಿ ಮೂಡಿದೆ ನಮ್ಮೊಲವ ರಂಗಿನ ಚಿತ್ತಾರವು

ಜೊತೆಯಾಗಿ ಉತ್ತರಿಸೋಣ ಬಾರೋ

ನನ್ನೊಲವಿನ ಸೌಜನ್ಯದ ಸರದಾರನೇ..!


ರಚನೆ: ರಾಮಚಂದ್ರ ಸಾಗರ್

ಚಿತ್ರ: ಸಂಭ್ರಮ ಶ್ರೀ


Saturday, 26 June 2021

ನೀನಲ್ಲವೇ...?





ಮುಂಜಾನೆಯ ವೇಳೆಯಲಿ ಅರಳಿದ ಮಲ್ಲಿಗೆಯು ನೀನಲ್ಲವೇ

ಪ್ರೇಮದ ಹೂಬನದಲಿ ಪ್ರೀತಿಯ ಕಂಪು ಚೆಲ್ಲಿದವಳು ನೀನಲ್ಲವೇ


ಸಾಗುವ ಹಾದಿಯಲಿ ಸಂಭ್ರಮದ ತೇರಾದವಳು ಗೆಳತಿ ನೀನಲ್ಲವೇ

ನಗು ತುಂಬಿದ ವದನದಲಿ ಉಲ್ಲಾಸದ ಅಲೆಯಾದವಳು ನೀನಲ್ಲವೇ


ಹೊಂಗನಸು ಎದೆಯಲಿ ಬಿತ್ತಿದ ಪೋರಿಯು ನೀನಲ್ಲವೇ

ಅನುರಾಗದ ಅಲೆಯಲಿ ಹೃದಯ ನಲಿಸಿದವಳು ನೀನಲ್ಲವೇ


ಸಿಂಗಾರದ ಜಗದಲಿ ಚೆಲುವಿನ ಬಳ್ಳಿಯಾದವಳು ನೀನಲ್ಲವೇ

ಕನಸಿನ ಲೋಕದಲಿ ಮೋಹಿಸಿ ಮುದ್ದಿಸಿದವಳು ನೀನಲ್ಲವೇ


ಉಲ್ಲಾಸದ ಉಯ್ಯಾಲೆಯಲಿ ಜೊತೆಯಾದವಳು ನೀನಲ್ಲವೇ

ಉನ್ಮಾದದ ಪ್ರೀತಿಯಲಿ ಹಗಲಿರುಳು ಕಾಡುವವಳು ನೀನಲ್ಲವೇ


ಸೌಮ್ಯದ ನಗುವಿನಲಿ ಸಡಗರದ ಜಾತ್ರೆಯನು ಕರುಣಿಸಿದವಳು ನೀನಲ್ಲವೇ

ಸೌಜನ್ಯದ ಹೆಜ್ಜೆಯಲಿ ಹೂಪಥದಲಿ ಕೈಹಿಡಿದವಳು ನೀನಲ್ಲವೇ..?


ರಾಮಚಂದ್ರ ಸಾಗರ್


ನೀ ಕರುಣಿಸಬಾರದೇ?


ಬರಬಾರದೇ ಗೆಳೆಯನೆ ನೀ ನುಡಿಯಬಾರದೇ

ಪ್ರೀತಿಯ ನುಡಿಯೊಂದನು ಈ ಘಳಿಗೆಯಲಿ..?

ತರಬಾರದೇ ಗೆಳೆಯನೆ ನೀ ಕರುಣಿಸಬಾರದೇ

ಕೆಂಪಾದ ಗುಲಾಬಿಯನು ಈ ಕ್ಷಣದಲಿ ..

ನಿನ್ನೊಲವು ಮೆಚ್ಚಿದ ಈ ಗೆಳತಿಗೆ..


ಒಲವಿನ ಸವಿ ಮಾತುಗಳ ರಾಶಿಯನು 

ಹೊತ್ತು ತರುವುದನು ನೀ ಮರೆಯದಿರು

ನಗುವು ನಲಿಸುವ ಸುಖದ ದಿನವನು

ಉಡುಗೊರೆಯಾಗಿಸಲು ನೀ ಆಗಮಿಸು ..

ನಿನ್ನೊಲವು ಪೂಜಿಸುವಾ ಈ ಗೆಳತಿಗೆ..


ತುಂಟಾಟದ ಬಾಳಿನಲ್ಲಿ ಜವಾಬು ನೀಡು

ತುಮುಲದ ಮನದಲ್ಲಿ ಉತ್ತರ ಕೊಡು

ಮೋಹದ ಹೃದಯಕೆ ಬೆಂಗಾವಲಾಗು

ಮೋಹಿಸುವ ಜೀವಕೆ ದೊರೆಯಾಗು

ನಿನ್ನೊಲವೇ ಉಸಿರಾದ ಈ ಗೆಳತಿಗೆ..


ಮಮಕಾರದ ಮಡಿಲಿನಲಿ ವಿರಾಜಿಸು

ಮಂಜುಳಗಾನದಲಿ ನಮ್ಮೊಲವು ಗುನುಗುವೆ

ತುಸು ತಪ್ಪಾದರೆ ಕ್ಷಮೆಯನು ನೀ ನೀಡು

ಒಲಿದ ಮುಗ್ಧೆಯ ಮನಕೆ ನೀ ವರವಾಗು

ನಿನ್ನೊಲವು ನಂಬಿದಾ ಈ ಗೆಳತಿಗೆ..


ಹೃದಯದ ದೊರೆಯೇ ನೀ ಬರಬಾರದೇ

ಪ್ರೀತಿಯ ನುಡಿಯೊಂದನು ನುಡಿಯಬಾರದೇ?

ನಿನ್ನೊಲವು ಪಾಶದಲಿ ಬಂಧಿಯಾದ ಗೆಳತಿಗೆ

ಕೆಂಪು ಗುಲಾಬಿಯನು ನೀ ಕರುಣಿಸಬಾರದೇ?


ರಾಮಚಂದ್ರ ಸಾಗರ್ 


Wednesday, 26 May 2021

ನಿನ್ನದೇ ಕನಸಿದೆ


ಕಣ್ಣಿನ ಕಾತರದಲ್ಲಿ ನಿನ್ನದೇ ಧ್ಯಾನವಿದೆ ಕಾಣದೆ ಕೊಲ್ಲದಿರು ಗೆಳೆಯ

ಕನಸಿನ ಊರಿನಲ್ಲಿ ನಿನ್ನದೇ ಅನುರಾಗದ ಅನುಪಮ ನೆನಪಿದೆ ಕೇಳು ಬಾ ಗೆಳೆಯ


ಮೌನದ ಮಾತಿನಲ್ಲಿ ನಿನ್ನದೇ ಹೆಸರಿನ ಜಪವಿದೆ ಆಲಿಸು ಬಾ ಗೆಳೆಯ


 ಹೃದಯದ ಗೂಡಿನಲ್ಲಿ ನಿನ್ನದೇ ಒಲವಿನ ಹೂ ಕಂಪಿಸುತಿದೆ ಘಮಿಸು ಬಾ ಗೆಳೆಯ


ಪ್ರೇಮದ ಹಾದಿಯಲ್ಲಿ ನಿನ್ನದೇ ಬೆಳದಿಂಗಳು ಚೆಲ್ಲಿದೆ ಜೊತೆಯಾಗು ಬಾ  ಗೆಳೆಯ


ಪ್ರೀತಿಯ ಅಮಲಿನಲ್ಲಿ ನಿನ್ನದೇ ಸ್ನೇಹದ ಸವಿಯಿದೆ ಸಂತೈಸು ಬಾ ಗೆಳೆಯ


 ರಚನೆ: ರಾಮಚಂದ್ರ ಸಾಗರ್