ಬರಬಾರದೇ ಗೆಳೆಯನೆ ನೀ ನುಡಿಯಬಾರದೇ
ಪ್ರೀತಿಯ ನುಡಿಯೊಂದನು ಈ ಘಳಿಗೆಯಲಿ..?
ತರಬಾರದೇ ಗೆಳೆಯನೆ ನೀ ಕರುಣಿಸಬಾರದೇ
ಕೆಂಪಾದ ಗುಲಾಬಿಯನು ಈ ಕ್ಷಣದಲಿ ..
ನಿನ್ನೊಲವು ಮೆಚ್ಚಿದ ಈ ಗೆಳತಿಗೆ..
ಒಲವಿನ ಸವಿ ಮಾತುಗಳ ರಾಶಿಯನು
ಹೊತ್ತು ತರುವುದನು ನೀ ಮರೆಯದಿರು
ನಗುವು ನಲಿಸುವ ಸುಖದ ದಿನವನು
ಉಡುಗೊರೆಯಾಗಿಸಲು ನೀ ಆಗಮಿಸು ..
ನಿನ್ನೊಲವು ಪೂಜಿಸುವಾ ಈ ಗೆಳತಿಗೆ..
ತುಂಟಾಟದ ಬಾಳಿನಲ್ಲಿ ಜವಾಬು ನೀಡು
ತುಮುಲದ ಮನದಲ್ಲಿ ಉತ್ತರ ಕೊಡು
ಮೋಹದ ಹೃದಯಕೆ ಬೆಂಗಾವಲಾಗು
ಮೋಹಿಸುವ ಜೀವಕೆ ದೊರೆಯಾಗು
ನಿನ್ನೊಲವೇ ಉಸಿರಾದ ಈ ಗೆಳತಿಗೆ..
ಮಮಕಾರದ ಮಡಿಲಿನಲಿ ವಿರಾಜಿಸು
ಮಂಜುಳಗಾನದಲಿ ನಮ್ಮೊಲವು ಗುನುಗುವೆ
ತುಸು ತಪ್ಪಾದರೆ ಕ್ಷಮೆಯನು ನೀ ನೀಡು
ಒಲಿದ ಮುಗ್ಧೆಯ ಮನಕೆ ನೀ ವರವಾಗು
ನಿನ್ನೊಲವು ನಂಬಿದಾ ಈ ಗೆಳತಿಗೆ..
ಹೃದಯದ ದೊರೆಯೇ ನೀ ಬರಬಾರದೇ
ಪ್ರೀತಿಯ ನುಡಿಯೊಂದನು ನುಡಿಯಬಾರದೇ?
ನಿನ್ನೊಲವು ಪಾಶದಲಿ ಬಂಧಿಯಾದ ಗೆಳತಿಗೆ
ಕೆಂಪು ಗುಲಾಬಿಯನು ನೀ ಕರುಣಿಸಬಾರದೇ?
ರಾಮಚಂದ್ರ ಸಾಗರ್