Wednesday, 30 June 2021

ನಮ್ಮೊಲವಿನ ರಂಗು


ನೋಡು ಬಾ ಒಲವಿನ ಗೆಳೆಯನೇ

ಬಾನಲ್ಲಿ ಮೂಡಿದೆ ನಮ್ಮೊಲವ ರಂಗಿನ ಚಿತ್ತಾರ

ಇರಬಹುದೇನು ಹುಡುಗನೆ ಇದುವೇ

ನಮ್ಮೊಲವಿಗೆ ಮೋಹದ ಭವ್ಯತೆಯ ಸಿಂಗಾರ...


ಪ್ರೀತಿಯ ಮಧುರ ಹಾದಿಯಲ್ಲಿ ಇದುವೇ

ವೈಭವದ ಘಳಿಗೆಯಲ್ಲವೆ ಈ ಬಾಳಿಗೆ

ಹರುಷದ ಲೋಕದಲ್ಲಿ ಸಂಭ್ರಮಿಸುವುದೇ

ನಮ್ಮೊಲವಿಗೆ ಇಂದು ಉಡುಗೊರೆಯಲ್ಲವೇ?


ರಮ್ಯತೆಯ ರಂಗಿನಲ್ಲಿ ಕಟ್ಟೋಣವೇ

ಬಣ್ಣ ಬಣ್ಣದ ಸಡಗರದ ಬದುಕನು

ರಂಗೇರಿದ ಮಾತಿನಲ್ಲಿ ನೀಡೋಣವೇ

ಬಾಳಿಗೆ ಅಭಯದಾ ಮಾತನು...


ಹರುಷದ ನಾವೆಯಲ್ಲಿ ನಲಿಯೋಣವೇ

ಕಾಡುವ ಕನಸಿಗೆ ಉತ್ತರಿಸೋಣವೇ..?

ರಮಿಸುವ ತಂಗಾಳಿಯ ಪ್ರೀತಿಯಲೆಯಲಿ

ಅನುರಾಗದ ಗೀತೆಗೆ ದನಿಯಾಗೋಣವೇ..?


ಪ್ರೇಮದ ಯಾತ್ರೆಯಲ್ಲಿ ಜೊತೆಯಾದರೆ

ಅದುವೇ ಗೆಳೆಯಾ ಈ ಬಾಳಿಗೆ ಶ್ರೀರಕ್ಷೆಯು

ಪ್ರೇರಣೆಯ ಪ್ರೀತಿಯಲಿ ಒಂದಾದರೇ

ಅದುವೇ ಹೃದಯಕೆ ಒಲವಿನ ಚಿತ್ತಾರವು..


ಹಗಲಿರುಳು ಕಾಡಿದ ಬಣ್ಣದ ಕನಸಿಗೆ

ಉತ್ತರವೇ ಮಮತೆಯ ಬಂಧನವು

ಪ್ರೇಮದ ಈ ಹಾದಿಯಲಿ ಸಾಗುವುದೇ

ಈ ಬಾಳಿಗೆ ಆ ದೇವನ ವರವು..


ನೋಡು ಬಾ ಒಲವಿನ ಗೆಳೆಯನೇ

ಬಾನಲ್ಲಿ ಮೂಡಿದೆ ನಮ್ಮೊಲವ ರಂಗಿನ ಚಿತ್ತಾರವು

ಜೊತೆಯಾಗಿ ಉತ್ತರಿಸೋಣ ಬಾರೋ

ನನ್ನೊಲವಿನ ಸೌಜನ್ಯದ ಸರದಾರನೇ..!


ರಚನೆ: ರಾಮಚಂದ್ರ ಸಾಗರ್

ಚಿತ್ರ: ಸಂಭ್ರಮ ಶ್ರೀ