Sunday, 2 August 2020

ನೀನಲ್ಲವೆ ಗೆಳತಿ..


ಗೆಳತಿ..

ಮಲ್ಲಿಗೆಯ ಮಧುರ ಕಂಪಿನ ಘಮಲಿನ ಅಲೆಯಲಿ
ಪ್ರೀತಿಯ ಆಹ್ವಾನ ನೀಡಿದ ಕೋಮಲೆಯು ನೀನಲ್ಲವೆ
ಸೌರಭದ ಸವಿ ಜೇನಿನ ಮಂಟಪದಲಿ
ಮನಕೆ ಒಲವಿನ ಗಂಧಿಕೆ ಸವರಿದವಳು ನೀನಲ್ಲವೆ

ಪ್ರೇಮಾಮೃತದ ಹೂವಿನ ಮಳೆಯಲಿ
ಸೌಮ್ಯದ ನದಿಯಾಗಿ ಹರಿದವಳು ನೀನಲ್ಲವೆ
ಮೋಹದ ಅನುಪಮ ನಗುವಿನಲೆಯಲಿ
ಮನದ ದುಗುಡ ಕರಗಿಸಿದ ಕಾವ್ಯವು ನೀನಲ್ಲವೆ

ಸುಖದ ಕುಂಭವನು ಹೊತ್ತು
ದಾರಿಗೆ ಜೊತೆಯಾದವಳು ನೀನಲ್ಲವೆ
ಸುವರ್ಣದ ಸಂಭ್ರಮದ ಬದುಕನು
ಕೃಪೆಯಾಗಿಸಿದ ಕಾದಲೆಯು ನೀನಲ್ಲವೆ

ಅನುರಾಗದ ಆರಾಧ್ಯದಾ ಸ್ವರವನು
ಬಾಳಗೀತೆಯಾಗಿಸಿದ ಕೋಗಿಲೆಯು ನೀನಲ್ಲವೆ
ಕಾವಳದ ದುಗುಡದ ಕಂದರವನು
ಬೆಳಕಾಗಿಸಿದ ಕಿರಣವು ನೀನಲ್ಲವೆ

ಕಾಸಾರದ ತಿಳಿ ನೀರಿನಲಿ
ನಗುವ ಶಶಿಗೆ ಸೊಗಸಿನ ಸಿರಿಯು ನೀನಲ್ಲವೆ
ಸರೋವರದ ತಂಪಲೆಯ ಸುಖದಲಿ
ಅಕ್ಕರೆಯ ಸ್ವಾದವನು ಲೇಪಿಸಿದವಳು ನೀನಲ್ಲವೆ

ರಾಮಚಂದ್ರ ಸಾಗರ್ 

ಎಲ್ಲಿ, ಯಾರಿಂದ ತಪ್ಪಾಗಿದೆ?


(ಕಾಲ್ಪನಿಕ ಬರಹ)

ನಾನು ಅನೇಕ ವರ್ಷಗಳಿಂದ ಅಮೇರಿಕಾದಲ್ಲಿ ನೆಲೆಸಿರುವೆ. ಕೆಲವು ವರ್ಷಗಳಿಗೊಮ್ಮೆ ಆಗಾಗ್ಗೆ ಭಾರತಕ್ಕೆ ಬರುತ್ತಿದ್ದೆ. ಬರುವಾಗಲೆಲ್ಲಾ ಬಂಧು ಬಳಗದವರಿಗೆ, ಅಕ್ಕರೆಯ ಸ್ನೇಹಿತರಿಗೆ ಸಾಕಷ್ಟು ಉಡುಗೊರೆಗಳನ್ನು ತರುತ್ತಿದ್ದೆ. ಮುಖ್ಯವಾಗಿ ನಾನು ಅಮೇರಿಕಾದಲ್ಲಿ ಕೆಲಸಕ್ಕೆ ಸೇರಿದ ಮೇಲೆಯೇ ಊರಿನಲ್ಲಿದ್ದ ನನ್ನ ಕುಟುಂಬದವರು, ಬಳಗದವರು ಸಾಕಷ್ಟು ಚೇತರಿಕೆಯನ್ನು ಕಂಡರು. 
ಸಾಕಷ್ಟು ಭೂಮಿ ಇದ್ದರೂ ಅಭಿವೃದ್ಧಿ ಪಡಿಸಲು ಹಣಕಾಸಿನ ಕೊರತೆಯಿತ್ತು. ಅದೂ ಸಹಾ ನಾನು ನೀಡಿದ ಆರ್ಥಿಕ ಸಹಾಯದಿಂದಲೇ ನೆರವೇರಿತು. ಬೇಸಿಗೆಯಲ್ಲೂ ನೀರಿನ ವ್ಯವಸ್ಥೆಯಾಗಿ ಇಡೀ ಗದ್ದೆ ಮತ್ತು ತೋಟ ಹಸಿರಿನಿಂದ ನಳನಳಿಸುವಂತಾಯಿತು. ಇದ್ದ ಹಳೇ ಮನೆಯ ದುರಸ್ತಿಯನ್ನು ನಾನು ಕಳುಹಿಸುತ್ತಿದ್ದ ಹಣದಿಂದಲೇ ಮಾಡಿಸಿದರು. ಇದರ ನಡುವೆ ಅನೇಕ ಜನ ಸ್ನೇಹಿತರಿಗೆ ಹಣಕಾಸಿನ ನೆರವನ್ನು ಮಾಡಿದ್ದೆ. ಅದರಿಂದ ಅವರು ಸಹಾ ಉದ್ಯೋಗವನ್ನು ನಡೆಸಿ ಆರ್ಥಿಕವಾಗಿ ಸ್ವಲ್ಪ ಮಟ್ಟಿಗೆ ಸ್ವಾವಲಂಬಿಗಳಾಗಿದ್ದರು. 
ಏನಿಲ್ಲವೆಂದರೂ ವಾರದಲ್ಲಿ ಎರಡು ಮೂರು ಬಾರಿ ಊರಿನಿಂದ ನನಗೆ ಕರೆ ಬರುತ್ತಿತ್ತು. ಬಹಳ ಅಕ್ಕರೆಯಿಂದ ಮಾತನಾಡುತ್ತಿದ್ದರು. ಏನು ಕೇಳುವುದನ್ನು ಮರೆತರೂ ಮತ್ತೆ ಯಾವಾಗ ಊರಿಗೆ ಬರುತ್ತೀಯಾ? ಹೇಗಿದ್ದೀಯಾ? ಒಬ್ಬನೇ ಎಷ್ಟು ವರ್ಷವಂತ ಭ್ರಹ್ಮಚಾರಿಯಾಗಿ ಇರುತ್ತೀಯ? ಬೇಗನೇ ಮದುವೆಯಾಗು. ಈ ಬಾರಿ ನೀನು ಊರಿಗೆ ಬಂದಾಗ ಖಂಡಿತವಾಗಿ ನಿನ್ನ ಮದುವೆಯನ್ನು ಮಾಡಿಯೇ ತೀರುತ್ತೇವೆ. ನಿನ್ನ ಮನದ ಇಂಗಿತವನ್ನು ಈಡೇರಿಸುವ ಸೌಖ್ಯವತಿಯು ನಿನಗೆ ಒಲಿದು ಬರುತ್ತಾಳೆ. ಎಷ್ಟೇ ಆದರು ಹೂವಂತ ಮನದವನು ನೀನು. ನಿನಗೇ ಆ ದೇವರು ಖಂಡಿತವಾಗಿಯೂ ಉತ್ತಮ ಕನ್ಯೆಯನ್ನೇ ಕರುಣಿಸುತ್ತಾನೆ. ಈ ಬಾರಿ ನೀನು ಊರಿಗೆ ಬಂದರೆ ಒಂಟಿಯಾಗಿ ಅಮೇರಿಕಾಗೆ ಹಿಂತಿರುವುದಿಲ್ಲ. ಜೊತೆಯಾಗಿಯೇ ಹಿಂತಿರುಗುವೆ. ಇದು ಸತ್ಯ. ಎಲ್ಲದಕ್ಕೂ ಕಾಲ ಕೂಡಬೇಕು. ನೀನು ಊರಿಗೆ ಆದಷ್ಟು ಬೇಗ ಬಾ ಎಂದು ಎಲ್ಲರೂ ಅಕ್ಕರೆಯಿಂದ ಹಂಬಲಿಸುತ್ತಿದ್ದರು. 
ನನಗೂ ಇವರೆಲ್ಲರ ಮಾತನ್ನು ಕೇಳಿ ಆದಷ್ಟು ಬೇಗ ಊರಿಗೆ ಹೋಗಬೇಕೆನ್ನುವ ಆಸೆ ಅರಳಿತು. 

Friday, 1 May 2020

ಶ್ರಮದ ಯಾತ್ರೆ

ಎಲ್ಲಾ ದುಡಿವ ವರ್ಗಕ್ಕೂ ಕಾರ್ಮಿಕ ದಿನಾಚರಣೆಯ ಶುಭಾಶಯಗಳು
ದುಡಿವ ಕೈಗಳೇ ದೇಶದ ಅಭಿವೃದ್ಧಿಗೆ ಕಾರಣ. ಇವರಿಗೆ ಈ ದಿನ ಕಾರ್ಮಿಕ ದಿನಾಚರಣೆಯ ಶುಭಾಶಯಗಳನ್ನು ಕೋರುತ್ತಾ ಅವರ ಕಾರ್ಪಣ್ಯಗಳು ಕರಗಿ ಅವರ ಕುಟುಂಬಗಳು ಸಂತಸದ ಗೂಡಾಗಲಿ ಎಂದು ಆಶಿಸುತ್ತಾ "ಶ್ರಮದ ಯಾತ್ರೆ" ಎನ್ನುವ ಕವಿತೆ ಬರೆದಿರುವೆ...

ಶ್ರಮದ ಯಾತ್ರೆ

ದುಡಿವ ಕೈಗಳು ಬೇಡುವ ಕೈಗಳಾಗದಿರಲಿ
ನ್ಯಾಯದ ಕೂಳು ಕಳ್ಳಸಂತೆ ಸೇರದಿರಲಿ
ಅನ್ನಭಾಗ್ಯವು ಬಡವನ ಕುಟೀರ ತಲುಪಲಿ
ಹಸಿದ ಹೊಟ್ಟೆಯು ಗಂಜಿಯಾದರು ಸವಿಯಲಿ

ಶ್ರಮಿಕನ ಕಣ್ಣೀರಿಗೆ ಬೊಗಳೆ ಮಾತುಗಳೆ ಉತ್ತರವಾಗದಿರಲಿ
ನಿಜನಾಯಕರೆ ನಾಡಿನೆಲ್ಲೆಡೆ ಮುಂದಾಳಾಗಲಿ
ಕಾರ್ಪಣ್ಯ ಕರಗಿಸುವ ಪಣವು ಕಾಯಕವಾಗಲಿ
ಕಾಯಕದ ನಡಿಗೆಯು ಸಾರ್ಥಕ್ಯದ ಪಥವಾಗಲಿ

ಭರವಸೆ ಆಶ್ವಾಸನೆಗಳು ಭಾಷಣವಾಗಿಯೆ ಉಳಿಯದಿರಲಿ
ಕೊಟ್ಟ ಮಾತಿಗೆ ಮನಮಿಡಿಯುವ ಗುಣವು ಬೆಳೆಯಲಿ
ಅಧಿಕಾರದ ಗದ್ದುಗೆಯಲಿ ಕುಳಿತವರು
ಗತಿಸಿಹೋಗುವ ಅವಧಿಯೊಳಗೆ ಸತ್ಕಾರ್ಯವ ಮೊಳಗಿಸಲಿ

ಒಂದೆಡೆ ಹಸಿದ ಹೊಟ್ಟೆಯ ಯಾತನೆ
ಇನ್ನೊಂದೆಡೆ ಭ್ರಷ್ಟರ ದುರ್ವರ್ತನೆ
ಯೋಜನೆಗಳ ಫಲದ ಬುತ್ತಿಯ ಸವಿಯು
ಬಡವನ ನಾಲಿಗೆಗೆ ಎಟುಕುವುದೆಂದು?
ಉಳ್ಳವರು ಬಡವರ ಅನ್ನ ಲೋಟಿಗೈಯ್ಯುವುದು ತಡೆಯುವುದೆಂದು?

ಕಳ್ಳಸಂತೆಕೋರರ ಸಂಪತ್ತು ಸಮಾಜದ ಸ್ವತ್ತಾಗುವುದೆ
ಧನಿಕನ ಎದೆಯಲಿ ಕುರುಣೆಯು ಅರಳುವುದೆ
ಬಡವನ ಮನೆಯು ಜಗಮಗಿಸುವ ದೀಪಾವಳಿಯಾಗದಿದ್ದರು ಸರಿಯೆ
ಮೂರೊತ್ತು ಗಂಜಿಗೆ ಬರವಿಲ್ಲದ ಆಲಯವಾಗುವುದೆ?

ಬೆವರು ಹನಿಗಳು ವ್ಯರ್ಥದ ಹೊಳೆಯಾಗದಿರಲಿ
ನಿಸ್ವಾರ್ಥದ ಮನಗಳು ನಾಡಿನೆಲ್ಲೆಡೆ ಬೆಸೆಯಲಿ
ಶ್ರಮದ ಯಾತ್ರೆಗೆ ವೈಭವದ ಯಶ ಲಭಿಸಲಿ
ಭವ್ಯದ ನಾಡಿಗೆ ಸಾರಥಿಗಳಿವರೆ ಗೌರವಿಸಿ


ರಾಮಚಂದ್ರ ಸಾಗರ್


Friday, 14 February 2020

ಕ್ಷಮಿಸಿ ಬಿಡಿ ಯೋಧರೇ.

ಇಂದು ಪುಲ್ವಾಮ ದಾಳಿ ನಡೆದ ದಿನ. ಈ ದಿನ ನಮ್ಮ ನೆಲದಲ್ಲಿ ಉಗ್ರರ ಅಟ್ಟಹಾಸಕ್ಕೆ ನಮ್ಮ ಯೋಧರು ಬಲಿಯಾದರು. ಪ್ರೀತಿಯ ದಿನಾಚರಣೆಯ ದಿನವೇ ಹಿಂಸೆಯ ನರ್ತನವಾಗಿ ಪ್ರೀತಿಯೆ ಕೊಲೆಯಾದ ದಿನವಿದು. ಹಿಂಸೆಯನ್ನು ಹಿಂಸೆಯಿಂದಲೇ ಕೊನೆಯಾಗಿಸಿ ಶಾಂತಿ ನಿರ್ಮಾಣ ಮಾಡುವುದು ಕೆಲವೊಮ್ಮೆ ಅನಿವಾಯೌವಾಗುತ್ತದೆ. ಮನುಷ್ಯ ತಪ್ಪು ಮಾಡಿದಾಗ ಆತನಿಗ ಬುದ್ಧಿ ಹೇಲಿ ಸರಿಯಾದ ದಾರಿಗೆ ತರಬಹುದು ಆದರೆ ಮಾನವೀಯ ಗುಣಗಳನ್ನೇ ಕಳೆದುಕೊಂಡು ತಲೆಮಾಸಿದವನು ಮಾನವನ ರೂಪದಲ್ಲಿ ಇರುತ್ತಾನೆಯೇ ಹೊರತು ಆತ ಮಾನವನಲ್ಲ! ಆದ್ದರಿಂದ ಅಂತಹವರನ್ನು ಕೊನೆಯಾಗಿಸಿ ಶಾಂತಿ ನಿರ್ಮಿಸುವುದೇ ಅನಿವಾರ್ಯವೆನ್ನುತ್ತಾ ಪುಲ್ವಾಮ ದಾಳಿಯಲ್ಲಿ ಅಮರರಾದ ಯೋಧರನ್ನು ನೆನೆಯುತ್ತಾ "ಕ್ಷಮಿಸಿ ಬಿಡಿ ಯೋಧರೇ" ಎನ್ನುವ ಗದ್ಯ ಪದ್ಯವನ್ನು ಬರೆದಿದ್ದೇನೆ..ಇಷ್ಟವಾದರೆ ಶೇರ್ ಮಾಡಿ..

ಕ್ಷಮಿಸಿ ಬಿಡಿ ಯೋಧರೇ.

ಪ್ರೀತಿಯ ಕಡಲಿನ ಉಬ್ಬರದಲ್ಲಿ
ಜಗವೆಲ್ಲ ತೋಯ್ದ ದಿನದಲ್ಲಿ
ರಕ್ತತ ಹೊಳೆ ಹರಿಸಿದ ರಕ್ಕಸರ ನೆನೆದಾಗ
ಪುಲ್ವಾಮದ ಕರಾಳತೆಯ ನೆನಪು 
ಮತ್ತೆ ಮತ್ತೆ ಮಾರ್ದನಿಸಿದಾಗ ನನ್ನೆದೆಯಲ್ಲಿ
ಕ್ರೌರ್ಯತೆಯ ಬಿಂಬದ ದೆವ್ವವು 
ಅಣಕಿಸುತ ಗಹಗಹಿಸಿ ಕುಣಿವಾಗ
ನಿಮ್ಮ ನೆನಪು ಕೇವಲ ನೆನಪಾದರೆ ಸಾಕೆ?

 ಎಡ-ಬಲದ ಬಡಿದಾಟದಲ್ಲಿ
ದೇಶದುದ್ದ ಚರ್ಚೆಯಾಗಿದ್ದಾದರೂ
 ನಿಮ್ಮ ಕುಟುಂಬದ ಆರ್ತನಾದ 
ಇನ್ನೂ ಮುಗಿಯದೇ
ಕೇವಲ ಕಪಟಿಗಳೆ 
ಮುಗಿಬಿದ್ದು ಕುಣಿವಾಗ
ನೈಜತೆಯ ನಿಮ್ಮ ದೇಶ ಪ್ರೇಮದ ಋಣಕೆ
ನಿಮ್ಮಂತೆ ನಾನು ರೋಧಿಸುತ ಕೂರುವುದೆ?

ಹಗಲು ರಾತ್ರಿಗಳು ಅರಿವಿಗೆ ಬಾರದೆ
ದೇಶಾಭಿಮಾನವೆ ಉಸಿರಾಗಿಸಿ ಅಮರರಾದವರು ನೀವು
ನಿಮ್ಮಂತೆ ನಾವು ನಮ್ಮಂತೆ ನೀವೆಂದು
ಹೆಗಲಿಗೆ ಹೆಗಲುಕೊಟ್ಟು ನಡೆದರೆ ಸಾಕೇನು?
ಆದರ್ಶಗಳ ಪಾಲನೆಯು ಬಾಷಣಕೆ ಮಿತಿಯೇನು?

ಏನಾದರೇನು ಸ್ವಾಮಿ
ಬೆಂಬಿಡದೆ ಕಾಡುವ ರಕ್ಕಸರಿಗೆ ಕೊನೆಹಾಡದೆ
ಜಟಿಲ ಸಮಸ್ಯೆಗಳ ಜೀವಂತವಿಟ್ಟರೆ
ಕಂಬನಿಗಳ ಮಳೆಯು ಸುರಿಯದೆ ಇರುವುದೆ?

ಶಾಂತಿಗೆ ಹಿಂಸೆಯು ಅನಿವಾರ್ಯವೆ ಎನುವಾಗ
ಮುಗ್ಧರ ಜೀವವು ಕ್ಷಣವು ಕ್ಷಣವು ಗತಿಸುವಾಗ
ಯಾರಪ್ಪಣೆಗೆ ಕಾಯಬೇಕಿದೆ?
ಮೌನದಿ ಯಾರನ್ನು ಮೆಚ್ಚಿಸಬೇಕು
ಅಮರರಾದವರ ಆತ್ಮಕೆ ತುಸು ಶಾಂತಿಯನು
ನೀಡಲೇಬೇಕು..
ಪ್ರೀತಿಯ ಬದುಕಿಗೆ ಸಾರ್ಥಕ್ಯ ಕೊಡಲೇಬೆಕು.
ಅಲ್ಲಿಯವರೆಗು ನಮ್ಮ ಕ್ಷಮಿಸಿಬಿಡಿ ಯೋಧರೇ

ರಾಮಚಂದ್ರ ಸಾಗರ್