Tuesday, 11 February 2020

ಅಭಯದ ವಚನವು

ಗೆಳೆಯ..
ನಿನ್ನ ಮಮತೆಯ ಅಪ್ಪುಗೆಯೆ
ಬಾಳಿಗೆ ಅಭಯದ ವಚನವಾಗಲಿ
ನಿನ್ನ ಸೌಜನ್ಯದ ಕೈಸೆರೆಯೆ
ಹೃದಯಕೆ ಸಂಭ್ರಮದ ಸತ್ಕಾರವಾಗಲಿ

ನಿನ್ನ ಸನ್ನಿಧಾನದ ಸಖ್ಯವೆ
ಹೊಂಗನಸಿನ ಸಿಂಗಾರದ ಕಡಲಾಗಲಿ
ನಿನ್ನ ಮೋಹದ ಸಂಕೋಲೆಯೆ
ಸ್ವರ್ಗದ ಸುಭಗ ಸಾಕ್ಷಾತ್ಕಾರವಾಗಲಿ

ನಿನ್ನ ವಿನಯದ ವೈಭವದ ಹಾದಿಯೆ
ಅಕ್ಕರೆಯ ಶುಭದ ಪಯಣವಾಗಲಿ
ನಿನ್ನ ಸ್ನೇಹದ ನಲ್ಮೆಯ ಅಲೆಯೆ
ಆನಂದದ ಅಭಿಷೇಕದ ಮಳೆಯಾಗಲಿ

ನಮ್ಮ ಪ್ರೇಮದ ಸಮಾಗಮವೆ
ನಿತ್ಯ ಕಂಪಿಸುವ ಸೌಗಂಧವಾಗಲಿ
ನಮ್ಮ ಆನಂದದ ಆಲಯವೆ
ಪ್ರೀತಿಯ ಸುಯೋಗದ ಮಂದಿರವಾಗಲಿ

ನಮ್ಮೊಲವಿನ ಪಾವನ ಬಂಧನವೆ
ಆಹ್ಲಾದದ ಆಸ್ವಾದ ಆಸ್ಥಾನವಾಗಲಿ
ಸುಖದ ಬಾಳಿನ ಆಖ್ಯಾನವೆ
ತ್ಯಾಗ ನಿಸ್ವಾರ್ಥದ ನಮ್ಮೊಲವಿನ 
ಬಲವಾಗಲಿ ಗೆಳೆಯ..
ರಾಮಚಂದ್ರ ಸಾಗರ್


Thursday, 16 January 2020

ಪ್ರತಿಲಿಪಿಯ ಉಡುಗೊರೆಯೊಂದಿಗೆ ಮೇಳೈಸಿದ ಸಂಕ್ರಾಂತಿ

ಈ ವರ್ಷದ ಮೊದಲ ಬಹುಮಾನ ಪ್ರತಿಲಿಪಿ ಕನ್ನಡದಿಂದ ಒಲಿದು ಬಂದಿದೆ. ಅದು ಕೂಡ ಸಂಕ್ರಾಂತಿಯ ಸಂಭ್ರಮದ ಜೊತೆಗೆ ಒಗ್ಗೂಡಿದ್ದು ನನಗೆ ಇನ್ನಷ್ಟು ಖುಷಿಗೆ ಕಾರಣವಾಗಿದೆ. ಇವೆಲ್ಲವೂ ಅಕ್ಕರೆಯ ಓದುಗರ ಹಾರೈಕೆಯೆನ್ನುವುದು ನನ್ನ ಮನದ ಇಂಗಿತ. ನನ್ನ ಬರಹಗಳನ್ನು ಪ್ರೀತಿಯಿಂದ ಓದಿ ಹಾರೈಸುವವರ ಆಶೀರ್ವಾದ ಎಲ್ಲಿಯವರೆಗೆ ಇರುತ್ತದೋ ಅಲ್ಲಿಯವರೆಗೆ ನನಗೆ ಬಹುಮಾನಗಳಿಗೆ ಕೊರತೆಯಿಲ್ಲ ಎನ್ನುವುದು ನನ್ನ ನಂಬಿಕೆ. ಈ ಸುಸಮಯಕ್ಕೆ ಕಾರಣವಾದ "ಪ್ರತಿಲಿಪಿ ಕನ್ನಡ" ಹಾಗೂ ಪ್ರತಿಲಿಪಿ ಸಿಬ್ಬಂದಿಗಳಿಗೂ ಧನ್ಯವಾದಗಳನ್ನು ಅರ್ಪಿಸುವೆ..

ರಾಮಚಂದ್ರ ಸಾಗರ್


Wednesday, 15 January 2020

ಸಂಕ್ರಮಣವಾಗಲಿ..

ನನ್ನೆಲ್ಲಾ ಸಹೋದರ ಬಂಧುಗಳಿಗೂ ಸಂಕ್ರಾಂತಿಯ ಶುಭಾಶಯಗಳು..ಈ ವರ್ಷದ ಮೊದಲ ಹಬ್ಬ ಸಂಕ್ರಾಂತಿಯು ನಿಮ್ಮೆಲ್ಲರ ಬಾಳಲಿ ಪ್ರಗತಿಯನ್ನು ಸಿಂಚಿಸಿ, ಹೊಸತನವನ್ನು ಮೂಡಿಸಲೆಂದು ದೇವರಲ್ಲಿ ಪ್ರಾರ್ಥಿಸುತ್ತಾ...."ಸಂಕ್ರಮಣವಾಗಲಿ "ಕವಿತೆ ಬರೆದಿರುವೆ..ಎಲ್ಲರಿಗೂ ಮತ್ತೊಮ್ಮೆ ಸಂಕ್ರಾಂತಿಯ ಶುಭಾಶಯಗಳು..

ಸಂಕ್ರಮಣವಾಗಲಿ..

ಎಳ್ಳು ಎಂಬ ಸ್ನೇಹವು
ಬೆಲ್ಲ ಎಂಬ ಪ್ರೀತಿಯು
ಮನ ಮನಗಳ ಬೆಸೆಯಲಿ
ಸಹೋದರತೆಯ ಬಂಧದಲಿ
ಈ ಸಮಯದೀ
ಸೌಹಾರ್ದ ಸಂಕ್ರಮಣವು ಸಂಭ್ರಮಿಸಲಿ..

ವಿರಸದ ಮನಸು ಮರೆಯಾಗಲಿ
ಕಹಿ ಘಳಿಗೆಯು ಕಾಡದಿರಲಿ
ವಿಮೋಹ ದುರಾಸೆ ದೂರಾಗಲಿ
ಈ ಸಮಯದೀ
ಸಂಪನ್ನ ಮನಗಳ ಸಂಕ್ರಮಣವಾಗಲಿ..

ದ್ವೇಷ ಅಸೂಯೆಗಳು ದೂರಾಗಲಿ
ಸ್ನೇಹ ಎಲ್ಲರೆದೆಯ ಗೂಡಾಗಲಿ
ಸಖ್ಯ ಸಮಾಗಮ ಚಿರಾಯುವಾಗಲಿ
ಈ ಸುಸಮಯದೀ
ಗೆಳೆತನದ ಸಂಕ್ರಮಣವಾಗಲಿ..

ವಿಘ್ನ ಬದುಕಲಿ ಬಾರದಿರಲಿ
ಸವೆ ಬಾಳಲಿ ಕಾಡದಿರಲಿ
ಬವಣೆ ಯಾರನು ಮುಟ್ಟದಿರಲಿ
ರೋಧನೆ ಯಾರಿಗೂ ತಟ್ಟದಿರಲಿ
ಈ ಸಮಯದೀ
ಸಂತಸದ ಸಂಕ್ರಮಣವಾಗಲಿ..

ಬಾಂಧವ್ಯಗಳು ಚಿಗುರೊಡೆಯಲಿ
ಬಂಧುರ ಜಗದ ವಿಕ್ರಮವಾಗಲಿ
ಇನನ ಹೊಳಪಿನಲಿ
ವಸುಂಧರೆಯ ಮಡಿಲು
ಈ ಸುಸಮಯದೀ
ಪ್ರೀತಿಯ ಸಂಕ್ರಮಣವಾಗಲಿ..

ರಚನೆ: ರಾಮಚಂದ್ರ ಸಾಗರ್

Tuesday, 1 October 2019

ನೀ ಪ್ರೇಮಶರಧಿಯು

ನಿನ್ನ ಸಿರಿತನದ ಸೌಭಾಗ್ಯದ ನಗುವೆ
ಸಡಗರವು ಅನುದಿನವು ಈ ಬಾಳಲಿ
ನಿನ್ನ ಸಿಂಗಾರದ ಮೋಹದ ಮೊಗವೆ
ಸೌಖ್ಯದ ಚಿಲುಮೆಯು ಈ ಜೀವದಲಿ

ನಿನ್ನ ಮುಡಿಯ ಮಲ್ಲಿಗೆಯ ಸೌಗಂಧವೆ
ಘಮ ಘಮಿಸುವ ಪ್ರೇಮವು ಈ ಜಗದಲಿ
ನಿನ್ನ ಸಿಂದೂರದ ರಂಗಿನ ಹೊಳಪೆ
ಘನಿಸುವ ಒಲವಿನ ಬಣ್ಣವು ಈ ಮನದಲಿ

ನಿನ್ನ ಮುಂಗುರುಳ ಸೌಮ್ಯದ ಲಾಲಿತ್ಯವೆ
ಪ್ರೇಮದ ಹೂಬನಕೆ ನೀಡಿದ ಆಮಂತ್ರಣವು
ನಿನ್ನ ತುಟಿಯಂಚಿನ ಮೆಲು ನುಡಿಯೆ
ಪ್ರೇರಣೆಯ ಬಾಳಿನ ಸಾಕ್ಷಾತ್ಕಾರದ ಆಲಾಪವು

ನಿನ್ನ ಹಸಿರುಡುಗೆಯ ಸೊಬಗಿನ ಚೆಲುವೆ
ಸೌಂದರ್ಯ ಜಗದ ಅನುಪಮ ಬೆಡಗು
ನಿನ್ನ ಕೈಬಳೆಗಳ ಇಂಪಾದ ದನಿಯೆ
ಅನುರಾಗದ ಸ್ವರಮೇಳದ ಕೀರ್ತನೆಯು

ನಿನ್ನ ಕೋಮಲ ನಡಿಗೆಯ ಸಾರಥ್ಯವೆ
ವೈಭವದ ಹಾದಿಯ ಸಂತಸದ ಸಿಂಚನವು
ನಿನ್ನ ಕಿರುನೋಟದ ಸಜ್ಜನಿಕೆಯ ಆಹ್ವಾನವೆ
ನನ್ನೆದೆಯಲಿ ಪ್ರೇಮಶರಧಿಯ ಉಬ್ಬರಕೆ ಕಾರಣವು

 ರಾಮಚಂದ್ರ ಸಾಗರ್