ಇನನ ರಶ್ಮಿಗಳ ಓರಣದಲಿ
ಹಕ್ಕಿಗಳ ಸವಿಗಾನದಲಿ
ತಂಗಾಳಿಯ ಹಿತಧಾರೆಯಲಿ
ಮುಂಜಾವಿನ ಘಳಿಗೆಯಲಿ
ಹೊಸತನವು ಅರಳಲಿ
ಹೃದಯದ ಗೂಡಲಿ
ಸ್ನೇಹ ಭವನೆಯು ಹಾಡಾಗಲಿ
ಸಾಗುವ ಹಾದಿಯಲಿ
ಸತ್ಯವು ಜೊತೆಯಾಗಲಿ
ಮಿಥ್ಯವು ಕಾಡದಿರಲಿ
ನೋಡುವ ನೋಟದಲಿ
ನಿಷ್ಕಲ್ಮಷ ಗುಣವಿರಲಿ
ನುಡಿಯುವ ಪದಗಳಲಿ
ಸಚ್ಚರಿತ ಸಾರವಿರಲಿ
ಸುಜ್ಞಾನದ ಬಲವಿರಲಿ
ಗುನುಗುವ ಸ್ವರದಲಿ
ಭಾವೈಕ್ಯದ ನಿನದವಿರಲಿ
ಹೊಂಬಣ್ಣದ ರಂಗಲಿ
ಸ್ನೇಹವು ತೇರಾಗಲಿ
ಸಹಿಷ್ಣುತೆಯು ದೈವವಾಗಲಿ
ನಿಸ್ವಾರ್ಥದ ಇಂಧನದಲಿ
ಸದ್ಗತಿಯ ನೌಕೆ ಮುನ್ನಡೆಯಲಿ
ಶಾಂತಿಯ ನೆಲೆಯಲಿ
ಜಗದೊಲವು ಮೇಳೈಸಲಿ
ಸಂಪ್ರೀತಿಯು ಉಸಿರಾಗಲಿ
ಭರವಸೆಯ ಕಿರಣದಲಿ
ಬಂಧುರ ಜಗವರಳಲಿ
ಹರುಷದ ಗುಡಿಯಲಿ
ಜಗವು ನಲಿದಾಡಲಿ
ಮನ ಮನಗಳು ಸಂಭ್ರಮಿಸಲಿ
ರಾಮಚಂದ್ರ ಸಾಗರ್
ವರ್ಧಿಸುವ ಯುಗದಲಿ ಮೈಮರೆತು
ವಾರ್ಧಕ್ಯದ ಕಾಲದಲಿ ಕೊರಗದಿರು
ವಿಕ್ರಮತೆಯ ಹಾದಿಯಲಿ ಪರಾಕ್ರಮಿಸು
ವೀರತ್ವದ ಜಲಧಿಯಲಿ ಅಲೆಯಾಗು
ಉನ್ಮಾದ ಕನಸಿನಲಿ ಮೈಮರೆಯದಿರು
ಊರ್ಜಸ್ವಿ ಬಾಳ್ವೆಯಲಿ ಮೇಳೈಸುತಿರು
ವೃದ್ಧಿಸುವ ಸತ್ಯದಲೆಯಲಿ ಉಸಿರಾಡು
ವೆಗ್ಗಳಿಕೆಯ ಮನದಲಿ ಬೆಳಗುತಿರು
ವೇದನೆಯ ಜಗದಲಿ ಬೆದರದಿರು
ವೈಪುಲ್ಯದ ಘಳಿಗೆಯಲಿ ಕೊರಗದಿರು
ಒಳ್ನುಡಿ ಹರಿವಿನಲಿ ಚತುರನಾಗು
ಓಜಸ್ಸು ಪ್ರೀತಿಯಲಿ ಜನದನಿಯಾಗು
ಔದಾರ್ಯ ಸ್ನೇಹದಲಿ ಜಗ ಜಯಿಸು
ವಂದಿಸುವ ಗುಣದಲಿ ಮನ ರಮಿಸು
ವಸುಧೆಯ ಗುಡಿಯಲಿ ಭಕ್ತನಾಗು
ವಾತ್ಸಲ್ಯದ ಸ್ವರದಲಿ ಆರಾಧಿಸು
ವಿನಯದ ತೇರಲಿ ಮುನ್ನುಗ್ಗುತಿರುರು
ವಿಲಾಸದ ಮಮತೆಯಲಿ ಬಂಧಿಯಾಗು
ವಿಶಾರದ ಜ್ಞಾನದ ದೀಪವಾಗು
ವಿಶ್ವಾಸದ ಭರವಸೆಯ ಬಿಂಬವಾಗು
ರಾಮಚಂದ್ರ ಸಾಗರ್
ಗೆಳತಿ..
ಪ್ರೀತಿಯ ಕಡಲಿಗೆ ನೀ ಕೈಬೀಸಿ ಕರೆದಾಗ
ಪ್ರೇಮದಲೆಯಲಿ ಹೃದಯ ನಲಿದಂತೆ
ನೀಲಿ ಬಾನಿಗೆ ನೀ ಕೈತೋರಿ ನಗುವಾಗ
ಸೌಭಾಗ್ಯದ ಸ್ವರ್ಗವು ದರ್ಶನವಾದಂತೆ
ಪ್ರೇಮದ ಬೆಳಕಿಗೆ ನೀ ಕೈದೀಪವಾದಾಗ
ಒಲುಮೆಯ ಬಾಳು ನಿತ್ಯ ಬೆಳಗಿದಂತೆ
ಮಮತೆಯ ಬಂಧಕೆ ನೀ ಮೈತ್ರಿಯಾದಾಗ
ಸ್ನೇಹದ ಪಥವು ಸಾಗುವ ಜಗವಾದಂತೆ
ಒಲವ ರಂಗು ನೀ ಬಾಳಿಗೆ ಬಳಿದಾಗ
ನಿನ್ನೊಲವ ರಂಗಲಿ ಮೈಮನ ರಂಗೇರಿದಂತೆ
ಇನಿದಾದ ದನಿಯಲಿ ನೀ ದನಿಸುವಾಗ
ಮಧುರ ಮಂಟಪಲಿ ನೀ ಜೊತೆಯಾದಂತೆ
ಮಂಗಳದ ಘಳಿಗೆಗೆ ನೀ ಶುಭದ ಸುದೈವವಾದಾಗ
ಶುಭದ ನೌಕೆಯಲಿ ನೀ ಸಾರಥಿಯಾದಂತೆ
ಕಡಲತಡಿಯಲಿ ನೀ ಸುಳಿದಾಡುವ ತಂಗಾಳಿಯಾದಾಗ
ಕಡಲ ಕಿನಾರೆಯಲಿ ನೀ ರಮಿಸುವ ರಮಣಿಯಾದಂತೆ
ಸೌಜನ್ಯದ ಹೆಜ್ಜೆಯಲಿ ನೀ ನನ್ನೆಡೆ ಬಂದಾಗ
ಸಜ್ಜನಿಕೆಯ ಸೌಜನ್ಯವತಿ ಬಾಳಿಗೆ ಸತ್ಕರಿಸಿದಂತೆ
ಸಡಗರದ ಪ್ರೀತಿಯ ಮೇನೆಗೆ ನೀ ಸಿಂಗಾರವಾದಾಗ
ಪ್ರೇಮದ ಕಡಲಿನಲಿ ಉಬ್ಬರವಾದಂತೆ
ರಾಮಚಂದ್ರ ಸಾಗರ್
ಗೆಳತೀ..
ನಿನ್ನೊಲವ ಪ್ರೇಮದ ಕೊಡುಗೆಯೇ
ನಾ ನಲಿವ ಮೋಹದ ಕಡಲಾಗಿದೆ
ನೀ ಮುದ್ದಿಸುವ ಸವಿ ಘಳಿಗೆಯೇ
ನಾ ಸಂಭ್ರಮಿಸುವ ಜಗವಾಗಿದೆ
ನೀ ನೀಡಿದ ಮಮತೆಯ ಮುತ್ತು
ಮನಕೆ ಸಂತಸ ಮಳೆಯಾಗಿದೆ
ನಿನ್ನೊಲುಮೆ ಅಕ್ಕರೆಯ ಅಪ್ಪುಗೆಯೆ
ವೈಭವದ ಬಾಳಿಗೆ ಅಭಯವಾಗಿದೆ
ನೀ ತೋರುವ ಪ್ರೀತಿಯ ಪರಿಯೆ
ನೀಲಾಗಾಸದ ಪರಿಧಿಗು ಮಿಗಿಲು
ನಿನ್ನೊಲವ ಸಂತಸದ ಕೈಸೆರೆಯೆ
ಸೌಖ್ಯದ ಅರಮನೆಯ ವಾಸವು
ನಿನ್ನ ತುಂಟ ಸವಿನೋಟದ ಹಿತವೇ
ಹೃದಯಕೆ ರಮಿಸುವ ಸಂಜೀವಿನಿಯು
ನಿನ್ನ ಸಾರಥ್ಯದ ಕೋಮಲ ಜಗವೇ
ಸೌಂದರ್ಯ ಚಿಲುಮೆಯ ಮಂಟಪವು
ನಿನ್ನ ಬಿನ್ನಾಣದ ನಗುವಿನ ಫಲವೇ
ಅಮಲೇರಿಸುವ ಕನಸಿಗೆ ಕಾರಣವು
ನಿನ್ನ ಪ್ರೀತಿಯ ಸವಿ ಬಂಧನವೇ
ಬಾಳೆಲ್ಲ ನಾ ಬೇಡುವ ವರವು
ರಾಮಚಂದ್ರ ಸಾಗರ್