Monday, 15 July 2019

ಭರವಸೆಯ ಬಿಂಬವಾಗು

ವರ್ಧಿಸುವ ಯುಗದಲಿ ಮೈಮರೆತು
ವಾರ್ಧಕ್ಯದ ಕಾಲದಲಿ ಕೊರಗದಿರು
ವಿಕ್ರಮತೆಯ ಹಾದಿಯಲಿ ಪರಾಕ್ರಮಿಸು
ವೀರತ್ವದ ಜಲಧಿಯಲಿ ಅಲೆಯಾಗು

ಉನ್ಮಾದ ಕನಸಿನಲಿ ಮೈಮರೆಯದಿರು
ಊರ್ಜಸ್ವಿ ಬಾಳ್ವೆಯಲಿ ಮೇಳೈಸುತಿರು
ವೃದ್ಧಿಸುವ ಸತ್ಯದಲೆಯಲಿ ಉಸಿರಾಡು
ವೆಗ್ಗಳಿಕೆಯ ಮನದಲಿ ಬೆಳಗುತಿರು

ವೇದನೆಯ ಜಗದಲಿ ಬೆದರದಿರು
ವೈಪುಲ್ಯದ ಘಳಿಗೆಯಲಿ ಕೊರಗದಿರು
ಒಳ್ನುಡಿ ಹರಿವಿನಲಿ ಚತುರನಾಗು
ಓಜಸ್ಸು ಪ್ರೀತಿಯಲಿ ಜನದನಿಯಾಗು

ಔದಾರ್ಯ ಸ್ನೇಹದಲಿ ಜಗ ಜಯಿಸು
ವಂದಿಸುವ ಗುಣದಲಿ ಮನ ರಮಿಸು
ವಸುಧೆಯ ಗುಡಿಯಲಿ ಭಕ್ತನಾಗು
ವಾತ್ಸಲ್ಯದ ಸ್ವರದಲಿ ಆರಾಧಿಸು

ವಿನಯದ ತೇರಲಿ ಮುನ್ನುಗ್ಗುತಿರುರು
ವಿಲಾಸದ ಮಮತೆಯಲಿ ಬಂಧಿಯಾಗು
ವಿಶಾರದ ಜ್ಞಾನದ ದೀಪವಾಗು
ವಿಶ್ವಾಸದ ಭರವಸೆಯ ಬಿಂಬವಾಗು

ರಾಮಚಂದ್ರ ಸಾಗರ್