Saturday, 6 April 2019

ಯುಗಾದಿ

ಎಲ್ಲಾ ಸಹೋದರ ಬಂಧುಗಳಿಗೂ ಯುಗಾದಿಯ ಶುಭಾಶಯಗಳು. ಚಂದ್ರಮಾನ ಯುಗಾದಿಯು ಎಲ್ಲರ ಬಾಳಲು ಆರೋಗ್ಯ, ನಗು, ಸಂಪತ್ತು, ಸಹಬಾಳ್ವೆಯನ್ನು ಕರುಣಿಸಲಿ..ಎಲ್ಲರ ಬಾಳು ಬೆಳಗಲಿ ಎಂದು ಆಶಿಸಿ ಯುಗಾದಿ ಕವಿತೆ ಬರೆದಿರುವೆ..ಎಲ್ಲರಿಗು ಯುಗಾದಿಯ ಶುಭಾಶಯಗಳು..

ಯುಗಾದಿ

ಕಹಿಯ ಬವಣೆ ಕರಗಲು
ಸಿಹಿಯ ಬದುಕು ಅರಳಲು
ಮನ ಮನಗಳಲಿ ಯುಗಾದಿ
ಹಚ್ಚಬೇಕಿದೆ ಹೊಸ ದೀವಟಿ

ಚೈತ್ರಮಾಸದ ಹೊಸದಿನ
ಕರೆತರಲಿ ಹೊಸತನ
ಎಲ್ಲರೆದೆಯ ಬೆಳಗಲು
ಉದಯಿಸಲಿ ಬಂಧುತ್ಯ

ರವಿ ಚಂದ್ರರ ಗತಿಯಲಿ
ಬಾನು ಭುವಿಯ ಪರಿಧಿಯಲಿ
ಬದಲಾಗುವ ಘಳಿಗೆಯಲಿ
ಮರೆಯಾಗಲಿ ಮತ್ಸರ
ಯುಗಾದಿ ತರಲಿ ಸಂತಸ

ಅರೆ ನಿಮಿಷವಾದರು
ಅನ್ಯರ ಮನ ನೋಯಿಸದಿರು
ಕಹಿಯ ಮನಸು ಅರಳಿಸಿ
ಹರುಷದ ಗೂಡಾಗು
ಸ್ನೇಹದ ಜಗವಾಗು

ವರುಷಗಳ ಆಯುಷ್ಯ
ಕರಗದಿರಲಿ ವ್ಯರ್ಥ
ಅಂತ್ಯವಾಗುವ ಮುನ್ನ
ಗಳಿಸು ತುಸು ಸಂಪನ್ನತೆ
ಸಿಹಿಯಾದಿಯಾಗಲಿ ತನು ಮನ

ರಾಮಚಂದ್ರ ಸಾಗರ್

Wednesday, 3 April 2019

ಪ್ರೇಮದ ಕಡಲಾಗು ಬಾ

ಗೆಳತಿ..
ತಪಿಸುತಿದೆ ಹೃದಯ ಬಾಳೆಲ್ಲ ನಿನ್ನೊಲವ ನಗುವನು
ತಾರುಣ್ಯ ಕನಸುಗಳನು ಸಂತೈಸುವ ಸುಯೋಗವನು
ತಿಂಗಳು ಬೆಳಕಿನಲಿ ರಮಿಸುವ ನಿನ್ನಾಸರೆಯನು
ತೀರದ ಪ್ರೀತಿಯ ಪಡೆಯುವ ಬಯಕೆಯನು

ತುಡಿಯುವ ಹೃದಯಕೆ ಆಸರೆಯ ಬಂಧವನು
ತೂಗುವ ಹೂಲತೆಯಂತೆ ಬಾಳಿಗೆ ಚೆಲುವನು
ತೃಷೆಯ ಮನಕೆ ಒಲಿವ ಒಲುಮೆಯ ವರವನು
ತೆಗಳುವ ಜಗಕೆ ಸೋಲಿಸುವ ಯೋಧೆಯನು

ತೇಜಸ್ಸು ಪ್ರೀತಿಯಲಿ ಬೆಳಗುವ ತೇಜಸ್ವಿನಿಯು
ತೈಲ ಚಿತ್ರದಲಿ ಹೊಳೆವ ತಾರೆಯನು
ತೊಳಲಾಟದ ಇರುಳಲಿ ರಂಜಿಸುವ ರತಿಯನು
ತೋಚುವ ಕ್ಷಣದಲಿ ಜೊತೆ ನಲಿವ ಗೆಳತಿಯನು

ತವಳಿಸಿದ ಪ್ರೇಮ ಮಹಲಿಗೆ ಪುನರುತ್ಥಾನವಾದವಳು
ತಂಗದಿರನ ತಂಬೆಳಕನು ಬಾಳಿಗೆ ತುಂಬಿದವಳು
ತಂಪಿರುಳು ವೇಳೆಯಲಿ ನಗುವ ನೈದಿಲೆಯಾದವಳು
ತಹತಹಿಸುವ ದಾರಿಯಲಿ ಕೈಹಿಡಿದ 
ಅಭಯದಾ ಪೋರಿಯನು

ತನ್ಮಯತೆ ಪ್ರೀತಿಯಲಿ ಬಾಳಿನುದ್ದ ಅಲೆಯಾಗಿಸಿದವಳು
ತಾರತಮ್ಯ ಬಾಳಲಿ ಮೂಡದಂತೆ ಕಾಪಿಡುವ ಜೀವವು
ತಿಳಿ ಕೊಳದ ಮನದಲಿ ನಗುವ ಕುಸುಮವಾದವಳು
ತೀರದ ಪ್ರೇಮದ ಕಡಲಾಗಿ ಬಾಳೆಲ್ಲ ನಲಿಸುವ 
ಗೆಳತಿಯು ನೀನಾಗು ಬಾ

ರಾಮಚಂದ್ರ ಸಾಗರ್

Saturday, 30 March 2019

ಸೌಂದರ್ಯದ ಹಾದಿಯು

ಗೆಳತಿ..
ನಗು ನಲಿವ ನಿನ್ನ ಮೋಹದ ಮೊಗವೇ
ನಾ ಬಯಸುವ ಪ್ರೀತಿಯ ಚಿಲುಮೆಯು
ನಿರುಪಮ ಪ್ರೀತಿಯ ಸವಿ ಬಂಧನವೇ
ನೀ ಕೈಹಿಡಿದು ಸಾಗುವ ಶುಭ ಘಳಿಗೆಯು

ನುರಿತ ನಗುವಿನಲೆಯ ನಿನ್ನ ಹೊಂಗಿರಣವೇ
ನೂತನ ಬಾಳಲಿ ಬೆಳಗುವ ದೀಪವು
ನೃತ್ಯವಾಡುವ ಮನದ ಕನಸುಗಳ ಸಾಕಾರವೇ
ನೆಪವೇಳದೇ ಹಾರೈಸುವ ನಿನ್ನೊಲವ ಹಿತವು

ನೇಹದ ಮಹಲಿಗೆ ಕರೆವ ಕಾವ್ಯವೇ
ನೈಪುಣ್ಯದ ನಿನ್ನ ಪುನೀತ ಪದಗಳ ಮಾಲೆಯು
ನೊನೆಯುವ ಪ್ರೇಮಾಮೃತದ ನಿನ್ನ ಕೊಡುಗೆಯೇ
ನೋವಿರದ ಚೆಲುವಿನ ಬಾಳಿನ ಆಗರವು

ನವುರಾದ ನುಡಿಯ ಪ್ರೇಮ ಪುತ್ತಳಿಯೇ
ನಂಬಿಕೆಯ ನೆರಳಾದ ನಿನ್ನ ಸೌಜನ್ಯದ ತನುವು
ನಮ್ರತೆಯ ನಡಿಗೆಯ ವಿನಯದ ಸಿರಿತನವೇ
ನಾವೀನ್ಯತೆ ಬದುಕಿಗೆ ಲೇಪಿಸುವ ಗಂಧವು

ನಿಗರ್ವದ ನಿನದ ಗಾನದ ಉಸಿರೇ
ನೀ ನಗುತ ನುಡಿವ ನಿಸ್ವಾರ್ಥದ ಪಠಣವು
ನಿರುಪಮ ಪ್ರೇಮದ ಸೌಂದರ್ಯದ ಹಾದಿಯೇ
ನೀ ನಗುತ ಜೊತೆಸಾಗುವ ಬದುಕು

ರಾಮಚಂದ್ರ ಸಾಗರ್


Sunday, 17 March 2019

ಪ್ರೇಮಸುಧೆಯ ಬಂಧನವು

ನಿನ್ನ ಮೋಹದ ಸವಿ ಬಂಧನವೇ 
ಭವ್ಯದ ಬಾಳಿಗೊಳಿದ ಅಭಯದ ಜಗವು
ನಿನ್ನ ಮೆಲು ನಗುವ ಮೋಡಿಯೇ
ಬಂಧುರ ಪ್ರೀತಿ ತುಂಬಿದ ಹೊಳೆಯು

ನಿನ್ನ ತುಟಿಯಂಚಿನ ಸವಿ ನುಡಿಯೇ
ಕಳವಳದ ಘಳಿಗೆಗೆ ಸವಿಜೇನ ಸೇಚನವು
ನಿನ್ನ ಮೋಹಕ ಮಾದಕ ನೋಟವೇ
ಚೆಲುವ ಬದುಕಿಗೆ ಕರೆವ ಓಲೆಯು

ನಿನ್ನ ನರುಗೆಂಪು ಕೆನ್ನೆಯ ಸೂಚನೆಯೇ
ಸಿಂಗಾರದ ಕಡಲಿನ ಅಲೆಗಳ ಮೊರೆತವು
ನಿನ್ನ ಸಿಹಿ ಅಪ್ಪುಗೆಯ ಬಿಸಿಯುಸಿರೇ
ಹರುಷದ ಕಡಲಿನ ಅಲೆಗಳ ನರ್ತನವು

ನಿನ್ನ ಜೊತೆಯಾದ ಮೌಲಿಕ ಕ್ಷಣವೇ
ಸುದೈವವು ಬಾಳಿಗೊಲಿದ ಕುರುಹು
ನಿನ್ನೊಲವ ರಂಗು ಸೂಸುವ ಜಗವೇ
ಕಾವಳ ಕರಗಿಸಿ ಮನ ರಂಗೇರಿಸುವ ಕುಂಚವು

ನಿನ್ನ ಕುಸುಮಿತ ಮನದ ಶ್ರೀರಕ್ಷೆಯೇ
ಬಾಡದ ಕುಸುಮ ಮನದಲಿಡುವ ಸತ್ಕಾರ್ಯವು
ನಿನ್ನ ಕುಶಲತೆಯ ಮಮತಾ ಮಡಿಲೇ
ಜಗದ ದುಮ್ಮಾನ ದೂರಾಗಿಸುವ ಸನ್ನಿಧಿಯು

ನಿನ್ನ ರಂಜಿಸುವ ಕಣ್ಸನ್ನೆಯ ಕಲರವವೇ
ಕನಸಿನ ಕಣಜ ಸಂತೈಸುವ ಉಪಾಸನೆಯು
ನಿನ್ನ ಸಾರಥ್ಯದ ಬಿಗುಮಾನದ ಹಾದಿಯೇ
ಚಿಮ್ಮುವ ಪ್ರೇಮಸುಧೆಯ ಲೋಕವು

ರಾಮಚಂದ್ರ ಸಾಗರ್