Sunday, 17 March 2019

ಪ್ರೇಮಸುಧೆಯ ಬಂಧನವು

ನಿನ್ನ ಮೋಹದ ಸವಿ ಬಂಧನವೇ 
ಭವ್ಯದ ಬಾಳಿಗೊಳಿದ ಅಭಯದ ಜಗವು
ನಿನ್ನ ಮೆಲು ನಗುವ ಮೋಡಿಯೇ
ಬಂಧುರ ಪ್ರೀತಿ ತುಂಬಿದ ಹೊಳೆಯು

ನಿನ್ನ ತುಟಿಯಂಚಿನ ಸವಿ ನುಡಿಯೇ
ಕಳವಳದ ಘಳಿಗೆಗೆ ಸವಿಜೇನ ಸೇಚನವು
ನಿನ್ನ ಮೋಹಕ ಮಾದಕ ನೋಟವೇ
ಚೆಲುವ ಬದುಕಿಗೆ ಕರೆವ ಓಲೆಯು

ನಿನ್ನ ನರುಗೆಂಪು ಕೆನ್ನೆಯ ಸೂಚನೆಯೇ
ಸಿಂಗಾರದ ಕಡಲಿನ ಅಲೆಗಳ ಮೊರೆತವು
ನಿನ್ನ ಸಿಹಿ ಅಪ್ಪುಗೆಯ ಬಿಸಿಯುಸಿರೇ
ಹರುಷದ ಕಡಲಿನ ಅಲೆಗಳ ನರ್ತನವು

ನಿನ್ನ ಜೊತೆಯಾದ ಮೌಲಿಕ ಕ್ಷಣವೇ
ಸುದೈವವು ಬಾಳಿಗೊಲಿದ ಕುರುಹು
ನಿನ್ನೊಲವ ರಂಗು ಸೂಸುವ ಜಗವೇ
ಕಾವಳ ಕರಗಿಸಿ ಮನ ರಂಗೇರಿಸುವ ಕುಂಚವು

ನಿನ್ನ ಕುಸುಮಿತ ಮನದ ಶ್ರೀರಕ್ಷೆಯೇ
ಬಾಡದ ಕುಸುಮ ಮನದಲಿಡುವ ಸತ್ಕಾರ್ಯವು
ನಿನ್ನ ಕುಶಲತೆಯ ಮಮತಾ ಮಡಿಲೇ
ಜಗದ ದುಮ್ಮಾನ ದೂರಾಗಿಸುವ ಸನ್ನಿಧಿಯು

ನಿನ್ನ ರಂಜಿಸುವ ಕಣ್ಸನ್ನೆಯ ಕಲರವವೇ
ಕನಸಿನ ಕಣಜ ಸಂತೈಸುವ ಉಪಾಸನೆಯು
ನಿನ್ನ ಸಾರಥ್ಯದ ಬಿಗುಮಾನದ ಹಾದಿಯೇ
ಚಿಮ್ಮುವ ಪ್ರೇಮಸುಧೆಯ ಲೋಕವು

ರಾಮಚಂದ್ರ ಸಾಗರ್