Saturday, 16 March 2019

ಮಹನೀಯಳು ನೀನಮ್ಮ

"ಮ" ಗುಣಿತಾಕ್ಷರದಲಿ ಮಾತೃ ದೇವತೆಯ ನೆನೆದಾಗ
ಮಮತೆ, ವಾತ್ಸಲ್ಯದ ಋಣದ ಅಲೆಯಲ್ಲಿ ಮೂಡಿದ ಕವಿತೆ..

ಮಹನೀಯಳು ನೀನಮ್ಮ

ಮಮಕಾರ ಮಂದಿರದ ಮಾತೃ ದೇವತೆಯು
ಮಾಸಿದ ಬಾಳಿನ ಹೊಂಬೆಳಕಿನ ಆಶಾಕಿರಣವು
ಮಿಡುಕುವ ಬಿಸಿಲುದಾರಿಯಲಿ ತಣಿಸುವ ತಂಗಾಳಿಯು
ಮೀಟುವ ಎದೆಯುಸಿರಿನ ಬಲವು ನೀನಮ್ಮ

ಮುಗ್ಧ ಮನಸ್ಸುಗಳ ಆಸರೆಯ ಆಲಯವು
ಮೂದಲಿಸುವ ಬಡತನಕೆ ಸೋಲಿಸುವ ಯೋಧೆಯು
ಮೃದು ಮಾತಿನಲ್ಲಿ ಹಸಿವು ತಣಿಸುವ ಸುದೈವವು
ಮೆರಗು ನಗುವಿನಲಿ ಮನ ನಲಿಸುವ ಶಕ್ತೆ ನೀನಮ್ಮ

ಮೇಧಾವಿ ನಡಿಗೆಯಲಿ ಜೊತೆಯಾದ ಜೀವಸೆಲೆಯು
ಮೈಸುಡುವ ವೇಳೆಯಲಿ ಸೆರಗಿನಾಸರೆಯಲಿ ಅರಮನೆಯಾದವಳು
ಮೊರೆಯಿಡುವ ನೋವನು ಮರೆಸುವ ಜೀವಾತ್ಮಳು
ಮೋಸದ ಜಗದಲಿ ಸತ್ಯವನೆ ಪಠಿಸುವವಳು ನೀನಮ್ಮ

ಮೌಲಿನ ನಡಿಗೆಯಲಿ ಬದುಕುವುದೇ ಹಿತವೆಂದವಳು
ಮಂಗಳದ ಹಾದಿಯಲಿ ನಡೆವುದೇ ಬದುಕೆಂದವಳು
ಮಹನೀಯ ಪದಕೆ ಹೆಸರೇ ನೀನಮ್ಮ
ಮನೋಜ್ಞ ಬಾಳಿಗೆ ದಾರಿದೀಪವು ನೀನಮ್ಮ

ಮಿಥ್ಯದ ಲೋಕದಲಿ ಜಯತೋರುವ ಧೀರೆಯು
ಮೀರಿದ ದಾರಿದ್ರ್ಯದ ಶರಧಿಯ ಕರಿಗಿಸಿದವಳು
ಮುದ್ದು ಮಾತಿನಲಿ ಒಪ್ಪತ್ತೂಟದಲಿ ಅಮೃತವುಣಿಸಿದವಳು
ಮೂದಲಿಕೆ ಹಾದಿಯಲಿ ಸಂತಸ ಜನಿಸಿದವಳು ನೀನಮ್ಮ

ರಾಮಚಂದ್ರ ಸಾಗರ್


ನಿನ್ನ ನಗುವು

ಗೆಳತೀ..
ನಿನ್ನ ಸೌಮ್ಯದ ನಗುವಿನ ಸಿರಿಯೇ
ಹೊಂಗನಸು ಹೊತ್ತು ತರುವ ನೌಕೆಯು
ನಿನ್ನ ಮೆಲು ನಗುವ ಮೋಹದ ಮೊಗವೇ
ಇನಿದಾದ ಕನಸುಗಳ ಕಣಜವು

ನಿನ್ನ ಕುಡಿನೋಟದ ಸವಿ ನುಡಿಯೇ
ಭವ್ಯದ ಬಾಳಿಗೆ ಪ್ರೀತಿಯ ಆಹ್ವಾನವು
ನಿನ್ನ ಮುಗ್ಧತೆಯ ಮುದ್ದು ನಗುವೇ
ಸಜ್ಜನಿಕೆಯ ಸಿರಿತನದ ಬಂಧನವು

ನಿನ್ನ ಚತುರ ನಗುವಿನ ಫಲವೇ
ಸಾರುವೆಯಿರದ ಹಾದಿಯ ದರ್ಶನವು
ನಿನ್ನ ಸುಮ್ಮಾನದ ನಗುವಿನ ಅಲೆಯೇ
ಸುಯೋಗದ ಬಾಳಿನ ಒಲವ ರಥವು

ನಿನ್ನ ಸುಲಲಿತ ನಗುವಿನ ಮೋಡಿಯೇ
ಸೌಂದರ್ಯ ಜಗದ ಮೇರು ಸೊಬಗು
ನಿನ್ನ ಸಾಕ್ಷಾತ್ಕಾರದ ನಗುವಿನ ಅಕ್ಕರೆಯೇ
ಕನಸಿನ ಬಾಳ್ವೆಗೊಲಿದ ದಿವ್ಯ ಸತ್ಕಾರವು

ನಿನ್ನ ನವಿರಾದ ಅಕ್ಷಯದ ನಗುವೇ
ವೇದನೆ ಕಾಣದ ಲೋಕದ ಲಾಲಿತ್ಯವು
ನಿನ್ನ ನಿಸ್ವಾರ್ಥದ ನಿಗರ್ವದ ನಗುವೇ
ನಿಪುಣ ಬಾಳಿನಾ ನಿತ್ಯ ನಗುವ ಹೂವು

ರಾಮಚಂದ್ರ ಸಾಗರ್

Friday, 15 March 2019

ನೀನಾದೆ ಚೆಲುವೆ..

ಚಂಚಲಿತ ವೇಳೆಯಲಿ ಮನ ರಮಿಸಿದ ನಲ್ಲೆಯು
ಚಡಪಡಿಯ ಜಗದಲಿ ಅಭಯವಾದ ಜೀವವು
ಚಪಲತೆಯ ಮನದಲಿ ಸಿಹಿಜೇನಾದ ಕಾದಲೆಯು
ಚಂದದ ಹಾದಿಯಲಿ ಕೈಹಿಡಿದ ಕನ್ನಿಕೆಯು
ನೀನಾದೆ ಚೆಲುವೆ

ಚತುರ ನುಡಿಯಲಿ ಬಾಳಿನ ಹರಿಗೋಲಾದವಳು
ಚಂದಿರನ ಬೆಳಕಲಿ ಉದಿತ ಬೊಂಬೆಯು
ಚಲುವ ಚಹರೆ ಮಮತೆಯಲಿ ಮೈದಳೆದವಳು
ಚಕ್ಕಂದದ ಹೊಳೆ ಬಾಳಲಿ ಮೈದುಂಬಿದವಳು
ನೀನಾದೆ ಚತುರೆ

ಚಿಗುರುವ ಪ್ರೀತಿಗೆ ರಕ್ಷೆಯ ಕೋಟೆಯಾದವಳು
ಚಿತಾಯಿಸುವ ಬಾಳಿಗೆ ಭವ್ಯತೆಯ ಸಾರಥಿಯಾದವಳು
ಚಿರಂತನ ಸ್ನೇಹಗೆ ಹೃದಯ ಬೆಸೆದವಳು
ಚಿಮ್ಮುವ ಪ್ರೇಮದಾ ಕಾರಂಜಿಯ ಕರುಣಿಸಿದವಳು
ನೀನಾದೆ ಚಿರಂತನೆ

ಚುರುಗುಟ್ಟುವ ವೇದನೆ ಮರೆಸಿದ ಮಾಂತ್ರಿಕಳು
ಚುಚ್ಚುವ ಕನಸಿಗೆ ಕೊನೆಹಾಡಿದ ಮಾನ್ಯಳು
ಚುಂಬಿಸುವ ಆಸೆಯ ಮನಕೆ ಮಧುವಾದವಳು
ಚೂರಾದ ಹೃದಯದಾಸೆ ಅರಳಿಸಿದ ಮಾಧುರಿಯು
ನೀನಾದೆ ಚದುರೆಯು

ಚೇತರಿಸುವ ಬದುಕಿಗೆ ಆಸರೆಯ ಸಿರಿಯಾದವಳು
ಚೇತಿಸುವ ಎದೆಯುಸಿರಿಗೆ ಸೆಲೆಯಾದ ಉಸಿರು
ಚೆಂದದ ಹಂದರದಲಿ ಹೊಂಗನಸು ನನಸಾಗಿಸಿದವಳು
ಚೆಲುವ ಜಗದಲಿ ನಿತ್ಯ ನಲಿಸುವ ಕೋಮಲೆಯು
ನೀನಾದೆ ಚೆಲುವೆ

ರಾಮಚಂದ್ರ ಸಾಗರ್

Tuesday, 12 March 2019

ನಿನ್ನೊಲವು ಗೆಳತಿ..

ಜಲಧಿಯ ಮೋಹದ ಅಲೆಯಂತೆ ನಿನ್ನೊಲವು
ಜಾರುವ ಸೋನೆಯ ಹನಿಯಂತೆ ನಿನ್ನೊಲವು
ಜಿನುಗುವ ಜೇನ ಕಾರಂಜಿಯ ಸವಿಯಂತೆ
ಜೀವದಾ ನಂಬಿಕೆಯ ನೆಲೆಯ ಬಲದಂತೆ
ನಿನ್ನೊಲವು

ಜುಳುಜುಳಿಸುವ ಝರಿಯ ದನಿಯ ಇಂಪಂತೆ
ಜೂಜಿಡುವ ಸವಿಕನಸಿನ ಕಣಜದಂತೆ ನಿನ್ನೊಲವು
ಜೃಂಭದ ವೇಳೆಯಲಿ ತಣಿಸುವ ಸವಿಬೆಲ್ಲವು
ಜೆಜ್ಜೆಯ ಹೂದಿಂಬಿನ ಘಮಲಿನಂತೆ ನಿನ್ನೊಲವು

ಜೇನು ಸುರಿಸುವ ಸವಿ ಮಳೆಯ ಸುಧೆಯಂತೆ
ಜೈಸುವ ಪ್ರೀತಿಯ ಕುರುಹಂತೆ ನಿನ್ನೊಲವು
ಜೊನ್ನನ ಬೆಳಕಿನ ಸೊಬಗಿನ ಮಾಯೆಯಂತೆ
ಜೋಗಿನಿ ನಿನ್ನ ಪ್ರೇಮದ ವರದಂತೆ ನಿನ್ನೊಲವು

ಜೌಗಾದ ಜಗವ ತೊಳೆವ ಚೇತನದಂತೆ ನಿನ್ನೊಲವು
ಜಂಬದೊಲುಮೆ ನಿಸ್ವಾರ್ಥದಿ ಸೂಸುವ ಛಲದಂತೆ
ಝಗ ಝಗಿಸುವ ನಿರ್ಮಲ ಸೌಧದ ದೀಪದಂತೆ
ಜಾಣ್ಮೆಯ ಬಾಳಿನಲಿ ಕೈತೋರುವ ಸಜ್ಜನಿಕೆಯಂತೆ 
ನಿನ್ನೊಲವು

ಬಿರಿದ ಮಲ್ಲಿಗೆಯ ಘಮ ಘಮದ ಗಂಧದಂತೆ
ಸತ್ಕಾರದ ಬಾಳಿನ ಮುನ್ನುಡಿಯಂತೆ ನಿನ್ನೊಲವು
ಸಡಗರದ ಹಾದಿಯ ಭವ್ಯದ ಮೆರವಣಿಗೆಯಂತೆ
ಸಮ್ಮೊಹಿಸುವ ಹೃದಯದ ಬಾಷೆಯಂತೆ ನಿನ್ನೊಲವು

ರಾಮಚಂದ್ರ ಸಾಗರ್