Saturday, 16 March 2019

ಮಹನೀಯಳು ನೀನಮ್ಮ

"ಮ" ಗುಣಿತಾಕ್ಷರದಲಿ ಮಾತೃ ದೇವತೆಯ ನೆನೆದಾಗ
ಮಮತೆ, ವಾತ್ಸಲ್ಯದ ಋಣದ ಅಲೆಯಲ್ಲಿ ಮೂಡಿದ ಕವಿತೆ..

ಮಹನೀಯಳು ನೀನಮ್ಮ

ಮಮಕಾರ ಮಂದಿರದ ಮಾತೃ ದೇವತೆಯು
ಮಾಸಿದ ಬಾಳಿನ ಹೊಂಬೆಳಕಿನ ಆಶಾಕಿರಣವು
ಮಿಡುಕುವ ಬಿಸಿಲುದಾರಿಯಲಿ ತಣಿಸುವ ತಂಗಾಳಿಯು
ಮೀಟುವ ಎದೆಯುಸಿರಿನ ಬಲವು ನೀನಮ್ಮ

ಮುಗ್ಧ ಮನಸ್ಸುಗಳ ಆಸರೆಯ ಆಲಯವು
ಮೂದಲಿಸುವ ಬಡತನಕೆ ಸೋಲಿಸುವ ಯೋಧೆಯು
ಮೃದು ಮಾತಿನಲ್ಲಿ ಹಸಿವು ತಣಿಸುವ ಸುದೈವವು
ಮೆರಗು ನಗುವಿನಲಿ ಮನ ನಲಿಸುವ ಶಕ್ತೆ ನೀನಮ್ಮ

ಮೇಧಾವಿ ನಡಿಗೆಯಲಿ ಜೊತೆಯಾದ ಜೀವಸೆಲೆಯು
ಮೈಸುಡುವ ವೇಳೆಯಲಿ ಸೆರಗಿನಾಸರೆಯಲಿ ಅರಮನೆಯಾದವಳು
ಮೊರೆಯಿಡುವ ನೋವನು ಮರೆಸುವ ಜೀವಾತ್ಮಳು
ಮೋಸದ ಜಗದಲಿ ಸತ್ಯವನೆ ಪಠಿಸುವವಳು ನೀನಮ್ಮ

ಮೌಲಿನ ನಡಿಗೆಯಲಿ ಬದುಕುವುದೇ ಹಿತವೆಂದವಳು
ಮಂಗಳದ ಹಾದಿಯಲಿ ನಡೆವುದೇ ಬದುಕೆಂದವಳು
ಮಹನೀಯ ಪದಕೆ ಹೆಸರೇ ನೀನಮ್ಮ
ಮನೋಜ್ಞ ಬಾಳಿಗೆ ದಾರಿದೀಪವು ನೀನಮ್ಮ

ಮಿಥ್ಯದ ಲೋಕದಲಿ ಜಯತೋರುವ ಧೀರೆಯು
ಮೀರಿದ ದಾರಿದ್ರ್ಯದ ಶರಧಿಯ ಕರಿಗಿಸಿದವಳು
ಮುದ್ದು ಮಾತಿನಲಿ ಒಪ್ಪತ್ತೂಟದಲಿ ಅಮೃತವುಣಿಸಿದವಳು
ಮೂದಲಿಕೆ ಹಾದಿಯಲಿ ಸಂತಸ ಜನಿಸಿದವಳು ನೀನಮ್ಮ

ರಾಮಚಂದ್ರ ಸಾಗರ್