Saturday, 16 March 2019

ನಿನ್ನ ನಗುವು

ಗೆಳತೀ..
ನಿನ್ನ ಸೌಮ್ಯದ ನಗುವಿನ ಸಿರಿಯೇ
ಹೊಂಗನಸು ಹೊತ್ತು ತರುವ ನೌಕೆಯು
ನಿನ್ನ ಮೆಲು ನಗುವ ಮೋಹದ ಮೊಗವೇ
ಇನಿದಾದ ಕನಸುಗಳ ಕಣಜವು

ನಿನ್ನ ಕುಡಿನೋಟದ ಸವಿ ನುಡಿಯೇ
ಭವ್ಯದ ಬಾಳಿಗೆ ಪ್ರೀತಿಯ ಆಹ್ವಾನವು
ನಿನ್ನ ಮುಗ್ಧತೆಯ ಮುದ್ದು ನಗುವೇ
ಸಜ್ಜನಿಕೆಯ ಸಿರಿತನದ ಬಂಧನವು

ನಿನ್ನ ಚತುರ ನಗುವಿನ ಫಲವೇ
ಸಾರುವೆಯಿರದ ಹಾದಿಯ ದರ್ಶನವು
ನಿನ್ನ ಸುಮ್ಮಾನದ ನಗುವಿನ ಅಲೆಯೇ
ಸುಯೋಗದ ಬಾಳಿನ ಒಲವ ರಥವು

ನಿನ್ನ ಸುಲಲಿತ ನಗುವಿನ ಮೋಡಿಯೇ
ಸೌಂದರ್ಯ ಜಗದ ಮೇರು ಸೊಬಗು
ನಿನ್ನ ಸಾಕ್ಷಾತ್ಕಾರದ ನಗುವಿನ ಅಕ್ಕರೆಯೇ
ಕನಸಿನ ಬಾಳ್ವೆಗೊಲಿದ ದಿವ್ಯ ಸತ್ಕಾರವು

ನಿನ್ನ ನವಿರಾದ ಅಕ್ಷಯದ ನಗುವೇ
ವೇದನೆ ಕಾಣದ ಲೋಕದ ಲಾಲಿತ್ಯವು
ನಿನ್ನ ನಿಸ್ವಾರ್ಥದ ನಿಗರ್ವದ ನಗುವೇ
ನಿಪುಣ ಬಾಳಿನಾ ನಿತ್ಯ ನಗುವ ಹೂವು

ರಾಮಚಂದ್ರ ಸಾಗರ್