Tuesday, 12 March 2019

ನಿನ್ನೊಲವು ಗೆಳತಿ..

ಜಲಧಿಯ ಮೋಹದ ಅಲೆಯಂತೆ ನಿನ್ನೊಲವು
ಜಾರುವ ಸೋನೆಯ ಹನಿಯಂತೆ ನಿನ್ನೊಲವು
ಜಿನುಗುವ ಜೇನ ಕಾರಂಜಿಯ ಸವಿಯಂತೆ
ಜೀವದಾ ನಂಬಿಕೆಯ ನೆಲೆಯ ಬಲದಂತೆ
ನಿನ್ನೊಲವು

ಜುಳುಜುಳಿಸುವ ಝರಿಯ ದನಿಯ ಇಂಪಂತೆ
ಜೂಜಿಡುವ ಸವಿಕನಸಿನ ಕಣಜದಂತೆ ನಿನ್ನೊಲವು
ಜೃಂಭದ ವೇಳೆಯಲಿ ತಣಿಸುವ ಸವಿಬೆಲ್ಲವು
ಜೆಜ್ಜೆಯ ಹೂದಿಂಬಿನ ಘಮಲಿನಂತೆ ನಿನ್ನೊಲವು

ಜೇನು ಸುರಿಸುವ ಸವಿ ಮಳೆಯ ಸುಧೆಯಂತೆ
ಜೈಸುವ ಪ್ರೀತಿಯ ಕುರುಹಂತೆ ನಿನ್ನೊಲವು
ಜೊನ್ನನ ಬೆಳಕಿನ ಸೊಬಗಿನ ಮಾಯೆಯಂತೆ
ಜೋಗಿನಿ ನಿನ್ನ ಪ್ರೇಮದ ವರದಂತೆ ನಿನ್ನೊಲವು

ಜೌಗಾದ ಜಗವ ತೊಳೆವ ಚೇತನದಂತೆ ನಿನ್ನೊಲವು
ಜಂಬದೊಲುಮೆ ನಿಸ್ವಾರ್ಥದಿ ಸೂಸುವ ಛಲದಂತೆ
ಝಗ ಝಗಿಸುವ ನಿರ್ಮಲ ಸೌಧದ ದೀಪದಂತೆ
ಜಾಣ್ಮೆಯ ಬಾಳಿನಲಿ ಕೈತೋರುವ ಸಜ್ಜನಿಕೆಯಂತೆ 
ನಿನ್ನೊಲವು

ಬಿರಿದ ಮಲ್ಲಿಗೆಯ ಘಮ ಘಮದ ಗಂಧದಂತೆ
ಸತ್ಕಾರದ ಬಾಳಿನ ಮುನ್ನುಡಿಯಂತೆ ನಿನ್ನೊಲವು
ಸಡಗರದ ಹಾದಿಯ ಭವ್ಯದ ಮೆರವಣಿಗೆಯಂತೆ
ಸಮ್ಮೊಹಿಸುವ ಹೃದಯದ ಬಾಷೆಯಂತೆ ನಿನ್ನೊಲವು

ರಾಮಚಂದ್ರ ಸಾಗರ್