ಗೆಳೆಯಾ..
ದುಗುಡದ ಕಣ್ಣಿಗೆ ಕೊಂಚವು ನೀ ಕಾಣದೆ
ಹಗಲಿರುಳು ಸೂಜಿಯಾಗಿ ಚುಚ್ಚಬೇಡ
ಬಯಸಿದ ಹೃದಯಕೆ ನೀ ರಮಿಸದೆ
ನೋವಿನ ಮಳೆಯಾಗಿ ಸುರಿಯಬೇಡ
ದುಮ್ಮಾನದ ಘಳಿಗೆಗೆ ನೀ ಸಂತೈಸದೆ
ದೂರದ ಜಗದಲಿ ಉಳಿಯಬೇಡ
ಮುಗ್ಧೆಯ ಅಕ್ಕರೆಯ ಮನಕೆ
ದಾವಾಗ್ನಿಯಾಗಿ ನೀ ಅಪ್ಪಳಿಸಬೇಡ
ಪೀಡಿಸುವ ಕನಸಿಗೆ ನೀ ತಣಿಸದೆ
ವಿರಹದ ವಿಷವನು ಸುರಿಯಬೇಡ
ಕಳವಳಿಸುವ ಮನಕೆ ನೀ ಜೊತೆಯಾಗದೆ
ವ್ಯಥೆಯ ಸಾಗರದಲಿ ಒಂಟಿಯಾಗಿಸಬೇಡ
ಕಾಂತಾರದ ದುರ್ಗಮದಲಿ ನೀ ಬೆಳಗದೆ
ನೋವಿನ ಕಂದರಕೆ ನೂಕಬೇಡ
ಕಾರುಣ್ಯದ ಒಲವು ನೀ ನೀಡದೆ
ಗತಿಸುವ ಹೃದಯಕೆ ಕಾರಣವಾಗಬೇಡ
ಹೊಂಗನಸು ಕಾಣುವ ಜೀವಕೆ
ನೋವಿನ ಬಿಸಿಯಲೆಯಾಗಿ ಬೀಸಬೇಡ
ಪ್ರೀತಿಯೆ ಉಸಿರಾಡುವ ಎದೆಗೆ
ರೋದನೆ ವಿಧಿಯಾಗಿಸಿ ನಡೆಯಬೇಡ
ಗೆಳೆಯಾ..
ನೀ ಬರುವುದಾದರೆ ಬಂದುಬಿಡು
ವಿರಹದ ವಿಷದ ಕಡಲನು ಸಿಹಿಜೇನಾಗಿಸು ಬಾ
ರೋದಿಸುವ ನನ್ನೊಲವನು
ನಿನ್ನೊಲವ ರಕ್ಷೆಯಲಿ ನಲಿಸಲು ಬಾ
ರಾಮಚಂದ್ರ ಸಾಗರ್
ದನಿಸುತಿದೆ ಗೆಳೆಯ ನನ್ನೆದೆಯಲಿ ನಿನ್ನದೇ ಹೆಸರು
ದಾವಾಗ್ನಿಯ ಕಿಚ್ಚಿನಂತೆ ಕಾಡಿದೆ ನಿನ್ನದೇ ನೆನಪು
ದಿಗಿಲೆದ್ದ ಬಾಳಲಿ ವರವಾಗಲಿ ನಿನ್ನದೇ ನಗುವು
ದೀನತೆಯ ಈ ಮನದಲಿ ಸಿರಿತರಲಿ ನಿನ್ನೊಲವು
ದುಗುಡದ ಕಣ್ಣಿಗೆ ಕಾಡಿದೆ ನಿನ್ನದೇ ಸಾನಿಧ್ಯವು
ದೂರದ ಮೋಹದ ಕಡಲಿಗೆ ಬೇಕಿದೆ ನಿನ್ನದೇ ಸಾರಥ್ಯವು
ದೃಡಚಿತ್ತ ಬಾಳಿನ ಸ್ಥೈರ್ಯದಲಿದೆ ನಿನ್ನದೇ ಶಕ್ತಿಯು
ದೆಸೆ ದೆಸೆಯಲಿ ಕೈಹಿಡಿಯಲಿ ನಿನ್ನದೇ ಕೈಸೆರೆಯು
ದೇಗುಲದ ಸನ್ನಿಧಿಯಲಿ ಕಾಣಲಿ ನಿನ್ನದೇ ರೂಪವು
ದೈವಪ್ರೇರಣೆಯಲಿ ಸಿದ್ಧಿಸಲಿ ನಿನ್ನದೇ ಸದ್ಗುಣವು
ದೊರೆತನದ ಪ್ರೀತಿಯಾಗಲಿ ನಿನ್ನದೇ ಒಲುಮೆಯು
ದೋಹದ ಕೊಳವಾಗಲಿ ನಿನ್ನದೇ ನಿರ್ಮಲ ಮನಸು
ದೌರ್ಭಾಗ್ಯವು ಕಾಡದು ನೀನೆನ್ನುವ ಸೌಭಾಗ್ಯದಲಿ
ದಂಗು ಬಡಿಯದು ನೀನೆನ್ನುವ ರಕ್ಷೆಯ ಮಹಲಲಿ
ದಯೆಯು ನದಿಯಾಗುವುದು ನೀನೆನ್ನುವ ವರ್ಷಧಾರೆಯಲಿ
ದಾರಿದೀಪ ಸದಾ ಬೆಳಗುವುದು ನೀನೆನ್ನುವ ಹಾದಿಯಲಿ
ಧಮನಿಯಲಿ ಉಸಿರಾಗುವುದು ನೀನೆನ್ನುವ ಪ್ರೀತಿಯು
ಧಾವಂತದ ಕನಸಲಿ ನಲಿಸುವುದು ನೀನೆನ್ನುವ ಜೀವವು
ಧಿಕ್ಕರಿಸುವ ಜಗದಲಿ ಗೆಲ್ಲಿಸುವುದು ನೀನೆನ್ನುವ ಛಲವು
ಧೀರತೆಯಲಿ ನಡೆಸುವುದು ನೀನೆನ್ನುವ ಧೀಮಂತಿಕೆಯು
ರಾಮಚಂದ್ರ ಸಾಗರ್
ದಗದಗಿಸುವುದಾದರೆ ನೀ ಬಡವನ ಕುಟೀರದ ದೀಪವಾಗು
ದಾರ್ಢತೆ ನೀ ತೋರುವುದಾದರೆ ಸ್ನೇಹದ ತೋರಣವಾಗು
ದಿವ್ಯತೆ ನೀ ಕಾಣುವುದಾದರೆ ನಿಸ್ವಾರ್ಥದ ಕಣಜವಾಗು
ದೀನತೆ ನೀ ಹೊಂದುವುದಾದರೆ ವಿನಯದ ಮನವಾಗು
ದುರಾಶೆ ನೀ ಮರೆಯುವುದಾದರೆ ಬುದ್ದನ ನೆನೆದುಬಿಡು
ದೂಷಣೆ ನೀ ಮಾಡುವುದಾದರೆ ತಾನೆಂಬುದು ದೂಷಿಸು
ದೃಢತೆ ನೀ ಬಯಸುವುದಾದರೆ ಸತ್ಯವನು ಸಾರುತಿರು
ದೆಸೆ ನೀ ಅಪ್ಪುವುದಾದರೆ ಸರಿದಾರಿಯನು ಅರಿತಿರು
ದೇವನ ನೀ ನೋಡುವುದಾದರೆ ದಯೆಯಾರಾಧನೆ ತಿಳಿದಿರು
ದೈವ ವರವ ನೀ ಬೇಡುವುದಾದರೆ ಸೌಹಾರ್ದವನೆ ಬೇಡುತಿರು
ದೊರೆ ನೀನಾಗುವುದಾದರೆ ಸೇವಕನಾಗಿ ನಗುತಿರು
ದೋಣಿ ನೀನಾಗುವುದಾದರೆ ಸದ್ಗುಣಗಳ ತರುತಿರು
ದೌತ್ಯತೆ ನೀನೊಂದುವುದಾದರೆ ಶಾಂತಿಯ ತಂತ್ರನಾಗು
ದಂಗೆ ನೀನೇಳುವುದಾದರೆ ದುರುಳತೆಯ ಮರೆಯಾಗಿಸು
ದಹನ ನೀ ಮಾಡುವುದಾದರೆ ದುರ್ಮಾರ್ಗಿಗಳ ದಹಿಸಿಬಿಡು
ದಮನತೆ ನೀ ಸಾಧಿಸುವುದಾದರೆ ವಿಕೃತಿಯ ಸಾಯಿಸಿಬಿಡು
ದಾಸ್ಯತೆ ನೀ ಒಪ್ಪುವುದಾದರೆ ಸ್ನೇಹದಾಸ್ಯತೆ ಒಪ್ಪಿಬಿಡು
ದಿವಾನನು ನೀನಾಗುವುದಾದರೆ ಎಲ್ಲರೆದೆಯ ಉಸಿರಾಗು
ದೀಕ್ಷೆಯ ನೀ ಪಠಿಸುವುದಾದರೆ ಸಹಿಷ್ನುತೆಯ ಶಪಥವಾಡು
ದೆಸೆಗೆಡದ ಜಗವನೆ ನೀ ಹೃದಯತುಂಬಿ ಕಟ್ಟುತಿರು
ರಾಮಚಂದ್ರ ಸಾಗರ್
ಗೆಳತಿ..
ಮಧು ಮಧುರ ಧಾರೆಯ ನಿನ್ನ ಸವಿನೋಟದ ಕುಡಿಯಲಿ
ಮಾಧುರ್ಯದ ಮೋಹದ ನಿನ್ನ ಸವಿನಯ ಕೈಸೆರೆಯಲಿ
ಮಿಂಚುವ ಕಣ್ಣೋಟದ ನಿನ್ನ ಕಾಂತಿಯ ಹೊಳಪಲಿ
ಮೀಟುವ ಸಹೃದಯದ ನಿನ್ನ ಭಾವನೆಯ ತೋಟದಲಿ
ನಾ ಬಂಧಿಯಾದೆನು ನಿನ್ನೊಲವಿನಲೆಯಲಿ ತೇಲಿದೆನು
ಮುಗ್ಧ ಮಾತಿನ ನಿನ್ನ ಮಮತೆಯ ನುಡಿಯಲಿ
ಮೂಡುತಿದೆ ಅಭಯವು ನಿನ್ನಾಸರೆಯ ಗುಡಿಯಲಿ
ಮೃದು ಹೆಜ್ಜೆಯ ನಿನ್ನೊಲುಮೆಯ ಹಾದಿಯಲಿ
ಮೆರುಗು ತುಂಬಿದ ನಿನ್ನ ಮೆಲುನಗುವ ಸೊಬಗಲಿ
ನಲಿದಾಡಿದೆ ಮನಸು ನಳನಳಿಸಿದೆ ಬದುಕು
ಮೇರು ಚೆಲುವಿನ ನಿನ್ನ ಅಕ್ಕರೆಯ ಬಂಧದಲಿ
ಮೈದೋರಿದ ಮನನದ ನಿನ್ನ ಸಿರಿಸಾರದ ಘಮಲಿನಲಿ
ಮೊನೆಯಿಲ್ಲದ ಬಾನಂತ ನಿನ್ನ ಸವಿಸ್ತಾರ ಪ್ರೀತಿಯಲಿ
ಮೋಹನಮಾಲೆಯಂತ ನಿನ್ನ ಸತ್ಕಾರದ ಹೊದಿಕೆಯಲಿ
ನೀ ಸಿರಿಯಾಗಿಸಿದೆ ಬಾಳು ನೀ ಬೆಳಗಿದೆ ಬಾಳು
ಮೌಲಿಕ ಪ್ರೇಮದ ನಿನ್ನೊಲವ ನದಿಯಲಿ
ಮಮ್ಮಲ ಮರುಗಿದ ಮನದಾಸೆಗಳ ಚೈತನ್ಯಧಾರೆಯಲಿ
ಮಹನೀಯ ಬಾಳ್ವೆಯ ಕನಸಿನ ಕಣಜದಲಿ
ಮನ್ನಿಸುವ ಗುಣಗಳ ಸಂಕಲನದ ವೈಭವದಲಿ
ನೀ ಚೇತನವಾದೆ ನೀ ಮಹನೀಯಳಾದೆ
ರಾಮಚಂದ್ರ ಸಾಗರ್