Monday, 4 March 2019

ನೀನೆನ್ನುವ ಜೀವವು

ದನಿಸುತಿದೆ ಗೆಳೆಯ ನನ್ನೆದೆಯಲಿ ನಿನ್ನದೇ ಹೆಸರು
ದಾವಾಗ್ನಿಯ ಕಿಚ್ಚಿನಂತೆ ಕಾಡಿದೆ ನಿನ್ನದೇ ನೆನಪು
ದಿಗಿಲೆದ್ದ ಬಾಳಲಿ ವರವಾಗಲಿ ನಿನ್ನದೇ ನಗುವು
ದೀನತೆಯ ಈ ಮನದಲಿ ಸಿರಿತರಲಿ ನಿನ್ನೊಲವು

ದುಗುಡದ ಕಣ್ಣಿಗೆ ಕಾಡಿದೆ ನಿನ್ನದೇ ಸಾನಿಧ್ಯವು
ದೂರದ ಮೋಹದ ಕಡಲಿಗೆ ಬೇಕಿದೆ ನಿನ್ನದೇ ಸಾರಥ್ಯವು 
ದೃಡಚಿತ್ತ ಬಾಳಿನ ಸ್ಥೈರ್ಯದಲಿದೆ ನಿನ್ನದೇ ಶಕ್ತಿಯು
ದೆಸೆ ದೆಸೆಯಲಿ ಕೈಹಿಡಿಯಲಿ ನಿನ್ನದೇ ಕೈಸೆರೆಯು

ದೇಗುಲದ ಸನ್ನಿಧಿಯಲಿ ಕಾಣಲಿ ನಿನ್ನದೇ ರೂಪವು
ದೈವಪ್ರೇರಣೆಯಲಿ ಸಿದ್ಧಿಸಲಿ ನಿನ್ನದೇ ಸದ್ಗುಣವು
ದೊರೆತನದ ಪ್ರೀತಿಯಾಗಲಿ ನಿನ್ನದೇ ಒಲುಮೆಯು
ದೋಹದ ಕೊಳವಾಗಲಿ ನಿನ್ನದೇ ನಿರ್ಮಲ ಮನಸು

ದೌರ್ಭಾಗ್ಯವು ಕಾಡದು ನೀನೆನ್ನುವ ಸೌಭಾಗ್ಯದಲಿ
ದಂಗು ಬಡಿಯದು ನೀನೆನ್ನುವ ರಕ್ಷೆಯ ಮಹಲಲಿ
ದಯೆಯು ನದಿಯಾಗುವುದು ನೀನೆನ್ನುವ ವರ್ಷಧಾರೆಯಲಿ
ದಾರಿದೀಪ ಸದಾ ಬೆಳಗುವುದು ನೀನೆನ್ನುವ ಹಾದಿಯಲಿ

ಧಮನಿಯಲಿ ಉಸಿರಾಗುವುದು ನೀನೆನ್ನುವ ಪ್ರೀತಿಯು
ಧಾವಂತದ ಕನಸಲಿ ನಲಿಸುವುದು ನೀನೆನ್ನುವ ಜೀವವು
ಧಿಕ್ಕರಿಸುವ ಜಗದಲಿ ಗೆಲ್ಲಿಸುವುದು ನೀನೆನ್ನುವ ಛಲವು
ಧೀರತೆಯಲಿ ನಡೆಸುವುದು ನೀನೆನ್ನುವ ಧೀಮಂತಿಕೆಯು

ರಾಮಚಂದ್ರ ಸಾಗರ್