Sunday, 3 March 2019

ನೀ ದೀಪವಾಗು

ದಗದಗಿಸುವುದಾದರೆ ನೀ ಬಡವನ ಕುಟೀರದ ದೀಪವಾಗು
ದಾರ್ಢತೆ ನೀ ತೋರುವುದಾದರೆ ಸ್ನೇಹದ ತೋರಣವಾಗು
ದಿವ್ಯತೆ ನೀ ಕಾಣುವುದಾದರೆ ನಿಸ್ವಾರ್ಥದ ಕಣಜವಾಗು
ದೀನತೆ ನೀ ಹೊಂದುವುದಾದರೆ ವಿನಯದ ಮನವಾಗು

ದುರಾಶೆ ನೀ ಮರೆಯುವುದಾದರೆ ಬುದ್ದನ ನೆನೆದುಬಿಡು
ದೂಷಣೆ ನೀ ಮಾಡುವುದಾದರೆ ತಾನೆಂಬುದು ದೂಷಿಸು
ದೃಢತೆ ನೀ ಬಯಸುವುದಾದರೆ ಸತ್ಯವನು ಸಾರುತಿರು
ದೆಸೆ ನೀ ಅಪ್ಪುವುದಾದರೆ ಸರಿದಾರಿಯನು ಅರಿತಿರು

ದೇವನ ನೀ ನೋಡುವುದಾದರೆ ದಯೆಯಾರಾಧನೆ ತಿಳಿದಿರು
ದೈವ ವರವ ನೀ ಬೇಡುವುದಾದರೆ ಸೌಹಾರ್ದವನೆ ಬೇಡುತಿರು
ದೊರೆ ನೀನಾಗುವುದಾದರೆ ಸೇವಕನಾಗಿ ನಗುತಿರು
ದೋಣಿ ನೀನಾಗುವುದಾದರೆ ಸದ್ಗುಣಗಳ ತರುತಿರು

ದೌತ್ಯತೆ ನೀನೊಂದುವುದಾದರೆ ಶಾಂತಿಯ ತಂತ್ರನಾಗು 
ದಂಗೆ ನೀನೇಳುವುದಾದರೆ ದುರುಳತೆಯ ಮರೆಯಾಗಿಸು
ದಹನ ನೀ ಮಾಡುವುದಾದರೆ ದುರ್ಮಾರ್ಗಿಗಳ ದಹಿಸಿಬಿಡು
ದಮನತೆ ನೀ ಸಾಧಿಸುವುದಾದರೆ ವಿಕೃತಿಯ ಸಾಯಿಸಿಬಿಡು

ದಾಸ್ಯತೆ ನೀ ಒಪ್ಪುವುದಾದರೆ ಸ್ನೇಹದಾಸ್ಯತೆ ಒಪ್ಪಿಬಿಡು
ದಿವಾನನು ನೀನಾಗುವುದಾದರೆ ಎಲ್ಲರೆದೆಯ ಉಸಿರಾಗು
ದೀಕ್ಷೆಯ ನೀ ಪಠಿಸುವುದಾದರೆ ಸಹಿಷ್ನುತೆಯ ಶಪಥವಾಡು
ದೆಸೆಗೆಡದ ಜಗವನೆ ನೀ ಹೃದಯತುಂಬಿ ಕಟ್ಟುತಿರು

ರಾಮಚಂದ್ರ ಸಾಗರ್