Monday, 31 December 2018

ಹೊಸ ವರ್ಷದ ಶುಭಾಷಯಗಳು.

ಎಲ್ಲರಿಗೂ ಹೊಸ ವರ್ಷ 2020ರ ಶುಭಾಶಯಗಳು. ಹೊಸತರ ಸಂಚಾರದಲ್ಲಿ ಕಳೆದುಹೋದ ಘಳಿಗೆಗೆ ಅಕ್ಕರೆಯಿಂದ ಧನ್ಯವಾದಗಳನ್ನು ಅರ್ಪಿಸುವೆ. 2019ರಲ್ಲಿ ಅದೆಷ್ಟೋ ಸವಿ ನೆನಪುಗಳು, ಸಾಧನೆಗಳು ಬಾಳಿಗೆ ಮುಕುಟವಾಗಿವೆ. ನೋವುಗಳನ್ನು ಜಯಿಸಿ ಸಂತಸಧಾರೆಯನ್ನುಪ್ಪಿದ ಸಂತೃಪ್ತಿಭಾವವಿದೆ. ಹಲವು ವರ್ಷಗಳಿಂದ ಕಾದಿದ್ದ ಗೆಲುವು ಲಭಿಸಿದೆ. ಹೀಗೆ ಬಾಳಿನ ಪಯಣದಲ್ಲಿ ನಾವು ಸಾಗುತ್ತಾ ಹೋದಂತೆ ಸುಖ, ದುಃಖಗಳ ತಕ್ಕಡಿಯಲ್ಲಿ ಏರಿಳಿತ ಸಹಜ. ಅದೇನೇ ಇದ್ದರೂ ಸಕಾರಾತ್ಮಕವಾಗಿ ಗೆದ್ದೇ ಗೆಲ್ಲುವೆ ಒಂದು ದಿನ ಎನ್ನುತ್ತಾ ಸತ್ಯದ ನಡೆಯಲ್ಲಿ ನ್ಯಾಯದ ಪಥದಲ್ಲಿ ಸಾಗುವುದೇ ಸಚ್ಚರಿತ ಬಾಳ್ವೆಯ ಸದ್ಗತಿ. ಬಾಳಲ್ಲಿ ಹಿಡಿದ ಹಠವಂತೂ ಬಿಡದೇ ಖಾಲಿಯಾಗುವ ದಿನಗಳ ಅನ್ಯಥಾ ಲೆಕ್ಕಹಾಕುವ ಬದಲು ಏನಾದರೂ ಸಾಧಿಸಲು ಅವಕಾಶವಿರುವಾಗ ಮೌನವೇಕೆ? ಸದಾ ನಗುತ್ತಾ ನೋವಿಗೆ ನೋವಾಗಿ ಕಾಡಬೇಕು. ಮಿಥ್ಯದ ಹಾದಿಗೆ ಬೇಲಿಹಾಕಬೇಕು. ಸೌಜನ್ಯದ ಸೌಹಾರ್ದ ಬದುಕಿಗೆ ಎಲ್ಲರೊಂದಿಗೆ ಕೈಜೋಡಿಸುತ್ತಾ...ಇಷ್ಟು ವರ್ಷಗಳವರೆಗೂ ಅಕ್ಕರೆಯ ಸ್ನೇಹ ಸೇತುವೆಯಾಗಿ ನನ್ನ ಹರಸಿದ ನಲ್ಮೆಯ ನನ್ನ ಸ್ನೇಹ ವೃಂದಕ್ಕೆ ನಾ ಋಣಿ. ಎಷ್ಟೋ ಜನ ಅನರ್ಘ ರತ್ನಗಳು ನನಗೆ ದೊರೆತಿದ್ದು  ಸಾಮಾಜಿಕ ಜಾಲತಾಣಗಳ ವೇದಿಕೆಯಲ್ಲೇ. ಅಣ್ಣ, ತಮ್ಮ, ಅಕ್ಕ, ತಂಗಿ, ಉತ್ತಮ ಸ್ನೇಹಿತ, ಸ್ನೇಹಿತೆ ಹೀಗೆ ಒಬ್ಬೊಬ್ಬರೂ ಒಂದೊಂದು ರೂಪಕವಾಗಿ ನನಗೆ ಭಾಸವಾದರೆ ಹಲವೊಮ್ಮೆ ನನ್ನ ನೋವಿಗೆ ಸ್ಪಂದಿಸಿದ ಅದೆಷ್ಟೋ ಅಭಯದಾ ಬಂಧುವಾಗಿ ಕಂಡಿದ್ದಾರೆ. ನನ್ನ ಸ್ನೇಹಕ್ಕೆ ಪ್ರೀತಿಯಿಂದ ಸಲಹೆ ನೀಡಿದ, ಕಷ್ಟದಲ್ಲಿ ಸಹಕರಿಸಿದ ಜನರನ್ನು ಮರೆಯುವಂತಿಲ್ಲ. ಸಹಾಯಕ್ಕೆಂದು ಯಾರಿಗೆ ಕೇಳಿದರೂ ಇಲ್ಲವೆಂದಿಲ್ಲ. ಏನೇ ಆಗಲಿ, ಇರಲಿ, ಬದುಕಲ್ಲಿ ನಿಮ್ಮೆಲ್ಲರ ಸ್ನೇಹ ಸದಾ ನನಗೆ ಖುಷಿಯ ಕಡಲು ಎನ್ನುತ್ತಾ..ನಿಮ್ಮೆಲ್ಲರಿಗೂ ಹೊಸವರ್ಷದಲ್ಲಿ..ಅಂದರೆ ಮುಂಬರುವ ದಿನಗಳು ಸದಾ ನಲಿವು ತುಂಬಿದ ದಿನಗಳಾಗಲಿ..ನೋವೆನ್ನುವುದು ಅರೆಕ್ಷಣವೂ ನಿಮ್ಮ ಸುತ್ತ ಸುಳಿಯದಿರಲಿ...ಸಂಭ್ರಮದ ಬದುಕು ಸದಾ ನಿಮ್ಮದಾಗಲಿ..
"ಪ್ರೀತಿ ಬೇಡುವ ಸ್ನೇಹದ ಹೃದಯದಲಿ
ಒಲವ ಸಾಗರವೆ ನಿಮ್ಮ ಸ್ನೇಹವು
ನೋವು ಜೊತೆಯಾದ ಕಹಿ ದಿನಗಳಲಿ
ಸಂತೋಷದ ಹಿತಧಾರೆಯೆ ನಿಮ್ಮ ಸ್ನೇಹವು"

ಈ ಕ್ಷಣದಲ್ಲಿ ಹೊಸ ವರ್ಷ ಕವಿತೆಯನ್ನು ಪುನಃ ಪೋಸ್ಟ್ ಮಾಡುತ್ತಿರುವೆ..ನಿಮಗಾಗಿ, ನಿಮ್ಮೆಲ್ಲರ ಅಕ್ಕರೆಯ ಸ್ನೇಹದ ಪ್ರತೀಕವಾಗಿ..


“ಹೊಸ ವರುಷ”

ಹೊಸ ವರುಷವೆ ನೀ ಬೆಳಕಾಗು
ರೋಧನೆಯಿಲ್ಲದ ಜಗವಾಗು..

ಜ್ಞಾನ ದೀವಟಿಯು ನಿತ್ಯ ಬೆಳಗುತಿರಲಿ
ಸಂತಸದ ಹೊನಲು ನಿತ್ಯ ತುಂಬಿರಲಿ
ಎಲ್ಲರ ಮನಸು ಸದಾ ನಗುತಿರಲಿ
ಎಲ್ಲರ ಬದುಕು ಸದಾ ಪಳಿಸುತಿರಲಿ...

ಯಶಸ್ಸಿನ ಫಲವು ಸದಾ ಒಲಿಯಲಿ
ಜಗದ ಚೆಲುವು ಸದಾ ಸಂಭ್ರಮಿಸಲಿ
ಎಲ್ಲರ ಮೊಗದಲಿ ನಿತ್ಯ ನಗುವಿರಲಿ
ಸಹೋದರ ಬಂಧುಗಳಲಿ ನಿತ್ಯ ಹಿತವಿರಲಿ...

ಪ್ರಕೃತಿಯ ಮುನಿಸು ಕಾಡದಿರಲಿ
ಮಳೆ ಬೆಳೆಯು ಚಿನ್ನವಾಗಲಿ
ಜಗದ ಜೀವಗಳು ಸೊರಗದಿರಲಿ
ಸಂತುಷ್ಟಿಯ ಹಿತವು ಮೇಳೈಸುತಿರಲಿ...

ಕ್ಷಾಮ ರೋಗಗಳು ಬಾರದಿರಲಿ
ಕಹಿಯ ಸತ್ವವು ನುಸುಳದಿರಲಿ
ನಾಡಿನ ನಾಯಕರು ಸೇವಕರಾಗಿರಲಿ
ನಾಡಿನ ಜನರು ನಗುತಿರಲಿ...

ರಚನೆ: ರಾಮಚಂದ್ರ ಸಾಗರ್




Monday, 26 November 2018

ರಾಮಚಂದ್ರ ಸಾಗರ್ ರವರ ಪರಿಚಯ

           
                     "ಹರಯ ನೀ ಬಂದಂತ ಸಮಯ"
                                         ಡಾ. ನಾ. ಡಿಸೋಜ,

     ಸಾಗರ ನಗರ ಸಭೆಯ ಲೆಕ್ಕಾಧಿಕಾರಿಗಳು, ಕವಿಗಳೂ, ನನ್ನ ಸ್ನೇಹಿತರೂ ಆದ ಶ್ರೀ ರಾಮಚಂದ್ರ ಅವರ
ಈವರೆಗಿನ 5 ಕವನ ಸಂಕಲನಗಳನ್ನ ನನ್ನ ಮುಂದಿರಿಸಿಕೊಂಡು ಈ ಮಾತುಗಳನ್ನ ಬರೆಯುತ್ತಿದ್ದೇನೆ.
2014ರಲ್ಲಿ ಪ್ರಕಟವಾದ "ಬುಧ್ದಿ ಜೀವಿ", 2015 "ಶ್ರಮದ ಹನಿಗಳು". 2016 "ಜನನಾಯಕ" 2016
"ನಗುವ ಚಂದಿರ" ಹಾಗು 2018ರ "ಒಲವ ಸಾನಿಧ್ಯದಲೆ" ಇವುಗಳ ಮೂಲಕ ಕವಿಯಾಗಿ ಶ್ರೀ ರಾಮಚಂದ್ರ
ನಡೆದು ಬಂದ ದಾರಿಯನ್ನ ಗುರುತಿಸಲು ಸಾಧ್ಯವಾಗುತ್ತದೆ ಎಂಬ ಉದ್ದೇಶದಿಂದ ನಾನು ಈ ಮಾತುಗಳನ್ನ
ಬರೆಯುತ್ತಿದ್ದೇನೆ.

    ಸುಮಾರು 25 ಕವನಗಳ, ಕೇವಲ 50 ಪುಟಗಳ ರಾಮಚಂದ್ರ ಅವರ ಮೊದಲ ಸಂಕಲನ "ಬುಧ್ದಿ ಜೀವಿ"
ಅವರೇ ಮುನ್ನುಡಿಯಲ್ಲಿ ಹೇಳಿ ಕೊಂಡಿರುವ ಹಾಗೆ " ಮನುಷ್ಯ ಅಂತರಂಗದಲ್ಲಿ ತನಗೆ ತಿಳಿದಿರುವ ಸತ್ಯ ಬಯಕೆ
ಹಿತ ಅನಿಷ್ಟ ಮೋಸ ಏನೇ ಇದ್ದರು ಅದನ್ನು ಬಹಿರ್ಲೋಕದಲಿ ವೈರುಧ್ಯವಾಗಿ ನಟಿಸಿ ಬಿಂಬಿಸಿ ಮುಖವಾಡ
ಧರಿಸಿದ್ದಾನೆ. ದಿನಗಳೆದಂತೆ ಸ್ವಾರ್ಥ ಸಾಧನೆಯೇ ಗುರಿಯಾಗಿದೆ. ಅನ್ಯರ ಬದುಕು ಜೀವಿಗಳ ಮೇಲಿನ ಪ್ರೀತಿ
ಕಡಿಮೆ ಅಗುತ್ತಿದೆ". ಇಂತಹಾ ವಿಷಯವನ್ನ ತಮ್ಮ ಕವಿತೆಗಳಲ್ಲಿ ನೀಡುವ ಒಂದು ಯತ್ನವನ್ನ ರಾಮಚಂದ್ರ
ಮಾಡಿದ್ದಾರೆ. ನಮ್ಮ ಸಮಾಜದ ಒಂದು ವರ್ಗವನ್ನ "ಬುಧ್ದಿಜೀವಿ" ವರ್ಗ ಎಂದು ಪರಿಗಣಿಸಿ, ಈ ಬುಧ್ದ್ದಿವಂತ
ವರ್ಗ ತನ್ನ ಜಾಣತನದ ಮೂಲಕ ಏನೆಲ್ಲ ಅನುಚಿತವಾದುದನ್ನ ಮಾಡುತ್ತ ಬಂದಿದೆ ಎಂಬುದನ್ನ ಅವರು
ಕಾವ್ಯದ ಮೂಲಕ ಹೇಳುವ ಯತ್ನ ಮಾಡಿದ್ದಾರೆ

     ಚಂಗಪ್ಪ ಸಿದ್ದಪ್ಪ ಎಂಬ ಈರ್ವರು ದುಡಿಮೆ ಗಾರರನ್ನ ಇರಿಸಿ ಕೊಂಡು ಬುಧ್ದಿ ಜೀವಿ ಅನಿಸಿ ಕೊಂಡವರು
ಈ ದುಡಿಮೆಗಾರರನ್ನ ಹೇಗೆ ವಂಚನೆಗೆ ಒಳಪಡಿಸುತ್ತಾರೆ ಎಂಬುದನ್ನ ಹೇಳುತ್ತಾರೆ ರಾಮಚಂದ್ರ.
ದಿನಕೊಂದು ಬಾರಿ ನೀ ಹಾಕಿದರು ಅನ್ನ
ನಿನ್ನ ಮನೆಗೆ ಹಾಕದೆ ಕನ್ನ
ಸುರಿಸಿದರು ನಿನ್ನ ಮನೆಗೆ ಹೊನ್ನ
ಇಂಥಹಾ ಚಂಗಪ್ಪ ಸಿದ್ದಪ್ಪ ಸತ್ತಾಗ ಮಾತ್ರ ಈ ಬುಧ್ದಿ ಜೀವಿ ಅವರ ಹೆಣವನ್ನು ಕೂಡ ನೋಡಲು ಹೋಗಲಿಲ್ಲ
ಎಂಬುದೇ ಕವಿಯ ಆಕ್ರೋಶ. ಅವರ ಈ ಸಿಟ್ಟು ಉಳಿದ ಕವನಗಳಲ್ಲೂ ಕಾಣಿಸಿ ಕೊಂಡಿದೆ. ನೀ ತಲುಪುವು
ದೆಲ್ಲಿಗೆ, ಆತ್ಮಹತ್ಯೆ, ಸಮಾನತೆ, ಹೆಸರು, ಪೌರಕಾರ್ಮಿಕ, ಮೊದಲಾದ ಕವಿತೆಗಳು ಇಲ್ಲಿವೆ. ಇದು ಲೇಖಕರ
ಮೊದಲ ಕವನ ಸಂಕಲನವಾದರೂ ಕಾವ್ಯದಲ್ಲಿ ಪ್ರೌಢಿಮೆ ಇದೆ. ಆದರೂ ಪ್ರಾರಂಭದ ಕೆಲ ದೋಷಗಳು
ಅಲ್ಲಲ್ಲಿ ಕಾಣಿಸುತ್ತವೆ.

     ರಾಮಚಂದ್ರ ಅವರ ಎರಡನೇ ಕವನ ಸಂಕಲನ "ಶ್ರಮದ ಹನಿಗಳು". ಈ ಸಂಕಲನದಲ್ಲಿ ಸುಮಾರು
65 ಕವಿತೆಗಳಿವೆ. ಈ ಸಂಕಲನದ ಮೊದಲ ಕವಿತೆಯೇ ಶ್ರಮ ಜೀವಿಯೋರ್ವನ ನೋವನ್ನು ಪ್ರತಿ
ಬಿಂಬಿಸುತ್ತದೆ.
ಬೆಂಕಿಯಲಿ ಬೆಂದು ಬಸವಳಿದು
ಕಬ್ಬಿಣವನು ಮೃದುವಾಗಿಸುತಲಿರಲು
ಜ್ವಾಲೆಯ ಕೆನ್ನಾಲಿಗೆಯಲಿ ಬೆವರಿಳಿದು
ಶ್ರಮದ ಹನಿಗಳು ದೇಹವನು ಒದ್ದೆಯಾಗಿಸಿರಲು

ಓರ್ವ ಶ್ರಮ ಜೀವಿ ತನ್ನ ಬದುಕನ್ನ ಹೇಗೆ ಸಾಗಿಸುತ್ತಾನೆ ಅನ್ನುವ ಚಿತ್ರಣ ಇಲ್ಲಿದೆ. ಉಳಿದ ಕವನಗಳು ಕೂಡ
ಇದೇ ಧ್ವನಿಯನ್ನ ಹೊರಡಿಸುತ್ತವೆ, ಈ ಕವಿತೆಯ ಜೊತೆಯಲ್ಲಿ ಕವಿ ಕೆಲ ಪ್ರಣಯ ಕವಿತೆಗಳನ್ನೂ
ನೀಡಿದ್ದಾರೆ. ಓರ್ವ ಗೆಳತಿ "ಜೊತೆಯಾಗು" ಎಂದು ತನ್ನ ಗೆಳೆಯನಿಗೆ ಹೇಳುತ್ತ;

ಬಾನ ವಿಸ್ತಾರಕಿಂತಲು ನಮ್ಮೊಲವು ಮಿಗಿಲೆಂದು
ನೀ ನುಡಿದ ಪದಗಳೇ ಗುನುಗುತಿರಲು
ಬಾನ ಚುಕ್ಕಿಯಂತೆ ಬೆಳಗು ಬಾ ನನ್ನನು
ನಿಧಾನಿಸದಿರು ಅಂಜದಿರು ಗೆಳೆಯನೆ

ಎಂದು ಗೆಳತಿ ಅಹ್ವಾನಿಸುವ ಚಿತ್ರ ಸೊಗಸಾಗಿದೆ.
     ಇವರ ಮೂರನೆಯ ಸಂಕಲನ "ಜನನಾಯಕ"ಕ್ಕೆ ಮುನ್ನುಡಿ ಬರೆದ ಶ್ರೀ ಕಡಿದಾಳ ಶಾಮಣ್ಣ ಮುನ್ನುಡಿಯಲ್ಲಿ
"ಇಂದಿನ ಹೆಚ್ಚು ಸಂಖ್ಯೆಯ ಪೊಳ್ಳು ನಾಯಕರ ಬಗ್ಗೆ ಅರಿವು ಮೂಡಿಸುತ್ತ ಜೊತೆಗೆ ಪ್ರಜೆಗಳಿಗೆ ಕಿವಿಮಾತು
ಹೇಳುತ್ತ" ಈ ಕವಿತಗಳು ಸಾಗುತ್ತವೆ ಅನ್ನುವ ಮಾತನ್ನ ಹೇಳುತ್ತಾರೆ. ಇಲ್ಲಿಯ 74 ಕವಿತೆಗಳ ಇದೇ ಕೆಲಸ
ಮಾಡುತ್ತವೆ ಕೂಡ, ಇವರ ದೃಷ್ಟಿಯಲ್ಲಿ ಜನನಾಯಕ ಅಂದರೆ;

ಜನತಂತ್ರವನು ಸ್ವಹಿತಕೆ ಸರಕಾಗಿಸಿ ಕೊಂಡವನು
ದ್ರವ್ಯ ಕೇಳಿಯನು ಬದುಕಿಗೆ ಉಸಿರಾಗಿಸಿ ಕೊಂಡವನು
ದಾರಿದ್ರ್ಯಗಳನು  ಹಾಗೆಯೇ ಉಳಿಸುವನು
ದಮ್ಮಿರದ ಸಮಾಜಕೆ ಮುನ್ನುಡಿಗಾರನು.....

ಅನ್ನುತ್ತಾರೆ. ನಮ್ಮಲ್ಲಿ ಇದೀಗ ಜನ ನಾಯಕರು ಎಂದು ಕರೆಸಿ ಕೊಳ್ಳುವವರ ಸಂಖ್ಯೆ ಹೆಚ್ಚಿದೆ. ಅಲ್ಲದೆ ಇವರೆಲ್ಲ
ಜನ ನಾಯಕರೆಂದು ಕರೆಸಿ ಕೊಳ್ಳುತ್ತಾರಲ್ಲದೆ ಅವರಿಗೆ ಖಂಡಿತ ಆ ಯೋಗ್ಯತೆ ಇರುವುದಿಲ್ಲ. ಇಂತಹಾ
ಜನ ನಾಯಕರ ಬಗ್ಗೆ ವಿವಿಧ ರೀತಿಯಲ್ಲಿ ಬರೆಯುತ್ತಾರೆ ರಾಮಚಂದ್ರ. ಇವುಗಳ ನಡುವೆಯೂ ಅಂಬೇಡ್ಕರ್
ಲಾಲ್ ಬಹದ್ದೂರ ಶಾಸ್ತ್ರಿ, ಮಹಾತ್ಮ ಗಾಂಧಿ ಮೊದಲಾದ ಕವಿತೆಗಳು ಚೆನ್ನಾಗಿವೆ. ಇಂದು ಇಡೀ ಸಮುದಾಯ
ವನ್ನ ಕೆಡಿಸುತ್ತಿರುವ ರಾಹಕೀಯ ನಾಯಕರ ಕುರಿತು ರಾಮಚಂದ್ರ ಬರೆದಿರುವುದು ಮೆಚ್ಚ ಬೇಕಾದ ವಿಷಯ
.
     ರಾಮಚಂದ್ರ ಅವರ ನಾಲ್ಕನೆಯ ಪುಸ್ತಕ "ನಗುವ ಚಂದಿರ". ಮತ್ತೆ 75 ಕವಿತೆಗಳ ಸಂಕಲನ. ಹಜ್ಜೆ
ಹೆಜ್ಜೆಗೂ ತನ್ನನ್ನ ಒಲಿದವಳ ಚೆಲುವನ್ನ ಕುರಿತು ಹೊಗಳುತ್ತ, ಅವಳ ಆಟ ಒಡನಾಟ ಬಳುಕು ಕುಲುಕು
ಗಳನ್ನ ಕೊಂಡಾಡುತ್ತ ಮೈಮರೆಯುತ್ತಾನೆ ಈ ಕವಿ.

ನಿನ್ನ ನೆರಳಲಿ ತಂಪಾಗಿದೆ ತನುವು
ನಿನ್ನ ನಗುವಲಿ ಸೆರೆಯಾಗಿದೆ ಮನಸು
ನಿನ್ನ ಜೊತೆಯಲಿ ಸಾಗ ಬೇಕಿದೆ ಬದುಕು
ಬಾಳ ಪಥದಲಿ ನಲಿಯ ಬೇಕಿದೆ ನಾವು

ಇಲ್ಲಿಯ ಎಲ್ಲ ಕವಿತೆಗಳೂ ಇದೇ ದಾಟಿಯಲ್ಲಿ ಸಾಗುತ್ತವೆ. "ಸದಿಲ್ಲದೆ ಬಂದೆ" "ಹಾಲು ಜೇನು" "ಅವಳ ಹೆಸರು"
"ನಿನ್ನ ಕಣ್ಣಾಲಿಯಲಿ" "ನೀನೇನೆ ಚೆಲುವೆ"  "ಕಾಡುತಿದೆ ನಗುವು" "ನೀ ರಕ್ಷೆಯಾದೆ"
"ನೋಯಿಸದಿರು" ಹೀಗೆ ತನ್ನೊಲವಿನ ಪ್ರೀಯ ತಮೆಯನ್ನು ಪ್ರತಿ ಸಂದರ್ಭದಲ್ಲಿಯೂ ನೆನಸಿ ಕೊಳ್ಳುವ,
ಕೊಂಡಾಡುವ, ಬಣ್ಣಿಸುವ ಈ ಪ್ರಯತ್ನ ಕನ್ನಡಕ್ಕೆ ಹೊಸದಲ್ಲ. ಕವಿ ಕೆ. ಎಸ್. ನರಸಿಂವ ಸ್ವಾಮಿಯವರು ಈ
ಕೆಲಸ ಮಾಡಿದ್ದಾರಾದರೂ ಪ್ರೀತಿ ಪ್ರೇಮ ಅನ್ನುವಂತಹದೇ ಅಂತಹದ್ದು. ಅದು ಎಷ್ಟೇ ಹಾಡಿದರೂ ಬರೆದರೂ
ಬೇಸರ ವಾಯಿತು ಎಂದಿಲ್ಲ. ರಾಮಚಂದ್ರ ಅದನ್ನ ಮತ್ತೊಮ್ಮೆ ಇಲ್ಲಿ ಬಳಸಿ ಕೊಂಡಿದ್ದಾರೆ. ಅವರಯತ್ನ
ಸಾರ್ಥಕವಾಗಿದೆ ಕೂಡ.

     "ಒಲವಸಾನಿಧ್ಯದಲೆ" ಅವರ ಐದನೆಯ ಸಂಕಲನ ಪ್ರಕಟವಾದದ್ದು 2018ರಲ್ಲಿ. ಮತ್ತೆ ಇದರಲ್ಲಿ ಕೇವಲ
70 ಕವನಗಳನ್ನ ಕವಿ ನೀಡಿದ್ದಾರೆ. ಇನ್ನೂ ಒಂದು ವಿಶೇಷ ಅಂದರೆ ಪ್ರತಿ ಕವನವೂ ತನ್ನ ಜೊತೆಯಲ್ಲಿ
ಒಂದೊಂದು ಛಾಯಾ ಚಿತ್ರವನ್ನ ಜೋಡಿಸಿ ಕೊಂಡು ಸಂಕಲನದ ಹೆಸರಿಗೆ ಸಾರ್ಥಕ್ಯವನ್ನ ತಂದು ಕೊಟ್ಟಿದೆ.
ಭಾವ ಚಿತ್ರಗಳು ನೆಪಕ್ಕೆ ಚಿತ್ರಗಳಾಗಿ ಉಳಿದಿಲ್ಲ. ಅವು ಕವಿತೆಯ ಭಾವವನ್ನ ಪ್ರತಿ ಬಿಂಬಿಸುವಂತೆ ಇವೆ.

     ಪ್ರೀತಿಯ ಕುರಿತು ಬಹಳ ದಿನ ಬರೆಯಲು ಆಗುವುದಿಲ್ಲ. ಹೀಗೆಲ್ಲ ಬರೆಯಲು ಅಲ್ಲಿ ಏನಿರುತ್ತದೆ ಎಂಬುದು
ಕೆಲವರ ಪ್ರಶ್ನೆ. ಈ ಪ್ರಶ್ನೆಗೆ ಉತ್ತರ ರಾಮಚಂದ್ರ ಅವರಲ್ಲಿ ಇದೆ.

ಕವಿತೆ ಎಂದರೆ ಎದೆಯೊಳಗೆ
ನೀ ಅರಳಿಸಿದ ಸವಿಗನಸು
ಒಲವ ತಂಗಾಳಿಯೊಳಗೆ
ನೀ ಬೆರೆಸಿದ ಸೌಗಂಧವು.

ಇಂತಹಾ ಒಂದು ಉತ್ತರವನ್ನ ಕಂಡು ಕೊಂಡಿರುವ ಈ ಕವಿ, ಪ್ರೇಮ ಕಾವ್ಯಗಳನ್ನ ಮತ್ತೂ ಬರೆಯುತ್ತಿರಲಿ
ಎಂದು ನಾನು ಹಾರೈಸುತ್ತೇನೆ. ಅಲ್ಲದೆ ಶ್ರೀ ರಾಮಚಂದ್ರ ಅವರಿಗೆ ಆ ವಯಸ್ಸಿದೆ ಇದು ಬರೆಯುವ ಕಾಲ.
ಬೆರೆಯುವ ಕಾಲ. ಈ ಕಾಲದ ಪ್ರಯೋಜನವನ್ನ ಅವರು ಪಡೆಯಲಿ ಎಂದು ಹಾತೈಸುತ್ತೇನೆ.

ಸಾಗರ=577 401. =ಡಾ. ನಾ. ಡಿಸೋಜ.
 
 

Wednesday, 21 November 2018

ಮೋಹದ ಮಳೆಯಾದೆ

ಒಲವಸುಧೆಯಂತೆ ಉಸಿರಾದೆ ನೀ ಹೃದಯಕೆ 
ಮೋಹದ ಕಡಲಲೆಯಂತೆ ನೀ ತಣಿಸಿದೆ  ಬಾಳಿಗೆ
ಬಿರಿದ ಹೂವಂತೆ ನೀ ಕಂಪಿಸಿದೆ ಬಾಳಲಿ
ಒಲವ ಕಿರಣದಂತೆ ನೀ ಬೆಳಗಿದೆ ಮನದಲಿ

ಬಯಕೆಯ ಮನೆಯೊಳಗೆ ಮೋಹದ ಮಳೆಯಾದೆ
ನವ್ಯತೆ ಹಾದಿಯೊಳಗೆ ಭವ್ಯತೆಯ ಕನಸಾದೆ
ಹೂಬನದ ಸೊಬಗಿನಂತೆ ಚೆಲುವಿನ ಜಗವಾದೆ
ಶುಭದ ಹಾಡಿನೊಳಗೆ ಮಮತೆಯ ದನಿಯಾದೆ

ನಗುವ ಕಲೆಯೊಳಗೆ ಮರೆಯಾಗಿಸಿದೆ ಕಹಿಪಾಶ
ಸಲ್ಲಾಪದ ಸವಿಯೊಳಗೆ ಮೂಡಿಸಿದೆ ನವೋಲ್ಲಾಸ
ಸೌಜನ್ಯದ ಸಿರಿಯೊಳಗೆ ನಾವಿಕಳಾದೆ ನಾವೆಗೆ
ಸಂಪ್ರೀತಿಯ ಒಡಲೊಳಗೆ ಆಸರೆಯಾದೆ ಜೀವಕೆ

ಸೌಖ್ಯದ ಹಾದಿಯೊಳಗೆ ನಗುವ ಹೂವಾದೆ
ಅಕ್ಕರೆಯ ನೌಕೆಯೊಳಗೆ ಒಲವ ಸಾರಥಿಯಾದೆ
ಶುಭ್ರತೆಯ ಮನದೊಳಗೆ ಒಲವು ಶುಭವಾಗಿಸಿದೆ
ರಮಿಸುವ ನಯನದೊಳಗೆ ಅಭಯದ ರಕ್ಷೆಯಾದೆ

ಬೆಳುದಿಂಗಳು ರಾತ್ರಿಯಲಿ ಶಶಿಗೆ ಅಲೆದಾಡಿಸಿದೆ
ಸೌಂದರ್ಯ ಸಮರದಲಿ ನೈದಿಲೆಗೆ ನಾಚಿಸಿದೆ
ತಂಪಿರುಳು ಹವೆಯಲಿ ಮೈಮನಕೆ ಬಿಸಿಯಾಗಿಸಿದೆ
ಸವಿಜೇನಿನ ಮಳೆಯಲಿ ನೀ ಉದಿತ ಮಧುವಾದೆ

ರಾಮಚಂದ್ರ ಸಾಗರ್