ಎಲ್ಲರಿಗೂ ಹೊಸ ವರ್ಷ 2020ರ ಶುಭಾಶಯಗಳು. ಹೊಸತರ ಸಂಚಾರದಲ್ಲಿ ಕಳೆದುಹೋದ ಘಳಿಗೆಗೆ ಅಕ್ಕರೆಯಿಂದ ಧನ್ಯವಾದಗಳನ್ನು ಅರ್ಪಿಸುವೆ. 2019ರಲ್ಲಿ ಅದೆಷ್ಟೋ ಸವಿ ನೆನಪುಗಳು, ಸಾಧನೆಗಳು ಬಾಳಿಗೆ ಮುಕುಟವಾಗಿವೆ. ನೋವುಗಳನ್ನು ಜಯಿಸಿ ಸಂತಸಧಾರೆಯನ್ನುಪ್ಪಿದ ಸಂತೃಪ್ತಿಭಾವವಿದೆ. ಹಲವು ವರ್ಷಗಳಿಂದ ಕಾದಿದ್ದ ಗೆಲುವು ಲಭಿಸಿದೆ. ಹೀಗೆ ಬಾಳಿನ ಪಯಣದಲ್ಲಿ ನಾವು ಸಾಗುತ್ತಾ ಹೋದಂತೆ ಸುಖ, ದುಃಖಗಳ ತಕ್ಕಡಿಯಲ್ಲಿ ಏರಿಳಿತ ಸಹಜ. ಅದೇನೇ ಇದ್ದರೂ ಸಕಾರಾತ್ಮಕವಾಗಿ ಗೆದ್ದೇ ಗೆಲ್ಲುವೆ ಒಂದು ದಿನ ಎನ್ನುತ್ತಾ ಸತ್ಯದ ನಡೆಯಲ್ಲಿ ನ್ಯಾಯದ ಪಥದಲ್ಲಿ ಸಾಗುವುದೇ ಸಚ್ಚರಿತ ಬಾಳ್ವೆಯ ಸದ್ಗತಿ. ಬಾಳಲ್ಲಿ ಹಿಡಿದ ಹಠವಂತೂ ಬಿಡದೇ ಖಾಲಿಯಾಗುವ ದಿನಗಳ ಅನ್ಯಥಾ ಲೆಕ್ಕಹಾಕುವ ಬದಲು ಏನಾದರೂ ಸಾಧಿಸಲು ಅವಕಾಶವಿರುವಾಗ ಮೌನವೇಕೆ? ಸದಾ ನಗುತ್ತಾ ನೋವಿಗೆ ನೋವಾಗಿ ಕಾಡಬೇಕು. ಮಿಥ್ಯದ ಹಾದಿಗೆ ಬೇಲಿಹಾಕಬೇಕು. ಸೌಜನ್ಯದ ಸೌಹಾರ್ದ ಬದುಕಿಗೆ ಎಲ್ಲರೊಂದಿಗೆ ಕೈಜೋಡಿಸುತ್ತಾ...ಇಷ್ಟು ವರ್ಷಗಳವರೆಗೂ ಅಕ್ಕರೆಯ ಸ್ನೇಹ ಸೇತುವೆಯಾಗಿ ನನ್ನ ಹರಸಿದ ನಲ್ಮೆಯ ನನ್ನ ಸ್ನೇಹ ವೃಂದಕ್ಕೆ ನಾ ಋಣಿ. ಎಷ್ಟೋ ಜನ ಅನರ್ಘ ರತ್ನಗಳು ನನಗೆ ದೊರೆತಿದ್ದು ಸಾಮಾಜಿಕ ಜಾಲತಾಣಗಳ ವೇದಿಕೆಯಲ್ಲೇ. ಅಣ್ಣ, ತಮ್ಮ, ಅಕ್ಕ, ತಂಗಿ, ಉತ್ತಮ ಸ್ನೇಹಿತ, ಸ್ನೇಹಿತೆ ಹೀಗೆ ಒಬ್ಬೊಬ್ಬರೂ ಒಂದೊಂದು ರೂಪಕವಾಗಿ ನನಗೆ ಭಾಸವಾದರೆ ಹಲವೊಮ್ಮೆ ನನ್ನ ನೋವಿಗೆ ಸ್ಪಂದಿಸಿದ ಅದೆಷ್ಟೋ ಅಭಯದಾ ಬಂಧುವಾಗಿ ಕಂಡಿದ್ದಾರೆ. ನನ್ನ ಸ್ನೇಹಕ್ಕೆ ಪ್ರೀತಿಯಿಂದ ಸಲಹೆ ನೀಡಿದ, ಕಷ್ಟದಲ್ಲಿ ಸಹಕರಿಸಿದ ಜನರನ್ನು ಮರೆಯುವಂತಿಲ್ಲ. ಸಹಾಯಕ್ಕೆಂದು ಯಾರಿಗೆ ಕೇಳಿದರೂ ಇಲ್ಲವೆಂದಿಲ್ಲ. ಏನೇ ಆಗಲಿ, ಇರಲಿ, ಬದುಕಲ್ಲಿ ನಿಮ್ಮೆಲ್ಲರ ಸ್ನೇಹ ಸದಾ ನನಗೆ ಖುಷಿಯ ಕಡಲು ಎನ್ನುತ್ತಾ..ನಿಮ್ಮೆಲ್ಲರಿಗೂ ಹೊಸವರ್ಷದಲ್ಲಿ..ಅಂದರೆ ಮುಂಬರುವ ದಿನಗಳು ಸದಾ ನಲಿವು ತುಂಬಿದ ದಿನಗಳಾಗಲಿ..ನೋವೆನ್ನುವುದು ಅರೆಕ್ಷಣವೂ ನಿಮ್ಮ ಸುತ್ತ ಸುಳಿಯದಿರಲಿ...ಸಂಭ್ರಮದ ಬದುಕು ಸದಾ ನಿಮ್ಮದಾಗಲಿ..
"ಪ್ರೀತಿ ಬೇಡುವ ಸ್ನೇಹದ ಹೃದಯದಲಿಒಲವ ಸಾಗರವೆ ನಿಮ್ಮ ಸ್ನೇಹವು
ನೋವು ಜೊತೆಯಾದ ಕಹಿ ದಿನಗಳಲಿ
ಸಂತೋಷದ ಹಿತಧಾರೆಯೆ ನಿಮ್ಮ ಸ್ನೇಹವು"
ಈ ಕ್ಷಣದಲ್ಲಿ ಹೊಸ ವರ್ಷ ಕವಿತೆಯನ್ನು ಪುನಃ ಪೋಸ್ಟ್ ಮಾಡುತ್ತಿರುವೆ..ನಿಮಗಾಗಿ, ನಿಮ್ಮೆಲ್ಲರ ಅಕ್ಕರೆಯ ಸ್ನೇಹದ ಪ್ರತೀಕವಾಗಿ..
“ಹೊಸ ವರುಷ”
ಹೊಸ ವರುಷವೆ ನೀ ಬೆಳಕಾಗು
ರೋಧನೆಯಿಲ್ಲದ ಜಗವಾಗು..
ಜ್ಞಾನ ದೀವಟಿಯು ನಿತ್ಯ ಬೆಳಗುತಿರಲಿ
ಸಂತಸದ ಹೊನಲು ನಿತ್ಯ ತುಂಬಿರಲಿ
ಎಲ್ಲರ ಮನಸು ಸದಾ ನಗುತಿರಲಿ
ಎಲ್ಲರ ಬದುಕು ಸದಾ ಪಳಿಸುತಿರಲಿ...
ಯಶಸ್ಸಿನ ಫಲವು ಸದಾ ಒಲಿಯಲಿ
ಜಗದ ಚೆಲುವು ಸದಾ ಸಂಭ್ರಮಿಸಲಿ
ಎಲ್ಲರ ಮೊಗದಲಿ ನಿತ್ಯ ನಗುವಿರಲಿ
ಸಹೋದರ ಬಂಧುಗಳಲಿ ನಿತ್ಯ ಹಿತವಿರಲಿ...
ಪ್ರಕೃತಿಯ ಮುನಿಸು ಕಾಡದಿರಲಿ
ಮಳೆ ಬೆಳೆಯು ಚಿನ್ನವಾಗಲಿ
ಜಗದ ಜೀವಗಳು ಸೊರಗದಿರಲಿ
ಸಂತುಷ್ಟಿಯ ಹಿತವು ಮೇಳೈಸುತಿರಲಿ...
ಕ್ಷಾಮ ರೋಗಗಳು ಬಾರದಿರಲಿ
ಕಹಿಯ ಸತ್ವವು ನುಸುಳದಿರಲಿ
ನಾಡಿನ ನಾಯಕರು ಸೇವಕರಾಗಿರಲಿ
ನಾಡಿನ ಜನರು ನಗುತಿರಲಿ...
ರಚನೆ: ರಾಮಚಂದ್ರ ಸಾಗರ್