Tuesday, 13 November 2018

ಹೃದಯದ ಕರೆ

ಗೆಳತಿಯೆ ನೀ ಕೇಳು ಬಾ
ಹೃದಯದ ಪ್ರೀತಿಯ ಕರೆಯನು
ಒಲವೆ ನೀ ನೀಡು ಬಾ
ಬಾಳಿಗೆ ಒಲವಿನ ವಚನವನು

ಸಖಿಯೆ ನೀ ಒಲಿದು ಬಾ
ಬಾಳನು ಸ್ನೇಹದಿ ಬೆಳಗಲು 
ಸಂಪನ್ನೆ ನೀ ಜೊತೆಯಾಗು ಬಾ
ಸತ್ಕಾರವು  ಬಾಳಾಗಿಸಲು

ಜೊತೆಗಾತಿ ನೀ ನಗುತ ಬಾ
ಬಾಳಿಗೆ ಪ್ರೀತಿಯ ನೆರಳಾಗಲು
ಚೆಲುವೆ ನೀ ದೀಪವಾಗಿ ಬಾ
ಮೋಹದ ಮನೆಯನು ಬೆಳಗಲು

ಕೋಮಲೆ ನೀ ಒಲವಿನಲೆಯಾಗಿ ಬಾ
ಅನುರಾಗದಲೆ ಬದುಕಲಿ ಬೀಸಲು
ಮಾಧುರಿಯೆ ನೀ ಮಧುವಾಗಿ ಬಾ
ತಂಪಿರುಳಲಿ ಸವಿ ಕನಸಾಗಲು

ಸೌಜನ್ಯವೆ ನೀ ಸೌಮ್ಯದ ನದಿಯಾಗಿ ಬಾ
ಸಂಪ್ರೀತಿಯ ತೇರಲಿ ನಲಿಯಲು
ಒಡತಿಯೆ ನೀ ಒಪ್ಪು ಬಾ
ಬಯಸಿದ ಹೃದಯದ ನಿವೇದನೆಯನು 

ರಾಮಚಂದ್ರ ಸಾಗರ್

Monday, 12 November 2018

ಎದೆಯ ದನಿಯಾಗು ಬಾ

ಗೆಳತಿ
ವಿಷವಾಗಿ ಕಾಡುತಿದೆ ಹೃದಯಕೆ
ನಿನ್ನ ಮೋಹದ ಪಾಶದ ಕುಣಿಕೆ
ಅತಿಯಾಗಿ ಕೊಲ್ಲುತಿದೆ ಮನಸಿಗೆ
ನಿನ್ನ ಸವಿ ನೆನಪಿನ ಸಿಹಿ ಕಾಣಿಕೆ

ಎದೆಯ ಒಲುಮೆಯ ದನಿಯೊಳಗು 
ನಿನ್ನದೆ ಹಗಲಿರುಳು ಮೊರೆತವು
ಒಲವಿನ ವೈಭವದ ಹಾದಿಯೊಳಗು 
ನೀನಿರದೆ ಮೌನದ ಅಭಿಷೇಕವು

ತಂಪಿರುಳು ಕಾಡುವ ಕನಸಿನೊಳಗು 
ನೀನಿರದೆ ಕ್ಷಣ ಕ್ಷಣವು ಸಪ್ಪೆಯು
ಸೌಂದರ್ಯ ಸಂಕಲನದ ಜಗದೊಳಗು 
ನೀನಿರದೆ ಸೊರಗಿದೆ ಚೆಲುವೆಲ್ಲವು

ಅನುರಾಗದ ಪ್ರೇಮ ನೌಕೆಯೊಳಗು
ನೀ ಜೊತೆಯಿರದೆ ನೀರವತೆಯ ನರ್ತನವು
ಶುಭದ ನಾದದ ಸ್ವರಮೇಳದೊಳಗು
ನೀ ಗುನುಗದೆ ಅನುರಾಗವು ಅಪೂರ್ಣವು

ಅಶೇಷ ಪ್ರೀತಿಯ ಕಡಲೊಳಗು
ನೀ ಸುಡುವ ಅಲೆಯಾಗಿ ಬೀಸದಿರು
ಬಯಸಿದ ಜೀವಕೆ ಕನಸಾಗಿ ಉಳಿಯದಿರು
ಪ್ರೀತಿಸಿದ ಮನಸಿಗೆ ಮುಳ್ಳಾಗಿ ಚುಚ್ಚದಿರು

ನೀ ಎದೆಯ ದನಿಯಾಗು ಬಾ
ಒಲವಸುತೆಯಾಗು ಬಾ 

ರಾಮಚಂದ್ರ ಸಾಗರ್

Sunday, 11 November 2018

ನೀ ಒಲಿಯದೆ!

ರುಜುವಾತಾಗಿದೆ ಅರಿವಾಗಿದೆ ಒಲವೆ
ನೀ ಇರದ ದಿನಗಳು ಕಹಿಯೆಂದಿವೆ
ಸುಖವೆಲ್ಲಿದೆ ನಲಿವೆಲ್ಲಿದೆ ಚೆಲುವೆ
ನೀ ಬಾರದ ಕ್ಷಣಗಳು ಕಳೆಗುಂದಿವೆ

ಹೃದಯವು ಕಳವಳಿಸಿದೆ ತಳಮಳಿಸಿದೆ 
ನೀ ಬಾರದ ಬದುಕು ಉರುಳೆಂದಿದೆ
ಆನಂದವು ಒಲವಾಲಾಪವು ಮರೆಯಾಗಿದೆ
ನೀ ಜೊತೆಯಿರದ ಹಾದಿಯು ಮುಳ್ಳಾಗಿದೆ

ಸಡಗರವು ಸಂಭ್ರಮವು ಮರೀಚಿಕೆಯಾಗಿವೆ
ನೀ ನಲಿಯದ ಸೌಧವು ಮಸಣವಾಗಿದೆ
ಸಂತಾಪವು ಸಂತಪ್ತವು ಜೊತೆಯಾಗಿವೆ
ನೀ  ಒಲಿಯದ ಬಾಳು ಅಳಲಾಗಿದೆ

ಸಮ್ಮೋಹವು ಸಮಾಗಮವು ಬರಿ ಕನಸಾಗಿವೆ
ನೀ ಕೈಹಿಡಿಯದ ಜಗವಿನ್ನು ನನಗೇತಕೆ?
ಸಂದೇಹವು ಅನುಮಾನವು ಒಳನುಸುಳಿತೆ
ನಾ ಹಂಬಲಿಸಿದ ಪ್ರೀತಿಗೆ ಕೈಕೊಳವಾಯಿತೆ?

ನೀ ಬಾರದೇ ನೀ ನಗು ನೀಡದೇ
ಕಂಪಿಸಿದ ಕನಸುಗಳು ಕಣ್ಣೀರಾಗಿವೆ
ನೀ ಆಗಮಿಸದೆ ನೀ ಮನ ಬೆಸೆಯದೆ
ಸಜೆ ನೀಡುವ ನದಿಯು ಈ ಬಾಳಾಗಿದೆ

ರಾಮಚಂದ್ರ ಸಾಗರ್

Wednesday, 12 September 2018

ಜೈ ಗಣೇಶ

ನನ್ನೆಲ್ಲ ಸಹೋದರ ಬಂಧುಗಳಿಗೆ ಗೌರಿ ಮತ್ತು ಗಣೇಶ ಹಬ್ಬದ ಶುಭಾಷಯಗಳು..ದೇವರು ಎಲ್ಲರಿಗೂ ಒಳಿತನ್ನು ಮಾಡಲಿ...ಬಾಳಲಿ ಸಮೃದ್ಧಿ ನೆಲೆಯಾಗಲಿ...ನಿಮಗಾಗಿ ಈ ಕವಿತೆ ಜೈ ಗಣೇಶ..

ಜೈ ಗಣೇಶ

ಸಹೋದರತೆಯ ಪ್ರತೀಕ ಗಣೇಶ
ಭಾವೈಕ್ಯತೆಯ ಬಂಧುವು ಗಣೇಶ
ದುಗುಡ ನಿವಾರಕ ಗಣೇಶ
ವಿಘ್ನ ನಾಶಕ ಗಣೇಶ
ಮಮತೆಯ ರೂಪಕ ಗಣೇಶ..

ಮನಗಳ ಬೆಸೆಯುವನು ಗಣೇಶ
ಒಪ್ಪಿದವರ ಹರಸುವನು ಗಣೇಶ
ನೊಂದವರ ಸಲಹುವನು ಗಣೇಶ
ಬೇಡಿದವರ ಕಾಪಿಡುವನು ಗಣೇಶ..

ಸತ್ಯವನು ಗೆಲ್ಲಿಸುವನು ಗಣೇಶ
ಕಪಟಿಯನು ಸೋಲಿಸುವನು ಗಣೇಶ
ನಂಬಿದವರನು ನಲಿಸುವನು ಗಣೇಶ
ಜ್ಞಾನವನು ವೃದ್ದಿಸುವನು ಗಣೇಶ..

ನಗುವು ನೀಡುವನು ಗಣೇಶ
ನೋವು ಮರೆಸುವನು ಗಣೇಶ
ತಂದೆ ತಾಯಿ ಜಗವೆಂದವನು
ಶಕ್ತಿಗಿಂತ ಬುದ್ಧಿ ಮೇಲೆಂದವನು
ಗಣೇಶ...ಜೈ ಗಣೇಶ...

ರಾಮಚಂದ್ರ ಸಾಗರ್