 |
| ಚಿತ್ರ: ಅನುಶಾ ರೈ |
ಗೆಳತಿ..
ಹಸಿರು ಬನದಲಿ ನೀ ನಗುತಲಿರೆ
ಎದೆಯ ದನಿಯಲಿ ನಿನ್ನದೆ ಸ್ಮರಣೆ
ಕುಸುಮಗಳ ರಾಶಿಯಲಿ ನೀ ಸಾಗಿದರೆ
ಕೋಮಲ ಹೂಲತೆಯು ನಲಿದಂತೆ
ನಗುವ ನಯನದಿ ನೀ ಕರೆದರೆ
ಪ್ರೀತಿಯ ಸನ್ನಿಧಾನವು ನೀ ಜಗವಾದಂತೆ
ಸಂತಸ ಹೂನಗೆ ನೀ ಬೀರಿದರೆ
ಮನದ ನೋವೆಲ್ಲವು ಕ್ಷಯವಾದಂತೆ
ಮೆತ್ತನೆ ನೀ ಬಳಿಸೇರಿದರೆ
ಅನುರಾಗದಲೆ ನನ್ನೆದೆಯ ನೇವರಿಸಿದಂತೆ
ತುಂಟ ನಗೆಯಲೆ ನೀ ದಯೆತೋರಿದರೆ
ಪ್ರೇಮದ ಶರಧಿಯು ಉಕ್ಕಿದಂತೆ
ಕುಸುಮಗಳ ಪಥದಲಿ ನೀ ಕೈಹಿಡಿದರೆ
ನಗುವ ಮಲ್ಲಿಗೆ ಅಕ್ಕರೆಯಲಿ ಜೊತೆಯಾದಂತೆ
ಸೌರಭದ ಕಂಪಿನ ಇಂಪಿನಲೆಯಲಿ
ನೀ ಪ್ರೀತಿಯ ಸೌರಭವವು ಕಂಪಿಸಿದಂತೆ
ಸೌಜನ್ಯದ ನುಡಿಗಳಲಿ ನೀ ಗುನುಗಿದರೆ
ಸೌಮ್ಯದೊಲವ ಪದಮಾಲೆಯು ಮನಕೆ
ಸುಯೋಗದ ಜಗದಲಿ ನೀ ಬೆಳಕಾದರೆ
ಬಾಳೆಲ್ಲವು ಸದಾ ಬೆಳಗುವ ಮಂದಿರವು
ರಾಮಚಂದ್ರ ಸಾಗರ್
ಗೆಳೆಯಾ..
ಕಪ್ಪಿರುಳು ಘಳಿಗೆಯಲಿ
ಬೆಳಕಾಗಿ ಬಂದವನೆ
ಒಲವ ದೀಪವಾದವನೆ
ಇಂದೇಕೆ ಮರೆಯಾದೆ ನೀ
ಕಾನನದ ಹಾದಿಯಲಿ
ಕೈಹಿಡಿದು ನಡೆಸಿದವನೆ
ಅಭಯದ ಉಲ್ಲಾಸವಾದವನೆ
ಇಂದೇಕೆ ಬರಬಾರದೆ
ಬಿಸಿಲು ಹಾದಿಯಲಿ
ಒಲವ ತಂಗಾಳಿಯಾದವನೆ
ಮನ ರಮಿಸಿ ತಣಿಸಿದವನೆ
ಇಂದೆಲ್ಲಿ ನೆಲೆಯಾದೆ ನೀ
ಅನುರಾಗದ ಪದಗಳಲಿ
ಒಲವಗೀತೆ ಹಾಡಿದವನೆ
ಒಲವಿಗೆ ಸ್ವರವಾದವನೆ
ಇಂದೇಕೆ ಮೌನಿಯಾದೆ ನೀ
ಕಾಡುವ ನೆನಪುಗಳಲಿ
ಹೃದಯ ಬಂಧಿಸಿದವನೆ
ಮನಸು ಮೌನಿಯಾಗಿಸಿದವನೆ
ಇಂದೇಕೆ ದೂರವಾದೆ ನೀ
ರಾಮಚಂದ್ರ ಸಾಗರ್
ಗೆಳೆಯಾ..
ಮುಸ್ಸಂಜೆಯ ತಂಪು ಕಡಲ ತೀರದಲಿ
ಅವಿರತ ಕಾಡುವ ನೆನಪುಗಳ ಸುಳಿಯಲಿ
ನಿನ್ನ ಮೋಹದ ಪಾಶದ ಕನಸುಗಳಿಗೆ
ನಾ ಏನೆಂದು ಸಂತೈಸಲಿ
ನನ್ನೆದೆಯ ಗೂಡು ನೋವಿನ ಕಡಲಾಗಿರಲು
ಕಾಡುವ ನೆನಪುಗಳು ದಿನವು ಸುಡುತಿರಲು
ಎದೆಯ ದನಿಯು ನಿನ್ನನೇ ಬೇಡುತಿರಲು
ನೀನೆಂದು ಆಗಮಿಸುವೆ
ಎದೆಯ ಗೂಡಲಿ ಎದ್ದ ನೋವಿನಲೆಯಲಿ
ನನ್ನೆದೆಯ ಕನಸು ಬೂದಿಯಾಗುತಿರಲು
ಬಾಧಿಸುವ ವಿರಹದ ಸುಡುವ ಅಲೆಗಳನು
ನೀನೆಂದು ಸಂತೈಸುವೆ
ಪ್ರೀತಿಯ ಹಾದಿಯಲಿ ಎದ್ದ ಮುಳ್ಳುಗಳನು
ಒಲುಮೆಯ ನಗುವಿನಲೆಯ ಅಕ್ಕರೆಯಲಿ
ನಗುತ ಜೊತೆಯಾಗಿ ಕೀಳುವೆಯೇನು
ನೀ ಜೊತೆಯಾಗಿ ನಡೆಸುವೆಯೇನು?
ಅಮಲೇರಿಸುವ ಹುಚ್ಚು ಆಸೆಗಳಿಗೆ
ಒಂಟಿ ಜೀವ ನಾ ಹೇಗೆ ಸಂತೈಸಲಿ
ನೋವುಂಡ ಮನದಲಿ ಹೇಗೆ ಬದುಕಲಿ
ನೀ ಬಾರದೇ ಉಳಿವೆನೇನು?
ಕಡಲಲೆಯ ನಿನದ ನವಿರು ದನಿಗೆ
ಮನದಾಸೆಗೆ ಏನೆಂದು ಉತ್ತರಿಸಲಿ
ನೀನಿರದ ಕಹಿ ಘಳಿಗೆಯಲಿ
ಒಂಟಿ ಹೃದಯ ನಾನೆಷ್ಟು ನೋವು ಸಹಿಸಲಿ?
ರಾಮಚಂದ್ರ ಸಾಗರ್
ಎಳೆ ಜೀವಗಳು ಮುದ್ದಾಗಿ ನಕ್ಕಾಗ
ಮನದ ನೋವೆಲ್ಲ ಮರೆಯಾದಂತೆ
ತೊದಲು ಮಾತುಗಳು ಇಂಪಾದಾಗ
ಮತ್ಸರದ ಮನಸೆಲ್ಲ ಕೊನೆಯಾದಂತೆ
ಮುದ್ದು ಕಂದಮ್ಮಗಳು ನಲಿದಾಗ
ಶುಭ್ರ ಲೋಕದ ದರ್ಶನವಾದಂತೆ
ಪುಟ್ಟ ಹೆಜ್ಜೆಗಳನು ನಗುತ ಇಡುವಾಗ
ಮಹಿಮೆ ಗುರುತಾಗಿ ಅಚ್ಚಾದಂತೆ
ಕಣ್ಣರೆಪ್ಪೆಗಳನು ನವಿರಾಗಿ ಬಡಿಯುವಾಗ
ಸೋಜಿಗದ ಜಗವನು ಕರೆದಂತೆ
ಮುಖಭಾವವು ಸೌಮ್ಯದ ಸಿರಿಯೆನಿಸುವಾಗ
ಮನದ ಮುನಿಸು ದಹನವಾದಂತೆ
ಕೈಹಿಡಿದು ನಗುತ ಮೆತ್ತನೆ ಸಾಗುವಾಗ
ಸ್ನೇಹದ ಮುದ್ರಿಕೆ ಮುದ್ರಿಸಿದಂತೆ
ನಗುತ ಮುನ್ನುಗ್ಗುತ ಮುಗುಳುನಗೆ ಬೀರಿದಾಗ
ಸೌಹಾರ್ದದ ಏಳಿಗೆ ಸಂಭ್ರಮಿಸಿದಂತೆ
ರವಿಕಾಂತಿಯ ಸೊಬಗು ಚೆಲ್ಲುವಾಗ
ಕಂದಮ್ಮಗಳ ಹಾದಿಯು ಹೊನ್ನಾದಂತೆ
ಹೊಳೆವ ನಯನಕಾಂತಿ ಶುಭವೆನಿಸುವಾಗ
ಶುಭಸಮಯದೀ ಶುಭದ ಜಗವರಳಿದಂತೆ
ರಾಮಚಂದ್ರ ಸಾಗರ್