Saturday, 7 October 2017

ಓ ನನ್ನ ಮನವೇ..

ಓ ನನ್ನ ಮನವೇ ನಿಧಾನವಾಗಿ ನೀನೊಮ್ಮೆ ಆಲಿಸು
ಅಸುರತೆಯ ದೂರಾಗಿರಲು ನೀನೊಮ್ಮೆ ಸಹಕರಿಸು
ಆಸೆದೋರಿ ಸುಡುವ ಬಾಳಿಗೆ ನೀನೊಮ್ಮೆ ಸಂತೈಸು
ಆಭಾರದ ಗುಣಗಳ ಜನನಕೆ ನೀನೊಮ್ಮೆ ಹರಸು..

ಓ ನನ್ನ ಮನವೇ ನೀನೊಮ್ಮೆ ಸಹಕರಿಸು
ನನ್ನ ದ್ವೇಷಕೆ ಬೆವರಿದವರಿಗೆ ನಾ ತಂಗಾಳಿಯಾಗಲು
ನನ್ನ ಕಿಚ್ಚಿಗೆ ಬೆಚ್ಚಿದವರಿಗೆ ನಾ ನೆರಳಾಗಳು
ನನ್ನ ಕೆನ್ನಾಲಿಗೆ ಬೂದಿಯಾದ ಗುಡಿಸಲು ನಾ ಕಟ್ಟಲು..

ಓ ನನ್ನ ಮನವೇ ನೀನೊಮ್ಮೆ ಬೆಳಗು
ನಾ ಆರಿಸಿದ ಮನೆಯ ದೀಪವ ಬೆಳಗಲು
ನಾ ಕಪ್ಪಾಗಿಸಿದ ಬೀದಿಗೆ ಬೆಳಕಿನ ಕಂಬವಾಗಲು
ನಾ ಬೆತ್ತಲಾಗಿಸಿದವರ ಬದುಕು ಹಸನಾಗಿಸಲು..

ಓ ನನ್ನ ಮನವೇ ನೀನೊಮ್ಮೆ ಸಂಪನ್ನತೆಯ ಸದನವಾಗು
ಸತ್ವ ತುಂಬಿದ ಮನದ ಕಣಜವಾಗು
ಸಹಬಾಳ್ವೆ ಸಂಕೇತದ ಸಂಕುಲವಾಗು
ಪಾಪದ ಸಂಕೋಲೆ ನೀ ಕಳಚಿಬಿಡು..

ಓ ನನ್ನ ತನುವೇ ನಿಧಾನವಾಗಿ ನೀ ಸಾಗು
ನಾ ನೋಯಿಸಿದವರ ನೋವು ಕರಗಿಸುವ ಸೇವಕನಾಗಲು
ನನ್ನ ದಾಸ್ಯದ ಬದುಕಿಗೆ ಬಲಿಯಾದವರ ಮೊಗದಲಿ ನಗು ಮೂಡಿಸಲು
ನನ್ನ ದಾರುಣತೆಗೆ ಬಳಲಿದವರ ಬಾಳಿಗೆ ಹೂವಾಗಲು
ಒಮ್ಮೆಯಾದರೂ ಕ್ಷಮೆಯ ಭಿಕ್ಷೆ ಬೇಡಲು..

ನನ್ನ ಕಿಚ್ಚಿಗೆ ಬೆಚ್ಚಿದವರಿಗೆ ನಾ ನೆರಳಾಗಬೇಕು
ನನ್ನ ಕೆನ್ನಾಲಿಗೆ ಬೂದಿಯಾದ ಗುಡಿಸಲು ನಾ ಕಟ್ಟಬೇಕು....

ರಾಮಚಂದ್ರ ಸಾಗರ್

Sunday, 16 July 2017

ಪಾಕಿಸ್ತಾನ- ಅಮೇರಿಕಾದ ಬೋಗಿಮ್ಯಾನ್.

ಅಮೇರಿಕಾ ಪ್ರತೀ ವರ್ಷ ಪಾಕಿಸ್ತಾನಕ್ಕೆ  ಯಥೇಚ್ಚ ಪ್ರಮಾಣದಲ್ಲಿ ಆರ್ಥಿಕ ನೆರವನ್ನು ನೀಡುತ್ತದೆ, ಅದಕ್ಕೆ ಕಾರಣವೇನೆಂದು ಹುಡುಕುತ್ತಾ ಹೊರಟರೇ ಅದು ಬ್ರಿಟೀಷ್ ಭಾರತದಿಂದ ಪ್ರಾರಂಭವಾಗಿ ಎರಡನೇ ಮಹಾಯುದ್ಧದ ನಂಟನ್ನೂ ಹೊಂದಿದೆ, ಅಂದರೆ ಪಾಕಿಸ್ತಾನ ಭಾರತದಿಂದ ಇಬ್ಬಾಗವಾಗುವ ಮೊದಲ ದಿನಗಳಿಂದಲೂ ಪ್ರಾರಂಭವಾಗಿದೆ. ಎರಡನೇ ಮಹಾಯುದ್ಧ 1939 ರಿಂದ 1945ರ ವರೆಗೆ ನಡೆಯಿತು, ಈ ಸಮಯದಲ್ಲಿ ಅಖಂಡ ಭಾರತವು ಬ್ರಿಟೀಷ್ ಹತೋಟಿಯಲ್ಲಿತ್ತು, ಆ ಸಮಯದಲ್ಲಿ ಬ್ರಿಟೀಷ್ ಇಂಡಿಯಾದಲ್ಲಿ ಸುಮಾರು 2.5 ಮಿಲಿಯನ್ ಭಾರತೀಯ ಸೈನಿಕರನ್ನು ಬ್ರಿಟೀಷರು ಅಂದು ಎರಡನೇ ಮಹಾಯುದ್ಧದಲ್ಲಿ ಬಳಸಿಕೊಂಡರು, ಮುಖ್ಯವಾಗಿ  ನಾಜಿ ಜರ್ಮನ್ ಮತ್ತು ಜಪಾನ್ ವಿರುದ್ಧದ ಯುದ್ಧಕ್ಕೆ ಬ್ರಿಟೀಷ್ ಇಂಡಿಯಾದ ಸೈನಿಕರನ್ನು ಬಳಸಿಕೊಳ್ಳಲಾಯಿತು. ಯನೈಟೆಡ್ ಕಿಂಗ್‍ಡಮ್ ಅಮೇರಿಕಾ ಸಂಯುಕ್ತ ಸಂಸ್ಥಾನದ ಸ್ನೇಹವಲ್ಲಿದ್ದು, ಎರಡನೇ ಮಹಾಯುದ್ಧದ ಸಮಯಲ್ಲಿ ಭಾರತೀಯ ಸೈನಿಕರನ್ನು ಅಮೇರಿಕಾ ಪರವಾಗಿ ಯುದ್ಧಮಾಡಲು ನಾಜಿ ಜರ್ಮನ್ ಯುದ್ಧಕ್ಕೆ ಕಳುಹಿಸಿಕೊಟ್ಟಿತು. ಜಪಾನ್ ಮತ್ತು ಜರ್ಮನ್ ವಿರುದ್ದದ ಯುದ್ಧದಲ್ಲಿ ಸುಮರು 87,000 ಭಾರತೀಯ ಸೈನಿಕರು ಮೃತರಾದರು. ಈ ಸಮಯದಲ್ಲಿ ದೇಶದಲ್ಲಿ ಮುಖ್ಯ ರಾಜಕೀಯ ಪಕ್ಷಗಳಾಗಿದ್ದವು ಮಹಾತ್ಮಾ ಗಾಂಧೀ ನಾಯಕತ್ವದ ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ ಮತ್ತು ಮಹಮ್ಮದ್ ಅಲಿ ಜಿನ್ನಾ ನಾಯಕತ್ವದ ಮುಸ್ಲಿಮ್ ಲೀಗ್ ಪಕ್ಷಗಳು. ಕಾಂಗ್ರೇಸ್ ಪಕ್ಷ ಎರಡನೇ ಮಹಾಯುದ್ಧದಲ್ಲಿ ಭಾರತೀಯ ಸೈನಿಕರನ್ನು ಉಪಯೋಗಿಸಿಕೊಳ್ಳುವುದರ ವಿರುದ್ಧವಾಗಿತ್ತು, ಮತ್ತು ತತ್‍ಕ್ಷಣದಿಂದ ಬ್ರಿಟೀಷ್ ಆಡಳಿತವನ್ನು ದೇಶದಿಂದ ಹಿಂತೆಗೆಯುವಂತೆ ಒತ್ತಾಯಿಸಿ 1942ರಲ್ಲಿ ಕ್ವಿಟ್ ಇಂಡಿಯಾ ಚಳುವಳಿಯನ್ನು ಹಮ್ಮಿಕೊಂಡಿತು. ಆದರೆ ಮುಸ್ಲಿಂ ಲೀಗ್ ನಾಯಕರಾದ ಮಹಮ್ಮದ್ ಅಲಿಜಿನ್ನ, ಮಹಮ್ಮದ್ ಇಕ್ಬಾಲ್, ಲಿಯಾಖತ್ ಅಲಿ ಖಾನ್, ಖ್ವಾಜಾ ನಾಜಿಮುದ್ದೀನ್ ಮುಂತಾದವರು ಬ್ರಿಟೀಷ್ ಇಂಡಿಯಾದ ಸೈನಿಕರನ್ನು ಎರಡನೇ ಮಹಾಯುದ್ಧಕ್ಕೆ ಬಳಸಿಕೊಳ್ಳಲು ಮತ್ತು ಕ್ವಿಟ್ ಇಂಡಿಯಾ ಚಳುವಳಿಯನ್ನು ಬಹಿಷ್ಕರಿಸಿ ಬ್ರಿಟೀಷರಿಗೆ ಬೆಂಬಲವಾಗಿ ನಿಂತರು. ಇತ್ತ ದೇಶದುದ್ದ ಕಾಂಗ್ರೇಸ್ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿದ್ದರೆ ಮುಸ್ಲಿಂ ಲೀಗ್ ಕೆಲಸ ಬ್ರಿಟೀಷ್‍ರ ಸ್ವಾಮಿ ನಿಷ್ಠೆ ಪಾಲಿಸುತ್ತಾ ಒಂದು ಪ್ರಭಾವಿ ಮುಸ್ಲಿಂ ದೇಶ ಕಟ್ಟುವ ಕನಸು ಕಾಣುತ್ತಿದ್ದರು. ಈ ರೀತಿ ಮುಸ್ಲಿಂ ಲೀಗ್ ಎರಡನೇ ಮಹಾಯುದ್ಧದ ಸಮಯದಲ್ಲಿ ತೋರಿದ ಸಹಕಾರದಿಂದ ಮಹಮ್ಮದ್ ಅಲಿ ಜಿನ್ನಾ ಯುನೈಟೆಡ್ ಕಿಂಗ್‍ಡಮ್ ಮತ್ತು ಅಮೇರಿಕಾ ಸಂಯುಕ್ತ ಸಂಸ್ಥಾನಗಳಿಗೆ ಪ್ರೀತಿಯ ವ್ಯಕ್ತಿಯಾಗಿ ಆ ಸಮಯದಲ್ಲೇ ಗುರುತಿಸಿಕೊಡರು. 
ಕೆಲವು ಮುಖ್ಯ ಅಂಶಗಳು;
(1) 1948ರಿಂದ 2015 ರವರೆಗೆ ಅಮೇರಿಕಾ ಸಂಯುಕ್ತ ಸಂಸ್ಥಾನ ಪಾಕಿಸ್ತಾನಕ್ಕೆ ನೀಡಿದ ನೆರವು ಒಟ್ಟು 105.47 ಬಿಲಿಯನ್ ಅಮೇರಿಕನ್ ಡಾಲರ್.
(2)ಇದರಲ್ಲಿ ಸೋವಿಯತ್ ಅಪ್ಘಾನ್ ಯುದ್ಧ ಸಂಭವಿಸುವುದಕ್ಕೆ ಮೊದಲು ನೀಡಿದ ಸಹಾಯಧನ ಒಟ್ಟು 46.60 ಬಿಲಿಯನ್ ಅಮೇರಿಕನ್ ಡಾಲರ್, ಮತ್ತು ಸೋವಿಯತ್ ಅಪ್ಘಾನ್ ಯುದ್ಧ ಸಂಬವಿಸಿದ ನಂತರದಿಂದ ಒಟ್ಟು 58.87 ಬಿಲಿಯನ್ ಅಮೇರಿಕನ್ ಡಾಲರ್.
(3) Enhanced Partnership with Pakistan Act of 2009   ಮೂಲಕ ಅಮೇರಿಕಾ ಸಂಯುಕ್ತ ಸಂಸ್ತಾನ ಜೂನ್ 2009ರಲ್ಲಿ ಅಧಿಕೃತವಾಗಿ ಪಾಕಿಸ್ತಾನಕ್ಕೆ ನೆರವು ನೀಡಲು ಕಾಯಿದೆ ರೂಪ ನೀಡುತ್ತದೆ, ಇದರಲ್ಲಿ ಪಾಕಿಸ್ತಾನದ ಸೇನೆಯ ಮತ್ತು ಬೇಹುಗಾರಿಕೆಯ ಆಧುನೀಕರಣವೇ ಮುಖ್ಯವಾಗಿದೆ. 
(4) ಪಾಕಿಸ್ತಾನದ ರಕ್ಷಣಾ ಆಯವ್ಯಯ 2017-18ರಲ್ಲಿ ರಕ್ಷಣೆಗೆ ಮೀಸಲಿಟ್ಟ ಮೊತ್ತ 8.78 ಬಿಲಿಯನ್ ಡಾಲರ್, ಇದರಲ್ಲಿ Enhanced Partnership with Pakistan Act of 2009 ರಂತೆ ಅಮೇರಿಕಾದ ನೆರವು 1.5 ಬಿಲಿಯನ್ ಡಾಲರ್.
(5) ಅಮೇರಿಕಾ 2004ರಲ್ಲಿ ನ್ಯೂಕ್ಲಿಯರ್ ವೆಪನ್‍ಗಳನ್ನು ಉಡಾಯಿಸುವ ಸಾಮಥ್ರ್ಯವಿರುವ ಎಫ್16 ಏರ್‍ಕ್ರಾಪ್ಟ್‍ಗಳನ್ನು ಪಾಕಿಸ್ತಾನಕ್ಕೆ ಉಚಿತವಾಗಿ ನೀಡುತ್ತದೆ 
(6) 2006ರಲ್ಲಿ ಪಿ3ಹೆಚ್ ಏರ್‍ಕ್ರಾಪ್ಟ್‍ಗಳನ್ನು ಪಾಕಿಸ್ತಾನಕ್ಕೆ ಉಚಿತವಾಗಿ ನೀಡುತ್ತದೆ.

ಬ್ರಿಟೀಷ್ ಭಾರತದಲ್ಲಿ ನಡೆಯುತ್ತಿದ್ದ ಸ್ವಾತಂತ್ರ್ಯ ಹೋರಾಟಕ್ಕೆ ಸೋವಿಯತ್ ಒಕ್ಕೂಟದ ಬೆಂಬಲವೂ ಇತ್ತು, ಅಂದು ಮಹಾತ್ಮಾ ಗಾಂಧಿಯವರು ಲಿಯೋ ಟಾಲ್‍ಸ್ಟಾಯ್‍ರೊಂದಿಗೆ ಉತ್ತಮ ಸಂಬಂಧವನ್ನು ಹೊಂದಿದ್ದರು, ಇವರ ನಡುವೆ ಅನೇಕ ಪತ್ರ ವ್ಯವಹಾರಗಳು ಮಾತುಕಥೆಗಳು ನಡೆದಿದ್ದವು, ರಶ್ಯಾದಲ್ಲಿ ನಡೆದ 1905ರ ಕ್ರಾಂತಿಗೆ ಭಾರತದಲ್ಲಿ ನಡೆಯುವ ಸ್ವಾತಂತ್ರ್ಯ ಹೋರಾಟವು ಸ್ಪೂರ್ತಿಯಾಗಿತ್ತು. 1927ರಲ್ಲಿ ಬಾಲ್ಶೇವಿಕ್ ಕ್ರಾಂತಿಯ ಹತ್ತನೇ ವರ್ಷದ ಸಂದಂರ್ಭದಲ್ಲಿ ಪಂಡಿತ್ ಜವಾಹರ್ ಲಾಲ್ ನೆಹರು ಭಾರತದ ಪರವಾಗಿ ಅತಿಥಿಯಾಗಿ ರಶ್ಯಾಗೆ ಭೇಟಿ ನೀಡಿ ಅಲ್ಲಿನ ನಾಯಕರೊಂದಿಗೆ ಚರ್ಚೆ ನಡೆಸುತ್ತಾರೆ. ಈ ರೀತಿ ರಷ್ಯಾ ಮತ್ತು ಭಾರತೀಯ ನಾಯಕರೊಂದಿಗೆ ಭಾರತದಲ್ಲಿ ಬ್ರಿಟೀಷ್ ಆಡಳಿತವನ್ನು ಕೊನೆಹಾಡಲು ಅನೇಕ ಮಾತುಕತೆಗಳು ನಡೆಯುತ್ತವೆ. ಸೋವಿಯತ್ ಒಕ್ಕೂಟ ಸಹಜವಾಗಿ ಅಮೇರಿಕಾ ಸಂಯುಕ್ತ ಸಂಸ್ಥಾನ ಮತ್ತು ಯುನೈಟೆಡ್ ಕಿಂಗ್‍ಡಮ್‍ಗಳ ವಿರುದ್ಧವಿದ್ದ ಕಾರಣ ಭಾರತೀಯರ ಹೋರಾಟಕ್ಕೆ ಸಹಜವಾಗಿಯೇ ರಷ್ಯಾದಿಂದ ಬೆಂಬಲ ದೊರೆಯಿತು. ಇದರ ಮೊದಲ ಭಾಗವಾಗಿ ದೇಶದಲ್ಲಿ ಬ್ರಿಟೀಷ್ ಆಡಳಿತ ಕೊನೆಯಾಗುವ ಮೊದಲೇ ಏಪ್ರಿಲ್ 13 1947ರಂದು ರಷ್ಯಾ ಅಧಿಕೃತವಾಗಿ ಎರಡೂ ದೇಶಗಳ ನಡುವೆ ರಾಜತಾಂತ್ರಿಕ ಸಂಬಂಧಗಳನ್ನು ಗಟ್ಟಿಗೊಳಿಸಲು ಘೋಷಣೆಯನ್ನು ಮಾಡುತ್ತದೆ.
ಎರಡನೇ ಮಹಾಯುದ್ಧ ಮುಕ್ತಾಯವಾದ ನಂತರ ಬ್ರಿಟೀಷರು ಸಾಕಷ್ಟು ನಷ್ಟವನ್ನು ಅನುಭವಿಸಿದ್ದರು,  ಯುನೈಟೆಡ್ ಕಿಂಗ್‍ಡಮ್ ತುಂಬ ದಯನೀಯ ಸ್ಥಿತಿಗೆ ತಲುಪಿತು. ಆ ಸಮಯದಲ್ಲಿ ಅವರು ಭಾರತದಿಂದ ತಮ್ಮ ಆಡಳಿತವನ್ನು ಹಿಂತೆಗೆಯಲು ಸಮ್ಮತಿಸಿ 1947ರಲ್ಲಿ ಅಧಿಕೃತವಾಗಿ ಹೊರನಡೆದರು. ಆ ಸಮಯದಲ್ಲಿ ಮಹಮ್ಮದ್ ಅಲಿ ಜಿನ್ನ ಕೋರಿಕೆಯಂತೆ ಮುಸ್ಲಿಂ ಬಾಹುಳ್ಯವುಳ್ಳ  ಪ್ರದೇಶಗಳನ್ನು ಬ್ರಿಟೀಷ್ ಆಡಳಿತ ಪಾಕಿಸ್ತಾನವೆಂದು ಭಾಗಮಾಡಿತು, ಇದರಲ್ಲಿ ಪೂರ್ವ ಮತ್ತು ಪಶ್ಚಿಮ ಪಾಕಿಸ್ತಾನವೆಂದು ಸೇರಿತ್ತು ಅಂದರೆ ಈಗಿನ ಭಾಂಗ್ಲಾದೇಶವು ಆಗ ಪಾಕಿಸ್ತಾನದ ಭಾಗವಾಗಿತ್ತು, ಆದರೆ ಇದರಲ್ಲಿ ಬಲೂಚಿಸ್ತಾನ್ ಪ್ರಾಂತ್ಯವನ್ನೂ ಬಲೂಚಿಸ್ತಾನಿಗರ ವಿರುದ್ದದ ನಡುವೆಯೂ ಒತ್ತಾಯಪೂರ್ವಕವಾಗಿ ಬ್ರಿಟೀಷರು ಪಾಕಿಸ್ತಾನಕ್ಕೆ ವಿಂಗಡನೆ ಮಾಡಿದ್ದರು. ಆದರೆ ಬಲೂಚಿಸ್ತಾನಿಗರು ಪ್ರತ್ಯೇಕ ದೇಶಕ್ಕಾಗಿ ಬೇಡಿಕೆಯಿಟ್ಟಿದ್ದರು. ಕಾಶ್ಮೀರ ಮತ್ತು ಬಲೂಚಿಸ್ತಾನ ಪ್ರಾಂತಗಳೆರಡು ಪಾಕಿಸ್ತಾನದಿಂದ ಹೊರಗುಳಿಯಲು ಬಯಸಿದವು. ಆಗ ಬ್ರಿಟೀಷರು ಕಾಶ್ಮೀರವನ್ನು ಬಿಟ್ಟು  (1)ಮುಸ್ಲಿ ಬಾಹುಳ್ಯವುಳ್ಳ ಪಂಜಾಬ್, (2)ಸಿಂಧ್, (3)ನಾರ್ಥ ವೆಸ್ಟ್ ಭೂಭಾಗ, (4)ಬಂಗಾಳದ ಮುಸ್ಲಿಂ ಬಾಹುಳ್ಯದ ಪ್ರದೇಶ ಇದನ್ನು ಪೂರ್ವ ಪಾಕಿಸ್ತಾನವೆಂದು ಕರೆದರು ಮತ್ತು (5) ಬಲೂಚಿಸ್ತಾನ ಪ್ರದೇಶವನ್ನು ಬಲೂಚಿಸ್ತಾನಿಗಳ ವಿರುದ್ಧದ ನಡುವೆ ಪಾಕಿಸ್ತಾನದ ಭಾಗವಾಗಿ ವಿಂಗಡಿಸಿದರು. ಇಲ್ಲಿ ಮುಖ್ಯವಾಗಿ ಗಮನಿಸಬೇಕಾದುದು ಇದರಲ್ಲಿ ಕಾಶ್ಮೀರ ಸೇರಿರಲಿಲ್ಲ. ಈ ಮೇಲೆ ಹೇಳಲಾದ ಐದು ಪ್ರಾಂತ್ಯಗಳು ಪಾಕಿಸ್ತಾನವಾದವು. ಈ ಹೊಸದಾಗಿ ಉದ್ಭವಿತವಾದ ಪಾಕಿಸ್ತಾನಕ್ಕೆ ಈ ಮೊದಲೇ ಬ್ರಿಟಿಷ್ ಮತ್ತು ಅಮೇರಿಕಾ ಸಂಯುಕ್ತ ಸಂಸ್ಥಾನದ ಸ್ನೇಹವಲಯದಲ್ಲಿ ಗುರುತಿಸಿಕೊಂಡಿದ್ದ ಮಹಮ್ಮದ್ ಅಲಿ ಜಿನ್ನಾ ಅಧ್ಯಕ್ಷನಾದ. ಹಾಗು ಆಂಗ್ಲೋ ಅಪ್ಘನ್ ಯುದ್ಧದಲ್ಲಿ ಸಾಕಷ್ಟು ಪಾಠ ಕಲಿತಿದ್ದ ಬ್ರಿಟೀಷರಿಗೆ ಆ ವಲಯದಲ್ಲಿ ರಶ್ಯಾದ ಪ್ರಭಾವವನ್ನು ಕಡಿಮೆ ಮಾಡುವ ಉದ್ದೇಶವಿತ್ತು. ಭಾರತೀಯ ನಾಯಕರಿಗೂ ರಷ್ಯಾದೊಂದಿಗೆ ಉತ್ತಮ ಸಂಬಂಧವಿತ್ತು, ಅಪ್ಘನ್ ಮತ್ತು ಭಾರತೀಯ ನಾಯಕರೊಂದಿಗೆ ರಶ್ಯಾದ ಸಂಬಂಧ ಉತ್ತಮವಿದ್ದ ಕಾರಣ ಸಹಜವಾಗೇ ಪಾಕಿಸ್ತಾನದ ನಡೆಯೂ ಅಮೇರಿಕಾಗೆ ಪ್ರಿಯವಾಗಿತ್ತು. ಎರಡನೇ ಮಹಾಯುದ್ಧ ಮುಗಿದ ನಂತರ ಜಗತ್ತಿನಲ್ಲಿ ಸೋವಿಯತ್ ಒಕ್ಕೂಟ ಮತ್ತು ಅಮೇರಿಕಾ ಸಂಯುಕ್ತ ಸಂಸ್ಥಾನಗಳು ಸೂಪರ್ ಪವರ್‍ಗಳಾಗಿ ಹೊರಹೊಮ್ಮಿದವು. ಈ ಸಮಯದಲ್ಲಿ ಜಗತ್ತಿನ ಬಹು ದೇಶಗಳು ಈ ಎರಡು ಒಕ್ಕೂಟಗಳ ಸ್ನೇಹ ವಲಯದಲ್ಲಿ ಬೆಂಬಲವಾಗಿ ನಿಲ್ಲುತ್ತಿದ್ದವು. ಭಾರತದಿಂದ ಇಬ್ಬಾಗವಾದೊಡನೇ ಪಾಕಿಸ್ತಾನ ಮಾಡಿದ ಮೊದಲ ಕೆಲಸ ಅಮೇರಿಕಾದ ಒಕ್ಕೂಟದೊಂದಿಗೆ ಗುರುತಿಸಿಕೊಂಡು ಯುನೈಟೆಡ್ ಕಿಂಗ್‍ಡಮ್‍ನೊಂದಿಗೆ ಸ್ನೇಹವನ್ನೂ ಮೊದಲಿನಂತೆಯೇ ಉಳಿಸಿಕೊಂಡಿತ್ತು. ಈ ಭಾಗದಲ್ಲಿ ಸೋವಿಯತ್ ಒಕ್ಕೂಟದ ಪ್ರಭಾವ ಕಡಿಮೆ ಮಾಡಲು ಅಮೇರಿಕಾ ಮತ್ತು ಯುನೈಟೆಡ್ ಕಿಂಗ್‍ಡಮ್ ಆಯ್ದುಕೊಂಡದ್ದು ಪಾಕಿಸ್ತಾನವನ್ನು.
ಇತ್ತ ಭಾರತ ಸ್ವಾತಂತ್ರ್ಯವಾದೊಡನೆ ಅಕ್ಟೋಬರ್ 1947ರಲ್ಲಿ ಭಾರತಕ್ಕೆ ರಷ್ಯಾದ ಅಂಬಾಸೆಡರ್ ಆಗಿ ಕೆ.ವಿ.ನಾವಿಕೋವ್ ಬಂದಿಳಿಯುತ್ತಾರೆ, ಭಾರತ ಮತ್ತು ರಷ್ಯಾದೊಂದಿಗೆ ಸಂಬಂಧಕ್ಕೆ ಉತ್ತಮ ವೇದಿಕೆ ನಿರ್ಮಾಣವಾಗುವ ಲಕ್ಷಣಗಳು ಗೋಚರಿಸತೊಡಗುತ್ತವೆ. ಸ್ವಾತಂತ್ರ್ಯ ಮೊದಲೇ ಭಾರತಕ್ಕೆ ಹತ್ತಿರವಿದ್ದ ರಷ್ಯಾ ಈಗ ಮತ್ತಷ್ಟು ಹತ್ತಿರವಾಗತೊಡಗುತ್ತದೆ. ಭಾರತದ ಪ್ರತೀ ನಡೆಯನ್ನು ಯುನೈಟೆಡ್ ಕಿಂಗ್‍ಡಮ್ ಮತ್ತು ಅಮೇರಿಕಾ ಬಹಳ ಸೂಕ್ಷ್ಮವಾಗಿ ಗಮನಿಸುತ್ತಾ ಹೋಗುತ್ತಿರುತ್ತವೆ. 3.29 ಮಿಲಿಯನ್ ಕಿ.ಮೀ ವಿಸ್ತೀರ್ಣದ ಜಗತ್ತಿನ ಎಂಟನೇ ಬಹುದೊಡ್ಡ ದೇಶ ಭಾರತದೊಂದಿಗೆ ರಷ್ಯಾದ ಸಂಬಂಧ ಉತ್ತಮವಾಗಿ ನಡೆದರೆ ಮುಂದೊಂದು ದಿನ ಭಾರತವೂ ಜಗತ್ತಿನ ಸೂಪರ್‍ಪವರ್ ಆಗಿ ರಷ್ಯಾದೊಂದಿಗೆ ಗುರುತಿಸಿಕೊಂಡರೆ ತಮ್ಮ ಅಸ್ತಿತ್ವದ ಚಿಂತೆ ಅಮೇರಿಕಾ ಮತ್ತು ಯುನೈಟೆಡ್ ಕಿಂಗ್‍ಡಮ್‍ನ್ನು ಕಾಡಿದ್ದು ಸಹಜ. ಇದೇ ಸಂದರ್ಭದಲ್ಲಿ ಪಾಕಿಸ್ತಾನ ತನ್ನ ಆಕ್ರಮಣಕಾರಿ ಬುದ್ಧಿಯನ್ನು ತೋರುತ್ತದೆ, ಪಾಕಿಸ್ತಾನಕ್ಕೆ ಸೇರಲು ಒಪ್ಪದ ಬಲೂಚಿಸ್ತಾನಿಗಳ ಹತ್ಯೆ ಮಾಡಿ ವ್ಯಾಪಕ ಹಿಂಸಾಚಾರದ ಮೂಲಕ ಬಲೂಚಿಸ್ತಾನ್ ಪ್ರಾಂತ್ಯವನ್ನು 27ನೇ ಮಾರ್ಚ್ 1948 ರಂದು ತನ್ನ ತೆಕ್ಕೆಗೆ ತೆಗೆದುಕೊಳ್ಳುತ್ತದೆ, ಮತ್ತು ಒತ್ತಾಯಪೂರ್ವಕವಾಗಿ ತನ್ನ ದೇಶದ ಭಾಗವಾಗಿಸಿಕೊಳ್ಳುತ್ತದೆ, ಇದೇ ಸಮಯದಲ್ಲಿ ಇತ್ತ ಕಾಶ್ಮಿರವನ್ನು ವಶಪಡಿಸಿಕೊಳ್ಳಲು ದೇಶ ಇಬ್ಬಾಗವಾಗಿ ಎರಡೇ ತಿಂಗಳಲ್ಲಿ ಯುದ್ಧ ಸಾರುತ್ತದೆ.  1947ರ ಅಕ್ಟೋಬರ್ 22ರಿಂದ 1949ರ ಜನವರಿ ಒಂದರವರೆಗೆ ಯುದ್ಧ ನಡೆಯುತ್ತದೆ, ಅಂದರೆ ಸುಮಾರು ಒಂದು ವರ್ಷ ಎರಡು ತಿಂಗಳುಗಳ ಕಾಲ ಕಾಶ್ಮೀರದಲ್ಲಿ ಯುದ್ಧ ನಡೆಯುತ್ತದೆ. ಈ ಸಮಯದಲ್ಲಿ ಯುನೈಟೆಡ್ ನೇಷನ್ಸ್ ಮಧ್ಯಸ್ತಿಕೆಯಲ್ಲಿ ತಮ್ಮ ವಶದಲ್ಲಿರುವ ಜಾಗಕ್ಕೆ ಗಡಿ ನಿಯಂತ್ರಣ ರೇಖೆಯೆಂದು ಗುರುತಿಸಿ ಗಡಿ ಸಮಸ್ಯೆ ಬಗೆಹರಿಯುವವರೆಗೂ ಕದನ ವಿರಾಮ ಘೋಷಿಸುವಂತೆ ಎರಡೂ ದೇಶಗಳಿಗೆ ಸೂಚಿಸಲಾಗುತ್ತದೆ. ಇದರಲ್ಲಿ ಯುನಯಟೆಡ್ ಕಿಂಗ್ಡಮ್ ಮತ್ತು ಅಮೇರಿಕಾ ಪಾತ್ರವನ್ನು ಅಲ್ಲಗಳೆಯುವಂತಿಲ್ಲ.
ಇಲ್ಲಿ ಗಮನಿಸಬಹುದಾದ ಒಂದು ಮುಖ್ಯ ಅಂಶವೆಂದರೆ ಪಾಕಿಸ್ತಾನ ವಿಭಾಗ ಹೊಂದಿದ ಕೂಡಲೇ ಭಾರತದೊಂದಿಗೆ ಯುದ್ಧ ಮಾಡಲು ಮತ್ತು ಪಾಕಿಸ್ತಾನಕ್ಕೆ ಸೇರಲು ಒಪ್ಪದ ಈಗಿನ  ಪಾಕಿಸ್ತಾನದ ಅರ್ಧದಷ್ಟು ಭೂಬಾಗದ ಸುಮಾರು 3.47 ಲಕ್ಷ ಕಿ.ಮೀ ವಿಸ್ತೀರ್ಣದ ಬಲೂಚಿಸ್ತಾನವನ್ನು ವಶಪಡಿಸಲು ಅಗತ್ಯವಿದ್ದ ಹಣಕಾಸು ಮತ್ತು ಮಿಲಿಟರಿ ನೆರವು ಹೇಗೆ ದೊರೆಯಿತೆಂಬುದು. ಇದಕ್ಕೆ ಉತ್ತರ 1948ರಲ್ಲಿ 0.77 ಮಿಲಿಯನ್ ಡಾಲರ್ ಹಣವನ್ನು ಅಮೇರಿಕಾ ನೀಡುತ್ತದೆ. ಇದರ ಸಹಕಾರದ ಫಲವೇ 1948ರಲ್ಲಿ ಪಾಕಿಸ್ತಾನದ ಸೇನೆ ಕಠೋರ ಹಿಂಸಾಚಾರದ ಮೂಲಕ ಸಾರ್ವಜನಿಕವಾಗಿಯೇ ಪಾಕಿಸ್ತಾನ ಸೇರಲು ಒಪ್ಪದ ಜನರ ಕಗ್ಗೊಲೆಮಾಡುವ ಮೂಲಕ ಪಾಕಿಸ್ತಾನದ ಸೈನ್ಯ ಬಲೂಚಿಸ್ತಾನ ಪ್ರಾಂತ್ಯವನ್ನು ವಶಪಡಿಸಿಕೊಳ್ಳುತ್ತದೆ, ಈ ಪಾಕಿಸ್ತಾನದ ಪೈಶಾಚಿಕ ಕೃತ್ಯದಲ್ಲಿ ಅಂದು ಲಕ್ಷಾಂತರ ಜನರ ಕೊಲೆಯಾಗುತ್ತದೆ, ಇನ್ನೂ ಲಕ್ಷಾಂತರ ಜನ ಬಲೂಚಿಸ್ತಾನಿಗಳು ಇರಾನ್ ಮತ್ತು ಅಪ್ಘಾನಿಸ್ತಾನಕ್ಕೆ ನಿರಾಶ್ರಿತಾಗಿ ಓಡಿ ಹೋಗುತ್ತಾರೆ. ಬಲೂಚಿಸ್ತಾನ ಪ್ರಾಂತ್ಯದಲ್ಲಿ ಈಗ ಸುಮಾರು 1.31 ಕೋಟಿ ಜನಸಂಖ್ಯೆ ಇದೆ, ಆದರೆ ಈ ಪ್ರಾಂತ್ಯ ಪಾಕಿಸ್ತಾನದ ಶೇಕಡ 46% ರಷ್ಟಿದೆ. ಈ ಪ್ರಾಂತ್ಯದಲ್ಲಿ ಮೊದಲು 40ರ ದಶಕದಲ್ಲಿ ಸುಮಾರು ಎರಡು ಕೋಟಿ ಜನರಿದ್ದರು, ಆದರೆ ಇಂದು 70 ವರ್ಷ ಕಳೆದರೂ ಆ ಜನಸಂಖ್ಯೆ ವೃದ್ಧಿಯಾಗದೇ ಕ್ಷಯವಾಗುತ್ತಿದೆ, ಇದಕ್ಕೆ ಮುಖ್ಯ ಕಾರಣ ಪಾಕಿಸ್ತಾನ ಯಾವುದೇ ಕರುಣೆಯಿಲ್ಲದೇ ಬಲೂಚಿಸ್ತಾನಿಗಳ ನಿತ್ಯ ಹತ್ಯೆ ಮಾಡುತ್ತಿರುವುದು. ಇಂದಿಗೂ ಪ್ರತ್ಯೇಕ ಬಲೂಚಿಸ್ತಾನದ ಹೋರಾಟ ನಡೆಯುತ್ತಿದೆ, ನಿತ್ಯ ಹೋರಾಟದಲ್ಲಿ ಸಾವಿರಾರು ಜನ ಸಾಯುವುದು ಈ ಭಾಗದಲ್ಲಿ ಮಾಮೂಲಾಗಿದೆ. ಇದರ ಜೊತೆಗೇ ಕಾಶ್ಮೀರದಲ್ಲಿ ಭಾರತದೊಂದಿಗೆ ಕಾದಾಡಲು 1948ರಲ್ಲಿ ಅಮೇರಿಕಾ ನೀಡಿದ ನೆರವು ಮುಖ್ಯವಾಗುತ್ತದೆ. ಇದರ ಸಹಕಾರದಿಂದಲೇ ಮಹಮ್ಮದ್ ಅಲಿ ಜಿನ್ನಾ ಕಾಶ್ಮೀರದಲ್ಲಿ 1 ವರ್ಷ ಎರಡು ತಿಂಗಳುಗಳ ಕಾಲ ಅಂದರೆ ಯುನೈಟೆಡ್ ನೇಷನ್ಸ್ ಮಧ್ಯೆ ಪ್ರವೇಶಿಸುವವರೆಗೂ ಯುದ್ಧ ಮಡುತ್ತಾನೆ, ಈ ಸಂದರ್ಭದಲ್ಲಿ ಎರಡೂ ದೇಶಗಳು ಕಾಶ್ಮೀರದಲ್ಲಿ ಎಷ್ಟು ಹತೋಟಿ ಸಾಧಿಸಿದ್ದವೋ ಅಷ್ಟು ಪ್ರದೇಶವನ್ನು ಅವರವರ ವ್ಯಾಪ್ತಿಗೆ ಬಿಟ್ಟು ಅದೇ ನಿಯಂತ್ರಣ ರೇಖೆಯೆಂದು ಅಂತಿಮವಾಗಿ ಭೂ ವಿವಾದ ಬಗೆಹರಿಯುವವರೆಗೂ ಕಾಯುವಂತೆ ಸೂಚಿಸಲಾಗುತ್ತದೆ. ಅಂದರೆ ಇಲ್ಲಿ ಭಾರತ ಕಾಶ್ಮೀರದ ಗಿಲ್ಗಿಟ್ ಬಲ್ತೀಸ್ತಾನ್, ಸ್ಕರ್ದು, ಮೀರ್‍ಪುರ್ ಹೀಗೆ ಅನೇಕ ಮುಖ್ಯ ಪ್ರದೇಶಗಳನ್ನು ಕಳೆದುಕೊಳ್ಳುತ್ತದೆ. ಇಲ್ಲಿ ಗಮನಿಸಬಹುದಾದ ಮುಖ್ಯ ಅಂಶವೆಂದರೆ ಭಾರತಕ್ಕೆ ಭೂ ಭಾಗದ ಮೂಲಕ ಅಪ್ಘಾನಿಸ್ತಾನವನ್ನು ತಲುಪಲು ಇದ್ದ ಏಕೈಕ ಭೂಮಾರ್ಗವೆಂದರೆ ಅದು ಗಿಲ್ಗಿಟ್ ಪ್ರದೇಶ. ಈ ಭಾಗವು ಪಾಕಿಸ್ತಾನದ ವಶವಾಗುವುದು ಅಮೇರಿಕಾದ ದೃಷ್ಟಿಯಲ್ಲಿ ಮಹತ್ವದ್ದಾಗಿದೆ. ಅಪ್ಘಾನಿಸ್ತಾನ ಮತ್ತು ಭಾರತ ನಡುವೆಯ  ಈ ಮಾರ್ಗವನ್ನು ಪಾಕಿಸ್ತಾನವನ್ನು ಮಧ್ಯೆ ಇಟ್ಟುಕೊಂಡು ಅಮೇರಿಕಾ ಕಡಿದು ಹಾಕುತ್ತದೆ, ಈ ಮೂಲಕ ಸೋವಿಯತ್ ಒಕ್ಕೂಟದ ಸ್ನೇಹವಲದ ದೇಶಗಳ ನಡುವೆ ಇದ್ದ ಭೂಮಾರ್ಗವನ್ನು ಮುಚ್ಚಿದಂತಾಗುತ್ತದೆ. ಸೋವಿಯತ್ ಒಕ್ಕೂಟದ ತಜ್ಕೀಸ್ತಾನ್, ಉಜ್ಬೇಕಿಸ್ತಾನ್, ತರ್ಕಮೇನಿಸ್ತಾನ್‍ಗಳು ಅಪ್ಘಾನಿಸ್ತಾನದ ವಾಖಾನ್ ಕಾರಿಡಾರ್ ಮೂಲಕ ಭಾರತವನ್ನು ಗಿಲ್ಗಿಟ್ ಪ್ರದೇಶದ ಮೂಲಕ ಭೂ ಸಂಪರ್ಕ ಹೊಂದುವ ಮಾರ್ಗ ಇಲ್ಲಿಗೆ ಮುಚ್ಚಿದಂತಾಯಿತು. ಇದು ಸೋವಿಯತ್ ಒಕ್ಕೂಟದಿಂದ ಭೂಮಾರ್ಗದ ಮೂಲಕ ಸರಕು ಸೇವೆಗಳ ಸರಬರಾಜಿಗೆ ಅವಕಾಶವಿಲ್ಲದಂತಾಯಿತು. ರಷ್ಯಾ ಮತ್ತು ಭಾರತದ ನಡುವಿನ ಸರಕು ಮತ್ತು ಸೇವೆಗಳಿಗೆ ರಷ್ಯಾದ ಪೀಟರ್ಸ್‍ಬರ್ಗ್ ಬಂದರಿನಿಂದ ಹೊರಟ ಸರಕುಗಳು ಭಾರತದ ಚೆನ್ನೈ ತಲುಪಲು ಉತ್ತರ ಸಾಗರ, ಇಂಗ್ಲಿಷ್ ಕಾಲುವೆ, ಮೆಡಿಟರೇನಿಯನ್ ಸಾಗರ, ಕೆಂಪು ಸಮುದ್ರ, ಅರೇಬಿಯನ್ ಸಾಗರ ಮೂಲಕ ಸುಮಾರು 9258 ನಾಟಿಕಲ್ ಮೈಲುಗಳನ್ನು 40 ದಿನಗಳ ಕಾಲ ಕ್ರಮಿಸಬೇಕು. ಒಂದು ವೇಳೆ ಗಿಲ್ಗಿಟ್ ಪ್ರದೇಶ ಭಾರತದ ಬಳಿಯೇ ಇದ್ದಿದ್ದರೆ ಅಪ್ಘಾನಿಸ್ಥಾನದ ವಾಖಾನ್ ಕಾರಿಡಾರ್ ಮೂಲಕ ಸೋವಿಯತ್ ಒಕ್ಕೂಟದ ತಜಕಿಸ್ತಾನ್ ತಲುಪಲು ಕೆಲವೇ ಗಂಟೆಗಳು ಸಾಕಾಗಿತ್ತು. 

            ರಾಮಚಂದ್ರ ಸಾಗರ್

Sunday, 2 July 2017

ಬಲೋಚಿಸ್ತಾನ್ ನಿಜವಾಗಿಯೂ ಪಾಕಿಸ್ತಾನದ ಭಾಗವೇ..?

ಪಾಕಿಸ್ತಾನ ಕಾಶ್ಮೀರದಲ್ಲಿ ಉಗ್ರವಾದಿ ಕೃತ್ಯಕ್ಕೆ ಒತ್ತು ನೀಡುತ್ತಾ ಕಾಶ್ಮೀರದ ಪ್ರತ್ಯೇಕತಾವಾದಿಗಳಿಗೆ ಬೆಂಬಲವಾಗಿ ನಿಂತಿದೆ, ಕಾಶ್ಮೀರ ತನ್ನದೇ ಭೂಮಿಯೆಂದು ಬೊಬ್ಬೆ ಹೊಡೆಯುತ್ತಾ ಜಗತ್ತಿನೆಲ್ಲೆಡೆ ಕಾಶ್ಮಿರದ ವಿಷಯವನ್ನು ಪ್ರಸ್ತಾಪಿಸುತ್ತದೆ. ಕಾಶ್ಮೀರದಲ್ಲಿ ಭಾರತ ಕೈಗೊಂಡ ಉತ್ತಮ ಕಾರ್ಯಗಳನ್ನು ಅಲ್ಲಿನ ಜನರು ವಿರೋಧಿಸುವಂತೆ ಪ್ರೇರಣೆ ನೀಡುತ್ತಾ ಸಾಗುತ್ತಿದೆ. ಇತಿಹಾಸದಿಂದಲೇ ಪಾಕಿಸ್ತಾನದ ಉಗ್ರತನ ಮತ್ತು ಭೂಮಿ ಮೇಲಿನ ಅತಿಯಾಸೆಯನ್ನು ನಾವು ಕಾಣಬಹುದು, ಇದಕ್ಕೆ ಉತ್ತಮ ಉದಾಹರಣೆ ಬಲೋಚಿಸ್ತಾನ್. ಈ ಪ್ರದೇಶದ ಮೇಲೆ ಪಾಕಿಸ್ತಾನ ಅತಿಕ್ರಮಣ ಮತ್ತು ಇಂದಿನವರೆಗೆ ಅಲ್ಲಿ ಅದು ನಡೆಸುತ್ತಿರುವ ನರಮೇದ. ಅಷ್ಟಕ್ಕೂ ಈ ಬಲುಚಿಸ್ತಾನ್ ಪ್ರದೇಶ ಎಲ್ಲಿದೆ ಗೊತ್ತೆ..? ಈ ಪ್ರದೇಶ ಪೂರ್ವದಲ್ಲಿ ಈಗಿನ ಪಾಕಿಸ್ತಾನದ ಸಿಂದ್ ಮತ್ತು ಪಂಜಾಬ್ ಪ್ರಾಂತ್ಯ, ಉತ್ತರದಲ್ಲಿ ಫೆಡರಲ್ ಆಡಳಿತದ ಬುಡಕಟ್ಟು ಪ್ರದೇಶ ಮತ್ತು ಪಶ್ಚಿಮದಲ್ಲಿ ಅಪ್ಘಾನಿಸ್ತಾನದೊಂದಿಗೆ ಗಡಿ ಹಂಚಿಕೊಂಡಿದೆ. ಇದು ಸುಮಾರು 3.47 ಲಕ್ಷ ಕಿ.ಮೀ ವಿಸ್ತೀರ್ಣದ ಪ್ರದೇಶವಾಗಿದ್ದು ಇಂದಿನ ಪಾಕಿಸ್ತಾನದ ಶೇ46% ಪ್ರದೇಶವಾಗಿದೆ. ಜನಸಂಖ್ಯೆ 1.30 ಕೋಟಿ ಜನರಿದ್ದಾರೆ. ಬ್ರಿಟೀಷ್ ಆಡಳಿತದಲ್ಲಿ ಅಖಂಡ ಭಾರತದೊಂದಿಗೆ ಸೇರದೇ ಪ್ರತ್ಯೇಕವಿದ್ದ ಬ್ರಿಟೀಷ್ ಆಡಳಿತದ ಪ್ರದೇಶವಾಗಿದ್ದು, ನಾಲ್ಕು ಜಿಲ್ಲೆಗಳನ್ನು ಒಳಗೊಂಡಿತ್ತು, ಅವುಗಳು ಹೀಗಿವೆ, ಕಲಾತ್, ಲಸ್ಬೇಲಾ, ಖಾರಣ್ ಮತ್ತು ಮಕ್ರಾನ್. ಕಲಾತ್ ಪ್ರದೇಶದ ದೊರೆ ಅಥವಾ ಖಾನ್ ಈ ನಾಲ್ಕೂ ಪ್ರದೇಶಗಳ ಮೇಲೆ ಹಿಡಿತ ಸಾಧಿಸಿ ಆಡಳಿತ ನಡೆಸುತ್ತಿದ್ದ. ಈತ ಬ್ರಿಟೀಷ್ ಆಡಳಿತದೊಂದಿಗೆ ಉತ್ತಮ ಸಂಬಂಧ ಹೊಂದಿ ಪ್ರಾಂತ್ಯಕ್ಕೆ ಪ್ರತ್ಯೇಕ ಸ್ವಾಯತ್ತತೆ ಗಳಿಸಿದ್ದ. ಈ ಪ್ರದೇಶ ಖನಿಜ ನಿಕ್ಷೇಪಗಳ ಸಮೃದ್ಧ ಭುಮಿಯಾಗಿದ್ದು, ಸಮೃದ್ಧ ಚಿನ್ನ, ತಾಮ್ರ, ತೈಲ ಮತ್ತು ನೈಸರ್ಗಿಕ ಅನಿಲಗಳನ್ನು ಒಳಗೊಂಡಿದೆ.
ಬ್ರಿಟೀಷ್‍ರು ದೇಶ ಬಿಟ್ಟು ಹೋಗುವಾಗ ಮುಸ್ಲಿಂ ಲೀಗ್ ಪಕ್ಷದ ನಾಯಕ ಮಹಮ್ಮದ್ ಅಲಿ ಜಿನ್ನಾ ಜೊತೆ ಮಾಡಿಕೊಂಡ ಒಪ್ಪಂದದಂತೆ ದೇಶವನ್ನು ಇಬ್ಬಾಗ ಮಾಡಿದರು. ಅದರಂತೆ ಮುಸ್ಲಿಂ ಬಾಹುಳ್ಯವುಳ್ಳ ಪ್ರದೇಶಗಳನ್ನು ಇಂಡಿಯಾ ಇಂಡಿಪೆಂಡೆನ್ಸ್ ಆಕ್ಟ್ 1947 ರಂತೆ ಎರಡು ಶರತ್ತುಗಳೊಂದಿಗೆ ಪಾಕಿಸ್ತಾನವೆಂದು ಭಾಗ ಮಾಡಿದರು. ಇದರಲ್ಲಿ ಒಳಗೊಂಡ ಮೊದಲ ಶರತ್ತು ಸಿಂದ್ ಮತ್ತು ಬಲೋಚಿಸ್ತಾನ್ ಒಪ್ಪಿದರೇ ಮಾತ್ರವೇ ಉದ್ದೇಶಿತ ಪಾಕಿಸ್ತಾನದ ಭಾಗ ಮತ್ತು ಎರಡನೇ ಶರತ್ತು ಫೆಡರಲ್ ಆಡಳಿತದ ಬುಡಕಟ್ಟು ಪ್ರದೇಶದ ಜನರ ಮತಗಣನೆ ನಡೆಸಿ ಅವರು ಒಪ್ಪಿದರೆ ಮಾತ್ರವೇ ಅದನ್ನು ಉದ್ದೇಶಿತ ಪಾಕಿಸ್ತಾನದ ಭಾಗವೆಂದು ಹೇಳಲಾಗಿದೆ. ಈ ಶರತ್ತುಗಳ ಆಧಾರದಲ್ಲಿ ಒಟ್ಟು ಐದು ಪ್ರಾಂತ್ಯಗಳು ಉದ್ದೇಶಿತ ಪಾಕಿಸ್ತಾನಕ್ಕೆ ವಿಭಜಿಸಲಾಯಿತು, (1) ಸಿಂದ್ ಪ್ರಾಂತ್ಯ- ಒಪ್ಪಿಗೆ ಪಡೆಯುವ ಶರತ್ತಿಗೆ ಒಳಪಟ್ಟು (2) ಮುಸ್ಲಿಂ ಬಾಹುಳ್ಯದ ಪಂಜಾಬ್ ಪ್ರದೇಶ(3)ಫೆಡರಲ್ ಆಡಳಿತದ ಬುಡಕಟ್ಟು ಪ್ರದೇಶ-ಮತಗಣನೆ ನಡೆಸಿ ಜನಾಭಿಪ್ರಾಯ ಪಡೆಯುವ ಶರತ್ತು (4) ಪೂರ್ವ ಪಾಕಿಸ್ತಾನ್ ಅಂದರೆ ಮುಸ್ಲಿಂ ಬಾಹುಳ್ಯದ ಬಂಗಾಳದ ಪ್ರದೇಶ ಇದನ್ನು ಬಂಗೀಸ್ತಾನ್ ಎಂತಲೂ ಕರೆದರು ಇದರ ಜೊತೆಗೆ (5) ಬಲೋಚಿಸ್ತಾನ್-ಜನಾಭಿಪ್ರಾಯ ಪಡೆಯುವ ಶರತ್ತಿನ ಮೇಲೆ ಸೇರಿಸಿದರು.  ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ ಕಾಶ್ಮೀರವನ್ನು ಈ ಸಮಯದಲ್ಲಿ ಬ್ರಿಟೀಷ್ ಆಡಳಿತ ಪಾಕಿಸ್ತಾನಕ್ಕೆ ಭಾಗ ಮಾಡಿ ನೀಡಿರಲಿಲ್ಲ. ಅದೂ ಹಾಗೆಯೇ ಅಖಂಡ ಭಾರತದ ಭಾಗವಾಗಿ ಉಳಿದಿತ್ತು. ಹೀಗೆ ವಿಭಜಿಸಲಾದ ಒಟ್ಟು ಐದು ಪ್ರದೇಶಗಳಲ್ಲಿ ಮೂರರಲ್ಲಿ ಅಂದರೆ ಸಿಂದ್, ಫೆಡರಲ್ ಆಡಳಿತದ ಬುಡಕಟ್ಟು ಪ್ರದೇಶ, ಬಲೋಚಿಸ್ತಾನ್‍ನಲ್ಲಿ ಪಾಕಿಸ್ತಾನ ಜನಾಭಿಪ್ರಾಯ ಪಡೆಯಬೇಕಾಗಿತ್ತು. ಸಿಂದ್ ಪ್ರಾಂತ್ಯ ಮಾತ್ರವೇ ಉದ್ದೇಶಿತ ಪಾಕಿಸ್ತಾನಕ್ಕೆ ಸೇರಲು ಒಪ್ಪಿಗೆ ಸೂಚಿಸಿತು, ಫೆಡರಲ್ ಆಡಳಿತದ ಬುಡಕಟ್ಟು ಪ್ರದೇಶದಲ್ಲಿ ಪಾಕಿಸ್ತಾನ ಮತಗಣನೆ ನಡೆಸುವ ಗೋಜಿಗೆ ಹೋಗದೇ ಹಾಗೆಯೇ ದಿನದೂಡಿತು, ಮತ್ತು ಬಲೋಚಿಸ್ತಾನ್ ಪ್ರಾಂತ್ಯ ಮಾತ್ರ ಉದ್ದೇಶಿತ ಪಾಕಿಸ್ತಾನ ಭಾಗವಾಗಲು ಒಪ್ಪದೇ ಹಾಗೆಯೇ ಉಳಿಯಿತು, ಬಲೋಚಿಸ್ತಾನ್‍ನ ಕಲಾತ್ ದೊರೆ ಪ್ರತ್ಯೇಕ ಬಲೋಚಿಸ್ತಾನ್ ದೇಶ ರಚನೆಯ ಇಂಗಿತದಲ್ಲಿ ಇಂಡಿಯಾ ಇಂಡಿಪೆಂಡೆನ್ಸ್ ಆಕ್ಟ್ 1947 ರಂತೆ  ಪ್ರತ್ಯೇಕವಾಗಿಯೇ ಉಳಿದ.
      ಆದರೆ ಅಕ್ಟೋಬರ್ 1947 ರಿಂದ ಪಾಕಿಸ್ತಾನದೊಳಗಿನ ಸಿಂದ್ ಮತ್ತು ಪಂಜಾಬ್ ಪ್ರಾಂತ್ಯದ ಜನರು ಅಗಾಧ ನಿಕ್ಷೇಪ ಹೊಂದಿದ ಮತ್ತು ಬಹು ವಿಸ್ತೀರ್ಣದ ಬಲೋಚಿಸ್ತಾನ್ ಪ್ರದೇಶವನ್ನು ದೇಶದ ಭಾಗವಾಗಿಸಬೇಕೆಂದು ದಂಗೆಯೆದ್ದರು. ಅನೇಕ ದಂಗೆಕೋರ ಸಂಘಟನೆಗಳು ಉದ್ಭವವಾದವು. ಇದೇ ಸಮಯದಲ್ಲಿ ಬಲೋಚಿಸ್ತಾನ್ ಅತಿಕ್ರಮಣಕ್ಕೆ ಅನೇಕ ಸಿಂದ್ ದಂಗೆಕೋರರು ಮುಗಿಬೀಳುತ್ತಾರೆ, ಅಂತಿಮವಾಗಿ ಪಾಕಿಸ್ತಾನದ ಸೇನೆ 1948ರಲ್ಲಿ ಅತಿಕ್ರಮಣ ಮಾಡುತ್ತದೆ, ನಿರಂತ ಮೂರು ತಿಂಗಳು ನರಮೇದ ನಡೆಸಿ ಏಪ್ರಿಲ್ 1 1948 ರಂದು ತನ್ನ ಭಾಗವಾಗಿ ಬಲೋಚಿಸ್ತಾನ್ ಪ್ರದೇಶವನ್ನು ಸೇರಿಸಿಕೊಳ್ಳುತ್ತದೆ. ಪಾಕಿಸ್ತಾನದ ಭಾಗವಾಗಿ ಒಪ್ಪದ ಅನೇಕ ಜನರ ಮೇಲೆ ಪಾಕಿಸ್ತಾನ ವಾಯು ಸೇನೆ ಅಂದು ಬಾಂಬುಗಳನ್ನು ಎಸೆಯುತ್ತದೆ, ಮುಗ್ದ ಅಮಾಯಕ ಜನರನ್ನು ಕೊಲ್ಲುತ್ತದೆ, ಪಾಕಿಸ್ತಾನದ ಸೇನೆ ಕಿಂಚಿತ್ತು ಕರುಣೆ ತೋರದೇ ಮಹಿಳೆಯರ ಅತ್ಯಾಚಾರ ಮಾಡುತ್ತದೆ. ಇದೇ ಸಮಯದಲ್ಲಿ ಅನೇಕ ಲಕ್ಷ ಬಲೂಚಿಸ್ತಾನಿಗಳು ಹೆದರಿ ದೇಶಬಿಟ್ಟು ಇರಾನ್, ಅಪ್ಘಾನ್ ಸೇರಿದಂತೆ ಜಗತ್ತಿನ ಅನೇಕ ದೇಶಗಳಿಗೆ ವಲಸೆ ಹೋಗುತ್ತಾರೆ, ಮತ್ತೂ ಇಂದಿಗೂ ಪ್ರತ್ಯೇಕ ಬಲೂಚಿಸ್ತಾನ್ ಪ್ರಾಂತ್ಯಕ್ಕಾಗಿ ಹೋರಾಡುತ್ತಿದ್ದಾರೆ. ನಿತ್ಯ ಬಲೋಚಿಸ್ತಾನ್ ಪ್ರಾಂತ್ಯ ಇಂದಿಗೂ ಪಾಕಿಸ್ತಾನದ ಸೇನೆ ಮತ್ತು ಸ್ಥಳೀಯ ಬಲೋಚಿಗಳ ನಡುವೆ ಕಾಳಗ ನಡೆಯುತ್ತದೆ. ಬಲೂಚಿಗಳು ಗೆರಿಲ್ಲಾ ಮಾದರಿಯಲ್ಲಿ ಪಾಕಿಸ್ತಾನ ಸೇನೆಯೊಂದಿಗೆ ಹೋರಾಡುತ್ತಾರೆ. ಇಲ್ಲಿ ನಿತ್ಯ ಕಾಶ್ಮೀರಕ್ಕಿಂತಲೂ ಅತೀ ಕೆಟ್ಟ ಪರಿಸ್ಥಿತಿ ಇದೆ. ನಿತ್ಯ ದಂಗೆ, ಸ್ಪೋಟಕ ಸಾಮಾನ್ಯ. 1947ರಲ್ಲಿ ಸುಮಾರು 2 ಕೋಟಿ ಜನರಿದ್ದ ಬಲೋಚಿಗಳು ಇಂದು 1.30 ಕೋಟಿಯಾಗಿದ್ದಾರೆ. ಅಂದರೆ ಅವರ ಸಂಖ್ಯೆ ಸುಮಾರು 7 ದಶಕಗಳು ಕಳೆದರೂ ವೃದ್ಧಿಸದೇ ಕ್ಷಯವಾಗಿದೆ. ಕಾರಣ ಪಾಕಿಸ್ತಾನ ಹತ್ಯಾಕಾಂಡ. ನಿತ್ಯ ಅತ್ಯಾಚಾರ, ಸಾಮೂಹಿಕವಾಗಿ ಸಾರ್ವಜನಿಕರ ಮೇಲೆ ವಾಯು ಸೇನೆ ಬಾಂಬುಗಳ ಮಳೆಗರೆಯುವ ಮೂಲಕ ಸುಮಾರು ಏಳು ದಶಕಗಳಲ್ಲಿ ಬಲೂಚಿಗಳ ಸ್ವಾತಂತ್ರ್ಯ ಹೋರಾಟವನ್ನು ಪಾಕಿಸ್ತಾನ ನಿರ್ದಯವಾಗಿ ಹತ್ತಿಕ್ಕುತ್ತಿದೆ.
        ಆದರೆ ಇದ್ಯಾವುದನ್ನೂ ಯುನೈಟೆಡ್ ಕಿಂಗ್‍ಡಮ್ ಪ್ರಶ್ನಿಸುವುದಿಲ್ಲ, ಯುನೈಟೆಡ್ ನೇಶನ್ಸ ಬಲೋಚಿಸ್ತಾನ್‍ನಲ್ಲಿನ ಮಾನವ ಹಕ್ಕುಗಳ ಉಲ್ಲಂಘನೆಯನ್ನು ಖಂಡಿಸಿದರೂ ಮಧ್ಯೆ ಪ್ರವೇಶಿಸುತ್ತಿಲ್ಲ. ಏನೇ ಆದರೂ ತನ್ನದಲ್ಲದ ಭೂಮಿಯನ್ನು ಒತ್ತಾಯವಾಗಿ ಇಟ್ಟುಕೊಂಡು ಬಲೋಚಿಗಳ ಮೇಲೆ ನಿತ್ಯ ಸಂಹಾರ ನಡೆಸುತ್ತಿರುವ ಪಾಕಿಸ್ತಾನಕ್ಕೆ ಬುದ್ಧಿ ಕಲಿಸಲು ಬಲೋಚಿಸ್ತಾನ್ ವಿಷಯನ್ನು ಪ್ರಧಾನಿ ಮೋದಿ ಸ್ವಾತಂತ್ರೋತ್ಸವದ ಭಾಷಣದಲ್ಲಿ ಮುಖ್ಯ ವಿಷಯವಾಗಿ 2016ರಲ್ಲಿ ಹೇಳುತ್ತಾ ವಿಶ್ವದ ಗಮನವನ್ನು ಬಲೋಚಿಸ್ತಾನ್ ಕಡೆ ಸೆಳೆಯುತ್ತಾರೆ. ಮೋದಿಯವರ ಮಾತನ್ನು ವಿಶ್ವದೆಡೆ ಬಲೋಚಿಗಳು ಸಂಭ್ರಮಿಸಿ ಸ್ವಾಗತಿಸುತ್ತಾರೆ, ಮತ್ತು ಪ್ರತ್ಯೇಕ ಬಲೂಚಿಸ್ತಾನ್ ಹೋರಾಟಕ್ಕೆ  ಭಾರತದ ಬೆಂಬಲ ಕೋರುತ್ತಾರೆ. ಇದೇ ರೀತಿ ಜನ ಮತಗಣನೆ ನಡೆಸದೇ ಫೆಡರಲ್ ಆಡಳಿತದ ಬುಡಕಟ್ಟು ಪ್ರದೇಶವನ್ನು ಪಾಕಿಸ್ತಾನ ಹಾಗೆಯೇ ಉಳಿಸಿಕೊಂಡಿದೆ, ಇದರ ಬಗ್ಗೆ ಆಗಾಗ್ಗೆ ಏಳುವ ದಂಗೆಗಳನ್ನು ಬಹಳ ನಿರ್ದಾಕ್ಷೀಣ್ಯವಾಗಿ ಬಗ್ಗುಬಡಿಯುತ್ತದೆ, ಒಟ್ಟಾರೆ ಇಂಡಿಯಾ ಒಂಡಿಪೆಂಡೆನ್ಸ ಆಕ್ಟ್ 1947ರಂತೆ ವಿಧಿಸಿದ ಒಂದೂ ಶರತ್ತನ್ನು ಪೂರೈಸದೇ ಪಾಕಿಸ್ತಾನ ಬರೀ ಹಿಂಸೆ ಹತ್ಯಾಕಾಂಡದಿಂದ ಬಲೂಚಿಸ್ತಾನ್ ಪ್ರದೇಶವನ್ನು ತನ್ನ ತೆಕ್ಕೆಯಲ್ಲಿಟ್ಟುಕೊಂಡಿದೆ. ಇದಕ್ಕೆ ವಿಶ್ವ ಸಮುಧಾಯ ಮೌನ ಮುರಿದು ಬಲೂಚಿಗಳ ಹೋರಾಟಕ್ಕೆ ಬೆಂಬಲ ನೀಡಿ ಮಾನವ ಹಕ್ಕುಗಳ ಉಲ್ಲಂಘನೆಯನ್ನು ಬಲೋಚಿಸ್ತಾನ್ ಪ್ರಾಂತ್ಯದಲ್ಲಿ ನಿಲ್ಲುವಂತೆ ಮಾಡಬೇಕು.

                  ರಾಮಚಂದ್ರ ಸಾಗರ್


Sunday, 28 May 2017

ನಿನ್ನೊಂದಿಗೆ ಸಾಗಿದಾಗ..

ಸಾಗರಿಯ ತಡಿಯಲಿ ನೀ ಕೈಹಿಡಿದು ಸಾಗುವಾಗ
ಅನುರಾಗದ ಪದಗಳಲಿ ನೀ ಮಧುರವಾಗಿ ಗುನುಗುವಾಗ
ಎದೆಯ ಗೂಡಲಿ ಒಲವ ಜಲಧಿ ಉಬ್ಬರಿಸಿದೆ
ಪ್ರೀತಿಸುವ ಇರಾದೆಯು ಮನದಲ್ಲಿ ಅಬ್ಬರಿಸಿದೆ..

ಮೆಲುನಗುವ ನಿನ್ನ ಸೊಬಗಿನಲಿ ಹೊಸಕಾವ್ಯ ಅರಳಿದಾಗ
ಬೀಸುವ ಕಡಲಲೆಗಳು ಹಾರೈಸಲು ಬಳಿ ಬಂದಾಗ
ಒಂಟಿ ಬದುಕು ನಿನ್ನಾಸರೆಯ ಬೇಡಿದೆ
ಮೋಹದ ನಿನ್ನ ಬಂಧದಲಿ ಹಂಬಲಿಸುತ ಮನ ಸೆರೆಯಾಗಿದೆ..

ಸಾಗರಿಯ ತಡಿಯಲಿ ತಂಗಾಳಿ ಬೀಸಿದಾಗ
ದಣಿದ ಮನದಲಿ ಉಲ್ಲಾಸ ಬೀಗಿದಾಗ
ಸಂಭ್ರಮಿಸು ಘಳಿಗೆಯಲಿ ನಿನ್ನ ನವಿರು ಸ್ಪರ್ಷದ ಸುಖದಲಿ
ಹೊಂಗನಸುಗಳು ಹೆಜ್ಜೆ ಹೆಜ್ಜೆಗೂ ಕಾಡಿವೆ..

ಮೆಲು ನಗುವ ನಿನ್ನ ಮೊಗವು ನಲುಮೆಯ ನೆಲೆಯಾದಾಗ
ರಂಗು ತುಂಬಿದ ಕನಸುಗಳ ಚಿತ್ತಾರ ಬಿಡಿಸಿದಾಗ
ನಿನ್ನೊಲುಮೆಯ ರಥದಲಿ ಮನಸು ನಿನ್ನೊಂದಿಗೆ ನಲಿದಿದೆ
ಅಕ್ಕರೆಯ ಪಥದಲ್ಲಿ ನಗುತ ತನುವು ನಿನ್ನೊಂದಿಗೆ ಸಾಗಿದೆ..

                         ರಾಮಚಂದ್ರ ಸಾಗರ್