Monday, 13 February 2017

ಲೇಖನಿಗೆ ಶಾಹಿಯಾದನು ..

      ಪ್ರೇಮಿ ಕಡಲ ತಡಿಯಲ್ಲಿ ಕೂತಿದ್ದಾನೆ, ತನ್ನ ಗೆಳತಿಗಾಗಿ ಹಂಬಲಿಸುತ್ತಿದ್ದಾನೆ, ಅವಳಿನ್ನೂ ಬಂದಿಲ್ಲ, ರವಿ ನಿಧಾನವಾಗ ಮುಳುಗುತ್ತಿದ್ದಾನೆ, ಬೆಳಕು ಕಡಿಮೆಯಾಗಿ ಕತ್ತಲೆಯ ಛಾಯೆ ಆವರಿಸುತ್ತಿದೆ, ಜೊತೆಗೆ ಅವನ ಮೊಗದಲ್ಲೂ ಆತಂಕದ ಛಾಯೇ, ಗೆಳತಿ ಬೇಗನೇ ಆಗಮಿಸು, ಮನದ ರೋಧನೆ ದೂರಾಗಿಸೆಂದು ಆತನ ಹೃದಯ ನಿವೇದಿಸುತ್ತಿದೆ, ಮೆತ್ತನೇ ಯಾವುದೋ ಧ್ಯಾನದಲ್ಲಿ ಕೈಬೆರಳುಗಳನ್ನು ಮರಳು ರಾಶಿಯಲ್ಲಿ ಆಡಿಸುತ್ತಾ ಏನೋ ಬರೆಯುತ್ತಾನೆ, ಬರೆಯಲು ಹಾತೊರೆಯುತ್ತಾನೆ, ನಿಧಾನವಾಗಿ ಏನು ಬರೆದೆ ಎಂದು ನೋಡುತ್ತಾನೆ, ಅದು ಅವಳದೇ ಹೆಸರು, ಅವನಿಗೆ ಅರಿವಿಲ್ಲದೆಯೂ ಬರೆವ ಪದವು ಅವಳದೇ ಹೆಸರಾಗಿದೆ, ಕಾರಣ ಮನದ ಮನೆಯಲ್ಲಿ ಅಚ್ಚಾದವಳ ಹೆಸರೇ ಅವನು ಕನಸಲ್ಲೂ ಬರೆವ ಪದವಾಗಿರುತ್ತದೆ, ಮತ್ತೆ ಮತ್ತೆ ಅವಳಾಗಮಿಸುವ ದಿಕ್ಕನ್ನು ನೋಡುತ್ತಾನೆ, ಕದಲೇ ಕತ್ತು ಆ ದಿಕ್ಕಿನ್ನೇ ವೀಕ್ಷಿಸುತಿದೆ, ಇದೆಲ್ಲಾ ಅವಳ ಪ್ರೀತಿಯ ಮಾಯೆಯಲ್ಲಿ ಬಂಧಿಯಾದವನ ಕಾತರ. ಕಾತರಿಸುವ ಮನದ ತಳಮಳ. ಈ ಸಮಯದಲ್ಲಿ ಮೆತ್ತನೆ ಸಾಗರದಲ್ಲಿ ಮುಳುಗುತ್ತಿರುವ ರವಿಗೂ ಕೊಂಚ ಮುಜುಗರ, ಕಡಲತಡಿಯಲ್ಲಿ ಮುಳುಗುವ ರವಿಯ ಮೊಗದಲ್ಲೂ ದುಗುಡ, ಅದಕೇ ಆತ ಕೆಂಪಾಗಿ ಕೋಪದಲ್ಲಿ ಮುಳುಗುತ್ತಿದ್ದಾನೆ, ಈ ಒಂಟಿತನ ಸಾದುವೇ, ಈ ಒಳ್ಳೆಯ ಹುಡುಗನಿಗೇಗೆ ಈ ಶಿಕ್ಷೆ..? ಪಾಪ ಆತನ ಪ್ರೇಯಸಿಗೇನು ತೊಂದರೆಯಾಯಿತೋ..? ಎಂದು ವಿಧಿಯನ್ನು ರವಿ ಶಪಿಸುತ್ತಿದ್ದಾನೆ, ನಂತರ ರವಿ ಮರೆಯಾಗಿ ನಿದಾನವಾಗಿ ನೀಲಿ ಬಾನಲ್ಲಿ ಶಶಿಯಾಗನವಾಗುತ್ತದೆ. ಚಂದಿರ ನೋಡುತ್ತಾನೆ, ಹುಡುಗ ತನ್ನ ಪ್ರೇಯಸಿಯನ್ನು ಬೇಡುತ್ತಾ ಹಪಿಹಪಿಸುವ ಅವನ ನೋವನ್ನು ಕಂಡು ಆತನಿಗೂ ಮುಜುಗರ. ತಂಗಾಳಿ ಬೀಸುತ್ತಿದೆ, ಆದರೂ ಹುಡುಗನ ಮನಕೆ ಹಿತವಿಲ್ಲ, ಬಿಸಿಗಾಳಿ ಬಂದು ಕೊರೆದಂತೆ ಒದ್ದಾಡುತ್ತಾನೆ, ದೇವರಲ್ಲಿ ಕೇಳುತ್ತಾನೆ, ಈ ನೋವು ಸಾದುವೇ..? ಅವಳೇಕೆ ಇನ್ನೂ ಆಗಮಿಸಿಲ್ಲ, ಅವಳಿಗೇನಾಯಿತೋ, ಏನೋ, ಏನೇ ಆಗಲಿ ಅವಳು ಚೆನ್ನಾಗಿರಲಿ ಎಂದು ಒದ್ದಾಡುತ್ತಾನೆ. ಕಡಲಲೆಯ ಸಾವರಿಸಿ ಬರುವ ತಂಗಾಳಿಯಲ್ಲೂ ಆತನಿಗೆ ಹಿತವೆನಿಸುವುದಿಲ್ಲ, ಕಡಲಲೆಗಳ ಸದ್ದು ಆತನಿಗೆ ಕೊರೆತವೆನ್ನಿಸುತ್ತದೆ, ಮೋಡಗಳ ನಡುವೆ ಓಡೋಡಿ ಬರುವ ಚಂದಿರನನ್ನು ನೋಡುತ್ತಾ ಹಾಗೇ ಕಡಲ ತೀರಲದಲಿ ಮಲಗಿದ್ದಾನೆ. ಮತ್ತೆ ಮರಳು ರಾಶಿಯಲ್ಲಿ ಏನೋ ಗೀಚುತ್ತಾನೆ, ಅವಳನ್ನೇ ನೆನೆಯುತ್ತಾ ಬರೆಯುತ್ತಾನೆ, ಅವಳ ಪ್ರೀತಿಯ ಅಯಸ್ಕಾಂತತ ಗುಣದಲ್ಲಿ ಈತ ಲೀನವಾಗಿದ್ದಾನೆ, ಅವಳ ಪ್ರೀತಿಯ ಹೊನಲಿನಲ್ಲಿ ಹುಡುಗ ಒದ್ದೆಯಾಗಿದ್ದಾನೆ. ಒಲವ ಜಲಧಿಯು ಆತನೆದೆಯಲ್ಲಿ ಎದ್ದೆದ್ದು ಕುಣಿದಂತೆ ಅನುಭೂತಿ.
ಅಷ್ಟರಲ್ಲಿ ಆತ ಅಲ್ಲಲ್ಲಿ ಮೂಡುತ್ತಿರುವ ಚುಕ್ಕಿಗಳನ್ನು ಎಣಿಸುತ್ತಾ ಹಾಗೆಯೇ ಕಡಲತಡಿಯಲ್ಲಿ ವಿರಮಿಸುತ್ತಿದ್ದಾನೆ. ತಾರೆಗಳ ನಡುವಲ್ಲಿ ಚಂದಿರ ಮೊಗದಲ್ಲಿ ತನ್ನ ಗೆಳತಿ ಕಂಡಂತೆ ಆತನಿಗೆ ಭಾಸವಾಗುತ್ತದೆ, ಚಂದಿರನ ಮೊಗದಲ್ಲೂ ತನ್ನ ಗೆಳತಿ ಮೂಡಿದಂತೆ, ಆಕೆ ನಗುತಾ ನಾಚಿದಂತೆ, ಈತ ಕೈಯನ್ನು ಮುಗಿಲೆಡೆ ತನ್ನ ಅರಿವಿಲ್ಲದೇ ಚಾಚುತ್ತಾನೆ, ನೋಡುತ್ತಾನೆ, ತನ್ನ ಕೈ ಎಟುಕದು, ಚಂದಿರ ಓಡುತ್ತಿದ್ದಾನೆ ಹಾಗೆಯೇ..ಮತ್ತೆ ಹುಡುಗ ಕಾತರಿಸುತ ಅವಳಾಗನದ ಜಾಡು ಹಿಡಿದು ಕೂರುತ್ತಾನೆ, ಬೀಸುವ ತಂಗಾಳಿ ಬೇಡುತ್ತಾ ಕೇಳುತ್ತಾನೆ ನೀ ಬರುವಾಗ ಕಂಡಿರಾ ಅವಳನು ಎಂದೂ..? ಬಾನಲ್ಲಿ ಚಂದಿರ ನಗುತ್ತಾನೆ, ಹುಡುಗ ಹಾಗೆಯೇ ಸಮಯ ದೂಡಲಾಗದೇ ತಾರೆಗಳ ಎಣಿಕೆಗೆ ಹಠವಿಡಿದು ಎಣಿಸುತ್ತಿದ್ದಾನೆ..ಅಷ್ಟರಲ್ಲಿ ಭಜದ ಮೇಲೆ ಏನೋ ನವಿರು ಸ್ಪರ್ಷ...ನೋಡುತ್ತಾನೆ ಗೆಳತಿ ಬಂದಿದ್ದಾಳೆ, ಆತನ ಚಡಪಡಿಕೆಗೆ ಅವಳು ಬಂದಿದ್ದು ಗೊತ್ತಾಗಲಿಲ್ಲ, ಅಷ್ಟೊತ್ತು ಅವಳಾಗಮನದ ದಿಕ್ಕನ್ನು ಗುರಿಯಿಟ್ಟು ಕಾದರೂ ಕಾಣದವಳು ಈಗ ಇವನಿಗೆ ಒಲವ ದೇವತೆಯಾಗಿ ಕಾಣುತ್ತಿದ್ದಾಳೆ. ತಾರೆಗಳ ಎಣಿಕೆಯಲ್ಲಿ ನಿರತನಿಗೆ ನೈಜತಾರೆ ಧರೆಗಿಳಿದು ನಗುತ್ತಿದ್ದಾಳೆ, ಒಲವ ದೇವತೆಯು ಹಾರೈಸಿದ್ದಾಳೆ, ಒಲವ ದೊರೆ ಚಂದಿರ ನಗುತಾ ಬೆಳುದಿಂಗಳು ಚೆಲ್ಲುತ್ತಿದ್ದಾನೆ, ಈ ನೈಜ ಪ್ರೇಮಿಗಳು ನೂರು ವರುಷ ಸಂತಸದಿಂದಿರಲಿ, ನೂರು ವರುಷಕೂ ಸವೆಯದ ಪ್ರೀತಿ ಇವರದಾಗಲಿ ಎಂದು ಬಯಸುತ್ತಾನೆ. ಬೀಸುವ ತಂಗಾಳಿಯಲ್ಲಿ ಒಲವಾರಾಧನೆ ಘಮಲು ಈಗ ಗಟ್ಟಿಯಾಗುತ್ತಿದೆ, ಕಡಲಲೆಗಳ ಗಾನದಲ್ಲಿ ಒಲವಗಾಥೆಯು ಗುನುಗುತಿದೆ, ಸಾಗರದ ತೀರದಲ್ಲಿ ಒಲವ ಜಲಧಿ ಉಕ್ಕಿದ ಸಂಭ್ರಮ, ಪ್ರೇಮಿಯ ಮನದಲ್ಲಿ ಪ್ರೀತಿಯ ಮೇನೆಯಲ್ಲಿ ನಲಿದ ಸಡಗರ, ಎಲ್ಲವೂ ಅವಳಾಗನದ ನಲಿವು, ಅವಳಾಗನದ ಬಲವು. ಈಗ ಆತ ಮರಳರಾಶಿಯಲ್ಲಿ ಬರೆದ ಪದಗಳನ್ನು ನೋಡುತ್ತಾನೆ ಅದೆಲ್ಲ ಅವಳದೇ ಹೆಸರು, ಅವಳದೇ ನೆನಪು.. ಪ್ರತಿಸಾಲುಗಳು ಅವಳಿಗಾಗಿ ಬರೆದ ಪ್ರಾರ್ಥನೆ. ಈಗ ಹುಡುಗಿ ನೋಡುತ್ತಾಳೆ, ಅವನ ಕಣ್ಣಲ್ಲಿ ಕಣ್ಣಿಟ್ಟು.. ಮೆತ್ತನೇ ಅವನ ಕಿವಿಯಲ್ಲಿ ಪಿಸುಗುಡುತ್ತಾಳೆ..ನಿನ್ನನ್ನು ಕಾಯಿಸಿದ್ದಕ್ಕೆ ಕ್ಷಮಿಸು ಎಂದು ಕೆಂಗುಲಾಬಿಯನ್ನು ನೀಡುತ್ತಾಳೆ. ಹುಡುಗಾ ಕಾತರದಲ್ಲಿ ಅಷ್ಟೊತ್ತು ನೊಂದರೂ ಯಾವುದನ್ನೂ ಲೆಕ್ಕಿಸದೇ ಅವಳ ಒಲವಸೆರೆಯಲ್ಲಿ ಆತನ ಮನ ರಮಿಸುತ್ತದೆ, ಪ್ರೇಮಿ ಮನದಲ್ಲಿ ಒಲವಕಾವ್ಯ ಪಳಿಸುತ್ತದೆ. ಅಷ್ಟರಲ್ಲಿ ಆಕೆ ಕಡಲತೀರ ತುಂಬಾ ಬರೆದ ತನ್ನ ಹೆಸರಿನ ಜೊತೆ ಇವನ ಹೆಸರನ್ನು ಬರೆಯುತ್ತಾಳೆ, ಮೇಲೆ ಬಾನಲ್ಲಿ ಚಂದಿರ ನಗುತ್ತಾ, ಬೆಳುದಿಂಗಳು ಚೆಲ್ಲುತ್ತಾ ಹಾರೈಸುತ್ತಾನೆ, ಅವಳು ಈ ತನ್ನ ಹುಡುಗ ಬರೆದ ತನ್ನ ಪ್ರತಿ ಹೆಸರಿನ ಜೊತೆಯಲ್ಲಿ ಇವಳ ಹೆಸರನ್ನು ಜೋಡಿಸಿದ ಸಂಭ್ರಮದಲ್ಲಿ ನಲಿಯುತ್ತಾಳೆ, ಇತ್ತ ಹುಡುಗ ಇವಳ ಒಲವಸೆಲೆಯಲ್ಲಿ ಮರಳುರಾಶಿಯಲ್ಲಿ ಬರೆಯುತ್ತಾನೆ.. 
“ನಗುತ ಚಂದಿರ 
ಬೆಳದಿಂಗಳು ಚೆಲ್ಲಿದ 
ಕವಿತೆ ಬರೆಯಲು 
ಲೇಖನಿಗೆ ಶಾಹಿಯಾದನು 
ಒಲವ ಕವಿತೆ ಬರೆಯಲು.”

          ರಾಮಚಂದ್ರ ಸಾಗರ್

Sunday, 12 February 2017

ಆಭರಣವು ನೀನು..

ಆಹ್ಲಾದದ ಆಭರಣವು ನೀ ನೀಡುವ ಮುತ್ತು
ಆನನಂದದ ಆನನವು ನೀ ನುಡಿವ ಮಾತು
ಸಂತೋಷದ ಹಂದರವು ನೀ ಕರೆವ ಬಾಳು
ಆಲಾಪದ ಸಿಹಿಯೂ ನೀ ಗುನುಗುವ ಹಾಡು..

ಆನಂದಿಸುವ ಜಗವು ನಿನ್ನ ಬಾಹು ಬಂಧನವು
ಆಭಾರದ ತೊಟ್ಟಿಲು ನಿನ್ನ ಮೋಹದ ಮಡಿಲು
ಔದಾರ್ಯದ ನೋಟವು ನಿನ್ನ ಕುಡಿನಗುವ ಸೊಬಗು
ಆವಾಸದ ಸೆಲೆಯು ನಿನ್ನ ಎದೆಯ ಗೂಡು..

ಆತಿಥ್ಯವು ಮನಕೆ ನಿನ್ನ ತುಂಟ ನೋಟ
ಸೌಭಾಗ್ಯವು ಕಣ್ಣಿಗೆ ನಿನ್ನ ಮುಗ್ದ ನೋಟ
ಸುಕಾರ್ಯದ ಆಧಾನವು ನಿನ್ನ ಸಹಿತ ಜೊತೆಯು
ಶೃಂಗಾರಕೆ ಆವೇದನೆಯು ನೀ ನಾಚುವ ಪರಿಯು..

ಆಸೆಪಡೆವ ನನ್ನ ಹೃದಯಕೆ ಉತ್ತರವೂ ನೀನು
ಆಮಿಷವು ನನ್ನ ಸಿಹಿಕನಸಿಗೆ ನಿತ್ಯವೂ ನೀನು
ನಿರೂಪಕಿಯು ಒಲವ ಬದುಕಿಗೇ ನೀನು
ಪ್ರೇಯಸಿಯು ನಿತ್ಯ ಪ್ರೇಮಿಸುವ ನನ್ನ ಮನಕೆ ನೀನು..

        ರಾಮಚಂದ್ರ ಸಾಗರ್

Saturday, 4 February 2017

ನಂದು ಎಂಬ ಬಂಧು

ಬರಡು ನಾಡಲ್ಲಿ ಹಸಿರು ಮೇಳೈಸಿದವನೇ
ಹಂದೆ ಮನದಲ್ಲಿ ಛಲುವು ಉಕ್ಕಿಸಿದವನೇ
ಅಳಲು ತುಂಬಿದವರಲ್ಲಿ ಸಂತಸವರಳಿಸಿದವನೇ
ದುಮ್ಮಾನದ ಬದುಕಲ್ಲಿ ಹೊಸತನ ತಂದವನೇ
ನಮ್ಮೀ ನಂದು ಎಂಬ ಬಂಧು..

ಕಾಠಿಣ್ಯದ ದಾರಿಯನು ಹೂವಾಗಿಸಿದವನು
ಆಗದು ಎಂಬುದನು ಆಗಿಸಿ ತೋರಿದವನು
ಶಿಲೆಯ ತಲೆಯಲ್ಲಿ ಹೂವರಳಿಸಿದ ಜಾದುಗಾರ
ಬರಡು ಮರದಲ್ಲಿ ಹೂ ತುಂಬಿದಾ ಮೋಡಿಗಾರ
ನಮ್ಮೀ ನಂದು ಎಂಬ ಬಂಧು..

ಯಾರಿಲ್ಲವೆಂದವರಿಗೆ ಸ್ನೇಹದ ಸೆಲೆಯಾಗಿ
ಊರಿಗೆಲ್ಲರಿಗೆ ಚೈತನ್ಯ ಧಾರೆಯಾಗಿ
ನಾಡಿನೆಲ್ಲರಿಗೆ ಮಾದರಿಯಾದವನೇ
ದುಡಿವ ಕೈಗಳಿಗೆ ದುಡಿಮೆ ನೀಡಿದವನೇ
ನಮ್ಮೀ ನಂದು ಎಂಬ ಬಂಧು..

ಭೂತಾಯ ಒಲುಮೆಯಲ್ಲಿ ವರ ಪಡೆದವನು
ಹಸಿರು ಕ್ರಾಂತಿಗೆ ಕೈ ಎತ್ತಿ ನಡೆವÀವನು
ದುರ್ಜನರ ದಮನಕೆ ಕೈಕಟ್ಟಿ ನಿತ್ತವನು
ನಮ್ಮೀ ನಂದು ಎಂಬ ಬಂಧು..
ಸ್ನೇಹ ಬೆಸೆವ ಬಂಧು..

     ರಾಮಚಂದ್ರ ಸಾಗರ್

Thursday, 2 February 2017

ಮಗಳೇ ಎಂದವನೇ.. ಭಾಗ 5

        ಗೆಳತಿ ಮತ್ತು ನಾನು ಯೋಜಿಸಿದಂತೆ ಎಲ್ಲವೂ ಸಿದ್ದ ಮಾಡಿಕೊಂಡೆವು, ಆಕೆಯ ಅಣತಿಯಂತೆ ನಾನು ಒಪ್ಪಿದೆ, ಒಂದು ವೇಳೆ ಈಗ ಯೋಜಿಸಿದಂತೆ ಆಗದಿದ್ದರೆ ಗೆಳೆಯರ ಸಹಾಯದೊಂದಿಗೆ ಬೇರೊಂದು ಕಾರ್ಯ ಮಾಡೋಣವೆಂದಳು, ಈಗ ನಾವು ಎಲ್ಲವನ್ನೂ ಸಿದ್ದವಾಗಿಸಿಕೊಂಡು ಸೀದಾ ವರದರಾಜ್ ಮನೆಗೆ ಹೋದೆವು. ಮನೆ ಬಾಗಿಲು ಬಡಿದೆ, ಸುನಿತಾ ಬಂದು ಬಾಗಿಲು ತೆಗೆದು ನೋಡಿದಳು, ಬೇರೆ ದಿನಾ ನೋಡಿದಾಗ ಕಾಣುವ ಆತ್ಮೀಯತೆ ಇಂದು ಅವಳ ಮೊಗದಲ್ಲಿ ಕಾಣಲಿಲ್ಲ, ಏಕೆ ಬಂದರೋ ಎಂಬ ಭಾವವಿತ್ತು, ನಾನು ಇಲ್ಲೇ ಶಾಪಿಂಗ್‍ಗೆ ಬಂದಿದ್ದೆ, ಹಾಗೇ ಅಪ್ಪಾಜಿ ಊರಿಂದ ಬಂದಿದ್ದಾರೆಂದು ನೋಡಿ ಹೋಗಲು ಬಂದೆ ಎಂದೆ, ಆಕೆ ಅಪ್ಪಾಜಿ ಇನ್ನೂ ಬಂದಿಲ್ಲ, ಇನ್ನೂ ಎರಡು ದಿನವಾಗುತ್ತೆ ಬರೋದು, ಅಲ್ಲಿ ಅವರ ಸಹೋದರನಿಗೆ ಹುಷಾರಿಲ್ಲ ಯಾವುದಕ್ಕೂ ಖಚಿತವಾಗಿ ಹೇಳುವುದು ಕಷ್ಟ ಎಂದಳು, ನಾನು ಕುಡಿಯಲು ಸ್ವಲ್ಪ ನೀರು ಕೊಡಿ ಎಂದೆ, ಅವಳು ತರಲು ಒಳ ಹೋದಳು. ಕೂಡಲೇ ನಾನು ಟಿ.ವಿ ಪಕ್ಕದಲ್ಲಿದ್ದ ಗಾಜಿನ ಕುಂಡವನ್ನು ಮೊದಲೇ ಯೋಜಿಸಿದಂತೆ ಜೋರಾಗಿ ಬೀಳಿಸಿದೆ, ಬಿದ್ದ ಶಬ್ದಕ್ಕೆ ಎರಡು ಜನ ರೂಮಿನಿಂದ ಬುಲೆಟ್ ನಿಂದ ಬಿದ್ದ ಗುಂಡಿನಂತೆ ಹೊರ ಓಡಿಬಂದರು, ಬಂದವರು ಕುಮಾರ್ ಮತ್ತು ವರದರಾಜ್, ಕೂಡಲೇ ನಾವು ನಮ್ಮ ಬಳಿ ಇದ್ದ ಪೆಪ್ಪರ್ ಸ್ಪ್ರೆಯ್ ಮತ್ತು ಸುಣ್ಣದ ಪೌಡರ್ ಅವರ ಕಣ್ಣಿಗೆರೆಚಿದೆವು, ಈ ಕಡೆ ಇಂದ ಓಡಿ ಬಂದ ಸುನಿತಾಳಿಗೂ ಪೆಪ್ಪರ್ ಸ್ಪ್ರೆಯ್ ಮಾಡಿ ಕೂಡಲೇ ಮುಂಬಾಗದ ಬಾಗಿಲು ಎಳೆದೆವು. ಎಲ್ಲರೂ ಏನಾಯಿತೆಂಬ ಗಾಬರಿಯಲ್ಲಿದ್ದಾಗಲೇ ಬೇಗನೇ ಅವರಿಗೆ ಕೂಗಿದರೆ ಕೈಯಲ್ಲಿರುವ ಬ್ಲೇಡ್ ನಿಂದ ಗಂಟಲು ಕತ್ತರಿಸುತ್ತೇವೆ, ನಮ್ಮ ಮಾನಕ್ಕಿಂತ ನಿಮ್ಮ ಜೀವ ದೊಡ್ಡದಲ್ಲವೆಂದು ಬಾಯಿ ಮುಚ್ಚಿಸಿದೆವು. 
        ಕೂಡಲೇ ಅವರನ್ನು ಕೋಣೆಯಲ್ಲಿ ಕೂಡಿ ಹಾಕಿ ನಮ್ಮ ಬಳಿ ಇದ್ದ ಹಗ್ಗದಿಂದ ಅವರ ಕೈಕಾಲುಗಳನ್ನು ಕಟ್ಟಿಹಾಕಿದೆವು, ಬಾಯಿಗೆ ಬಟ್ಟೆ ತುರುಕಿದೆವು, ಕಣ್ಣಿಲ್ಲದೇ ಎಲ್ಲದಕ್ಕೂ ಬೆಂಡಾಗುವುದು ಈಗ ಅವರದಾಯಿತು, ನಾನು ಎರಡು ದಿನದಿಂದ ಸರಿಯಾಗಿ ಊಟವಿಲ್ಲದಿದ್ದರೂ ಆನೆ ಬಲದಂತೆ ಎರಗಿದೆ, ಛಲವೆಚ್ಚಿಸಿಕೊಂಡು ಹೋರಾಡತೊಡಗಿದೆ, ಅವರು ಕಣ್ಣಿಗೆ ಪೆಪ್ಪರ್ ಸ್ಪ್ರೆಯ್ ಮತ್ತು ಸುಣ್ಣ ಎರಡೂ ಬಿದ್ದಿದ್ದರಿಂದ ಏನೆಂದು ಅರಿಯದೇ ಭಯದಲ್ಲಿ ನಡುಗುತ್ತಿದ್ದರು, ಮೊದಲು ಕುಮಾರ್‍ನನ್ನ ಕೇಳತೊಡಗಿದೆವು, ವೀಡಿಯೋ ಮಾಡಿದ್ದು ಯಾರು, ಹೇಗೆ ಇದರಲ್ಲಿ ಯಾರೆಲ್ಲಾ ಇದ್ದೀರ, ಮೊದಲು ವೀಡಿಯೋ ಎಲ್ಲಿದೆ ಹೇಳು ಇಲ್ಲದಿದ್ದರೆ ನಿನ್ನ ಗಂಟಲನ್ನು ನಮ್ಮ ಕೈಲಿರುವ ಬ್ಲೇಡ್ ನಿಂದ ಕತ್ತರಿಸಿ ಹಾಕುತ್ತೇವೆ, ನಮ್ಮ ಮಾನಕ್ಕಿಂತ ನಿಮ್ಮ ಜೀವ ದೊಡ್ಡದಲ್ಲವೆಂದೆವು, ಆತ ನಡುಗಲಾರಂಭಸಿದ, ಆತನನ್ನು ಪಕ್ಕದ ರೂಂಗೆ ತಂದು ವಿಚಾರಿಸಿದೆವು, ಎಲ್ಲವನ್ನೂ ಹೇಳಿದ,  ಬೇಗನೇ ಅವನ ಬಾಯಿಗೆ ಬಟ್ಟೆ ತುರುಕಿದೆವು, ಈಗ ಸುನಿತಾಳನ್ನು ಕರೆತಂದು ಕೇಳಿದೆವು, ಎಲ್ಲಾ ಹೇಳುತ್ತೀಯ ಎಂದೆ, ತಲೆಯಾಡಿಸಿದಳು, ಕೂಡಲೇ ಅವಳ ಬಾಯಿಯಿಂದ ಬಟ್ಟೆ ತೆಗೆದೆವು, ಅವಳು ಹೇಳ ತೊಡಗಿದಳು, ಎಲ್ಲರೂ ಸೇರಿ ಮಾಡಿದ್ದು, ವೀಡಿಯೋ ಹಿಡ್ಡನ್ ಕ್ಯಾಮರಾದಲ್ಲಿ ರೆಕಾರ್ಡ ಮಾಡಿ ಕಂಪ್ಯೂಟರ್‍ನಲ್ಲಿ ಲೋಡ್ ಮಾಡಿದ್ದೇವೆಂದಳು, ರೂಮಿನಿಂದ ಸುನಿತಾಳನ್ನು ಹೊರತಂದು ಯಾವ ಯಾವ ರೂಮಲ್ಲಿ ಎಲ್ಲಿದೆ, ಏನಿದೆಯೆಂದು ಒನ್ನೊಂದೇ ವಶಪಡಿಸಿಕೊಳ್ಳುತ್ತಾ ನಡೆದೆವು, ಕೊನೆಗೆ ಎಲ್ಲರ ಮೊಬೈಲ್‍ನ್ನು ಪರಿಶೀಲಿಸಿ ಎಲ್ಲವನ್ನು ನಮ್ಮ ವಶಕ್ಕೆ ಪಡೆದೆವು, ಅವರು ಯಾರೊಂದಿಗೆ ಮಾತಾಡಿದ್ದಾರೆ ಎಲ್ಲವನ್ನೂ ನೋಡಿದೆವು, ಅವರಿಂದ ಯಾರಿಗಾದರೂ ವೀಡೋಯೋ ಹೋಗಿದೆಯೋ ಪರಿಶೀಲಿಸಿದೆ, ಯಾರಿಗೂ ಹೋಗಿರಲಿಲ್ಲ, ನನಗೆ ಮಾತ್ರವೇ ಆಗಿತ್ತು, ನಂತರ ಸುನಿತಾಳ ಬಾಯಿಗೆ ಬಟ್ಟೆ ತುರುಕಿ ಅವಳನ್ನು ಪುನಃ ರೂಂ ನಲ್ಲಿ ಕೂರಿಸಿ, ಈಗ ವರದರಾಜ್ ನನ್ನು ರೂಂ ಹೊರಗೆ ತಂದು ಹೇಳಲು ಕೇಳಿದೆವು, ಆತನೂ ಸುನಿತಾಳಂತೆಯೇ ಹೇಳಿದ, ನಂತರ ಕುಮಾರ್‍ನನ್ನು ಎಳೆತಂದೆವು, ಕಂಪ್ಯೂಟರ್ ಇ ಮೇಲ್ ಎಲ್ಲವನ್ನು ತಡಕಾಡುತ್ತಾ ಮಧ್ಯೆ ರಾತ್ರಿ ಜಾರುತ್ತಿತ್ತು, ಆದರೂ ಹಸಿದ ಹುಲಿಗಳಂತೆ ದುಷ್ಟರ ಮೇಲೆ ಎರಗುತ್ತಾ ಅವರ ಬಳಿ ಇರುವ ದಾಖಲೆಗಳನ್ನೆಲ್ಲಾ ಸಂಗ್ರಹಿಸತೊಡಗಿದೆವು. 
         ಅನೇಕ ಜನ ಹೆಣ್ಣುಮಕ್ಕಳಿಗೂ ಇದೇ ರೀತಿ ಇವರು ಮಾಡುವುದು ಇವರ ದಂದೆ ಎಂಬುದು ನಮಗರಿವಾಯಿತು, ಕುಮಾರ್ ಕೆಲವರನ್ನು ತನ್ನ ಪ್ರೀತಿಯ ಬಲೆಯಲ್ಲಿ ಬೀಳಿಸಿ ಮೋಸ ಮಾಡಿದರೆ, ವರದರಾಜ್ ಕೆಲವರನ್ನು ತನ್ನ ಸೆಂಟಿಮೆಂಟ್‍ನ ಬಲೆಯಲ್ಲಿ ಬೀಳಿಸಿಕೊಳ್ಳುತಿದ್ದ. ಇನ್ನೂ ಸುನಿತಾ ಹನಿಟ್ರಾಪ್ ನಲ್ಲಿ ಬೀಳಿಸಿಕೊಂಡು ಬ್ಲಾಕ್ ಮೇಲ್ ಮಾಡುತ್ತಿದ್ದಳು, ಇವರಾರು ಕವಿ, ಸಾಹಿತಿ, ಬುದ್ಧಿಜೀವಿ, ನಾಡು ನುಡಿಯ ಹೋರಾಟಗಾರರಲ್ಲ, ಯಾವುದೇ ಸಂಘಟನೆಯ ಪದಾಧಿಕಾರಿಗಳೂ ಅಲ್ಲ, ಆದರೆ ಎಲ್ಲಿ ಜನಸೇರುತ್ತಾರೋ ಅಲ್ಲಿ ಹೋಗಿ ನಟನೆ ಮಾಡುವುದು ಇವರ ಕಾರ್ಯ. ಒಟ್ಟಾರೆ ಇದೊಂದು ವ್ಯವಸ್ತಿತ ದಂದೆಯೆಂಬುದು ಅರ್ಥವಾಯಿತು. 
           ಅಷ್ಟರಲ್ಲೇ ಕುಮಾರ್ ಮೊಬೈಲ್‍ಗೆ ಕರೆಬಂತು, ಕೂಡಲೇ ಕಟ್ ಮಾಡಿದೆ, ತಕ್ಷಣ ಮೆಸೆಜ್ ಬಂತು, ನೀನು ಕಳಿಸಿದ ಚಿತ್ರದ ಹುಡುಗಿ ಇನ್ನೂ ಬಂದಿಲ್ಲ, ಆಗ ಮತ್ತೆ ನಾನು ಗೆಳತಿ ಯೋಚಿಸತೊಡಗಿದೆವು, ಇವರು ಕಳಿಸಿದ ಚಿತ್ರದ ಮೇಲೆ ಮತ್ತೆ ನಮಗೆ ತೊಂದರೆ ಕಂಡಿತಾ ಎಂಬುದು ಅರಿವಾಯಿತು, ಮೊತ್ತೊಂದು  ಕರೆಬಂದಿತು, ರೂಂನಿಂದ ಹೊರಹೋಗಿ ಸ್ವೀಕರಿಸಿದೆ, ಆ ಕಡೆಯಿಂದ ಒಬ್ಬಳು ಹುಡುಗಿ ನೀನು ಕೇಳಿದ ಬಂಗಾರವೆಲ್ಲವನ್ನು ಮನೆಯಿಂದ ಕದ್ದಿದ್ದೇನೆ, ನಾಳೆಯೇ ಕೊಡುತ್ತೇನೆ, ದಯಮಾಡಿ ವೀಡಿಯೋ ಪಬ್ಲಿಕ್ ಮಾಡಬೇಡ, ನಿಮ್ಮ ಕಾಲಿಗೆ ಬೀಳುತ್ತೇನೆ, ಎಂದು ಒಂದೇ ಸಮನೆ ಅಳುತಿದ್ದಳು, ಮನಕ್ಕೆ ತುಂಬಾ ನೋವಾಯಿತು, ಇಂತಹ ಹೆಣ್ಮಕ್ಕಳ ಬಾಳು ಎಷ್ಟು ಕೊಂದಿದ್ದಾರೋ ಇವರನ್ನು ಬಿಡುವುದು ಉಚಿತವೇ ಎನಿಸಿತು, ಅಷ್ಟರಲ್ಲಿ ಮತ್ತೆ ಇನ್ನೊಂದು ಕರೆ ಸುನಿತಾಳ ಮೊಬೈಲ್‍ಗೆ  ಬಂತು, ಮತ್ತೇನೊ ಎಂದು ಕಟ್ ಮಾಡಿದೆ, ಮತ್ತೆ ಮತ್ತೆ ಬರುತ್ತಿತ್ತು, ಆಗ ಮೆಸೆಜ್ ಬಂತು, ನೀನು ಹೇಳಿದಂತೆ ನನ್ನ ಹೆಂಡತಿಗೆ ಗೊತ್ತಾಗದಂತೆ ಅವಳ ಬಂಗಾರವನ್ನೆಲ್ಲಾ ಕದ್ದಿರುವೆ, ನಾಳೆ ಕೊಡುವೆ, ಜೊತೆಗೆ  50 ಲಕ್ಷ ಕೊಡುತ್ತೇನೆ,  ದಯಮಾಡಿ ವೀಡಿಯೋ ಪಬ್ಲಿಕ್ ಮಾಡಬೇಡ, ಇದನ್ನು ಸ್ವೀಕರಿಸುತ್ತಾ ಕೂತರೆ ಮಾಡುವ ಕೆಲಸ ಮುಗಿಯುವುದಿಲ್ಲವೆಂದು ಮೊಬೈಲ್‍ಗಳನ್ನೆಲ್ಲ ಸ್ವಿಚ್ ಆಫ್ ಮಾಡಿದೆವು. ಒಂದೂ ಇವರು ಶಾಶ್ವತ ಕುರುಡರಾಗಬೇಕು ಇಲ್ಲವೇ ಇವರು ಬದುಕಬಾರದು, ಏನು ಮಾಡುವುದೆಂದು ಗೆಳತಿಗೆ ಕೇಳಿದೆ, ಅದಕ್ಕೂ ಸಿದ್ದತೆ ನಡೆಸಿದೆವು, ಇವರನ್ನು ಕುರುಡರನ್ನಾಗಿ ಮಾಡಿ ನಡೆದರೆ ಇವರಲ್ಲಿರುವ ಹಣದಿಂದ ಮತ್ತೆ ಕಣ್ಣು ಕೂಡಿಸಿಕೊಳ್ಳುತ್ತಾರೆ, ಇವರನ್ನು ಇನ್ನಿಲ್ಲದಂತೆ ಮಾಡುವುದೇ ಸರಿ ಎನಿಸಿತು, ಕೂಡಲೇ ಗೆಳತಿ ಮತ್ತು ನಾನು ರೂಮಿನೊಳಗೆ ಬಂದೆವು, ಅವರ ಕೈಗಳನ್ನು ಬಿಚ್ಚಿದೆವು, ಯಾರು ಕುಡಿಯಲು ನೀರು ಕೇಳುತ್ತಾರೋ ಅವರಿಗೆ ನೀರಿನೊಂದಿಗೆ ವಿಷಬೆರೆಸಿ ಅವರ ಕೈಯಲ್ಲಿ ಕೊಟ್ಟೆವು, ಬೆಳಿಗ್ಗೆ ಎಲ್ಲರನ್ನು ಮುಗಿಸಿ, ಅದು ಆತ್ಮಹತ್ಯೆಯೆಂಬಂತೆ ಬಿಂಬಿಸಿ ರೂಂನಲ್ಲಿ ಕಾಣುವಂತೆ ಮಾಡಿಬಂದೆವು. ನಾವು ಉಪಯೋಗಿಸಿದ್ದ ಹ್ಯಾಂಡ್ ಗ್ಲೌಸ್, ಹಗ್ಗ, ಪೆಪ್ಪರ್ ಸ್ಪ್ರೇಯ್, ಸುಣ್ಣದ ಪುಡಿ, ಇತರೆ ಎಲ್ಲಾ ವಸ್ತುಗಳನ್ನು ಅರಕಾವತಿ ನದಿಯಲ್ಲಿ ಹಾಕಿ ನಡೆದೆವು.
       ಎರಡು ದಿನ ಬಿಟ್ಟು ಪೇಪರ್‍ನಲ್ಲಿ ಮೂರು ಜನ ಮನೆಯಲ್ಲಿ ಆತ್ಮಹತ್ಯೆಯೆಂದು ಬಂತು..ನಾನು ಮತ್ತು ಗೆಳತಿ ಮೂರು ಜನರನ್ನು ಕೊಂದರೂ ಅದು ಸಾವಿರ ಜನರ ಮಾನ ಉಳಿಸಿದ ಪುಣ್ಯವೆಂದು ಹೆಮ್ಮೆಯಿಂದ ಬೀಗಿದೆವು..ನಮಗೆ ಯಾವುದೇ ಅಪರಾದ ಭಾವ ಕಾಡಲಿಲ್ಲ. ಅದು ಮುಂದೆಯೂ ಕಾಡುವುದಿಲ್ಲ...ಸಾವಿರಾರು ಜನರ ಮಾನ, ಪ್ರಾಣ ಉಳಿಸಿದ ಹೆಮ್ಮೆಯಂತೂ ಇದೆ, 
ದುಷ್ಟರ ನಿಗ್ರಹವೇ ಧರ್ಮ...
ಸ್ವಾಭಿಮಾನದ ಹೆಣ್ಣು ತನ್ನ ಮಾನಕ್ಕಾಗಿ ಉಸಿರಿನ ಕೊನೆವರೆಗೂ ಹೋರಾಡುತ್ತಾಳೆ, ಇದು ದಿಟ...

ರಾಮಚಂದ್ರ ಸಾಗರ್