Tuesday, 29 January 2019

ನಮ್ಮೊಲವು ಗದ್ದುಗೆಯೇರಲಿ

(ಕಾಗುಣಿತದ ಶೈಲಿಯಲಿ ...ಸ.ಸಾ.ಸಿ. ಸೀ...ಹೀಗೆ ಮನದ ಭಾವನೆಗಳು ಪದಗಳಾಗಿ ಪುಟಿದಾಗ ಅರಳಿದ ಕವಿತೆ. ಓದಿ ಹಾರೈಸಿ..)

ಸಜೆಯಾಗಿದೆ ಗೆಳತಿ ನೀ ಕಾಣದೆ ಈ ಘಳಿಗೆಯಲಿ
ಸಾವಧಾನವೆಲ್ಲಿದೆ ಗೆಳತಿ ನೀ ಬಾರದೆ ಈ ಹೃದಯದಲಿ
ಸಿರಿತನವೆಲ್ಲಿದೆ ಗೆಳತಿ ನೀ ಜೊತೆಯಾಗದೆ ಈ ಬದುಕಲಿ
ಸೀಯಾಗದು ಗೆಳತಿ ನೀ ಮೂಡದೆ ತಂಪಿರಳು ಕನಸಲಿ

ಸುಮ್ಮನಾವೆಲ್ಲಿದೆ ಗೆಳತಿ ನೀ ನುಡಿಯದೆ ಸಲ್ಲಾಪದೋಲೆ
ಸೂತ್ರವೆಲ್ಲಿದೆ ಗೆಳತಿ ನೀ ಸುಜನತೆ ಬೋಧಿಸದೆ ಈ ಬಾಳಿಗೆ
ಸೃಷ್ಟಿಯಾಗದಿಂದು ಗೆಳತಿ ಸೌಜನ್ಯದ ಸೌಖ್ಯದ ಬದುಕು 
ಸೆರೆಮನೆಯಾಗಿದೆ ಗೆಳತಿ ನೀ ನಲಿಯದೆ ಈ ಚಿನ್ನದರಮನೆಯು

ಸೇರುವುದೆ ಗೆಳತಿ ಬಾಳನಾವೆಯು ಆ ಮೋಹದ ತೀರಕೆ?
ಸೈಸುವುದೆ ಗೆಳತಿ ಈ ಬಾಳು ನಿನ್ನ ಅಭಯದ ವಚನವಿಲ್ಲದೆ
ಸೊಗಸಾದ ಬೆಳುದಿಂಗಳು ಹಾದಿಯು ರಮಿಸದು ತನುವಿಗೆ 
ಸೋಜಿಗದ ಸೌಂದರ್ಯದ ಜಗದ ಒಡಲಲಿ ಚೆಲುವೆಲ್ಲಿದೆ

ಸೌಭಾಗ್ಯದ ನಿನ್ನ ಅಂತಃಕರಣದ ಕೃಪೆಯಿರದೆ ಉಳಿವೆಲ್ಲಿದೆ
ಸಂಗಮವಾಗದೆ ಮನಸುಗಳು ಅಂತರಂಗದ ಆಸೆಗೆ ಗೆಲುವೆಲ್ಲಿದೆ
ಸಹಿತ ನಿನ್ನ ಸಾಂಗತ್ಯದಲೊಮೆ ಚೈತನ್ಯಧಾರೆಯಾಗಲಿ ಬಾಳಿಗೆ 
ಸತ್ಕಾರದ ನಿನ್ನ ಅಕ್ಕರೆಯ ಕಡಲು ವರವಾಗಲಿ ಜೀವಕೆ 

ಸಾಕಾರವಾಗಲಿ ನಮ್ಮ ಸಂಪ್ರೀತಿಯು ಜಗದ ಕೊನೆವರೆಗೂ
ಸಿದ್ಧಿಸುವ ಸತ್ಕಾರ್ಯಗಳಲಿ ಪರಾಕ್ರಮತೋರಲಿ ನಮ್ಮೊಲವು
ಸೀಳುದಾರಿಯೆಂದು ಎದುರಾಗದು ಗೆಳತಿ ಸಾಧನೆಯ ಹಾದಿಗೆ
ಸುಮದಂತೆ ನಿತ್ಯ ನಗುವುದು ಗೆಳತಿ ನಮ್ಮೊಲವ ಗದ್ದುಗೆ 
ಸೂಸುತಾ ಬಾ ನಿನ್ನ ಸಿಹಿನಗುವ ಸೋನೆ ಈ ಬಾಳಿಗೆ

ರಾಮಚಂದ್ರ ಸಾಗರ್