Wednesday, 30 January 2019

ದಯೆತುಂಬಿದ ಹೊನಲು

ಸತ್ಯದ ಸತ್ವವು ಜಗದಲಿ ಸಂಪನ್ನವಾಗಲಿ
ಸಾಫಲ್ಯತೆಯ ದೀಪವು ಎಲ್ಲರೆದೆಯಲಿ ಬೆಳಗಲಿ
ಸಿರಿತನವು ನಿಸ್ವಾರ್ಥತೆಯಲಿ ವಿಜೃಂಭಿಸಲಿ
ಸೀಜೇನಂತೆ ಸತ್ಯಸಾರವು ಪ್ರಿಯವಾಗಲಿ

ಸುಜರ ಸೌಮ್ಯದ ಬೀಡು ಉದಯವಾಗಲಿ
ಸೂಸುತಿರಲಿ ಸೌಜನ್ಯದ ಕಂಪು ಜಗದಲಿ 
ಸೃಜನೆಯಾಗುತಿರಲಿ ನಿತ್ಯ ಸೌಹಾರ್ದದ ಆಶಾಕಿರಣ
ಸೆಣೆಸುತಿರು ನಿತ್ಯ ಶಾಂತಿಧಾಮದ ರಕ್ಷಣೆಯಲಿ

ಸೇಡು ದಳ್ಳುರಿಯು ಜಗದಿಂದ ಕೊನೆಯಾಗಲಿ
ಸೈರಣೆ ಸಹನೆಯು ಮನಗಳ ಉಸಿರಾಗಲಿ
ಸೊರಗಿಲ್ಲದ ಬಾಂಧವ್ಯವು ನಮ್ಮದಾಗಲಿ
ಸೋಲಿರದ ಹಾದಿಯು ಎಲ್ಲರದಾಗಲಿ

ಸೌಖ್ಯದ ಸೌಧದಾಸೆರೆಯು ಜಗವಾಗಲಿ
ಸಂತಸ ಸಡಗರವು ಸರ್ವರಿಗು ಜೊತೆಯಾಗಲಿ
ಸಹೃದಯಗಳ ಸ್ನೇಹವೆ ಕಡಲಾಗಲಿ
ಸಚ್ಚರಿತ ಸದ್ಗತಿಯ ಅಲೆಯು ನಿತ್ಯ ಬೀಸುತಿರಲಿ

ಸಿದ್ಧಾಂತವು ನೊಂದವರ ದನಿಯ ಉಸಿರಾಗಲಿ
ಸೀಳುದಾರಿಯಲಿ ಸಿಲುಕಿದವರು ಹೂಪಥದಲಿ ನಲಿದಾಡಲಿ
ಸುಭಗದ ಇಳೆಯಲಿ ದೀನತೆಯು ಕ್ಷಯವಾಗಲಿ
ಸೂತ್ರ ಕೃತಿಗಳು ದಯೆತುಂಬಿದ ಹೊನಲಾಗಲಿ

ರಾಮಚಂದ್ರ ಸಾಗರ್