Friday, 7 September 2018

ಕೊಲ್ಲದಿರು ನೆನಪೆ

ಕೊಲ್ಲದಿರು ನೆನಪೆ ಮುದ್ದು ಹೃದಯವನು
ಸುಡದಿರು ತಂಗಾಳಿಯೆ ಪ್ರೇಮಿಸಿದ ಮನವನು
ಮೋಹದ ಕಡಲೆ ನೋವಿನ ವಿಷವಾಗದಿರು
ಒಲುಮೆಯ ಹಾದಿಯೆ ಮುಳ್ಳು ಕಂಟಿಯಾಗದಿರು

ಕೊಲ್ಲದಿರು ನೆನಪೆ ಬೀಸುತ ನೋವಿನಲೆಯನು 
ಪ್ರೀತಿಯೆ ಉಸಿರಾಗಿಸಿದ ಜೀವದ ಉಸಿರನು
ಅನುರಾಗವೆ ಬದುಕಾಗಿಸಿದ ಬಾಳನು
ಮುಗ್ದ ಮನದ ಸೌಜನ್ಯದ ಪರಿಯನು

ಕೊಲ್ಲದಿರು ನೆನಪೆ ಹೂ ಮೊಗ್ಗನು
ಮುಗುದೆಯ ಬಾಳನು ಮುಳುಗಿಸದಿರು
ನಗು ನಲಿದ ಮೊಗವ ಮಂಕಾಗಿಸದಿರು
ತುಂಟ ಮನದ ಕನಸಿಗೆ ಕಹಿಯುಣಿಸದಿರು

ಕೊಲ್ಲದಿರು ನೆನಪೆ ನಗುವ ನೈದಿಲೆಯನು
ಮೋಹದ ಬೆಳುದಿಂಗಳಲು ಕಣ್ಣಿಗೆ ಉರಿ ನೀಡದಿರು
ಸಚ್ಚರಿತ ಪ್ರೀತಿಯ ಪಯಣಕೆ ಕೊನೆ ಹಾಡದಿರು
ಪ್ರೇಮದ ಸದನದಲಿ ಒಲವ ನಿನದ ನಿಲ್ಲಿಸದಿರು

ಕೊಲ್ಲದಿರು ನೆನಪೆ ನಂಬಿದ ಬದುಕನು
ಸಾವಿರ ಆಸೆಗಳ ಮನಸನು ನೀ ದಹಿಸದಿರು
ಪ್ರೀತಿಯೆ ಮುಳ್ಳಾಗಿ ಕಣ್ಣಿಗೆ ಚುಚ್ಚದಿರು
ಪ್ರೇಮವೆ ನೋವಾಗಿ ತೀರದಿರಲಿ ಒಲುಮೆಯ ಬಾಳು 

ರಾಮಚಂದ್ರ ಸಾಗರ್