Sunday, 26 August 2018

ಸಹೋದರತೆ

ಸಹೋದರತೆ ಎಲ್ಲರೆದೆಯ ಹಾಡಾಗಲಿ
ಸಹಿಷ್ಣುತೆ ಇಂಧನ ಜಮಾವಣೆಯಾಗಲಿ
ಸೌಭಾಗ್ಯದ ಚೆಲುವ ಜಗವರಳಲಿ
ಎಲ್ಲರ ಮನ ವಿಹಿತವಾಗಲಿ

ವರ್ಣಗಳ ಬಂಧನ ವಿಮೋಚನೆಯಾಗಲಿ
ಧರ್ಮಗಳ ಕಂದರ ಕರಗಿಹೋಗಲಿ
ವೈಷಮ್ಯದ ಮನ ಹೂವಾಗಲಿ
ಜಗ ಸೌಭಾಗ್ಯದ ನಾಡಾಗಲಿ

ಸುಡುವ ಜ್ವಾಲೆಯು ಕೊನೆಗಾಣಲಿ
ಕಾಪಾಡುವ ಗುಣವು ಗಟ್ಟಿಗೊಳ್ಳಲಿ
ತ್ಯಾಗದ ಮನವು ಎಲ್ಲರದಾಗಲಿ
ನಿಸ್ವಾರ್ಥ ಜಗವು ಉದಯವಾಗಲಿ

ಜೊಳ್ಳಿನ ತತ್ವ ನಗ್ನವಾಗಲಿ
ಮಾನವ ಸತ್ವ ನೆಲೆಯಾಗಲಿ
ಸತ್ಯದ ಪಥವು ಎಲ್ಲರದಾಗಲಿ
ಜರ್ಜರಿತ ಸಮಾಜವು ಒಂದಾಗಲಿ

ಸ್ನೇಹ ಸತ್ಕಾರದ ಭಾವವರಳಲಿ
ಸುಗುಣಗಳ ಸಿಂಚನದ ಮನವಾಗಲಿ
ಅಬಲೆಯರ ರಕ್ಷಣೆ ಪಣವಾಗಲಿ
ಸಹೋದರಿಯರ ಏಳ್ಗೆ ಗುರಿಯಾಗಲಿ

ಅಧೈರ್ಯದ ನೋವು ಮರೆಯಾಗಲಿ
ಅನೈತಿಕ ಮಾತುಗಳು ದಹನವಾಗಲಿ
ನೋಡುವ ನೋಟವು ಸಚ್ಚರಿತವಾಗಲಿ
ಎಲ್ಲರೆದೆಯ ಹಾಡು ಸಹೋದರತೆಯಾಗಲಿ

ರಾಮಚಂದ್ರ ಸಾಗರ್