Thursday, 23 August 2018

ಜಯಕೆ ಕಾರಣವು

ಗೆಳತಿ..
ಚೆಲುವ ಬೊಂಬೆ ನೀ ಹೂವಂತೆ ನಗುತಿರಲು
ನನ್ನೆದೆಯ ಗೂಡಲಿ ಪ್ರೇಮದ ಹೂಮಳೆಯು
ನಗುವಿನಲೆಯ ನೀ ಸೂಸುತ ಸನಿಹವಾಗಿರಲು
ಹೃದಯ ಬಡಿತದಲಿ ನಿನದೇ ನಾಮವು

ಕುಣಿವ ನಿನ್ನ ಮುಂಗುರುಳ ಮೋಡಿಯೆ
ಪ್ರೀತಿಯ ಬಂಧಕೆ ನಿನ್ನೊಲವ ಕರೆಯು
ಕೋಮಲ ನಿನ್ನ ಮಧುರ ನುಡಿಯೆ
ಬಾಳ ನೌಕೆಗೆ ಸೌಜನ್ಯದ ಸಾರಥ್ಯವು

ರಂಜಿಸುವ ನಿನ್ನ ಒಲವಿನ ಜಗವೆ
ಭಾವಗಳ ನಾದಕೆ ನಿತ್ಯ ಕಾರಣವು
ಮೋಹದ ನಿನ್ನ ಕಣ್ಣೋಟದ ಕಲರವವೆ
ಅನುರಾಗದಲೆಯ ಸಿಂಗಾರದ ಸ್ವರಗಾನವು

ನಗುವಿನಲೆಯ ನಿನ್ನ ಅಕ್ಕರೆಯ ಬಂಧನವು
ಕಾವ್ಯದ ಶರಧಿಗೆ ಒಲವ ಬುನಾದಿಯು
ಕಾವ್ಯಲತೆಯು ನೀ ಜೊತೆಯಲಿ ನಗುತಿರಲು
ಪ್ರೇಮ ಸೌಧದಲಿ ಪ್ರೇಮಕಾವ್ಯದ ಸೌರಭವು

ಚೆಲುವೆ ನೀ ನುಡಿವ ಅಕ್ಕರೆ ಸಾಲುಗಳೆ
ಹೃದಯದ ಆರಾಧನಾ ಪದಮಾಲೆಯು
ನಗುವಿನಲೆಯು ಅರಳಿದ ನಿನ್ನ ಮೊಗವೆ
ಬಾಳ ಕದನಲಿ ಜಯಕೆ ಕಾರಣವು

ರಾಮಚಂದ್ರ ಸಾಗರ್