Tuesday, 21 August 2018

ಸಿಹಿ ನೋಟದ ಮೋಹದಲ್ಲಿ

ಅನುರಾಗದಲೆಯ ನಿನ್ನ ಕಣ್ಣೋಟದಲಿ
ಅರಳಿದೆ ನನ್ನೆದೆಯಲಿ ಸಾವಿರ ಕನಸು
ಮೋಹದ ನಿನ್ನ ನಗುವಿನಲೆಯ ಮೊಗದಲಿ
ಜನನವಾಗಿ ಒಲವಿನ ಅನುಬಂಧವು

ಸವಿ ನುಡಿಯ ನಿನ್ನ ಮೋಡಿಯಲ್ಲಿ
ಪ್ರೀತಿಸುವ ಹೃದಯಕೊಂದು ಸಡಗರವು
ರಮ್ಯತೆಯ ಮೋಹದ ಸೊಬಗಲಿ
ಒಲವ ಹೂಲತೆಯ ಜನನವು

ರಂಗೇರಿಸುವ ನಿನ್ನ ಮೆಲು ಮಾತಿನಲಿ
ಪ್ರೇಮಿಸುವ ಜೀವಕೊಂದು ಹಿತವು
ನಿನ್ನೊಲುಮೆಯ ಬೆಳಕಿನ ಕದಿರಲಿ
ನಮ್ಮೊಲವ ಸೌಧದಲಿ ತಂಬೆಳಕು

ಸಿಹಿ ನೋಟದ ನಿನ್ನ ನಯನ ನುಡಿಯಲಿ
ಹೃದಯಕೆ ಅಭಯದ ಆಸರೆಯು
ಪಳಿಸುವ ಬೆಳುದಿಂಗಳು ಬೀದಿಯಲಿ
ಒಲವ ಮೆರವಣಿಗೆಗೆ ನಿನದೇ ಸಾರಥ್ಯವು

ಕಡಲ ಕಿನಾರೆಯ ಸೊಬಗಿನ ಹೊಳಪಲಿ
ಒಲವ ಬೊಂಬೆಯು ನೀನಾಗಿರಲು
ನಗುವ ನಯನದ ನಿನ್ನ ಶುಭವಾಣಿಯಲಿ
ಬಾಳಾಗಿದೆ ಸವಿಕನಸಿನಾ ಝೇಂಕಾರವು

ರಾಮಚಂದ್ರ ಸಾಗರ್