ಒಂದು ಕಾಲದಲ್ಲಿ ಜನರಿಂದ ಮತಕ್ಕಾಗಿ ಭಿಕ್ಷಾಟನೆ ನಡೆಸಿದವರು ಇಂದು ಅಧಿಕಾರದ ಜಗುಲಿಯ ಮೇಲಿದ್ದಾರೆ, ಆಳ್ವಿಕೆಯನ್ನು ನಡೆಸುತ್ತಿದ್ದಾರೆ, ಆ ಸಮಯದಲ್ಲಿ ಸಾರ್ವಜನಿಕರಿಗೆ ಅವರು ನೀಡುವ ವಿಶ್ವಾಸ, ಭರವಸೆಗಳೇನು..? ನಾವು ಆಯ್ಕೆಯಾದ ನಂತರ ಉತ್ತಮ ಭ್ರಷ್ಟಾಚಾರ ರಹಿತ ಆಡಳಿತವನ್ನು ನಡೆಸುತ್ತೇವೆ, ಪ್ರೀತಿ, ಸಹೋದರತೆ ಸಹಬಾಳ್ವೆಯನ್ನು ಸಮಾಜದಲ್ಲಿ ತರುತ್ತೇವೆಂದು ಶಪಥಮಾಡುತ್ತಾರೆ. ಆದರೆ ಅಧಿಕಾರ ಲಭಿಸಿದ ಮೇಲೆ ನಡೆವುದೇನು..? ಎಲ್ಲರೂ ಅಲ್ಲದಿದ್ದರೂ ಹಲವರು ಮಾಡುವುದು ತಮ್ಮ ಸ್ವಾರ್ಥ ಸಾಧನೆಯನ್ನೇ.
ಇದರಲ್ಲಿ ಕೆಲವರಂತೂ ಅಧಿಕಾರದ ಅಮಲೇರಿಸಿಕೊಂಡು ಸಾರ್ವಜನಿಕರನ್ನು ಹಾಗೂ ಸರ್ಕಾರಿ ಅಧಿಕಾರಿಗಳನ್ನು ಮನಬಂದಂತೆ ಶೋಷಣೆಮಾಡುತ್ತಾರೆ ಹಾಗು ಹಲ್ಲೆಯನ್ನೂ ಮಾಡುತ್ತಾರೆ. ಒಂದಂತೂ ಸತ್ಯ, ಜನರಿಂದ ಜನರಿಗೋಸ್ಕರ ಇರುವ ಇಂದಿನ ವ್ಯವಸ್ಥೆಯು ಏನಾಗಿದೆ. ಎಲ್ಲವು ಅಧಿಕಾರ ಅಮಲೇರಿಸಿಕೊಂಡವರ ಭ್ರಷ್ಟಾಚಾರಕ್ಕೆ ಬಹುಪಾಲು ಮೀಸಲಾಗಿದೆ. ಇದರಲ್ಲಿ ಉತ್ತಮ ಜನನಾಯಕರು ಮಾಡುವ ಒಳ್ಳೆಯ ಕೆಲಸಗಳು ಕಾಣದಂತಾಗಿವೆ, ಕಾರಣ ಬಹುಪಾಲು ಭ್ರಷ್ಟಾಚಾರಮುಖಿ ಜನನಾಯಕರಿರುವುದರಿಂದ ದಿನದಿಂದ ದಿನಕ್ಕೆ ಹಗರಣಗಳು, ಕೆಟ್ಟ ಆಡಳಿತ ವ್ಯವಸ್ಥೆಯು ಹೆಮ್ಮರವಾಗಿ ಬೆಳೆಯುತ್ತಿದೆ, ಕೆಲವೊಂದು ಪ್ರಕರಣದಲ್ಲಿ ಅನೇಕ ಸಾರ್ವಜನಿಕ ಅಧಿಕಾರಿಗಳು ಕೆಲವರ ಬೆದರಿಕೆಗೆ ಸಹಿಹಾಕಿ ತಪ್ಪಿತಸ್ಥರಾಗಿ ತಮ್ಮದಲ್ಲದ ತಪ್ಪಿಗೆ ಶಿಕ್ಷೆ ಅನುಭವಿಸಿದ್ದೂ ಇದೆ.
ಅಧಿಕಾರ ನಡೆಸುವವರು ಮೊದಲು ತಾವು ಶುದ್ಧರಾಗಬೇಕು, ನಂತರ ಸಾರ್ವಜನಿಕ ಅಧಿಕಾರಿಗಳನ್ನು ಶುದ್ಧವಾಗಿರುವಂತೆ ನೋಡಿಕೊಳ್ಳಬೇಕು, ತನ್ಮೂಲ ಉತ್ತಮ ಆಡಳಿತವನ್ನು ನೀಡಬೇಕು, ಆದರೆ ಅಧಿಕಾರದ ಜಗುಲಿಯ ಮೇಲಿದ್ದ ಹಲವರು ತಾವು ಭ್ರಷ್ಟಾಚಾರದಲ್ಲಿ ತೊಡಗಿ ತಮ್ಮ ಅಧೀನ ಅಧಿಕಾರಿಗಳನ್ನು ಅದೇ ಭ್ರಷ್ಟಾಚಾರ ಜೊತೆಯಲ್ಲಿ ಕರೆದೊಯ್ದರೇ ನಾಡು ಅಭಿವೃದ್ಧಿಯಾದೀತೇ..? ನಾಡು ಮತ್ತೆ ಮತ್ತೆ ಇನ್ನೂ ರೋಗಿಷ್ಟ ವ್ಯವಸ್ಥೆಗೆ ಹೋಗುತ್ತದೆ. ಸರ್ಕಾರದ ಹಣ ಸದ್ಬಳಕೆ ಮಾಡಿ ಜನರಿಗೆ ಲೋಕೋಪಯೋಗಿ ಪುಣ್ಯದ ಕೆಲಸಗಳನ್ನು ಮಾಡುವುದು ಪ್ರತಿ ಸಾರ್ವಜನಿಕ ಅಧಿಕಾರಿ ಮತ್ತು ಜನಪ್ರತಿನಿಧಿಯ ಕರ್ತವ್ಯವಾಗಿರುತ್ತದೆ.
ಆದರೆ ಇಬ್ಬರೂ ಸಹಮತದಿಂದ ಸಮಾಜವನ್ನು ಮುನ್ನಡೆಸಬೆಕು, ಯಾವುದೇ ಪಕ್ಷಪಾತ, ಜಾತಿ, ಧರ್ಮವನ್ನು ಸರ್ಕಾರದ ಸೇವೆಗಳನ್ನು ನೀಡುವಾಗ ಮಾಡದೇ ಎಲ್ಲರನ್ನೂ ಇಡೀ ಸಮಾಜವನ್ನು ಪ್ರೀತಿ ಸೌಹಾರ್ದತೆಯಿಂದ ನಡೆಸಬೇಕು. ಆದರೆ ಇದು ಇಂದು ಆಗುತ್ತಿದೇಯೇ..? ಹೌದೇ ಆಗಿದ್ದಲ್ಲಿ ನಮ್ಮ ನಾಡೇಕೆ ಇನ್ನೂ ದಾರಿದ್ರ್ಯ ಮತ್ತು ಬಡತನದಲ್ಲಿ ಸೊರಗುತ್ತಿದೆ..? ದಿನದಿಂದ ದಿನಕ್ಕೆ ಏಕೆ ಹಗರಣಗಳ ಪಟ್ಟಿ ಬೆಳೆಯುತ್ತಿದೆ..? ಸಾರ್ವಜನಿಕ ಆಸ್ತಿ ಮತ್ತು ರಕ್ಷಣೆಯ ಜವಾಬು ಯಾರದ್ದು..? ಇದಕ್ಕೆಲ್ಲ ಉತ್ತಮವೊಂದೇ ಅಧಿಕಾರದ ಅಮಲೇರಿದವರೂ ಮತ್ತು ಹಣದಾಹಕ್ಕೆ ಕುಳಿತವರು ಸ್ವಲ್ಪ ವ್ಯವಸ್ಥೆಯಿಂದ ಆಚೆ ಬಂದು ಕೆಲಸಮಾಡಬೇಕು, ಇಲ್ಲದಿದ್ದರೇ ಜನರೇ ಸಾಮಾಜಿಕ ದಂಗೆ ಎದ್ದು ಇಂತವರಿಗೆ ಬುದ್ಧಿ ಕಲಿಸಬೇಕು, ಇದು ಎಂದು ಸಾಧ್ಯವೋ ಅಂದೇ ನಾಡು ಅಭಿವೃದ್ಧಿ ಹೊಂದುತ್ತದೆಂಬುದು ಮಾತ್ರ ಸತ್ಯ..ಹಾಗೂ ದೇಶದಲ್ಲಿ ಹೆಪ್ಪುಗಟ್ಟಿದ ಭ್ರಷ್ಟಾಚಾರ ಮತ್ತು ದೌರ್ಜನ್ಯದ ಕಪ್ಪುಕಲೆಯು ಮರೆಯಾಗುತ್ತದೆ.
ರಾಮಚಂದ್ರ ಸಾಗರ್
