Thursday, 4 January 2018

ನಿನದೇ ಗೆಳತೀ..

ಪ್ರೇಮ ಮಂದಿರದಲಿ ಸದಾ ಮೊರೆವ ಪ್ರತಿಧ್ವನಿಯು ನಿನದೇ ಗೆಳತಿ
ದೇಹದುಸಿರಿನಲಿ ಸದಾ ಹರಿದಾಡುವ ಜೀವವು ನಿನದೇ ಗೆಳತಿ
ಬಿರುಬೇಗೆಯಲಿ ಬಾಳು ತಣಿಸುವ ಹಿತಧಾರೆಯು ನಿನದೇ ಗೆಳತಿ
ಕಾನನದ ಇರುಳಲಿ ದಾರಿ ತೋರುವ ಕೈದೀಪವು ನಿನದೇ ಗೆಳತೀ

ನಲುಮೆಯ ಜಗದಲಿ ಸುರಿದ ಪ್ರೀತಿಯ ವರ್ಷದಾರೆಯು ನಿನದೇ ಗೆಳತಿ
ಕರಿಮುಗಿಲ ಬಾನಿನಲಿ ಹರಿದ ಬೆಳಕಿನ ಕದಿರು ನಿನದೇ ಗೆಳತಿ
ಮೋಹದ ಕಡಲಲಿ ಬೀಸುವ ಅನುರಾಗದಲೆಯು ನಿನದೇ ಗೆಳತಿ
ಮೋಹಿಸುವ ಮನದಲಿ ನಗುವ ನೈದಿಲೆಯು ನಿನದೇ ಗೆಳತಿ

ಒಲವಾಂಕುರದಲಿ ಅರಳಿದ ಹೂಬಳ್ಳಿಯು ನಿನದೇ ಗೆಳತಿ
ಮನೋಹರ ಪದಗಳಲಿ ಅಚ್ಚಾದ ಕವಿತೆಯು ನಿನದೇ ಗೆಳತಿ
ಗೌರವದ ಬಾಳಲಿ ಒಲಿದ ಒಲವ ಸತ್ಕಾರವು ನಿನದೇ ಗೆಳತಿ
ಮಮತೆಯ ಬಾಳಲಿ ನಗುವ ಮೊಲೆಗೂಸು ನಿನದೇ ಗೆಳತಿ

ಮಂಜುಳಗಾನದ ಸ್ವರಮೇಳದ ಇಂಪು ನಿನದೇ ಗೆಳತಿ
ವೈಭವದ ಬಾಳಿನಾ ಸುದೈವವು ನಿನದೇ ಗೆಳತಿ
ನೀರವದ ಮನದ ಸಲ್ಲಾಪದ ಒಲುಮೆಯು ನಿನದೇ ಗೆಳತಿ
ನಿವೇದಿಸುವ ಮನದ ಅರ್ಪಣಾ ಭಾವವೂ ನಿನದೇ ಗೆಳತಿ

ಹೃದಯದಾ ಕರೆಗೆ ಬೆಸೆದ ಬಂಧವು ನಿನದೇ ಗೆಳತಿ
ಪ್ರೀತಿಯ ಬದುಕಿಗೆ ಒಲಿದ ಸಿರಿತನವು ನಿನದೇ ಗೆಳತಿ
ಒಲವಗಾನದ ಜೀವದೊಲವು ನಿನದೇ ಗೆಳತಿ
ಅಕ್ಕರೆಯ ಬದುಕಿನಾ ಆತಿಥ್ಯವು ನಿನದೇ ಗೆಳತೀ..

ರಾಮಚಂದ್ರ ಸಾಗರ್