ಜಗವೆಲ್ಲ ನಿನ್ನೊಲುಮೆಯಿಂದಲೇ ಸೌರಭಿಸುತಿರಲು
ನಿನ್ನೊಲವ ರಂಗಲಿ ಮನ ರಂಗೇರಿರಲು
ಒಲವ ಪದಗಳ ಮಾಲೆ ನಿನ್ನಿಂದಲೆ ಬರೆಸಲು
ಹೊತ್ತು ತರಲೇನು ನಾ ನವಿಲು ಗರಿಯ ಗೊಂಚಲು
ಸತ್ಕಾರವೆಲ್ಲ ನಿನ್ನೊಲುಮೆಯಿಂದಲೇ ಜೊತೆಯಾಗಿರಲು
ಸದ್ಗುಣಗಳ ಮೇಳದಲಿ ಮನವು ನಲಿಯುತಿಲು
ಈ ಮುಗುದೆಯ ಮನದ ಸಿಹಿಮಾತುಗಳನು ಅಚ್ಚಾಗಿಸಲು
ಹೊತ್ತು ತರಲೇನು ನಾ ನವಿಲು ಗರಿಯ ಗೊಂಚಲು
ನವ ಭಾವವೆಲ್ಲ ನಿನ್ನೊಲುಮೆಯಿಂದಲೇ ಜಿನುಗುತಿರಲು
ಹೂಮಳೆಯಲಿ ಮೆತ್ತ ಕೈ ಹಿಡಿದು ಸಾಗುತಿರಲು
ಮಮತೆಯ ಪಥದ ಮೌನದ ಮಾತುಗಳನು
ಮುದ್ದಾಗಿಸಿ ಸಿಹಿಯಾಗಿಸಿ ಅಚ್ಚಾಗಿಸಲು
ಹೊತ್ತು ತರಲೇನು ನಾ ನವಿಲು ಗರಿಯ ಗೊಂಚಲು
ಪ್ರೇಮ ಸಜಾದಲ್ಲಿ ನೀ ಬಂಧಿಸಿ ನಗುತಿರಲು
ವಿರಹದ ನೋವು ಕಾತರತೆಯ ಕಹಿಯು
ನೋವಿನ ಹನಿಗಳನು ಪದಗಳಾಗಿಸಲು
ನಿನ್ನೊಲುಮೆ ಇರದ ಬಾಳು ಶಾಪವೆಂದು ಬರೆಸಲು
ಹೊತ್ತು ತರಲೇನು ನಾ ನವಿಲು ಗರಿಯ ಗೊಂಚಲು
ರಾಮಚಂದ್ರ ಸಾಗರ್
